ಸಾಟಿಯಿಲ್ಲದ ಚೇತನಕ್ಕೆ ಇನ್ನೂ ಏಕಿಲ್ಲ ಭಾರತ ರತ್ನ ?
ತನ್ನಿಮಿತ್ತ
ಮರಿಲಿಂಗಗೌಡ ಮಾಲಿಪಾಟೀಲ್
ಕಾಯ ಇಲ್ಲವಾದ ಬಳಿಕವೂ ಎಷ್ಟು ಕಾಲ (ಜನಮಾನಸದಲ್ಲಿ) ಇದ್ಧಾರೆ ಎನ್ನುವುದೇ ಮಹಾತ್ಮರ ಬದುಕಿನ ಔನ್ನತ್ಯದ ಅಳತೆ ಗೋಲು, ಅವರು ಸಾಧಿಸಿದ ಸಾವಿರದ ಒಂದನ್ನು ನಾವು ಸಾಧಿಸಿದರೂ ನಾವೂ ಸಾವಿರದವರು (ಸಾವು ಇರದವರು) ಆಗುತ್ತೇವೆ ಎನ್ನುವುದು ಪ್ರಾಜ್ಞರ ಅಭಿಮತ. ಅಂತಹ ಪ್ರಾತಃಸ್ಮರಣೀಯರನ್ನು ಮುಂಜಾನೆಯೇ ಸ್ಮರಿಸಿಕೊಳ್ಳುವ ಮೂಲಕ ನಾವೂ ಪ್ರೇರಣೆ ಪಡೆಯೋಣ.
ಸಾಧ್ಯವಾದರೆ ಅವರು ಇಟ್ಟ ಲಕ್ಷಾಂತರ ಹೆಜ್ಜೆಗಳಲ್ಲಿ ಒಂದನ್ನಾದರೂ ಇಟ್ಟು ನಮ್ಮ ಬದುಕನ್ನು ಸಾರ್ಥಕಗೊಳಿಸಿಕೊಳ್ಳೋಣ.ಅಂತಹ ಪ್ರಾತಃಸ್ಮರಣೀಯರೇ ಪರಮಪೂಜ್ಯ ಶಿವಕುಮಾರ ಸ್ವಾಮೀಜಿಯವರು. ಸಣ್ಣ ಹಳ್ಳಿಯೊಂದರ ಸಾಮಾನ್ಯ ಕುಟುಂಬ ದಲ್ಲಿ ಜನಿಸಿದರೂ ಅಸಾಮಾನ್ಯರಾಗಿ ಬೆಳೆದು ಲೋಕೋತ್ತರ ಕೀರ್ತಿ ಗಳಿಸಿದವರು. ಸಹಾನುಭೂತಿ, ದಯೆ, ಕರುಣೆ, ಪ್ರೇಮ, ಇವೆಲ್ಲ ಹೃದಯದಲ್ಲಿದ್ದರೆ ಮಾನವನೂ ದೇವನಾಗಬಲ್ಲ ಎನ್ನುವುದಕ್ಕೆ ಸಾಕ್ಷಿಯಾದ ಪುಣ್ಯ ಪುರುಷ. ದಣಿವರಿಯದ ಕಾಯಕ ಯೋಗಿ. ಕೊನೆಯ ಉಸಿರಿನತನಕವೂ ಸಮಾಜದ ಒಳಿತಿಗಾಗಿ ಚಿಂತಿಸಿದ, ಕೆಲಸ ಮಾಡಿದ ನಿಜ ಅರ್ಥದ ಸಂತ.
ತ್ರಿವಿಧ ದಾಸೋಹದ ಮೂಲಕ (ಅನ್ನ, ಆಶ್ರಯ, ವಿದ್ಯೆ) ಈ ನೆಲದ ಅಸಂಖ್ಯಾತ ಮಕ್ಕಳನ್ನು ಸಮರ್ಥನಾಗರಿಕನನ್ನಾಗಿ ರೂಪಿಸಿದ ಶಿಲ್ಪಿ. ಅವರು ದೇಹ ತ್ಯಜಿಸಿ ವರ್ಷ ಎರಡಾದರೂ ಇಲ್ಲಿಯೇ ಇದ್ದಾರೆ ಎಂದು ಭಾವಿಸುವಷ್ಟರ ಮಟ್ಟಿಗೆ ನಮ್ಮನ್ನುಆವರಿಸಿದ್ದಾರೆ ಎಂದರೆ ಅದಕ್ಕಿಂತ ಸಾರ್ಥಕ ಜೀವನ ಇನ್ನೊಂದಿದ್ದೀತೇ? ಇಂತಹ ಅಮೋಘ ಚೇತನಕ್ಕೆ ಇನ್ನೂ ಯಾಕೆಭಾರತ ರತ್ನ ಘೋಷಿತವಾಗಿಲ್ಲ ಎನ್ನುವ ಪ್ರಶ್ನೆ ಶ್ರೀಯುತರ ಎರಡನೇ ಸಮಾರಾಧನೆಯೆಂದು ಕನ್ನಡಿಗರನ್ನು ಕಾಡುತ್ತಿದೆ. ಭಾರತ ರತ್ನ ಎನ್ನುವುದು ಈ ದೇಶದ ನಾಗರಿಕರಿಗೆ ಭಾರತ ಸರಕಾರದಿಂದ ಕೊಡಲಾಗುವ ಅತ್ಯುನ್ನತ ನಾಗರಿಕ ಪ್ರಶಸ್ತಿ.
1954ರಲ್ಲಿ ಆರಂಭವಾದ ಈ ಪ್ರಶಸ್ತಿಯನ್ನು ಕಲೆ, ಸಾಹಿತ್ಯ, ವಿಜ್ಞಾನ, ಸಮಾಜಸೇವೆ ಇತ್ಯಾದಿ ಕ್ಷೇತ್ರಗಳಲ್ಲಿ ಅತ್ಯುನ್ನತ ಮಟ್ಟದ ಸಾಧನೆ ಮಾಡಿದ ಭಾರತದ ನಾಗರಿಕರಿಗೆ ನೀಡಲು ನಿಯಾಮವಳಿಗಳನ್ನು ಮಾಡಲಾಯಿತು (ನಂತರದಲ್ಲಿ ಇದನ್ನುಬದಲಿಸಿದ ಕಾರಣ ಕ್ರೀಡಾಕ್ಷೇತ್ರದಲ್ಲಿ ತೆಂಡೂಲ್ಕರ್‌ಗೆ ಮತ್ತು ಅಬ್ದುಲ್ ಗಫಾರ್ ಖಾನ್ ಹಾಗೂ ನೆಲ್ಸನ್ ಮಂಡೇಲಾರಂಥ ವಿದೇಶೀಯರಿಗೂ ನೀಡುವುದು ಸಾಧ್ಯವಾಯಿತು ಎನ್ನುವುದು ಬೇರೆ ವಿಷಯ).
ಇಲ್ಲಿಯವರೆಗೂ48ಜನರಿಗೆ ಭಾರತ ರತ್ನ ಪ್ರಶಸ್ತಿ ನೀಡಲಾಗಿದೆ. ಅದರಲ್ಲಿ16ಮರಣೋತ್ತರ ಪ್ರಶಸ್ತಿಗಳೂ ಇವೆ. ಲಾಲ್ ಬಹದ್ದೂರ್ ಶಾಸಿ ಯವರಿಂದಆರಂಭವಾದ ಮರಣೋತ್ತರ ಪ್ರಶಸ್ತಿಗಳ ಸಾಲಿನಲ್ಲಿ ಮದನಮೋಹನ ಮಾಲವೀಯ, ಇಂದಿರಾ ಗಾಂಧಿಯವರ ಹೆಸರುಗಳೂ ಇವೆ.49ನೆಯ ಭಾರತ ರತ್ನಪ್ರಶಸ್ತಿ ಪರಮಪೂಜ್ಯ ಶಿವಕುಮಾರ ಸ್ವಾಮೀಜಿಯವರಿಗೆ ಯಾಕೆ ನೀಡಬಾರದು ಎನ್ನುವುದು ಕನ್ನಡಿಗರ ಪ್ರಶ್ನೆ? ಉತ್ತರಿಸಬೇಕಿರುವುದು ಪ್ರಧಾನಿ ನರೇಂದ್ರ ಮೋದಿ.
ಇವರ ಬದುಕಿನ ಪಥವನ್ನು ಒಮ್ಮೆ ಅವಲೋಕಿಸಿದರೆ ಅವರ ಸಾಧನೆಯ ಮೌಲ್ಯ ಅರಿವಾಗುತ್ತದೆ. ರಾಮನಗರ ಜಿಯ ವೀರಾಪುರ ತಾಲೂಕಿನ ಹೊನ್ನೇಗೌಡ -ವೀರಮ್ಮ ದಂಪತಿಯ ಮಗನಾಗಿ 1907ರ ಏಪ್ರಿಲ್1ರಂದು ಇಳೆಗೆ ಇಳಿದು ಬಂದ ಅವರ ಬಾಲ್ಯದ ಹೆಸರು ಶಿವಣ್ಣ. ರೈತ ಕುಟುಂಬವಾದ್ದರಿಂದ ಕಾಯಕ ಸಂಸ್ಕೃತಿ ಬಾಲ್ಯದಲ್ಲಿಯೇ ಕೈ ಹಿಡಿದಿತ್ತು. ಕಾಲೇಜು ಓದುವ ಸಂದರ್ಭದಲ್ಲಿ ತುಮಕೂರಿನ ಸಿದ್ದಗಂಗಾ ಮಠವನ್ನು ಸೇರಿದರು.
ಮಠದ ಉತ್ತರಾಧಿಕಾರಿಯಾಗಿದ್ದ ಮರುಳಾರಾಧ್ಯರು ಶಿವೈಕ್ಯರಾದಾಗ ಪೀಠ ಕೈ ಬೀಸಿ ಕರೆದದ್ದು ಶಿವಣ್ಣರನ್ನು. 1941ರಲ್ಲಿ ಮಠದ ಜವಾಬ್ದಾರಿ ಹೆಗಲೇರಿದಾಗ ಮಠಕ್ಕೆ ಹೇಳಿಕೊಳ್ಳುವಂತಹ ಆದಾಯವಿರಲಿಲ್ಲ. ಜೋಳಿಗೆ ಹಿಡಿದು ಊರು ಸುತ್ತಿ ದವಸ ಧಾನ್ಯ ಗಳನ್ನು ತಂದು ಹಸಿದವರ ಒಡಲು ತುಂಬಿಸಿದರು. ವಿದ್ಯಾರ್ಥಿಗಳಿಗೆ ಜ್ಞಾನದ ಸುಧೆ ಹರಿಸಿದರು. ಸ್ವತಃ ಅವರೇ ಸನ್ಯಾಸಿಯಾಗಿ ದ್ದಾಗಲೇ ಪದವಿ ಪೂರೈಸಿ ವಿದ್ಯಾರ್ಥಿಗಳಿಗೆ ಮಾದರಿಯಾದರು.
ನಂತರ ನಡೆದಿದ್ದು ಇತಿಹಾಸ. ಮಾನವ ಸೇವೆಯಲ್ಲಿ ಸ್ವಾಮೀಜಿಯವರು ಇಟ್ಟ ಹೆಜ್ಜೆಗಳು ಇತಿಹಾಸದುದ್ದಕ್ಕೂ ಅಜರಾಮರ. ಧರ್ಮ ಗುಡಿಯೊಳಗಿಲ್ಲ, ಅನ್ಯರ ಕಷ್ಟಗಳಿಗೆ ನೆರವಾಗುವವನ ಹೃದಯವೇ ಧರ್ಮದ ನೆಲೆ. ಜಗತ್ತಿನಲ್ಲಿ ಇರುವುದು ಒಂದೇಧರ್ಮ. ಅದು ಮಾನವೀಯತೆ ಎನ್ನುತ್ತಿದ್ದ ಶಿವಕುಮಾರ ಸ್ವಾಮಿಗಳು ನುಡಿದಂತೆ ಮಾನವೀಯತೆ ಸಾಕಾರಮೂರ್ತಿಯಾಗಿ ನಡೆದರು.
ಒಂದನೇ ತರಗತಿಯಿಂದ ಹಿಡಿದು ಎಂಜಿನಿಯರಿಂಗ್ ತನಕ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಅಕ್ಷರದ ಬೆಳಕು ನೀಡಿದ ಮಹಾನು ಭಾವ ಅವರು. ತಾಂತ್ರಿಕ ವಿದ್ಯಾಲಯ, ವಿದ್ಯಾರ್ಥಿ ನಿಲಯ, 57 ಪ್ರೌಢಶಾಲೆಗಳು, ಮಹಿಳಾ ಕಾಲೇಜು, ಅಂಗವಿಕಲ ಶಾಲೆ… ಈ ರೀತಿಯಾಗಿ 100ಕ್ಕೂ ಅಧಿಕ ವಿದ್ಯಾ ಕೇಂದ್ರಗಳ ಮೂಲಕ ಶಿಕ್ಷಣ ವ್ಯವಸ್ಥೆಯ ಹೆಬ್ಬಾಗಿಲನ್ನು ತೆರೆದುಕೊಟ್ಟದ್ದು ಸಾಟಿಯಿಲ್ಲದ ಸಾಧನೆ.
ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಗಳಾಗಿದ್ದಾಗ ಸಿದ್ದಗಂಗಾ ಮಠಕ್ಕೆ ಬಂದ ಸಂದರ್ಭದಲ್ಲಿ ಮಠದ ಕಾರ್ಯ ವೈಖರಿಯನ್ನು ಕಂಡು ನಿಬ್ಬೆರಗಾಗಿದ್ದರು. ಭಾರತದ ಮಾಜಿ ಪ್ರಧಾನಿ ವಾಜಪೇಯಿಯವರೇ ಶ್ರೀಗಳ ಕೈಂಕರ್ಯವನ್ನು ಕಂಡು ಉತ್ತರ್ಮೇ ಗಂಗಾ ದಕ್ಷಿಣ್ಮೇ ಸಿದ್ದಗಂಗಾ ಎಂದು ಹೇಳಿದ್ದರು. ಸಮಾಜ ಸೇವೆ ಎನ್ನುವ ಪರಿಕಲ್ಪನೆಗೆ ಸ್ವಾಮೀಜಿಯವರ ಬದುಕು ಅತ್ಯಂತ ಶ್ರೇಷ್ಠ ವಾದ ನಿರ್ವಚನ. ಜಾತಿ, ಮತ ಭೇದವಿಲ್ಲದೆ ಅಗತ್ಯವಿದ್ದವರಿಗೆ ಅನ್ನ, ಆಶ್ರಯ, ವಿದ್ಯೆ ನೀಡುವುದನ್ನು ಒಂದು ತಪಸ್ಸಿನಂತೆ ಆಚರಿಸಿಕೊಂಡು ಬಂದವರು.
ತುಮಕೂರಿನ ಸಿದ್ದಗಂಗಾ ಮಠದ ಆಸರೆಯಿಂದಾಗಿ ಬದುಕಿನಲ್ಲಿ ಸಾರ್ಥಕ್ಯವನ್ನು ಕಂಡುಕೊಂಡವರು ಅದೆಷ್ಟೋ ಜನ. ಅವರಕೃಪಾಶೀರ್ವಾದದಿಂದ ಬದುಕನ್ನು ಕಂಡುಕೊಂಡವರು ಇಂದು ಭಾರತದ ಉದ್ದಗಲಕ್ಕೂ ಇದ್ದು ನಿತ್ಯವೂ ಅವರನ್ನು ಸ್ಮರಿಸುತ್ತಿರುತ್ತಾರೆ. ಊರು ಬರಗಾಲದ ಹೊಡೆತಕ್ಕೆ ಸಿಕ್ಕಿದಾಗ ಎಷ್ಟೋ ಪೋಷಕರು ತಮ್ಮ ಮಕ್ಕಳನ್ನು ಸಿದ್ದಗಂಗಾ ಮಠಕ್ಕೆ ತಂದು ಬಿಟ್ಟಿದ್ದರು.
ಅಂತಹ ಮಕ್ಕಳಿಗೆ ರಕ್ಷಕನಾಗುವುದರ ಜತೆಗೆ ತಾಯಿಯ ಪ್ರೀತಿಯನ್ನೂ ನೀಡಿ ಸಲಹಿದ್ದಕ್ಕಿಂತ ದೊಡ್ಡ ಸಾಧನೆಯನ್ನು ಭಾರತದಲ್ಲಿ ಬೇರೆ ಯಾರು ಮಾಡಿದ್ದಾರೆ? ಶಿವಕುಮಾರ ಸ್ವಾಮೀಜಿ ಇಲ್ಲದಿದ್ದರೆ ಇನ್ಯಾರು ಭಾರತ ರತ್ನ? ದೇಶದ ಪ್ರಧಾನಿ, ರಾಷ್ಟ್ರಪತಿಗಳಿಗೆ ಶಿಫಾರಸ್ಸು ಮಾಡುವ ಮೂಲಕ ಭಾರತ ರತ್ನ ಪ್ರಶಸ್ತಿ ನೀಡಲಾಗುತ್ತದೆ. ಮೋದಿಯವರೇ ಪ್ರಧಾನಿಯಾದಬಳಿಕ ನಾನಾಜಿ ದೇಶಮುಖ್, ಪ್ರಣವ್ ಮುಖರ್ಜಿ, ಭೂಪೇನ್ ಹಜಾರಿಕಾ ಇವರಿಗೆ ಭಾರತರತ್ನ ಶಿಫಾರಸ್ಸು ಮಾಡಿದ್ದಾರೆ. ಈ ಮೇಲಿನ ಮೂವರಿಗಿಂತ ಸಮಾಜಕ್ಕೆ ಸ್ವಾಮೀಜಿಯವರ ಕೊಡುಗೆ ಖಂಡಿತಾ ಹೆಚ್ಚಿನದೇ ಎನ್ನುವುದಲ್ಲಿ ಅನುಮಾನವೇ ಇಲ್ಲ.ರಾಜ್ಯವನ್ನು ಪ್ರತಿನಿಧಿಸುತ್ತಿರುವ 28 ಸಂಸದರು ಈ ವಿಷಯದಲ್ಲಿ ಕೆಲಸ ಮಾಡಬೇಕು.
ಶಿವಕುಮಾರ ಸ್ವಾಮೀಜಿಯವರಿಗೆ ಭಾರತ ರತ್ನ ನೀಡಿದರೆ ಅದು ನಿಸ್ವಾರ್ಥ ಸೇವೆಗೆ ನೀಡಿದ ಪ್ರತಿಫಲ ಆಗುತ್ತದೆ. ಈ ವಿಷಯದಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಸಂಸತ್ ಸದಸ್ಯರು ಒಗ್ಗಟ್ಟಾಗಿ ಪ್ರಧಾನಿಯರ ಕಣ್ಣು ತೆರೆಸುವ ಕೆಲಸ ಮಾಡಬೇಕು. ಸರಕಾರಘೋಷಿಸಿದರೂ ಘೋಷಿಸದಿದ್ದರೂ ಅವರು ಭಾರತ ರತ್ನವೇ. ಅದರಲ್ಲಿ ಯಾವುದೇ ಅನುಮಾನವಿಲ್ಲ