ಏಲಿಯನ್‌, ಎಲ್ಲಿ, ಏನ್‌ ?
ವಿದೇಶವಾಸಿ
ಕಿರಣ್ ಉಪಾಧ್ಯಾಯ, ಬಹ್ರೈನ್
ಏಲಿಯನ್ ಅಥವಾ ಅನ್ಯಗ್ರಹ ಜೀವಿಗಳು ಇದ್ದಾರಾ ಎಂಬ ಪ್ರಶ್ನೆ ಇಂದು ನಿನ್ನೆಯದಲ್ಲ. ಅನ್ಯಗ್ರಹ ಜೀವಿಗಳು ಭೂಮಿಗೆಬಂದ ಸುದ್ದಿಯಾದದ್ದು ಇದೇ ಮೊದಲೇನೂ ಅಲ್ಲ. ಕಳೆದ ಏಳು ದಶಕಗಳಿಂದಲೂ ಆಗಾಗ ಈ ವಿಷಯ ಪುಟಿದೇಳುತ್ತದೆ, ವಿಷಯದ ಕುರಿತು ಚರ್ಚೆಯೂ ಆಗುತ್ತದೆ. ಪ್ರತಿ ಸಲವೂ ಏಲಿಯನ್ ಎಂದಾಕ್ಷಣ ಮಕ್ಕಳಿಂದ ವಯೋವೃದ್ಧರವರೆಗೆ ಎಲ್ಲರ ಕಣ್ಣು ಅರಳುತ್ತದೆ, ಕಿವಿ ನಿಮಿರುತ್ತದೆ.
ಎಪ್ಪತ್ತು ವರ್ಷಗಳಿಂದಲೂ ಇದೊಂದು ವಿಷಯ ಅರ್ಥೈಸಿಕೊಳ್ಳಲಾಗದಷ್ಟು ನಿಗೂಢ, ಕೈಗೆಟುಕದ ಕೌತುಕ, ವಿಚಾರಿಸಿದಷ್ಟೂ ಹೆಚ್ಚುವ ವಿಸ್ಮಯ, ಅರಿಯಲಾಗದ ಸೋಜಿಗ. ಈ ವಿಷಯದ ಕುರಿತು ಈಗಾಗಲೇ ಲೆಕ್ಕವಿಲ್ಲದಷ್ಟು ಬಿಸಿ ಬಿಸಿ ಚರ್ಚೆಯಾಗಿದೆ, ಹಾಗೆಯೇ ತಣ್ಣಗಾಗಿ ಮುದುಡಿ ಮುದ್ದೆಯಾಗಿದೆ. ಈ ವಿಷಯ ಇತ್ತೀಚೆಗೆ ಮತ್ತೆ ಸಣ್ಣಗೆ ಸುದ್ದಿಯಾದದ್ದು ಇಸ್ರೇಲ್ ದೇಶದ ಬಾಹ್ಯಾಕಾಶ ಭದ್ರತಾ ಸಂಸ್ಥೆಯ ಮಾಜಿ ಮುಖ್ಯಸ್ಥರ ಹೇಳಿಕೆಯಿಂದ.
ಹೈಮ್ ಎಶೆದ್ ಇಸ್ರೇಲ್‌ನ ರಕ್ಷಣಾ ಸಚಿವಾಲಯದ ಅಡಿಯಲ್ಲಿ ಬಾಹ್ಯಾಕಾಶ ನಿರ್ದೇಶನಾಲಯದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದವರು. ಅಷ್ಟೇ ಅಲ್ಲ, ಒಬ್ಬ ನಿವೃತ್ತ ಜನರಲ್ ಮತ್ತು ಜನ ಮನ್ನಣೆಗಳಿಸಿದ ಪ್ರಾಧ್ಯಾಪಕರೂ ಹೌದು. ಅವರ ಮಾತನ್ನು ಸಾರಾಸಗಟಾಗಿ ತಿರಸ್ಕರಿಸುವಂತೆಯೂ ಇಲ್ಲ. ಹಾಗಂತ ಅವರ ಹೇಳಿಕೆ ಕೆಲವರಲ್ಲಿ ಆಘಾತ ಮೂಡಿಸಿದ್ದಂತೂನಿಜ. ಅವರ ಪ್ರಕಾರ, ಅನ್ಯಗ್ರಹದ ಜೀವಿಗಳು ಮಾನವರೊಂದಿಗೆ ಸಂಪರ್ಕದಲ್ಲಿದ್ದಾರೆ.
ಮಂಗಳ ಗ್ರಹದಲ್ಲಿ ಒಂದು ನೆಲೆಯಿದೆ, ಅಲ್ಲಿ ಅಮೆರಿಕದ ಗಗನಯಾತ್ರಿಗಳು ಮತ್ತು ಅನ್ಯಗ್ರಹ ಜೀವಿಗಳು ಒಟ್ಟಾಗಿ ಕೆಲಸ ಮಾಡುತ್ತಿzರೆ. ಅಮೆರಿಕದ ಸರಕಾರ ಮತ್ತು ಅನ್ಯಗ್ರಹ ಜೀವಿಗಳು ಸಹಕಾರದ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಅನ್ಯರ ಅಸ್ತಿತ್ವ ಅಧ್ಯಕ್ಷ ಡೋನಾಲ್ಡ್ ಟ್ರಂಪ್‌ಗೂ ಗೊತ್ತಿದ್ದು, ಅವರು ಮಾಹಿತಿಯನ್ನು ಬಹಿರಂಗಪಡಿಸುವುದರಲ್ಲಿದ್ದರು. ವಿಷಯ
ಬಹಿರಂಗ ಗೊಂಡರೆ ಜನರಲ್ಲಿ ಸಾಮೂಹಿಕ ಉನ್ಮಾದ ಉಂಟಾಗಿ ತೊಂದರೆಯಾಗುತ್ತದೆ, ಈ ವಿಷಯ ಸ್ವೀಕರಿಸಲು ಮನುಷ್ಯರು ಇನ್ನೂ ಸಿದ್ಧವಾಗಿಲ್ಲ ಎಂದು ಅನ್ಯಗ್ರಹ ಜೀವಿಗಳು ಹೇಳಿದ್ದರಿಂದ ಟ್ರಂಪ್ ಇದನ್ನು ಬಹಿರಂಗಪಡಿಸಲಿಲ್ಲ ಎಂದಿದ್ದರು. ನಂತರ ಈ ವಿಷಯದ ಕುರಿತು ಅಮೆರಿಕ ಅಥವಾ ಇಸ್ರೇಲ್ ಸರಕಾರದ ಯಾವುದೇ ವಕ್ತಾರರು ಪ್ರತಿಕ್ರಿಯೆ ನೀಡಲಿಲ್ಲ ಎನ್ನುವುದು ಬೇರೆಯ ವಿಚಾರ.
ಆಶ್ಚರ್ಯವೆಂದರೆ, ವಿಷಯ ತಿಳಿದಿದ್ದರೂ ಟ್ರಂಪ್ ಸುಮ್ಮನಿದ್ದದ್ದು. ತನ್ನ ವಾಚಾಳಿತನಕ್ಕೆ ಹೆಸರಾದ ಟ್ರಂಪ್ ಇಂತಹ ವಿಷಯವನ್ನು ಬಚ್ಚಿಟ್ಟಾರೆಯೇ? ಅದೂ ಚುನಾವಣೆಯ ಸಂದರ್ಭದಲ್ಲಿ! ಟ್ರಂಪ್ ದಡ್ಡರಿರಬಹುದು, ಆದರೆ, ತನ್ನ ಕಾಲದಲ್ಲಿ ಇಂತಹ ಒಂದು ಘಟನೆ ನಡೆದರೆ ತನ್ನ ಹೆಸರು ಭೂಮಿ ಇರುವುವರೆಗೆ ಶಾಶ್ವತವಾಗಿರುತ್ತದೆ ಎಂದು ತಿಳಿಯದಷ್ಟು ದಡ್ಡರಲ್ಲ. ಯುಎಇ ಮತ್ತು ಇಸ್ರೇಲ್ ನಡುವೆ ಸಂಬಂಧ ಪುನಃ ಕುದುರುವುದಕ್ಕೆ ತಾನೇ ಕಾರಣ ಎಂದು ಹೇಳಿಕೊಳ್ಳುವ ಟ್ರಂಪ್ ಅನ್ಯಗ್ರಹ ದೊಂದಿಗಿನ ಒಪ್ಪಂದವನ್ನು ಮುಚ್ಚಿಡಬಹುದೇ? ಛಾನ್ಸೇ ಇಲ್ಲ!
ಅನ್ಯಗ್ರಹದಿಂದ ತಟ್ಟೆಯಂತೆ ಹಾರುವ ವಸ್ತುವೊಂದು ಬಂದು ಮನುಷ್ಯನನ್ನು ಎತ್ತಿಕೊಂಡು ಹೋಗಿ ನಂತರ ತಿರುಗಿ ಬಿಟ್ಟಿತಂತೆ, ರಾತ್ರೆ ಏಲಿಯನ್ ಬಂದು ಮನುಷ್ಯನೊಂದಿಗೆ ಸಂಭಾಷಣೆ ನಡೆಸಿತಂತೆ, ಈ ರೀತಿಯ ಕಥೆ ಸುಮಾರಿದೆ. ಮನುಷ್ಯ ಮತ್ತು ಅನ್ಯಜೀವಿಗಳ ಮುಖಾಮುಖಿಯಾದದ್ದು ಬ್ರಾಝಿಲ್ನಲ್ಲಿ. 1950 ರ ದಶಕದಲ್ಲಿ ಎಂಬ ಮಾತಿದ್ದರೂ ಅದು ಎಲ್ಲಿಯೂ ಸರಿಯಾಗಿ ದಾಖಲಾಗಲಿಲ್ಲ.
1961ರಲ್ಲಿ ಆದ ಘಟನೆ ಮಾತ್ರ ಸರಿಯಾಗಿ ದಾಖಲಾಗಿದ್ದಷ್ಟೇ ಅಲ್ಲ, ಆ ಕಾಲದಲ್ಲಿ ಎಲ್ಲರನ್ನೂ ಗಾಬರಿಗೊಳಿಸಿತ್ತು. ಬೆಟ್ಟಿ ಮತ್ತು ಬಾರ್ನಿ ಎಂಬ ದಂಪತಿಗಳು ತಮ್ಮ ಕಾರಿನಲ್ಲಿ ನಿರ್ಜನ ಪ್ರದೇಶದಲ್ಲಿ ಚಲಿಸುತ್ತಿದ್ದಾಗ ಮೇಲಿನಿಂದ ಪ್ರಖರವಾದ ಬೆಳಕು ಬೀಳುವುದನ್ನು ಕಂಡರು. ಕಾರು ನಿಲ್ಲಿಸಿ ನೋಡಿದಾಗ ಆ ಬೆಳಕು ತಟ್ಟೆಯಾಕಾರದ ಹಾರುವ ವಸ್ತುವಿನಿಂದ ಬಂದಿದ್ದು,ಅದರಲ್ಲಿ ಜೀವಿಗಳಿರುವುದು ಕಂಡಿತು. ಇಬ್ಬರಿಗೂ ಆ ಸಂದರ್ಭದ ಸುಮಾರು ಎರಡು ಗಂಟೆಗಳ ಕಾಲ ನಿಂತುಹೋದಂತೆ ಭಾಸವಾಯಿತು. ನಂತರ ಕೆಲವು ದಿನಗಳವರೆಗೆ ಇಬ್ಬರೂ ವಿಚಿತ್ರವಾಗಿ ವರ್ತಿಸುತ್ತಿದ್ದರು.
ಘಟನೆ ನಡೆದ ಮರುದಿನ ಅವರ ಕಾರಿನಲ್ಲಿ ಯಾರಿಗೂ ಅರ್ಥವಾಗದ ರೀತಿಯಲ್ಲಿರುವ ಹನ್ನೆರಡು ವೃತ್ತಾಕಾರದ ಬಿಗಳು ಸಿಕ್ಕಿದವು. ಇಬ್ಬರನ್ನೂ ಒಂದೇ ಸಮಯದಲ್ಲಿ ಪ್ರತ್ಯೇಕವಾಗಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಇಬ್ಬರೂ ಒಂದೇ ರೀತಿಯ ಉತ್ತರ ಕೊಟ್ಟರು, ಇತ್ಯಾದಿ ವಿಷಯಗಳೆಲ್ಲ ದಾಖಲಾಗಿವೆ. ಇನ್ನೊಂದು, ರೋಚಕ ಅಪಹರಣದ ಘಟನೆ.
ಇದು ನಡೆದದ್ದು1975ರಲ್ಲಿ. ಅಮೆರಿಕದ ಅರಣ್ಯದಲ್ಲಿ ಮರಗಳ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ಟ್ರಾವಿಸ್ ವಾಲ್ಟನ್ ಹೆಸರಿನ ವ್ಯಕ್ತಿ. ಇತರ ಆರು ಜನ ಸಹೋದ್ಯೋಗಿಗಳೊಂದಿಗೆ ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದಾಗ ತಟ್ಟೆಯಾಕಾರದ ವಸ್ತು ವೊಂದನ್ನು ಕಾಣುತ್ತಾನೆ. ಭೂಮಿಯಿಂದ ಸುಮಾರು ಐವತ್ತು ಅಡಿ ಎತ್ತರದಲ್ಲಿ ನಿಶ್ಚಲವಾಗಿ ಒಂದೇ ಸ್ಥಳದಲ್ಲಿ ನಿಂತಿರುವತಟ್ಟೆಯನ್ನು ಪರೀಕ್ಷಿಸಲು ತನ್ನ ವಾಹನದಿಂದ ಇಳಿದು ಹೋದ ವಾಲ್ಟನ್ ಮೇಲೆ ನೀಲಿ ಬಣ್ಣದ ಬೆಳಕು ಮತ್ತು ತೀವ್ರವಾಗಿ ಬೀಸಿದ ಗಾಳಿಯಿಂದ ಆತ ಕೆಲವು ಗಜ ದೂರ ಹಾರಿ ಬಿದ್ದು ಮೂರ್ಛೆ ಹೋಗುತ್ತನೆ.
ಕೆಲವೇ ಕ್ಷಣಗಳಲ್ಲಿ ತಟ್ಟೆ ಹಾರಿಹೋಗುತ್ತದೆ. ಸ್ನೇಹಿತರು ಎಷ್ಟು  ಹುಡುಕಿದರೂ ಸಿಗದ ವಾಲ್ಟನ್ ಐದನೆಯ ದಿನಪತ್ತೆಯಾಗುತ್ತಾನೆ. ಆತನನ್ನು ಪ್ರಶ್ನಿಸಿದಾಗ ತನ್ನನ್ನು ಏಲಿಯನ್‌ಗಳು ತಟ್ಟೆಯಲ್ಲಿ ಕೊಂಡು ಹೋದzಗಿಯೂ, ತನ್ನ ಮೇಲೆ ಏನೋ ಪ್ರಯೋಗ ನಡೆಸಿzಗಿಯೂ ಹೇಳುತ್ತಾನೆ. ಐದು ದಿನವೆಂಬುದು ತನಗೆ ಒಂದೂವರೆ ಗಂಟೆಯಂತೆ ಅನಿಸಿತು ಎನ್ನುತ್ತಾನೆ. ಈ ಘಟನೆ ಇಂದಿಗೂ ವಿಸ್ಮಯವೇ ಆಗಿದೆ. ಇಂದಿಗೆ ಸುಮಾರು ಇಪ್ಪತೈದು ವರ್ಷಗಳ ಹಿಂದೆಯೇ ಪೀಟರ್ ಎಂಬ ವ್ಯಕ್ತಿಯೊಬ್ಬ ತಾನು ಎಂಟು ವರ್ಷದವನಿದ್ದಾಗ ಮೊದಲ ಬಾರಿ ಏಲಿಯನ್ ಜೊತೆ ಸಂಪರ್ಕ ಸಾಧಿಸಿದ್ದು.
ಸತತ ಮೂರು ದಶಕಗಳಿಂದ ಆಗಾಗ ಸಂಪರ್ಕ ಸಾಧಿಸುತ್ತೇನೆ, ಸಂವಹನ ನಡೆಸುತ್ತೇನೆಂದು ಹೇಳಿಕೊಂಡಿದ್ದ. ಆದರೆ ನಿರ್ದಿಷ್ಟವಾಗಿ ಯಾವ ವಿಷಯದ ಬಗ್ಗೆ ಸಂವಹನ ನಡೆಸುತ್ತಿದ್ದ ಎಂಬುದನ್ನು ಆತ ಎಲ್ಲಿಯೂ ಹೇಳಲಿಲ್ಲ. ನಂತರದ ದಿನಗಳಲ್ಲಿ ಅವನ ವಿಷಯ ಎಲ್ಲೂ ಚರ್ಚೆಯಲ್ಲಿರಲಿಲ್ಲ. ಅನ್ಯಗ್ರಹದ ಜೀವಿಗಳು ತಮ್ಮೊಂದಿಗೆ ಸಂಪರ್ಕ ಸಾಧಿಸಿದ್ದವು ಎಂದು ಹೇಳಿದವರಲ್ಲಿ ಇದುವರೆಗೆ ಯಾರೂ ಅವನ್ನು ಪ್ರಶ್ನಿಸಿದ ದಾಖಲೆಗಳಿಲ್ಲ.
ಎಲ್ಲರೂ ಹೇಳುವುದು ಟೆಲಿಪತಿಯ (ಮಾನವ ಇಂದ್ರಿಯಗಳನ್ನು ಬಳಸದೆಯೇ ಇನ್ನೊಬ್ಬರೊಂದಿಗೆ ಸಂವಹಿಸುವ ವಿಧಾನ) ಮಾಧ್ಯಮದಿಂದ ಸಂವಹಿಸಿದ್ದೇವೆ ಎಂದು. ಅದೇ ಹೌದು ಎಂದಾದರೆ ಸಂವಹಿಸಿದ ಅಥವಾ ಸಂವಹಿಸುವ ಎರಡು ಜೀವಿಗಳು ಅಕ್ಕಪಕ್ಕದಲ್ಲಿಯೋ, ಎದುರುಬದುರಾಗಿಯೋ ಇರಬೇಕೆಂದೇನೂ ಇಲ್ಲ. ದೂರವಿದ್ದೂ ಮಾಡಲು ಸಾಧ್ಯ. ಅದಕ್ಕಾಗಿಆ ಜೀವಿಗಳು ಭೂಮಿಗೆ ಬರಬೇಕಿತ್ತಾ? ಅವರ ಲೋಕದಿಂದಲೇ ಮಾಡಲು ಸಾಧ್ಯವಿತ್ತಲ್ಲ? ಹೋಗಲಿ, ಮೊದಲ ಬಾರಿ ಪರಿಚಯ ಮಾಡಿಕೊಳ್ಳಲು, ಸಂಬಂಧ ಬೆಳೆಸಲು ಬಂದರು ಅಂದುಕೊಳ್ಳೋಣ.
ಅನೇಕ ಘಟನೆಗಳಲ್ಲಿ, ನಂತರದ ದಿನಗಳಲ್ಲಿ ಅವು ಪುನಃ ಒಮ್ಮೆಯೂ ಅದೇ ವ್ಯಕ್ತಿಗಳೊಂದಿಗೆ ಸಂಪರ್ಕ ಸಾಧಿಸಿದ ದಾಖಲೆ ಗಳಿಲ್ಲ. ಪ್ರಯೋಗಕ್ಕೆಂದೇ ಅಪಹರಿಸಿದ್ದಾದರೆ ತಿರುಗಿ ಬಿಟ್ಟು ಹೋಗುವ ದರ್ದು ಏನಿತ್ತು? ಇನ್ನೊಂದು ಪ್ರಶ್ನೆಯೆಂದರೆ, ಏಲಿಯನ್‌ಗಳು ನಿರ್ಜನ ಪ್ರದೇಶಕ್ಕೆ ಬಂದರೇ ಹೊರತು ಒಮ್ಮೆಯೂ ಪಟ್ಟಣ ಪ್ರದೇಶಗಳಿಗೆ ಬಂದ ದಾಖಲೆಗಳಿಲ್ಲ. ಮಾನವ ಕುಲಕ್ಕಿಂತ ಎಷ್ಟೋ ವರ್ಷ ಮುಂದಿರುವ ಜೀವಿಗಳು ಎಂದು ಕರೆಸಿಕೊಳ್ಳುವವರಿಗೆ ಮಾನವರೆಂದರೆ ಭಯವಾ? ಸುಮಾರು ಎಪ್ಪತ್ತು ವರ್ಷದ ಹಿಂದೆ ಆರಂಭವಾಗಿ ಕಳೆದ ಎರಡು ವರ್ಷದ ಹಿಂದೆ ನಾಸಾದ ಸಂಶೋಧಕನೊಬ್ಬ (ವಿeನಿಯೂ ಅಲ್ಲ, ತಜ್ಞನೂ ಅಲ್ಲ) ಹಾರುವ ತಟ್ಟೆ ಮತ್ತು ಭೂಮ್ಯತೀತ ಜೀವಿಗಳ ವಿಷಯವನ್ನು ಕಡೆಗಣಿಸುವಂತಿಲ್ಲ ಎಂದು ನೀಡಿದಹೇಳಿಕೆಯವರೆಗೆ ಏಲಿಯನ್ ವಿಷಯ ಆಗಾಗ ಚರ್ಚೆಯಾಗುತ್ತಲೇ ಇದೆ.
ಇದುವರೆಗೆ ಸುಮಾರು ಇಪ್ಪತ್ತಕ್ಕೂ ಹೆಚ್ಚು ದೇಶದ, ಸಾವಿರಕ್ಕೂ ಹೆಚ್ಚು ಜನ ಅನ್ಯಗ್ರಹದ ಜೀವಿಗಳು ತಮ್ಮ ಸಂಪರ್ಕಕ್ಕೆ ಬಂದಿರುವುದಾಗಿ ಹೇಳಿಕೊಂಡಿದ್ದಾರೆ. ಆದರೆ ಅವರೆಲ್ಲರೂ ಪರಕೀಯರು ತಮ್ಮ ಮೇಲೆ ಪ್ರಯೋಗ ನಡೆಸಿದರು. ವಿಷಯ ಸಂಗ್ರಹಿಸಿದರು ಎಂದರೇ ವಿನಃ ಪರಕೀಯರ ಯಾವ ವಿಷಯವನ್ನೂ ಸಂಗ್ರಹಿಸುವಲ್ಲಿ ಸಫಲರಾಗಲಿಲ್ಲ. ಕೆಲವು ತಜ್ಞ ವೈದ್ಯರ ಪ್ರಕಾರ ಇದೊಂದು ಮಾನಸಿಕ ಅಸ್ವಸ್ಥತೆ. ಅನ್ಯರಿಂದ ಅಪಹರಣಕ್ಕೊಳಗಾದ ಅಥವಾ ಅವರೊಂದಿಗೆ ಸಂಪರ್ಕ ಸಾಧಿಸಿದಂತೆ ತನ್ನ ಅನುಭವ ಹೇಳಿಕೊಳ್ಳುವುದಕ್ಕೆ ಕಾರಣ ಹುಸಿ ನೆನಪಿನ ಗುರುತು ಅಥವಾ ಲಕ್ಷಣಗಳು. ಇದಕ್ಕೆ ಪಲ್ಸ್ ಮೆಮರಿ ಸಿಂಡ್ರೋಮ, ಸ್ಲೀಪ್ ಪ್ಯಾರಲೆಸಿಸ್, ಸೈಕೋಪೆಥಾಲಜಿ, ಡಿಸೆಪ್ಷನ್ನಂತಹ ಕಾಯಿಲೆಗಳು ಕಾರಣ ಎನ್ನುವುದು ಅವರ ವಾದ.
ಏಲಿಯನ್ ಜೊತೆ ಸಂಪರ್ಕ ಸಾಧಿಸಿದ್ದೇವೆಂದು ಹೇಳಿಕೊಂಡವರಲ್ಲಿ, ಅವು ಪರಿಸರ ಮಾಲಿನ್ಯದ ಬಗ್ಗೆ ಎಚ್ಚರಿಕೆ ನೀಡಿದವು. ಅಣ್ವಸಗಳ ದುಷ್ಪರಿಣಾಮಗಳನ್ನು ತಿಳಿಸಿದವು ಇತ್ಯಾದಿ ಹೇಳಿಕೊಂಡವರೇ ಹೆಚ್ಚು. ಇದನ್ನು ಹೇಳಲು ಅನ್ಯಗ್ರಹದಿಂದ ಜೀವಿಗಳು ಬರಬೇಕಾ? ಯಾರಿಗೆ ಗೊತ್ತು, ಮಾಲಿನ್ಯ, ಅಣ್ವಸಗಳು, ವಿಕಿರಣಗಳೇ ಅವುಗಳಿಗೆ ಜೀವನಾಧಾರವೂ ಆಗಿರಬಹುದಲ್ಲ? ಇವರಲ್ಲಿ ಒಬ್ಬರೂ ಅನ್ಯ ಜೀವಿಯನ್ನು ಅದರ ಕುರಿತು ಅಥವಾ ಅವುಗಳ ವ್ಯಾಪ್ತಿಗೆ ಸಂಬಂಧಿಸಿದಂತೆ ಒಂದೇ ಒಂದು ಪ್ರಶ್ನೆ ಕೇಳಿದ ದಾಖಲೆ ಇಲ್ಲ.
ನಿಮ್ಮ ಹೆಸರೇನು, ಯಾವ ಊರು? ಅದಕ್ಕೂ ಮೊದಲು, ಯಾವ ಗ್ರಹ? ಹೇಗಿದ್ದೀರಾ, ಊಟ ಆಯ್ತಾ ಎಂಬ ಸಾಮಾನ್ಯ ಜನರುಭೇಟಿಯಾದಾಗ ಕೇಳುವ ಪ್ರಶ್ನೆಯನ್ನೂ ಕೇಳಿಲ್ಲ. ನೀವೂ ಉಸಿರಾಡುತ್ತೀರಾ? ಹೌದಾದರೆ ಮೂಗಿನಿಂದಲೋ ಅಥವಾ ಇನ್ಯಾವುದೋ ಅಂಗದಿಂದಲೋ? ನಿಮಗೂ ನಿದ್ರೆ ಬರುತ್ತಾ? ನಿಮಗೆ ಬುದ್ಧಿ ತಲೆಯಲ್ಲಿಯೇ ಇದೆಯೋ ಅಥವಾ ಬೇರೆದರೂಇದೆಯೋ? ನಿಮ್ಮೂರಿನಲ್ಲಿ ಮಳೆ, ಬೆಳೆ ಹೇಗಿದೆ? ತಾಪಮಾನ ಎಷ್ಟಿದೆ? ದನ ಕರು ಇದೆಯಾ? ನಿಮ್ಮಲ್ಲೂ ಆಡಳಿತ ಯಂತ್ರ, ರಾಜಕೀಯ, ಪಕ್ಷಗಳಿವೆಯಾ? ಇದ್ದರೆ, ಎಷ್ಟು ವರ್ಷಕ್ಕೊಮ್ಮೆ ಚುನಾವಣೆ ನಡೆಯುತ್ತದೆ? ಭ್ರಷ್ಟಾಚಾರ, ಅತ್ಯಾಚಾರ, ಅನಾಚಾರ,ಕೊಲೆ, ದರೋಡೆ ಇತ್ಯಾದಿ? ಜಾತಿ, ಧರ್ಮ, ಮೀಸಲಾತಿ, ಹೋರಾಟ, ಪ್ರತಿಭಟನೆ? ಕಲೆ, ಸಂಸ್ಕೃತಿ ಎಲ್ಲಾ ಇವೆಯಾ? ನಮ್ಮಲ್ಲಿರುವಂತೆ ದೇವರು, ದಿಂಡರು, ಮಂತ್ರ ತಂತ್ರ ಇದೆಯಾ? ಹೊಟ್ಟೆಪಾಡಿಗೆ ಏನು ಮಾಡುತ್ತೀರಿ?
ನಿಮ್ಮ ಕ್ಷೇತ್ರದಲ್ಲಿ ಇಡ್ಲಿ, ದೋಸೆ, (ಇದುವರೆಗೆ ಏಲಿಯನ್ ಕಂಡೆನೆಂದು ಹೇಳಿಕೊಂಡವರಲ್ಲಿ ಪಾಶ್ಚಿಮಾತ್ಯ ದೇಶದವರೇ ಹೆಚ್ಚಾಗಿರುವುದರಿಂದ ಈ ಪಟ್ಟಿಗೆ ಪಿಜ್ಜಾ, ಬರ್ಗರ್ ಬೇಕಾದರೆ ಸೇರಿಸಿಕೊಳ್ಳಿ) ಪಕೋಡ, ಟೀ-ಕಾಫಿ ಸಿಗುತ್ತಾ? ಹೋಗಲಿ, ಸಿಗರೇಟು, ಗುಂಡು, ಗುಟ್ಕಾ….? ಇಸ್ರೇಲ್‌ನ ಎಶೆದ್ ಹೇಳಿದಂತೆ, ಭೂಮ್ಯತೀತರೊಂದಿಗೆ ಒಪ್ಪಂದ ಮಾಡಿಕೊಂಡದ್ದೇ ಹೌದಾದರೆ ಅದು ಯಾವ ಭಾಷೆಯಲ್ಲಿದೆ? ಅವರೂ ನಮ್ಮಂತೆ ಪೆನ್ನು ಪೇಪರ್ ಬಳಸಿ ಕರಾರುಪತ್ರ ಸಿದ್ಧಪಡಿಸುತ್ತಾರಾ? ಏನನ್ನೂ ಕೇಳದೆಯೇ ಬಿಟ್ಟಿzರೆಂದರೆ ಅವರು ಮನುಷ್ಯರಲ್ಲ.
ಅವರೇ ಒಂದು ಏಲಿಯನ್ ಇದ್ದಂತೆ, ಎಂದು ಅನಿಸುವುದಿಲ್ಲವಾ? ನಮ್ಮ ಭೇಟಿಗೆ ಮಾನವ ಕುಲ ಇನ್ನೂ ಸಿದ್ಧವಾಗಿಲ್ಲ ಎಂದು ಹೇಳಿದ್ದೇ ಹೌದಾದರೆ, ನಾವು ಇನ್ನೂ ಒಳ್ಳೆಯವರಾಗಬೇಕು ಎಂಬ ಅರ್ಥವಾ (ಅದು ಸಾಧ್ಯವಿಲ್ಲದ ಮಾತು ಬಿಡಿ) ಅಥವಾ ಇನ್ನೂ ಕೆಟ್ಟವರಾಗಬೇಕು ಎಂಬ ಅರ್ಥವಾ? ಹಾಗಂತ ಅನ್ಯ ಗ್ರಹಗಳೇ ಇಲ್ಲ, ಅಲ್ಲಿ ಜೀವಿಗಳೇ ಇಲ್ಲ ಎಂಬ ವಾದವಲ್ಲ.
ಈ ಬ್ರಹ್ಮಾಂಡವೆಂಬುದು ಒಂದು ಒಗ್ಗರಣೆಯ ಡಬ್ಬಿಯಾದರೆ ನಮ್ಮ ಭೂಮಿ ಆ ಡಬ್ಬಿಯಲ್ಲಿರುವ ಒಂದು ಸಾಸಿವೆಯ ಕಾಳಿನಷ್ಟು. ಭೂಮಿಯಂತಹ ಎಷ್ಟೋ ಸಾಸಿವೆ ಕಾಳುಗಳು ಅದೇ ಖಾನೆಯಲ್ಲಿರುತ್ತವೆ. ಅದರ ಹೊರತಾಗಿ ಪಕ್ಕದಲ್ಲಿಜೀರಿಗೆ, ಇಂಗು, ಮೆಣಸು ಇತ್ಯಾದಿಯ ಬೇರೆ ಬೇರೆ ಖಾನೆಗಳೂ ಇರುತ್ತವೆ. ಪ್ರತಿಯೊಂದಕ್ಕೂ ತನ್ನದೇ ಆದ ವಿಶೇಷ ಗುಣಧರ್ಮ ವಿದೆ, ವಿಭಿನ್ನ ಘಮಲಿದೆ.
ಹಾಗೆಯೇ ಅನ್ಯಗ್ರಹಗಳಲ್ಲಿಯೂ ಬೇರೆ ರೀತಿಯ ಜೀವಿಗಳಿರಬಹುದು. ಅದು ಮಾನವನಂತೆಯೇ ಇರಬೇಕೆಂದೇನೂ ಇಲ್ಲ. ಅವುಗಳ ಪ್ರಪಂಚವೇ ಬೇರೆಯಾಗಿರಬಹುದು. ಅಲ್ಲಿ ಉಸಿರಾಟದ ವ್ಯವಸ್ಥೆಯೇ ಇಲ್ಲದಿರಬಹುದು, ಜನನ ಮರಣದ ಕಾರಣಗಳು ಬೇರೆ ಇರಬಹುದು. ಬದುಕುವ ರೀತಿ, ನೀತಿ ಪ್ರತ್ಯೇಕವಾಗಿರಬಹುದು. ಅವು ಅನ್ನ ನೀರು ಇಲ್ಲದೆಯೂ ಬದುಕಬಹುದು. ನಾವು ಕಂಡ ಒಂದೇ ಭೂಮಿಯಲ್ಲಿ ಪ್ರಾಣಿ, ಪಕ್ಷಿ, ಜಲಚರಗಳು, ಕ್ರಿಮಿಗಳು, ಸಸ್ಯಗಳು ಇರುವಾಗ ಬೇರೆಡೆಯೂ ವಸ್ತುಗಳು,ಜೀವರಾಶಿಗಳು ಇರಬಹುದು ಎನ್ನುವುದನ್ನು ನಂಬಲೇಬೇಕು.
ಇಲ್ಲವಾದರೆ ನಮ್ಮ ಬುದ್ಧಿಯ ಪರಿಧಿಯೂ, ತನ್ನನ್ನು ಬಿಟ್ಟರೆ ಪಕ್ಕದಲ್ಲಿ ಏನೂ ಇಲ್ಲ ಎಂದು ತಿಳಿದ ಒಗ್ಗರಣೆ ಡಬ್ಬಿಯಲ್ಲಿರುವ ಸಾಸಿವೆಯ ಕಾಳಿನಂತೆಯೇ ಆಗುತ್ತದೆ! ಅನ್ಯಗ್ರಹ ಜೀವಿಗಳು ಇವೆಯೋ ಇಲ್ಲವೋ ಎನ್ನುವ ಚರ್ಚೆ ದೇವರಿದ್ದನೋ ಇಲ್ಲವೋ ಎಂಬ ಚರ್ಚೆಯಂತೆಯೇ. ಎರಡೂ ಸದಾ ನಮ್ಮ ಕಣ್ಣಿಗೆ ಕಾಣುವುದಿಲ್ಲ. ಇದೆ ಎನ್ನುವುದರ ಬಗ್ಗೆ ಕೆಲವರಿಗೆ ಅನುಮಾನ ವಿದ್ದರೂ, ಇಲ್ಲವೆಂದು ಖಡಾಖಡಿ ಹೇಳುವವರ ಸಂಖ್ಯೆ ಕಮ್ಮಿ.