ಆತ ಅದೇಕೆ ಹನ್ನೊಂದು ತಿಂಗಳು ಅನುಸರಿಸಿದ ?
ಶಶಾಂಕಣ
ಶಶಿಧರ ಹಾಲಾಡಿ
ನಮ್ಮ ದೇಶದಿಂದ ಬಹಳ ದೂರವಿರುವ ಐರ್ಲೆಂಡ್‌ನಲ್ಲಿ 29 ಆಗಸ್ಟ್1979ರಂದು ಒಂದು ಬಾಂಬ್ ಸಿಡಿಯಿತು. ಬ್ರಿಟಿಷರದಬ್ಬಾಳಿಕೆಯನ್ನು ವಿರೋಧಿಸುತ್ತಿದ್ದ ಐರಿಷ್ ಹೋರಾಟಗಾರನೊಬ್ಬ ಸಿಡಿಸಿದ ಆ ಬಾಂಬ್ ಸೋಟದಲ್ಲಿ ಮೂವರು ಸತ್ತರು.
ಅವರಲ್ಲೊಬ್ಬ ಲಾರ್ಡ್ ಮೌಂಟ್ ಬ್ಯಾಟನ್, ನಮ್ಮನ್ನಾಳಿದ ದೊರೆ. ನಮ್ಮ ದೇಶವನ್ನು ತರಾತುರಿಯಲ್ಲಿ ಇಬ್ಭಾಗ ಮಾಡಿ, ಲಭ್ಯವಿದ್ದ ಸಮಯಾವಕಾಶಕ್ಕಿಂತ ಸುಮಾರು ಒಂದು ವರ್ಷ ಮೊದಲೇ ‘ಅಧಿಕಾರ ಹಸ್ತಾಂತರ’ಕ್ಕೆ ಕಾರಣಕರ್ತ ಎನಿಸಿದ, ಸ್ವಾತಂತ್ರ್ಯ ದೊರೆತ ನಂತರ ಸುಮಾರು ಒಂದು ವರ್ಷ ಕಾಲ ನಮ್ಮನ್ನು ಆಳಿದ ಮೌಂಟ್ ಬ್ಯಾಟನ್. ಆತ ಸತ್ತ ಆ ದಿನ, ಉತ್ತರ ಭಾರತದ ಲಕ್ಷಾಂತರ ಆತ್ಮಗಳು ಮೌನವಾಗಿ ಮಿಡಿದಿರಲೇಬೇಕು – ಸುಮಾರು 30 ವರ್ಷಗಳಿಗೂ ಮುಂಚೆ, ದೇಶ ವಿಭಜನೆಯ ಸಮಯದಲ್ಲಿ ಉದ್ಭವಗೊಂಡ ಗೊಂದಲದಲ್ಲಿ ಭುಗಿಲೆದ್ದ ಬೆಂಕಿಗೆ ಸಿಕ್ಕು ಸೀದು ಹೋದ ಆತ್ಮಗಳು ಅವು.
ಯೋಜನಾ ರಹಿತವಾಗಿ ದೇಶ ವಿಭಜನೆ ಮಾಡಿ, ಅಂತಹ ಒಂದು ಘೋರ ಹತ್ಯಾಕಾಂಡಕ್ಕೆ ಕಾರಣ ಪುರುಷ ಎನಿಸಿದ ಮೌಂಟ್ ‌ಬ್ಯಾಟನ್‌ನು, ಐರ್ಲೆಂಡ್ ಹೋರಾಟಗರ ಸೋಟಿಸದ ಬಾಂಬ್ ಸಿಡಿತದಲ್ಲಿ ಸತ್ತಾಗ, ನಮ್ಮ ದೇಶದ ಒಂದು ಕೋಟಿಗೂ ಹೆಚ್ಚಿನ ಸಂಖ್ಯೆಯ ನಿರಾಶ್ರಿತರಲ್ಲಿ ಕೆಲವರಾದರೂ ನಿಟ್ಟುಸಿರು ಬಿಟ್ಟಿರಲೇ ಬೇಕು.
ಆದರೂ ಈ ವ್ಯಕ್ತಿಯು, ಮೊದಲ ಲೆಫ್ಟಿನೆಂಟ್ ಗವರ್ನರ್ ಜನರಲ್ ಆಗಿ ನಮ್ಮನ್ನು ಆಳಿ, ಕಾಶ್ಮೀರದ ಸಮಸ್ಯೆಗೆ ಬೀಜವನ್ನು ಬಿತ್ತಿದರೂ, ಯಾವುದೇ ಕೆಟ್ಟ ಹೆಸರಿಲ್ಲದೆ ಗೌರವಯುತವಾಗಿ ನಮ್ಮ ದೇಶವನ್ನು ಬಿಟ್ಟು ತನ್ನ ನಾಡನ್ನು ಸೇರಿಕೊಂಡ ಪರಿ ವಿಸ್ಮಯ ಹುಟ್ಟಿಸುತ್ತದೆ. ಉತ್ತರ ಭಾರತದ ಜನರು ನಮ್ಮ ರಾಜ್ಯದವರ ಮೇಲೆ ಒಂದು ಟೀಕೆ ಮಾಡುವುದುಂಟು – ನೀವು ಪುಣ್ಯವಂತರು, 1947-48ರ ಸಮಯದ ಭೀಕರ ಹಿಂಸಾಕಾಂಡದ ಬಿಸಿಯು ನಿಮ್ಮನ್ನು ತಟ್ಟಲೇ ಇಲ್ಲ, ದೇಶ ವಿಭಜನೆಯಸಮಯದಲ್ಲಿ ಭುಗಿಲೆದ್ದ ಕೋಮುಗಲಭೆಯ ರಕ್ತಪಾತದ ವಿವರಗಳೇ ನಿಮಗೆ ಗೊತ್ತಿಲ್ಲ ಎಂದು.
ಉತ್ತರ ಭಾರತದವರ ಈ ಟೀಕೆ ಯಲ್ಲಿ ಸ್ವಲ್ಪ ಸತ್ಯಾಂಶವಿದೆ. ಧರ್ಮದ ಆಧಾರದ ಮೇಲೆ ದೇಶವನ್ನು ವಿಭಜಿಸಿ, ಹಿಂದೂ ಮತ್ತು ಸಿಖ್ ಜನರೆಲ್ಲಾ ಭಾರತಕ್ಕೆ ಹೋಗಿ ಮತ್ತು ಮುಸ್ಲಿಮರೆಲ್ಲಾ ಪಾಕಿಸ್ತಾನಕ್ಕೆ ಹೋಗಿ ಎಂದು ಬ್ರಿಟಿಷರು ಸೂಚಿಸಿದಾಗ, ಅತಿ ಹೆಚ್ಚು ಗೊಂದಲ ಉಂಟಾಗಿದ್ದು ಉತ್ತರ ಭಾರತದಲ್ಲಿ. ಹೊಸ ದೇಶ ಎನಿಸಿದ ಪಾಕಿಸ್ತಾನ ದಿಂದ ಅದೆಷ್ಟೋ ಲಕ್ಷ ಹಿಂದೂ ಮತ್ತು ಸಿಖ್ ಜನರು ಉಟ್ಟ ಬಟ್ಟೆಯಲ್ಲಿ ಭಾರತಕ್ಕೆ ಓಡಿಬರಬೇಕಾಯಿತು. ಅದೇ ರೀತಿ ಸಾಕಷ್ಟು ದೊಡ್ಡ ಪ್ರಮಾಣದ ಮುಸ್ಲಿಮರು ಪಾಕಿಸ್ತಾನಕ್ಕೆ ಹೋದರು.
ಆದರೆ ದಕ್ಷಿಣ ಭಾರತದ ಮುಸ್ಲಿಮರ ಆ ರೀತಿಯ ವಲಸೆಗೆ ಮುಂದಾಗಲಿಲ್ಲ ಮತ್ತು ಅದು ಪ್ರಾಯೋಗಿಕವಾಗಿ ಸಾಧ್ಯವೂ ಇರಲಿಲ್ಲ. ಜತೆಗೆ ಪಾಕಿಸ್ತಾನವು ಒಂದು ಧರ್ಮದವರಿಗಾಗಿ ರೂಪುಗೊಂಡ ದೇಶವಾದ್ದರಿಂದ, ಅಲ್ಲಿ ಇತರ ಜನಾಂಗವು ಇರಲು ಅಸಾಧ್ಯ ಎಂದೇ ಬಿಂಬಿತವಾಯಿತು. ಆದರೆ ನಮ್ಮ ದೇಶವು ಧರ್ಮದ ಆಧಾರದ ಮೇಲೆ ರೂಪುಗೊಂಡದ್ದಲ್ಲ, ಸೆಕ್ಯುಲರ್ ದೇಶಎಂದೇ ಹೆಸರಾಯಿತು. ಜತೆಗೆ, ಅಂದು ಅಧಿಕಾರ ಸೂತ್ರ ಹಿಡಿದವರು ಮತ್ತು ಗಾಂಧೀಜಿ ಇಲ್ಲಿನ ಅಲ್ಪ ಸಂಖ್ಯಾತರ ರಕ್ಷಣೆಗೆ ಎಲ್ಲಾ ರೀತಿಯ ಕ್ರಮ ಕೈಗೊಂಡಿದ್ದರಿಂದಾಗಿ, ದಕ್ಷಿಣ ಭಾರತದಿಂದ ಪಾಕಿಸ್ತಾನಕ್ಕೆ ವಲಸೆ ಹೋಗುವ ಪ್ರಮೇಯ ಉಂಟಾಗಲಿಲ್ಲ.
ಮುಖ್ಯವಾಗಿ ಪಂಜಾಬ್, ಕಾಶ್ಮೀರ ಮೊದಲಾದ ಪ್ರದೇಶಗಳಲ್ಲಿ 1947-48ಅವಧಿಯಲ್ಲಿ ಭೀಕರ ದಂಗೆಗಳಾದವು, ಸುಮಾರು 5 ರಿಂದ20ಲಕ್ಷ ಜನ ಸತ್ತರು, ಒಂದು ಕೋಟಿಗೂ ಹೆಚ್ಚು ನಿರಾಶ್ರಿತರು ಭಾರತದಲ್ಲಿ ಆಶ್ರಯ ಪಡೆಯಬೇಕಾಯಿತು. ಇಂತಹ ದೊಂದು ಭೀಕರ ಸನ್ನಿವೇಶಕ್ಕೆ ಮುಖ್ಯ ಕಾರಣ ಲಾರ್ಡ್ ಮೌಂಟ್ ಬ್ಯಾಟನ್ ತೋರಿದ ನಿರ್ಲಕ್ಷ್ಯ, ಹೊಣೆಗೇಡಿತನ, ದುರಹಂಕಾರ, ಹುಂಬತನ ಮತ್ತು ಅಜಾಗರೂಕತೆ.
24.3.1947ರಂದು ಭಾರತಕ್ಕೆ ಬಂದು ವೈಸ್‌ರಾಯ್ ಆಗಿ ಅಧಿಕಾರ ವಹಿಸಿಕೊಂಡ ಆತನಿಗೆ ಸ್ಪಷ್ಟ ನಿರ್ದೇಶನವಿತ್ತು. ಜೂನ್ 1948ಕ್ಕಿಂತ ಮುಂಚೆ ಅಧಿಕಾರ ಹಸ್ತಾಂತರ ಮಾಡಿ ವಾಪಸಾಗು ಎಂದು ಬ್ರಿಟನ್‌ನಲ್ಲೇ ಸ್ಪಷ್ಟವಾಗಿ ಹೇಳಿ ಕಳಿಸಿದ್ದರು. ಆದರೆ ಈತ ಮಾಡಿದ್ದೇನು? ಇಲ್ಲಿಗೆ ಬಂದ ತಕ್ಷಣ ವಿವಿಧ ಪ್ರಾಂತ್ಯಗಳ ಬ್ರಿಟಿಷ್ ಅಧಿಕಾರಿ ಗಳ ಜತೆ ಸಮಾಲೋಚನೆ ಮಾಡಿದ ಮತ್ತು ನೆಹರೂ, ಜಿನ್ನಾ ಮೊದಲಾದ ಕಾಂಗ್ರೆಸ್ ನಾಯಕ ರೊಂದಿಗೂ ಚರ್ಚೆ ನಡೆಸಿದ.
ನಂತರ ಆತ ಕೈಗೊಂಡ ನಿರ್ಣಯ ವೇನು ಗೊತ್ತೆ? 15.8.1947ರಂದು ಅಧಿಕಾರ ಹಸ್ತಾಂತರ ಮಾಡಲಾಗುವುದು ಎಂದು! ಅಂದರೆ, ಲಭ್ಯ ಅವಧಿಗಿಂತ ಒಂದು ವರ್ಷ ಮುಂಚೆಯೇ, ತಾನು ಬಂದಿಳಿದ ಆರೇ ತಿಂಗಳಲ್ಲಿ ಸ್ವಾತಂತ್ರ್ಯ ಘೋಷಿಸುವುದು ಎಂದು ಏಕಪಕ್ಷೀಯವಾಗಿ ನಿರ್ಣಯ ತೆಗೆದುಕೊಂಡ. ಈ ತರಾತುರಿ ನಿರ್ಧಾರವು ಲಕ್ಷಾಂತರ ಜೀವನಷ್ಟಕ್ಕೆ ಕಾರಣ ವಾಯಿತು. ಇಂತಹ ದೊಂದು ಹೊಣೆಗೇಡಿ ನಿರ್ಣಯವನ್ನು ಕೈಗೊಂಡ ಆತನ ಮನಸ್ಸಿನಲ್ಲಿದ್ದುದೊಂದೇ – ಆದಷ್ಟು ಬೇಗ ಭಾರತವನ್ನು ಬಿಟ್ಟು ಹೋಗಬೇಕು.
ಜಾಸ್ತಿ ದಿನ ಇಲ್ಲೇ ಉಳಿದರೆ, ಇನ್ನಷ್ಟು ಗಲಭೆಗಳಾಗಿ, ಬ್ರಿಟಿಷ್ ಅಧಿಕಾರಿಗಳ ಜೀವಕ್ಕೆ ಅಪಾಯ ವಾಗಬಹುದು ಮತ್ತು ಆ ಗಲಾಟೆಗಳು ಜಾಗತಿಕ ಮಟ್ಟದಲ್ಲಿ ಬ್ರಿಟನ್‌ಗೆ ಕೆಟ್ಟ ಹೆಸರು ತರುತ್ತದೆ ಎಂಬುದೂ ಆತನ ಮನೋಗತ ವಾಗಿತ್ತು.1946ರಲ್ಲಿ ಮುಂಬಯಿಯಲ್ಲಿ ನಡೆದ ದೊಡ್ಡ ಮಟ್ಟದ ನಾವಿಕರ ದಂಗೆಯೂ ಅವನಿಗೆ ಎಚ್ಚರಿಕೆಯ ಗಂಟೆ ಎನಿಸಿತ್ತು.
1947ರಮಾರ್ಚ್ ತಿಂಗಳಲ್ಲಿ ಭಾರತಕ್ಕೆ ಬಂತ ಮೌಂಟ್ ಬ್ಯಾಟನ್, ಕೇವಲ ಐದೇ ತಿಂಗಳಲ್ಲಿ ದೇಶವನ್ನು ವಿಭಜಿಸಿ, ಅಧಿಕಾರ ಹಸ್ತಾಂತರ ಮಾಡಲು ಹೇಗೆ ಸಾಧ್ಯವಾಯಿತು? ಅಂತಹ ಗುರುತರ ಕೆಲಸ ಮಾಡಲು ಸಾಕಷ್ಟು ತಯಾರಿ, ಯೋಜನೆ ಬೇಡವೆ? ಇದೊಂದು ಸಹಜ ಪ್ರಶ್ನೆ. ಆದರೆ ಮೌಂಟ್‌ಬ್ಯಾಟನ್ ಅದ್ಯಾವುದಕ್ಕೂ ತಲೆಕೆಡಿಸಿಕೊಳ್ಳಲಿಲ್ಲ. ಅಷ್ಟಕ್ಕೂ, ಭಾರತದ ‘ನೇಟಿವ್’ ಜನರು ಪ್ರಾಣ ಕಳೆದುಕೊಂಡರೆ ಆತನಿಗೇನು ನಷ್ಟ? ಬ್ರಿಟಿಷ್ ಜನರಿಗೇನು ನಷ್ಟ? ಎಂತಿದ್ದರೂ, ಅವರ ಪ್ರಮುಖ ವಸಾಹತೆ ನಿಸಿದ್ದ ಭಾರತ ಕೈತಪ್ಪುತ್ತಿದೆ, ಇಲ್ಲಿ ಸಾಕಷ್ಟು ಹಾನಿ ಮಾಡಿಯೇ ಬಿಟ್ಟು ಹೋಗೋಣ ಎಂಬ ಮನೋಗತವೂ ಇದ್ದಿರಬೇಕು.
ಮೌಂಟ್‌ಬ್ಯಾಟನ್‌ನ ನಿರ್ಲಕ್ಷ್ಯ ಮತ್ತು ಹೊಣೆಗೇಡಿತನಕ್ಕೆ ಪ್ರಮುಖ ಪುರಾವೆ ಎಂದರೆ ಭಾರತ ಮತ್ತು ಪಾಕಿಸ್ತಾನದ ಗಡಿ ಗುರುತಿಸಲು ಕೈಗೊಂಡ ಅವಸರದ ಕ್ರಮ. ಸರ್ ಸಿರಿಲ್ ರ‍್ಯಾಡ್‌ಕ್ಲಿಫ್ ಎಂಬ ಬ್ರಿಟಿಷ್ ವಕೀಲನನ್ನು ದೇಶಗಳ ಗಡಿ ಗುರುತಿಸುವ ಕೆಲಸಕ್ಕೆ ನಿಯೋಜಿಸಲಾಯಿತು. ಆ ವ್ಯಕ್ತಿಯು ಅದುವರೆಗೆ ಭಾರತವನ್ನಾಗಲೀ, ಏಷ್ಯಾ ಖಂಡವನ್ನಾಗಲೀ ನೋಡಿರಲಿಲ್ಲ! ತರಾತುರಿಯಲ್ಲಿ ಆತನನ್ನು ಆಯ್ಕೆ ಮಾಡಿ, ಐದು ವಾರಗಳಲ್ಲಿ ಎರಡೂ ದೇಶಗಳ ಗಡಿಯನ್ನು ಗುರುತಿಸುವಂತೆ ಹೇಳಲಾಯಿತು. ಈ ಭೂಪನು 8.7.1947ರಂದು ಭಾರತಕ್ಕೆ ಬಂದ.
ದೆಹಲಿ, ಲಾಹೋರ್ ಮೊದಲಾದ ಕೆಲವು ಪ್ರದೇಶಗಳನ್ನು ನೋಡದಂತೆ ಮಾಡಿ, ಭೂಪಟವನ್ನು ತನ್ನ ಎದುರಿಗಿಟ್ಟುಕೊಂಡು, ರಹಸ್ಯವಾಗಿ ಕುಳಿತು ಭಾರತವನ್ನು ವಿಭಜನೆ ಮಾಡಿದ! ಧರ್ಮದ ಆಧಾರದಲ್ಲಿ ಊರುಗಳನ್ನು ಹಂಚಬೇಕು ಎಂಬುದೊಂದೇಆತನಿಗಿದ್ದ ನಿರ್ದೇಶನ. ಆತ ತನ್ನ ಕೆಲಸ ಮುಗಿಸಿ, ನಾಲ್ಕೇ ವಾರಗಳಲ್ಲಿ ಅಂದರೆ 9.8.1947ರಂದು ತನ್ನ ವರದಿ ನೀಡಿದ. ಲಾರ್ಡ್ ಮೌಂಟ್‌ಬ್ಯಾಟನ್ ಆ ರಹಸ್ಯ ವರದಿಯನ್ನು ತನ್ನ ವಶದಲ್ಲಿ ಇಟ್ಟುಕೊಂಡ. ಅದನ್ನು ಆತ ಬಿಡುಗಡೆ ಮಾಡಿದ್ದು ಯಾವಾಗ ಗೊತ್ತೆ? 17.8.1947ರಂದು!
ಇದು ಮೌಂಟ್‌ಬ್ಯಾಟನ್ ತೋರಿದ ದುರಹಂಕಾರ ಮತ್ತು ಹೊಣೆಗೇಡಿತನದ ಮತ್ತೊಂದು ಕ್ರೂರ ನಿದರ್ಶನ. 15.8.1947ರಂದು ಭಾರತಕ್ಕೆ ಸ್ವಾತಂತ್ರ್ಯ ಘೋಷಣೆ ಮಾಡಿ, ಕೆಂಪುಕೋಟೆಯಲ್ಲಿ ಸಮಾರಂಭ ನಡೆಸಿ, ನೆಹರೂ ಕೈಯಿಂದ ತ್ರಿವರ್ಣ ಧ್ವಜ ಹಾರಿಸಿ, ಭಾರತ್ ಮಾತಾ ಕಿ ಜೈ ಎಂದು ಕೂಗಿಸಲಾಯಿತು. ಪಾಪ, ನಮ್ಮ ದೇಶದ ಅಮಾಯಕ ಜನರು ‘ಮೌಂಟ್ ಬ್ಯಾಟನ್ ಕಿ ಜೈ’ ಎಂದು ಸಹ ಕೂಗಿ, ಆ ಬ್ರಿಟಿಷ್ ದೊರೆಯನ್ನು ಕೊಂಡಾಡಿದರು.
ಆದರೆ, ಹೊಸ ದೇಶ ಉದಿಯಿಸಿದರೂ, ಗಡಿ ಭಾಗದ ಯಾವ ಊರುಗಳು ನಮ್ಮ ದೇಶಕ್ಕೆ ಸೇರಿವೆ ಎಂಬುದನ್ನು ಅಂದು ರಹಸ್ಯ ವಾಗಿಡಲಾಗಿತ್ತು. ಮೊದಲ ಸ್ವಾತಂತ್ರ್ಯೋತ್ಸವ ನಡೆದು ಎರಡು ದಿನಗಳ ನಂತರ, ಯಾವ ಊರುಗಳು ಯಾವ ದೇಶಕ್ಕೆ ಸೇರಿವೆ ಎಂಬುದನ್ನು ಬಯಲು ಮಾಡಲಾಯಿತು. ದೇಶ ವಿಭಜನೆಗೊಂಡರೂ, ರ‍್ಯಾಡ್‌ಕ್ಲಿಫನು ತನ್ನ ವರದಿಯನ್ನು ಮುಂಚಿತವಾಗಿ ನೀಡಿದ್ದರೂ, ಗಡಿಯ ವಿವರಗಳನ್ನು ಬಯಲು ಮಾಡಿದ್ದು ದೇಶ ವಿಭಜನೆಗೊಂಡ ಎರಡು ದಿನಗಳ ನಂತರ!
ಮೌಂಟ್‌ಬ್ಯಾಟನ್ ಬಳಿ, ತನ್ನ ಈ ದುರಹಂಕಾರ ಮತ್ತು ಹೊಣೆಗೇಡಿ ವರ್ತನೆಗೆ ಒಂದು ಕಳ್ಳನೆಪವಿತ್ತು. ಸ್ವಾಂತಂತ್ರ್ಯ ಆಚರಣೆಯ ಗಡಿಬಿಡಿ ಮುಗಿಯಲಿ, ಈ ಗಲಾಟೆಯ ನಡುವೆ ಗಡಿಯ ವಿವರ ಘೋಷಿಸಿದರೆ, ಇನ್ನಷ್ಟು ಗೊಂದಲ ಆಗುತ್ತದೆ, ಅದಕ್ಕೆಂದೇ ಎರಡು ದಿನ ವಿಳಂಬ ಮಾಡಲಾಯಿತು ಎಂದು ಸಮಜಾಯಿಷಿ ನೀಡಲಾಯಿತು. ಇದರಿಂದ ಒಂದಂತೂ ಸ್ಪಷ್ಟವಾಯಿತು. ಅಧಿಕಾರ ಹಸ್ತಾಂತರವನ್ನು ತೀರಾ ಬೇಜವಾಬ್ದಾರಿಯಿಂದ ಮಾಡಲಾಯಿತು ಮತ್ತು ಅದಕ್ಕೆ ಕಾರಣಪುರುಷಮೌಂಟ್‌ಬ್ಯಾಟನ್!
ಈ ಹೊಣೆಗೇಡಿತನದಿಂದಾಗಿ, ಪಂಜಾಬ್ ಗಡಿಯ ಕೆಲವು ಊರುಗಳಲ್ಲಿ ಎರಡೂ ದೇಶಗಳ ಬಾವುಟ ಹಾರಿದವು! ತಮ್ಮ ಊರು ಯಾವ ದೇಶಕ್ಕೆ ಸೇರಿದೆ ಎಂದು ಅವರವರೇ ಊಹಿಸಿಕೊಂಡು ಸ್ವಾತಂತ್ರ್ಯೋತ್ಸವ ಆಚರಿಸಿದ ಆ ಕೆಲವು ಹಳ್ಳಿಯವರು, ಎರಡು ದಿನಗಳ ನಂತರ ನೋಡಿದರೆ, ತಾವು ಬೇರೊಂದು ದೇಶಕ್ಕೆ ಸೇರಿದವರೆಂಬ ಆಘಾತ! ಇದೆಂಥ ಕ್ರೂರ ವ್ಯಂಗ್ಯ! ಮೊದಲೇ ಕೋಮುದ್ವೇಷಕ್ಕೆ ಬಲಿಯಾಗಿದ್ದ ಆ ಪ್ರದೇಶದಲ್ಲಿ, ಈ ವಿಳಂಬದಿಂದಾಗಿ, ಇನ್ನಷ್ಟು ಜೀವಗಳು ಬಲಿಯಾದವು.
ಅದಕ್ಕಿಂತ ಮುಖ್ಯ ವಿಷಯವೆಂದರೆ, ಸೇನೆಯನ್ನು ತನ್ನ ವಶದಲ್ಲಿರಿಸಿ ಕೊಂಡಿದ್ದ ಮೌಂಟ್ ಬ್ಯಾಟನ್ನನು, ಲಭ್ಯವಿದ್ದ ಹನ್ನೊಂದು ತಿಂಗಳುಗಳ ಸಮಯವನ್ನು ಉಪಯೋಗಿಸಿಕೊಂಡು, ಯೋಜನಾಬದ್ಧವಾಗಿ, ಸೂಕ್ತ ರಕ್ಷಣಾ ಕ್ರಮಗಳೊಂದಿಗೆಗಡಿಯನ್ನು ಘೋಷಿಸಬೇಕಿತ್ತು. ಪಾಕಿಸ್ತಾನದಿಂದ ಭಾರತಕ್ಕೆ ಮತ್ತು ಭಾರತದಿಂದ ಪಾಕಿಸ್ತಾನಕ್ಕೆ ವಲಸೆ ಹೋಗುವವರಿಗೆ ರಕ್ಷಣೆ ಕೊಡುವುದು ಆ ಸೇನಾ ಮುಖ್ಯಸ್ಥನ ಆದ್ಯ ಕರ್ತವ್ಯ ಎನಿಸಿತ್ತು. ಯೋಜನಾ ಬದ್ಧವಾಗಿ ಈ ಕೆಲಸ ಮಾಡಲು, ಜನರಿಗೆ ರಕ್ಷಣೆ ನೀಡಲು ಆತನ ಬಳಿ ಜೂನ್ 1947ರ ತನಕ ಕಾಲಾವಕಾಶವಿತ್ತು. ಆದರೆ, ಆತ ತರಾತುರಿ ಮತ್ತು ಬೇಜವಾಬ್ದಾರಿಯಿಂದ ದೇಶ ವಿಭಜನೆ ಮಾಡಿದ್ದರಿಂದಾಗಿ ಐದು ಲಕ್ಷಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡರು.
ಭಾರತದ ಪರಿಚಯವೇ ಇಲ್ಲದ ರ‍್ಯಾಡ್‌ಕ್ಲಿ- ಎಂಬ ಭೂಪನಿಗೆ ಇನ್ನೊಂದು ಉಭಯ ಸಂಕಟ. ದೊಡ್ಡ ನಗರಗಳನ್ನು ಯಾವ ದೇಶಕ್ಕೆ ಸೇರಿಸಬೇಕು ಎಂಬ ಗೊಂದಲ.  ಅಂದಿನ ಸಾಮಾನ್ಯ ತಿಳಿವಳಿಕೆ ಪ್ರಕಾರ ಲಾಹೋರ್ ನಗರವು ಭಾರತಕ್ಕೆ ಸೇರಬೇಕಿತ್ತು. ಅಲ್ಲಿ ಶೇ.50ಮುಸ್ಲಿಮರಿದ್ದರೂ, ನಗರದ ಶೇ.80ರಷ್ಟು ಭೂಭಾಗವು ಹಿಂದೂ ಮತ್ತು ಸಿಖ್ ಜನರ ಒಡೆತನದಲ್ಲಿತ್ತು. ಆದರೆ, ಕೊಲ್ಕೋತಾ ನಗರವನ್ನು ಭಾರತಕ್ಕೆ ಹಂಚಿದ್ದರಿಂದ, ಲಾಹೋರನ್ನು ಪಾಕಿಸ್ತಾನಕ್ಕೆ ಹಂಚಿದೆ ಎಂದು ರ‍್ಯಾಡ್‌ಕ್ಲಿಫ್ ಹೇಳಿಕೊಂಡಿ ದ್ದಾನೆ.
ಎಂತಹ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯದ ಹೇಳಿಕೆ ಇದು! ಈ ನಡುವೆ, ಅದ್ಯಾವುದೋ ಕಾರಣಕ್ಕೆ ಪಂಜಾಬಿನ ಗುರುದಾಸ್‌ಪುರ ಜಿಲ್ಲೆಯನ್ನು ಭಾರತಕ್ಕೆ ನೀಡಿದ. ಅಲ್ಲಿ ಮುಸ್ಲಿಂ ಜನಸಂಖ್ಯೆ ಜಾಸ್ತಿ. ಇದೊಂದು ನಡೆಯಿಂದ ಆತ ಭಾರತಕ್ಕೆ ಪರೋಕ್ಷ ಸಹಾಯ ಮಾಡಿದ್ದ. ಕಾಶ್ಮೀರದ ಮೇಲೆ ಪಾಕಿಸ್ತಾನದ ಸಶಸ ದಂಗೆಕೋರರು ದಾಳಿ ಮಾಡಿದಾಗ, ಗುರುದಾಸಪುರದಲ್ಲಿ ಸಾಗುವ ರಸ್ತೆಯ ಮೂಲಕ ಭಾರತ ದಿಂದ ಸೈನ್ಯ ಕಳಿಸಲಾಯಿತು. ಆ ಪ್ರದೇಶವನ್ನು ಪಾಕಿಸ್ತಾನಕ್ಕೆ ನೀಡಿದ್ದರೆ, ಕಾಶ್ಮೀರಕ್ಕೆ ಸೈನ್ಯ ಕಳಿಸಲುಸಾಧ್ಯವಾಗುತ್ತಿರಲಿಲ್ಲ.
ತರಾತುರಿಯಲ್ಲಿ ಗಡಿ ಹಂಚಿಕೆ ಮಾಡಿದ ರ‍್ಯಾಡ್‌ಕ್ಲಿಫ್ ನಿಗೆ ಇಲ್ಲಿನ ಗೊಂದಲ, ಹತ್ಯಾಕಾಂಡ ಕಂಡು ಜಿಗುಪ್ಸೆಯಾಗಿರಬೇಕು. ಗಡಿ ಗುರುತಿಸಲು ಆತ ಉಪಯೋಗಿಸಿದ್ದ ಎಲ್ಲಾ ದಾಖಲೆಗಳನ್ನು ಸುಟ್ಟು ಹಾಕಿ, ಆತನಿಗೆಂದು ನಿಗದಿಯಾಗಿದ್ದ 3000 ಪೌಂಡ್ ಗೌರವ ಧನ ವನ್ನು ತಿರಸ್ಕರಿಸಿ, ಇಂಗ್ಲೆಂಡಿಗೆ ವಾಪಸಾದ. ಲಾರ್ಡ್ ಮೌಂಟ್‌ಬ್ಯಾಟನ್‌ನ ನಿರ್ಲಕ್ಷ್ಯ, ಕುಟಿಲತನ ಗಳಿಗೆ ಇನ್ನೂ ಹಲವು ನಿದರ್ಶನಗಳಿವೆ. ಕಾಶ್ಮೀರದ ಸಮಸ್ಯೆಯನ್ನು ವಿಶ್ವಸಂಸ್ಥೆಗೆ ಒಯ್ಯುವಂತೆ ನೆಹರೂಗೆ ಸಲಹೆ ನೀಡಿದ್ದೇ ಮೌಂಟ್ ‌ಬ್ಯಾಟನ್. ಅಲ್ಲಿ ಜನಮತಗಣನೆ ಪಡೆಯಬೇಕು ಎಂದು ಷರಾ ಬರೆದದ್ದೇ ಮೌಂಟ್ ಬ್ಯಾಟನ್.
ಜೂನ್ 1948ರ ತನಕ ನಮ್ಮ ದೇಶದ ಲೆಫ್ಟಿನೆಂಟ್ ಗವರ್ನರ್ ಜನರಲ್ ಆಗಿದ್ದ ಆತನ ಕೈಯಲ್ಲಿ ಸೇನೆಯ ಸಂಪೂರ್ಣಅಽಕಾರವಿತ್ತು. ಹೈದರಾಬಾದಿನ ನಿಜಾಮನು ಭಾರತಕ್ಕೆ ಸೇರದೇ ಉಳಿದಾಗ, ಸುಮ್ಮನೆ ನೋಡುತ್ತಾ ಕುಳಿತು, ಅಂತಹ ನಡೆಯನ್ನು ಪ್ರೋತ್ಸಾಹಿಸಿದ್ದೇ ಮೌಂಟ್‌ಬ್ಯಾಟನ್!
ಬಹುಷಃ, ಪೂರ್ವ ಪಾಕಿಸ್ತಾನ, ಪಶ್ಚಿಮ ಪಾಕಿಸ್ತಾನಗಳ ಜತೆ, ದಕ್ಷಿಣ ಪಾಕಿಸ್ತಾನವೂ ಹೈದರಾಬಾದಿನಲ್ಲಿ ರೂಪುಗೊಳ್ಳಲಿ ಎಂಬ ಅಭಿಲಾಷೆ ಆತನಿಗೆ ಇತ್ತೇನೋ! ಜೂನ್1948ರಂದು ಮೌಂಟ್ ಬ್ಯಾಟನ್ ತನ್ನ ಅಧಿಕಾರ ತ್ಯಜಿಸಿ, ಸಕಲ ಮರ್ಯಾದೆ ಗಳೊಂದಿಗೆ ಬ್ರಿಟನ್‌ಗೆ ವಾಪಸಾದ. ತಕ್ಷಣ, ಗೃಹಮಂತ್ರಿ ಪಟೇಲರು ಆಪರೇಷನ್ ಪೋಲೋಗೆ ಚಾಲನೆ ನೀಡಿ, ಸೆಪ್ಟೆಂಬರ್1948ರಲ್ಲಿ ಹೈದರಾಬಾದನ್ನು ಭಾರತಕ್ಕೆ ಸೇರಿಸುವಲ್ಲಿ ಸಫಲರಾದರು.
ಕಾಶ್ಮೀರ, ಜುನಾಗಡ ಮತ್ತು ಹೈದರಾಬಾದ್ ಸಮಸ್ಯೆಗಳು ಉದ್ಭವಿಸಿದ್ದೇ, ಈ ಮೌಂಟ್‌ಬ್ಯಾಟನ್ ನಮ್ಮ ದೇಶದ ಲೆಫ್ಟಿನೆಂಟ್ ಗವರ್ನರ್ ಜನರಲ್ ಆಗಿದ್ದುಕೊಂಡು, ಸೇನೆಯನ್ನು ತನ್ನ ಹಿಡಿತದಲ್ಲಿಟ್ಟುಕೊಂಡಿದ್ದರಿಂದ ಅವುಗಳಲ್ಲಿ ಎರಡನ್ನು ಪಟೇಲರು ಬಗೆಹರಿಸಿದರು. ಆದರೆ ಕಾಶ್ಮೀರದ ಸಮಸ್ಯೆಯು ಮೌಂಟ್‌ಬ್ಯಾಟನ್ ನೀಡಿದ ಕೊಡುಗೆಯ ರೂಪದಲ್ಲಿ ಭಾರತವನ್ನು ಇನ್ನೂ ಕಾಡುತ್ತಿದೆ.
ಆದರೆ1940ರ ದಶಕದಲ್ಲಿ ಮೌಂಟ್‌ಬ್ಯಾಟನ್ ಮತ್ತು ಬ್ರಿಟಿಷರು ಮಾಡಿದ ಕಾರಸ್ಥಾನಗಳು, ಕುಟಿಲ ತಂತ್ರಗಳು ಸರಿಯಾಗಿ ಹೊರಗೆ ಬರಲೇ ಇಲ್ಲ. ನಮ್ಮ ದೇಶದ ಮೊದಲ ಪ್ರಧಾನಿಯವರು ಲಾರ್ಡ್ ಮೌಂಟ್‌ಬ್ಯಾಟನ್‌ನ ಆತ್ಮೀಯರು ಮತ್ತು ಕುಟುಂಬ ಸ್ನೇಹಿತರು. ಆದ್ದರಿಂದಲ ಇರಬಹುದು, ಮೌಂಟ್ ಬ್ಯಾಟನ್ ಮಾಡಿದ ಕುಕೃತ್ಯಗಳು ಪ್ರಚಾರಕ್ಕೆ ಬಾರದೇ ಇರುವಂತೆ ನಮ್ಮ ಮೊಮೊದಲ ಸರಕಾರಗಳು ನೋಡಿಕೊಂಡವು. ಕಾಶ್ಮೀರ ಸಮಸ್ಯೆಯ ಬೀಜ ಬಿತ್ತಿದ ಮೌಂಟ್‌ಬ್ಯಾಟನ್‌ನು, ಅದಕ್ಕಾಗಿ ಕುಖ್ಯಾತ ನಾಗುವ ಬದಲು, ಇಂದಿಗೂ ನಮ್ಮ ದೇಶದ ಮೊದಲ ಗವರ್ನರ್ ಜನರಲ್ ಎಂಬ ಗೌರವಯುತ ಸ್ಥಾನದಿಂದ ಗುರುತಿಸಲ್ಪಟ್ಟಿ ದ್ದಾನೆ.