ಗ್ಲಾನಿಗೊಳಗಾದ ಭಾರತದಲ್ಲಿ ಸಂಭವಿಸಿದ ಕೃಷ್ಣರು
ರಾವ್-ಭಾಜಿ
ಪಿ.ಎಂ.ವಿಜಯೇಂದ್ರ ರಾವ್
ಇಸವಿ 2006ರಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿದ್ದ ಬಿ.ಎಸ್.ಸಿಯಾಲ್ ಗೃಹ ಕಾರ್ಯದರ್ಶಿಗೆ ಬರೆದ ಗೋಪ್ಯ ವರದಿ ನನಗೆ ಲಭ್ಯವಾಗಿತ್ತು. ಪೊಲೀಸ್ ಇಲಾಖೆಯಲ್ಲಿ ಮಿತಿಮೀರಿದ ರಾಜಕೀಯ ಹಸ್ತಕ್ಷೇಪ ಕುರಿತ ಪತ್ರವದು. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ಪೊಲೀಸ್ ಇಲಾಖೆ ತಲುಪಿರುವ ಅಧೋಗತಿಯ ಬಗ್ಗೆ ಎಚ್ಚರಿಸುತ್ತಲೇ, ಅದಕ್ಕೆ ಪರಿಹಾರ ಗಳನ್ನು ಸೂಚಿಸಲು ಬರೆದ ವರದಿ. ಇಲಾಖೆ ಹದಗೆಟ್ಟಿರುವುದರ ಕುರಿತ ಸುದೀರ್ಘ ವ್ಯಾಖ್ಯೆ.
ದೂರು ನೀಡಲು ಬಂದವರನ್ನೇ ಆರೋಪಿಯನ್ನಾಗಿಸುವಂಥ ಆತಂಕಕಾರಿ ಬೆಳವಣಿಗೆ ವ್ಯಾಪಕವಾಗುತ್ತಿರುವುದನ್ನು ಪೊಲೀಸ್ಮುಖ್ಯಸ್ಥರೇ ಒಪ್ಪಿಕೊಂಡ ವ್ಯಂಗ್ಯ – ಅಸಹಾಯಕತೆ ಅದರಲ್ಲಿ ರಾಚುತ್ತಿತ್ತು. ಆ ವರದಿ ಯಾರದ್ದೋ ಅಂಡಿನಡಿಯಲ್ಲಿ ಕಾವುಪಡೆಯುತ್ತಿರಬೇಕಷ್ಟೆ. ಅದಕ್ಕೆ ಪುಷ್ಟಿಯಾಗಿ ಐದಾರು ವರ್ಷಗಳ ಹಿಂದೆ ನಡೆದ ಇದೊಂದು ಪ್ರಸಂಗವನ್ನು ದಾಖಲಿಸುತ್ತಿದ್ದೇನೆ. ಮೈಸೂರಿನ ಪೊಲೀಸ್ ಇನ್ಸ್‌‌ಪೆಕ್ಟರ್ ಒಬ್ಬರ ಹುಟ್ಟಿದ ಹಬ್ಬ.
ಠಾಣಾ ವ್ಯಾಪ್ತಿಯಲ್ಲಿನ ಬಾರೊಂದರ ಮಾಲೀಕ ಠಾಣೆಗೇ ಆಗಮಿಸಿ ಆತನ ಬಾಯಿಗೆ ಕೇಕ್ ತುರುಕುತ್ತಿದ್ದಾನೆ. ಅವರಿಬ್ಬರ ಸಂತಸದ ಕ್ಷಣಗಳನ್ನು ಅತ್ಯಧಿಕ ಪ್ರಸಾರವಿರುವ ಸ್ಥಳೀಯ ಪತ್ರಿಕೆಯೊಂದು ಚಿತ್ರಿಸಿ ಪ್ರಕಟಿಸಿತ್ತು. ಅಂತಹ ರಸನಿಮಿಷಗಳನ್ನು ಸೆರೆ ಹಿಡಿದು ಪ್ರಚಾರ ನೀಡುವುದು ಮಾಧ್ಯಮ ತಂತಾನೇ ಹೆಗಲಿಗೇರಿಸಿಕೊಂಡ ನೂತನ ಜವಾಬ್ದಾರಿ.
ಸಿಯಾಲ್ ಅಂದು ಇಲಾಖಾ ಅವನತಿಯ ಕುರಿತು ಬಾರಿಸಿದ್ದು ಎಚ್ಚರಿಕಾ ಗಂಟೆ. ಗಂಟೆ ಬಾರಿಸಿದ್ದಷ್ಟೆ. ಇದೂ ಆ ಪತ್ರಿಕೆ ಬಾರಿಸಿದ ಎಚ್ಚರಿಕೆಯ ಗಂಟೆ. ಮಾಧ್ಯಮ ರಸಾತಳ ಮುಟ್ಟಿದೆ. ಬಾರ್ ಮಾಲೀಕ – ಪೊಲೀಸರ ಅನುಸಂಧಾನದ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ನಮ್ಮ ಸೇವಾ ಕೈಂಕರ್ಯದ ಮುಖ್ಯ ಭಾಗ ಎಂದು ಸೂಚಿಸುವ ಆ ಚಿತ್ರ ಅಂತಹ ಒಡಂಬಡಿಕೆಯ ಸಡಗರಕ್ಕೆ ಬೆಲೆ ತೆರಬೇಕಾದ ಠಾಣಾ ವ್ಯಾಪ್ತಿಯ ನಾಗರಿಕರನ್ನು ಎಚ್ಚರಿಸುವ ನಿಟ್ಟಿನಲ್ಲಿ ಬಾರಿಸಿದ ಗಂಟೆಯೇ ಹೌದು.
ರಾಜಕಾರಣದ ಅಪರಾಧೀಕರಣ ಆರಂಭವಾಗಿ ದಶಕಗಳೇ ಸಂದಿವೆ. ಅಪರಾಧೀಕರಣಕ್ಕೆ ರಾಜಕಾರಣಿಗಳೇ ಕಾರಣ ಎಂದರೆ ಶಿವ ಮೆಚ್ಚಲಾರ. (ಅದಕ್ಕೆ) ಸಮಾಜದ ಎಲ್ಲಾ ವರ್ಗಗಳ ಮುಖ್ಯಸ್ಥರೂ ಶಕ್ತಿಮೀರಿ ಕೊಡುಗೆ ನೀಡಿದ್ದಾರೆ. ಮಾಧ್ಯಮದ ಔದಾರ್ಯವೂ ಗಣನೀಯವೇ. ಪ್ರಬಲ ಜಾತಿಗಳ ಪ್ರಬಲರೂ ಏಕ ಕಾಲಕ್ಕೆ ದಾನಿಗಳೂ, ಫಲಾನುಭವಿಗಳೂ ಆಗಿದ್ದಾರೆ. ಇನ್ನು ಈ ಉನ್ನತ ಮಟ್ಟದ ಅನ್ಯೋನ್ಯತೆಯ ಪರಿಧಿಯಿಂದ ಹೊರಗುಳಿದ ಹಾಗೂ ಹೊರದೂಡಲ್ಪಟ್ಟ ಜನಸಾಮಾನ್ಯರ ಪಾಡು? ಅವರ ನಾಯಿಪಾಡನ್ನು ನೀಗಿಸಲೋ ಎಂಬಂತೆ ಸರ್ವೋಚ್ಚ ನ್ಯಾಯಾಲಯ ಐತಿಹಾಸಿಕ ಆದೇಶವೊಂದನ್ನು ಹೊರಡಿಸಿದೆ.
ಡಿಸೆಂಬರ್ 2 ರಂದು ಹೊರಬಿದ್ದ ಆದೇಶ ಸಂತ್ರಸ್ತ ಶ್ರೀಸಾಮಾನ್ಯನಿಗೆ ಬೆಚ್ಚಗಿನ ಅನುಭವ ನೀಡುವಂತಿದೆ. ಗೇಂ ಚೇಂಜರ್ (ವ್ಯವಸ್ಥೆ ಎಂಬ ಪಂದ್ಯದ ಅಸಮ್ಮತ ನಿಯಮಗಳನ್ನೇ ಬದಲಿಸಬಲ್ಲ) ಎನ್ನಬಹುದಾದ ಆ ನಿರ್ದೇಶನದ ಪ್ರಕಾರ ರಾಷ್ಟ್ರದ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಪೊಲೀಸ್ ಅತಿಕ್ರಮಗಳ ವಿಚಾರಣೆಗೆ ಮಾನವ ಹಕ್ಕು ಆಯೋಗಅಥವಾ ಯಾವುದೇ ನ್ಯಾಯಾಲಯ ಕೇಳಬಹುದಾದ ದಾಖಲೆಗಾಗಿ ಸಂಬಂಧಿತ ಸಿಸಿಟಿವಿ ಫುಟೇಜ್ ಒದಗಿಸಬೇಕು.
ಪೊಲೀಸರಿಗೆ ರಂಗೋಲಿ ಅಡಿ ನುಸುಳುವ ಛಾತಿ ಇರುವುದನ್ನು ಮನಗಂಡೇ ನಿರೂಪಿಸಿರುವ ಈ ಆದೇಶವನ್ನು ಜಾರಿಗೊಳಿಸಿದ ನಂತರ ಪೊಲೀಸರಿಗೆ ರಂಗೋಲಿಯೇ ಸಿಗದಿರುವ ಸಾಧ್ಯತೆ ಇದೆ. ಆರ್‌ಎಫ್ ನಾರೀಮನ್ ನೇತೃತ್ವದ ನ್ಯಾಯಪೀಠ ಪೊಲೀಸ್ ಠಾಣೆಗಳಲ್ಲಷ್ಟೇ ಅಲ್ಲದೆ ಠಾಣೆಗಳಂತೆ ವಿಚಾರಣೆ ನಡೆಸುವ , , ,  ಮುಂತಾದ ಸಂಸ್ಥೆಗಳಲ್ಲೂ ವಿಚಾರಣೆ ನಡೆಸುವ ಸ್ಥಳದಲ್ಲಿ ಸಿಸಿಟಿವಿ ಅಳವಡಿಸುವುದನ್ನು ಕಡ್ಡಾಯಗೊಳಿಸಿದೆ.
(ಡಿಕೆ ಶಿವಕುಮಾರ್‌ಗೆ ಈ ಆದೇಶ ಸಂತಸ ತರಬಹುದೇನೊ!) ದೃಶ್ಯ ಮತ್ತು ಶ್ರವಣ ದಾಖಲೆಗಳೆರಡೂ ಉತ್ತಮ ಗುಣಮಟ್ಟ ದ್ದಾಗಿರಬೇಕು ಹಾಗೂ ವಿಚಾರಣೆ ನಡೆದ 18 ತಿಂಗಳುಗಳು ಅವು ಲಭ್ಯವಿರಬೇಕು ಎಂದು ಆದೇಶಿಸಲಾಗಿದೆ. ಅಸ್ಪಷ್ಟ ದಾಖಲೆಗೆ ಕತ್ತಲಿನ ನೆಪವೊಡ್ಡದಿರುವಂತೆ ಇರುಳು – ದರ್ಶೀ ಕ್ಯಾಮೆರಾ ಅಳವಡಿಸಬೇಕೆಂದು ತಾಕೀತು ಮಾಡಲಾಗಿದೆ. ಠಾಣೆಯ ಪ್ರವೇಶ ದ್ವಾರ, ಹೊರದ್ವಾರ, ಗೇಟು, ಲಾಕ್ – ಅಪ್, ಟಾಯ್ಲೆಟ್ ಬಾಗಿಲು ಇದಾವುದನ್ನೂ ಬಿಡದೆ ಚಿತ್ರೀಕರಣ ನಡೆಸುವ ಸೌಲಭ್ಯ ಒದಗಿಸಲು ತಿಳಿಸಲಾಗಿದೆ.
ನಗರಪ್ರದೇಶಗಳಷ್ಟೇ ಅಲ್ಲದೆ, ಗ್ರಾಮೀಣ ಪ್ರದೇಶಗಳಲ್ಲೂ ಇಂತಹ ವ್ಯವಸ್ಥೆ ಚಾಚೂತಪ್ಪದೆ ಅನುಷ್ಠಾನಗೊಳಿಸಲು ನ್ಯಾಯಾ ಲಯ ಇನ್ನಿಲ್ಲದ ಕಾಳಜಿ ತೋರಿದೆ.  ಆಧುನಿಕ ಸವಲತ್ತುಗಳಿಲ್ಲದ ಬೆಂಗಾಡಿನ ಠಾಣೆಗಳಿಗೂ  ಅವಿರತ ವಿದ್ಯುತ್ ಮತ್ತು ಇಂಟರ್ನೆಟ್ ಪೂರೈಕೆ ಒದಗಿಸುವುದು ಆಯಾ ರಾಜ್ಯ ಸರಕಾರದ (ಅಥವಾ
ಕೇಂದ್ರಾಡಳಿತ ಪ್ರದೇಶದ) ಜವಾಬ್ದಾರಿ ಎಂದು ನಿರ್ದೇಶಿಸಲಾಗಿದೆ. ಈ ನಿಟ್ಟಿನಲ್ಲಿ ಸೌರಶಕ್ತಿ ಅಥವಾ ವಾಯುಶಕ್ತಿಯ ಬಳಕೆಯ ಶಿಫಾರಸು ಮಾಡಿರುವುದನ್ನು ಗಮನಿಸಿದಾಗ ಪ್ರಜೆಗಳ ಮೂಲಭೂತ ಹಕ್ಕುಗಳನ್ನು ಸಂರಕ್ಷಿಸುವಲ್ಲಿ ಸರ್ವೋಚ್ಚ ನ್ಯಾಯಾಲ ಯದ ಕಾಳಜಿಯ ಪ್ರಮಾಣ ಗೊತ್ತಾಗುತ್ತದೆ. ವಾಸ್ತವದ ಲೋಪ ದೋಷಗಳ ಸಂಪೂರ್ಣ ಅರಿವೂ ತ್ರಿಸದಸ್ಯ ನ್ಯಾಯಪೀಠಕ್ಕಿರು ವುದು ಅರಿವಾಗುತ್ತದೆ.
ವೆಲ್ಲಾ ಕ್ರಾಂತಿಕಾರಿ ಪರಿವರ್ತನೆಗಳನ್ನು ತರಲಿರುವ ಸಿಸಿಟಿವಿ ಪ್ರತಿಷ್ಠಾಪನೆಯ ಪರಿವೀಕ್ಷಣೆಗಾಗಿ ಉನ್ನತ ಮಟ್ಟದ ಉಸ್ತುವಾರಿ ಸಮಿತಿ ಗಳನ್ನು ರಾಜ್ಯ ಮತ್ತು ಜಿಲ್ಲಾಮಟ್ಟದಲ್ಲಿ ನೇಮಕ ಮಾಡಲೂ ಸೂಚಿಸಲಾಗಿದೆ. ಕೋವಿಡ್ ನಿಮಿತ್ತ ವಿಧಿಸಲಾಗಿದ್ದ ಲಾಕ್‌ಡೌನ್ ನಿಯಮವನ್ನು ಉಲ್ಲಂಘಿಸಿದಕ್ಕಾಗಿ ತಮಿಳುನಾಡಿನ ಸಾತಾಂಕುಲಂನಲ್ಲಿನ ಅಪ್ಪ, ಮಗರಿಬ್ಬರನ್ನೂ ರಕ್ತ ಚಿಮ್ಮು ವಂತೆ ಥಳಿಸಿದ ಸ್ಥಳೀಯ ಪೊಲೀಸ್ ದೌರ್ಜನ್ಯದ ತನಿಖೆ ನಡೆಸಿದ ಸಿಬಿಐ ಠಾಣೆಯ ಸಿಸಿಟಿವಿ ಫುಟೇಜ್ ಅದಾಗದೇ ಅಳಿಸಿ ಹೋಗಿರುವುದನ್ನು ತನ್ನ ಚಾರ್ಜ್ ಶೀಟ್‌ನಲ್ಲಿ ಪ್ರಸ್ತಾಪಿಸಿದ್ದುಂಟು. ಈ ಅನಾಚಾರ ಪ್ರಕರಣ ರಾಷ್ಟ್ರಾದ್ಯಂತ ಸುದ್ದಿಯಾಗಿತ್ತು.ಕಾನೂನು ರಚನಕಾರರು ಎಂದೋ ಗಮನಹರಿಸಬೇಕಿದ್ದ ನಾಗರಿಕರ ಮೂಲಭೂತ ಹಕ್ಕನ್ನು ಕಾನೂನನ್ನು ಜಾರಿಗೊಳಿಸು ವವರು (ಮತ್ತೊಮ್ಮೆ) ಎತ್ತಿ ಹಿಡಿದಿದ್ದಾರೆ.
ಗ್ಲಾನಿಗೊಳಗಾದ ಭಾರತದಲ್ಲಿ (ಆ ಗ್ಲಾನಿಗೆ ಆಗಾಗ್ಗೆ ನ್ಯಾಯಾಂಗವೂ ಕಾರಣವಾಗಿದ್ದರೂ) ಮತ್ತೆ ಮತ್ತೆ ಸಂಭವಿಸುವ ಕೃಷ್ಣ ರೂಪೀ ನ್ಯಾಯಾಧೀಶರು ಪ್ರಶಂಸನೀಯರು. ಡಿಜಿಟಲ್ ಕ್ರಾಂತಿ ಆರಂಭವಾಗಿ ಎಷ್ಟೋ ವರ್ಷ ಗಳಾಯಿತು. ಆ ಕ್ರಾಂತಿಯಲ್ಲಿ ಮೈಸೂರೂ ಗಿಯಾಗಿದೆ. ಸುಮಾರು ಹದಿನೇಳು ವರ್ಷಗಳ ಹಿಂದೆಯೇ ಆಧುನಿಕ ತಂತ್ರಜ್ಞಾನ ಬಳಸಿ ವಿಶ್ವದಲ್ಲೇ ಮೊದಲ ಬಾರಿಗೆ ಕ್ಯಾಲಿಫೋರ್ನಿಯಾ ವಾಸಿಯಿಂದ ವಿಡಿಯೋ ಕಾನ್ಫರೆನ್ಸ್ ನಡೆಸಿ ಸಾಕ್ಷಿ ಪಡೆದಿತ್ತು. ಆ ಸಂದರ್ಭದಲ್ಲಿ ನಾಗರಿಕ ಹಕ್ಕು ಸಂರಕ್ಷಣೆ ಯಲ್ಲಿ ತೊಡಗಿದ್ದ ಮಿತ್ರರೊಬ್ಬರಿಗೆ ಎಲ್ಲಾ ಠಾಣೆಗಳಲ್ಲಿ ಸಿಸಿಟಿವಿ ಅಳವಡಿಸುವುದರ ಸಾಧ್ಯಾಸಾಧ್ಯತೆ ಕುರಿತು ಹರಟಿದ್ದೆ. ತಡವಾಗಿಯಾದರೂ ಜನಸಾಮಾನ್ಯರಹಿತಾಸಕ್ತಿಯನ್ನು ಕಾಪಾಡುವಂಥ ಬೆಳವಣಿಗೆ ವೈಯಕ್ತಿಕ ವಾಗಿಯೂ ಸಮಾಧಾನ ತರಿಸುತ್ತಿದೆ.
ಪೊಲೀಸರಿಂದ ಮಾನವ ಹಕ್ಕು ಉಲ್ಲಂಘನೆ ಸ್ವತಂತ್ರ್ಯ- ಪೂರ್ವದಿಂದಲೂ ನಡೆದುಕೊಂಡು ಬಂದ ಅನಿಷ್ಠ ಪರಂಪರೆ. ತುರ್ತು ಪರಿಸ್ಥಿತಿಯಿಂದ ಸ್ವಾತಂತ್ರ್ಯ ಪಡೆದ ನಂತರ ಹಕ್ಕುಚ್ಯುತಿಯ ಪ್ರಕರಣಗಳು ಸ್ವಲ್ಪಮಟ್ಟಿಗೆ ಇಳಿದಿವೆ. ಆದರೆ ಭಯೋತ್ಪಾದನೆ ಹೆಚ್ಚಾಗಿದೆ. ಭಯೋತ್ಪಾದಕರನ್ನೂ, ರೇಪ್, ದರೋಡೆ, ಕೊಲೆ ಮುಂತಾದ ಹೀನಾಯ ಕೃತ್ಯಗಳಲ್ಲಿ ತೊಡಗಿರುವವರನ್ನೂದಂಡಿಸಿ, ಕಾನೂನು ಪ್ರಕ್ರಿಯೆಗೆ ಒಳಪಡಿಸಬೇಕಾದ ಪೊಲೀಸರ ಕೈಗಳನ್ನು ನೂತನ ಆದೇಶ ಕಟ್ಟಿಹಾಕುತ್ತದೆಯೇ? ಅದು ಪ್ರತ್ಯೇಕ ವಾಗಿ ಚರ್ಚಿಸಬೇಕಾದ ವಿಚಾರ. ಅಮೆರಿಕಾ ದೇಶದ ಇತ್ತೀಚಿನ (ಪೊಲೀಸ್ – ಪೌರ ಸಂಬಂಧಿ) ಅನುಭವಗಳನ್ನು ಅವಲೋಕಿಸು ವುದು ಉಚಿತವೇನೊ!
ಸಾರ್ವತ್ರಿಕ ಭ್ರಷ್ಟಾಚಾರ ಸಾಮಾನ್ಯ ನಾಗರಿಕರನ್ನು ಹುರಿದು ಮುಕ್ಕುತ್ತಿದೆ. ಅದರಿಂದ ಹೈರಾಣಾಗುವ ಸಾಮಾನ್ಯ ಸಂತ್ರಸ್ತರು ಎಡತಾಕುವುದು ಪೊಲೀಸ್ ಸ್ಟೇಷನ್ನಿಗಿಂತ ಹೆಚ್ಚು ಆಸ್ಪತ್ರೆಗಳಿಗೆ. ದುರದೃಷ್ಟವಶಾತ್ ವೈದ್ಯಕೀಯ ರಂಗವೂ ಕಡುಭ್ರಷ್ಟವಾಗಿದೆ. ಭ್ರಷ್ಟಚಾರದೊಳಗೂ, ಸಮಾಜ ಗುರುತಿಸದ ಹಿಂಸೆಯಿದೆ. ಆ ಹಿಂಸೆಯೂ ನಾಗರಿಕ ಹಕ್ಕಿನ ಪರೋಕ್ಷ ಚ್ಯುತಿಯೇ.
ಆಸ್ಪತ್ರೆಗಳಲ್ಲೂ ಆಯಕಟ್ಟಿನ ಜಾಗಗಳಲ್ಲಿ ಸಿಸಿಟಿವಿ ಅಳವಡಿಸುವಂಥ ಕಠೋರ ಕ್ರಮಕ್ಕೆ ಸರಕಾರ ಮುಂದಾಗಬೇಕು. ಹಾಗಾಗುವ ಸಾಧ್ಯತೆ ಕಾಣುತ್ತಿಲ್ಲ ವಾದ್ದರಿಂದ ಅದಕ್ಕೂ ಸರ್ವೋಚ್ಚ ನ್ಯಾಯಾಲಯದ ಮಧ್ಯಪ್ರವೇಶ ಅನಿವಾರ್ಯವಿದೆಅನ್ನಿಸುತ್ತೆ.