ರಂಗೋಲಿ ಕೆಳಗೆ ತೂರುವ ಮನೋಭಾವ
ನಾಡಿಮಿಡಿತವಸಂತ ನಾಡಿಗೇರ
ಅವರು ಚಾಪೆ ಕೆಳಗೆ ನುಸುಳಿದರೆ ಇವರು ರಂಗೋಲಿ ಕೆಳಗೆ ತೂರಿದರು.. ಎಂಬುದು ಎಲ್ಲರಿಗೂ ಗೊತ್ತಿರುವ ಗಾದೆಮಾತು.ಚಾಲಾಕಿತನ, ಚಾಣಾಕ್ಷತನವನ್ನು ಬಣ್ಣಿಸುವ ನಾಣ್ಣುಡಿ ಇದು.
ಸಮಾಜದ ಎಲ್ಲ ರಂಗಗಳಲ್ಲಿ, ಎಲ್ಲ ಸ್ತರಗಳಲ್ಲಿ ಇಂಥ ಜನರಿದ್ದಾರೆ. ಇಂಥ ನಡವಳಿಕೆಗಳಿವೆ. ಆದರೆ ರಾಜಕೀಯ ಕ್ಷೇತ್ರದಲ್ಲಿ ಇದರ ಪ್ರಭಾವ, ಇದನ್ನು ಅನ್ವಯಿಸುವಿಕೆ ತುಸು ಹೆಚ್ಚೇ ಇದೆ ಎಂಬುದು ಉತ್ಪ್ರೇಕ್ಷೆಯಲ್ಲ. ಈ ಮಾತನ್ನು ಒತ್ತುಕೊಟ್ಟು ಏಕೆಹೇಳುತ್ತಿದ್ದೇನೆ ಎಂದರೆ, ಕಾನೂನು ಉಲ್ಲಂಘನೆ ನಮ್ಮಲ್ಲಿ ಹೊಸ ಸಂಗತಿ ಏನಲ್ಲ. ಆದರೆ ಕಾನೂನುಗಳನ್ನು ಮಾಡುವವವರೇ ನಮ್ಮ ಜನಪ್ರತಿನಿಧಿಗಳು. ಅಂದರೆ ಸಾಮಾನ್ಯ ತಿಳಿವಳಿಕೆ ಮತು ಅರ್ಥದಲ್ಲಿ ರಾಜಕಾರಣಿಗಳು.
ಆದರೆ ತಾವೇ ರೂಪಿಸಿದ ಕಾನೂನುಗಳನ್ನು ತಾವೇ ಉಲ್ಲಂಘಿಸುವುದೆಂದರೇನು? ಸರಳವಾಗಿ ಹೇಳಬೇಕೆಂದರೆ ಬೇಲಿಯೇ ಎದ್ದು ಹೊಲ ಮೇಯ್ದಂತೆ. ಈ ವಿಷಯವನ್ನು ಪ್ರಸ್ತಾಪಿಸಲು ಕಾರಣ ಈಗ ನಡೆದಿರುವ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಕಂಡು ಬರುತ್ತಿರುವ ಅಸಹ್ಯ ಮತ್ತು ಅಪಸವ್ಯ. ಕರ್ನಾಟಕದ ಪಂಚಾಯಿತಿ ವ್ಯವಸ್ಥೆಯು ದೇಶದಲ್ಲೇ ಮಾದರಿ ಎನಿಸಿದೆ.
1994ರ ಪಂಚಾಯಿತಿ ಕಾಯಿದೆಯ ಮಾದರಿಯನ್ನೇ ದೇಶದ ಇತರ ಕಡೆ ಅಳವಡಿಸಿಕೊಳ್ಳಲಾಗಿದೆ. ಮೂರು ಸ್ತರದ ಈ ವ್ಯವಸ್ಥೆಯು ಸ್ಥಳೀಯ ಸಂಸ್ಥೆಗಳಿಗೆ ಭದ್ರಬುನಾದಿ ಹಾಕಿದ್ದು ಸುಳ್ಳಲ್ಲ. ಅದೇ ರೀತಿ2004ರಲ್ಲಿ ಕೈಗೊಂಡ ಬೇಲೂರು ಘೋಷಣೆ ಕೂಡ ಈ ಸಂಸ್ಥೆಗಳನ್ನು ಸಶಕ್ತಗೊಳಿಸಲು ಸಾಧ್ಯ ವಾಯಿತು ಹಾಗೂ ಅವುಗಳಿಗೆ ಹೆಚ್ಚಿನ ಅಧಿಕಾರವನ್ನೂ, ಆರ್ಥಿಕ ಸ್ವಾತಂತ್ರ್ಯವನ್ನೂ ತಂದುಕೊಟ್ಟಿತು. ಆದರೆ ಬಹುತೇಕ ನಿರ್ಧಾರಗಳು ಹಾಗೂ ಕ್ರಮದ ಉದ್ದೇಶ ಉತ್ತಮವಾಗಿದ್ದರೂ ಅವುಗಳ ಅನುಷ್ಠಾನ ದಲ್ಲಿ ಸಮಸ್ಯೆಯಾಗುತ್ತದೆ. ಅಲ್ಲದೆ ಕೆಲವು ಪಟ್ಟಭದ್ರರು ಹಾಗೂ ಯಥಾಸ್ಥಿತಿವಾದಿಗಳು ಈ ವ್ಯವಸ್ಥೆಯನ್ನು ಹಳಿತಪ್ಪಿಸಲು ಪ್ರಯತ್ನಿಸುತ್ತಾರೆ.
ಅದರಲ್ಲಿ ಯಶಸ್ವಿಯೂ ಆಗುತ್ತಾರೆ. ಲೋಪದೋಷಗಳೇನೇ ಇದ್ದರೂ ಗ್ರಾಮ ಪಂಚಾಯ್ತಿಗಳು ಸ್ಥಳೀಯ ಮಟ್ಟದಲ್ಲಿ ಜನರ ಅಗತ್ಯ ಗಳನ್ನು ಪೂರೈಸುವ ಸಶಕ್ತ, ಸಕ್ಷಮ ಸಂಸ್ಥೆಗಳಾಗಿ ರೂಪುಗೊಂಡಿರುವುದಂತೂ ನಿಜ. ಈ ಪಂಚಾಯ್ತಿಗಳಿಗೆ ಪ್ರತಿ ಐದು ವರ್ಷಗಳಿಗೊಮ್ಮೆ ಚುನಾವಣೆ ನಡೆದು ಪ್ರತಿನಿಧಿಗಳನ್ನು ಆಯ್ಕೆಮಾಡಲಾಗುತ್ತಿದೆ. ಆದರೆ ಇತ್ತೀಚೆಗೆ ಈ ಚುನಾವಣೆಯಲ್ಲಿ ಹೊಸ ಟ್ರೆಂಡ್ ಶುರುವಾಗಿದೆ.
ಏನೆಂದರೆ ಈ ಪ್ರತಿನಿಧಿಗಳನ್ನು ಮತದಾನದ ಮೂಲಕ ಆಯ್ಕೆ ಮಾಡುವ ಬದಲು ಹರಾಜಿನ ಮೂಲಕ ಆರಿಸುವುದು. ಕಳೆದ ಚುನಾವಣೆ ಸಮಯದಲ್ಲೇ ಇಂಥದೊಂದು ಕೆಟ್ಟ ಸಂಪ್ರದಾಯ ಆರಂಭವಾಗಿತ್ತಾದರೂ ಅಷ್ಟಾಗಿ ಬೆಳಕಿಗೆ ಬಂದಿರಲಿಲ್ಲ. ಪರಿಸ್ಥಿತಿಯ ಗಂಭೀರತೆಯು ಅರ್ಥವಾಗಿರಲಿಲ್ಲ. ಆದರೆ ಈ ಸಲ ಇದು ವಿಪರೀತವಾಗಿದೆ. ಅನೇಕ ಹಳ್ಳಿಗಳಲ್ಲಿ ಗ್ರಾಮ ಪಂಚಾಯ್ತಿ ಸೀಟುಗಳು ಹರಾಜಾಗಿವೆ. ಒಂದು ಕಡೆ ತಲಾ 2.5 ಲಕ್ಷ ರು.ನಂತೆ ಸದಸ್ಯರುಗಳನ್ನು ಹರಾಜು ಹಾಕಿ50ಲಕ್ಷ ರು. ಗಳನ್ನು ಸಂಗ್ರಹಿಸಲಾಗಿದೆಯಂತೆ.
ಈ ಹಣವನ್ನು ಗ್ರಾಮದ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಬಳಸುತ್ತಾರಂತೆ. ಮತ್ತೊಂದು ಹಳ್ಳಿಯಲ್ಲಿ ರಸ್ತೆ ಮಾಡಿಸಲು ಹಣ ಬೇಕು ಅಂತ ಸದಸ್ಯರನ್ನು ಹರಾಜು ಹಾಕಿದ್ದಾರಂತೆ. ಇನ್ನೊಂದು ಕೇಸ್‌ನಲ್ಲಿ ತನ್ನ ಹೆಂಡತಿಯನ್ನು ಗ್ರಾಪಂ ಸದಸ್ಯೆಯನ್ನಾಗಿ ಮಾಡಿದರೆ ಗ್ರಾಮದ ದೇವಸ್ಥಾನದ ಜೀರ್ಣೋದ್ಧಾರಕ್ಕೆ25ಲಕ್ಷ ರು. ಕೊಡುವುದಾಗಿ ಒಬ್ಬರು ಆಫರ್ ನೀಡಿದ್ದಾರಂತೆ. ಆತಸ್ವತಃ ತಹಸೀಲ್ದಾರ್..!
ಇದು ಯಾವ ಸೀಮೆಯ ಲೆಕ್ಕ. ಹಳೆ ಕಾಲದಲ್ಲಿ ವ್ಯಾಜ್ಯ ಬಗೆಹರಿಸಲು ಪಂಚಾಯ್ತಿ ಮಾಡುತ್ತಿದ್ದರಲ್ಲ. ಆ ರೀತಿ ಆಯಿತು. ಇಷ್ಟಕ್ಕೂ ಜನರಿಗೆ ಈ ಅಧಿಕಾರ ಕೊಟ್ಟವರಾರು? ಇದು ಒಂದು ವ್ಯವಸ್ಥೆಯನ್ನೆ ಹೈಜಾಕ್ ಮಾಡಿದಂತಲ್ಲವೆ? ಹೋಗಲಿ.ಇದನ್ನು ಜನಪ್ರತಿನಿಧಿಗಳಾಗುವವರು ಹೇಗೆ ಒಪ್ಪುತ್ತಾರೆ? ಇದು ಪ್ರಜಾಪ್ರಭುತ್ವ ರೀತಿಯ ಆಯ್ಕೆಯೇ? ಹಣ ಕೊಟ್ಟು ಚುನಾಯಿತ ರಾಗುವುದೆಂದರೆ ಇದೂ ಒಂದು ರೀತಿ ಲಂಚ ಎನಿಸುವುದಿಲ್ಲವೆ? ಜನರು ಕೂಡ ಬ್ಲ್ಯಾಕ್ ಮೇಲ್ ಮಾಡದಂತಲ್ಲವೆ? ಇವೆಲ್ಲ ಪ್ರಜಾಪ್ರಭುತ್ವದ, ಒಪ್ಪಿತ ವ್ಯವಸ್ಥೆಯೊಂದರ ಅಣಕ ಮತ್ತು ಧಿಕ್ಕಾರ.
ಹಾಗೆಂದು ಅವಿರೋಧ ಆಯ್ಕೆಯ ಅವಕಾಶ ಇಲ್ಲ ಎಂದಲ್ಲ. ಪೂರ್ವ ನಿದರ್ಶನಗಳು ಇವೆ. ಅದು ಬೇರೆ. ಅನೇಕ ಕಡೆಗಳಲ್ಲಿ ಸೂಕ್ತ ಅಭ್ಯರ್ಥಿಗಳಿಲ್ಲವೆಂದೋ ಅಥವಾ ಸರ್ವಸಮ್ಮತದಿಂದಲೋ ಅವಿರೋಧ ಆಯ್ಕೆಯಾಗುವುದುಂಟು. ಈ ಸಂದರ್ಭದಲ್ಲಿ ದೇಶದ ಜನರ ಗಮನ ಸೆಳೆದಿರುವ ಗ್ರಾಮವನ್ನು, ಅಲ್ಲಿನ ಗ್ರಾಮ ಪಂಚಾಯ್ತಿಯ ಬಗ್ಗೆ ಇಲ್ಲಿ ಪ್ರಸ್ತಾಪಿಸುವುದು ಸೂಕ್ತ ಎನಿಸುತ್ತದೆ. ಏಕೆಂದರೆ ಆ ವ್ಯವಸ್ಥೆಗೂ, ಈಗ ನಮ್ಮ ರಾಜ್ಯದಲ್ಲಿ ಸೃಷ್ಟಿಸಲಾಗಿರುವ ವ್ಯವಸ್ಥೆಗೂ ಎಷ್ಟೊಂದು ವ್ಯತ್ಯಾಸವಿದೆ ಎಂಬುದು ಅರ್ಥವಾಗುತ್ತದೆ.
ಮಹಾರಾಷ್ಟ್ರದ ಅಹಮದ್‌ನಗರ ಜಿಲ್ಲೆಯಲ್ಲಿ ಒಂದು ಗ್ರಾಮವಿದೆ. ‘ಹಿವರೆ ಬಾಜಾರ್’ ಎಂಬುದು ಅದರ ಹೆಸರು. ಮರಾಠಾವಾಡ ದಲ್ಲಿರುವ ಅತಿ ಹಿಂದುಳಿದ ಗ್ರಾಮಗಳ ಪೈಕಿ ಒಂದಾಗಿತ್ತು.1980ರವರೆಗೂ ಅದು ಬರಪೀಡಿತ, ಬರಗೆಟ್ಟ ಹಳ್ಳಿಯಾಗಿತ್ತು. ಮಳೆಯಿಲ್ಲದೆ, ನೀರಿಲ್ಲದೆ ಗ್ರಾಮದ ಭೂಮಿ ಬರಡಾಗಿತ್ತು. ಜನರ ಜೀವನವೂ ಬರಡಾಗಿತ್ತು. ಜನರು ಅನಿವಾರ್ಯವಾಗಿ ಗುಳೆ ಹೋಗಿದ್ದರು. ಆದರೆ ಅಲ್ಲಿ ಪೋಪಟ್‌ರಾವ್ ಪವಾರ್ ಎಂಬ ಒಬ್ಬ ವ್ಯಕ್ತಿ ಅಹಮದ್ ನಗರದಿಂದ ಗ್ರಾಮಕ್ಕೆ ವಾಪಸಾದರು. ಪಂಚಾಯ್ತಿ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.
ಅದಾದ ಬಳಿಕ ಈ ಗ್ರಾಮ ಹಿಂತಿರುಗಿ ನೋಡಿಲ್ಲ. ಅದು ಈಗ ದೇಶದ ಅತಿ ಹೆಚ್ಚು ಜಿಡಿಪಿ ಹೊಂದಿರುವ ಗ್ರಾಮ. ನೂರಾರು ಮಂದಿ ಲಕ್ಷಾಧಿಪತಿಗಳು ಇಲ್ಲಿದ್ದಾರೆ. ನೀರಿನ ಸಮಸ್ಯೆ ಇಲ್ಲ. ಅದೀಗ ಮಾದರಿ ಗ್ರಾಮ. ಇದೆಲ್ಲ ಸಾಧ್ಯವಾಗಿದ್ದು ಆ ಒಬ್ಬ ಪವಾರ್ ಅವರ ಪವರ್‌ನಿಂದ. ಅವರು ಜಾರಿಗೆ ತಂದ ಹತ್ತು ಹಲವು ಕ್ರಾಂತಿಕಾರಿ ಬದಲಾವಣೆಗಳಿಂದಾಗಿ ಇಂದು ಆ ಗ್ರಾಮದ ಚಹರೆಯೇ ಬದಲಾಗಿದೆ. ಆದರೆ ನಮ್ಮ ರಾಜ್ಯದಲ್ಲಿ ಈಗ ನಡೆದಿರುವ ಈ ಸದಸ್ಯರ ಹರಾಜಿನ ಹಿಂದೆ ಇಂಥ ಯಾವುದಾದರೂ ಸದುದ್ದೇಶವಿದೆಯೇ ಎಂದರೆ ಅದೂ ಇಲ್ಲ.
ಇದರ ಮುಂದುವರಿದ ಭಾಗ ಅಥವಾ ಪೂರಕ ಎನಿಸುವಂಥ ಇನ್ನೊಂದು ವಿಷಯವನ್ನೂ ಇಲ್ಲಿ ಪ್ರಸ್ತಾಪಿಸುವುದು ಯೋಗ್ಯ ಎನಿಸುತ್ತದೆ. ಪಂಚಾಯ್ತಿ ಮಾತ್ರವಲ್ಲ ಯಾವುದೇ ಚುನಾವಣೆಗಳಲ್ಲಿ, ಸಾಮಾಜಿಕ ನ್ಯಾಯ ಮತ್ತಿತರ ದೃಷ್ಟಿಯಿಂದ ಮೀಸಲು ಸೌಲಭ್ಯ ಇರುತ್ತದೆ. ಅಂದರೆ ಕೆಲ ಕ್ಷೇತ್ರಗಳು ಬೇರೆ ಬೇರೆ ವರ್ಗಗಳವರಿಗೆ ಮೀಸಲಾಗಿರುತ್ತವೆ. ಅಲ್ಲಿ ಅವರು ಮಾತ್ರ ಸ್ಪರ್ಧಿಸ ಬೇಕಾಗುತ್ತದೆ. ಆದರೆ ಈ ನಿಯಮ ಮತ್ತು ಉದ್ದೇಶವೂ ಹೇಗೆ ಹಳ್ಳ ಹಿಡಿಯುತ್ತದೆ, ಇಲ್ಲವೆ ಕಾನೂನಿನ ಕಣ್ಣಿಗೆ ಹೇಗೆ ಮಣ್ಣೆರಚ ಲಾಗುತ್ತದೆ ನೋಡಿ.
ಒಬ್ಬರು ಒಂದು ಪಂಚಾಯ್ತಿ ಕ್ಷೇತ್ರದ ಮೆಂಬರ್ ಆಗಿರುತ್ತಾರೆ. ಅಥವಾ ಕಾರ್ಪೊರೇಟರ್ ಆಗಿ ಆಯ್ಕೆಯಾಗಿರುತ್ತರೆ. ಮುಂದಿನ ಚುನಾವಣೆ ಸಂದರ್ಭದಲ್ಲಿ ಆ ಕ್ಷೇತ್ರ ಮಹಿಳಾ ಮೀಸಲು ಕ್ಷೇತ್ರವಾಗಿ ಬದಲಾಗುತ್ತದೆ. ಆಗ ಅಲ್ಲಿ ಆ ಸದಸ್ಯನ ಹೆಂಡತಿ, ತಂಗಿ,ಅಕ್ಕ, ಸೊಸೆಯೋ ಸ್ಪರ್ಧಿಸುತ್ತಾರೆ. ಗೆಲ್ಲುತ್ತಾರೆ ಕೂಡ. ಆಗ ಈ ಅಧಿಕಾರ ಪರೋಕ್ಷವಾಗಿ ಆತನ ಕೈಯಲ್ಲೇ ಇರುತ್ತದೆ. ಎಷ್ಟೋ ಪಂಚಾಯ್ತಿಗಳಲ್ಲಿ ಹೆಂಗಸರು ನೆಪಮಾತ್ರಕ್ಕೆ ಮೆಂಬರುಗಳಾಗಿರುತ್ತಾರೆ. ಆದರೆ ಅಧಿಕಾರ, ದರ್ಬಾರು, ಕಾರುಬಾರು ಎಲ್ಲವೂ ಮಾಜಿ ಕೈಯಲ್ಲಿ. ಕೆಲವು ಸದಸ್ಯರ ಗಂಡಂದಿರು ರಾಜಾರೋಷವಾಗಿ ಕಲಾಪಗಳಲ್ಲಿ ಭಾಗವಹಿಸಿದ ವರದಿಗಳನ್ನೂಗಮನಿಸಿದ್ದೇವೆ.
ಚಾಪೆ ಕೆಳಗೆ, ರಂಗೋಲಿ ಕೆಳಗೆ ತೂರುವುದಲ್ಲವೇ ಇದು? ಮತ್ತೊಂದು ವಿಷಯಕ್ಕೆ ಬರೋಣ. 70-80ರ ದಶಕ. ಆಗ ಕೇಂದ್ರದಲ್ಲಿ ಹೊಸ ಸರಕಾರ ಅಧಿಕಾರಕ್ಕೆ ಬಂದ ಕೂಡಲೆ ರಾಜ್ಯ ಸರಕಾರಗಳಿಗೆ ನಡುಕ ಉಂಟಾಗುತ್ತಿತ್ತು. ಏಕೆಂದರೆ ಬೇರೆ ಪಕ್ಷಗಳ ಸರಕಾರಅಧಿಕಾರ ನಡೆಸುತ್ತಿದ್ದರೆ ಕೇಂದ್ರದ ಕಣ್ಣು ಅವುಗಳ ಮೇಲೆ ನೆಟ್ಟಿರುತ್ತಿತ್ತು. ಏನಾದರೊಂದು ಕಾರಣ, ನೆಪದ ಮೇಲೆ (ಕಾನೂನು ಮತ್ತು ಸುವ್ಯವಸ್ಥೆ, ಬಹುಮತ ಕಳೆದುಕೊಂಡಿದೆ ಎಂಬುದು ಪ್ರಮುಖ ಕಾರಣ) ಸರಕಾರಗಳನ್ನು ಕಿತ್ತು ಹಾಕುವ ಸಂಪ್ರದಾಯಹಾಸುಹೊಕ್ಕಾಗಿತ್ತು. ಬೊಮ್ಮಾಯಿ ಅವರ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕ ಈ ಪ್ರವೃತ್ತಿಗೆ ತಡೆ ಬಿತ್ತು.
ಆ ಕಾಲದಲ್ಲಿ ‘ಆಯಾ ರಾಮ್ ಗಯಾ ರಾಮ್’ ಎಂಬ ಇನ್ನೊಂದು ಕೆಟ್ಟ ಸಂಸ್ಕೃತಿ ಬೆಳೆದುಬಂದಿತ್ತು. ಬೇರೆ ಮಾತಿನಲ್ಲಿ ಹೇಳಬೇಕೆಂದರೆ ಒಂದು ಪಕ್ಷದಿಂದ ಇನ್ನೊಂದು ಪಕ್ಷಕ್ಕೆ ಹಾರುವುದು. ಅಂದರೆ ಪಕ್ಷಾಂತರ ಮಾಡುವುದು. ಇದು ಆಗ ಅಂಗಿ ಬದಲಿಸಿದಷ್ಟೇ ಸುಲಭವಾಗಿತ್ತು. ಇದು ಕೊನೆ ಕೊನೆಗೆ ಎಷ್ಟೊಂದು ಹೆಚ್ಚಾಯಿತು ಎಂದರೆ, ಪಿಡುಗಿನ ರೀತಿಯಲ್ಲಿ ಹಬ್ಬಿತು.ಹಣ, ತೋಳ್ಬಲ, ಅಧಿಕಾರದ ಮೂಲಕ ಶಾಸಕರನ್ನು ಆ ಶಿಬಿರದಿಂದ ಈ ಶಿಬಿರಕ್ಕೆ ಕರೆತಂದು ಹಾಲಿ ಸರಕಾರವನ್ನುಬೀಳಿಸುವುದು ಇಲ್ಲವೆ ಅದರ ಆಧಾರದಲ್ಲಿ ತಮ್ಮ ಸರಕಾರ ರಚಿಸುವ ಕೆಲಸ ನಡೆಯುತ್ತಿತ್ತು.
ಇದು ರಾಜಾರೋಷವಾಗಿ, ಯಾವುದೇ ಎಗ್ಗಿಲ್ಲದೆ ನಡೆಯುತ್ತಿತ್ತು. ಕೊನೆಕೊನೆಗೆ ಯಾರು ಮೊದಲು ಇದನ್ನು ಅನುಸರಿಸಿದ್ದರೋ, ಬದಲಾದ ಪರಿಸ್ಥಿತಿಯಲ್ಲಿ ಅವರಿಗೇ ಮುಳುವಾಗತೊಡಗಿತು. ಆಗ ಜಾಗೃತವಾದ ಅಂದಿನ ಸರಕಾರ ಪಕ್ಷಾಂತರ ನಿಷೇಧ ಕಾಯಿದೆ ಯನ್ನು ಸಂಸತ್ತಿನಲ್ಲಿ ಪಾಸು ಮಾಡಿ ಕಾಯಿದೆಯನ್ನಾಗಿ ಮಾಡಿತು. ಅದರ ಪ್ರಕಾರ ಪಕ್ಷಾಂತರ ಮಾಡುವುದಾದರೆ ಒಂದು ಪಕ್ಷ ಅಥವಾ ಗುಂಪಿಗೆ ಸೇರಿದ ಮೂರನೇ ಎರಡರಷ್ಟು ಸದಸ್ಯರು ಪಕ್ಷಾಂತರ ಮಾಡಿದರೆ ಮಾತ್ರ ಅದು ಮಾನ್ಯ.
ಇಲ್ಲದಿದ್ದರೆ ಪಕ್ಷಾಂತರ ಮಾಡಿದವರ ಸದಸ್ಯತ್ವ ಹೋಗುವ ಕಾನೂನು ಅದು. ಈ ಕಾಯಿದೆಯ ಬಗ್ಗೆ ಗೌರವವಿಲ್ಲದಿದ್ದರೂ ಅನರ್ಹತೆಯ ಭಯದಿಂದ ಕೆಲ ಕಾಲ ಪಕ್ಷಾಂತರದ ಪಿಡುಗು ನಿಂತಿತ್ತು. ಆದರೆ ‘ನೆಸೆಸಿಟಿ ಈಸ್ ದ ದರ್ ಆಫ್ ಇನ್ವೆನ್ಷನ್’ಎಂಬ ಮಾತು ನಮ್ಮ ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳಿಗೆ ಚೆನ್ನಾಗಿ ಅನ್ವಯಿಸುತ್ತದೆ. ಹೀಗಾಗಿ ಈ ಅನರ್ಹತೆಯ ಗುಮ್ಮದಿಂದ ಪಾರಾಗಲು ಹೊಸ ಉಪಾಯ ಕಂಡುಕೊಂಡರು. ಅದೇನೆಂದರೆ ಪಕ್ಷಾಂತರ ಮಾಡಿದರೆ ತಾನೆ ತರಲೆ, ತಕರಾರು. ಆ ಸಹವಾಸವೇ ಬೇಡ. ಬೇಕಾದ ಶಾಸಕರಿಂದ ರಾಜೀನಾಮೆ ಕೊಡಿಸಿಬಿಡುವುದು.
ಮ್ಯಾಟರ್ ಫಿನಿಷ್. ಹೀಗಾಗಿ ರೆಸಾರ್ಟ್ ರಾಜಕೀಯ, ಆಪರೇಶನ್ ಇತ್ಯಾದಿ ಹೊಸ ಸಂಪ್ರದಾಯಗಳಿಗೆ ಇದು ನಾಂದಿ ಮಾಡಿಕೊಟ್ಟಿತು. ಹೀಗೆ ಮಾಡುವುದರ ಹಿಂದಿನ ಉದ್ದೇಶ ಅಧಿಕಾರ ಹಾಗೂ ಅನೇಕ ಸಂದರ್ಭಗಳಲ್ಲಿ ಹಣ. ಹಿಂದೆಯೂಇದೇ ಕಾರಣಕ್ಕಾಗಿ ಪಕ್ಷಾಂತರ ಮಾಡುತ್ತಿದರು ಮತ್ತು ಮಾಡಿಸುತ್ತಿದ್ದರು. ಆ ಕಾರಣಕ್ಕಾಗಿಯೇ ಪಕ್ಷಾಂತರ ನಿಷೇಧ ಕಾಯಿದೆ ಜಾರಿಗೆ ಬಂದಿದ್ದು. ಆದರೆ ಈಗ ರಾಜಕೀಯ ಪಕ್ಷಗಳು ಕಂಡುಕೊಂಡಿರುವ ಹೊಸ ವಿಧಾನಗಳಿಂದ ಅನರ್ಹತೆಯ ತಲೆಬಿಸಿಯೇ ಇಲ್ಲ. ಅಂದರೆ ಈ ಮೂಲಕ ಪಕ್ಷಾಂತರ ನಿಷೇಧ ಕಾನೂನನ್ನೇ ನಿಷ್ಪ್ರಯೋಜಕಗೊಳಿಸಲಾಗಿದೆ.
ಈ ರೀತಿಯಾದರೆ ಏನು ಕಾನೂನು ಮಾಡಿದರೆ ಏನುಪಯೋಗ ? ಮೊದಮೊದಲು ಏನಾದರೂ ಹಗರಣವಾದರೆ, ಅಕ್ರಮ ನಡೆದರೆ ಸಂಬಂಧಪಟ್ಟ ಸಚಿವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುತ್ತಿದ್ದರು. ರೈಲು ಅಪಘಾತದ ಹಿನ್ನೆಲೆಯಲ್ಲಿ ಇದೇ ನೈತಿಕತೆಯ ಕಾರಣ ನೀಡಿ ಲಾಲ್ ಬಹದ್ದೂರ್ ಶಾಸಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆದರೆ ಈಗ ಇಂಥಸಂದರ್ಭಗಳಲ್ಲಿ ರೈಲು ಸಚಿವರಿಗೆ ಅದನ್ನು ನೆನಪಿಸಿದರೆ, ‘ನಾನು ರಾಜೀನಾಮೆ ನೀಡಿದರೆ ಸಮಸ್ಯೆ ಬಗೆಹರಿಯುವುದೇ? ಎಂದು ನಮ್ಮನ್ನೇ ಪ್ರಶ್ನಿಸುತ್ತಾರೆ.
ಇಲ್ಲಿ ಸಮಸ್ಯೆ ಇರುವುದು ಸಮಸ್ಯೆ ಬಗೆಹರಿಯುವುದಲ್ಲ. ಬದಲಾಗಿ ನೈತಿಕತೆಯದು, ಜವಾಬ್ದಾರಿಯದು, ಉತ್ತರದಾಯಿತ್ವದ್ದು. ಆದರೆ ಈಗ ಅದಕ್ಕೆ ಕಿಮ್ಮತ್ತು ಇಲ್ಲ. ಚುನಾವಣೆಯಲ್ಲಿ ಸೋತರೆ ಮೊದಲು ಮನೆಯಲ್ಲಿರುತ್ತಿದ್ದರು. ಆದರೆ ಈಗ ಚುನಾವಣೆಗೆಸ್ಪರ್ಧಿಸದಿರುವವರೂ, ಸ್ಪರ್ಧಿಸಿ ಸೋತವರೂ ಮಂತ್ರಿ ಪಟ್ಟ ಅಲಂಕರಿಸುತ್ತಾರೆ. ಅವರನ್ನು ಹಿಂಬಾಗಿಲ ಮೂಲಕ ಶಾಸನಸಭೆ ಗಳಿಗೆ ಕರೆತರಲಾಗುತ್ತದೆ.
ಮೊದಲಾದರೆ ಇದಕ್ಕೊಂದು ರೀತಿ ರಿವಾಜು ಇರುತ್ತಿತ್ತು. ಆದರೆ ಈಗ ಅದಕ್ಕೆಲ್ಲ ಬೆಲೆಯೇ ಇಲ್ಲ. ಬದಲಾಗಿ ಬದಲೀ ಮಾರ್ಗ ಗಳೇನು ಎಂಬುದನ್ನು ಹುಡುಕುತ್ತಾರೆ. ಇದೇ ನೈತಿಕ ಅಧಃಪತನ; ಇದೇ ರಂಗೋಲಿ ಕೆಳಗೆ ತೂರುವ ಮನೋಭಾವ; ಇದು ಬೇಲಿಯೇ ಎದ್ದು ಹೊಲ ಮೇಯುವ ಹೊಸ , ಒಪ್ಪಿತ ಅಪಸವ್ಯ.
ನಾಡಿಶಾಸ್ತ್ರಇವರೇ ಕಾಯ್ದೆ ಕಾನೂನು ಮಾಡುವವರುಆದರೆ ಕಾನೂನಿಗೆ ಕಿಮ್ಮತ್ತು ಕೊಡದವರುಬಿದ್ದರೂ ಮೀಸೆ ಮಣ್ಣಾಗಿಲ್ಲ ಎನ್ನುವರುಮೈಕೊಡವಿ ಹಾಗೇ ಎದ್ದು ನಿಲ್ಲುವರು