ಪರಿಸರ ಸರಪಣಿಯ ವಿಶಿಷ್ಠ ಕೊಂಡಿಗಳು
ಶಶಾಂಕಣ
ಶಶಿಧರ ಹಾಲಾಡಿ
ಒಂದು ಕಾಲದಲ್ಲಿ ಪಕ್ಷಿವೀಕ್ಷಣೆಯ ಹುಚ್ಚು ಹಚ್ಚಿಸಿಕೊಂಡು, ನಮ್ಮ ಮನೆಯ ಹಿಂದಿನ ಹಕ್ಕಲು, ಹಾಡಿ, ಸೊಪ್ಪಿನ ಅಣೆ, ಬಳ್ಳಿಹರ, ಗುಡ್ಡದ ನಡುವಿನ ತೋಡು, ಹರನಗುಡ್ಡ – ಈ ಫಾಸಲೆಯ ಕಾಡು, ಬೆಟ್ಟಗಳಲ್ಲಿ ನಾನು ಸುತ್ತಾಡಿದ್ದುಂಟು.
ಕಾಲೇಜು ಮುಗಿಸಿ ಒಂದು ವರ್ಷ ನಿರುದ್ಯೋಗಿಯಾಗಿದ್ದಾಗ ಸಾಕಷ್ಟು ಪಕ್ಷಿ ವೀಕ್ಷಣೆ ಮಾಡಿದ್ದೆ. ನನ್ನ ಹವ್ಯಾಸಕ್ಕೆ ಇಂಬು ಕೊಡುವಂತೆ, ನಮ್ಮ ಮನೆಯ ಸುತ್ತಲೂ ತೀರ ದಟ್ಟವಲ್ಲದ, ಆದರೆ ಹಸಿರು ತುಂಬಿದ ಕಾಡುಗಳಿದ್ದವು. ಅಂತಹ ಜಾಗಗಳಲ್ಲಿ ಹಕ್ಕಿಗಳನ್ನು ಗುರುತಿಸುವುದು ತುಸು ಸುಲಭ. ತೀರಾ ದಟ್ಟ ಕಾಡುಗಳಲ್ಲಿ ಹಕ್ಕಿಗಳು ಕಣ್ಣಿಗೆ ಬೀಳದೇ, ಸತಾಯಿಸುತ್ತವೆ!
ಹಳ್ಳಿಯಲ್ಲಿದ್ದರೂ, ಹಕ್ಕಿಗಳ ಹೆಸರುಗಳನ್ನು ಹುಡುಕಲು, ಅವುಗಳ ಜೀವನ ಕ್ರಮ, ಕೂಗುವ ಶೈಲಿಯ ಪರಿಚಯ ಪಡೆಯಲು, ಪಕ್ಷಿಶಾಸದ ಅಜ್ಜ ಸಲೀಂ ಆಲಿಯವರ ಪುಸ್ತಕಗಳು ಸಹಾಯ ಮಾಡಿದವು. ಈಗಲೂ, ಪಕ್ಷಿಶಾಸದ ಓನಾಮ ಬಾರದೇ ಇರುವವರಿಗೂ, ಹಕ್ಕಿಗಳ ಪರಿಚಯವನ್ನು ಉತ್ತಮವಾಗಿ ಮಾಡಿಕೊಡುವ ಪುಸ್ತಕಗಳೆಂದರೆ, ಸಲೀಂ ಆಲಿಯವರ ರಚನೆಗಳು. ಅವರು ಕಳೆದ ಶತಮಾನದಲ್ಲಿ ಬರೆದಿಟ್ಟ ಪಕ್ಷಿಗಳ ವಿವರಗಳು ಸಾರ್ವಕಾಲಿಕ ಸ್ಪಷ್ಟತೆಯನ್ನು ಹೊಂದಿವೆ.
ಸಲೀಂ ಆಲಿಯವರ ‘ಬುಕ್ ಆಫ್ ಇಂಡಿಯನ್ ಬರ್ಡ್ಸ್’ ಪುಸ್ತಕವನ್ನು ಸಾರ್ವಜನಿಕ ಲೈಬ್ರರಿಯಿಂದ ತಂದು, ಅದರಲ್ಲಿದ್ದ ಹಕ್ಕಿಗಳ ಚಿತ್ರಗಳನ್ನು ನೋಡಿ, ಸಲೀಂ ಆಲಿಯವರ ಅದ್ಭುತ ಎನಿಸುವ ಅರ್ಧಪುಟದ ವಿವರಣೆಯನ್ನು ಓದಿ, ಆ ಹಕ್ಕಿಯನ್ನು ನಮ್ಮ ಮನೆಯ ಸುತ್ತ ಮುತ್ತ ಹುಡುಕುವುದು, ಆ ಪುಸ್ತಕದಲ್ಲಿದ್ದ ಹಕ್ಕಿ ಕಣ್ಣಿಗೆ ಬಿದ್ದರೆ, ಸಂಭ್ರಮಿಸುವುದು ನನ್ನ ಅಂದಿನ ಹವ್ಯಾಸ. ಅವರ ಆ ಅದ್ಭುತ ಪುಸ್ತಕದಲ್ಲಿದ್ದ ಒಂದೊಂದೇ ಹಕ್ಕಿಯನ್ನು ಗುರುತಿಸುವುದು ಮಾಡುತ್ತಾ ಬಂದಂತೆ, ಆ ಲೈಬ್ರರಿ ಪುಸ್ತಕದ ಕೊನೆಯಲ್ಲಿದ್ದ ಸದಸ್ಯರ ಸಂಖ್ಯೆ ಗುರುತು ಮಾಡುವ ಪುಟ ನನ್ನ ಕ್ರಮಸಂಖ್ಯೆಯಿಂದ ತುಂಬಿಹೋಯಿತು!
ದಟ್ಟ ಕಾಡಿನ ಹಕ್ಕಿಗಳನ್ನು ಗುರುತಿಸಲು, ನಮ್ಮ ಮನೆಯಿಂದ ಕೆಲವು ಕಿಮೀ ದೂರದಲ್ಲಿದ್ದ ಸಹ್ಯಾದ್ರಿಯ ಅರಣ್ಯದ ಹಕ್ಕಿಗಳನ್ನು ಗುರುತಿಸಲು, ಅವರೇ ಬರೆದಿದ್ದ ‘ಇಂಡಿಯನ್ ಹಿಲ್ ಬರ್ಡ್ಸ್’ ಎಂಬ ಪುಸ್ತಕ ನಮ್ಮ ಕಾಲೇಜು ಲೈಬ್ರರಿಯಲ್ಲಿ ಸಿಕ್ಕಿತು. ಅದರಲ್ಲಿನಚಿತ್ರಗಳಂತೂ ಮನಮೋಹಕ. ಇಂಗ್ಲೆಂಡ್‌ನಲ್ಲಿ ಮುದ್ರಣಗೊಂಡಿದ್ದ, ಸುಂದರ ವರ್ಣಚಿತ್ರ ಗಳಿದ್ದಅಂತಹ ಇನ್ನೊಂದು ಪುಸ್ತಕವನ್ನು ಆಗಿನ ಕಾಲದಲ್ಲಿ ನಾನು ನೋಡಿರಲಿಲ್ಲ.
ಹಕ್ಕಿಗಳನ್ನು ಗುರುತಿಸುವ ಹವ್ಯಾಸವನ್ನೇ ಮನದಲ್ಲಿ ತುಂಬಿಕೊಂಡು, ನಮ್ಮ ಮನೆಯ ಹಿಂಭಾಗದಲ್ಲಿ, ಮಧ್ಯಮ ಗಾತ್ರದ ಮರಗಳು, ಗಿಡಗಳು, ಬಳ್ಳಿಗಳೇ ತುಂಬಿದ್ದ ಹಕ್ಕಲಿನಲ್ಲಿ ಓಡಾಡುತ್ತಾ, ಒಮ್ಮೊಮ್ಮೆ ಪುಟ್ಟ ಮರವೊಂದನ್ನು ಏರಿ, ಅಲ್ಲಿನ ಕೊಂಬೆಗಳನ್ನೇ ನೋಡುತ್ತಾ  ಕ್ಷಿಂಟೆಗಟ್ಟಲೆ ಕುಳಿತಿರಿತ್ತಿದ್ದ ನನ್ನನ್ನು ಕಂಡು, ಆ ಜಾಗಕ್ಕೆ ಸೊಪ್ಪು, ಸೌದೆ ತರಲು ಬರುತ್ತಿದ್ದ ಆಚೀಚೆಗಿನ ಮನೆಯ ರೈತರು, ಈ ಹುಡುಗನಿಗೆ ಏನಾಗಿದೆ ಎಂದು ತಲೆಕೆರೆದುಕೊಂಡದ್ದೂ ಉಂಟು!
ನಮ್ಮ ಊರಿನಲ್ಲಿದ್ದ ವಿವಿಧ ಪ್ರಬೇಧಗಳ ಗೂಬೆಗಳನ್ನು ನಾನು ಗುರುತಿಸಿದ್ದು ಒಂದು ಕುತೂಹಲಕಾರಿ ಕಥೆ. ಬೆಳದಿಂಗಳ ರಾತ್ರಿಗಳಲ್ಲಿ, ಕತ್ತಲಿನ ಲೋಕದಲ್ಲಿ ನಿಗೂಢ ಧ್ವನಿಯಲ್ಲಿ ಕೂಗುತ್ತಿದ್ದ ಗೂಬೆಗಳೆಂದರೆ, ನಮ್ಮ ಹಳ್ಳಿಯವರಿಗೆ ಒಂದುರೀತಿಯ ಭಯ, ದಿಗಿಲು. ಮಕ್ಕಳು ಹಠ ಮಾಡಿದರೆ, ಗುಮ್ಮನನ್ನು ಕರೆಯುತ್ತೇನೆ ಎಂದು ತಾಯಂದಿರು ಹೆದರಿಸುತ್ತಿದ್ದರು. ಎಲ್ಲರಲ್ಲೂ ಸಣ್ಣಗೆ ಭಯ ಹುಟ್ಟಿಸುತ್ತಾ, ಕಗ್ಗತ್ತಲಿನ ಹಾರಾಡುತ್ತಾ, ತಮ್ಮ ಪ್ರಮುಖ ಬೇಟೆ ಎನಿಸಿರುವ ಇಲಿ, ಹೆಗ್ಗಣಗಳನ್ನುಹಿಡಿಯುತ್ತಿದ್ದ ಗೂಬೆಗಳೆಂದರೆ, ಅಪಶಕುನ ಎಂಬ ಅಭಿಪ್ರಾಯ. ಆದರೆ ಇಲಿ ಹಿಡಿದು ಅವು ರೈತನಿಗೆ ಸಹಾಯ ಮಾಡುತ್ತಿರು ವುದು ಒಂದು ವಾಸ್ತವ. ಆ ಗೂಬೆಗಳ ಮುಖವೋ, ಮನುಷ್ಯನ ಮುಖವನ್ನೇ ಹೋಲುತ್ತಿತ್ತಲ್ಲ!
ಅವುಗಳು ಕೂಗುವ ಶೈಲಿ ವಿಭಿನ್ನ, ವಿಶಿಷ್ಟ. ಊ ಹೂಂ ಊ ಎಂದು (ಮೂರು ಕೂಗು) ಕೂಗುವ ಮಾಮೂಲಿ ಗೂಬೆಗಳದ್ದು (ಬ್ರೌನ್ ಫಿಶ್ ಔಲ, ಮೀನು ಗೂಬೆ) ಒಂದು ಪಟ್ಟಾದರೆ, ಉ ಹೂಂ ಎಂದು ಎರಡೇ ಬಾರಿ ಆಳವಾದ ದನಿಯಲ್ಲಿ ಕೂಗುವಕೊಂಬಿನ ಗೂಬೆಗಳು ಮನಸ್ಸಿನಲ್ಲಿ ಮೂಡಿಸುತ್ತಿದ್ದ ಭಯದ ಪಟ್ಟು ಇನ್ನೊಂದೇ ಆಯಾಮದ್ದು. ಮಕ್ಕಳನ್ನು ಹೆದರಿಸಲು, ಮಕ್ಕಳಿಗೆ ಊಟ ಮಾಡಿಸುವಾಗ ಒತ್ತಡ ತರಲು, ಅಮ್ಮಂದಿರು ಗೂಬೆಯ ಕೂಗನ್ನು ಅನುಕರಿಸುತ್ತಿದ್ದುದು ನಮ್ಮೂರಿ ನಲ್ಲಿಮಾಮೂಲು.
ದಾಸರ ಗೀತೆಗಳ, ಗುಮ್ಮನ ಕರೆಯದಿರೇ ಅಮ್ಮಾ ನೀನು..ಗುಮ್ಮನ ಕರೆಯದಿರೇ ಎಂದು ಮಗುವೊಂದು ವಿನಂತಿ ಮಾಡಿತ್ತಲ್ಲವೆ!ಗೂಬೆ ಪ್ರಭೇದಕ್ಕೆ ಸೇರಿದ ಒಂದು ನಿಗೂಢ ಹಕ್ಕಿ ಎಂದರೆ ನಮ್ಮೂರಿನ ದೊಡ್ಡವರಿಗೂ ಭಯ. ಅದನ್ನು  ಕರೆಯುತ್ತಿದ್ದುದೇ ಭೂತ ಹಕ್ಕಿ ಎಂದು. ಮನೆ ಹತ್ತಿರ ಬಂದು ಮರದ ಮೇಲೆ ಕುಳಿತು ಕೂಗಿದರೆ, ಭಾರೀ ಅಪಶಕುನ. ಆ ಸುತ್ತಲಿನ ಯಾರದ್ದಾದರೂಮನೆಯಲ್ಲಿ ಸಾವು ಸಂಭವಿಸಬಹುದು ಎಂಬ ಮೂಢನಂಬಿಕೆ ನಮ್ಮೂರಿನಲ್ಲಿತ್ತು.
ನಿಗೂಢ, ಆಳವಾದ ದನಿಯಲ್ಲಿ ಉ ಹೂಂ ಎಂದು ಕೂಗುವ ಗ್ರೇಟ್ ಹಾರ್ನ್ಡ್ ಔಲ್ ಅಥವಾ ಕೊಂಬಿನ ಗೂಬೆ, ಆ ಭಯಕ್ಕೆ ಕಾರಣ. ಬೆಳದಿಂಗಳ ನಡು ರಾತ್ರಿಯಲ್ಲಿ ಈ ನಿಗೂಢ, ಭಯ ಹುಟ್ಟಿಸುವ ಧ್ವನಿಯ ಗೂಬೆಗಳು ನಮ್ಮ ಮನೆಯ ಸುತ್ತ ಮುತ್ತ ಆಗಾಗ ಕೂಗುತ್ತಿದ್ದವು. ನಮ್ಮೂರಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದ ಮೀನು ಗೂಬೆಗಳ ಕೂಗು ಆಗಾಗ ಕೇಳುತ್ತಿದ್ದರೂ, ಕೊಂಬಿನಗೂಬೆಗಳ ಕೂಗು ತುಸು ಅಪರೂಪ.
ವರ್ಷಕ್ಕೆನಾಲ್ಕಾರು ಬಾರಿ ಮಾತ್ರ ಕೇಳಿಸುತ್ತಿತ್ತು. ರಾತ್ರಿಯಲ್ಲಿ ಆ ಹಕ್ಕಿ ಕೂಗಿದ್ದನ್ನು ಕೇಳಿದರೆ, ಮರುದಿನ ನಮ್ಮ ಅಮ್ಮಮ್ಮ ತುಸು ದಿಗಿಲಿನಿಂದ ‘ನಿನ್ನೆ ರಾತ್ರಿ ಭೂತ ಹಕ್ಕಿ ಕೂಗುತ್ತಿತ್ತು’ ಎಂದು ಪಿಸುನುಡಿಯಲ್ಲಿ ಹೆಳುತ್ತಾ, ಕಣ್ಣುಗಳನ್ನು ಭಯದ ಛಾಯೆಯಲ್ಲಿ ಹೊರಳಿಸುತ್ತಾ, ಇನ್ನಷ್ಟು ದಿಗಿಲು ಹುಟ್ಟಿಸುತ್ತಿದ್ದರು. ಭೂತದ ಸ್ವರೂಪದ, ಭೂತದ ಶಕ್ತಿ ಹೊಂದಿದ ಹಕ್ಕಿ ಎಂಬ ಅವರ ಆ ತಿಳಿವಳಿಕೆ, ಮೂಢನಂಬಿಕೆ, ಪುರಾತನ ಕಾಲದ್ದು, ಅವರ ಬಾಲ್ಯದಲ್ಲಿ ಗಳಿಸಿಕೊಂಡಿದ್ದು.
ಬ್ರೌನ್ ಫಿಶ್ ಔಲ್ ಅಥವಾ ಮೀನು ಗೂಬೆ ನಮ್ಮೂರಿನಲ್ಲಿ ಬಹು ಸುಲಭವಾಗಿ ಕಾಣಸಿಗುತ್ತಿತ್ತು. ನಮ್ಮ ಮನೆಯ ಹಿಂದಿನ ಹಕ್ಕಲಿನಲ್ಲಿ ಹಗಲು ಹೊತ್ತಿನಲ್ಲಿ ಯಾವುದಾದರೂ ಮರದ ಮೇಲೆ ನಿಶ್ಚಲವಾಗಿ ಅದು ಕುಳಿತು ನಮ್ಮತ್ತಲೇ ಮುಖ ತಿರುಗಿಸುತ್ತಾ ದಿಟ್ಟಿಸಿ ನೋಡುವ ನೋಟವೇ ಚಂದ. ತಲೆಯ ಮೇಲೆ ಕೊಂಬಿನ ರೀತಿ ಮೂಡಿರುವ ಗರಿಗಳ ಗುಚ್ಛ, ಹೊಳೆವ ದುಂಡಗಿನ ಎರಡು ಕಣ್ಣುಗಳು, ದುಂಡನೆಯ ಮುಖ, ಮನುಷ್ಯನ ಮೂಗನ್ನು ಹೋಲುವ ಕೊಕ್ಕು, ಗುಂಡು ಗುಂಡು ದೇಹ ಎಲ್ಲಾ ಸೇರಿ ಗಂಭೀರ ಭಾವ ಮೂಡಿಸುವ ಹಕ್ಕಿ.
ಹಕ್ಕಲಿನ ಪುಟ್ಟ ಮರವೊಂದರ ಕೊಂಬೆಯ ಮೇಲೆ ಕುಳಿತಿದ್ದ ಆ  ಗೂಬೆಯನ್ನು ಹಲವು ಬಾರಿ ನೋಡಿದ್ದೆ. ಇಳಿ ಸಂಜೆಯ ಹೊತ್ತಿನಲ್ಲಿ ಊ ಹೂಂ ಊ ಎಂಬ ಮೂರು ಭಾಗದ ಕೂಗು ಕೇಳಿದರೆ, ಅದು ಮೀನುಗೂಬೆಯದ್ದೇ. ಒಂದು ಜೋಡಿ ಗೂಬೆಗಳು ಪರಸ್ಪರ ಮಾತನಾಡುವ ರೀತಿ ಕೂಗುವ ಪರಿ ವಿಶಿಷ್ಟ. ಮೀನು ಗೂಬೆ ಮತ್ತು ಕೊಂಬಿನ ಗೂಬೆಗಳು (ಭೂತಹಕ್ಕಿ) ನೋಡಲು ಒಂದೇ ರೀತಿ ಇದ್ದು, ಕಾಲಿನ ಮೇಲೆ ತುಪ್ಪಳದ ವಿನ್ಯಾಸ ಮತ್ತು ಅವು ಕೂಗುವ ಶೈಲಿಯಿಂದ ಮಾತ್ರ ಭಿನ್ನತೆಯನ್ನು ಗುರುತಿಸಬ ಹುದು ಎಂದು ಸಲೀಂ ಆಲಿ ಬರೆದಿದ್ದಾರೆ.
ನಮ್ಮ ಊರಿನ ಹಾಡಿ-ಹಕ್ಕಲುಗಳಲ್ಲಿ ನಿಜಕ್ಕೂ ಭಯ ಹುಟ್ಟಿಸುವ ಒಂದು ಪ್ರಭೇದದ ಗೂಬೆ ಇದೆ. ನಮ್ಮ ಅಮ್ಮಮ್ಮ ಅವರ ಬಾಲ್ಯದಲ್ಲಿ ಗಳಿಸಿದ ಜ್ಞಾನದ ಪ್ರಕಾರ ಇದರ ಹೆಸರು ‘ಜಕಣಿ ಹಕ್ಕಿ’. ಈ ಗೂಬೆ ತುಸು ಅಪರೂಪದ್ದು. ನಮ್ಮ ಮನೆಯ ಹಿಂಭಾಗದ ಹಕ್ಕಲು ದಾಟಿ, ಒಂದೆರಡು ಕಿಮೀ ಕಾಡಿನ ನಡೆದರೆ ಬಳ್ಳಿ ಹರ ಮತ್ತು ಹರನಗುಡ್ಡದ ಕಾಡು ಸಿಗುತ್ತದೆ. ಅಲ್ಲಿ ಕೆಲವು ಭಾರೀ ಗಾತ್ರದ ಮರಗಳಿದ್ದು, ದಟ್ಟಕಾಡಿನ ಸ್ವರೂಪ ಉಳಿದುಕೊಂಡಿದೆ.
ಒಮ್ಮೆ ನಾನು ಮತ್ತು ದ್ಯಾವಣ್ಣ ನಾಯಕ, ರಾತ್ರಿ ಏಳು ಗಂಟೆಯ ಸಮಯದಲ್ಲಿ ಆ ಕಾಡುದಾರಿಯಲ್ಲಿ ಸಿಕ್ಕಿಬಿದ್ದಿದ್ದೆವು. ಆರು ಕಿಮೀ ದೂರದಲ್ಲಿರುವ ತಾರಿಕಟ್ಟೆಯ ನಮ್ಮತ್ತೆಯ ಮನೆಯಲ್ಲಿ ಸಾಕಲು ಬಿಟ್ಟಿದ್ದ ದನವೊಂದನ್ನು ವಾಪಸು ನಮ್ಮ ಮನೆಗೆಕರೆತರಲು ಸಂಜೆ ಐದರ ನಂತರ ನಡೆದೇ ಹೊರಟಿzವು. ಆ ಕಾಲದಲ್ಲಿ ಟಾರ್ಚ್ ಬೆಳಕಿಲ್ಲದೇ ಹೊರಡುವ ಹುಂಬತನ ದ್ಯಾವಣ್ಣನದು. ನಾನಿನ್ನೂ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ. ದನವನ್ನು ಕರೆದುಕೊಂಡು, ಬೇಗಬೇಗ ನಡೆಯುತ್ತಾ ಬಂದೆವು.ಇನ್ನೇನು ಹರನಗುಡ್ಡದಿಂದ ಕಣಿವೆಯ ರೀತಿಯ ದಾರಿಯಲ್ಲಿ ಕೆಳಗಿಳಿದರೆ, ನಮ್ಮ ಮನೆಯ ಬೈಲು, ಜನವಸತಿ ಸಿಗುತ್ತಿತ್ತು.
ಅದಾಗಲೇ ಏಳುಗಂಟೆಯ ಸಮಯ, ಒತ್ತೊತ್ತಾಗಿ ಬೆಳೆದಿದ್ದ ಮರಗಳ ನಡುವಿನ ಆ ದಾರಿಯಲ್ಲಿ ದಟ್ಟ ಕತ್ತಲು. ಹಸುವನ್ನು ಹಿಡಿದಿದ್ದ ದ್ಯಾವಣ್ಣ ಮುಂದೆ ನಡೆಯುತ್ತಿದ್ದ. ನಾನು ಹಿಂದಿನಿಂದ. ಆಗ ಒಮ್ಮೆಗೇ, ಕತ್ತಲು ತುಂಬಿದ ಮರಗಳ ಕೊಂಬೆಯಿಂದ ತೀಕ್ಷ್ಣವಾದ, ತಾರಕ ಸ್ವರದ ಒಂದು ಕೂಗು – ಮುದುಕಿಯೊಬ್ಬಳು ದೀರ್ಘವಾಗಿ ಆಕ್ರಂದನ ಮಾಡುವಂತಹ ಕೆಟ್ಟ ದನಿಯ ಕೂಗು. ದ್ಯಾವಣ್ಣನನ್ನು ಕೇಳಿದೆ ‘ಅದು ಎಂತ ಕೂಗುತ್ತಿರುವುದು?’ ನನ್ನ ಮಾತು ಕೇಳಿ ಅವನು ಇನ್ನಷ್ಟು ಲಗುಬಗೆಯಿಂದಕಾಲು ಹಾಕುತ್ತಾ, ‘ಬೇಗ ಬನ್ನಿ, ಮನೆಗೆ ಹೋಪ’ ಎಂದು ಸರಸರನೆ ನಡೆಯತೊಡಗಿದ.
ಕಾಡುದಾರಿಯಲ್ಲಿ ಕೆಳಗಿಳಿದು, ಬೈಲು ಸೇರಿ, ಕಾಲುಗಂಟೆಯಲ್ಲಿ ಮನೆ ಮುಟ್ಟಿದೆವು. ಹರನಗುಡ್ಡೆಯ ಆ ಕಾಡಿನಲ್ಲಿ, ಆ ಕೆಟ್ಟ ಧ್ವನಿಯ ಕೂಗನ್ನು ಕೇಳಿದ ನಂತರ, ಮೌನಕ್ಕೆ ಶರಣಾದ ಆತ, ಬಾಯಿ ಬಿಟ್ಟದ್ದು ಮನೆಗೆ ಬಂದ ನಂತರವೇ! ನಡೆದ ಆಯಾಸವನ್ನು ಪರಿಹರಿಸಿಕೊಂಡ ನಂತರ, ಅಮ್ಮಮ್ಮನನ್ನು ಆ ಕೆಟ್ಟ ಕೂಗಿನ ಬಗ್ಗೆ ಕೇಳಿದೆ. ಅವರು ತುಸು ಕಣ್ಣರಳಿಸಿ ‘ಈಗ ಸುಮ್ಮನೆ ಇರು, ಅದು ಜಕಣಿ ಹಕ್ಕಿ. ಹೆದರಿಕೆ ಆಯ್ತಾ? ಈಗ ಅದರ ಸುದ್ದಿ ಮಾತನಾಡಬೇಡ’ ಎಂದು, ಮಾತು ಮರೆಸಲುಊಟಕ್ಕೆ ಕುಳ್ಳಿರಿಸಿದರು. ಆ ಹಕ್ಕಿಯ ವಿವರವನ್ನೂ, ಅದು ಕೂಗುವ ರೀತಿಯನ್ನೂ ಸಲೀಂ ಆಲಿಯವರು ತಮ್ಮ ಇಂಡಿಯನ್ ಹಿಲ್ ಬರ್ಡ್ಸ್ ಪುಸ್ತಕದಲ್ಲಿ ವರ್ಣಿಸಿದ್ಧಾರೆ.
ರಾತ್ರಿ ಹೊತ್ತು ಕಾಡಿನ ನಡುವೆ ಮುದುಕಿಯೊಬ್ಬಳು ದೀರ್ಘವಾಗಿ ಪ್ರಲಾಪಿಸುವಂತೆ ಅದು ಕೂಗುತ್ತದೆ ಎಂಬ ವರ್ಣನೆ ಅವರದ್ದೇ. ಫಾರೆಸ್ಟ್ ಈಗಲ್ ಔಲ್ ಎಂಬ ಹೆಸರಿನ ಈ ಗೂಬೆ, ಕೊಂಬಿನ ಗೂಬೆಯ ರೀತಿಯೇ ಇದ್ದು, ಇನ್ನೂ ಬಲಿಷ್ಠ, ದಷ್ಟಪುಷ್ಟ, ಕೊಂಬಿನ ರೂಪದ ಗರಿ ಉದ್ದಕ್ಕಿದ್ದು, ತುಪ್ಪಳ ಬಿಳಿಮಿಶ್ರಿವಾಗಿರುತ್ತದೆ. ನಮ್ಮ ಕಾಡುಗಳಲ್ಲಿ, ಪಶ್ಚಿಮ ಘಟ್ಟಗಳಲ್ಲಿ ಅಲ್ಲಲ್ಲಿ ವಿರಳವಾಗಿ ಮತ್ತು ಹಿಮಾಲಯದ ಸೆರಗಿನ ಕಾಡುಗಳಲ್ಲಿ ಈ ಹಕ್ಕಿ ಇದೆ.
ನಮ್ಮೂರಿನ ಗೂಬೆಗಳಲ್ಲಿ, ಮನೆಗಳ ಸುತ್ತ ಮುತ್ತ ಸಂಜೆ ಕೂಗುತ್ತಾ ಹಾರಾಡುವ ಚಿಟ್ಟಗೂಬೆಗಳು, ಅಷ್ಟೊಂದು ಅಪರೂಪವಲ್ಲ, ಭಯ ಹುಟ್ಟಿಸುವುದೂ ಇಲ್ಲ. ಇವುಗಳ ಇನ್ನೊಂದು ಪ್ರಬೇಧವನ್ನೇ ಬಯಲು ಸೀಮೆಯಲ್ಲಿ ಹಾಲಕ್ಕಿ ಎನ್ನುವುದು. ಮೈನಾ ಹಕ್ಕಿಗಿಂತ ತುಸು ದೊಡ್ಡ ಗಾತ್ರದ ಈ ಹಕ್ಕಿಗಳು ಕೂಗುವ ಶೈಲಿಯನ್ನು, ಸಮಯ, ಏರಿಳಿತವನ್ನು ಗುರುತಿಸಿ,ಬುಡಬುಡಿಕೆ ಜನಪದ ಕಲಾವಿದರು ಹಾಲಕ್ಕಿ ಶಾಸ್ತ್ರ ಹೇಳುತ್ತಾರೆ!
ಈ ಹಾಲಕ್ಕಿ ಎಷ್ಟು ಧೈರ್ಯಶಾಲಿ ಎಂದರೆ, ಒಂದು ಸಂಜೆ ನನ್ನ ತಲೆಯ ಮೇಲೆ ಬಂದು ಕುಳಿತುಕೊಳ್ಳುವ ಪ್ರಯತ್ನ ಮಾಡಿತ್ತು! ನನ್ನ  ಪಾಡಿಗೆ ನಡೆದುಕೊಂಡು ಹೋಗುತ್ತಿದ್ದವನನ್ನು ಆ ಚಿಟ್ಟಗೂಬೆ ಏನೆಂದು ತಿಳಿಯಿತೋ ಗೊತ್ತಿಲ್ಲ, ಒಮ್ಮೆಗೇ ತಲೆಯ ಕೂದಲಿನ್ನು ತನ್ನ ಕಾಲಿನಿಂದ ಹಿಡಿಯುವಂತೆ ಮಾಡಿ, ಪರಚಿ, ತನ್ನ ಪಾಡಿಗೆ ತಾನು ಹಾರಿ ಹೋಯಿತು. ನಮ್ಮ ನಾಡಿನ ಬಯಲುಸೀಮೆಗಳಲ್ಲಿ ಬೇರೆ ಬೇರೆ ಪ್ರಭೇದದ ಗೂಬೆಗಳಿವೆ.
ಬೆಳದಿಂಗಳ ರಾತ್ರಿಯಲ್ಲಿ ಅಪರೂಪಕ್ಕೊಮ್ಮೊಮ್ಮೆ, ಚಿತ್ರ ವಿಚಿತ್ರ ಧ್ವನಿಯಲ್ಲಿ, ತುಸು ಭಯ ಹುಟ್ಟಿಸುವಂತೆ ಕೂಗುವ ಕೆಲವುಗೂಬೆಗಳ ಪ್ರಬೇಧದ ಹೆಸರನ್ನು ಗುರುತಿಸುವುದು ತುಸು ಕಷ್ಟವೇ ಸರಿ. ಕತ್ತಲ ಲೋಕದ ಗೂಬೆಗಳು ಇಲಿಗಳನ್ನು ಹಿಡಿಯುವು ದರಿಂದಾಗಿ, ರೈತ ಸ್ನೇಹಿ. ಗೂಬೆಗಳ ಲೋಕವನ್ನು ತಿಳಿಯುತ್ತಾ ಹೋದರೆ, ಪುಟ್ಟ ಪುಸ್ತಕ ಬರೆಯುವಷ್ಟು ಮಾಹಿತಿ ದೊರಕೀತು!
ಇವುಗಳ ಜತೆಯ ರಾತ್ರಿಯಲ್ಲಿ ಕೀಟಗಳನ್ನು ಹಿಡಿಯುವ ನೆತ್ತಿಂಗ (ನೈಟ್‌ಜಾರ್) ಹಕ್ಕಿಗಳ ಲೋಕ ಇನ್ನಷ್ಟು ನಿಗೂಢ, ಇನ್ನಷ್ಟು ಅಪರಿಚಿತ. ನಮ್ಮ ಕಾಡಿನ ಗೂಬೆಗಳು ಕುತೂಹಲಕಾರಿ ನಿಶಾಚರಿಗಳು, ಇಕಾಲಜಿ ಸರಪಣಿಯ ವಿಶಿಷ್ಟ ಜೀವಿಗಳು. (ಚಿತ್ರಕೃಪೆ : ಹಿದಾಯತ್ ಉ, ವಿಕಿಪೀಡಿಯಾ ಕಾಮನ್ಸ್, ಮೀನಿನ ಗೂಬೆ, ಬ್ರೌನ್ ಫಿಶ್ ಔಲ).
ಹಳ್ಳಿಯಲ್ಲಿದ್ದರೂ, ಹಕ್ಕಿಗಳ ಹೆಸರುಗಳನ್ನು ಹುಡುಕಲು, ಅವುಗಳ ಜೀವನ ಕ್ರಮ, ಕೂಗುವ ಶೈಲಿಯ ಪರಿಚಯ ಪಡೆಯಲು, ಪಕ್ಷಿಶಾಸದ ಅಜ್ಜ ಸಲೀಂ ಆಲಿಯವರ ಪುಸ್ತಕಗಳು ಸಹಾಯ ಮಾಡಿದವು. ಈಗಲೂ, ಪಕ್ಷಿಶಾಸ್ತ್ರದ ಓನಾಮ ಬಾರದೇ ಇರುವವರಿಗೂ, ಹಕ್ಕಿಗಳ ಪರಿಚಯವನ್ನು ಉತ್ತಮವಾಗಿ ಮಾಡಿಕೊಡುವ ಪುಸ್ತಕಗಳೆಂದರೆ, ಸಲೀಂ ಆಲಿಯವರ ರಚನೆಗಳು. ಅವರು ಕಳೆದ ಶತಮಾನದಲ್ಲಿ ಬರೆದಿಟ್ಟ ಪಕ್ಷಿಗಳ ವಿವರಗಳು ಸಾರ್ವಕಾಲಿಕ ಸ್ಪಷ್ಟತೆಯನ್ನು ಹೊಂದಿವೆ.