ಬಿಡೆನ್‌ ಬಿಡೆನೆಂದರೂ ಬಿಡದ ಸಂಕಷ್ಟಗಳು ಸಾಕಷ್ಟು !
ವಿಶ್ಲೇಷಣೆ
ಕುಮಾರ್‌ ಶೇಣಿ
ಕರೋನಾದ ಹೋರಾಟದ ನಡುವೆ, ಅಮೆರಿಕದಲ್ಲಿ ಪ್ರಜಾಪ್ರಭುತ್ವದ ಬಹುದೊಡ್ಡ ಹೋರಾಟವೊಂದು ಮುಕ್ತಾಯವಾಗಿದೆ. ಜಗತ್ತಿನ ದೊಡ್ಡಣ್ಣನಿಗೆ ನಾಯಕನಾಗಿ ಜೋ ಬಿಡೆನ್ ನಾಯಕನಾಗಿದ್ದಾರೆ.
ಡೊನಾಲ್ಡ್ ಟ್ರಂಪ್ ಮತ್ತು ಬಿಡೆನ್ ನಡುವಿನ ಹೋರಾಟದಲ್ಲಿ ಕೊನೆಗೂ ಜೋ ಬಿಡೆನ್ ಜಯಗಳಿಸಿದ್ದಾರೆ. ಬಿಡೆನ್  ಯ ಗಳಿಸಿದ್ದಾರೆ ಎನ್ನುವುದಕ್ಕಿಂತಲೂ ಟ್ರಂಪ್ ಸೋತದ್ದೇ ಹೆಚ್ಚು ಎನ್ನುವ ಅಭಿಪ್ರಾಯಗಳು ಇವೆಯಾದರೂ, ಅದನ್ನೆಲ್ಲ ಚುನಾವಣೋತ್ತರ ಅವಲೋಕನಗಳೂ ಎಂದಷ್ಟೇ ಪರಿಗಣಿಸಬಹುದು. ಯಾಕೆಂದರೆ ಅವು ಫಲಿತಾಂಶದ  ಮೇಲೆ ಅಷ್ಟೇನು ಪರಿಣಾಮ ಬೀರಿಲಲ. ಟ್ರಂಪ್ ಅವರ ಆರ್ಭಟಗಳೂ ಕೆಲವೇ ದಿನಗಳಲ್ಲಿ ತಣ್ಣಗಾಗಿಬಿಡಬಹುದು.
ಆದಕಾರಣ ಇದು ಬಿಡೆನ್‌ರಿಗೆ ಸಮಸ್ಯೆ ಎನಿಸುವುದಿಲ್ಲ. ಆದರೆ ಬಿಡೆನ್‌ರನ್ನು ಬಿಡದೇ ಕಾಡುವ ಸಮಸ್ಯೆಗಳು ಮತ್ತೊಂದಿಷ್ಟು ಇವೆ. ಅವುಗಳ ಸುತ್ತ ಒಂದು ನೋಟ. ಡೊನಾಲ್ಡ್ ಟ್ರಂಪ್ ಚುನಾವಣೆಯಲ್ಲಿ ಸೋತಿರುವುದು ದೊಡ್ಡ ವಿಚಾರವೇನಲ್ಲ. ಅದಕ್ಕೆ ಕಾರಣಗಳನ್ನು ಹುಡುಕುತ್ತಾ ಹೋದರೆ ಅವರ ವೈಫಲ್ಯಗಳೇ ಹೆಚ್ಚಾಗಿ ಕಂಡುಬರುತ್ತಿವೆ.
2016ರ ಟ್ರಂಪ್‌ರ ಚುನಾವಣಾ ಘೋಷಣೆಗಳು, ವಾಸ್ತವತೆಯನ್ನು ಮೀರಿ ಸಾಗಿದ್ದವು ಎಂಬುದು ಅರಿವಾದದ್ದು ಅಧ್ಯಕ್ಷೀಯ ಪದವಿಗೆ ಏರಿದ ನಂತರವೆ. ‘ಅಮೆರಿಕ ಫಸ್ಟ್’ ಮತ್ತು ‘ಮೇಕ್ ಅಮೆರಿಕ ಗ್ರೇಟ್ ಎಗೈನ್’ ಎಂಬ ಘೋಷಣೆಗಳು, ಚುನಾವಣಾ ಅಶ್ವಾಸನೆಗಳಿಗೆ ಸೀಮಿತವಾದಂತಿತ್ತು. ಚುನಾವಣೆಯ ನಂತರದ ದಿನಗಳು ಹಾಗೆಯೇ. ಟ್ರಂಪ್‌ರ ಆಳ್ವಿಕೆ ರಿಚರ್ಡ್ಸ್ ನಿಕ್ಸನ್‌ರ ಹುಚ್ಚನ ಸಮರತಂತ್ರ ಪರಿಕಲ್ಪನೆಯನ್ನು ನೆನಪಿಸುವಂತಿತ್ತು. ನಿಕ್ಸನ್‌ರ ಆಡಳಿತ ಅವಧಿ, ಶೀತಲ ಸಮರದ ಉತ್ತುಂಗದಲ್ಲಿದ್ದಕಾಲಘಟ್ಟವದು.
ಆದರೆ ನಿಕ್ಸನ್‌ರ ಸಮರತಂತ್ರಗಳು, ಎಲ್ಲಾ ರಾಜಕೀಯ ನಿಪುಣರ ಯೋಚನೆಗಳನ್ನು ಮೀರಿ ಸಾಗುತ್ತಿತ್ತು. ಅಮೆರಿಕದ ಆರ್ಥಿಕ ಸ್ಥಿತಿಗತಿಗಳ ಕಡೆಗೆ ನಿಕ್ಸನ್ ಗಮನವನ್ನೇ ನೀಡುತ್ತಿರಲಿಲ್ಲ. ಒಟ್ಟಿನಲ್ಲಿ ವಿರೋಧಿಗಳ ಊಹೆಗೂ ನಿಲುಕದ, ಸರಕಾರದ ನಿರೀಕ್ಷೆಗೂ ಮೀರಿದಂಥ ನಿರ್ಧಾರಗಳನ್ನು ನಿಕ್ಸನ್ ತೆಗೆದುಕೊಳ್ಳುತ್ತಿದ್ದರು. ಇದುವೇ ‘ಹುಚ್ಚನ ಸಮರತಂತ್ರ’ ಪರಿಕಲ್ಪನೆ. ಟ್ರಂಪ್ ಆಡಳಿತ ವನ್ನು ಗಮನಿಸಿದಾಗಲೆಲ್ಲಾ, ಇದು ನೆನಪಿಗೆ ಬರುತ್ತಿತ್ತು.
‘ಅಮೆರಿಕ ಫಸ್ಟ್’ ಎಂಬುದು ಟ್ರಂಪ್ ಘೋಷಣೆ ಆಗಿತ್ತಾದರೂ, ಅವರ ದೃಷ್ಟಿ ಹಾಯಿಸಿದ್ದು ಅಂತಾರಾಷ್ಟ್ರೀಯ ವಿದ್ಯಮಾನ ಗಳ ಕಡೆಗೆಯೇ. ಹಲವಾರು ಸಮಸ್ಯೆಗಳನ್ನು ಟ್ರಂಪ್ ಪ್ರಸ್ತಾಪಿಸಿದರಾದರೂ ಅದು ಇಂದಿಗೂ ಸಮಸ್ಯೆಯಾಗಿಯೇ ಉಳಿದಿದೆ. ಅದು ಮುಂದಿನ ದಿನಗಳಲ್ಲಿ ಬಿಡೆನ್‌ರಿಗೂ ಸಮಸ್ಯೆಯಾಗಿಯೇ ಉಳಿಯಬಹುದು. ಅವುಗಳಲ್ಲಿ ಮೊದಲನೆಯದು ವಲಸಿಗರ ಸಮಸ್ಯೆ.ವಲಸಿಗರು ಅಮೆರಿಕಾಕ್ಕೆ ವರವೂ ಹೌದು, ಶಾಪವು ಹೌದು.
ಒಂದೆಡೆ ಅಮೆರಿಕ ವಲಸಿಗ ಕೇಂದ್ರಿತ ದೇಶವಾಗಿದ್ದರೆ, ಇನ್ನೊಂದೆಡೆ ವಲಸೆ ಅಮೆರಿಕಕ್ಕೆ ಸಮಸ್ಯೆಯೂ ಆಗಿ ಪರಿಣಮಿಸಿದೆ. ಅದರಲ್ಲೂ ಮೆಕ್ಸಿಕೋ ವಲಸಿಗರ ಸಮಸ್ಯೆ. ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಆರಂಭವಾದ ಮೆಕ್ಸಿಕನ್ ಜನರ ವಲಸೆ ಇಂದಿಗೂ ಮುಂದುವರಿದಿದೆ. ದ್ವಿತೀಯ ಮಹಾಯುದ್ಧದ ಸಮಯದಲ್ಲಿ ಅಮೆರಿಕದ ಹೆಚ್ಚಿನವರೆಲ್ಲರೂ ಯುದ್ಧದಲ್ಲಿ ಪಾಲ್ಗೊಂಡರು. ಆ ಸಮಯದಲ್ಲಿ ಅಮೆರಿಕದ ಭೂಮಿಗಳಲ್ಲಿ ಕೆಲಸ ಮಾಡಲು ಕಾರ್ಮಿಕರು ಬೇಕಾಯಿತು.
ಆಗ ಮೆಕ್ಸಿಕನ್ ಕೆಲಸಗಾರರನ್ನು ಕೆಲಸಕ್ಕಾಗಿ ವಲಸೆ ಬರಲಾರಂಭಿಸಿದರು. ನಿರುದ್ಯೋಗಿಗಳಾಗಿದ್ದ ಮೆಕ್ಸಿಕನ್ನರಿಗೆ ಇದು ವರದಾನವಾಯಿತು. ಯುದ್ಧ ನಂತರದಲ್ಲಿ ಅಮೆರಿಕದ ಕೆಲಸಗಾರರು ಮತ್ತೆ ತಮ್ಮ ಹೊಲಗಳಿಗೆ ಮರಳಿದಾಗ, ಅವರ ಜಾಗ ವನ್ನು ಮೆಕ್ಸಿಕನ್ನರು ಕಸಿದುಕೊಂಡಿದ್ದರು. ಆಗ ಅಮೆರಿಕ ಸರಕಾರ ಬಲವಂತವಾಗಿ ಮೆಕ್ಸಿಕನ್ನರನ್ನು ಹೊರಹಾಕಲಾ ರಂಭಿಸಿತು. ಆಗ ಆರಂಭವಾಗಿದ್ದೇ ಮೆಕ್ಸಿಕನ್ನರ ಅಕ್ರಮ ವಲಸೆ. ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಿದ್ದ ಮೆಕ್ಸಿಕನ್ ಕೆಲಸ ಗಾರರನ್ನು ಕಳೆದುಕೊಳ್ಳಲು ಅಮೆರಿಕದ ಭೂಮಾಲೀಕರು ಸಿದ್ಧರಿರಲಿಲ್ಲ.
ಅವರು ಅಕ್ರಮವಾಗಿ ಮೆಕ್ಸಿಕನ್ ಕೆಲಸಗಾರರನ್ನು ಕರೆಸಿಕೊಳ್ಳಲಾರಂಭಿಸಿದರು. ಇದನ್ನು ತಡೆಯಲು ಅಮೆರಿಕದ ಸರಕಾರಕ್ಕೆ ಸಾಧ್ಯವಾಗಲಿಲ್ಲ. ಇದರಿಂದ ನಿರುದ್ಯೋಗ ಪ್ರಮಾಣ ಹೆಚ್ಚಿತು. ಇದು ಇಂದಿಗೂ ಅಮೆರಿಕದ ಸಮಸ್ಯೆಯಾಗಿಯೇ ಉಳಿದಿದೆ.ಜೋ ಬಿಡೆನ್‌ಗೂ ಕೂಡ ಇದು ಸಮಸ್ಯೆಯಾಗಿ ಕಾಡುವುದು ಖಚಿತ. ಮೆಕ್ಸಿಕೋ ಮತ್ತು ಅಮೆರಿಕ ನಡುವೆ ತಡೆಗೋಡೆನಿರ್ಮಿಸುವುದಾಗಿ ಟ್ರಂಪ್ ಘೋಷಿಸಿದ್ದು ಮೂರ್ಖತನದ ವಿಚಾರ ಎಂಬ ಅರಿವಾದದ್ದು ಟ್ರಂಪ್ ಅಧಿಕಾರಕ್ಕೆ ಬಂದನಂತರವೇ.
‘ಮೇಕ್ ಅಮೆರಿಕ ಗ್ರೇಟ್ ಎಗೈನ್’ ಎಂಬ ಟ್ರಂಪ್ ಅವರ 2016 ರ ಘೋಷಣೆ ಇಂದಿಗೂ ವಾಸ್ತವ ವಿಚಾರವೇ. 1990ರ ನಂತರ ಜಗತ್ತಿನ ದೊಡ್ಡಣ್ಣ ಎನಿಸಿಕೊಂಡ ಅಮೆರಿಕಾ, ಇಂದು ಆ ಸ್ಥಾನವನ್ನು ಉಳಿಸಿಕೊಳ್ಳಲು ಪರದಾಡುತ್ತಿರುವುದು ಕಟುಸತ್ಯ. ಆರ್ಥಿಕತೆಯ ವಿಚಾರದಲ್ಲಿ ಚೀನಾದ ಜೊತೆ ಒಂದು ದೊಡ್ಡ ಹೋರಾಟವನ್ನೇ ನಡೆಸಬೇಕಾದ ಅನಿವಾರ್ಯತೆಯಲ್ಲಿದೆ. ಆದರೆ ಎರಡೂ ದೇಶದ ಉತ್ಪಾದನೆಗಳಿಗೂ ಪ್ರಮುಖ ಮಾರುಕಟ್ಟೆ ಭಾರತವೇ.
ಆದ್ದರಿಂದ ಜೋ ಬಿಡೆನ್ ಕೂಡ ಭಾರತದ ಜತೆ ಒಂದು ಒಳ್ಳೆಯ ಸಂಬಂಧವನ್ನು ಮುಂದುವರಿಸುವುದು ಅನಿವಾರ್ಯ.ಅಮೆರಿಕದ ಅಭಿವೃದ್ಧಿಗೆ ಪ್ರಥಮ ಆದ್ಯತೆ ನೀಡುತ್ತೇವೆ ಎಂಬುದು ಎಲ್ಲಾ ಅಮೆರಿಕ ಅಧ್ಯಕ್ಷರ ಸಾಮಾನ್ಯ ಹೇಳಿಕೆ. ಆದರೆ ಅಮೆರಿಕ ಗುರುತಿಸಿಕೊಳ್ಳುವುದು ಅಂತಾರಾಷ್ಟ್ರೀಯ ವಿಚಾರಗಳಲ್ಲಿ ಮೂಗು ತೂರಿಸುವುದರ ಮೂಲಕ. ಟ್ರಂಪ್ ಮಾಡಿದ್ದು ಅದನ್ನೇ. ಬಿಡೆನ್ ಕೂಡ ಅದನ್ನೇ ಮಾಡಬೇಕಾದ ಅನಿವಾರ್ಯತೆ ಉಂಟಾಗುತ್ತದೆ.
ಅಂತಾರಾಷ್ಟ್ರೀಯ ವಿಚಾರಗಳಲ್ಲಿ ಅಮೆರಿಕ, ತನ್ನ ಇರುವಿಕೆಯನ್ನು ತೋರಿಸಿಕೊಳ್ಳದಿದ್ದರೆ ಅದು ತನ್ನ ದೊಡ್ಡಣ್ಣನ ಸ್ಥಾನವನ್ನು ತನ್ನಿಂತಾನೇ ಕಳೆದುಕೊಳ್ಳುತ್ತದೆ. ಆದ ಕಾರಣ ಅಮೆರಿಕದ ಹೊರ ಜಗತ್ತಿನ ವಿಚಾರಗಳಿಗೆ ಪ್ರತಿಕ್ರಿಯೆ ನೀಡುವುದು ಜೋ ಬಿಡೆನ್‌ಗೆ ಸವಾಲಿನ ಚಾರವೇ. ಇನ್ನೊಂದು ಪ್ರಮುಖ ವಿಚಾರ ಇಸ್ಲಾಮಿಕ್ ಭಯೋತ್ಪಾದನೆ. ಇಸ್ಲಾಮಿಕ್ ಭಯೋತ್ಪಾದನೆ ಜಗತ್ತಿನ ಹಲವು ರಾಷ್ಟ್ರಗಳನ್ನು ಕಂಗಾಲಾಗಿಸುತ್ತಿದೆ.
ಮುಖ್ಯವಾಗಿ ಇಂದು ಯುರೋಪಿಯನ್ ದೇಶಗಳನ್ನು ಅದು ಒಂದು ಮುಖ್ಯ ಸಮಸ್ಯೆಯಾಗಿ ಕಾಡುತ್ತಿದೆ. ಇದಕ್ಕಾಗಿ ಪಾಕ್ ಇಡೀಜಗತ್ತಿನ ಕೆಂಗಣ್ಣಿಗೆ ಗುರಿಯಾಗಿದೆ. ಆದರೆ ಜೋ ಬಿಡೆನ್ ಮೊದಲಿನಿಂದಲೂ ಪಾಕಿಸ್ತಾನದತ್ತ ಮೃದು ಧೋರಣೆಯನ್ನುತೋರುತ್ತಾ ಬಂದವರು. ಆದರೆ ಮುಂದೇನು ಮಾಡುತ್ತಾರೆ ಎಂಬುದು ಯೋಚಿಸಬೇಕಾದ ವಿಚಾರ. ತಾಲಿಬಾನ್ ದಾಳಿಯ ನಂತರ ಪಾಕಿಸ್ತಾನದತ್ತ ಅಮೇರಿಕಾದ ದೃಷ್ಟಿಕೋನ ಬದಲಾಗಿದೆ. ಶೀತಲ ಸಮರದ ಕಾಲಘಟ್ಟದಲ್ಲಿಯೇ, ಅದರ ವಿರುದ್ಧವಾಗಿ ಮಾತನಾಡಿದ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ರೊನಾಲ್ಡ್ ರೇಗನ್ ಚುನಾವಣೆಯಲ್ಲಿ ಗೆಲುವನ್ನು ಸಾಧಿಸುತ್ತಾರೆ. ಈ ಆಯ್ಕೆ ಜನರ ಅಭಿಪ್ರಯಗಳನ್ನು ಬೆಂಬಲಿಸಿತ್ತು. ಇಂದು ಅಮೆರಿಕಾದ ಪರಿಸ್ಥಿತಿ ಹೀಗೆಯೇ.
ಪಾಕಿಸ್ತಾನವನ್ನು ಬೆಂಬಲಿಸಿದರೆ ಅದು ಭಯೋತ್ಪಾದನೆಯನ್ನು ಬೆಂಬಲಿಸಿದಂತೆಯೇ. ಇದರ ಜೊತೆಗೆ ಇಂದು ಪಾಕಿಸ್ತಾನಕ್ಕೆ ಬೆಂಬಲವಾಗಿ ನಿಂತಿರುವುದು ಚೀನಾ ಮಾತ್ರ. ಇದಕ್ಕಾಗಿಯೇ ಪಾಕ್ ಕೂಡ ಚೀನಾದ ಇಸ್ಲಾಂ ವಿರೋಧಿ ನಿಲುವನ್ನು ಸಹಿಸಿ ಕೊಳ್ಳುತ್ತಿದೆ. ಮುಂದಿನ ದಿನಗಳಲ್ಲಿ ಅಮೆರಿಕ ಏನಾದರೂ ಪಾಕ್ ಬೆಂಬಲವಾಗಿ ನಿಂತರೆ, ಒಂದಿಷ್ಟು ರಾಜಕೀಯ ಏರುಪೇರುಗಳು ಉಂಟಾಗುವುದು ಖಚಿತ. ಹಾಗೇನಾದರೂ ಆದಲ್ಲಿ ಅಮೆರಿಕ ಯುರೋಪಿಯನ್ ದೇಶಗಳ ಮಿತೃತ್ವವನ್ನು ಕಳೆದುಕೊಳ್ಳುವುದು ಖಚಿತ. ಕೇವಲ ಪಾಕಿಸ್ತಾನ ಎಂಬ ರಾಷ್ಟ್ರಕ್ಕಾಗಿ ತನ್ನ ದೇಶಕ್ಕೆ ಇಷ್ಟೊಂದು ಹಾನಿಯನ್ನು ಮಾಡಿಕೊಳ್ಳಲು ಅಮೆರಿಕ ಸಿದ್ದ ವಿದೆಯೇ? ಸಿದ್ಧರಿದ್ದರೆ ಅದೊಂದು ಮೂರ್ಖತನದ ವಿಚಾರವೇ.
ಅಮೆರಿಕ ಕಾಲಕ್ಕೆ ತಕ್ಕಂತೆ ಬದಲಾದ ರಾಷ್ಟ್ರ. ಕಾರ್ಗಿಲ್ ಯುದ್ಧದಲ್ಲಿ ಪಾಕ್‌ಗೆ ಬೆಂಬಲವಾಗಿ ನಿಂತ ರಾಷ್ಟ್ರ, ನಂತರಪಾಕಿಸ್ತಾನಕ್ಕೆ ಎದುರಾಗಿ ನಿಂತಿತು. ಶೀತಲ ಸಮರದ ಸಮಯದಲ್ಲಿ ಅಫ್ಘನ್‌ನ ಮೂಲಭೂತವಾದಿಗಳಿಗೆ ಬೆಂಬಲವಾಗಿ ನಿಂತು ಶಸಾಸಗಳನ್ನು ಪೂರೈಕೆ ಮಾಡಿದ ಅಮೆರಿಕ ಮುಂದೆ ಅದೇ ಅಫಘಾನಿಸ್ತಾನವನ್ನು ಸಂಪೂರ್ಣವಾಗಿ ನೆಲಸಮ ಮಾಡಿತು. ಹೀಗೆ ಕಾಲಕ್ಕೆ ತಕ್ಕಂತೆ ತನ್ನ ನಿಲುವುಗಳನ್ನು ಬದಲಾವಣೆ ಮಾಡುತ್ತಾ ಸಾಗಿದೆ.
ಮುಂದೆಯೂ ಹೀಗೆಯೇ ಸಾಗಬಹುದು. ಆದ್ದರಿಂದ ಒಂದು ಕಾಲದಲ್ಲಿ ಪಾಕ್‌ಗೆ ಬೆಂಬಲವಾಗಿ ನಿಂತ ಬಿಡೆನ್, ಮಂದೆಯೂ ಅದೇ ನೀತಿಯನ್ನು ಮುಂದುವರಿಸುತ್ತಾರೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ತಾನೇ ಗ್ರೇಟ್, ತನ್ನನ್ನು ಎದುರು ಹಾಕಿ ಕೊಂಡವರನ್ನು ತಾನೂ ಯಾವುದೇ ರೀತಿಯಲ್ಲಿ ತುಳಿಯಲು ಸಿದ್ಧನಿದ್ದೇನೆ ಎಂಬ ಅಮೆರಿಕದ ನಿಲುವು ಇಂದು ನಿನ್ನೆಯದ್ದಲ್ಲ. ದ್ವಿತೀಯ ಮಹಾಯುದ್ಧದ ಅಂತ್ಯಕಾಲದಲ್ಲಿ ಜಪಾನ್‌ನ ಮೇಲೆ ಅಣುಬಾಂಬ್ ದಾಳಿ ನಡೆಸಿದಾಗಲೇ ಅದು ಅನಾವರಣಗೊಂಡಿದೆ.
ತನ್ನ ಶ್ರೇಷ್ಠತೆಯನ್ನು ಸಾರುತ್ತಲೇ ಬಂದ ಅಮೆರಿಕ, ಇಂದು ಅದನ್ನು ಉಳಿಸಿಕೊಳ್ಳಲು ಹೋರಾಟ ನಡೆಸಬೇಕಾದ ಅನಿವಾರ್ಯ ತೆ ಇದೆ. ಟ್ರಂಪ್ 2016ರಲ್ಲಿ ಹೇಳಿದ ‘ಅಮೆರಿಕ ಫಸ್ಟ್’ ಮತ್ತು ‘ಮೇಕ್ ಅಮೆರಿಕ ಗ್ರೇಟ್ ಎಗೈನ್’ ಎಂಬ ಮಾತುಗಳನ್ನು ಅನುಷ್ಠಾನ ಗೊಳಿಸುವುದು ಜೋ ಬಿಡೆನ್‌ಗೆ ಸವಾಲಿನ ಕೆಲಸ.