ಮಹಾರಾಷ್ಟ್ರ ಗಡಿ ವಿವಾದ ಹುಟ್ಟಿದ್ದು ಎಲ್ಲಿಂದ?
ಕರ್ನಾಟಕ ಏಕೀಕರಣದ ನಂತರ ನೆರೆಹೊರೆಯ ರಾಜ್ಯಗಳ ಆಳ್ವಿಕೆಯಲ್ಲಿದ್ದ ಕನ್ನಡ ಮಾತಾಡುವ ಪ್ರದೇಶಗಳನ್ನೆಲ್ಲ ಆಯಾ ಪ್ರದೇಶಗಳಿಂದ ಬಿಡುಗಡೆ ಮಾಡಿ ಮೈಸೂರು ರಾಜ್ಯಕ್ಕೆ ಸೇರಿಸಲಾಯಿತು. ಬಾಂಬೆ ಪ್ರಾಂತ್ಯದಲ್ಲಿದ್ದ ಕೆಲ ಪ್ರದೇಶಗಳೂಕರ್ನಾಟಕಕ್ಕೆ ಸೇರಿದವು. ಆದರೆ ನೆರೆರಾಜ್ಯಗಳು ಇದಕ್ಕೆ ಸಿದ್ಧವಿರಲಿಲ್ಲ. ಆ ಕಾರಣದಿಂದ ಅಕ್ಕಲಕೋಟೆ, ಜತ್ತ, ಸೊಲ್ಲಾಪುರಗಳು ಮಹಾರಾಷ್ಟ್ರದಲ್ಲೇ ಉಳಿದು ಹೋದವು. ಅಲ್ಲದೆ ಕರ್ನಾಟಕದ ಭಾಗವಾಗಿದ್ದ ಮತ್ತಷ್ಟು ಪ್ರದೇಶಗಳ ಮೇಲೆ ಮಹಾರಾಷ್ಟ್ರ ಹಕ್ಕು ಮಂಡಿಸತೊಡಗಿತು. ಬೆಳಗಾವಿ ಜಿಲ್ಲೆಯ ನಿಪ್ಪಾಣಿ, ಖಾನಾಪುರ ಮತ್ತು ಬೀದರ್, ಕಾರವಾರ ಜಿಲ್ಲೆಗಳು ಮಹಾರಾಷ್ಟ್ರಕ್ಕೆ ಸೇರಿಸ ಬೇಕು ಎಂದು ಮಹಾರಾಷ್ಟ್ರ ಕೂಗೆಬ್ಬಿಸಿತು.
ಮಹಾರಾಷ್ಟ್ರ ಸರಕಾರದ ಒತ್ತಾಯಕ್ಕೆ ಮಣಿದ ಕೇಂದ್ರ ಸರಕಾರ 1960ರ ಜೂನ್ 5 ರಂದು ನಾಲ್ವರು ಸದಸ್ಯರನ್ನೊಳಗೊಂಡಆಯೋಗವನ್ನು ರಚಿಸಿತು. ಇದರಲ್ಲಿ ಇಬ್ಬರು ಸದಸ್ಯರನ್ನು ಕರ್ನಾಟಕದಿಂದ ಹಾಗೂ ಇನ್ನಿಬ್ಬರು ಸದಸ್ಯರನ್ನು ಮಹಾರಾಷ್ಟ್ರ ದಿಂದ ಆಯ್ಕೆ ಮಾಡಲಾಗಿತ್ತು. ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಮಹಾಜನ್ ಹಾಗೂ ಇತರ ಪರಿಣತರತಂಡ ಗಡಿ ಭಾಗದ ಅಧ್ಯಯನ ನಡೆಸಿ ಕನ್ನಡ ಭಾಷಿಕರು ಹೆಚ್ಚಿರುವ ಆಧಾರದಲ್ಲಿ ಬೆಳಗಾವಿಯು ಕರ್ನಾಟಕದಲ್ಲೇ ಉಳಿಯ ಬೇಕೆಂಬ ತೀರ್ಪನ್ನು ನೀಡಿತು.
ನಾಲ್ಕು ಜನರ ಆಯೋಗ ನೀಡಿದ ತೀರ್ಪನ್ನು ಮಹಾರಾಷ್ಟ್ರ ಒಪ್ಪಲಿಲ್ಲ. ಗಡಿ ವಿವಾದಕ್ಕೆ ಸ್ವತಂತ್ರ ಸಮಿತಿ ರಚಿಸುವಂತೆ ಮಹಾರಾಷ್ಟ್ರದ ನಾಯಕರಾದ ಸೇನಾಪತಿ ಬಾಪಟ್ ಅವರು ಆಮರಣಾಂತ ಉಪವಾಸ ಸತ್ಯಾಗ್ರಹದ ಮೂಲಕ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಿತು.
ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು 1966 ಅಕ್ಟೋಬರ್ 25ರಂದು ಸುಪ್ರಿಂಕೋರ್ಟಿನ ಮುಖ್ಯನ್ಯಾಯಮೂರ್ತಿಗಳಾಗಿನಿವೃತ್ತರಾಗಿದ್ದ ಮೆಹರ್ ಚಂದ್ ಮಹಾಜನ್ ಅವರ ನೇತೃತ್ವದಲ್ಲಿ ಸಮಿತಿ ರಚಿಸಿದರು
ಮಹಾಜನ್ ಸಮಿತಿಯಲ್ಲಿ ಇಬ್ಬರು ಕನ್ನಡಿಗರು, ಇಬ್ಬರು ಮರಾಠಿಗರು ಇದ್ದು, ಸಮಿತಿ ಸಮತೋಲನದಿಂದ ಕೂಡಿತ್ತು.ಈ ಸಮಿತಿಯವರು ಗಡಿಭಾಗದ ಎಲ್ಲ ಊರುಗಳನ್ನು ಭೇಟಿ ಮಾಡಿ ಅಲ್ಲಿನ ಸಂಘ ಸಂಸ್ಥೆಗಳ, ಜನಸಾಮಾನ್ಯರ ಅಭಿಪ್ರಾಯ ವನ್ನು ಸಂಗ್ರಹಿಸಿದರು. ಒಟ್ಟು 2,240 ಮನವಿಗಳನ್ನು ಸ್ವೀಕರಿಸಿಕೊಂಡ ಸಮಿತಿ ಮಹಾಜನ್ ವರದಿಯನ್ನು ಸರಕಾರಕ್ಕೆ  ಸಲ್ಲಿಸಿತು. ಮಹಾಜನ್ ಸಮಿತಿ ಸಲ್ಲಿಸಿದ ವರದಿಯಲ್ಲಿಯೂ ಬೆಳಗಾವಿ ಕರ್ನಾಟಕದಲ್ಲೇ ಉಳಿಯಬೇಕು ಎಂದು ಶಿಫಾರಸು ಮಾಡಲಾಯಿತು.
ಈ ಸಮಿತಿಯ ಪ್ರಮುಖ ಶಿಫಾರಸುಗಳು:1. ಬೆಳಗಾವಿ ಕರ್ನಾಟಕದಲ್ಲೇ ಉಳಿಯಬೇಕು.2. ಜತ್ತ, ಅಕ್ಕಲಕೋಟೆ, ಸೊಲ್ಲಾಪುರವೂ ಸೇರಿದಂತೆ ಒಟ್ಟು 247 ಹಳ್ಳಿಗಳು ಕರ್ನಾಟಕಕ್ಕೆ ಸೇರಬೇಕು.3. ನಂದಗಡ, ನಿಪ್ಪಾಣಿ, ಖಾನಾಪುರ ಸೇರಿದಂತೆ 264 ಹಳ್ಳಿಗಳು ಮಹಾರಾಷ್ಟ್ರಕ್ಕೆ ಸೇರಬೇಕು.4. ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು
ಮಹಾಜನ್ ವರದಿಯನ್ನು ಕರ್ನಾಟಕ ಸ್ವೀಕರಿಸಿತಾದರೂ, 1951ರ ಜನಗಣತಿಯನ್ನು ಆಧಾರವಾಗಿಟ್ಟುಕೊಂಟು ಮಹಾ ರಾಷ್ಟ್ರವು ವರದಿಯ ಶಿಫಾರಸ್ಸನ್ನು ತಿರಸ್ಕರಿಸಿತು. ಜತಗೆ ರಾಜ್ಯಗಳ ಮರುವಿಂಗಡಣಾ ಕಾಯಿದೆ-1956ನ್ನು ಶಿಫಾರಸುಗಳುಉಲ್ಲಂಘಿಸಿವೆ ಎಂಬ ಕಾರಣ ನೀಡಿತು.
ಬೆಳಗಾವಿಯಲ್ಲಿ ಶೇ.60ರಷ್ಟು ಜನ ಮರಾಠಿ ಭಾಷಿಕರಿದ್ದಾರೆ. ಹೀಗಾಗಿ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕು ಎಂದು ಕ್ಯಾತೆ ತೆಗೆಯಿತು. ಐವತ್ತು ವರ್ಷಗಳು ಕಳೆದರೂ ಇಂದಿಗೂ ಈ ವರದಿ ಜಾರಿಯಾಗಿಲ್ಲ. ಮಹಾಜನ್ ವರದಿ ಜಾರಿಗಾಗಿ ಕರ್ನಾಟಕದಹೋರಾಟ ಇಂದಿಗೂ ಮುಂದುವರಿದಿದೆ.
ಬೆಳಗಾವಿ ಜತೆಗೆ ಅಚ್ಚ ಕನ್ನಡ ಮಾತಾಡುವ 814 ಹಳ್ಳಿಗಳನ್ನು ಮಹಾರಾಷ್ಟ್ರಕ್ಕೆ ಹಸ್ತಾಂತರಿಸಬೇಕೆಂದು 2004ರಲ್ಲಿ ಮಹಾ ರಾಷ್ಟ್ರ ಸರಕಾರ ಸುಪ್ರೀಂಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿತು. ಇದೀಗ ಈ ವಿವಾದ ಸುಪ್ರೀಂಕೋರ್ಟ್ ನಲ್ಲಿದೆ.