ಸಂಗೀತ ಕ್ಷೇತ್ರದ ಅಪೂರ್ವ ಸಾಧಕ
ಸಾಧನೆ
ಕೆ.ವಿ.ವಾಸು
ಇತ್ತೀಚೆಗೆ ತಮ್ಮ 81ನೇ ಜನ್ಮ ದಿನೋತ್ಸವವನ್ನು ಆಚರಿಸಿಕೊಂಡ ದೇಶದ ಹೆಮ್ಮೆಯ ಸಂಗೀತ ವಿದ್ವಾನ್; ಹಿನ್ನೆಲೆ ಗಾಯಕ ಕಟ್ಟೆಸರಿ ಜೋಸೆಫ್ ಯೇಸುದಾಸ್ (1940ರ ಜನವರಿ 10ರಂದು ಜನನ) ಭಾರತೀಯ ಸಂಗೀತ ಕ್ಷೇತ್ರದಲ್ಲಿ ಮರೆಯಲಾಗದ ಹೆಸರು.
ತಮ್ಮ ಅಪೂರ್ವ ಕಂಠಸಿರಿಯಿಂದ ಕನ್ನಡ, ತಮಿಳು, ತೆಲುಗು, ಮಲೆಯಾಳಂ, ಬೆಂಗಾಲಿ, ಹಿಂದಿ ಸೇರಿದಂತೆ ಹಲವಾರು ಭಾರತೀಯ ಭಾಷೆಗಳಲ್ಲಿ 50 000ಕ್ಕೂ ಅಧಿಕ ಹಾಡುಗಳನ್ನು ಹಾಡಿರುವ ಯೇಸುದಾಸ್ ರಷ್ಯನ್, ಲ್ಯಾಟಿನ್ ಮುಂತಾದ ವಿದೇಶಿಭಾಷೆಗಳಲ್ಲಿ ಕೂಡ ಹಾಡಿ ಓವರ್ ಅಂತಾರಾಷ್ಟ್ರೀಯ ಸಂಗೀತ ಕಲಾವಿದರಾಗಿದ್ದಾರೆ. ಈ ಗಾನ ಗಂಧರ್ವನ ಗಾನ ಮಾಧು ರ್ಯಕ್ಕೆ ಮನ ಸೋಲದವರಿಲ್ಲ. ಸಿನಿಮಾ ಸಂಗೀತ ಹಾಗೂ ಶಾಸ್ತ್ರೀಯ ಸಂಗೀತ ಎರಡರಲ್ಲೂ ಅತ್ಯುತ್ತಮ ಪ್ರಾವೀಣ್ಯತೆ ಗಳಿಸಿ ರುವ ಈ ಗಾನ ಗಾರುಡಿಗ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಶಾಸ್ತ್ರೀಯ ಸಂಗೀತ ಕಲಿಯಲು ಪ್ರಾರಂಭಿಸಿ; ಅಂದಿನ ಪ್ರಖ್ಯಾತ ಸಂಗೀತ ವಿದ್ವಾನ್ ಚೆಂಬೈ ವೈದ್ಯನಾಥ ಭಾಗವತರ್ ಬಳಿ ಸಂಗೀತದ ಓಂಕಾರವನ್ನು ಪ್ರಾರಂಭಿಸಿ; ಇಂದು ಇಡೀ ಪ್ರಪಂಚವೇ ಮೆಚ್ಚುವ ಮೇರು ಗಾಯಕರಾಗಿದ್ದಾರೆ.
ಶಾಸ್ತ್ರೀಯ ಹಾಗೂ ಸಿನಿಮಾ ಸಂಗೀತದ ಸಂಗಮವೆಂದು ಹೇಳಬಹುದಾದ ಯೇಸುದಾಸ್; ತಮ್ಮ ಸಂಗೀತ ಸುಧೆಯ ಮೂಲಕ ದೇಶದ ಸಾಂಸ್ಕೃತಿಕ ರಾಯಭಾರಿಯಾಗಿದ್ದಾರೆ. ದೇಶಾದ್ಯಂತ ಹಾಗೂ ವಿದೇಶಗಳಲ್ಲಿ ಸಾವಿರಾರು ಸಂಗೀತ ಕಚೇರಿಗಳನ್ನುನೀಡಿರುವ ಯೇಸುದಾಸ್; ಡಾ.ರಾಜ್ ಕುಮಾರ್; ಅಮಿತಾ ಬಚ್ಚನ್ ಸೇರಿದಂತೆ ದೇಶದ ಹಲವಾರು ಸುಪ್ರಸಿದ್ಧ ನಟರಿಗೆ ಧ್ವನಿ ನೀಡಿದ್ದಾರೆ.
1962ರಲ್ಲಿ ತೆರೆಕಂಡ ಕಲ್ಪಡುಕಲ್ ಎಂಬ ಚಿತ್ರಕ್ಕೆ ಜಾತಿ ಭೇದಮ್; ಮತ ದ್ವೇಷಂ ಎಂಬ ಹಾಡನ್ನು ಹಾಡುವುದರ ಮೂಲಕ ಚಿತ್ರರಂಗ ಪ್ರವೇಶಿಸಿದ ಯೇಸುದಾಸ್ ಇದುವರೆಗೂ ವಿವಿಧ ಭಾರತೀಯ ಭಾಷೆಗಳಲ್ಲಿ 50 000ಕ್ಕೂ ಅಧಿಕ ಹಾಡುಗಳನ್ನು ಹಾಡುವ ಮೂಲಕ ದಾಖಲೆ ಬರೆದಿದ್ದಾರೆ. ಮೂಲತಃ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ್ದರೂ ಭಾರತೀಯ ಸಂಸ್ಕೃತಿ ಮತ್ತುಪರಂಪರೆಯ ಬಗ್ಗೆ ಅಪಾರವಾದ ಜ್ಞಾನ ಮತ್ತು ಗೌರವ ಹೊಂದಿರುವ ಯೇಸುದಾಸ್ ಗುರುವಾಯೂರಿನ ಕೃಷ್ಣನ ಹಾಗೂ ಕೊಲ್ಲೂರು ಮೂಕಾಂಬಿಕೆಯ ಪರಮ ಭಕ್ತ.
ಇವರ ಮೇಲೆ ಯೇಸುದಾಸ್ ಹಾಡಿರುವ ಹಾಡುಗಳು ಜಗದ್ವಿಖ್ಯಾತವಾಗಿದೆ. ಅದೇ ರೀತಿ ಅಯ್ಯಪ್ಪ ಸ್ವಾಮಿ ಮೇಲೆ ಹಾಡಿರುವ ಅಮರ ಭಕ್ತಿಗೀತೆಗಳು ಯೇಸುದಾಸ್‌ರಿಗೆ ವಿಶೇಷ ಮನ್ನಣೆ ಹಾಗೂ ಗೌರವ ತಂದುಕೊಟ್ಟಿದೆ. ಈ ಮಹಾನ್ ಗಾಯಕ ಕನ್ನಡದಲ್ಲಿ ಕೂಡ ನೂರಾರು ಮೆಚ್ಚಿನ ಗೀತೆಗಳನ್ನು ಹಾಡಿದ್ದಾರೆ. ಮರೆಯದಿರು ಆ ಶಕ್ತಿಯ ಮೆರೆಯದಿರು. ಮಾನವ (ಪಿತಾಮಹ); ಆ ಕರ್ಣನಂತೆ ನೀ ದಾನಿಯಾದೆ ( ಕರ್ಣ); ದಾರಿ ಕಾಣದೇ ಬಂದವಳೇ (ಒಂದೇ ಬಳ್ಳಿಯ ಹೂಗಳು); ಟೂ ಟೂ ಟೂ ಬೇಡಪ್ಪ (ಪ್ರೇಮಮಯಿ); ನಟನವಿಶಾರದಾ ನಟಶೇಖರ (ಮಲಯ ಮಾರುತ); ಅಂದವೋ ಅಂದವೋ ಕನ್ನಡ ನಾಡು (ಮಲ್ಲಿಗೆ ಹೂವೇ);ಕಾಲವನ್ನು ತಡೆಯೋರು ಯಾರು ಇಲ್ಲ (ಎಸ್. ಜಾನಕಿಯವರೊಂದಿಗೆ ಕಿಟ್ಟುಪುಟ್ಟು ಚಿತ್ರ); ಈ ಬಂಧನ ಜನುಮಜನುಮದ ಅನುಬಂಧನ (ಎಸ್.ಜಾನಕಿಯವರೊಂದಿಗೆ ಬಂಧನ ಚಿತ್ರ) ನಮ್ಮೂರ ಯುವ ರಾಣಿ ಕಲ್ಯಾಣವಂತೆ (ರಾಮಾಚಾರಿ); ಈ ಜಗವೊಂದು ನ್ಯಾಾಯಾಲಯ, ಇದರ ಅಧಿಕಾರಿ ಅವನೇನಯ್ಯ (ಕುಲಗೌರವ); ಜಯ ಪಾಂಡುರಂಗ ಪ್ರಭೋ ವಿಠಲ (ಸತಿ ಸಕ್ಕೂಬಾಯಿ) ಮುಂತಾದ ಹಲವಾರು ಸುಮಧುರ ಗೀತೆಗಳನ್ನು ಕನ್ನಡಿಗರು ಮರೆಯುವಂತೆಯೇ ಇಲ್ಲ.
1976ರಲ್ಲಿ ಬಿಡುಗಡೆಯಾದ ಚಿಚ್ಚೊರ್ ಚಿತ್ರದ ಗುರಿತೆರ ಗಾವುಂಗಣ ಪ್ಯಾರ ಗೀತೆ ಹಿಂದಿ ಚಿತ್ರ ರಂಗದಲ್ಲಿ ಯೇಸುದಾಸ್ ರವರಿಗೆಉತ್ತಮ ಅವಕಾಶ ಕಲ್ಪಿಸಿತು. ಈ ರೀತಿ ಯೇಸುದಾಸ್ ಓರ್ವ ಶ್ರೇಷ್ಠ ಹಾಗೂ ಅಪೂರ್ವ ಗಾಯಕರಾಗಿ; ಸುಮಾರು 60 ವರ್ಷ ಗಳಷ್ಟು ದೀರ್ಘಕಾಲದಿಂದ ಭಾರತೀಯ ಚಿತ್ರರಂಗದ ಮನೆ ಮಾತಾಗಿದ್ದಾರೆ. ಈ ಅರವತ್ತು ವರ್ಷಗಳ ಸುದೀರ್ಘ ಕಾಲಘಟ್ಟದಲ್ಲಿ ಸಾವಿರಾರು ಗಾಯಕರು ಬಂದು ಹೋಗಿದ್ದಾರೆ. ಆದರೆ ಯೇಸುದಾಸ್ ಮಾತ್ರ ಇಂದಿಗೂ ಪ್ರಸ್ತುತವಾಗಿದ್ದಾರೆ.
ಅವರ ಮಾಧುರ್ಯಪೂರ್ಣ ಧ್ವನಿ ಇಂದಿಗೂ ತನ್ನ ಸತ್ವವನ್ನು ಹಾಗೆಯೇ ಉಳಿಸಿಕೊಂಡಿದೆ. ತಮ್ಮ ಜೀವಿತ ಕಾಲದಲ್ಲೇ ದಂತ ಕಥೆಯಾಗಿರುವ ಯೇಸುದಾಸ್ ಅವರಿಗೆ 1975ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. 2002ರಲ್ಲಿ ಪದ್ಮಭೂಷಣ ಹಾಗೂ 2017ರಲ್ಲಿ ದೇಶದ ಎರಡನೇ ಅತ್ಯುಚ ನಾಗರಿಕ ಪ್ರಶಸ್ತಿಯಾದ ಪದ್ಮ ವಿಭೂಷಣ ಪ್ರಶಸ್ತಿ ನೀಡಲಾಯಿತು.
08 ಬಾರಿ ರಾಷ್ಟ್ರ ಪ್ರಶಸ್ತಿ ಹಾಗೂ 43 ಬಾರಿ ವಿವಿಧ ರಾಜ್ಯ ಸರಕಾರಗಳಿಂದ ಶ್ರೇಷ್ಠ ಗಾಯಕ ಪ್ರಶಸ್ತಿ ಪ್ರಾಪ್ತವಾಗಿದೆ. ಇವುಗಳನ್ನು ಹೊರತುಪಡಿಸಿ ಇನ್ನೂ ನೂರಾರು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಪ್ರಶಸ್ತಿಗಳನ್ನು ಮೀರಿ ನಿಂತ ಈ ಅನುಪಮ ಹಾಗೂ ಅದ್ವಿತೀಯ ಗಾಯಕನಿಗೆ ಹೃತ್ಪೂರ್ವಕ ಅಭಿನಂದನೆಗಳು.