ಶಾಸಕ ಸ್ಥಾನಕ್ಕೆ ಸೀಮಿತವಾಗಿದ್ದ ಕ್ಷೇತ್ರಕ್ಕೆ ಬಂಗಾರ !
ಅವಲೋಕನ
ಚಂದ್ರಶೇಖರ ಬೇರಿಕೆ
1962ನೇ ಇಸವಿಯಲ್ಲಿ ಸ್ವತಂತ್ರ ವಿಧಾನ ಸಭಾ ಕ್ಷೇತ್ರ ರಚನೆಯಾದಲ್ಲಿಂದ ಇಲ್ಲಿಯವರೆಗೆ ಮಂತ್ರಿ ಸ್ಥಾನ ದೊರೆಯದೇ ಕೇವಲ ಶಾಸಕ ಸ್ಥಾನಕ್ಕಷ್ಟೇ ಸೀಮಿತವಾಗಿದ್ದ ಕ್ಷೇತ್ರ, ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವಿಧಾನ ಸಭಾ ಕ್ಷೇತ್ರ.
ಈ ಕ್ಷೇತ್ರದಿಂದ ಚುನಾಯಿತರಾದವರಿಗೆ ಇದೇ ಮೊದಲ ಬಾರಿಗೆ ಸಚಿವ ಸ್ಥಾನ ಲಭಿಸಿ ಇತಿಹಾಸ ನಿರ್ಮಾಣವಾಗಿದೆ. ಪ್ರಥಮ ಬಾರಿಗೆ ಶಾಸಕರಾದವರೇ ಮಂತ್ರಿಗಿರಿಗೆ ಲಾಬಿ ಮಾಡುವ ಈ ಕಾಲಘಟ್ಟದಲ್ಲಿ ಸತತ6ಬಾರಿಗೆ ಶಾಸಕನಾಗಿದ್ದರೂ ಸ್ಥಾನಮಾನ ಕ್ಕಾಗಿ ದೈನೇಸಿಯಂತೆ ಅಂಗಲಾಚದೆ ಮತ್ತು ಉನ್ನತ ಸ್ಥಾನಮಾನವೇ ಜೀವನದ ಪರಮ ಗುರಿಯಲ್ಲ ಎಂಬುದನ್ನು ಸಾಬೀತು ಮಾಡಿ ಶಾಂತಚಿತ್ತರಾಗಿಯೇ ಪಕ್ಷ ನಿಷ್ಠೆ ತೋರಿದ ಅಪರೂಪದ ರಾಜಕಾರಣಿ ಎಸ್ ಅಂಗಾರ.
ಸವರೀಗ ರಾಜ್ಯದ ಸಂಪುಟ ದರ್ಜೆಯ ಸಚಿವ. ಎಸ್. ಅಂಗಾರ ಅವರು ಬಡ ಕುಟುಂಬದ ಹಿನ್ನೆಲೆಯವರಾಗಿದ್ದು, ಜೀವನ ನಿರ್ವಹಣೆಯೇ ಅಸಾಧ್ಯದ ಪರಿಸ್ಥಿತಿಯಲ್ಲಿ ತನ್ನ ವಿದ್ಯಾಭ್ಯಾಸವನ್ನು ಪ್ರೌಢ ಶಿಕ್ಷಣದ ಹಂತದಲ್ಲಿ ಅನಿವಾರ್ಯವಾಗಿಮೊಟಕುಗೊಳಿಸಿದರು. ದಿನಗೂಲಿ ಕಾರ್ಮಿಕನಾಗಿ ದುಡಿದವರು. ಸೌಮ್ಯ ಸ್ವಭಾವದವರಾದ ಇವರು ನಿರಹಂಕಾರಿ, ಸರಳ, ಸಜ್ಜನ ಎಂದೇ ಗುರುತಿಸಲ್ಪಟ್ಟವರು.
ಬಾಲ್ಯದಲ್ಲಿಯೇ ಆರ್‌ಎಸ್‌ಎಸ್ ವಿಚಾರಧಾರೆಗಳಿಂದ ಪ್ರಭಾವಿತರಾಗಿ ಅದರ ಸಿದ್ಧಾಂತ, ಸಂಸ್ಕಾರ ಮತ್ತು ಆದರ್ಶಗಳಿಗೆ ಬದ್ಧರಾಗಿದ್ದುಕೊಂಡು ಆ ದಿಸೆಯಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡವರು. ಸಂಘದೊಂದಿಗಿನ ತಮ್ಮ ನಿಕಟ ಸಂಬಂಧದಿಂದ ಉತ್ತಮವಾದ ಜೀವನ ಮೌಲ್ಯವನ್ನು ರೂಢಿಸಿಕೊಂಡವರು ಮತ್ತು ಅತ್ಯಂತ ನಿಷ್ಠೆಯಿಂದ ಸಂಘದ ಸ್ವಯಂ ಸೇವಕನಾಗಿ ಸೇವೆ ಸಲ್ಲಿಸುತ್ತಾ, ಹಿರಿಯರ ಸಲಹೆ ಮೇರೆಗೆ ರಾಜಕೀಯ ಪ್ರವೇಶಿಸುವ ಸಲುವಾಗಿ ಭಾರತೀಯ ಜನತಾ ಪಾರ್ಟಿಗೆ ಸೇರ್ಪಡೆಗೊಂಡರು.
ಆರಂಭದಲ್ಲಿ1987ರಲ್ಲಿ ಮಂಡಲ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಿ ಪರಾಭವಗೊಂಡು ಬಳಿಕ ಮೊದಲ ಬಾರಿಗೆ1989ರ ವಿಧಾನ ಸಭಾ ಚುನಾವಣೆಯಲ್ಲಿ ಮೀಸಲು (ಪರಿಶಿಷ್ಟ ಜಾತಿ) ಕ್ಷೇತ್ರವಾದ ಸುಳ್ಯ ವಿಧಾನ ಸಭಾ ಕ್ಷೇತ್ರದಿಂದ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅಂಗಾರರವರು ಕಾಂಗ್ರೆಸ್ ಅಭ್ಯರ್ಥಿ ಕೆ.ಕುಶಲ ಅವರ ವಿರುದ್ಧ ಸುಮಾರು6ಸಾವಿರ ಮತಗಳ ಅಂತರದಿಂದ ಪರಾಭವಗೊಂಡರು. ಆದರೆ ಈ ಸೋಲುಗಳಿಂದ ಧೃತಿಗೆಡದ ಅವರು ಸೋಲು ಯಶಸ್ಸಿನ ಮೊದಲ ಮೆಟ್ಟಿಲು ಎಂಬಂತೆ ತಾನು ಪ್ರತಿನಿಧಿಸುವ ಭಾರತೀಯ ಜನತಾ ಪಾರ್ಟಿಯನ್ನು ಬಲಪಡಿಸುವುದಕ್ಕಾಗಿ ಪಕ್ಷದ ಸಂಘಟನಾ ಕಾರ್ಯದರ್ಶಿಯಾಗಿ ಶ್ರಮಿಸಿದರು.
ಆ ಬಳಿಕದ ಎಲ್ಲಾ ವಿಧಾನ ಸಭಾ ಚುನಾವಣೆಯಲ್ಲಿ ಸತತ6ಬಾರಿಗೆ ಜಯಭೇರಿ ಬಾರಿಸಿ ಸೋಲಿಲ್ಲದ ಸರದಾರ ಎಂದು ಕರೆಯಿಸಿ ಕೊಂಡವರು.2013ರ ವಿಧಾನ ಸಭಾ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು8ಸ್ಥಾನಗಳ ಪೈಕಿ7ಸ್ಥಾನಗಳು ಕಾಂಗ್ರೆಸ್ ಪಾಲಾದರೂ ಅಂಗಾರರವರು ಪ್ರತಿನಿಧಿಸುವ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಮಾತ್ರ ಬಿಜೆಪಿ ಜಯ ಗಳಿಸಲು ತನ್ನ ಕ್ಷೇತ್ರದ ಜನತೆಯ ಮೇಲೆ ಅವರು ಬೀರಿದ್ದ ಗಾಢ ಪ್ರಭಾವ ಮತ್ತು ಅವರ ವ್ಯಕ್ತಿತ್ವ ಕಾರಣ. ತಾನು ಸುದೀರ್ಘವಾಗಿ ಚುನಾವಣೆ ಯಲ್ಲಿ ಜಯ ಗಳಿಸಿದರೂ ಆ ಬಗ್ಗೆ ಅಹಂಕಾರದಿಂದ ವರ್ತಿಸುವುದಾಗಲಿ ಅಥವಾ ದರ್ಪದಿಂದ ನಡೆದು ಕೊಳ್ಳುವುದಾಗಲಿ ಮಾಡಲಿಲ್ಲ.
ಸರ್ವರ ಕುಂದುಕೊರತೆಗಳನ್ನು ಆಲಿಸಿ ಪರಿಹರಿಸಲು ತಾನು ಲಭ್ಯವಿರುವಂತೆ ನೋಡಿಕೊಂಡವರು. ತನ್ನನ್ನು ಭೇಟಿಯಾಗಲು ಇಚ್ಚಿಸುವವರೆಲ್ಲರಿಗೂ ಅವಕಾಶವನ್ನು ನೀಡಿ ಎಲ್ಲರೊಂದಿಗೂ ಆತ್ಮೀಯತೆಯಿಂದ ನಡೆದುಕೊಂಡರು. ತಾಳ್ಮೆ ಕಳೆದುಕೊಂಡು ವರ್ತಿಸಿದ ನಿದರ್ಶನ ಬಹುಶಃ ಅವರ ಜತೆ ನಿರಂತರವಾಗಿ ಕೆಲಸ ಮಾಡಿದ ವ್ಯಕ್ತಿಗಳ ಬಳಿಯೂ ಸಿಗಲಿಕ್ಕಿಲ್ಲ ಮತ್ತು ಅಂತಹ ಅನುಭವವೂ ಅವರಿಗೆ ಆಗಿರಲಿಕ್ಕಿಲ್ಲ.
ಸಮಯಾವಕಾಶ ಸಿಕ್ಕಾಗ ತನ್ನ ತೋಟದ ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳುತ್ತಾರೆ. ಇಲ್ಲಿವರೆಗಿನ ತಮ್ಮ ರಾಜಕೀಯ ಜೀವನದಲ್ಲಾಗಲೀ ಅಥವಾ ವೈಯಕ್ತಿಕ ಜೀವನದಲ್ಲಾಗಲೀ ವಾದಗಳನ್ನು ಸೃಷ್ಟಿಸಿಕೊಂಡವರಲ್ಲ. ವಿರೋಧ ಪಕ್ಷದ ರಾಜಕೀಯ ಮುಖಂಡರು ಕೇವಲ ಚುನಾವಣಾ ದೃಷ್ಟಿಯಿಂದ ಪಕ್ಷ – ಸಿದ್ಧಾಂತಕ್ಕೆ ಸೀಮಿತಗೊಳಿಸಿ ಚುನಾವಣಾ ಪ್ರಚಾರ ಸಂದರ್ಭದಲ್ಲಷ್ಟೇ ಅವರನ್ನು ಟೀಕಿಸುತ್ತಿದ್ದರೇ ವಿನಾ ಅವರ ವಿರುದ್ಧ ವೈಚಾರಿಕ ಭಿನ್ನಾಭಿಪ್ರಾಯಕ್ಕಿಂತಲೂ ಹೊರತಾದ ಟೀಕೆ ಟಿಪ್ಪಣಿಗಳು ವ್ಯಕ್ತವಾಗುತ್ತಿರಲಿಲ್ಲ.
ಸ್ವತಃ ಅಂಗಾರರವರು ಕೇವಲ ಚುನಾವಣಾ ಸಂದರ್ಭದಲ್ಲಷ್ಟೇ ತಾನು ಪ್ರತಿನಿಧಿಸುವ ರಾಜಕೀಯ ಪಕ್ಷದ ಚಿಹ್ನೆಯಡಿ ಮತಯಾಚನೆ ಮಾಡುತ್ತಾರೆ ವಿನಾ, ಮಾಡುವ ಕಾರ್ಯಗಳಲ್ಲಿ ರಾಜಕೀಯ ಬೆರೆಸಿದವರಲ್ಲ. ಕೇವಲ ಒಂದು ಬಾರಿ ಶಾಸಕ ಅಥವಾ ಸಂಸದನಾಗಿ ಆಯ್ಕೆಯಾದರೆ ಕೋಟಿ ಸಂಪತ್ತಿನ ಒಡೆಯರಾಗುವ ಈ ವ್ಯವಸ್ಥೆಯಲ್ಲಿ ವಿರಳಾತಿ ವಿರಳವಾಗಿ ಕಾಣಸಿಗುವನಿಸ್ವಾರ್ಥ ಮತ್ತು ಪ್ರಾಮಾಣಿಕ ರಾಜಕೀಯ ನಾಯಕರ ಪೈಕಿ ಅಂಗಾರ ಅವರೂ ಒಬ್ಬರಾಗಿದ್ದು, ಅಂತಹ ಶ್ರೇಷ್ಠ ವ್ಯಕ್ತಿತ್ವವನ್ನು ಪಾಲಿಸಿಕೊಂಡು ಬಂದವರು.
ಮತಯಾಚನೆ ಸಂದರ್ಭದಲ್ಲಿ ನನ್ನನ್ನು ಆಶೀರ್ವದಿಸಿ ಎಂದು ಕೇಳುತ್ತಿದ್ದರೇ ವಿನಾ ಮತ ಪಡೆಯುವ ಸಲುವಾಗಿ ಈಡೇರಿಸ ಲಾಗದ ಭರವಸೆಯನ್ನು ಎಂದೂ ನೀಡಿದವರಲ್ಲ ಮತ್ತು ನೀಡಿದ ಭರವಸೆಯನ್ನು ಮರೆತವರೂ ಅಲ್ಲ. ವ್ಯಕ್ತಿ ಗೌರವವನ್ನು ಮರೆಯದೆ ಪಕ್ಕಾ ತುಳುನಾಡಿನ ಶೈಲಿಯಲ್ಲಿ ಅಮ್ಮಾ, ಅಣ್ಣಾ, ಅಕ್ಕಾ ಎಂದೇ ಸಂಭೋಧಿಸಿ ಸ್ವಕ್ಷೇತ್ರದ ಜನತೆಯಿಂದ ಅಪಾರ ಪ್ರೀತಿ ಗಳಿಸಿದರು ಮತ್ತು ತನ್ನ ಘನತೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡರು.
ಎಸ್. ಅಂಗಾರ ಅವರು ಈ ರಾಜ್ಯದ ಮಂತ್ರಿ ಮಂಡಲಕ್ಕೆ ಸೇರ್ಪಡೆಯಾಗಬೇಕೆಂದು ಕ್ಷೇತ್ರದ ಜನತೆ ಮತ್ತು ಅವರನ್ನು ಬಲ್ಲವರು ಪಕ್ಷಾತೀತವಾಗಿ ಅದೆಷ್ಟೋ ವರ್ಷದಿಂದ ಬಯಸಿದ್ದರು. ಈ ಬಗ್ಗೆ ಕ್ಷೇತ್ರದ ಜನತೆ ಅವರ ಮೇಲೆ ಹಲವು ಬಾರಿ ಒತ್ತಡವನ್ನು ಹಾಕಿದ್ದುಂಟು. ಅಲ್ಲದೇ ವಿರೋಧ ಪಕ್ಷದ ನಾಯಕರೂ ಅವರ ಪರವಾಗಿ ಧ್ವನಿಯೆತ್ತಿದ್ದೂ ಉಂಟು. ಆದರೆ ಪ್ರತಿ ಸಂದರ್ಭ ದಲ್ಲೂ ತಮ್ಮ ಬೆಂಬಲಿಗರನ್ನು ಸಮಾಧಾನಪಡಿಸಿ ಸ್ವಲ್ಪ ಕಾಯುವಂತೆ ಕೇಳಿಕೊಂಡು ಪಕ್ಷದ ನಿರ್ಧಾರವನ್ನು ಗೌರವಿಸಿದವರು.
ಮಂತ್ರಿಗಿರಿಗಾಗಿ ಪಕ್ಷ ಸಿದ್ಧಾಂತ ಗಳನ್ನು ಗಾಳಿಗೆ ತೂರಿ ಬಂಡಾಯದ ಬಾವುಟ ಹಾರಿಸಿ ಬೆಂಬಲಿಗರ ಮೂಲಕ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚಿಸಿ ಪ್ರತಿಭಟಿಸುವ ಈ ಸಂದರ್ಭದಲ್ಲಿ ಶಾಂತಚಿತ್ತರಾಗಿದ್ದುಕೊಂಡು ಕ್ಷೇತ್ರದ ಜನತೆಯೂ ಸಂಯಮ ಕಾಪಾಡಿಕೊಳ್ಳುವಂತೆ ನೋಡಿಕೊಂಡರು. ಚುನಾವಣಾ ಲಾಭಕ್ಕಾಗಿ ಅಥವಾ ಸ್ಥಾನಮಾನಕ್ಕಾಗಿ ತನ್ನ ಕ್ಷೇತ್ರದಲ್ಲಿ ಕುಮ್ಮಕ್ಕಿನ ಮೂಲಕ ಪರಸ್ಪರರನ್ನು ಎತ್ತಿ ಕಟ್ಟಿ, ಶಾಂತಿ ಕದಡಿ ರಾಜಕೀಯ ಮಾಡದೇಸರ್ವರೂ ಸಮಾನರು ಎಂಬ ತತ್ತ್ವದಲ್ಲಿ ನಂಬಿಕೆ ಯಿಟ್ಟ ವ್ಯಕ್ತಿ.
ಕೆಲವು ವರ್ಷಗಳ ಹಿಂದೆ ರಾಜ್ಯ ಬಿಜೆಪಿಯಲ್ಲಿ ಅನಪೇಕ್ಷಿತ ಬೆಳವಣಿಗೆ ನಡೆದು ಗುಂಪುಗಾರಿಕೆ ಸೃಷ್ಟಿಯಾದಾಗಲೂ ಯಾವುದೇ ಗುಂಪಿನಲ್ಲಿ ಗುರುತಿಸಿಕೊಳ್ಳದೇ ತಟಸ್ಥ ಧೋರಣೆ ತಳೆದು ಪಕ್ಷ ನಿಷ್ಠೆ ತೋರಿದ ಅಪರೂಪದ ರಾಜಕಾರಣಿ ಅಂಗಾರ.ವಿಳಂಬವಾಗಿಯಾದರೂ ಪಕ್ಷದ ವರಿಷ್ಠರು ಅವರನ್ನು ಗುರುತಿಸಿ ಸೂಕ್ತ ಸ್ಥಾನಮಾನವನ್ನು ನೀಡಿದ್ದರಿಂದ ಪಕ್ಷಾತೀತವಾಗಿ ಕ್ಷೇತ್ರದ ಜನತೆಯೂ ಸಂತೃಪ್ತರಾಗಿದ್ದಾರೆ. ಇದು ಪಕ್ಷನಿಷ್ಠೆ, ಸರಳ ಸಜ್ಜನಿಕೆಗೆ ದೊರೆತ ಗೌರವ ಎಂದೇ ವಿಶ್ಲೇಷಿಸಲಾಗುತ್ತಿದೆ.
ಪ್ರಮಾಣ ವಚನದ ಬಳಿಕ ವಿಜೃಂಭಣೆಯಿಂದ ವಿಜಯೋತ್ಸವ ಆಚರಿಸಿದವರೂ ಅಲ್ಲ. ಶಾಸಕನಾಗಿರುವಾಗ ಯಾವ ರೀತಿಯ ಜೀವನ ಕ್ರಮ ರೂಢಿಸಿಕೊಂಡಿದ್ದರೋ ಸಚಿವರಾದ ಬಳಿಕವೂ ಅದನ್ನೇ ಮುಂದುವರಿಸಿ ಕೊಂಡು ಸಾಮಾನ್ಯರಲ್ಲಿ ಸಾಮಾನ್ಯ ರಾಗಿ ಗುರುತಿಸಿಕೊಳ್ಳಲು ಇಚ್ಛಿಸುವ ಅಂಗಾರರವರು ನಿರ್ಭೀತಿಯಿಂದ ಜನರೊಂದಿಗೆ ಬೆರೆಯುತ್ತಿದ್ದಾರೆ.
ಐದನೇ ಬಾರಿಗೆ ಶಾಸಕರಾಗಿರುವ ಸಂದರ್ಭದಲ್ಲಿ ಯಾವುದೋ ಕಾರ್ಯನಿಮಿತ್ತ ಅವರು ಸುಳ್ಯದಿಂದ ಬೆಂಗಳೂರಿಗೆ ಸರಕಾರಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಅವರ ಜೊತೆ ನಾನು ಸಹಪ್ರಯಾಣಿಕನಾಗಿದ್ದೆ ಎಂಬುದು ಮರೆಯಲಾಗದ ಸಂದರ್ಭ ಮತ್ತು ಅವರ ಸರಳತೆಯ ಬಗ್ಗೆ ನನ್ನ ಸ್ವಂತ ಮತ್ತು ಪ್ರತ್ಯಕ್ಷ ಅನುಭವ. ಅವರಿಗೆ ಕೇಡು ಬಯಸುವ ತಶತ್ರುಗಳಿಲ್ಲ, ರಾಜಕೀಯವೈರಿಗಳೂ ಇಲ್ಲ. ಎಂದೂ ತನಗೆ ವೈರಿಗಳು ಸೃಷ್ಟಿಯಾಗದ ರೀತಿಯ ವ್ಯಕ್ತಿತ್ವ ಮತ್ತು ನಡವಳಿಕೆಯನ್ನು ಮೈಗೂಡಿಸಿ ಕೊಂಡವರು.
ಯಾಕೆಂದರೆ ಅವರು ಎಸ್ (ಸರ್ವರ) ಅಂಗಾರ. ಶಾಸಕರಾಗಿದ್ದುಕೊಂಡು ಕ್ಷೇತ್ರದ ಅಭಿವೃದ್ಧಿಗಾಗಿ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಅವರು ಮಾಡಿದ್ದಾರೆ. ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಅಡಕೆ ಬೆಳೆಗಾರರೇ ಹೆಚ್ಚಿರುವುದರಿಂದ ಅಡಕೆ ಕೃಷಿಕರಹಿತಾಸಕ್ತಿ ಕಾಪಾಡುವುದೇ ಅವರ ಮೊದಲ ಆದ್ಯತೆಯಾಗಿತ್ತು. ಈ ನಿಟ್ಟಿನಲ್ಲಿ ಅವರು ಅಡಕೆ ಬೆಳೆಗಾರರ ವಿಶ್ವಾಸವನ್ನು ಗಳಿಸಿದ್ದಾರೆ.
ಸ್ವಕ್ಷೇತ್ರಕ್ಕೆ ಅನೇಕ ಯೋಜನೆಗಳನ್ನು, ಅನುದಾನಗಳನ್ನು ಮಂಜೂರುಗೊಳಿಸಲು ಶ್ರಮಿಸಿದ್ದಾರೆ. ವಿಧಾನ ಮಂಡಲದ ಹಿಂದುಳಿದ ವರ್ಗಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾಗಿದ್ದುಕೊಂಡು ಹಿಂದುಳಿದ ವರ್ಗಗಳ ವಸತಿ ನಿಲಯ, ಪಿಡಬ್ಲ್ಯೂಡಿ ಉಪವಿಭಾಗ ಸ್ಥಾಪನೆ, ಸುಳ್ಯ ಹಾಗೂ ಸುಬ್ರಹ್ಮಣ್ಯದಲ್ಲಿ ಬಸ್ ನಿಲ್ದಾಣಗಳ ಸ್ಥಾಪನೆ, ಸುಳ್ಯ ಬಸ್ ಡಿಪೋ, ಬೆಳ್ಳಾರೆ, ಪಂಜ ಮತ್ತುಗುತ್ತಿಗಾರಿನಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸ್ಥಾಪನೆ, ಮಿನಿ ವಿಧಾನ ಸೌಧ, ಸುಳ್ಯ ನಗರ ಪಂಚಾಯತ್‌ಗೆ17ಕೋಟಿ ಅನುದಾನ, ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ಅಭಿವೃದ್ಧಿಗಾಗಿ ಮಾಸ್ಟರ್ ಪ್ಲಾನ್ ರಚನೆ, ಗ್ರಾಮಾಂತರ ರಸ್ತೆಗಳುಒಳಗೊಂಡಂತೆ ಅನೇಕ ರಸ್ತೆಗಳ ಅಭಿವೃದ್ಧಿ, ಸೇತುವೆ, ತೂಗು ಸೇತುವೆಗಳು ಮತ್ತು ಕಿಂಡಿ ಅಣೆಕಟ್ಟುಗಳ ನಿರ್ಮಾಣ, ಸ್ವಕ್ಷೇತ್ರದ ದೇವಸ್ಥಾನಗಳಿಗೆ50ಕೋಟಿಗಳ ಅನುದಾನ ಮಂತಾದವುಗಳು ಅವರು ಕೈಗೊಂಡ ಅಭಿವೃದ್ಧಿ ಯೋಜನೆಗಳ ಕೆಲವು ಉಲ್ಲೇಖ ಗಳು.
ಆದರೆ ಅಭಿವೃದ್ಧಿ ಯೋಜನೆಯ ಕಾರ್ಯಗಳಡಿಯಲ್ಲಿ ಅವರ ವಿರುದ್ಧ ಯಾವುದೇ ಅಕ್ರಮದ ಆರೋಪ ಕೇಳಿ ಬಂದಿಲ್ಲ. ಅಭಿವೃದ್ಧಿ ಕಾರ್ಯಗಳ ಹೆಸರಿನಲ್ಲಿ ದೊಡ್ಡ ಕಟೌಟ್‌ಗಳಾಗಲೀ ಅಥವಾ ಅಭಿನಂದನೆ ಮತ್ತು ಪ್ರಶಂಸಾ ಬ್ಯಾನರ್‌ಗಳಾಗಲೀ ಕಾಣಸಿಗುವುದಿಲ್ಲ. ಯಾಕೆಂದರೆ ಅವರು ಯಾವತ್ತೂ ಪ್ರಚಾರ ಪ್ರಿಯರಾಗಿರಲಿಲ್ಲ. ಅನಿರೀಕ್ಷಿತವಾಗಿ ರಾಜಕೀಯ ಪ್ರವೇಶ ಮಾಡಿದ ಸಂದರ್ಭದಲ್ಲಿನ ಕಷ್ಟಗಳಿಗೆ ಸ್ಪಂದಿಸಿ, ಹಣಕಾಸಿನ ಸಹಾಯ ಮಾಡಿ ಅವರನ್ನು ಪ್ರೋತ್ಸಾಹಿಸಿ ಬೆಳೆಸಿದವರನ್ನು ಬಹಳ ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಾರೆ.
ನನ್ನ ಜೀವನವೇ ಬಡತನ, ಬಡತನದಲ್ಲಿ ಯಾವ ರೀತಿಯ ಕಷ್ಟಗಳನ್ನು ಅನುಭವಿಸಬೇಕೋ ಆ ಎಲ್ಲಾ ರೀತಿಯ ಕಷ್ಟಗಳನ್ನು ನಾನು ನನ್ನ ಜೀವನದಲ್ಲಿ ಅನುಭಸಿದ್ದೇನೆ. ಪಕ್ಷ ವಹಿಸಿದ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಬೇಕೆಂಬ ತುಡಿತವಿದೆ. ಸಚಿವ ಸ್ಥಾನವನ್ನು ನಿಭಾಯಿಸುವಲ್ಲಿ ನನಗೆ ಅನುಭವದ ಕೊರತೆಯಿದೆ ಎಂಬುದನ್ನು ಯಾವುದೇ ಸಂಕೋಚ ವಿಲ್ಲದೇ ಮುಕ್ತ ವಾಗಿ ಒಪ್ಪಿಕೊಳ್ಳುತ್ತಾ, ಹಿರಿಯರ ಮಾರ್ಗದರ್ಶನವನ್ನು ಪಡೆದು ವಹಿಸಿದ ಜವಾಬ್ದಾರಿಯನ್ನು ಪರಿಣಾಮಕಾರಿ ಯಾಗಿ ನಿಭಾಯಿಸುತ್ತೇನೆ ಎಂಬ ಭರವಸೆಯನ್ನು ವ್ಯಕ್ತಪಡಿಸುತ್ತಾರೆ.
ಹಾಗೆಯೇ ಸವಾಲುಗಳನ್ನು ಎದುರಿಸಲು ಸಿದ್ಧನಿದ್ದೇನೆ ಎಂಬುದನ್ನು ವಿಶ್ವಾಸದಿಂದ ನುಡಿಯುತ್ತಾರೆ. ಸಚಿವನಾದ ಬಳಿಕ ನಾನು ಕ್ಷೇತ್ರಕ್ಕೆ ಸೀಮಿತವಾಗಿರಲು ಸಾಧ್ಯವಿಲ್ಲ. ಹಾಗಾಗಿ ನನ್ನ ಅನುಪಸ್ಥಿತಿಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರುಗಳ ಮೂಲಕ ಕ್ಷೇತ್ರದ ಸಮಸ್ಯೆಗಳನ್ನು ತಿಳಿದುಕೊಂಡು ಕೆಲಸ ಮಾಡುವ ಯೋಜನೆ ಹಾಕಿಕೊಂಡಿದ್ದೇನೆ ಎಂಬುದು ಅವರ ಮನದ ಮಾತು.
ಕುಡಿಯುವ ನೀರು ಮತ್ತು ವಸತಿಯಂಥ ಮೂಲ ಅಗತ್ಯಗಳ ಜತೆಗೆ ಕ್ಷೇತ್ರದ ಜನತೆಯ ಅನೇಕ ವರ್ಷಗಳ ಬೇಡಿಕೆಯಾದ ೧೧೦ ಕೆ. ಸಾಮರ್ಥ್ಯದ ವಿದ್ಯುತ್ ಯೋಜನೆಯನ್ನು ಕಲ್ಪಿಸಿಕೊಡುವ ಪ್ರಯತ್ನ ಹಾಗೂ ಸುಳ್ಯಕ್ಕೆ ಇನ್ನಷ್ಟು ಮೆರುಗನ್ನು ನೀಡುವ ಗುರಿಯನ್ನು ವ್ಯಕ್ತಪಡಿಸುತ್ತಾ ಮುಂದಿನ ಆಡಳಿತದ ಮುನ್ನೋಟವನ್ನು ತೆರೆದಿಟ್ಟಿದ್ದಾರೆ.
ಮಂತ್ರಿ ಪದವಿಗಾಗಿ ಅರ್ಹತೆ ಮತ್ತು ನೈತಿಕತೆ ಎರಡನ್ನೂ ಹೊಂದಿದ್ದರೂ ಮಂತ್ರಿ ಸ್ಥಾನ ತಡವಾಗಿ ದಕ್ಕಿದ ಬಗ್ಗೆ ಅವರಿಗೆ ಬೇಸರ ವಿಲ್ಲ ಎಂಬುದನ್ನು ಸಂದರ್ಭ ಮತ್ತು ಪರಿಸ್ಥಿತಿಯ ವಿಚಾರಗಳನ್ನು ಮುಂದಿಟ್ಟುಕೊಂಡು ಪಕ್ಷದ ನಿರ್ಧಾರವನ್ನು ಸಮರ್ಥನೆ ಮಾಡಿಕೊಳ್ಳುತ್ತಾರೆ. ನಾನೊಬ್ಬ ಕೂಲಿ ಕಾರ್ಮಿಕನಾಗಿ ಬಂದವನಾಗಿದ್ದು, ನಡೆದುಕೊಂಡು ಬಂದ ದಾರಿಯನ್ನು ಮರೆಯುವು ದಿಲ್ಲ.
ನೀವುಗಳೂ ಬಂದ ದಾರಿಯನ್ನು ಮರೆಯಬೇಡಿ ಎಂದು ಜನತೆಗೆ ಕರೆ ನೀಡುತ್ತಾ, ಆಡಳಿತವನ್ನು ಪ್ರೀತಿ ಮತ್ತು ವಿಶ್ವಾಸದಿಂದಮಾಡಲು ಇಚ್ಛಿಸಿದ್ದು, ಎಲ್ಲರೂ ಸಹಕಾರ ನೀಡುವಂತೆ ಕೋರಿದಾಗ ಅವರ ಬಗ್ಗೆ ಇನ್ನಷ್ಟು ಗೌರವ ಹೆಚ್ಚುತ್ತದೆ. ನಿರಂತರ ಗೆಲುವು ಮತ್ತು ಸರಳ ಹಾಗೂ ಸಜ್ಜನಿಕೆಯ ವ್ಯಕ್ತಿತ್ವಕ್ಕಾಗಿ ಕ್ಷೇತ್ರದಲ್ಲಿ ‘ಸೋಲಿಲ್ಲದ ಸರದಾರ, ಸುಳ್ಯದ ಬಂಗಾರ, ನಮ್ಮ ಅಂಗಾರ’ ಎಂದೇ ಅವರು ಪ್ರಸಿದ್ಧಿಯಾಗಿದ್ದಾರೆ.