ಅಮೆರಿಕ ಸಂಸತ್ತಿನಲ್ಲಿ ನಶ್ಯಕ್ಕೆ ಪ್ರವೇಶವಿದೆ, ರಷ್ಯಕ್ಕಿಲ್ಲ !
ತಿಳಿರು ತೋರಣ
ಶ್ರೀವತ್ಸ ಜೋಶಿ
ಅಮೆರಿಕದ ಅಧ್ಯಕ್ಷೀಯ ಚುನಾವಣೆ ಪ್ರಕ್ರಿಯೆ ಎಷ್ಟು ವಿಚಿತ್ರವೂ ವಿರೋಧಾಭಾಸದ್ದೂ ಆಗಿದೆಯೆಂದು ಈ ಬಾರಿಯ ಚುನಾವಣೆಯಲ್ಲಿ ವಿಶ್ವಕ್ಕೆಲ್ಲ ಗೊತ್ತಾಗಿ ಹೋಗಿದೆ.
ಹಳೇಕಾಲದ ಏನೇನೋ ವಿಚಿತ್ರ ನಿಯಮಗಳ ಸಂಕೀರ್ಣತೆ, ಅದರ ಮೇಲಿಂದ ಜಗಮೊಂಡ ಪರಮಧೂರ್ತ ಟ್ರಂಪ್‌ನಂಥ ಅಭ್ಯರ್ಥಿಯಿಂದಾಗಿ ಮತ್ತಷ್ಟು ಗೋಜಲು. ತಥಾಕಥಿತ ‘ದೊಡ್ಡಣ್ಣ’ ಜಗತ್ತಿನೆದುರು ನಗೆಪಾಟಲಿಗೀಡಾದ ಪರಿಸ್ಥಿತಿ. ಈಹಿಂದೆ ಬರಾಕ್ ಒಬಾಮ ಅಧ್ಯಕ್ಷನಾಗಿ ಆಯ್ಕೆಯಾದ ಎರಡೂ ಸಂದರ್ಭಗಳಲ್ಲಿ ಇಷ್ಟೊಂದು ಮುಜುಗರದ ಸನ್ನಿವೇಶಗಳು ಬಂದದ್ದಿಲ್ಲ. ಚುನಾವಣೆ ಪ್ರಕ್ರಿಯೆಗೆ, ತಲಾ ನಾಲ್ಕು ವರ್ಷಗಳ ಎರಡು ಅವಧಿಗಳಲ್ಲಿ ಆಡಳಿತಕ್ಕೆ, ಒಟ್ಟಾರೆಯಾಗಿ ಅಧ್ಯಕ್ಷಗಿರಿಗೆ ಒಂದು ಅಂದಚಂದ ಗತ್ತುಗಾಂಭೀರ್ಯ ತಂದುಕೊಟ್ಟಿದ್ದರು ಒಬಾಮ.
ಆದರೆ ಅದಕ್ಕಿಂತ ಮುಂಚಿನ ಜಾರ್ಜ್ ಬುಷ್ ಮಹಾಶಯ ಅಷ್ಟಿಷ್ಟು ಉಡಾಳತನ ತೋರಿದವನೇ; ‘ಕುಮಾರ ಬುಷ್ಷನು ಕೂಗಿದನೆಂದರೆ ಕುರಿಮರಿ ತೋಳಕೆ ಅಂಜುವುದು, ಯುದ್ಧದ ಕಹಳೆಯು ಮೊಳಗುವುದು, ಬಾಯಲಿ ಸುಳ್ಳಿನ ಹೊಳೆ ಹರಿದಾಡುವುದು…’ ಎಂದು ನಮ್ಮ ಅಮೆರಿಕನ್ನಡಿಗ ಕವಿ ಡಾ. ಮೈ.ಶ್ರೀ.ನಟರಾಜರಿಂದ ಪ್ಯಾರಡಿ – ಪದ್ಯದಲ್ಲಿ ತಿವಿಯಲ್ಪಟ್ಟವನೇ.
ಆಮೇಲೆ ಟ್ರಂಪಣ್ಣನ ಕಾಲದಲ್ಲಂತೂ ದಿನದಿನವೂ ದೇಶದ ಮರ್ಯಾದೆ ಮೂರಾಬಟ್ಟೆ ಆಯ್ತು. ಕನ್ನಡ ಟ್ರಂಪಾಯಣ ಅಣಕುವಾಡುಗಳನ್ನು ಬರೆದುಬರೆದು ನಟರಾಜ್‌ಗಂತೂ ಸಾಕ್ಸಾಕಾಯ್ತು. ಈನಡುವೆ 2016ರಲ್ಲೂ ಮತ್ತು 2020ರಲ್ಲೂ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಪ್ರಕ್ರಿಯೆಯಲ್ಲಿ ರಷ್ಯ ಮೂಗು ತೂರಿಸಿದೆ ಮತ್ತು ಟ್ರಂಪ್‌ನ ಪರವಾಗಿ ಮತ ಚಲಾವಣೆ ಯಾಗುವಂತೆ ‘ಏನೇನೋ ಮಾಟಮಂತ್ರ’ ಮಾಡಿದೆ ಎಂದು ದೊಡ್ಡ ಗುಲ್ಲು, ಪರಸ್ಪರ ಆರೋಪ – ಪ್ರತ್ಯಾರೋಪ.
ಅದು ನಿಜವೇನೋ ಎಂಬಂತೆ ರಷ್ಯ ದೇಶವು ಅಮೆರಿಕದ ನಿದ್ದೆಗೆಡಿಸುವ ಕೆಲಸಗಳಲ್ಲೇ ತೊಡಗಿರುವಂತೆ ವರ್ತಿಸುವುದೂ ಹೌದು. ಈಗ್ಗೆ ಮೂರ್ನಾಲ್ಕು ದಿನಗಳ ಹಿಂದೆ ಅಮೆರಿಕ ಸರರ್ಕಾರದ ಆಯಕಟ್ಟಿನ ಇಲಾಖೆಗಳ ಕಂಪ್ಯೂಟರ್‌ಗಳ ಮೇಲೆ ಸೈಬರ್‌ದಾಳಿ ನಡೆದಿರುವುದರ ಹಿಂದೆ ರಷ್ಯದ ಕೈವಾಡವಿದೆಯೆಂದು ಬಲವಾದ ಗುಮಾನಿ. ಒಟ್ಟಿನಲ್ಲಿ ಅಮೆರಿಕದ ಸಂಸದೀಯ ವ್ಯವಹಾರ ಗಳಲ್ಲಿ ರಷ್ಯ ಮೂಗು ತೂರಿಸದಂತೆ ಬೃಹತ್ ಬೇಲಿ ಹಾಕಬೇಕಾಗಿರುವುದು ಬೈಡನ್‌ನ ಆದ್ಯತೆಯಾಗಲಿದೆ.
ಇರಲಿ, ರಷ್ಯದ ಉಪದ್ವ್ಯಾಪಗಳ ತಲೆಬಿಸಿಯನ್ನು ಬೈಡನ್ ಗೇ ಬಿಟ್ಟು ಈಗ ನಶ್ಯದ ವಿಚಾರಕ್ಕೆ ಬರೋಣ. ಇದು ಭಲೇ ಸ್ವಾರಸ್ಯ ಕರ. ‘ಅಮೆರಿಕ ಸಂಸತ್ತಿನಲ್ಲಿ ನಶ್ಯಕ್ಕೆ ಪ್ರವೇಶವಿದೆ’ ಎಂದು ತಲೆಬರಹದಲ್ಲಿ ಓದಿದಾಗಲೇ ಬಹುಶಃ ನಿಮಗೆ ‘ವಾಹ್ ಕ್ಯಾ ಸೀನ್ ಹೈ!’ ಎಂದು ಒಂದು ಸೀನು ಬಂದಿರಬಹುದು (ಅಲ್ಲ, ಎರಡು ಸೀನು. ಏಕೆಂದರೆ ಒಂಟಿ ಸೀನು ಅಪಶಕುನವಂತೆ). ನಶ್ಯಕ್ಕೇನು, ಎಲ್ಲ ಕಡೆಯೂ ಮುಕ್ತಪ್ರವೇಶ. ‘ದೇಗುಲದ ಗರ್ಭಗುಡಿಯೊಳಗೆ ಸಿಗರೇಟು ಪ್ರವೇಶಿಸದು, ಮದ್ಯದ ಬಾಟಲಿಗೂ ಅನುಮತಿ ಇಲ್ಲ, ನಶ್ಯ ಮಾತ್ರ ಒಳಹೋಗಬಹುದು’ ಎಂದವರು ಒಂದಾನೊಂದು ಕಾಲದಲ್ಲಿ ಮಹಾನ್ ನಶ್ಯಾಹಾರಿ ಆಗಿದ್ದ ಡುಂಡಿರಾಜರು.
‘ಸಸ್ಯ ತಿನ್ನುವವಸಸ್ಯಾಹಾರಿ, ಮಾಂಸ ತಿನ್ನುವವ ಮಾಂಸಾಹಾರಿ, ಮೂಗಿನ ತುಂಬಾ ತಂಬಾಕಿನ ಪುಡಿ ತುಂಬಿಸಿಕೊಳ್ಳುವವ ನಶ್ಯಾಹಾರಿ!’ ಎಂದು ತನಗೇ ಒಂದು ಉಪಾಧಿ ಕೊಟ್ಟುಕೊಂಡವರೂ ಅವರೇ, ಚುಟುಕ – ಕವಿ, ಚಿಟಿಕೆ – ಕವಿ. ವಿಷಯ ಎಲ್ಲೆಲ್ಲಿಗೋ ಹೋಗ್ತಾ ಇದೆಯಲ್ಲ ಎಂದು ನೀವು ಬೈಯುವ ಮುನ್ನ ಡುಂಡಿರಾಜರನ್ನೂ ಅವರ ಪಾಡಿಗೆ ಬಿಟ್ಟುಬಿಟ್ಟು ಅಮೆರಿಕದ ಸಂಸತ್ತನ್ನು ಪ್ರವೇಶಿಸೋಣ. ಮೊದಲು ಒಂದು ಸ್ಥೂಲ ಪರಿಚಯ ಮಾಡಿಕೊಂಡು, ಆಮೇಲೆ ನಶ್ಯದ ಡಬ್ಬಿಗೆ ಕೈ ಹಾಕೋಣ.
ಭಾರತದ ಶಾಸಕಾಂಗ ವ್ಯವಸ್ಥೆಯಲ್ಲಿ ಹೇಗೆ ಲೋಕಸಭೆ ಮತ್ತು ರಾಜ್ಯಸಭೆ ಎಂದು ಎರಡು ಸದನಗಳಿವೆಯೋ ಹಾಗೆಯೇಅಮೆರಿಕದಲ್ಲಿ ‘ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್’ ಮತ್ತು ‘ಸೆನೇಟ್’. ಲೋಕಸಭಾ ಕ್ಷೇತ್ರಗಳಂತೆಯೇ, ಜನಸಂಖ್ಯೆಗನುಗುಣವಾಗಿ ಮಾಡಿದ ಕ್ಷೇತ್ರಗಳಿಂದ ಪ್ರತಿನಿಧಿಗಳಾಗುವವರದು ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್ ಸಭೆ. ಹಾಗಲ್ಲದೆ, ಪ್ರತಿ ಸಂಸ್ಥಾನದಿಂದ ತಲಾ ಇಬ್ಬರಂತೆ ಅಮೆರಿಕದ 50 ಸಂಸ್ಥಾನಗಳಿಂದ ಒಟ್ಟು 100 ಪ್ರತಿನಿಧಿಗಳಿರುವುದು ಸೆನೇಟ್ ಸಭೆ.
ಪ್ರತಿ ಎರಡು ವರ್ಷಗಳಿಗೊಮ್ಮೆ ಸೆನೇಟ್‌ನ ಮೂರನೆ ಒಂದರಷ್ಟು ಸದಸ್ಯರು ನಿವೃತ್ತರಾಗುವುದು, ಅವರ ಜಾಗಕ್ಕೆ ಹೊಸಬರು ಬರುವುದು… ಇದೆಲ್ಲ ಥೇಟ್ ನಮ್ಮ ರಾಜ್ಯಸಭೆಯಂತೆಯೇ. ಅಂದಹಾಗೆ ನೂರನ್ನು ಮೂರರಿಂದ ಭಾಗಿಸಿದಾಗ ಮೂವತ್ತಮೂರುಪಾಯಿಂಟ್ ಮೂರುಮೂರುಮೂರು… ಬರುತ್ತದಲ್ಲ ಒಬ್ಬ ಸಂಸದನನ್ನು ಮೂರು ಭಾಗ ಮಾಡ್ತಾರಾ ಅಂತ ಕೇಳಿದಿರಾದರೆಉತ್ತರ ನನಗೆ ಗೊತ್ತಿಲ್ಲ. ಕಳೆದವಾರದ ಲೇಖನದಲ್ಲಿ ಆಡು – ಹುಲ್ಲು – ಹಗ್ಗದ ಗಣಿತವೇ ತಲೆ ತಿಂದಿದೆ, ಈಗಿನ್ನು ಅಮೆರಿಕದಸೆನೇಟನ್ನು ಮೂರು ಭಾಗ ಮಾಡುವ ಹೊಸ ಸಾಹಸ ಬೇಡಪ್ಪಾ.
ಹಾಗಾಗಿ ಈ ಲೇಖನದ ಮಟ್ಟಿಗೆ ಇಡೀ ಸೆನೇಟನ್ನೇ ತಲೆಯೊಳಗಿಟ್ಟುಕೊಳ್ಳೋಣ. ಸೆನೇಟ್‌ನ ಸದಸ್ಯನನ್ನು ಸೆನೇಟರ್ ಎನ್ನುತ್ತಾರೆ. ಆತನಿಗೆ ಭಾರೀ ಪವರ್ ಮತ್ತು ಇನ್‌ಫ್ಲುಯೆನ್ಸ್ ಇರುತ್ತವೆ. ಯಾವುದಾದರೂ ಕೆಲಸಕ್ಕೆ ಶಿಫಾರಸು ಅಥವಾ ಪ್ರಭಾವ ಬೇಕಾದಾಗ ಜನರು ತಾವಿರುವ ಸಂಸ್ಥಾನದ ಸೆನೇಟರ್ ನ ಕೃಪಾಕಟಾಕ್ಷ ಬಯಸುತ್ತಾರೆ. ಸೆನೇಟರ್‌ಗಳು ಚುನಾಯಿತರಾಗಿ ಸೆನೇಟನ್ನು ಪ್ರವೇಶಿಸುವಾಗ ಅಧಿಕಾರದ ಮತ್ತು ಗೋಪ್ಯತೆಯ ಪ್ರಮಾಣವಚನ ಸ್ವೀಕರಿಸುವುದು, ಕೆಲವು ಶಿಷ್ಟಾಚಾರಗಳನ್ನು ಪೂರೈಸುವುದುಇವೆಲ್ಲ ಮಾಮೂಲಿನಂತೆಯೇ ಇಲ್ಲೂ ಇದೆ.
ಇದರ ಜತೆಗೇ ಇನ್ನೊಂದಿಷ್ಟು ವಿಶೇಷ ನಿಯಮಗಳನ್ನೂ ಸೆನೇಟರ್‌ಗಳು ಪಾಲಿಸಬೇಕಾಗುತ್ತದೆ. ಇವುಗಳನ್ನು ನಿಯಮಗಳು ಎನ್ನುವುದಕ್ಕಿಂತಲೂ ಸಂಪ್ರದಾಯ, ರೂಢಿ, ಅಥವಾ ಹಿಂದಿನ ನಡೆವಳಿ ಎಂದರೆ ಹೆಚ್ಚು ಸೂಕ್ತ. ಇದರಲ್ಲಿ ಕೆಲವಂತೂ ‘ಹೀಗೂಉಂಟೇ!?’ ಮಾದರಿಯವು. ವಿಚಿತ್ರವಾದರೂ ನಿಜ ಎಂಬಂಥವು. ಈಗಲೂ ಚಾಲ್ತಿಯಲ್ಲಿವೆ. ಇವು ಶುರುವಾದದ್ದು ಹೇಗೆ ಎನ್ನುವು ದಂತೂ ಮತ್ತಷ್ಟು ಸ್ವಾರಸ್ಯಕರ.
ಮೊದಲನೆಯದಾಗಿ, ಸೆನೇಟ್ ಅಧಿವೇಶನದ ವೇಳೆ ಸೆನೇಟರ್‌ಗಳು ಬಾಯಾರಿಕೆಗೆ ಪೇಯವೆಂದು ನೀರು ಮತ್ತು ಹಾಲನ್ನಷ್ಟೇ ಕುಡಿಯಬಹುದು. ‘ನಾನು ಡಯಟ್ ಕೋಕ್ ಕುಡಿಯುತ್ತೇನೆ, ಪೆಪ್ಸಿ ಕುಡಿಯುತ್ತೇನೆ, ಆರೆಂಜ್ ಜ್ಯೂಸ್ ಕುಡಿಯುತ್ತೇನೆ…’ ಎಂದೆಲ್ಲ ಆಯ್ಕೆಗಳಿಗೆ ಅವಕಾಶವಿಲ್ಲ. ಬಿಯರ್ ಅಥವಾ ಹಾಟ್‌ಡ್ರಿಂಕ್ಸ್ ಅಂತೂ ಎಬ್ಸಲ್ಯುಟ್ಲೀ ನೋ. ಒಂದೋ ಹಾಲು, ಇಲ್ಲವೆ ನೀರು. ಇವೆರಡು ಮಾತ್ರ. ಪಾಪ ಅವರಿಗೆ ಕನ್ನಡದಲ್ಲಿ ಅಣ್ಣಾವ್ರು ಹಾಡಿದ ‘ಹಾಲಲ್ಲಾದರೂ ಹಾಕು ನೀರಲ್ಲಾದರೂ ಹಾಕು ರಾಘವೇಂದ್ರ’ ಭಕ್ತಿಗೀತೆಯೂ ಗೊತ್ತಿಲ್ಲ, ಗೊತ್ತಿದ್ದರೆ ಅದನ್ನೇ ಗುನುಗುನಿಸುತ್ತಿದ್ದರೋ ಏನೋ.
2020ರ ಆರಂಭದಲ್ಲಿ ಟ್ರಂಪನ ಇಂಪೀಚ್‌ಮೆಂಟ್ ವಿಚಾರ ಚರ್ಚಿಸಲು ಸೆನೇಟರ್‌ಗಳು ಸೇರಿದ್ದಾಗ ಈ ಹಾಲು – ನೀರು ಸಂಪ್ರ ದಾಯವು ರಾಷ್ಟ್ರೀಯ ಸುದ್ದಿಯಾಗಿತ್ತು. ‘ರಿಡ್ಡಿಕ್ಸ್ ಸೆನೇಟ್ ಪ್ರೊಸೀಜರ್ಸ್’ ಎಂಬ ನಿಯಮಾವಳಿ ಗ್ರಂಥದಲ್ಲಿ ‘ಸೆನೇಟರನು ಅಧಿವೇಶನದ ವೇಳೆ ಹಾಲು ಕುಡಿಯುವುದಕ್ಕೇನೂ ಅಭ್ಯಂತರವಿಲ್ಲ’ ಎಂದು ಬರೆದಿದೆಯಂತೆ. 1966ರಲ್ಲಿ ಇಲ್ಲಿನಾಯ್ ಸಂಸ್ಥಾನದ ಸೆನೇಟರ್ ಎವರೆಟ್ ಡರ್ಕ್ಸನ್ ಎಂಬಾತ ಅಧಿವೇಶನದಲ್ಲಿ ಒಂದುದಿನ ಸಭಾಧ್ಯಕ್ಷರನ್ನು ಕೇಳಿದ್ದನಂತೆ, ‘ನಾನು ಪೇಜ್ ಬಾಯ್ (ಅಧಿವೇಶನದ ವೇಳೆ ಚಾಕರಿಗಿರುವ ಹುಡುಗ) ಮೂಲಕ ರೆಸ್ಟೊರೆಂಟ್‌ನಿಂದ ಒಂದು ಲೋಟ ಹಾಲು ತರಿಸಿದರೆಕಾಯಿದೆ ಭಂಗ ಆಗುವುದಿಲ್ಲವಷ್ಟೆ? ಏಕೆಂದರೆ ನೀರು ಕುಡಿದು ಸಾಕಾಯ್ತು.
ಉದ್ದನೆಯ ಲೋಟದಲ್ಲಿ ಹಾಲು ತರಿಸುತ್ತೇನೆ, ಅದೇ ಇಂದು ನನಗೆ ಊಟ’ ಎಂದು. ಸಭಾಧ್ಯಕ್ಷರು ‘ಧಾರಾಳವಾಗಿ ತರಿಸಿಕೊಳ್ಳಿ. ಸೆನೇಟ್‌ನಲ್ಲಿ ಹಾಲು ಕುಡಿಯಬಾರದೆಂದು ನಿಯಮವೇನಿಲ್ಲ’ ಎಂದುತ್ತರಿಸಿದ್ದರು. ಇದು ಕಡತದಲ್ಲಿ ಸೇರ್ಪಡೆಯಾದ ಸಂಭಾಷಣೆ. ಸಂಸತ್ತಿನ ಕಲಾಪ ಕಡತದ ಪುಟಸಂಖ್ಯೆ 1023ರಲ್ಲಿ, 24 ಜನವರಿ 1966ರ ತೇದಿಯಡಿ ದಾಖಲಾಗಿದೆ! ಗೂಗಲ್ ಕೃಪೆಯಿಂದ ಸಾರ್ವಜನಿಕರ ಓದಿಗೂ ಲಭ್ಯವಿದೆ. 1957ರಲ್ಲಿ ಸೆನೇಟ್ ಅಧಿವೇಶನದಲ್ಲಿ ಒಮ್ಮೆ ಅಹರ್ನಿಶಿ ಚರ್ಚೆ ನಡೆದಿದ್ದಾಗ ಒಬ್ಬ ಸೆನೇಟರನು ಆರೆಂಜ್ ಜ್ಯೂಸ್ ತರಿಸಿ ಕುಡಿದಿದ್ದನಂತೆ, ಯಾರೂ ಆಕ್ಷೇಪಿಸಿರಲಿಲ್ಲ.
ಆದರೆ 1966ರ ಆ ಸಂಭಾಷಣೆಯಿಂದಾಗಿ ಹಾಲು ದಾಖಲಾಯಿತು. ಅದೇ ಸಂಪ್ರದಾಯವಾಯಿತು. ನಿಜವಾಗಿಯಾದರೆ ಸೆನೇಟ್ ವತಿಯಿಂದ ಸೆನೇಟರ್‌ಗಳಿಗೆ ಒದಗಿಸುವುದು ನೀರು ಮಾತ್ರ. ಹಾಲು ಬೇಕಿದ್ದರೆ ಅವರೇ ಸ್ವಂತ ಖರ್ಚಿನಿಂದ ತರಿಸಬೇಕು. ಬೇರೆ ಪೇಯಗಳಿಗೆ ಪ್ರವೇಶವಿಲ್ಲ. ಎರಡನೆಯ ನಿಯಮವೇನೆಂದರೆ ಒಬ್ಬ ಸೆನೇಟರನು ಒಂದು ನಿರ್ದಿಷ್ಟ ಗೊತ್ತುವಳಿಯ ಬಗ್ಗೆ ಅಥವಾ ಪ್ರಶ್ನೆಯ ಬಗ್ಗೆ ಒಂದು ಕಲಾಪ – ದಿನದಲ್ಲಿ ಹೆಚ್ಚೆಂದರೆ ಎರಡು ಸಲವಷ್ಟೇ ಮಾತಿನ ಸರದಿಯನ್ನು ಪಡೆದುಕೊಳ್ಳಬಹುದು.
ಒಂದೊಂದು ಸರದಿಯೂ ಎಷ್ಟುದ್ದದ್ದೂ ಇರಬಹುದು, ಆದರೆ ಒಟ್ಟು ಸರದಿಗಳು ಎರಡು ಮಾತ್ರ. ಕಲಾಪ – ದಿನ ಅಂದರೆ ಕ್ಯಾಲೆಂಡರ್ ಪ್ರಕಾರ ದಿನ ಅಲ್ಲ; ಅಧಿವೇಶನದಲ್ಲಿ ಒಂದು ನಿರ್ದಿಷ್ಟ ಗೊತ್ತುವಳಿಗೆ ಮೀಸಲಿಟ್ಟ ಸಮಯ. ಕೆಲವೊಮ್ಮೆ ಅದು ಅನೇಕ ದಿನಗಳಿಗೆ, 1980ರಲ್ಲಿ ಒಮ್ಮೆ ಆಗಿದ್ದಂತೆ ನಾಲ್ಕೈದು ತಿಂಗಳುಗಳಿಗೂ ವ್ಯಾಪಿಸಬಹುದು.
ಕ್ಯಾಲೆಂಡರ್ ಪ್ರಕಾರದ ದಿನದಂತ್ಯಕ್ಕೆ ಸೆನೇಟ್ ಅಧಿವೇಶನ ‘ರೀಸೆಸ್’ ಪಡೆಯುತ್ತದೆಯೇ ಹೊರತು ವಿಸರ್ಜನೆಗೊಳ್ಳುವುದಿಲ್ಲ. ಆದ್ದರಿಂದ ಒಂದು ಕಲಾಪ – ದಿನದಲ್ಲಿ ತನಗೆ ಎರಡು ಬಾರಿಯಷ್ಟೇ ಅವಕಾಶ ಸಿಗುವುದು ಎಂಬ ಪ್ರಜ್ಞೆ ಇರುವ ಸೆನೇಟರ್‌ಗಳು ಆ ಸರದಿಯನ್ನು ಗಂಟೆಗಟ್ಟಲೆ ಭಾಷಣಕ್ಕೆ ಬಳಸುವುದಿದೆ. ಅಂಥ ಮ್ಯಾರಥಾನ್ ಭಾಷಣಗಳನ್ನು ‘ಫಿಲಿಬಸ್ಟರಿಂಗ್’ ಎನ್ನುತ್ತಾರೆ.
ಬಹುತೇಕವಾಗಿ ಅವು ಯಾವುದೇ ಪ್ರಸ್ತಾವಕ್ಕೆ ಪೂರಕವಾಗಿ ಇರದೆ ವಿರೋಧವಾಗಿಯೇ ಇರುತ್ತವೆ. ಆಡಳಿತ ಪಕ್ಷವು ಇದರಪ್ರಯೋಜನ ಪಡೆಯುವುದೂ ಇದೆ. ಎರಡು ಸರದಿಗಳನ್ನು ಮುಗಿಸಿದ ವಿರೋಧಿಗಳು ಆಮೇಲೆ ಬಾಯ್ಮುಚ್ಚಿಕೊಂಡು ಇರಬೇಕಾ ಗುತ್ತದಷ್ಟೆ? ಆ ವಿರೋಧಿ ಸೆನೇಟರ್‌ಗಳೋ ರಂಗೋಲಿಯಡಿ ತೂರುವವರು. ಹೊಸ ವಿಧೇಯಕದ ಬಗ್ಗೆ ಚರ್ಚೆ ಆರಂಭವಾಗಲಿ ಎನ್ನುತ್ತಾರೆ, ಮತ್ತೊಮ್ಮೆ ಮಾತನಾಡಲು ಎರಡು ಸರದಿಗಳ ಹಪಹಪಿಯಲ್ಲಿ.
ಮೂರನೆಯ ನಿಯಮ, ಅಧಿವೇಶನ ನಡೆಯುವಾಗ ಯಾವುದೇ ಸೆನೇಟರನು ಬೇರೊಬ್ಬ ಸೆನೇಟರನ ಬಗ್ಗೆ ಕೀಳಾಗಿ ಮಾತನಾಡು ವುದಾಗಲೀ, ಶಾರೀರಿಕ ಅಥವಾ ಮಾನಸಿಕ ಭರ್ತ್ಸನೆಗೆ ತೊಡಗುವುದಾಗಲೀ ಮಾಡಕೂಡದು. ಇದು, 1902ರಲ್ಲಿ ಅಂಥದೊಂದು ಘಟನೆ ನಡೆದಿದ್ದರಿಂದಲೇ ಚಾಲ್ತಿಗೆ ಬಂದದ್ದು. ಆ ವರ್ಷದ ಅಧಿವೇಶನದಲ್ಲಿ ಸೌತ್ ಕೆರೊಲಿನಾ ಸಂಸ್ಥಾನದ ಒಬ್ಬ ಸೆನೇಟರ್ ಬೆಂಜಮಿನ್ ಟಿಲ್ಮನ್ ಎಂಬಾತ ಅದೇ ಸಂಸ್ಥಾನದ ಇನ್ನೊಬ್ಬ ಸೆನೇಟರ್ ಜಾನ್ ಮೆಕ್‌ಲೌರಿನ್ ಬಗ್ಗೆ ಅವನ ಅನುಪಸ್ಥಿತಿಯಲ್ಲಿ ದೋಷಾರೋಪಣೆಯ ಮಾತುಗಳನ್ನಾಡಿದನಂತೆ.
ಅದನ್ನು ಬೇರೆಯವರಿಂದ ತಿಳಿದುಕೊಂಡ ಜಾನ್ ಮೆಕ್‌ಲೌರಿನ್, ಸೆನೇಟ್‌ಗೆ ನುಗ್ಗಿ ಟಿಲ್ಮನ್ ನ ಹೇಳಿಕೆಗಳನ್ನು ಅಲ್ಲಗಳೆದನು. ಆಮೇಲೆ ಅವರಿಬ್ಬರೂ ಕೈಕೈ ಮಿಲಾಯಿಸಿದರು. ಟಿಲ್ಮನ್‌ನಂತೂ ಚಿರತೆಯಂತೆ ಬಂದೆರಗಿದ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದರಂತೆ. ಅದೇ ವರ್ಷ ಜೂನ್‌ನಲ್ಲಿ ಟೆಕ್ಸಸ್ ಸಂಸ್ಥಾನದ ಸೆನೇಟರನಿಗೂ ಇಂಡಿಯಾನಾ ಸಂಸ್ಥಾನದ ಸೆನೇಟರನಿಗೂ ಸದನದೊಳಗೇ ಜಂಗಿಕುಸ್ತಿ ನಡೆದದ್ದು ದಾಖಲಾಗಿದೆ. ಇಂಥ ಘಟನೆಗಳು ಮರುಕಳಿಸಬಾರದೆಂದು ನಿಯಮ ತರಲಾಯ್ತು.
ನಮ್ಮ ಕರ್ನಾಟಕದ ವಿಧಾನಪರಿಷತ್ತಿನಲ್ಲಿ ಅಂಥ ನಿಯಮಗಳೇನೂ ಇನ್ನೂಇಲ್ಲವಲ್ಲ, ಆದ್ದರಿಂದಲೇ ಸಭಾಪತಿಯ ಕುರ್ಚಿಯಲ್ಲಿ ಕುಳಿತ ಉಪಸಭಾಪತಿಯನ್ನು ಹಿಡಿದು ಎಳೆಯಬಹುದು, ಬಾಗಿಲನ್ನು ಕಾಲಿನಿಂದ ದಬ್ಬಬಹುದು, ಅಂಗಿ ಬಿಚ್ಚಿ ಟೇಬಲ್ ಮೇಲೆ ನಿಂತು ರಂಪ ಮಾಡಬಹುದು. ಕಿಷ್ಕಿಂಧೆಯಲ್ಲಿ ಇದಕ್ಕಿಂತ ಗಾಂಭೀರ್ಯ ಹೆಚ್ಚು ಇತ್ತೇನೋ. ನಾಲ್ಕನೆಯ ನಿಯಮ, ಸೆನೇಟ್‌ನ ಒಳಗೆ ಹೂವುಗಳನ್ನು ತರುವಂತಿಲ್ಲ.
ಹಿಂದೆಲ್ಲ, ಅಂದರೆ20ನೆಯ ಶತಮಾನದ ಆರಂಭದಲ್ಲಿ ಸೆನೇಟರ್‌ಗಳು ಮತ್ತು ಅವರ ‘ಭಕ್ತರು’ ದೊಡ್ಡದೊಡ್ಡ ಹೂಗುಚ್ಛ ಗಳನ್ನು, ಹೂದಾನಿಗಳನ್ನು ತಂದು ಮೇಜಿನ ಮೇಲೆ ಆಲಂಕಾರಿಕವಾಗಿ ಇಡುತ್ತಿದ್ದರಂತೆ. ಕುರ್ಚಿಯಲ್ಲಿ ಕುಳಿತ ಸೆನೇಟರನನ್ನು ಮರೆಮಾಚುವಷ್ಟುಹೂವುಗಳದೇ ಅಬ್ಬರ. ಕೆಲವರ ಮೇಜಿನ ಮೇಲಂತೂ ಆರ್ಕಿಡ್ಸ್, ಗುಲಾಬಿ, ಕಾರ್ನೇಶನ್ಸ್ ಮತ್ತಿತರ ಬಣ್ಣ ಬಣ್ಣಗಳ ಹೂವುಗಳು. ಮಹಿಳಾ ಸೆನೇಟರಳೊಬ್ಬಳಂತೂ ಗುಲಾಬಿ ತೋಟವನ್ನೇ ಬೆಳೆಸಿದ್ದಳೇನೋ ಎನ್ನುವಷ್ಟು.
‘ಇಂದು ಸೆನೇಟ್ ಕಲಾಪವು ನೀರಸವಾಗಿತ್ತು, ಆದರೆ ಹೂವುಗಳಿಂದಾಗಿ ಆಕರ್ಷಕವೂ ಆಗಿತ್ತು’ ಎಂದು ವರದಿಗಾರರು ಪತ್ರಿಕೆಗಳಲ್ಲಿ ಬರೆಯುತ್ತಿದ್ದರಂತೆ. 1905ರಲ್ಲಿ ನಿಯಮ ಜಾರಿಗೆ ಬಂತು, ಹೂವುಗಳನ್ನು ಸೆನೇಟ್‌ನ ಚೇಂಬರ್‌ನೊಳಕ್ಕೆ ತರಲು ಬಿಡದಂತೆ ದ್ವಾರಪಾಲಕರಿಗೆ ಆದೇಶ ಕೊಡಲಾಯ್ತು. ಹೂವುಗಳ ಕಸ ತೆಗೆಯಲಿಕ್ಕೇ ಒಂದು ಗಂಟೆ ಸಮಯ ವ್ಯರ್ಥ ಎನ್ನುವುದುಒಂದು ಕಾರಣವಾದರೆ, ಯಾರ ಪುಷ್ಪಪ್ರದರ್ಶನ ಹೆಚ್ಚಿನದು ಎಂದು ಸೆನೇಟರ್‌ಗಳ ನಡುವೆ ಅನಾರೋಗ್ಯಕರ ಪೈಪೋಟಿನಡೆದು ಅದೇ ಹೊಲಸಾಗುತ್ತಿತ್ತು.
1905ರಲ್ಲಿ ಮಿಷಗನ್ ಸಂಸ್ಥಾನದ ಸೆನೇಟರನೊಬ್ಬನ ಮೇಜಿನ ಮೇಲೆ ಅವನ ಬೆಂಬಲಿಗರು ಮಿಷಿಗನ್‌ನ ನಕ್ಷೆಯಾಕಾರದ ಹೂಗುಚ್ಛ – ನಡುವೆ ನದಿ ಸರೋವರಗಳ ಪ್ರತೀಕವಾಗಿ ಗಾಜಿನ ಅಲಂಕಾರ – ತಯಾರಿಸಿ ಇಟ್ಟಿದ್ದರು. ಅದು ನೋಡಲಿಕ್ಕೇನೋಅತಿಸುಂದರವಾಗಿತ್ತಾದರೂ ಅದೇ ಕೊನೆ, ಆಮೇಲೆ ಸೆನೇಟ್ ನೊಳಕ್ಕೆ ಹೂವುಗಳಿಗೆ ಪ್ರವೇಶವಿಲ್ಲ ಅಂತಾಯ್ತು.
ಐದನೆಯ ನಿಯಮವೇ ನಶ್ಯಕ್ಕೆ ಮನ್ನಣೆ ಕೊಟ್ಟಿರುವುದು. ಸೆನೇಟ್‌ನಲ್ಲಿ ಧೂಮಪಾನ ಮಾಡುವಂತಿಲ್ಲ ಎಂಬ ನಿಯಮ1914ರಲ್ಲೇ ಜ್ಯಾರಿಯಾಗಿತ್ತು. ಅಮೆರಿಕದಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡಬಾರದು ಎಂಬ ನಿಯಮಗಳುಬರುವುದಕ್ಕಿಂತ ದಶಕಗಳಷ್ಟು ಹಿಂದೆಯೇ ಸೆನೇಟ್‌ನ ಈ ನಿಯಮ ಬಂದಿತ್ತು. ಇದಕ್ಕೂ ಆ ಸೌತ್ ಕೆರೊಲಿನಾ ಸೆನೇಟರ್ ಬೆಂಜಮಿನ್ ಟಿಲ್ಮನ್‌ನೇ ಕಾರಣ.
1908ರಲ್ಲೊಮ್ಮೆ ಮತ್ತು 1910ರಲ್ಲೊಮ್ಮೆ ಲಘು ಹೃದಯಾಘಾತಕ್ಕೊಳಗಾಗಿದ್ದ ಆತ, ತನ್ನ ಆರೋಗ್ಯದ ದೃಷ್ಟಿಯಿಂದ ಬೇರೆ ಸೆನೇಟರರು ಧೂಮಪಾನ ಮಾಡದಿದ್ದರೆ ಒಳ್ಳೆಯದಿತ್ತು, ಇಲ್ಲವಾದರೆ ತಾನೇ ಎದ್ದು ಹೊರಗೆಹೋಗಬೇಕಾಗುತ್ತದೆ, ಆಗ ಸೆನೇಟರ ನಾಗಿ ತನ್ನ ಕರ್ತವ್ಯಚ್ಯುತಿಯಾಗುತ್ತದೆ ಅಂತ ಅಲವತ್ತುಕೊಂಡಿದ್ದ. ಇನ್ನೊಂದಿಷ್ಟು ಸೆನೇಟರರು ಅವನಿಗೆ ಬೆಂಬಲವಿತ್ತರು. ಕೊನೆಗೆ ಅದೇ ನಿಯಮವಾಯ್ತು.
ಟಿಲ್ಮನ್‌ನ ನಿಧನಾನಂತರವೂ ಧೂಮಪಾನ ನಿಷೇಧ ಚಾಲ್ತಿಯಲ್ಲುಳಿಯಿತು. ಸಿಗರೇಟ್ ಅಥವಾ ಸಿಗಾರ್ ರೂಪದಲ್ಲಿ ತಂಬಾಕು ಸೇವನೆಯೇನೋ ನಿಷೇಧವಾಯ್ತು, ಆದರೆ ತಂಬಾಕಿನ ಪುಡಿ, ಅಂದರೆ ನಶ್ಯದ ಸೇವನೆಗೆ ಭಂಗ ಬರಲಿಲ್ಲ. ಮಿಲ್ಲಾರ್ಡ್ ಫಿಲ್ಲ್ಮೋರ್‌ನು ಅಮೆರಿಕದ ಉಪಾಧ್ಯಕ್ಷನಾಗಿದ್ದಾಗ (ಆಮೇಲೆ 1850ರಿಂದ 1853ರವರೆಗೆ ಆತ ಅಧ್ಯಕ್ಷನೂ ಆಗಿದ್ದ) ಆತ ತನ್ನ ನಶ್ಯದ ಡಬ್ಬಿಯನ್ನು ಮೇಜಿನ ಮೇಲೆ ಇಟ್ಟುಕೊಳ್ಳುತ್ತಿದ್ದನಂತೆ.
ಬೇರೆ ಸೆನೇಟರ್‌ಗಳೆಲ್ಲ ಅವನ ಮೇಜಿನ ಬಳಿಹೋಗಿ ಡಬ್ಬಿಯಿಂದ ಒಂದು ಚಿಟಿಕೆ ಉದ್ರಿ ನಶ್ಯ ಪಡೆದುಕೊಂಡು ಮೂಗಿನಹೊಳ್ಳೆಗೇರಿಸುತ್ತಿದ್ದರು. ಮೇಜಿನ ಬಳಿ ನಶ್ಯಕ್ಕೆಂದು ಮುತ್ತಿದ ಸೆನೇಟರ್‌ಗಳ ಗಲಾಟೆಯಿಂದಾಗಿ ಕಲಾಪದಲ್ಲಿ ನಿಜವಾಗಿ ಏನುನಡೆಯುತ್ತಿಯೆಂದೇ ಗೊತ್ತಾಗುತ್ತಿಲ್ಲ ಎಂದು ಮಿಲ್ಲಾರ್ಡ್ ಫಿಲ್ಲ್ಮೋರ್ ದೂರುತ್ತಿದ್ದನು. ಆಮೇಲೆ ಸೆನೇಟ್‌ನ ಇಕ್ಕೆಲಗಳಲ್ಲಿನಶ್ಯದ ಎರಡು ದೊಡ್ಡ ಡಬ್ಬಿಗಳನ್ನಿಡುವ ಏರ್ಪಾಡು ಆಯಿತು.
ಆಗ ಆರಂಭವಾದ ಆ ವ್ಯವಸ್ಥೆ ಈಗಲೂ ಮುಂದುವರಿದಿದೆ. ಜಪಾನೀಸ್ ಬೆಡಗಿಯರ ಅಂದವಾದ ಚಿತ್ರಗಳನ್ನು ಕೆತ್ತಿರುವ,ಮೇಲೆ ಮತ್ತಷ್ಟು ವಿನ್ಯಾಸಗಳಿಂದ ಸಿಂಗಾರಗೊಳಿಸಿರುವ, 1860ರ ಕಾಲದ ಎರಡು ಡಬ್ಬಿಗಳು ಸೆನೇಟ್‌ನಲ್ಲಿ ಮೆಜಾರಿಟಿಪಕ್ಷದ ಮತ್ತು ಮೈನಾರಿಟಿ ಪಕ್ಷದ ಬದಿಯಲ್ಲಿ ಇಟ್ಟದ್ದಿವೆ. ಈಗ ನಶ್ಯ ಏರಿಸುವ ಸೆನೇಟರ್‌ಗಳು ಅಪರೂಪ. ಯಾವಾಗಾದರೂಪೇಜ್ ಬಾಯ್‌ಗಳೇ (ಚಾಕರಿ ಹುಡುಗರು) ಕದ್ದುಮುಚ್ಚಿ ಒಂದೆರಡು ಚಿಟಿಕೆಗಳಷ್ಟು ಏರಿಸುತ್ತಾರೆ, ಅಥವಾ ಅಲ್ಲೊಬ್ಬಇಲ್ಲೊಬ್ಬ ಸೆನೇಟರ್ ತಾನೂ ಸ್ವಲ್ಪ ನಶ್ಯ ಏರಿಸಿ ಸಂದರ್ಶನಕ್ಕಾಗಿ ಬಂದ ಸುದ್ದಿಗಾರರಿಗೂ ಒಂಚೂರು ಆಫರ್ ಕೊಡುತ್ತಾನೆ ಎಂದು 1997ರಲ್ಲಿ ನ್ಯೂಯಾರ್ಕ್ ಟೈಮ್ಸ್ ಬರೆದಿತ್ತು.
ಅಂದಹಾಗೆ ‘ನರಕೃತ್ಯವೇಂ ನಶ್ಯ ಕಾಲವಶ್ಯವದೆಂಬ| ಕೊರಗಿಂದಲೆದೆ ಕುಗ್ಗಿ ಜೀವ ಕುಸಿವಂದು| ಸ್ಮರಿಸಾದಿಯಿಂ ಜಗದೊಳೆಡೆ ಬಿಡದೆ ಪರಿಯುತಿಹ| ಪುರುಷತಾವಾಹಿನಿಯ ಮರುಳ ಮುನಿಯ’ ಎಂದು ಡಿವಿಜಿಯವರು ಹೇಳಿದ್ದು ಅಮೆರಿಕದ ಸೆನೇಟ್ ನಶ್ಯದ ಬಗ್ಗೆ ಅಲ್ಲ! ಅವರು ನಶ್ಯ ಎಂದಿದ್ದು ನಶಿಸುವ ಎಂದರ್ಥದಲ್ಲಿ. ಆದರೆ ಅಮೆರಿಕದ ಸೆನೇಟ್ ಚೇಂಬರ್‌ನಲ್ಲಿ ನಶ್ಯ ನಶ್ಯವಲ್ಲ!