ಧರಣಿ ನಿರತ ರೈತರು ಯೋಚಿಸಬೇಕು
ಅಭಿವ್ಯಕ್ತಿ
ಡಾ.ಆರ್‌.ಜಿ.ಹೆಗಡೆ
ಜಗತ್ತನ್ನೇ ನಿಬ್ಬೆರಗಾಗಿಸಿರುವುದು ನಮ್ಮ ದೇಶದ ರೈತರ ಸ್ಮಯಕಾರಿ ಸಾಧನೆ. ಏನೆಂದರೆ ನೂರ ಮೂವತ್ತು, ನಲವತ್ತು ಕೋಟಿ ಜನ ಮತ್ತು ಅವರನ್ನು ಅವಲಂಬಿಸಿದ ಜಾನುವಾರುಗಳು ಪ್ರತಿದಿನ ಹೊಟ್ಟೆ ತುಂಬ ಉಂಡು ಸುಖವಾಗಿರುವಷ್ಟು ದವಸ ಧಾನ್ಯಗಳನ್ನು, ಕೃಷಿ ಉತ್ಪನ್ನಗಳನ್ನು ಅವರು ಬೆಳೆಯುವುದು.
ಹಾಗೆಯೇ ಪ್ರತಿವರ್ಷ ಆಸ್ಟ್ರೇಲಿಯಾದ ಒಟ್ಟಾರೆ ಜನಸಂಖ್ಯೆಯಷ್ಟು ಹೆಚ್ಚುವ ನಮ್ಮ ಜನರಿಗೆ ಊಟ ಬಡಿಸಲು ಹೆಚ್ಚು ಹೆಚ್ಚು ಬೆಳೆಯುತ್ತಲೇ ಹೋಗಿರುವುದು. ಕರೋನಾ ಸಂದರ್ಭದಲ್ಲಿ ಕೂಡ ಜನ ಹಸಿದು ಮಲಗಲಿಲ್ಲ. ಹಾಗೆಂದು ಸ್ವಾತಂತ್ರ್ಯದ ಸುತ್ತಮುತ್ತಲಿನ ವರ್ಷಗಳಲ್ಲಿ ನಮ್ಮಲ್ಲಿ ತೀವ್ರ ಬರಗಾಲವಿತ್ತು. ಜನ ಹಸಿವಿನಿಂದ ಸಾವಿಗೀಡಾದ ಸಂದರ್ಭಗಳಿದ್ದವು. ಆದರೆ ಚಮತ್ಕಾರ ಮಾಡಿದಂತೆ ಕೆಲವೇ ದಶಕಗಳಲ್ಲಿ ಆಹಾರ ಕೊರತೆಯ ದೇಶವನ್ನು ಆಹಾರದ ಸರ್ಪ್ಲಸ್ ದೇಶವನ್ನಾಗಿಸಿದವರು ನಮ್ಮ ರೈತರು.
ವರದಿಗಳ ಪ್ರಕಾರ ಇಂದು ದೇಶದಲ್ಲಿ ಇರುವ ಕೊರತೆ ಆಹಾರ ಧಾನ್ಯಗಳದ್ದಲ್ಲ. ಆಹಾರ ಸಂಗ್ರಹಿಸಿಡುವ ಗೋಡೌನ್‌ಗಳದ್ದು. ಇನ್ನೂ ಗಮನಿಸಿ, ಬೇರೆ ಸಾಮಾನುಗಳ ಬೆಲೆಗೆ ಹೋಲಿಸಿದರೆ ದಿನಸಿ ಸಾಮಾನುಗಳ ಬೆಲೆ ದೇಶದಲ್ಲಿ ಕಡಿಮೆಯೇ. ಹಣದುಬ್ಬರದ ನಡುವೆಯೂ ಅಕ್ಕಿ, ಗೋಧಿಯ ಬೆಲೆ ಹೆಚ್ಚು ಕಡಿಮೆ ಸ್ಥಿರವಾಗಿದೆ. ಇಂತಹ ಅದ್ಭುತವನ್ನು ಸಾಧ್ಯವಾಗಿಸಿರುವವರು ನಮ್ಮರೈತರು. ಮತ್ತೆ ನಮಗೆ ಗೊತ್ತಿದೆ. ರೈತಾಪಿ ಸುಲಭವಲ್ಲ. ಬೆಳೆ ತೆಗೆಯುವುದು ಒಂದರ್ಥದಲ್ಲಿ ಪ್ರಕೃತಿಯ ವಿರುದ್ಧದ ಹೋರಾಟ. ಅಲ್ಲಿ ಅತಿವೃಷ್ಟಿ, ಅನಾವೃಷ್ಟಿ, ಕೀಟಬಾಧೆ, ಪ್ರಾಣಿಗಳ ಕಾಟ, ಕಳೆಗಳ ಬಾಧೆ, ರೋಗಬಾಧೆಯಂತಹ ನೂರಾರು ಸಮಸ್ಯೆ ಗಳಿರುತ್ತವೆ.
ಬೀಜ ಊರುವುದರಿಂದ ಹಿಡಿದು, ಬೆಳೆ ಕೊಯ್ಯುವ ತನಕವೂ ಹೆಜ್ಜೆಹೆಜ್ಜೆಗೂ ರೈತ ಸಮಸ್ಯೆ ಎದುರಿಸಬೇಕಾಗುತ್ತದೆ. ಮತ್ತೇ ಹೀಗೆ ಕಷ್ಟಪಟ್ಟು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತದೆ ಎಂದು ಹೇಳಲಾಗುವುದಿಲ್ಲ. ಮಧ್ಯವರ್ತಿಗಳು ಎಲ್ಲವನ್ನೂ ತಿಂದುಕೊಂಡು ಹೋಗುತ್ತಾರೆ. ಮಾರುಕಟ್ಟೆಯಲ್ಲಿರುವ ಬೆಲೆ ಕೃಷಿಕರಿಗೆ ಸಿಗುವುದೇ ಇಲ್ಲ. ಉದಾಹರಣೆಗೆ ಒಂದು ಬಾಳೆ ಹಣ್ಣಿಗೆ ಮಾರುಕಟ್ಟೆ ಯಲ್ಲಿ ಐದು ರುಪಾಯಿ ಇದ್ದರೆ ಬೆಳೆಗಾರನಿಗೆ ಐವತ್ತು ಪೈಸೆಯೂ ಸಿಗುವುದಿಲ್ಲ.
ಮತ್ತೆ ಹಳ್ಳಿಗಳಿಂದ ಬೆಳೆ ಹೊರತರುವುದು ಕಷ್ಟ. ಸೂಕ್ತ ರಸ್ತೆಗಳಿಲ್ಲ. ಕೃಷಿಗೆ ನೀರು ಪೂರೈಕೆ ಸರಿಯಾಗಿರುವುದಿಲ್ಲ. ವಿದ್ಯುತ್ ಕೈಕೊಡುತ್ತದೆ. ಮತ್ತೆ ಪರಂಪರಾಗತವಾಗಿ ಪಾಲಾಗುವ ಭೂಮಿಯಿಂದಾಗಿ ಹಿಡುವಳಿ ಚಿಕ್ಕದಾಗುತ್ತಲೇ ಬಂದಿದೆ. ಮಕ್ಕಳಿಗೆ ಶಿಕ್ಷಣ ನೀಡಲು ಶಾಲೆಗಳು ಹತ್ತಿರವಿರುವುದಿಲ್ಲ. ಜ್ಞಾನ, ಮಾಹಿತಿ ಅವರನ್ನು ಬೇಗ ತಲುಪುವುದಿಲ್ಲ. ಇಂಟರ್‌ನೆಟ್ ಸೌಲಭ್ಯ ಸಿಕ್ಕೇ ಬಿಡುತ್ತದೆಂದು ಹೇಳಲಾಗುವುದಿಲ್ಲ. ಸರಕಾರಗಳು ಆರಂಭಿಸಿರುವ ಒಂದು ರುಪಾಯಿಗೆ ಕೆಜಿ ಅಕ್ಕಿ, ನರೇಗಾ ಇತ್ಯಾದಿಯೋಜನೆಗಳು ಬಡವರಿಗೆ ಸಹಾಯ ಮಾಡಿವೆ ನಿಜ.
ಆದರೆ, ಅದರಿಂದಾಗಿ ಕೃಷಿಗೆ ಕಾರ್ಮಿಕರು ಸಿಗುತ್ತಿಲ್ಲ. ಸಿಗುವ ಕಾರ್ಮಿಕರ ಉತ್ಪಾದನಾ ಸಾಮರ್ಥ್ಯ ಕಡಿಮೆ. ಆಧುನಿಕ ಕೃಷಿಗೆ ಹೋಗುವಷ್ಟು ಬಂಡವಾಳ ರೈತರ ಕೈಯಲ್ಲಿಲ್ಲ. ಹೀಗಾಗಿ ಸಾಧಾರಣವಾಗಿ ದೇಶದಲ್ಲಿ ರೈತರ ಬದುಕು ದುಸ್ತರವಾದುದು. (ಈಭಾವನೆ ಸಮಾಜದಲ್ಲಿ ಎಷ್ಟು ಆಳವಾಗಿ ಮೂಡಿದೆಯೆಂದರೆ ಕೃಷಿಕರನ್ನು ಮದುವೆಯಾಗಲು ಹುಡುಗಿಯರು ಸಿದ್ಧರಿಲ್ಲ.) ಹೀಗಾಗಿ ಸರ್ವಾನುಮತ ಇರುವುದೆಂದರೆ ಕೃಷಿಕರ ಬದುಕು ಬದಲಾಗಬೇಕು.
ಅವರ ಬಳಿ ಹಣ ಬರಬೇಕು. ಕೃಷಿ ಲಾಭದಾಯಕವಾಗದಿದ್ದರೆ ದೇಶದ ಬೆಳವಣಿಗೆ ಸಾಧ್ಯವಿಲ್ಲ. ಏಕೆಂದರೆ ಇನ್ನೂ ಅತಿ ಹೆಚ್ಚು ಉದ್ಯೋಗಗಳನ್ನು ಒದಗಿಸುವುದು ಮಾತ್ರ ಕೃಷಿಯೇ. ಈ ಹಿನ್ನೆಲೆಯಲ್ಲಿ ಕೃಷಿ ಮೂಲಭೂತ ಸೌಲಭ್ಯ ಅಭಿವೃದ್ಧಿಯಲ್ಲಿ ಹೆಚ್ಚುಸಂಪನ್ಮೂಲ ತೊಡಗಬೇಕು. ಅವಶ್ಯವಿದ್ದಲ್ಲಿ ಕಾನೂನಾತ್ಮಕ ಸುಧಾರಣೆ ತರಬೇಕು. ರೈತರ ಕೈಯಲ್ಲಿ ಹೆಚ್ಚು ಹಣ ಬರುವಂತಹ ನೀತಿಗಳನ್ನು ಜಾರಿಗೊಳಿಸಬೇಕು.
ಸಂತೋಷವೆಂದರೆ ಈ ದಿಸೆಯಲ್ಲಿ ಸರಕಾರಗಳು ಗಂಭೀರವಾಗಿ ಕೆಲಸ ಮಾಡುತ್ತಿವೆ. ಮುಖ್ಯಮಂತ್ರಿ ಯಡಿಯೂರಪ್ಪ ಕೃಷಿ ಬಜೆಟ್ ಅನ್ನೇ ಮಂಡಿಸಿದರು. ರಾಮಕೃಷ್ಣ ಹೆಗಡೆ ಅವರು ಕೃಷಿಕರಿಗೆ ಹಸಿರು ಕಾರ್ಡ್ ತಂದರು. ಈಗ ಮುಂದೆ ಹೋಗಿರುವಕೇಂದ್ರ ಸರಕಾರ ಅದು ಹೇಳುವಂತೆ ಕೃಷಿ ಮಾರುಕಟ್ಟೆಯಲ್ಲಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲು,  ರೈತರ ಆರ್ಥಿಕತೆಯ ಮಟ್ಟವನ್ನು ದ್ವಿಗುಣಗೊಳಿಸುವ ಸಲುವಾಗಿ ಮೂರು ಹೊಸ ಕಾಯಿದೆಗಳನ್ನು ಜಾರಿಗೆ ತಂದಿದೆ. ಈ ಕಾಯಿದೆಗಳನ್ನು ತರುವ ವಿಚಾರವನ್ನು ಅದು ಚುನಾವಣಾ ಪ್ರಣಾಳಿಕೆಯಲ್ಲಿ ಹೇಳಿಕೊಂಡಿತ್ತು.
ಹಲವು ಪಕ್ಷಗಳು ಕೂಡ ಇದೇ ಆಶ್ವಾಸನೆ ನೀಡಿದ್ದವು. ಸರಕಾರ ಹೇಳುವಂತೆ ಈ ಕಾನೂನುಗಳ ಉದ್ದೇಶ ಕೃಷಿಕರ ಉತ್ಪನ್ನವನ್ನು ದ್ವಿಗುಣಗೊಳಿಸುವುದು. ಮಧ್ಯವರ್ತಿಗಳ ಹಾವಳಿಯನ್ನು ತೊಲಗಿಸುವುದು. (ಅದು ಹೇಳುವಂತೆ) ಇದೇ ಉದ್ದೇಶದಿಂದಲೇ ಅದು ಕೃಷಿ ಮಾರುಕಟ್ಟೆಯನ್ನು ಖಾಸಗಿ ಕ್ಷೇತ್ರಕ್ಕೆ ತೆರೆದಿದೆ. ಅಂದರೆ ರೈತರು ತಮ್ಮ ಉತ್ಪನ್ನ ಗಳನ್ನು ಎಲ್ಲಿ, ಯಾರಿಗೆ ಬೇಕಾದರೂ ಮಾರಬಹುದು, ಹೆಚ್ಚು ಬೆಲೆ ದೊರೆಯುವಲ್ಲಿ.
ಹಾಗೆಂದು ಇಷ್ಟು ಕಾಲ ನಡೆದು ಬಂದಿದ್ದ ಮಂಡಿ ವ್ಯವಸ್ಥೆಯೂ ಮುಂದುವರಿಯಲಿದೆ. ಕನಿಷ್ಠ ಬೆಂಬಲ ಬೆಲೆಯ ಸೌಲಭ್ಯವೂ ಮುಂದುವರಿಯಲಿದೆ. ಕೇಂದ್ರ ಸರಕಾರ ಹೇಳಿರುವಂತೆ ರೈತರಿಗೆ ಇದು ಒಂದು ಹೊಸ ಅವಕಾಶ. ಹಾಗೆಯೇ ಹೊಸ ಮಸೂದೆಗಳು ಕಾಂಟ್ರ್ಯಾಕ್ಟ್ ಕಮಿಂಗ್‌ಗೂ ಸಹಜವಾಗಿಯೇ ಅವಕಾಶ ನೀಡುತ್ತವೆ. ಅಂದರೆ ರೈತ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಬೆಳೆ ಬೆಳೆದು ಅದನ್ನು ಪೂರ್ವ ನಿರ್ಧರಿತ ಬೆಲೆಯಲ್ಲಿ ಖಾಸಗಿಯವರಿಗೆ ಮಾರಬಹುದು. ಇದರಿಂದಾಗಿ ರೈತನಿಗೆ ಬಂಡವಾಳ ಮತ್ತು ಹೊಸ ತಾಂತ್ರಿಕತೆ ಲಭ್ಯವಾಗುತ್ತದೆ. ಹೀಗಿರುವುದರಿಂದ ಈ ಕಾನೂನುಗಳು ರೈತರ ಆರ್ಥಿಕತೆಯನ್ನು ಸಂಪೂರ್ಣವಾಗಿ ಬದಲಾಯಿಸುತ್ತವೆ ಎನ್ನುವುದು ಕೇಂದ್ರ ಸರಕಾರದ ವಾದ. ಈ ವಾದಕ್ಕೆ ಹಲವು ಕೃತಜ್ಞರ ಬೆಂಬಲದೆ.
ಹಲವು ರೈತ ಸಂಘಟನೆಗಳದೂ ಬೆಂಬಲದೆ. ಇಂಟರ್ ನ್ಯಾಷನಲ್ ಮೊನೆಟರಿ ಫಂಡ್ ಕಾಯಿದೆಗಳನ್ನು ಹೊಗಳಿದೆ. ಆದರೆ ಯಾಕೋ ವಿಶೇಷವಾಗಿ ಪಂಜಾಬಿನ ರೈತರು ಕೇಂದ್ರ ಸರಕಾರದ ಈ ಕ್ರಮಗಳ ಬಗ್ಗೆ ಕ್ಷೋಭೆಗೊಂಡಿದ್ದಾರೆ. ಐವತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಬಂದು ದೆಹಲಿಯ ಬಾಗಿಲಿನಲ್ಲಿ ಬೀಡುಬಿಟ್ಟಿದ್ದಾರೆ. ಕಾನೂನುಗಳನ್ನು ವಿರೋಧಿಸಿ ಧರಣಿ ಕುಳಿತಿದ್ದಾರೆ. ತಿಂಗಳುಗಟ್ಟಲೇ ಆಗಿ ಹೋದವು. (ಅವರನ್ನು ಗೌರಿವಿಸಬೇಕು) ಏಕೆಂದರೆ ಧರಣಿ ಇಲ್ಲಿಯತನಕ ವಂತೂ ಶಾಂತಿಯುತವಾಗಿಯೇ ಇದೆ.
ಅಲ್ಲದೆ ಅವರು ಕೇಂದ್ರ ಸರಕಾರ ಕರೆದ ಸಭೆಗಳಿಗೆ ಹಾಜರಾಗುತ್ತಿದ್ದಾರೆ. ಅವರ ಕೆಲವು ಬೇಡಿಕೆಗಳನ್ನು  ಕೇಂದ್ರ ಸರಕಾರ ಈಗಾಗಲೇ ಒಪ್ಪಿಕೊಂಡಿದೆ ಕೂಡ. ಆದರೆ, ಮಧ್ಯದಲ್ಲಿ ಒಂದು ಜಟಿಲ ಸಮಸ್ಯೆಎದುರಾಗಿದೆ. ಏನೆಂದರೆ ರೈತರು ಕಾನೂನು ಗಳನ್ನು ತಾವು ಒಪ್ಪುವುದಿಲ್ಲ. ಮಸೂದೆಗಳು ದೊಡ್ಡ ಕಂಪನಿಗಳಿಗೆ, ಕೃಷಿ ಮಾರುಕಟ್ಟೆಯನ್ನು, ಕ್ಷೇತ್ರವನ್ನು ತೆರೆಯಲಿವೆ. ಮತ್ತೆ ಕಾಂಟ್ರಾಕ್ಟ್-ಮಿಂಗ್‌ನ ಹೆಸರಿನಲ್ಲಿ ಕ್ರಷಿಭೂಮಿ ಉಳ್ಳವರ ಪಾಲಾಗಲಿದೆ.
ಏಕೆಂದರೆ ಬಡರೈತನಿಗೆ ಖಾಸಗಿಯವರು ನೀಡುವ ಆಮಿಶ ತಡೆದುಕೊಳ್ಳುವ ಶಕ್ತಿ ಇಲ್ಲ. ಅಲ್ಲದೆ ನಮ್ಮ ರೈತರ ಬಳಿ, ಖಾಸಗಿ ಯವರ ಬಳಿ ವ್ಯವಹರಿಸುವಷ್ಟು ಕಾನೂನು ಮತ್ತು ಹಣಕಾಸು ಜ್ಞಾನವಿಲ್ಲ. ಹೀಗಾಗಿ ಈ ಕಾನೂನುಗಳನ್ನು ಸಾರಾಸಗಟಾಗಿ ಕೇಂದ್ರ ಸರಕಾರ ಹಿಂಪಡೆಯಬೇಕು ಎಂಬ ವಾದ ಹಿಡಿದು ಕುಳಿತಿದ್ದಾರೆ. ರೈತರ ವಾದದಲ್ಲಿ ಸತ್ಯಾಂಶಗಳು ಇರಬಹುದು.
ಪ್ರಜಾಪ್ರಭುತ್ವದಲ್ಲಿ ಧರಣಿ ಕುಳಿತವರ ಮಾತುಗಳಿಗೆ ಬೆಲೆ ಕೊಡುವುದು ಸರಕಾರದ ಕರ್ತವ್ಯವೇ. ಅದೆಲ್ಲ ಸರಿಯೇ! ಆದರೆ, ಗಂಭೀರ ಸಮಸ್ಯೆ ಉಂಟಾಗಿರುವುದು ಕಾನೂನುಗಳನ್ನು ಕೇಂದ್ರ ಸರಕಾರ ಹಿಂಪಡೆಯಬೇಕು ಎಂಬ ರೈತರ ಬೇಡಿಕೆಯ ಕಠೋರತೆಯಲ್ಲಿ. ಯಾಕೆಂದರೆ ಒಂದು ವಿಷಯ ರೈತರು ಅರಿಯಬೇಕಿತ್ತು. ಏನೆಂದರೆ ಇಂತಹ ಸಂಕೀರ್ಣ ವಿಷಯಗಳಲ್ಲಿ ಸರಕಾರಗಳು ಜನಧರಣಿ ಕುಳಿತಿದ್ದಾರೆಂದು ನಿಂತ ಮೆಟ್ಟಿನಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳಲಾಗುವುದಿಲ್ಲ. ವಿಷಯಗಳನ್ನು ಕೂಲಂಕುಷವಾಗಿ ಪರಿಶೀಲಿಸಬೇಕಾಗುತ್ತದೆ.
ರೈತರು ಎತ್ತಿರುವ ಸೂಕ್ಮ ಪ್ರಶ್ನೆಗಳಿಗೆ ಮತ್ತೊಮ್ಮೆ ತಜ್ಞ ಮಾರ್ಗದರ್ಶನ ಪಡೆಯಬೇಕಾಗುತ್ತದೆ. ಜಾರಿಗೆ ಬಂದಿರುವ ಕಾನೂನನ್ನು ರಾತ್ರಿ ಬೆಳಗಾಗುವ ತನಕ ರಿವರ್ಸ್ ಮಾಡುವುದು ಸುಲಭವಲ್ಲ. ದೇಶವೊಂದು ತನ್ನ ಪಾರ್ಲಿಮೆಂಟ್ ಶಾಸನಬದ್ಧವಾಗಿ ಬಹುಮತದಿಂದ ಅಂಗೀಕರಿಸಿದ ರಾಷ್ಟ್ರಪತಿಗಳಿಂದಲೂ ಅಂಕಿತವಾಗಿ ಹೋದ ಕಾನೂನನ್ನು ದೇಶದ ಐವತ್ತು ಸಾವಿರ ಜನ ವಿರೋಧಿಸಿ, ಧರಣಿ ಕುಳಿತಿದ್ದಾರೆ ಎನ್ನುವ ಕಾರಣಕ್ಕೆ ಒಮ್ಮೆಲೇ ವಾಪಸ್ ಪಡೆಯಲಾಗುತ್ತದೆಯೇ? ಒಮ್ಮೆ ಹಾಗೆ ಮಾಡಿದರೆಅಂತಾರಾಷ್ಟ್ರೀಯವಾಗಿ ದೇಶದ ಪಾರ್ಲಿಮೆಂಟ್‌ಗೆ, ಕೌನ್ಸಿಲ್ ಆಫ್ ಮಿನಿಸ್ಟರ್ಸ್‌ಗೆ, ಅಲ್ಲದೆ ರಾಷ್ಟ್ರಪತಿಗಳಿಗೂ ಕೂಡ ಅವಮಾನವಾಗುವುದಿಲ್ಲವೇ? ಇನ್ನೊಂದು ವಿಷಯ ಏನೆಂದರೆ, ಒಮ್ಮೆ ಈಗ ಒತ್ತಡದಲ್ಲಿ ಕಾನೂನುಗಳನ್ನು ಹಿಂದೆ ಪಡೆದು ಬಿಟ್ಟರೆ ನಾಳೆ ಎಲ್ಲ ಕಾನೂನುಗಳ ಕಥೆಯೂ ಹೀಗೆಯೇ ಆಗುವ ಸಂದರ್ಭವೂ ಇರುವುದಿಲ್ಲವೇ? ಅಂದರೆ ಜನ ಒಂದೆಡೆ ಸೇರಿ ಸೇರಿ ಕಾನೂನನ್ನು ವಾಪಸು ತೆಗೆದುಕೊಳ್ಳಿ ಎಂದು ಹೇಳಲಾರಂಭಿಸುವುದಿಲ್ಲವೇ? ಪ್ರತಿಯೊಂದು ಕಾನೂನನ್ನೂಜನರ ಒಂದು ಸಮೂಹದ ವಿರೋಧ ಬಂದ ಹಿನ್ನೆಲೆಯಲ್ಲಿ ವಾಪಸ್ ಪಡೆಯಲಾಗುತ್ತದೆಯೇ? ನಮಗೆ ಗೊತ್ತಿದೆ.
ಸರಕಾರಗಳು ಒಟ್ಟಾರೆ ಹಿತಾಸಕ್ತಿಯಲ್ಲಿ ಜನಪ್ರಿಯವಲ್ಲದ ಕಾನೂನುಗಳನ್ನೂ ಕೆಲವೊಮ್ಮೆ ಜಾರಿಗೆ ತರಬೇಕಾಗುತ್ತದೆ. ಹೀಗೆಯೇ ಜನಧರಣಿ ಕುಳಿತು ‘ಇಂತಹ’ ಕಾನೂನು ತನ್ನಿಎಂದು ಕೂಡ ‘ಶಾಂತಿಯುತವಾಗಿ’ ಒತ್ತಾಯಿಸುವ ಸಂಭವ ಬಂದರೆ ಪರಿಸ್ಥಿತಿ ಏನಾಗುತ್ತದೆ?ಪ್ರಜಾಪ್ರಭುತ್ವ, ಸಂಧಾನ, ಶಾಸನಬದ್ಧ ಸಂಸ್ಥೆಗಳು ಇವುಗಳಿಗೆಲ್ಲ ಏನಾಗುತ್ತದೆ? ಇನ್ನೊಂದು ವಿಷಯ.
ಏನೆಂದರೆ ಸುಪ್ರೀಂಕೋರ್ಟ್ ಮಧ್ಯಪ್ರವೇಶಿಸಿ ರೈತರ ನ್ಯಾಯಯುತ ಅಹವಾಲುಗಳನ್ನು ಕೇಳಲು ಕೃಷಿ ಪಂಡಿತರ ಸಮಿತಿ ಯೊಂದನ್ನು ರಚಿಸಿದೆ. ಅಲ್ಲಿಯತನಕ ಈ ಕಾನೂನುಗಳನ್ನು ಸಸ್ಪೆಂಡ್ ಆಗಿ ಇಡಬೇಕೆಂದು ಹೇಳಿದೆ. ಸುಪ್ರೀಂಕೋರ್ಟ್‌ಗೆ ಕಾನೂನುಗಳನ್ನು ಸಸ್ಪೆನ್‌ಷನ್‌ನಲ್ಲಿ ಇಡುವ ಅಽಕಾರ ಇದೆಯೋ ಇಲ್ಲವೋ ಎನ್ನುವುದು ಬೇರೆಯ ಮಾತು. ಅದನ್ನು ಕಾನೂನು ಪಂಡಿತರು ಹೇಳಬೇಕು. ಆದರೂ ಈ ಸಮಯದಲ್ಲಿ ಕೋರ್ಟ್ ಹೇಳಿದ್ದು ಸರಿಯೇ.
ವಾದಕ್ಕೆ ಒಂದು ಗೌರವಯುತ ಉತ್ತರ ಕಂಡುಕೊಳ್ಳಲು ಅದು ಸೂಚಿಸಿದ ಕ್ರಮ ಸ್ವಾಗತಾರ್ಹ. ಆದರೆ ಬೇಸರವೆಂದರೆ ರೈತರು ಸುಪ್ರೀಂಕೋರ್ಟ್ ರಚಿಸಿರುವ ಇಂತಹ ಸಮಿತಿಯನ್ನೂ ಬಹಿಷ್ಕರಿಸಿರುವುದು. ರೈತರು ಸುಪ್ರೀಂಕೋರ್ಟ್‌ನ ಸೂಚನೆಗಳನ್ನೇಕೇಳದಿದ್ದರೆ ಮುಂದೇನುಗತಿ? ದೇಶದ ಜನಸಮೂಹಗಳು ಹೀಗೆಯೇ ವರ್ತಿಸಲಾರಂಭಿಸಿದರೆ ನಮ್ಮ ಕಾನೂನು ಮತ್ತು  ಸುವ್ಯವಸ್ಥೆ ಪರಿಸ್ಥಿತಿ ಏನಾಗುತ್ತದೆ? ಧರಣಿಯಲ್ಲಿ ತೊಡಗುವ ಜನಸಮೂಹ ಶಾಸಕಾಂಗ ಅಥವಾ ನ್ಯಾಯಾಂಗದ ಆದೇಶಗಳನ್ನು ಸಂಪೂರ್ಣವಾಗಿ ಧಿಕ್ಕರಿಸಿ ‘ಶಾಂತಿಯುತವಾಗಿ’ಯಾದರೂ ನಿರಂತರ ಧರಣಿಯಲ್ಲಿ ತೊಡಗಿಬಿಟ್ಟರೆ ನಾಗರಿಕ ಸರಕಾರದಪರಿಸ್ಥಿತಿ ಏನಾಗುತ್ತದೆ? ಸರಕಾರಕ್ಕೆ ಉಳಿಯುವ ಗೌರವವಾದರೂ ಏನು? ಕಾನೂನುಗಳು ರೈತರಿಗೆ ವರವೇ ಅಥವಾ ಶಾಪವೇ ಎನ್ನುವುದನ್ನು ಕೃಷಿ ಪಂಡಿತರು, ಮಾರುಕಟ್ಟೆ ತಜ್ಞರು, ರೈತರು, ನಾಯಕರು ಸೇರಿ ನಿರ್ಧರಿಸಬೇಕು.
ರೈತ ಬಾಂಧವರ ಕುರಿತು ನಮಗೆ ಸಹಾನುಭೂತಿ ಇದೆ. ಒಂದು ಮಟ್ಟದ ಬೆಂಬಲವೂ ಇದೆ. ಆದರೆ, ಈ ಹಂತದಲ್ಲಿ ರೈತರು ಸುಪ್ರೀಂಕೋರ್ಟ್ ಆದೇಶವನ್ನು, ಕೇಂದ್ರ ಸರಕಾರದ ಆಫರ್‌ಗಳನ್ನು ತಿರಸ್ಕರಿಸಿ, ಕೇವಲ ಕಾನೂನು ಹಿಂದೆ ತೆಗೆದುಕೊಳ್ಳಿ ಎನ್ನುವ ಒಂದೇ ಅಂಶವನ್ನು ಮುಂದಿಟ್ಟುಕೊಂಡು ಮಾತನಾಡುವುದು ಸರಿಯಲ್ಲ ಎನ್ನುವ ಭಾವನೆ. ಏಕೆಂದರೆ ಇದರಲ್ಲಿಶಾಸಕಾಂಗ, ಕಾಯಾಂಗ, ನ್ಯಾಯಾಂಗಗಳ ಗೌರವದ ಪ್ರಶ್ನೆ ಇದೆ.
ಹಾಗೆಂದು ರೈತರು ಸುಮ್ಮನೆ ಹೋಗಬೇಕೆಂದೇನೂ ಇಲ್ಲ. ಕೇಂದ್ರಕ್ಕೆ ಈ ಮಸೂದೆಗಳ ಕುರಿತು ಮರುಚರ್ಚೆಗೆ, ಮರುಯೋಜನೆಗೆಕಾಲಾವಕಾಶ ನೀಡಿ, ಎಂಎಸ್‌ಪಿ ಕುರಿತು ಗ್ಯಾರಂಟಿಗಳನ್ನು ಪಡೆದು ಒಮ್ಮೆ ಚಳವಳಿ ನಿಲ್ಲಿಸಬಹುದು. ಮತ್ತೆ ಕಾನೂನುಗಳು ನಿಜವಾಗಿಯೂ ಹೇಗೆ ಕೆಲಸ ಮಾಡುತ್ತವೆ ಎನ್ನುವುದನ್ನು ಒಮ್ಮೆ ಕಾದು ನೋಡಲೂಬಹುದು.
ಸಂಶಯವಿರುವಂತೆ ನಾಳೆ ಖಾಸಗೀಕರಣದಿಂದಾಗಿ ರೈತರು ಭೂಮಿ ಕಳೆದುಕೊಳ್ಳುವ ಸ್ಥಿತಿ ಬಂದರೆ ಅಥವಾ ಇನ್ನೂ ತೀವ್ರ ತರಹದ ತೊಂದರೆಗಳು ಬಂದರೆ ಹೋರಾಟವನ್ನು ಮತ್ತೆ ಹಮ್ಮಿಕೊಳ್ಳಬಹುದು. ಧರಣಿ ನಿರತ ರೈತರು ಯೋಚಿಸಬೇಕು.