ಮತಗಳ ಭೇದ ಮನೆಯಲ್ಲಿರಲಿ, ಬ್ರಾಹ್ಮಣನೆಂಬ ಸಾರ್ವತ್ರಿಕವಾಗಿರಲಿ
ಅವಲೋಕನ
ಉಮಾ ಮಹೇಶ ವೈದ್ಯ
ನಮ್ಮಲ್ಲಿ ಬ್ರಾಹ್ಮಣನೆಂಬುದು ಜಾತಿ ಸೂಚಕವಲ್ಲ, ವೇದಗಳ ಅರಿತು ಆತ್ಮ ಜ್ಞಾನದ ಬೆಳಕಿನಲ್ಲಿ ಸರ್ವವೂ ಬ್ರಹ್ಮಮಯ ಎನ್ನುವ ಸತ್ಯವನ್ನು ಅರಿತ ವಾಚಕವೇ ಬ್ರಾಹ್ಮಣ. ಈ ಸತ್ಯದ ಗುರಿಯನ್ನು ತಲುಪಲು ಬ್ರಾಹ್ಮಣರಲ್ಲಿನ ಮತಾಚಾರ್ಯರು ತಮ್ಮ ಸಾಧನೆ, ಹಾಗೂ ತಮ್ಮ ಅರಿವೆಗೆ ಬಂದ ಸಂಗತಿಗಳನ್ನು ತಮ್ಮದೇ ವಿಶಿಷ್ಠ ರೀತಿಯಲ್ಲಿ ಅರ್ಥೈಸಿ, ಅವುಗಳಿಗೆ ಭಾಷೆಯ ರೂಪನೀಡಿ ತಮ್ಮ ಅಭಿಪ್ರಾಯವನ್ನು ಮಂಡಿಸಿದರು.
ಕಾಲಾನುಸಾರ ಈ ಅಭಿಪ್ರಾಯಗಳನ್ನು ಆಯಾ ಶಾಖೆಯ ಅಥವಾ ಮತಾಚಾರ್ಯರಲ್ಲಿ ಆಸ್ಥೆಯನ್ನು ಹೊಂದಿದ ಜನರು ಬದಲಿಸಲಾಗದ ಕಾನೂನುಗಳಂತೆ ಪರಿಪಾಲಿಸತೊಡಗಿದರು. ಇದರ ಪರಿಣಾಮವಾಗಿ, ತಮ್ಮ ಮತವೇ ಶ್ರೇಷ್ಠ, ತಮ್ಮ ಮತಾ ಚಾರ್ಯರೇ ಅವತಾರಿ ಪುರುಷರು ಇತರ ಮತಗಳು ನಗಣ್ಯ,  ಇತರ ಮತಾಚಾರ್ಯರು ಕಳಂಕಿತ ಹಿನ್ನಲೆಯನ್ನು ಹೊಂದಿದವರು ಎಂದು ಖಂಡಿಸತೊಡಗಿದರು.
ಇದರ ಫಲವಾಗಿ, ಮತ ಭಿನ್ನತೆಗಳು ಸಮಾಜದ ಜನರಲ್ಲಿ ಪೂರ್ವಾಗ್ರಹ ಉಂಟುಮಾಡಿ ಪರಸ್ಪರರನ್ನು ಬಹಿರಂಗವಾಗಿ ಹಳಿಯಲು ಅವಕಾಶ ಮಾಡತೊಡಗಿತು. ಇದಕ್ಕೆ ನಿಜಕ್ಕೂ ಬಲಿಯಾಗಿದ್ದು ಬ್ರಾಹ್ಮಣ್ಯ ಹಾಗೂ ನೈಜ ವೇದಾರ್ಥ ಅನ್ವೆಷಣೆಯ ಹಸಿವು. ಎಂಟನೇ ಶತಮಾನದ ಶಂಕರಾಚಾರ್ಯರು ಅದ್ವೈತ ಮತ ಅಂದರೆ ಆತ್ಮ ಹಾಗೂ ಪರಮಾತ್ಮ ಒಂದೇ ಎಂದು ಅನುಭಾವ ಹಾಗೂ ಜ್ಞಾನದನುಸಾರ ಸಾರ್ವಜನಿಕವಾಗಿ ಪ್ರಚಾರ ಮಾಡಿದರೆ, ಹನ್ನೊಂದನೇ ಶತಮಾನದಲ್ಲಿ ಶ್ರೀ ರಾಮಾಜು  ಚಾರ್ಯರು ತಮ್ಮ ಅನುಭಾವದನುಸಾರ ಜಗತ್ತಿನಲ್ಲಿ ಆತ್ಮ-ಪರಮಾತ್ಮ ಬೇರೆ ಆದರೆ ಮೋಕ್ಷದಲ್ಲಿ ಆತ್ಮ ಪರಮಾತ್ಮನಲ್ಲಿ ಒಂದಾಗುತ್ತದೆ ಎಂಬ ವಿಶಿಷ್ಟಾದ್ವೈತ ತತ್ವ ಸಾರಿದರು.
ಹದಿಮೂರನೇ ಶತಮಾನದಲ್ಲಿ ಶ್ರೀ ಮಧ್ವಾಚಾರ್ಯರು ಜೀವಾತ್ಮ ಹಾಗೂ ಪರಮಾತ್ಮ ಸದಾ ಬೇರೆಯಾಗಿದ್ದು, ಎಂದಿಗೂ ಆತ್ಮ ಪರಮಾತ್ಮನಲ್ಲಿ ಲೀನವಾಗುವುದಿಲ್ಲ ಎಂಬ ತಾವು ಕಂಡುಕೊಂಡಂತೆ ದ್ವೈತ ಸಿದ್ಧಾಂತವನ್ನು ಪ್ರಚಾರಪಡಿಸಿದರು. ಈಮೂವರೂ ಮಹನೀಯರು ತಮ್ಮ ಕಾಲ ಘಟ್ಟದಲ್ಲಿ ತಮ್ಮ ಅಧ್ಯಯನ ಹಾಗೂ ಸಾಧನೆಯನುಸಾರ ತಮ್ಮ ಅಭಿಪ್ರಾಯಗಳನ್ನು ಮಂಡಿಸದರೆಂದರೆ ತಪ್ಪಾಗಲಾರದು. ಆದರೆ ಪರಸ್ಪರ ತತ್ವ ಸಿದ್ಧಾಂತಗಳ ಅವಲೋಕನ, ಪರೀಕ್ಷೆ, ಯಾವುದು ಶ್ರೇಷ್ಠ ಯಾವುದುಕನಿಷ್ಠ ಎಂದು ನಿರ್ಧರಿಸಲು ಈ ಮೂವರು ಮತಾಚಾರ್ಯರೇ ಒಬ್ಬರಿಗೊಬ್ಬರು ಪ್ರತ್ಯಕ್ಷವಾಗಿ ವಾದ ಮಂಡಿಸಿ ಪರಸ್ಪರ ಮನವರಿಕೆ ಮಾಡಿಕೊಟ್ಟಾಗಲೇ ಸಾಧ್ಯ ಹೊರತು ಅವರ ಕಾಲಾನಂತರ, ಅವರು ಬರೆದ ಪುಸ್ತಕಗಳನ್ನು ಹಿಡಿದು, ಅವರವರಅನುಯಾಯಿಗಳು, ಶಿಷ್ಯರು ಸ್ಪರ್ಧಿಸಿ ಈ ಮತಾಚಾರ್ಯರ ಸಿದ್ಧಾಂತ ಸರಿಯಿಲ್ಲ, ತಮ್ಮ ಆಚಾರ್ಯರರ ಅಭಿಪ್ರಾಯ ಹಾಗೂ ಅವರ ಮತವೇ ಶ್ರೇಷ್ಠ ಎನ್ನುತ್ತ ನಾನು ಅವರನ್ನು ಸೋಲಿಸಿ ಗೆದ್ದೆ, ಎನ್ನುವ ಭಾವವೇ ಸಾರ್ವಕಾಲಿಕ ಮಿಥ್ಯ.
ವೇದಗಳನ್ನು ಓದಿ, ಅಭ್ಯಸಿಸಿ ಜ್ಞಾನದ ಹರುವಿನಲ್ಲಿ ಸತ್ಯವನ್ನು ಕಂಡುಕೊಳ್ಳಲು ನಿಮಗೆ ಸತ್ವ ಹಾಗೂ ಶಕ್ತಿ ಇರದಿದ್ದರೆ ನೀವು ನಂಬಿದ ಅಥವಾ ಪಾಲಿಸಿಕೊಂಡ ಬಂದ ಮತವನ್ನು ಕಣ್ಣು ಮುಚ್ಚಿ ಅನುಸರಿಸಿ, ಯಾರೂ ಬೇಡ ಅನ್ನುವುದಿಲ್ಲ, ಆದರೆ ಸ್ವತಃಸತ್ಯವನ್ನು ಕಂಡುಕೊಳ್ಳದೇ ಕೇವಲ ರಚನೆಗಳನ್ನು ಆಧರಿಸಿ ಇನ್ನೊಂದು ಮತವನ್ನು ಅವಹೇಳನ ಮಾಡುವುದು ಹಾಗೂ ಮತಾಚಾರ್ಯರನ್ನು ನಿಂದಿಸುವುದಿದೆಯಲ್ಲ ಇದು ನಿಜಕ್ಕೂ ಅಧಮತನದ ಪರಮಾವಧಿ.
ವಿಚಿತ್ರವರೆಂದರೆ, ಬ್ರಾಹ್ಮಣ ಮಠಾಧೀಶರುಗಳು ಈ ಮತ ಭಿನ್ನತೆಗೆ ಕೊಡುವ ಮಹತ್ವವನ್ನು ನೈಜ ಬ್ರಾಹ್ಮಣ್ಯಕ್ಕೆ ಕೊಡುತ್ತಿಲ್ಲ ವೆಂಬುದೇ ಸಮಾಜದ ದುರಂತಕ್ಕೆ ಕಾರಣವೆಂದರೆ ತಪ್ಪಾಗಲಿಕ್ಕಿಲ್ಲ. ಶ್ರೀ ಶಂಕರರ ಜಯಂತಿಗೆ ಮಾಧ್ವರು ಪಾಲ್ಗೊಳ್ಳುವುದಿಲ್ಲ,ಮಧ್ವಾಚಾರ್ಯರ ಜಯಂತಿಗೆ ಸ್ಮಾರ್ತರು ಭಾಗವಹಿಸುವುದಿಲ್ಲ. ಶ್ರೀ ರಾಮಾಜುನಾಚಾರ್ಯರ ಜಯಂತಿಯನ್ನು ವೈಷ್ಣವರು, ಸ್ಮಾರ್ತರು ಎಂದಿಗೂ ಆಚರಿಸುವುದಿಲ್ಲ. ನಾವು ನಮ್ಮ ಮತಾಚಾರ್ಯರ ಜಯಂತಿಗಳನ್ನೇ ಆಚರಿಸುತ್ತೇವೆ, ಬೇರೆ ಮತಾಚಾರ್ಯರ ಜಯಂತಿ ನಮಗೆ ಅಪಥ್ಯ ಎಂಬ ಸಂಕುಚಿತ ಮನಸ್ಸಿನವರು ನಿಜಕ್ಕೂ ಬ್ರಾಹ್ಮಣರೇ? ಎಂಬುದೇ ನನ್ನ ಪ್ರಮುಖ ಪ್ರಶ್ನೆ.
ಈ ಮೂವರೂ ಮತಾಚಾರ್ಯರು ಬ್ರಾಹ್ಮಣರಲ್ಲವೇ? ಹಾಗಿದ್ದರೆ ಯಾಕೆ ಎಲ್ಲಾ ಬ್ರಾಹ್ಮಣರೆಲ್ಲ ಸೇರಿ ಸಾಮೂಹಿಕವಾಗಿ ಈಆಚಾರ್ಯತ್ರಯರ ಉತ್ಸವಗಳನ್ನು ಮಾಡಬಾರದು? ಆದರೆ ಮತದ ಮೇಲಿನ ವ್ಯಾಮೋಹ ನಿಜವಾದ ಜ್ಞಾನವನ್ನು ಮರೆ ಮಾಚುತ್ತಿದೆ ಜತೆಗೆ ಸಮಾಜದಲ್ಲಿ ಪ್ರತ್ಯೇಕತೆಯ ಗೋಡೆಗಳನ್ನು ಕಟ್ಟಿದೆ ಎಂದರೆ ತಪ್ಪಾಗಲಿಕ್ಕಿಲ್ಲ.
ನಮ್ಮ ಧಾರ್ಮಿಕ ಮುಖಂಡರುಗಳು, ಮಠಾಧೀಶರು ಒಕ್ಕೂರಲಿನಿಂದ ನಾವೆಲ್ಲ ಬ್ರಾಹ್ಮಣರು,  ಎಲ್ಲಾ ಮತಾಚಾರ್ಯರು ನಮಗೆ ಸದಾ ಪೂಜ್ಯನೀರು, ಘೋಷಣೆಯಡಿಯಲ್ಲಿ ಸಮಾಜವನ್ನು ಒಗ್ಗೂಡಿಸುವುದಿಲ್ಲವೇಕೆ? ನಾನು ವೈಷ್ಣವ, ಸ್ಮಾರ್ತ, ಅಯ್ಯಂಗಾರ್, ಅಯ್ಯರ್, ಕಣ್ವ, ಹವ್ಯಕ, ಗೌಡ ಸಾರಸ್ವತ ಇತ್ಯಾದಿಯಾಗಿ ನಂಬಿದ ಮತಗಳನ್ನು, ಆಚರಣೆಗಳನ್ನು ಮನೆಯಲ್ಲಿ ಅನುಸರಿಸಿ, ಹೊರಗೆ ಬಂದಾಕ್ಷಣ ನಾವು ಬ್ರಾಹ್ಮಣ ಎನ್ನುವ ಒಂದೇ ಮತ ಎಂದು ಹೇಳುತ್ತಿಲ್ಲವೇಕೆ?
ಸಮಾಜದಲ್ಲಿ ನಾವೆಲ್ಲ ಒಂದೇ ಎಂಬ ಭಾವನೆಯ ಬೀಜವನ್ನು ಬಿತ್ತುತ್ತಿಲ್ಲವೇಕೆ? ಈ ರೀತಿಯ ಹತ್ತು ಹಲವಾರು ಪ್ರಶ್ನೆಗಳನ್ನು ಕೇಳಿದರೂ ಉತ್ತರಿಸುವ ಜವಾಬ್ದಾರಿ ನಮ್ಮದಲ್ಲ ಎನ್ನುವುದಾದರೆ, ಇನ್ನೊಂದು ಮತವನ್ನು ಮಠಾಧೀಶರುಗಳಾಗಲಿ ಅಥವಾ ಅವರವರ ಭಕ್ತಗಣಗಳಾಗಲಿ ಬಹಿರಂಗವಾಗಿ ಖಂಡಿಸುವ, ಹೀಯಾಳಿಸುವ, ಯಾವುದೇ ನೈತಿಕತೆ ಇಲ್ಲವೆಂಬುದನ್ನು ಕಂಡು ಕೊಳ್ಳಬೇಕು.
ಸಾಮಾಜಿಕ ಜಾಲತಾಣಗಳಲ್ಲಂತೂ ಪರಸ್ಪರ ಮತಗಳ ನಿಂದನೆ, ಕಾಲಳೆಯುವ ಪರಿಯನ್ನು ನೋಡಿದರೆ ಆ ವ್ಯಕ್ತಿಗಳೆಲ್ಲ ಅವರಿವರ ಮನೆಯಲ್ಲಿನ ಹುಳುಕುಗಳನ್ನು, ವ್ಯಕ್ತಿಯ ದುರ್ಬಲತೆಗಳನ್ನು ಆಡಿಕೊಂಡು ಸಂತಸ ಪಡುವ ಮನೋವಿಕಾರಿಗಳಗುಂಪಿನಂತೆ ಕಂಡು ಬರುತ್ತಿದ್ದಾರೆ. ಇಂಥ ಸಂಕುಚಿತ ಮನಸ್ಸುಗಳು ಬ್ರಾಹ್ಮಣ ಸಮುದಾಯದ ಭವಿಷ್ಯಕ್ಕೆ  ಕಂಟಕಪ್ರಾಯ ವಾಗಿವೆಯೆಂದರೆ ತಪ್ಪಾಗಲಿಕ್ಕಲ್ಲ.  ದಿನ ಬ್ರಾಹ್ಮಣರ ಕುಟುಂಬಗಳು ಸುರಕ್ಷತಾ ಭಾವವನ್ನು ಹೊಂದಿಲ್ಲ. ಇತರ ಸಮುದಾಯದ ಕೆಂಗಣ್ಣಿಗೆ ಸದಾ ಗುರಿಯಾಗಿದ್ದು, ಬಾಹ್ಯ  ಪ್ರಪಂಚದಲ್ಲಿ ಅಸ್ಪಶ್ಯರಂತೆ ಬ್ರಾಹ್ಮಣರನ್ನು ಕಾಣುವಂತಹ ಅನೇಕ ಅನುಭವ ಗಳಾಗುತ್ತಿವೆ.
ಇದಕ್ಕೆ ಉದಾಹರಣೆಯಾಗಿ ನಾನೇ ನೋಡಿದಂತೆ, ಸುಮಾರು ವರ್ಷಗಳ ಹಿಂದೆ ಬಸ್ಸಿನಲ್ಲಿ ಪ್ರಯಾಣಿಸುತ್ತಿರುವಾಗ ಸಹ ಪ್ರಯಾಣಿಕ ಬ್ರಾಹ್ಮಣರೊಬ್ಬರು ತಮ್ಮ ಮತದ ಅನುಸಾರ ಚಿಹ್ನೆಗಳನ್ನು ಧರಿಸಿ, ತಮ್ಮ ಪಾಡಿಗೆ ತಾವು ಮೊಬೈಲ್‌ನಲ್ಲಿ ಮಂತ್ರ ಗಳನ್ನು ಕೇಳುತ್ತ ಇದ್ದರು. ನಂತರ ಬಸ್‌ನೊಳಗೆ ಇನ್ನೊಂದು ಸಮುದಾಯದ ವ್ಯಕ್ತಿಯೊಬ್ಬ ಬಂದು ಅವರ ಪಕ್ಕ ಕುಳಿತು ನಂತರ ಮೊಬೈಲ್ ಬಂದ್ ಮಾಡಿ ಮಂತ್ರ ಕೇಳಲು ನಾನು ಇಲ್ಲಿ ಕುಳಿತಿಲ್ಲ ಎಂದು ಜೋರು ಮಾಡತೊಡಗಿದ.
ಇದರಿಂದ ಮುಜುಗರಕ್ಕೆ ಒಳಗಾದ ಆ ಬ್ರಾಹ್ಮಣ ಸುತ್ತ ಮುತ್ತ ನೋಡಿ ಉಳಿದ ಬ್ರಾಹ್ಮಣರು ತನ್ನ ಸಹಾಯಕ್ಕೆ ಬರುತ್ತಾರೋ ಹೇಗೆ? ಎಂಬ ಪ್ರಶ್ನಾರ್ಥಕ ದೃಷ್ಟಿಯಲ್ಲಿ ನೋಡತೊಡಗಿದರು. ಆ ಬಸ್ಸಿನಲ್ಲಿ ಸುಮಾರು ಹತ್ತರಿಂದ ಹದಿನೈದು ಜನ ಬ್ರಾಹ್ಮಣ ರಿರಬಹುದು , ಇವರ ಈ ದಯನೀಯ ಸ್ಥಿತಿ ನೋಡಿ ಯಾರೂ ಮುಂದೆ ಬರಲಿಲ್ಲ.
ಕೊನೆಗೆ ಆ ಬ್ರಾಹ್ಮಣ ಅನಿವಾರ್ಯವಾಗಿ ತನ್ನ ಮೊಬೈಲ್ ಬಂದ್ ಮಾಡಬೇಕಾಯಿತು. ಇದು ಹೀಗೇಕೆ? ಎಂದು ಅಲ್ಲಿದ್ದ ಕೆಲ ಬ್ರಾಹ್ಮಣರನ್ನು ಪ್ರಶ್ನಿಸಲಾಗಿ, ಅವರು ಹೇಳಿದ್ದು, ‘ನೋಡ್ರೀ ಆ ವ್ಯಕ್ತಿ ವೈಷ್ಣವ, ನಾವು ಸ್ಮಾರ್ತರು, ಅವರು ನಮ್ಮನ್ನು ಕೀಳಾಗಿ ನೋಡುತ್ತಾರೆ, ಊಟದಲ್ಲಿ ಪಂಕ್ತಿ ಭೇದ ಮಾಡುತ್ತಾರೆ, ಇವತ್ತು ಅವನಿಗೆ ತಕ್ಕ ಶಾಸ್ತಿಯಾಯಿತು’ ಎಂದಾಗ ಅನಿಸಿದ್ದು ಬೇರೊಂದು ಸಮುದಾಯದ ವ್ಯಕ್ತಿಯನ್ನು ಆಗ ಮತ ಭಿನ್ನತೆಗಳನ್ನು ಮರೆತು ನಾವೆಲ್ಲ ಬ್ರಾಹ್ಮಣರು ಎಂಬ ಭಾವದೊಂದಿಗೆ ಎದುರಿಸಿದ್ದರೆ ನಮ್ಮ ದನಿಯೆದರು ಆತನ ಆಕ್ಷೇಪದ ತೀವ್ರತೆ ಕಡಿಮೆಯಾಗಿ ಇವರೆಲ್ಲಾ ಒಗ್ಗಾಟ್ಟಗಿದ್ದಾರೆ ಎಂದು ಅರಿತು ಸುಮ್ಮನಾಗುತ್ತಿದ್ದನಲ್ಲವೇ? ಆದರೆ ಸನಾತನ ಕಾಲದಿಂದ ನೀವು ಇನ್ನೊಬ್ಬರನ್ನು ತುಳಿದು ಮೆರೆದವರು, ಈಗ ನಾವುಮೆರೆಯುತ್ತೇವೆ ನೀವು ತುಳಿತಕ್ಕೆ ಒಳಗಾಗಿ ಎನ್ನುವ ಧೋರಣೆಗೆ ಸಿಲುಕಿ ನಲುಗುತ್ತ ಬ್ರಾಹ್ಮಣ ತನವೇ ನಮಗೆ ಶಾಪವಾಗಿ ಪರಿಣಮಿಸುತ್ತಿರುವ ಸಮಯದಲ್ಲಿ ಮತಾಚಾರ್ಯರ ಹೆಸರಿನಲ್ಲಿ ಪರಸ್ಪರ ದ್ವೇಷ ಹಾಗೂ ಅಸಹನೀಯತೆ ನಿಜಕ್ಕೂ ಅಗತ್ಯವೇ?ನಾವು ಧರಿಸುವ ನಾಮಗಳು, ಗೋಪಿಚಂದನ, ಭಸ್ಮ ಬೇರೆ ಬೇರೆ ಇರಬಹುದು ಆದರೆ ಜನಿವಾರ ಒಂದೇ.
ಪಠಿಸುವ ಗಾಯತ್ರಿ ಮಂತ್ರ ಒಂದೇ ಎಂಬುದನ್ನು ಮರೆಯಬಾರದು. ನಾವೆಲ್ಲ ಒಂದೇ ಬೇರಿನ ಇತರ ಶಾಖೆಯಲ್ಲಿ ಅರಳಿದವರು, ಕೊನೆಗೆ ಬೇರಿನಲ್ಲಿಯೇ ಬೆರೆಯುವವರು ಎಂಬುದನ್ನು ಸದಾ ಗಮನದಲ್ಲಿಟ್ಟುಕೊಂಡಿರಬೇಕು. ಸಮಾಜದಲ್ಲಿ ನಾವೆಲ್ಲ ಒಂದು ಎನ್ನುವದನ್ನು ಹೇಳಿಕೊಡದೇ, ಮತಾಚಾರ್ಯರನ್ನು ದೂಷಿಸಲು ಪರೋಕ್ಷವಾಗಿ ಪ್ರಚೋದಿಸಿ ಸದಾ ಮತ ಭಿನ್ನತೆಗಳಲ್ಲಿತೊಡಗಿಕೊಳ್ಳುವವರು ನಿಜಕ್ಕೂ ಬ್ರಾಹ್ಮಣರಲ್ಲ.
ಈ ಸಮಾಜದ ಯುವ ಸಮುದಾಯದ ಸ್ಥೈರ್ಯವನ್ನು, ಧೈರ್ಯವನ್ನು ರಕ್ಷಿಸಿ ಗಟ್ಟಿಯಾಗಿ ಮುನ್ನಡೆದು ಯಶಸ್ವಿಯಾಗಿ ಭವಿಷ್ಯ ರೂಪಿಸಿಕೊಳ್ಳಲು ನಮ್ಮ ಮಠಾಧೀಶರುಗಳು ಮತ ಬೇಧಗಳನ್ನು ಮರೆತು ಒಂದಾಗಬೇಕಿದೆ, ಸಂಘಟನೆಗಳು ನಾವೆಲ್ಲಬ್ರಾಹ್ಮಣರು ಎಂಬ ಸಮಾನ ಭಾವ ಹೊಂದಿ ಒಗ್ಗಟ್ಟು ರೂಪಿಸಬೇಕಿದೆ, ಬಿಡಿಯಾಗಿರುವ ಬೆರಳುಗಳು ಸಮವಾಗಿ ಸೇರಿದರೆ ಮುಷ್ಠಿ, ನಾವೆಲ್ಲ ಒಂದೇ ಎಂದರೆ ಸಮುಷ್ಠಿ ಎನ್ನುವ ಧ್ಯೇಯ ವಾಕ್ಯವೇ ನಮ್ಮ ಮನದ ಮಾತಾಗಬೇಕು ಮತವಾಗಬೇಕು.