ಚಾಡಿ ಹೇಳುವ ನಾಲಗೆಯನ್ನಲ್ಲ, ಕೇಳುವ ಕಿವಿಯನ್ನು ಕತ್ತರಿಸಬೇಕು
ದಾಸ್ ಕ್ಯಾಪಿಟಲ್
ಟಿ.ದೇವಿದಾಸ್, ಬರಹಗಾರ, ಶಿಕ್ಷಕ
ಚಾಡಿ ಹೇಳುವುದು ಮತ್ತು ಕೇಳಿಸಿಕೊಳ್ಳುವುದು – ಈ ಪ್ರಕ್ರಿಯೆಯೇ ಸೈಕಲಾಜಿಕಲ್ ಸಮಸ್ಯೆಯಿಂದ ಹುಟ್ಟುವಂಥದ್ದು.
   –        &     . ,               .. ನಾನು ಹೇಳಿದೆ ಅಂತ ಯಾರಿಗೂ ಹೇಳುವುದು ಬೇಡ. ಖಂಡಿತವಾಗಿಯೂ ಅವರು ನಿಮ್ಮ ಬಗ್ಗೆ ಈ ರೀತಿ ಹೇಳಿದ್ದು ನನಗೆ ಇಷ್ಟವಾಗಲಿಲ್ಲ.
ನಿನಗೆ ಹೇಳುವುದು ಬೇಡ ಅಂತ ಅಂದುಕೊಂಡಿದ್ದೆ. ಆದರೆ ನೀವು ನಮ್ಮವರು ಅಂತ ಪ್ರೀತಿ – ವಿಶ್ವಾಸದಲ್ಲಿ ಹೇಳುತ್ತಿದ್ದೇನೆ. ನಾನು ಅವರ ಹತ್ತಿರ ಮಾತಾಡುವಾಗ ಅವರು ನಿಮ್ಮ ಬಗ್ಗೆ ಹೀಗೆಲ್ಲ ಹೇಳುತ್ತಿದ್ದರು’- ಇದು ಚಾಡಿ ಹೇಳುವವರು ಮಾತಿಗೆ ಸುರುವಿಟ್ಟು ಕೊಳ್ಳುವ ರೀತಿ. ಚಾಡಿ ಹೇಳುವುದು ಎಂದರೆ ಒಬ್ಬರ/ನ/ಳ ಅನುಪಸ್ಥಿತಿಯಲ್ಲಿ ಅವರನ್ನೇ ದೂಷಿಸುವುದು. ಅಂದರೆ ಅವರ ಬಗ್ಗೆನೆಗೆಟಿವ್ ಆದ ರೀತಿಯಲ್ಲಿ ಅಪ್ರೋಚ್ ಮಾಡುವುದು.
ಸುಳ್ಳಿನ ಕಥೆಗಳನ್ನು ಕಟ್ಟುವುದು. ಕೇಳುವವನ ಬುದ್ಧಿ ಮತ್ತು ಮನಸ್ಸನ್ನು ಕೆಡಿಸುವುದು. ಕೇಳಿದವರ ಮನಸಲ್ಲಿ ನೆಗೆಟಿವಿಟಿ ಯನ್ನು ಚಿಗುರೊಡೆಸಿ ಸರಿಯಾದ ಸಮಯಕ್ಕೆ ಗೊಬ್ಬರ ನೀರು ಹಾಕಿ ಬೆಳೆಸುವುದು. ಒಬ್ಬರನ್ನು ಎದುರಿಸಲು ಸಾಧ್ಯವಾಗದಿzಗ, ತನ್ನನ್ನು ಎಲ್ಲರೆದುರು ಹೈಲೈಟ್ ಮಾಡಿಕೊಳ್ಳುವಾಗ, ಒಬ್ಬರ ಇಮೇಜನ್ನು ಹಾಳುಮಾಡುವಾಗ, ತಾನು ಉತ್ತಮನೆಂದು ಸ್ಥಾಪಿಸಿಕೊಳ್ಳುವಾಗ, ಅನ್ಯರ ಸಿಂಪಥಿಯನ್ನು ಗಿಟ್ಟಿಸಿಕೊಳ್ಳು ವಾಗ, ಅಂದುಕೊಂಡದ್ದನ್ನು (?) ಸಾಧಿಸುವಾಗ, ವಿರುದ್ಧ ವಾಗಿರುವ ಅಥವಾ ವಿರುದ್ಧವಾಗಿಸಿಕೊಂಡ ವ್ಯಕ್ತಿಯನ್ನು ಅವಮಾನಿಸುವಾಗ, ಮತ್ತೊಬ್ಬರ ಖ್ಯಾತಿಯನ್ನು ಕುಗ್ಗಿಸು ವಾಗ ಚಾಡಿ ಹೇಳುವುದು ಸಂಭವಿಸುತ್ತದೆ.
ಏನೂ ಆಗದೇ ಇದ್ದಾಗ ಒಂದು ನ್ಯೂಸೆನ್ಸ್ ಅಥವಾ ಇಶ್ಯೂ ಹುಟ್ಟಿಸಲು ಚಾಡಿ ಹೇಳುವುದು ನಡೆಯುತ್ತದೆ. ವಿಷಯಾಂತರಮಾಡುವುದಕ್ಕೆ, ವಿಚಾರಗಳನ್ನು ಡೈವರ್ಟ್ ಮಾಡುವುದೂ ಚಾಡಿಯ ಇನ್ನೊಂದು ಉದ್ದೇಶವಾಗಿರುತ್ತದೆ. ಇದೊಂದು ಥರ ಮನಸಿನ ಕೊಳಕಿಗೆ ಬಿಡುಗಡೆಯ ಹಾದಿಯಿದ್ದಂತೆ. ಮನಸಿನೊಳಗಿನ ಕಲ್ಮಶವನ್ನು ಹೊರಹಾಕುವ ಹೊಲಸಿನ ಸುಲಭ ಉಪಾಯ.
ಹೀಗೆ ಚಾಡಿ ಹೇಳುವುದರಿಂದ ಲಾಭವೇನು? ಆರಂಭದಲ್ಲಿ ತಾನೇನೋ ಜಯಿಸಿಬಿಟ್ಟೆ ಅನ್ನಿಸಿದರೂ ಕ್ರಮೇಣ ಚಾಡಿಕೋರ ತನ್ನ ಆತ್ಮಾಭಿಮಾನವನ್ನು, ಇದ್ದ ಪ್ರೀತಿ, ವಿಶ್ವಾಸವನ್ನು, ಗೌರವವನ್ನು ಕಳೆದುಕೊಳ್ಳುತ್ತಾನೆ. ಆರಂಭದಲ್ಲಿ ಗೆಲುವಿನ ಸೋಲು ದೊರಕಬಹುದು. ಆದರೆ ವರ್ಚಸ್ಸಿನ ಮೂಲರೂಪಕ್ಕೆ ಪೆಟ್ಟು ಬೀಳುತ್ತದೆ. ಆಪ್ತಮಿತ್ರನು ಅವರ ಹಗೆತನದ ಟಿಪ್ಪಣಿಯನ್ನು ಸ್ವೀಕರಿಸಿದರೆ ಅವರೊಂದಿಗೆ ಒಂದು ಬಿಟ್ಟುಕೊಡಲಾರದ ಬಂಧವು ಸ್ಥಾಪನೆಯಾಗಬಹುದು.
ಇಂತಹ ಯಾವುದಕ್ಕೂ ಬಾರದ ಹರಟೆಯು ಮಾನವ ಸಮುದಾಯದಲ್ಲಿ ಸಾಮಾನ್ಯವಾಗಿದೆ, ಏಕೆಂದರೆ ಜನರು ತಮ್ಮ ಮೇಲಿನ ಆರೋಪವನ್ನು ಬೇರೆಡೆಗೆ ತಿರುಗಿಸಿ ಪ್ರಾಬಲ್ಯದ ಶ್ರೇಣಿವ್ಯವಸ್ಥೆಯಲ್ಲಿ ತಮ್ಮ ಸ್ಥಾನವನ್ನು ಸ್ಥಾಪಿಸಿಕೊಳ್ಳುವುದು. ವ್ಯವಸ್ಥೆ ಯೊಳಗಿನ ಸ್ನೇಹಸೌಹಾರ್ದ ವಾತಾವರಣವನ್ನು ಒಡೆಯಲು ಇಂತಹ ಒಂದು ಚಾಡಿಮಾತು ಸಾಕಾಗುತ್ತದೆ. ಮತ್ತೊಬ್ಬರ ಕಿವಿಯಲ್ಲಿ ಇಲ್ಲಸಲ್ಲದ್ದನ್ನು ಚಾಡಿ ಹೇಳಿ ಕಿಡಿಯನ್ನು ಹೊತ್ತಿಸುವ ಸಾಕಷ್ಟು ಕುವ್ಯಕ್ತಿತ್ವಗಳು ನಮ್ಮಗಳ ನಡುವೆಯೇ ಇರುತ್ತಾರೆ. ಚಾಡಿ ಹೇಳುವುದರಿಂದ ಏನು ತೃಪ್ತಿ ಸಿಗುತ್ತದೆಂಬುದು ಹೇಳಿದವನಿಗೇ ಗೊತ್ತಾಗಬೇಕು ಬಿಟ್ಟರೆ ಮತ್ಯಾರಿಗೂ ಗೊತ್ತಾಗಲಾರದು.
ಕಂಡವರ ಬಗ್ಗೆ ಏನೇನೋ ಅಪಪ್ರಚಾರ ಮಾಡುತ್ತಾ ತಿರುಗುವುದರಿಂದ ವ್ಯಕ್ತಿಯ ಮಾನಸಿಕ ಸ್ಥಿತಿ ಹದಗೆಡುವುದಂತೂ ಸತ್ಯ, ಪರಿಸ್ಥಿತಿ ವಿಕೋಪಕ್ಕೆ ಹೋಗಿ ಸಂಘರ್ಷಗಳು ಸಂಭವಿಸುತ್ತದೆ. ಆವಾಗಲೂ ಚಾಡಿ ಹೇಳಿದವನಿಗೆ ಸ್ವಲ್ಪವೂ ಪಶ್ಚಾತ್ತಾಪ ವಾಗಲಾರದು. ಒಂಥರಾ ಎಲ್ಲದಕ್ಕೂ ಒಗ್ಗಿಕೊಳ್ಳುವ ಅಥವಾ ಎಲ್ಲವನ್ನೂ ಬಿಟ್ಟ ಹುಂಬು ಧೈರ್ಯ ಅವರಲ್ಲಿ ಅವರಿಗೇ ಗೊತ್ತಿಲ್ಲದಂತೆ ಮನೆಮಾಡಿರುತ್ತದೆ. ಈ ಹುಂಬು ಧೈರ್ಯವೇ ಚಾಡಿಗೆ ಮೂಲ!
ಅಶಿಕ್ಷಿತರು ಮಾತ್ರ ಚಾಡಿ ಹೇಳುವುದಿಲ್ಲ. ಹೇಳಿದರೂ ತಪ್ಪಲ್ಲ. ಯಾಕೆಂದರೆ ಅವರ ಚಾಡಿ ತಾತ್ಕಾಲಿಕವಾದ ಪರಿಣಾಮವನ್ನು ಕೊಡುವಂಥದ್ದು. ಅಶಿಕ್ಷಿತರ ಹೇಳುವ ಚಾಡಿಯಿಂದಾಗುವ ಅನಾಹುತಗಳಿಗಿಂತ ಹೆಚ್ಚಿನ ಡ್ಯಾಮೇಜ್ ಸುಶಿಕ್ಷಿತರ ಹೇಳುವ ಚಾಡಿಯಿಂದ ಸಂಭವಿಸುತ್ತದೆ. ಯಾಕೆಂದರೆ ಸುಶಿಕ್ಷಿತರ ಚಾಡಿಯಲ್ಲಿ ಕ್ಯಾಲ್ಕುಲೇಟೆಡ್ ಕ್ರಿಮಿನಲ್ ಬುದ್ಧಿ ಮತ್ತು ಜಾಣ್ಮೆ ಕೆಲಸ ಮಾಡಿರುತ್ತದೆ. ಇದರಿಂದಾಗಿ ಒಟ್ಟೂ ವ್ಯವಸ್ಥೆಯೇ ಬುಡಮೇಲಾಗುತ್ತದೆ.
ಚಾಡಿ ಹೇಳುವುದು ಮತ್ತು ಕೇಳುವುದು ಇದು ಮನಸಿನ ದೌರ್ಬಲ್ಯವಂತೂ ಹೌದೇ ಹೌದು. ಅದರಿಂದ ಚಾಡಿಕೋರರು ತಾತ್ಕಾಲಿಕ ಮಾನಸಿಕ ನೆಮ್ಮದಿಯನ್ನು ಪಡೆಯು ತ್ತಾರೆಂದು ಸಂಶೋಧನೆಗಳು ಹೇಳುತ್ತವೆ. ಚಾಡಿ ಹೇಳುವುದರ ಹಿಂದೆ ಎರಡು ದುರ್ಬುದ್ಧಿ ಗಳಿರುತ್ತವೆ. ಅಥವಾ ದೌರ್ಬಲ್ಯಗಳಿರುತ್ತವೆ. ಒಂದು; ತನ್ನನ್ನು ತಾನು ಉತ್ತಮ ಎಂದು ಬಿಂಬಿಸಿಕೊಳ್ಳುವುದು ಮತ್ತು  ಇನ್ನೊಂದು; ಮತ್ತೊಬ್ಬರನ್ನು ದುರ್ಬಲರನ್ನಾಗಿಸುವುದು.
ಅಂದರೆ ಮತ್ತೊಬ್ಬರಲ್ಲಿ ಹಿಂಸೆಯನ್ನೂ, ಮಾನಸಿಕ ಕ್ರೌರ್ಯವನ್ನೂ ಹುಟ್ಟಿಸುತ್ತದೆ. ಅನ್ಯರ ಮನಸನ್ನು ಕೆಡಿಸುವುದು, ಕೇಡಿ ಗೊಳಪಡಿಸುವುದು. ಗಂಭೀರವಾದ ಮಾನಸಿಕ ರೋಗದ ಇದು ಗಂಭೀರ ಸಮಸ್ಯೆಯಾಗುವುದು ಚಾಡಿಕೋರರಿಗಲ್ಲ, ಬದಲಾಗಿ ವ್ಯವಸ್ಥೆಯ ಒಟ್ಟೂ ಏರುಮುಖದ ಬೆಳವಣಿಗೆಗೆ, ಉತ್ಕರ್ಷಕ್ಕೆ! ಉನ್ನತಿಗೆ! ವ್ಯವಸ್ಥೆಯೊಂದರ ಸಮಗ್ರತೆಯ ಸ್ವಾಸ್ಥ್ಯ ಹಾಗೂ ಅನೋನ್ಯತೆಯೂ ಕೆಡುತ್ತದೆ.
ವ್ಯವಸ್ಥೆಯೊಂದರ ಅನನ್ಯತೆಗೂ ಮಸಿ ಬಳಿಯುತ್ತದೆ. ಕೌನ್ಸೆಲಿಂಗ್ ಮೂಲಕ ಇಂಥ ಮನಸನ್ನು ಸರಿ ಮಾಡಬಹುದು ಎನ್ನುತ್ತದೆಸೈಕಲಾಜಿ. ಆದರೆ, ಕೌನ್ಸೆಲಿಂಗ್‌ಕ್ಕಿಂತ ತಾನು ಮಾಡುತ್ತಿರುವುದು ತಪ್ಪು ಎಂದು ಅನಿಸಿದರೆ ಚಾಡಿಕೋರರು ಅಂಥ ದೌರ್ಬಲ್ಯ ದಿಂದ ಹೊರಬರಬಹುದು. ಇದಕ್ಕಾಗಿ ನಿರ್ಲಿಪ್ತತೆಯನ್ನು ಅನುಸರಿಸುವುದು, ನಿಯಂತ್ರಣಕ್ಕೊಳಪಡಿಸಿಕೊಳ್ಳುವದು. ಅಂಥ ಸಂದರ್ಭಗಳಿಂದ, ವ್ಯಕ್ತಿಗಳಿಂದ ದೂರವಿರುವುದು. ಮಾತಿನ ಮೇಲೆ ಹಿಡಿತ ಸಾಧಿಸುವುದು. ಅನ್ಯರ ಉಪಸ್ಥಿತಿಯಲ್ಲಿ ಅವರ ಬಗ್ಗೆ ಮಾತಾಡದೇ ಇರುವುದು. ಚಾಡಿ ಮಾತಿನ ಪರಿಣಾಮ ಕೇಳುವವರನ್ನು ಅವಲಂಬಿಸಿರುತ್ತದೆ.
ಅಷ್ಟಕ್ಕೂ ಕೇಳುವವರಿಗೆ ಸ್ವಲ್ಪಮಟ್ಟಿಗಿನ ಪ್ರಜ್ಞೆ ಇರಬೇಕು. ಯಾವುದು ಸರಿ ಯಾವುದು ತಪ್ಪು ಎಂದು ನಿರ್ಧರಿಸುವ ಯಾವುದೇ ಸೆನ್ಸ್ ಇಲ್ಲದಿದ್ದರೆ ಚಾಡಿಮಾತಿಗೆ ಜೀವ ಬರುತ್ತದೆ. ಯಾಕೆಂದರೆ, ಚಾಡಿಮಾತಿಗೆ ಜೀವ ಬರುತ್ತದೆಂದಾದರೆ ಚಾಡಿಕೋರರು ಹೆಚ್ಚಾಗುತ್ತಾರೆ. ಚಾಡಿಯ ಮಾತನ್ನು ನಂಬುವುದರ ಮೇಲೆ ಚಾಡಿ ಬೇರೆ ಬೇರೆ ರೂಪದಲ್ಲಿ ಅಭಿವ್ಯಕ್ತವಾಗುತ್ತದೆ. ಆಗ ಬೇರೆ ಬೇರೆ ರೂಪ ಮತ್ತು ಆಕೃತಿಗಳನ್ನು ಪಡೆಯುತ್ತ ಹೋಗುತ್ತದೆ.
ಹೊಸ ಹೊಸ ವಿನ್ಯಾಸವನ್ನು ತಾಳುತ್ತದೆ. ಯಾವ ಕಾಲಕ್ಕೂ ಅಧಿಕಾರದ ಸ್ಥಾನದಲ್ಲಿದ್ದವರು ಚಾಡಿ ಮಾತಿಗೆ ಕಿವಿಗೊಡ ಬಾರದು.ಮುಖ್ಯವಾಗಿ, ಯಜಮಾನಿಕೆಯಂಥ ಸ್ಥಾನ ದಲ್ಲಿರುವವರು ಚಾಡಿ ಮಾತಿನ ನಿರ್ವಹಣೆಯನ್ನು ಅರಿತಿರಬೇಕು. ಈ ನಿರ್ವಹಣೆ ಯಲ್ಲಿ ಫೇಲಾದರೆ ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂದು ಗುರುತಿಸುವುದು, ಗ್ರಹಿಸುವುದು ಅಷ್ಟು ಸುಲಭದ ಕೆಲಸವಾಗುವುದಿಲ್ಲ. ಚಾಡಿಮಾತನ್ನು ಕೇಳಿ ಇನ್ನೊಬ್ಬರ ಮೇಲೆ  ತಗೊಳ್ಳುವಾಗ ತುಂಬಾ ಜಾಗರೂಕರಾಗಿರಬೇಕಾಗುತ್ತದೆ.
ಒಂದು ಮಹತ್ವದ ತೀರ್ಮಾನವನ್ನು ತೆಗೆದುಕೊಳ್ಳುವಾಗ ಎಲ್ಲರ ಸಲಹೆ ಸೂಚನೆಗಳನ್ನು ತೆಗೆದುಕೊಂಡು ಕೊನೆಯಲ್ಲಿ ಅಂತಿಮ ತೀರ್ಮಾನವನ್ನು ತಾನೇ ತೆಗೆದುಕೊಳ್ಳುವುದು ಬುದ್ಧಿವಂತನ ಲಕ್ಷಣ. ಮುಖ್ಯವಾಗಿ ಚಾಡಿಯಾಗಲಿ, ಅಥವಾ ಸರಿಯಾದಮಾತುಗಳೇ ಆಗಲಿ ಎಲ್ಲ ಬಗೆಯ ದೃಷ್ಟಿಕೋನದಿಂದಲೂ ವಿವೇಚಿಸುವ ಪ್ರಜ್ಞೆ ಯಜಮಾನನಿಗೆ ಇದ್ದರೆ ಆಗಬಹುದಾದಅನಾಹುತವನ್ನು ತಪ್ಪಿಸಬಹುದು, ಅಥವಾ ಅದರಿಂದ ಪಾರಾಗಬಹುದು.
ಹಾಗಂತ ದೂರುಗಳು ಚಾಡಿಯಾಗುವುದಿಲ್ಲ. ದೂರುಗಳಲ್ಲಿ ಇರುವುದು ನೇರ ಅಭಿವ್ಯಕ್ತಿ ಹಾಗೂ ವಾಸ್ತವ ಪ್ರಜ್ಞೆ ಸರಿಯಿಲ್ಲ ದ್ದನ್ನು ಸರಿಪಡಿಸಬೇಕೆಂಬ ಸ್ವಸ್ಥ ಮನಸಿನ ಎದೆಗಾರಿಕೆ. ದೂರು ಕೊಡುವುದಕ್ಕೂ ಸಮರ್ಥ ಆಧಾರಗಳು ಬೇಕು. ಸಾಕ್ಷ ಗಳು ಗಟ್ಟಿಯಾಗಿರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸರ್ವ ಸನ್ನದ್ಧತೆ ಬೇಕು. ಕೊಡುವ ದೂರಿನಿಂದ ಎದುರಾಗಬಹುದಾದ ಸವಾಲು ಗಳಿಗೆ, ಪ್ರಶ್ನೆಗಳಿಗೆ ಎದುರಾಗುವ ಚಾಕಚಾಕ್ಯತೆ ಇರಬೇಕಾಗುತ್ತದೆ.
ಚಾಡಿಗೆ ಇಂಥ ಯಾವ ಅನಿವಾರ್ಯ ಅಗತ್ಯಗಳೂ ಬೇಕಿಲ್ಲ. ಚಾಡಿಗೆ ಯಾರ ಹಂಗೂ ಇರಲಾರದು. ಅದು ಯಾರನ್ನೂ ಗುರಿ ಯಾಗಿಸಬಲ್ಲದು, ಸಂಬಂಧವೇ ಇಲ್ಲದ್ದನ್ನು ಸ್ಪರ್ಶಿಸಿ ಹಾಳುಮಾಡಬಲ್ಲುದು ಹೊಲಸನ್ನು ಹರಡಿಕೊಂಡಂತೆ. ಸತ್ಯಗಳು ಚಾಡಿಯಾಗುವುದಿಲ್ಲ. ಸತ್ಯ ಹೇಳುವುದೂ ಚಾಡಿಯಾಗುವುದಿಲ್ಲ. ಹೇಳುವ ಸತ್ಯದಿಂದ ಪಾಸಿಟಿವ್ ಆದ ಪ್ರತಿಕ್ರಿಯೆಗಳು ಬೆಳವಣಿಗೆಗಳು ಸಂಭವಿಸುತ್ತದೆಂದಾದರೆ ಸತ್ಯವನ್ನೂ ಚಾಡಿಯ ರೂಪದಲ್ಲಿ ಹೇಳಬೇಕಾಗುತ್ತದೆ.
ಹೇಳಬಹುದು. ಹೇಳಿದರೆ ಅದು ಚಾಡಿಯೆನಿಸಲಾರದು. ತಪ್ಪೂ ಆಗಲಾರದು. ಯಾಕೆಂದರೆ ಅದು ಸಮಷ್ಟಿಯ ಹಿತವನ್ನು ಬಯಸಿಯೇ ಆದ ಮಾತಿನ ಕ್ರಿಯೆಯಾಗಿರುತ್ತದೆ. ಮೇಲಾಗಿ ಅದು ಸತ್ಯವೇ ಆಗಿರುತ್ತದೆ. ಸತ್ಯಕ್ಕೆ ಮುಖಗಳು ಒಂದೇ! ದೂರಿಗೂ ಮುಖ ಒಂದೇ! ಸತ್ಯ ಯಾವಾಗಲೂ ಸುಳ್ಳಿನ ಮುಖವನ್ನು ಧರಿಸಲಾರದು. ಸುಳ್ಳು ಆರಂಭದಲ್ಲಿ ಸತ್ಯದಂತೆ ಮುಖಧಾರಣೆ ಮಾಡಿದರೂ ಸತ್ಯದ ವೇಷವನ್ನು ಸ್ಥಿರತೆಯನ್ನು ಹೊಂದಲಾರದು. ಸತ್ಯವಾಗಲಾರದು.
ಮುಖವಾಡ ಬಯಲಾಗಿ ಕೊನೆಯಲ್ಲಿ ಸತ್ಯ ಹೊರಬರಲೇ ಬೇಕು. ಗೆಲ್ಲಲೇಬೇಕು. ಸುಳ್ಳನ್ನೂ ಹೇಳಬಹುದು; ಎಲ್ಲರ, ಎಲ್ಲದರ ಒಳಿತಿಗಾಗಿ ಮಾತ್ರ. ಅಶ್ವತ್ಥಾಮೋ ಹತಃ ಕುಂಜರಃ ಎಂಬಲ್ಲಿ ಕುಂಜರ ಎಂಬುದು ಕೇಳಿಲ್ಲವಾಗಿ ಧರ್ಮರಾಜ ಸುಳ್ಳು ಹೇಳಿದ ಎನ್ನಲು ಸಾಧ್ಯವಿಲ್ಲ. ಅದು ಕೃಷ್ಣನ ತಂತ್ರವಾಗಿದ್ದರೂ ಸಮಷ್ಟಿಯ ಹಿತವನ್ನು ಬಯಸಿತ್ತು. ಹಾಗಂತ ಮಂಥರೆ, ಶಕುನಿ ಹೇಳಿದ್ದು ಸುಳ್ಳು ಅಷ್ಟೇ ಅಲ್ಲ, ವಿಧ್ವಂಸಕರೂಪದ ಚಾಡಿಯಾಗಿತ್ತು.
ಇವರುಗಳ ಚಾಡಿಮಾತುಗಳಿಂದ ಭೀಕರ ಯುದ್ಧಗಳೇ ಸಂಭವಿಸಿ ದುಷ್ಟರು ಮಾತ್ರ ಸಾಯಲಿಲ್ಲ. ಅಸಂಖ್ಯ ಯೋಧರು ಯಾವ ಕಾರಣವೂ ಇಲ್ಲದೆ ಸತ್ತರು. ಮಕ್ಕಳು ಅನಾಥರಾದರು. ವಯಸ್ಸಾದವರು ನಿರ್ಗತಿಕ ರಾದರು. ಅದೆಷ್ಟೋ ಎಳೆವಯಸ್ಸಿನ ಹೆಣ್ಣುಮಕ್ಕಳು ವಿಧವೆ ಯರಾದರು. ಸಾಮ್ರಾಜ್ಯಗಳು ಸರ್ವನಾಶವಾದವು. ಒಂದು ಕೆಟ್ಟ ಮಾತಿನಿಂದ ಏನೆಲ್ಲ ಅನಾಹುತಗಳು ಪರಿಣಾಮಗಳು ಭವಿಸಬಹುದು ಎಂಬುದಕ್ಕೆ ಚರಿತ್ರೆಯ ಅನೇಕ ದೃಷ್ಟಾಂತಗಳು ಕಣ್ಣಮುಂದೆಯೇ ಇರುವಾಗ ಮಾತುಮನೆಯನ್ನಷ್ಟೇ ಅಲ್ಲ, ಮನವನ್ನು, ತನ್ಮೂಲಕ ಎಲ್ಲ ಬಗೆಯ ಸಂಬಂಧವನ್ನು ಕಡಿದುಹಾಕುವ ಶಕ್ತಿಯನ್ನು ಹೊಂದಿದೆಯೆಂಬುದನ್ನು ಅರಿತರೆ ಬದುಕು ಚೆನ್ನಾದೀತು. ಬಾಳು ಸುಗಮವಾದೀತು!
ಕೊನೆಯ ಮಾತು:ಎಲ್ಲಾ ಕೇಳಿದ ಕಥೆಯನ್ನು ಹೇಳಬೇಕೆನಿಸುತ್ತದೆ: ಒಮ್ಮೆ ಸತ್ಯ ಮತ್ತು ಸುಳ್ಳು ತಮ್ಮ ತಮ್ಮ ಬಟ್ಟೆಗಳನ್ನು ದಡದಲ್ಲಿ ಕಳಚಿಟ್ಟು ನೀರಿನಲ್ಲಿ ಈಜಲು ಹೋದವಂತೆ. ಈಜಿನ ಮಧ್ಯೆ ಸುಳ್ಳಿಗೆ ಸತ್ಯದ ಬಟ್ಟೆಯನ್ನು ತೊಡಬೇಕು ಎಂದೆನಿಸಿ ತಂತೆ. ನೀರಿನಲ್ಲಿ ಮುಳುಗಿ ಕೊಂಡಿರುವ ಸತ್ಯಕ್ಕೆ ಕಾಣದ ಹಾಗೆ ಸತ್ಯದ ಬಟ್ಟೆಯನ್ನು ತೊಟ್ಟುಕೊಂಡು ಈಜನ್ನು ಮುಂದು ವರಿಸಿತಂತೆ. ಸ್ವಲ್ಪ ಸಮಯದ ಅನಂತರ ದಡಕ್ಕೆ ಬಂದ ಸತ್ಯಕ್ಕೆ ತನ್ನ ಬಟ್ಟೆಯನ್ನು ಸುಳ್ಳು ತೊಟ್ಟಿಕೊಂಡಿದ್ದು ಗೊತ್ತಾಯಿ ತಂತೆ.
ಸುಳ್ಳಿನ ಬಟ್ಟೆಯನ್ನು ತೊಟ್ಟುಕೊಳ್ಳುವ ಬದಲು ತಾನು ಬೆತ್ತಲೆಯಾಗೇ ನೀರಿನಲ್ಲಿ ವಾಸವಾಗಿರುವುದು ವಾಸಿ ಎಂದುಕೊಂಡು ನೀರಿನ ಉಳಿಯಲು ತೀರ್ಮಾನಿಸಿತಂತೆ. ಅಂದಿನಿಂದ ಸತ್ಯದ ಗೈರಿನಲ್ಲಿ ಸುಳ್ಳು ವಿಜೃಂಭಿಸುತ್ತಲೇ ಇದೆ. ಇಂದು ನಾವು ಕಾಣು ತ್ತಿರುವುದು ಸುಳ್ಳಿನ ಪ್ರಪಂಚವನ್ನು! ಸತ್ಯದ ಬಟ್ಟೆಯನ್ನು ತೊಟ್ಟ ಸುಳ್ಳಿನ ಪ್ರಪಂಚವನ್ನು! ಸತ್ಯವನ್ನು ಹುಡುಕಬೇಕಿದೆ.