ಶ್ರೀ ಬನ್ನಂಜೆಯವರಿಗೆ ನುಡಿನಮನ
ಸ್ಮರಣೆ
ಸುಜಯ ಆರ್‌.ಕೊಣ್ಣೂರ್‌
ಪದ್ಮಶ್ರೀ ಪುರಸ್ಕೃತ, ವಿದ್ಯಾ ವಾಚಸ್ಪತಿ, ಪ್ರವಚನಕಾರರಾದ ಶ್ರೀ ಬನ್ನಂಜೆ ಅವರು ವಿಧಿವಶರಾಗಿzರೆ. ಅವರು ಮಧ್ವ ಸಿದ್ಧಾಂತದ ಪ್ರತಿಪಾದಕರಾಗಿದ್ದರು.
ಕೇಂದ್ರ ಸರಕಾರದ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆಳ್ವಾಸ್ ನುಡಿಸಿರಿ ಪ್ರಶಸ್ತಿ, ಹೀಗೆ ಹತ್ತು ಹಲವಾರು ಪ್ರಶಸ್ತಿ ಪುರಸ್ಕೃತರಾದ ಬನ್ನಂಜೆಯವರು ಪತ್ರಕರ್ತ, ಸಾಹಿತ್ಯ ಸಂಶೋಧಕ, ಅನುವಾದಕ, ಉಪನ್ಯಾಸಕರಾಗಿ ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದಿzರೆ. ಉದಯವಾಣಿ ಪತ್ರಿಕೆಯ ಸಾಪ್ತಾಹಿಕ ವಿಭಾಗದ ಸಂಪಾದಕರಾಗಿ ಸುದೀರ್ಘ ಸೇವೆ ಸಲ್ಲಿಸಿದ್ದಾರೆ. ಅವರ ಪ್ರವಚನಗಳನ್ನು ಕೇಳುವಾಗ ನಮ್ಮನ್ನು ಆ ಲೋಕಕ್ಕೆ ಕೊಂಡೊಯ್ಯುತ್ತಾರೆ.
ನಾನು ಚಿಕ್ಕವಳಿರುವಾಗ ‘ವಿದುರ ನೀತಿ’ ಬಗ್ಗೆ ಎರಡು ತಾಸಿನ ಪ್ರವಚನ ಕೇಳಿದ್ದೆ. ವಿದುರ ದೃತರಾಷ್ಟ್ರನಿಗೆ ಏಳು ಮುಖ್ಯ ರಹಸ್ಯಗಳನ್ನು ಹೇಳುವಾಗ, ಅವರು ಸಂಸ್ಕೃತ ಶ್ಲೋಕಗಳನ್ನು ಬಳಸಿ ವಿವರಿಸುತ್ತಿದ್ದ ರೀತಿ ಇನ್ನೂ ಹಸಿ ಹಸಿ ನೆನಪಿದೆ. ಪುತ್ರನ ಮೇಲಿನ ಅತಿಯಾದ ವ್ಯಾಮೋಹಕ್ಕೆ ಒಳಗಾಗಿ, ಅವನ ಅಂತ್ಯಕ್ಕೆ ಮುನ್ನುಡಿ ಬರೆದಂತೆ, ದೃತರಾಷ್ಟ್ರನ ಮನಸ್ಸಿನ ಆಳಕ್ಕಿಳಿದು ವಿವರಿಸುತ್ತಿದ್ದರು.
ದ್ರೌಪದಿಯ ವಸಾಪಹರಣ ಆಗುವಾಗ ಭೀಷ್ಮ ಮತ್ತು ವಿದುರ ಅಲ್ಲಿ ಸುಮ್ಮನಿದ್ದದ್ದಕ್ಕೆ ಅವರ ಮೇಲೆ ಅಕ್ರೋಶದಿಂದ ಹೇಳಿದ ನುಡಿಗಳನ್ನು ಕೇಳಿ ನಮಗೆ ಭೀಷ್ಮ ಮತ್ತು ವಿದುರನ ಮೇಲಿದ್ದ ಅಪಾರ ಗೌರವ ಕೊಂಚ ಕಡಿಮೆಯಾಯಿತೆನ್ನಬಹುದು. ನಮ್ಮ ಊಹೆಗೂ ನಿಲುಕದ ವಿಚಾರಗಳನ್ನು ಲಹರಿಯಂತೆ ಅವರು ತಮ್ಮ ವಾಕ್ಝರಿಯಲ್ಲಿ ಹೇಳುತ್ತಿದ್ದರು. ವ್ಯಾಖ್ಯಾನವೇ ಹಾಗೆ. ಮನದ ಆಳಕ್ಕಿಳಿಯುತ್ತಿತ್ತು. ಭದ್ರಾವತಿ ಆಕಾಶವಾಣಿ ಕೇಂದ್ರದ ಬೆಳಗಿನ ‘ರಶ್ಮಿ’ ಕಾರ್ಯಕ್ರಮದಲ್ಲಿ ಪ್ರಸಾರವಾಗುತ್ತಿದ್ದ ಅವರ ಅದ್ಭುತ ವಿಚಾರಗಳನ್ನು ನಾವು ಚಿಕ್ಕವರಿರುವಾಗ ಕೇಳಿದ್ದೇವೆ.
ನಮ್ಮ ಧರ್ಮ ಮತ್ತು ಸಂಸ್ಕೃತಿಯ ಜತೆಗೆ ಸರಳ ಸಂಪನ್ನರಾಗಿ, ವೈಚಾರಿಕವಾಗಿ ಬದುಕಿದವರು ಶ್ರೀ ಬನ್ನಂಜೆ. ಶೃತಿ – ಸ್ಮೃತಿ – ಶಾಸ ಗ್ರಂಥಗಳನ್ನು ಸ್ವತಃ ಅಧ್ಯಯನ ಮಾಡಿ ಅಪೂರ್ವವಾದ ವ್ಯಾಖ್ಯಾನಿಸುವ ವಿಶೇಷ ಸಾಮರ್ಥ್ಯ ಅವರದಾಗಿತ್ತು. ಅವರನ್ನ ಗಲಿದ ನಮ್ಮ ಸಾಂಸ್ಕೃತಿಕಲೋಕ ತನ್ನ ಒಂದು ಮುಕುಟಮಣಿಯನ್ನು ಕಳೆದುಕೊಂಡಂತಾಗಿದೆ. ಅವರಿಗಿದೋ ನಮ್ಮ ನುಡಿ ನಮನ.