ಅಡಿಪಾಯವಿಲ್ಲದ ಮಾತಿನ ಮೇಲೆ ಪ್ರಜಾಸತ್ತೆಯ ಸೌಧ
ರಾವ್ -ಭಾಜಿ
ಪಿ.ಎಂ.ವಿಜಯೇಂದ್ರ ರಾವ್
ಸುದೀರ್ಘ ಕಾಲ ರಾಯಭಾರಿಯಾಗಿ ಸೇವೆ ಸಲ್ಲಿಸಿ, ನಿವೃತ್ತಿಯ ನಂತರ ಆಚಾರ್ಯ ವಿದ್ಯಾಕುಲ ಎಂಬ ಶಾಲೆಯನ್ನು ಆರಂಭಿಸಿ,ಅಲ್ಲಿ ಸಂಸ್ಕೃತ ಶಿಕ್ಷಣವೂ ಸೇರಿದಂತೆ ಮೌಲ್ಯಯುತ ಬೋಧನೆ ನೀಡುತ್ತಾ, ತೊಂಬತ್ತರ ವಯಸ್ಸಿನಲ್ಲೂ ಸಕ್ರಿಯವಾಗಿಇತ್ತೀಚೆಗೆ ನಿಧನರಾದ ಸಿದ್ಧಾರ್ಥಾಚಾರಿಯವರನ್ನು ಒಮ್ಮೆ ಮಾನವನ ಅವನತಿ ಎಲ್ಲಿ ಶುರುವಾಯಿತು ಎಂದು ಕೇಳಿದ್ದೆ.
ಮಾತಿನಿಂದ ಎಂದು ಕ್ಷಣಾರ್ಧದಲ್ಲಿ ಉತ್ತರಿಸಿದ ಅವರು ನಂತರ ಪ್ರಿಂಟಿಂಗ್ ಪ್ರೆಸ್ ಬಂತು, ಆ ನಂತರ ನೀವು (ಮಾಧ್ಯಮದವರು) ಬಂದಿರಿ ಎಂದರು. ಎಸ್.ಎಲ್ ಭೈರಪ್ಪ ಭಾಷಣವೊಂದರಲ್ಲಿ ನಿರೂಪಿಸಿದ ಪ್ರಸಂಗ. ಚನ್ನರಾಯಪಟ್ಟಣದಲ್ಲಿ ನಡೆದದ್ದಿರಬೇಕು. ಬುಡುಬುಡಿಕೆಯವನು ಊರಿನ ಗೌಡನಲ್ಲಿ ಸಾಲ ಬೇಡುತ್ತಾನೆ. ಮಗಳ ಮದುವೆ, ಐನೂರು ರುಪಾಯಿ ಅವಶ್ಯಕತೆ ಇದೆ.
(ಮೊತ್ತವನ್ನು ನೋಡಿ ಪ್ರಸಂಗದ ಕಾಲಘಟ್ಟವನ್ನು ಊಹಿಸಬಹುದು.) ವಿಳಾಸವಿಲ್ಲದ, ಪರವೂರಿನ ಅವನಿಗೆ ಸಾಲ ನೀಡಲು ಗೌಡ ಹಿಂಜರಿಯುತ್ತಾನೆ. ಕನ್ಯಾದಾನದ ಪುಣ್ಯದ ಫಲವಾದರೂ ಸಿಗುತ್ತದೆ, ಎಂದು ಮಧ್ಯಸ್ಥಿಕೆ ವಹಿಸಿದ ಗೌಡತಿಯ ಅಣತಿಯಂತೆ ಸಾಲ ನೀಡುತ್ತಾನೆ. ಅದೆಷ್ಟೋ ವರ್ಷಗಳ ನಂತರ ಬುಡುಬುಡಿಕೆಯವನ ಮಗ, ಅಪ್ಪನ ನಿಧನಾನಂತರದಲ್ಲಿ, ಗೌಡನಿಗೆ ಮರು ಪಾವತಿಸಲು ಹೋಗುತ್ತಾನೆ. ಗೌಡನೂ ಕಾಲವಾಗಿರುತ್ತಾನೆ. ಅವನ ಮಗನಿಗೆ ಹಣ ಸಂದಾಯವಾಗುತ್ತದೆ.
ರಂಗ ಲೋಕಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದ ವರದಾಚಾರರಿಗೂ ಹಣದ ಮುಗ್ಗಟ್ಟು. ಪಡೆದ ಸಾಲವನ್ನು ಹಿಂತಿರುಗಿಸಲು ಶಕ್ತಿಯಿಲ್ಲ. ಪಡೆದ ಸಾಲಕ್ಕೆ ಯಾವ ಕಾಗದಪತ್ರವೂ ಇಲ್ಲ. ಅವರ ಸಂಕಷ್ಟದ ಅರಿವಿದ್ದ ಪರಿಚಯದ ವಕೀಲ ನೀವು ಹಣ ಪಡೆದದ್ದಕ್ಕೆ ಯಾವುದೇ ದಾಖಲೆ ಇಲ್ಲ. ನೀವು ಹೇಳಿದಂತೆ ಮಾಡಿ, ಹಣ ವಾಪಸ್ ಕೊಡಬೇಕಿಲ್ಲ ಎಂಬ ಆಲೋಚನೆ ನೀಡು ತ್ತಾನೆ. ಸದ್ಯಕ್ಕೆ ಸಾಲ ಹಿಂತಿರುಗಿಸಲು ಚೈತನ್ಯವಿಲ್ಲವಷ್ಟೆ, ಆದರೆ ಹಣ ಹಿಂತಿರುಗಿಸಬಾರದೆಂಬ ದುರುದ್ದೇಶ ತಮಗಿಲ್ಲ ಎಂದು ಉತ್ತರಿಸುತ್ತಾರೆ.
ಸ್ಮೃತಿ, ಶ್ರುತಿಗಳಿಗೆ ಮಹತ್ವವಿದ್ದ ಕಾಲವದು. ಕೃತಿಯೂ ನೆರವಾಗಿರುತ್ತಿತ್ತು. ಸೂರ್ಯ ಅಥವಾ ಚಂದ್ರರ ಬೆಳಕಿನಡಿಯ ವ್ಯವಹಾರಗಳು ನಡೆಯುತ್ತಿದ್ದ ಕಾಲ. ಹಣಕ್ಕಿಂತ ಹೆಚ್ಚು ಮಾತಿಗೆ ಬೆಲೆ. ಅದನ್ನು ಸಾಧ್ಯವಾಗಿಸಿದ್ದು ಆತ್ಮಗೌರವ. ಕಾಗದಪತ್ರ ಗಳಿಲ್ಲದ ಆ ದಿನಗಳಲ್ಲಿ ಮರಗಳೂ ಉಳಿದುಕೊಂಡಿದ್ದವು. ಅಂಥವರಿಂದಲೇ ಮಳೆ-ಬೆಳೆ ಆಗ್ತಾ ಇರೋದು ಎಂಬ ಮಾತಿನ ಮರ್ಮ ಇದು. ಮುಕ್ಕ ಹಳ್ಳಿಗರ ಮೂರ್ಖತನವದಲ್ಲ. ಸಜ್ಜನಿಕೆ. ಸುಭಿಕ್ಷತೆಯ ಅಡಿಪಾಯವಾಗಿ ಸಂಸ್ಕೃತಿ ಇತ್ತು.
ಪುರೋಭಿವೃದ್ಧಿಯ ಪರಿಕಲ್ಪನೆ ನಗರೀಕರಣಕ್ಕೆ ಹಾದಿ ಮಾಡಿಕೊಟ್ಟಿತು. ಬ್ರಿಟಿಷರು ಮೇಲ್ಪಂಕ್ತಿ ಹಾಕಿಕೊಟ್ಟ ನಗರೀಕರಣದಿಂದ ಆದ ಹಾನಿ ವನ್ಯ ಸಂಪತ್ತಿಗೆ ಸೀಮಿತವಾಗಲಿಲ್ಲ; ಮೈತುಂಬಾ ಹೊಡೆತ ತಿಂದದ್ದು ಸಂಸ್ಕೃತಿಯ ಬೇರುಗಳು. ಈ ಇಂಡಿಯಾ ಕಂಪನಿ ಸ್ಥಳೀಯರೊಂದಿಗೆ ಮಾಡಿಕೊಂಡ ಅನೇಕಾನೇಕ ಒಪ್ಪಂದಗಳು ಏಕಪಕ್ಷೀಯವಾಗುವುದಕ್ಕೆ ಮೂಲ ಕಾರಣ ಮುಟ್ಟಾಳ ತನವಲ್ಲ, ಮಾತಿಗೆ ಬೆಲೆ ಕೊಡುವ ಈ ಮಣ್ಣಿನ ಜನರ ಗುಣ.
ಅಂತರಾಳದಿಂದ ಆಡುವ ಮಾತಿಗೆ ಅಂತರಾಳದಿಂದಷ್ಟೇ ಮಾತನಾಡಬೇಕೆಂಬ ಅಲಿಖಿತ ನಿಯಮ ರೂಪಿಸಿದ ಸಂಸ್ಕೃತಿಯ ಬೇರಿನಷ್ಟೇ ಸಧೃಡ ಬೇರಿರುತ್ತದೆ. ತುದಿನಾಲಿಗೆ ಮಾತಿಗೆ ಬೇರಿರುವುದಿಲ್ಲ. ಅಂತರಂಗದ ಮಾತಿಗೆ ಆತ್ಮದ ಸಹಕಾರವಿರುತ್ತದೆ. ಭಾವಶುದ್ಧವಿರುವೆಡೆ ಭಾಷಾಶುದ್ಧತೆಗೆ ಪ್ರಾಮುಖ್ಯತೆ ಕಡಿಮೆ. ನಾಭಿಯಿಂದ ಹೊರಡುವ ಹಾಡುಗಾರನ ಸ್ವರದ ಗಟ್ಟಿತನ ಅದಕ್ಕಿರುತ್ತದೆ. ಶುದ್ಧ ಗಾಂಧಾರಕ್ಕೆ ಪಕ್ಕವಾದ್ಯಗಳ ಅಲಂಕಾರವಿಲ್ಲದಿದ್ದರೂ ನಡೆಯುತ್ತದೆ.
ಮನದಾಳದಲ್ಲಿ ಜನ್ಮ ತಾಳಿದ ಮಾತಿಗೆ ಬದ್ಧತೆ ಇರುತ್ತದೆ. ಬದ್ಧತೆ ಇರುವಲ್ಲಿ ಶುದ್ಧತೆ ಇರುತ್ತದೆ. ಬ್ರಿಟಿಷರು ಅಪವಿತ್ರಗೊಳಿಸಿದ್ದು ಆ ಶುದ್ಧತೆಯನ್ನು. ಅವರು ಕೈಹಾಕಿ ಬಗೆಯುತ್ತಾ ಹೋದದ್ದು ಸಮೃದ್ಧಿ ಮೈದಳೆದ ಈ ದೇಶದ ಕೋಶಕ್ಕೆ. ಕಂಡವರ ಸ್ವತ್ತನ್ನು ಹಾಡುಹಗಲೇ ಕೊಳ್ಳೆ ಹೊಡೆಯುವ ರಾಕ್ಷಸಿ ಪ್ರವೃತ್ತಿಗೆ ಸಾಮ್ರಾಜ್ಯಶಾಹಿ ಎಂಬ ಸಮ್ಮತ ಶಬ್ದವನ್ನು ಬಳಸಿ ತಿಪ್ಪೆ ಸಾರಿಸಲಾ ಯಿತು. ಆ ಪ್ರವೃತ್ತಿ ಅಂದಿಗೇ ಕೊನೆಗೊಳ್ಳಲಿಲ್ಲ, ಡಂಕನ್ ಪ್ರಸ್ತಾವನೆ ಎಂಬ ಮತ್ತೊಂದು ಗಿಲೀಟು ಶಬ್ದದ ಸಮರ್ಥನೆಯೊಂದಿಗೆಹಿಂಬಾಗಿಲು-ಮುಂಬಾಗಿಳುಗರೆಡರಿಂದಲೂ ಪ್ರವೇಶ ಪಡೆದಿದೆ.
ನಮ್ಮ ನೇತಾರರು ಹಿಂದಿನಂತಿಲ್ಲ. ಬದುಕಲು ಕಲಿತಿದ್ದಾರೆ. ಪ್ರಜೆಗಳನ್ನೇ ಸೋಲಿಸಿ ಹೈರಾಣು ಮಾಡಬಲ್ಲ ವಾಕ್ಪಟುತ್ವ ಬೆಳೆಸಿ ಕೊಂಡಿದ್ದಾರೆ. ಅಂತಹ ವಾಕ್ಪಟುತ್ವಕ್ಕೆ ಉದಾಹರಣೆಗಳ ಸರಮಾಲೆಯನ್ನೇ ಕೊಡಬಹುದು. ನಮ್ಮ ಮನೆ ಕಟ್ಟುವ ಸಂದರ್ಭ ದಲ್ಲಿ ನಡೆದದ್ದು. ತಾರಸಿ ಹಾಕುವ ದಿನ. ಭಾನುವಾರ. ಯಾರೋ ಮಾಡಿದ ಯಡವಟ್ಟಿನ ಕಾರಣ ಬೇಕಾಗಿದ್ದ ಜಲ್ಲಿ ಕಲ್ಲಿಗೆ ಅಂದೇ ಹುಡುಕಾಡಬೇಕಾದ ಪ್ರಮೇಯ. ಕೆಲಸದವರನ್ನು ಕಾಯಿಸುವಂತಿಲ್ಲ.
ಕೆಲಸವನ್ನು ಮುಂದೂಡುವಂತೆಯೂ ಇಲ್ಲ. ಆ ಅಸಹಾಯಕತೆಯನ್ನು ಕ್ಷಣದ ಕಂಡುಕೊಂಡ ಸರಬರಾಜುದಾರ ಕಳಿಸಿದ ಲಾರಿ ಲೋಡ್‌ನ ಅರ್ಧದಷ್ಟು ಧೂಳು. ಆಕ್ಷೇಪಿಸಿದ್ದಕ್ಕೆ ಇದು ಬಟಾಣಿ ಜಲ್ಲೀನೇ ಸಾರ್ ಅಂತ ಕೈಯಿಂದ ಹೆಕ್ಕಿ ಗಾಳಿಯಲ್ಲಿ ಧೂಳನ್ನೇ ಉದುರಿಸಿದ. ಸುಳ್ಳಿಗೆ ಭಂಡತನದ ನೆಂಟಾದಾಗ ತರ್ಕ ತಲೆ ತಿರುಗಿ ಬೀಳುತ್ತದೆ.
ತರ್ಕಕ್ಕೆ ಸಮಯವೂ ಅದಲ್ಲ, ಬಿಡಿ. ಇಪ್ಪತ್ತು ವರ್ಷಗಳ ಹಿಂದೆ ಧೂಳನ್ನೇ ಜಲ್ಲಿಕಂದು ಪ್ರಮಾಣಿಸಿದ ಅವನ ಹೆಸರು ಕೇಳಲಿಲ್ಲ. ಅವನ ಮುಖದ ನೆನಪೂ ಮಾಸಿದೆ, ಇಲ್ಲದಿದ್ದಲ್ಲಿ ವಿಧಾನ  ಪರಿಷತ್ತಿನಲ್ಲಿ ಕಾಣಸಿಗುತ್ತಿದ್ದನೇನೋ. ಯಾವ ಪಕ್ಷದ ಸಾಲಿನಲ್ಲಿಕುಳಿತಿರುತ್ತಾನೊ! ಯಾವ ಪಕ್ಷದವನೇ ಆಗಿರಬಹುದು, ಎಲ್ಲೂ ಸಲ್ಲಬಹುದಾದ ವ್ಯಕ್ತಿಯೇ. ಒಂದು ವೇಳೆ ಕಾಂಗ್ರೆಸ್ ಸದಸ್ಯತ್ವ ಪಡೆದಿದ್ದರೆ, ಅನುಭವಿ ನಾಯಕ ಬಿಕೆ ಹರಿಪ್ರಸಾದರ ಗಮನವಿನ್ನೂ ಸೆಳೆದಂತಿಲ್ಲ, ಏಕೆಂದರೆ ಉಪಸಭಾಪತಿಯನ್ನು ದರದರನೆಎಳೆದಾಡುವ ಸ್ಪರ್ಧೆಯಲ್ಲಿ ಅವರು ನಾರಾಯಣ ಗೌಡರನ್ನು ಪಂದ್ಯದ ಪುರುಷೋತ್ತಮನೆಂದು ಘೋಷಿಸಿದ್ದಾರೆ.
ಹರಿಪ್ರಸಾದರ ನಾಯಕರು ಸಂಸತ್ತಿನ ಭಾಷಣ ಮಾಡಿ ಕಣ್ಣು ಹೊಡೆದಿದ್ದರು. ಕಣ್ಣು ಹೊಡೆದದ್ದರ ಅರ್ಥ ತಾನು ಮಂಡಿಸಿದ ವಿಚಾರ ಕುಚೋದ್ಯಕ್ಕೆ, ಮಾತನಾಡಿದ್ದು ಹಾಗೆ ಸುಮ್ಮನೆ ಎಂದು. ವಿಚಾರ ವಿನಿಮಯದ ಮೂಲಕ ಒಮ್ಮತ ಸಾಧಿಸುತ್ತಲೇ ದೇಶವನ್ನು ಮುನ್ನಡೆಸುವುದು ಪ್ರಜಾಪ್ರಭುತ್ವದ ಆಶಯ. ಆ ಆಶಯವನ್ನು ಪೂರೈಸುವಲ್ಲಿ ಮಾತಿನ ಪಾತ್ರ ಮುಖ್ಯ.
ಸಂವಹನೆಗೆ ಬೇಕಾದ ಎರಡು ಮುಖ್ಯ ದ್ರವ್ಯಗಳು – ವಿಚಾರ ಮತ್ತು ಅಭಿವ್ಯಕ್ತಿ. ಇವೆರಡೂ ಅಂಗಗಳನ್ನು ತಮ್ಮ ಅವಶ್ಯಕತೆಗೆ ತಕ್ಕಂತೆ ದುಡಿಸಿಕೊಳ್ಳುವಲ್ಲಿ ನಮ್ಮ ನಾಯಕರು ಸ-ಲರಾಗಿzರೆ. ರಾಜಕೀಯ ವಿರೋಧಿಯನ್ನು ಬಾಸ್ಟರ್ಡ್ ಎಂದು ಕರೆದು ಜಯಿಸಿಕೊಳ್ಳುತ್ತಾರೆ. ಪ್ರಧಾನಿಯನ್ನು ಸೂ..ಗ ಎಂದು ಭಾಷಣ ಮಾಡುವರರಿzರೆ. ಸಾರ್ವಜನಿಕವಾಗಿ ಹೆಣ್ಣೊಬ್ಬಳ ಸೆರಗನ್ನು ಜಗ್ಗಿದ್ದನ್ನೂ ಸಮರ್ಥಿಸಿಕೊಳ್ಳುವವರಿದ್ಧಾರೆ.
ಆಕ್ರೋಶಗೊಂಡು ಮೆದುಳು-ನಾಲಗೆಗಳೆರೆಡಕ್ಕೂ ತೊಂದರೆ ಕೊಡದೆ ಅಧಿಕಾರಿಯೊಬ್ಬನ ಕೆನ್ನೆಗೆ ಹೊಡೆದವರೂ ಇದ್ಧಾರೆ. ಮೆದುಳು- ನಾಲಗೆಗಳನ್ನು ಬಿಟ್ಟು ಕಣ್ಣಿಗಷ್ಟೇ ಕಸರತ್ತು ಕೊಡುತ್ತಾ ಸದನದಲ್ಲಿ ಬ್ಲೂ ಫಿಲ್ಮ ಆನಂದಿಸಿದವರೂ ಇದ್ಧಾರೆ.ಇವೆಲ್ಲವೂ ಪ್ರಜಾಪ್ರಭುತ್ವ ವ್ಯವಸ್ಥೆಯ ಅನಿವಾರ್ಯ ಆಗುಹೋಗುಗಳಷ್ಟೇ ಅಲ್ಲ, ವ್ಯವಸ್ಥೆ ನಿಂತಿರುವುದೇ ಇಂತಹಬೆಳವಣಿಗೆಗಳ ಮೇಲೆ ಎಂದು ಬಿಂಬಿಸುವ ಮಾಧ್ಯಮಗಳಿಗೇನೂ ಕಡಿಮೆಯೇ? ಶಬ್ದ ಕೌಶಲದಿಂದ ಅಕ್ರಮವನ್ನು ಸಕ್ರಮ ಗೊಳಿಸುವುದೇ ಮಾಧ್ಯಮದ ನವನಿರ್ಮಿತ ಹೊಣೆಯಾಗಿದೆ.
ಉಖಾರ್ಹವಾಗಿ ನನ್ನ ನೆಚ್ಚಿನ ಲೇಖಕ ಮಿಲನ್ ಕುಂದೇರಾನನ್ನು ಬರಮಾಡಿಕೊಳ್ಳುತ್ತೇನೆ. ಗರ್ಭನಿರೋಧ ಮಾತ್ರೆಯ ಲಾಭ ಮಹಿಳೆಗೆ ದೊರಕುವ ಮುನ್ನಾ ದಿನಗಳನ್ನು ನೆನಪಿಸಿಕೊಳ್ಳಿ. ರತಿಯ ಆ ನಿರ್ದಿಷ್ಟ ಕ್ಷಣದಲ್ಲಿ ಪ್ರೇಮಿಯಿಂದ ಬೇರ್ಪಡಲು ಮರೆತು ಆಕೆಯ ಗರ್ಭ ಧಾರಣೆಯಲ್ಲಿ ಪರ್ಯಾವಸಾನಗೊಳ್ಳುತ್ತಿದ್ದ ಬಗೆ. ಜಾಗ್ರತೆವಹಿಸಿ ಹೊರಬರುತ್ತೇನೆಂಬ ಕೆಲವೇ ಕ್ಷಣಗಳ ಹಿಂದಿನ ಗಟ್ಟಿಯಾದ ನಿರ್ಧಾರ ನೀರಾದ ರೀತಿ. ಸುಖಾತಿರೇಕದ ಆ ಒಂದು ಅರೆಗಳಿಗೆ ಅವನ ಮನೋನಿಗ್ರಹದ ನಿಶ್ಚಯವನ್ನೂ(ತತ್ ಕ್ಷಣದ ಹಿಂದಿನದನ್ನೂ) ಮತ್ತು ಹಿತಾಸಕ್ತಿಯನ್ನೂ (ಮುಂದಿನದನ್ನೂ) ಮರೆಸಿಬಿಡುವ ವೈಖರಿ.
ಉತ್ಕಟ ಬಯಕೆಯ ಆ ಕ್ಷಣದ ತುಣುಕು ಬೇಡವಾದ ಮಗುವಿನ ಭವಿಷ್ಯತ್ ಕರೆಗೆ ಕಿವುಡನನ್ನಾಗಿಸುವ ವೈಚಿತ್ರ. ಬಯಸಿದ್ದುಅಪರಿಮಿತ ರತಿ – ನಿರಂತರತೆ. ದೊರಕಿದ್ದು ಅಲ್ಪ ಸುಖ – ಸೀಮಿತ ಖುಷಿ. ಪಾವಿತ್ರ್ಯತೆಗೆ ಬೆಸೆದುಕೊಂಡಿರುವ ಸೃಷ್ಟಿ ಕ್ರಿಯೆಯ ದಿವ್ಯ ಮೌನಕ್ಕೆ ಅಡ್ಡಿಪಡಿಸುವುದು ಪ್ರೇಮಿಗಳ ನಡುವಿನ ಮಾತು. ಧ್ಯಾನದ ಉನ್ನತ ಪೀಠದಿಂದ ಅದನ್ನು ಕೆಡವಿ ಭೋಗವನ್ನಾ ಗಿಸುವ ಪೂರ್ವಾನುಸಂಧಾನ. ಮಗು ಬೇಡವೆನ್ನುವ ಆಶಯವಲ್ಲ. ಬೇಡದ ಮಗುವೆಂಬ ಬಿರುದು.
ಅದಕ್ಕೆ ಮಾತುಕತೆ. ಮೌನದ ಭಂಗ. ಆದರೆ ಆದದ್ದು ಆ ಅರೆಕ್ಷಣದ ಯಡವಟ್ಟು. ಜನ ಬಯಸುವುದು ಪ್ರಜಾಪ್ರಭುತ್ವ, ಡೆಮಾಕ್ರಸಿ; ದಕ್ಕುವುದು ರಾಕ್ಷಸಪ್ರಭುತ್ವ, ಡೆಮೋ ಜನದನಿ ರಾಕ್ಷಸರ ಅಟ್ಟಹಾಸವಾಗಿ ಪರಿವರ್ತನೆಗೊಳ್ಳುವಲ್ಲಿಯೂ ಮಾತಿನರಾಜ್ಯಭಾರವೇ. ಡೆಮಾಕ್ರಸಿ ಎಂದರೆ ಮಾತಲ್ಲವೇ? ಬರೇ ಮಾತು. ಮಾತಿನ ಮೂಲಕವೇ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಇಂದಿನ ಗ್ರಾಮ ಪಂಚಾಯತಿ ಚುನಾವಣೆಗಳು ಒದಗಿಸಿರುವ ಸದವಕಾಶವನ್ನು ನೇತಾರರು ಪಕ್ಷಾತೀತವಾಗಿ ಬಳಸಿಕೊಳ್ಳುತ್ತಿzರೆ.
ಆಶಾಕಿರಣವೋ ಎಂಬಂತೆ ಸಂಸ್ಕೃತಿ ನಶಿಸಿ ಹೋಗುತ್ತಿರುವ ಬಗ್ಗೆ  ಆತಂಕ ಬೇಡ. ಸಂಸ್ಕೃತ ಭಾಷೆಯ ಸಂಹಾರಕ್ಕೆ ಅಹರ್ನಿಶಿದುಡಿಯುತ್ತಿರುವ ಪತ್ರಕರ್ತರ ಸಹೋದ್ಯೋಗಿ ತಮ್ಮ ಮಗನನ್ನು ಸಿದ್ಧಾರ್ಥಾಚಾರಿ ಅವರ ಶಾಲೆಗೇ ಕಳಿಸುತ್ತಾರೆ.