ಗುರುಗಿಂತ ಎತ್ತರವಾಗಬೇಕು, ಅವರ ಸಮಾಧಿಯ ಮೇಲೆ ನಿಂತಲ್ಲ
ಪ್ರಾಣೇಶ್ ಪ್ರಪಂಚ್‌
ಗಂಗಾವತಿ ಪ್ರಾಣೇಶ್‌
ಉಡುಪಿಯ ಪೇಜಾವರ ಮಠದಿಂದ ಹೊರಡುವ ‘ತತ್ವವಾದ’ ಎಂಬ ಮಾಸಿಕ ಪತ್ರಿಕೆಯು ಬಹಳ ದಿನಗಳಿಂದ ಬರುತ್ತಿದೆ. (ಸಂಪುಟ-9, ಸಂಚಿಕೆ-12) ಮೌಲಿಕ ಆಧ್ಯಾತ್ಮ ಲೇಖನಗಳು ಪಾಮರರಿಗೂ ತಿಳಿಯುವಂಥಹ ಉದಾಹರಣೆಗಳೊಂದಿಗೆ ಪ್ರಕಟ ವಾಗಿರುತ್ತವೆ.
ಪೂಜ್ಯ ಶ್ವೇಶ್ವರ ತೀರ್ಥರಿದ್ದಾಗ ಅವರು ಮಾಡಿದ ಅನೇಕ ಉಪನ್ಯಾಸಗಳು ಇದರಲ್ಲಿ ಪ್ರಕಟವಾಗುತ್ತವೆ. ಪೇಜಾವರ ಶ್ರೀಗಳು ಭಾರತ, ಭಾಗವತ, ರಾಮಾಯಣ, ಸುಮಧ್ವ ಜಯ, ಸುಧಾದಿ ಗ್ರಂಥಗಳ ಸಾರವನ್ನು ಸರಳವಾಗಿ ನಮ್ಮ ಜೀವನದ ಉದಾಹರಣೆ ಗಳೊಂದಿಗೆ ಶ್ರೀಸಾಮಾನ್ಯನಿಗೂ ತಿಳಿಯುವಂತೆ ಹೇಳುವಲ್ಲಿ ಅವರಿಗೆ ಅವರೇ ಸಾಟಿಯಾಗಿದ್ದರು.
ಅವರ ಗೀತಾಸಾರೋದ್ಧಾರ ಗ್ರಂಥವು ಭಗವದ್ಗೀತೆಯನ್ನು ಹಲಸಿನ ಹಣ್ಣಿನ ತೊಳೆಗಳಂತೆ ಬಿಡಿಸಿ ಬಿಡಿಸಿ ಮೆದುಳಿನ ಬಾಗೆ ಇಡುವಂಥದು.
ತರಣಿ ದರುಶನಕ್ಕಿಂತ ಕಿರಣಾನುಭವ ಸುಲಭ |ಪರಮ ಶಾಸಕಿಂ ಮಿಗಿಲು ಸರಿಯುದಾಹರಣೆ ||ಎಂಬ ಕಗ್ಗದ ಸಾಲುಗಳಿಗೆ ಪೂಜ್ಯ ಪೇಜಾವರರು ಜೀವಂತಉದಾಹರಣೆಯಾಗಿದ್ದರು. ಎಂತಹ ಗಹನವಾದ ಷಯವೇಇರಲಿ ಅದನ್ನು ಲೌಖಿಕರಿಗೆ ಅರ್ಥವಾಗುವಂತೆ ನಮ್ಮ ಕಣ್ಮುಂದೆ ನಡೆಯುವ ಉದಾಹರಣೆಗಳನ್ನೇ ಕೊಟ್ಟು, ಅದನ್ನುಮನಗಾಣಿಸುತ್ತಿದ್ದರು. ಅವರ ಓದು, ತಿರುಗಾಟ, ಜನಸಂಪರ್ಕ, ಜನಪ್ರಿಯತೆ, ಬೇರಾವ ಸ್ವಾಗಳಿಗೂ ಇದ್ದಿಲ್ಲ.
ಸ್ಟಾರ್ ಸ್ವಾಮೀಜಿ ಯವರು, ಆಟೋಗ್ರಾಫ್ ಹಾಕಲುತ್ತಿರಲಿಲ್ಲ ಅಷ್ಟೆ. ಒಂದು ವರ್ಷವಾಗಿಯೇ ಹೋತು. ಅವರ ಸ್ಥಾನ ತುಂಬಲು ಯಾರಿಂದಲೂ ಸಾಧ್ಯಲ್ಲ ಎನಿಸುತ್ತಲೇ ಇದೆ.
ಡಿಸೆಂಬರ್ ತಿಂಗಳ ಪತ್ರಿಕೆಯಲ್ಲಿ ಶ್ರೀರಾಮ ವಿಠ್ಠಲಾಚಾರ್ಯರೆಂಬುವವರು ಬರೆದ ‘ಭಾರತದ ಸಂದೇಶ’ ಅಂಕಣದಲ್ಲಿ ‘ಅಯೋಗ್ಯರಿಗೆ ಅಧಿಕಾರ ಸಲ್ಲದು’ ಲೇಖನದ ಒಂದು ಕಥೆ ಎಷ್ಟು ಮಾರ್ಮಿಕವಾಗಿದೆಯೆಂದರೆ, ಅದನ್ನು ನಿಮಗೆ ಹೇಳಬೇಕೆನಿಸಿತು. ಅದರ ಯಥಾವತ್ ರೂಪ ಇಲ್ಲಿದೆ.
ಅದೊಂದು ಗೂಂಡಾರಣ್ಯ. ಕ್ರೂರ ಮೃಗಗಳ ಸಂಕುಲ. ಅಲ್ಲೊಬ್ಬ ಋಷಿ. ಶಾಂತ, ದಾಂತ ಯಾವ ಪ್ರಾಣಿಗಳಿಗೂ ಅವನ ಭಯವಿಲ್ಲ. ಸಿಂಹ, ಹುಲಿ, ಶರಭ, ಚಿರತೆ, ಖಡ್ಗಮೃಗ ಎಲ್ಲವೂ ಅವನ ಬಳಿ ನಿರ್ಭಯವಾಗಿ ಓಡಾಡಿಕೊಂಡಿದ್ದವು. ಅವನ ಶಿಷ್ಯರಂತೆ ಹಿಂಸೆ ಮಾಡದೆ ಸಲುಗೆಯಿಂದ ಇದ್ದವು. ಒಂದು ನಾಯಿಯಂತೂ ಋಷಿಯ ಭಕ್ತನಾಗಿ ಅನುರಕ್ತವಾಗಿ ಫಲಮೂಲಾ ಹಾರವಾಗಿ ಶಿಷ್ಯನಂತೆಯೇ ಅವನ ಬಳಿಯೇ ವಾಸಮಾಡುತ್ತಿತ್ತು.
ಅದೊಂದು ದಿನ ಚಿರತೆಯೊಂದು ರಕ್ತಮಾಂಸ ಪಿಪಾಸುವಾಗಿ ಹಸಿದು ನಾಯಿಯ ಬಳಿ ಸುಳಿಯಿತು. ಹೆದರಿ ಕಂಗಾಲಾಗಿ ಆ ನಾಯಿ ಋಷಿಗೆ ಶರಣಾಯಿತು. ‘ಹೆದರಬೇಡ, ನೀನೂ ಚಿರತೆಯಾಗು’ ಎಂದು ಋಷಿ ಹರಸಿದ. ಚಿರತೆ ಚಿರತೆಯಾದ ನಾಯಿಯನ್ನು ನೋಡಿ ಸುಮ್ಮನಾಗಿ ಬೇರೆಡೆ ಹೋಯಿತು. ಮತ್ತೊಂದು ದಿನ ವ್ಯಾಘ್ರ ಹಸಿಮೆಂದ ಕಂಗೆಟ್ಟು ಕೆಂಗಣ್ಣು ಮಾಡಿಕೊಂಡು ಭೀಕರದಾಡೆಯ ಬಾಯಿ ತೆರೆದು ಬಂದು.
ಹೆದರಿ ನಾಯಿ ಋಷಿಯಲ್ಲಿ ಶರಣು. ನೀನು ಹುಲಿಯಾಗು – ಋಷಿಯ ಹರಕೆ. ಹುಲಿಯಿಂದ ಪ್ರಾಣ ಉಳಿಯಿತು. ಮಗದೊಂದು ದಿನ ಮದಗಜವೊಂದು ಘೀಳಿಡುತ್ತ ಧಾವಿಸಿ ಬಂತು. ಹೆದರಿದ ನಾಯಿ ಋಷಿಯ ಹರಕೆಯಿಂದ ಆನೆ ಯಾಯಿತು. ಭಯಮುಕ್ತ ವಾಯಿತುಜ್ಞ ಇನ್ನೊಮ್ಮೆ ಗುಹೆಯಿಂದ ಘರ್ಜಿಸುತ್ತ ಭೀಕರ ಸಿಂಹವೊಂದು ಓಡಿ ಬಂತು. ನಾಯಿಯೂ ಋಷಿಯಹಾರೈಕೆಯಿಂದ ಸಿಂಹವಾಯಿತು. ಸಿಂಹ ಸಿಂಹವನ್ನು ನೋಡಿ ಆಹಾರಕ್ಕಾಗಿ ಬೇರೆಡೆ ಸಾಗಿತು.
ಸಿಂಹವಾದ ನಾಗೆ ಭಯ ಪರಿಹಾರ. ಸಿಂಹವನ್ನೂ ತಿಂದು ಹಾಕುವ ಶರಭ ಎಂಬ ಎಂಟು ಕಾಲಿನ ಪ್ರಾಣಿ ಕೊಲ್ಲಲು ಬಂತು. ಹೆದರಿದ ಸಿಂಹರೂಪದ ನಾಯಿ ಋಷಿಯ ಅನುಗ್ರಹದಿಂದ ತಾನೂ ಶರಭವಾಯಿತು. ಬಂದ ಶರಭ ಹಿಂತಿರುಗಿತು. ಶರಭರೂಪ ತಾಳಿದ ನಾಯಿ ಋಷಿಯ ಸಮೀಪದಲ್ಲಿಯೇ ವಾಸ ಮಾಡಿತು. ಋಷಿಯ ಸಮೀಪದಲ್ಲಿದ್ದ ಶರಭವನ್ನು ನೋಡಿ ಎಲ್ಲ ಪ್ರಾಣಿ ಗಳೂ ಹೆದರಿ ಬದುಕುವ ಆಸೆಯಿಂದ ದಿಕ್ಕಾಪಾಲಾದವು. ನಿತ್ಯ ಪ್ರಾಣಿವಧೆಯಲ್ಲಿ ನಿರತವಾದರೂ ಶರಭ ಶಾಂತಮುನಿಯನ್ನು ಕಬಳಿಸಿರಲಿಲ್ಲ.
ರಕ್ತಮಾಂಸ ಭೋಜನದಿಂದ ಕೊಬ್ಬಿದ ಶರಭದ ತಲೆಯಲ್ಲಿ ಕೆಟ್ಟ ಯೋಚನೆ ಬಂತು. ‘ಈ ಋಷಿಯ ಅನುಗ್ರಹದಿಂದ ದಿನನಾಯಿಯಾಗಿದ್ದ ನಾನು ಬಲಿಷ್ಠ ಶರಭನಾದೆ. ಕರುಣೆಯ ಕೊಂಪೆಯಾದ ಈ ಋಷಿಗೆ ಇನ್ನಾವುದಾದರೂ ಮೃಗಗಳೋ, ಪಕ್ಷಿ ಗಳೋ ಶರಣಾದರೆ ಮೃಗಗಳನ್ನೂ ಶರಭವನ್ನಾಗಿ ಮಾಡಿಬಿಡಬಹುದು. ಸಾಮಾನ್ಯ ಪಕ್ಷಿಯೂ ಇವನ ಪ್ರಭಾವದಿಂದ ಪ್ರಬಲ ಗರುಡವಾಗಿ ಬಿಡಬಹುದು. ನನ್ನಂತೆ ಇನ್ನೊಂದು ಮೃಗವೋ, ಪಕ್ಷಿಯೋ, ಗರುಡವೋ ಆಗುವ ಮುಂಚೆ ಈ ಋಷಿಯನ್ನು ಕೊಂದುಬಿಡಬೇಕು.’
ಜ್ಞಾನ ದೃಷ್ಟಿಯಿಂದ ಶರಭದ ದೂರದ ದುರಾಲೋಚನೆ ತಪಸ್ವಿ ಋಷಿಗೆ ತಿಳಿಯಿತು. ಋಷಿ ನುಡಿದನು. ನಾನು ಅಗ್ನಿಪ್ರಭ ಎಂದು ಪ್ರಸಿದ್ಧನಾದ ಭೃಗುವಂಶದ ಮುನಿ. ಮನಸ್ಸಿನಿಂದಲೇ ಎಲ್ಲ ಜಗವನ್ನು ಸುಡಬಲ್ಲೆ, ಧರಿಸಬಲ್ಲೆ, ಸ್ವಧರ್ಮ ಪರಿತ್ಯಾಗ ಮಾಡಿ ದವರು ಯಾರೇ ಆಗಲಿ ಅವರನ್ನು ಮಾತಿನಿಂದಲೇ ಸುಡಬಲ್ಲೆ. ಹೀನ, ಅಶುಚಿಯಾದ ನೀನು ಯಾವ ಲೆಕ್ಕ? ನಾಯಿಯಾಗಿದ್ದ ನಿನ್ನನ್ನು ಹುಲಿ, ಆನೆ, ಸಿಂಹ, ಶರಭ ಎಲ್ಲ ಆಗುವಂತೆ ಮಾಡಿದೆ. ನಿನ್ನ ಮೇಲೆ ಮೂಡಿದ ಸ್ನೇಹದಿಂದ. ನಿನ್ನ ನಾಬುದ್ಧಿಯನ್ನು ಅರಿಯಲಿಲ್ಲ.
ವಿಚಾರ ಮಾಡಬೇಕಿತ್ತು. ಯಾರಿಗೂ ಕ್ರೂರನಾಗದ ನನ್ನನ್ನು ಕೊಲ್ಲಲು ಬಯಸಿರುವೆಯಾ? ನೀನು ನಾಯಿಯೇ ಆಗಿಬಿಡು.ಋಷಿಯ ಶಾಪದಿಂದ ಶರಭ ಮತ್ತೆ ನಾಯಿಯಾಯಿತು. ಋಷಿ ತಪೋವನದಿಂದಲೆ ನಾಯಿಯನ್ನು ಬಹಿಷ್ಕರಿಸಿದ! ಇಷ್ಟು ಕಥೆಯನ್ನು ಹೇಳಿದ ಭೀಷ್ಮರು ಧರ್ಮರಾಜನಿಗೆ ಹೇಳಿದರು. ರಾಜ! ಅಧಿಕಾರ ಕೊಡಬೇಕಾದರೆ ಸತ್ಕುಲೀನನು, ಸಂಸ್ಕಾರ ವಂತನು, ಚಾರಿತ್ರ್ಯ, ದಯಾ, ಸಹನೆ, ದಿಟ್ಟತನಗಳೊಂದಿಗೆ ಸುಶಿಕ್ಷಿತನಾದವನನ್ನು ಆರಿಸಿಕೊಳ್ಳಬೇಕು.
ರಾಜನಿಗೆ ಇಂಥವನು ಸಹಾಯಕನಾಗಿದ್ದರೆ ಅವನು ಯಶಸ್ವಿಯಾಗುತ್ತಾನೆ. ಇಂಥವನು ಎಂದೂ ಪಾಪಕಾರ್ಯದಲ್ಲಿತೊಡಗುವುದಿಲ್ಲ. ಸಂಸ್ಕಾರಹೀನ, ದುಷ್ಕುಲೀನನಾದ ದುಷ್ಟನಾದವನು ಸತ್ಸಂಗ ದಿಂದ ಒಳ್ಳೆಯವನಂತೆ ಕಂಡರೂ ದುರ್ಲಭ ವಾದ ಐಶ್ವರ್ಯ ಅವಕಾಶ ಬಂದರೆ ಶತ್ರುವಾಗುತ್ತಾನೆ. ದುಷ್ಕುಲದ ಕಾಗೆ, ನಾಯಿ, ಬೆಕ್ಕು, ಹಾವು, ದುಷ್ಕುಲೀನ ನಾರಿ ಎಲ್ಲ ಸಮಾನರು.
ಯಾವಾಗ ಬೇಕಾದರೂ ತಿರುಗಿ ಬೀಳಬಹುದು. ಎಚ್ಚರಿಕೆ! ಚುನಾವಣೆಗಳಲ್ಲಿ ಎಂತಹ ಜನರನ್ನು ನಿಲ್ಲಿಸಬೇಕು, ಗೆಲ್ಲಿಸಬೇಕು ಎಂಬುದಕ್ಕೆ ಈ ಕಥೆ ಆಧಾರವಾಗಬಹುದಲ್ಲ. ಉಗ್ರರು, ಡ್ರಗ್ಸ್ ದಂಧೆಯ ಜನರು ಇಂತಹವರೊಂದಿಗೆ ತಿಳಿಯದೆ ನಿಂತು ಫೋಟೋ ತೆಗೆಸಿಕೊಂಡಿದ್ದರೂ ಎಂಥ ಅಪಾಯ ಎಂಬುದು ಈಗ ಎಲ್ಲರಿಗೆ ತಿಳಿಯುತ್ತಿದೆ. ಅಯೋಗ್ಯರ ಕೈಗೆ ದೇಶದ ಚುಕ್ಕಾಣಿ ಕೊಡಬಾರದೆಂದು ಬೇಗ ತಿಳಿದಷ್ಟೂ ಒಳ್ಳೆಯದಲ್ಲವೇ? ಅಲ್ಪನ ಸಂಗ ಮಹಾಭಂಗ.
ಈ ಕಥೆ ಓದಿದರಲ್ಲವೇ? ಇಂದಿನ ಕೆಲ ರಾಜಕಾರಣಿಗಳು ರಾಜಕೀಯಕ್ಕೆ ಪ್ರವೇಶ ಮಾಡುವಾಗ ನಾಯಿಯಂತಿದ್ದು, ಅನ್ನಟ್ಟವನ ಕೈಯನ್ನೇ ಕಚ್ಚಿ ಅವನ ಕಥೆಯನ್ನೇ ಮುಗಿಸುವ ಅನೇಕ ಉದಾಹರಣೆಗಳಿವೆ. ಅವರಿಗೆ ತಾತ್ಕಾಲಿಕ ಸುಖ ಸಿಗಬಹುದು. ಆದರೆ ಮುಂದೆ ಅವರ ವಂಶ, ಸಂತಾನ, ದಿಕ್ಕುಗೇಡಿಗಳಾಗಿ ಸಾಯುತ್ತಾರೆ. ಗುರುದ್ರೋಹ ವೆಂಬುದು ಎಲ್ಲ ದ್ರೋಹಕ್ಕಿಂತ ದೊಡ್ಡದು, ಗುರುವನ್ನು ಮೀರಿಸಿ ಬೆಳೆಯಬೇಕಾಗಲಿ, ಗುರುವನ್ನು ಕೊಂದು ಅವನ ಸಮಾಧಿಯ ಮೇಲೆ ನಿಂತು ಅವನಿಗಿಂತ ನಾನು ಎತ್ತರನಾದೆ ಎಂದುಕೊಳ್ಳಬಾರದು. ಸ್ವಾತಂತ್ರ್ಯಾ ನಂತರ ಈ ದೇಶದಲ್ಲಿ ನಡೆದದ್ದು ಇದೆ.
ಅದಕ್ಕೆ ಈ ದೇಶ ಸಸ್ಯ ಶ್ಯಾಮಲ, ಸುಜಲಾಂ, ಸುಫಲಾಂ ಮಲಯಜ ಶೀತಲಾಂ ಎಂದು ವರ್ಣಿಸಿಕೊಂಡಿದ್ದು, ಇಂದು ಎಲ್ಲೆಲ್ಲೂ ಒಣ-ಒಣ, ಠಣ-ಠಣ ಎಂಬಂತಾಗಿದೆ. ಸಂಗೀತ, ಸಾಹಿತ್ಯ, ಚಿತ್ರಕಲೆ, ನಾಟಕ, ಸಿನಿಮಾ ಯಾವುದೇ ರಂಗದಲ್ಲಿ ನೋಡಿ. ಮೂರು ತಿಂಗಳು, ಆರು ತಿಂಗಳು ಏನನ್ನಾದರೂ ಕಲಿತುಬಿಟ್ಟರೆಂದರೆ ಪರಬ್ರಹ್ಮನಂತೆ ವರ್ತಿಸುತ್ತಾರೆ. ರಾಜಕೀಯದಲ್ಲಂತೂ ತಮ್ಮನ್ನು ಮೇಲೆ ತಂದವರನ್ನೇ ತುಳಿಯುವುದು, ನಡುನೀರಲ್ಲಿ ಕೈ ಬಿಡುವುದು ಸರ್ವೇಸಾಮಾನ್ಯವಾಗಿದೆ. ತಮ್ಮ ಪ್ರತಿಸ್ಪರ್ಧಿಗಳನ್ನು ಕೊಂದೇ ಬಿಡುವುದು, ಸಜ್ಜನರನ್ನು ಜನರು ಮರೆಯುವಂತೆ ಮಾಡುವುದು ಸಾಮಾನ್ಯವಾಗಿ ಹೋಗಿರುವುದರಿಂದಲೇ ಇಂದು ಈ ದೇಶ ಈ ಸ್ಥಿತಿಗೆ ಬಂದಿದೆ.
ಕೃತಜ್ಞತೆಯೆಂಬುದು, ಮಾಡಿದ ಉಪಕಾರವನ್ನು ಸ್ಮರಿಸುವುದು ಬಹುದೊಡ್ಡ ವಿಶೇಷಣ. ಇದನ್ನು ಮರೆತಿರುವ ಎಲ್ಲ ರಂಗ ದವರೂ ಇಂದು ಅತಂತ್ರ ಸ್ಥಿತಿಯಲ್ಲಿದ್ದಾರೆ. ಹಾಗೆಯೇ ವಿದ್ವಾನ್ ಕೆ. ವಿಶ್ವಾಸಾಚಾರ್ ಬರೆದ ಇದೇ ಸಂಚಿಕೆಯ ಇನ್ನೊಂದು ಲೇಖನ ತುಂಬಿದ ಕೊಡ ತುಳುಕುವು ದಿಲ್ಲದಲ್ಲಿ ಹಿರಣ್ಯಕಷ್ಯಪುವೆಂಬ ಮೂರ್ಖನು ಪುಟ್ಟ ಬಾಲಕ ಪ್ರಹ್ಲಾದನ ಮುಂದೆಯೇಮಣ್ಣಾಗಿಹೋದ. ತಲೆಕೆಳಗೆ ಕಾಲುಮೇಲೆ ಎಂಬ ಹೆಸರುಳ್ಳ ಧ್ರವನ ತಂದೆ ‘ಉತ್ತಾನಪಾದ’ ತನ್ನ ಮಗನ ಮುಂದೆಯೇಲಜ್ಜೆಗೆಟ್ಟವನಾಗಿ ತಲೆಬಾಗಿ ನಿಲ್ಲ ಬೇಕಾತು.
ಅಸುರಾಧಿಪತಿ ಯಾದ ಬಲಿಯ ಅಹಂಕಾರವನ್ನು ವಾಮನನು ಬಲಿಪಡೆದಿದ್ದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ. ಹೀಗೆಪೌರಾಣಿಕ ಅಥವಾ ಲೌಕಿಕ ಯಾವುದೇ ಉದಾಹರಣೆಗಳನ್ನು ತೆಗೆದುಕೊಂಡರೂ ಸಹ ಮೂರ್ಖರ ಮೂರ್ಖತನದ ಅಟ್ಟಹಾಸ ಕೆಲವು ದಿನಗಳವರೆಗೆ ಮಾತ್ರ ನಡೆಯುತ್ತದೆ. ಕೊನೆಗೆ ಸೋತು ಸುಣ್ಣವಾಗುವುದು ಖಂಡಿತ. ಆದ್ದರಿಂದ ಪ್ರತಿಯೊಬ್ಬರೂ ತುಳುಕುವ ಕೊಡವಾಗದೆ ತುಂಬಿದ ಕಲಶವಾಗುವ ಮೂಲಕ ಸಮಾಜಕ್ಕೆ ಆಸ್ತಿಯಾಗಬೇಕೇ ಹೊರತು, ಸಮಾಜದ ಸಂಪತ್ತನ್ನು ಹಾಗೂ ಜನರ ನೆಮ್ಮದಿಯನ್ನು ಹಾಳುಮಾಡುವ ಸಮಾಜ ಘಾತುಕರಾಗಬಾರದು.