ನೂತನ ನಾಗರಿಕಾ ಸೇವಾ ನಿಯಮಗಳೆಷ್ಟು ಪರಿಣಾಮಕಾರಿ ?
ಅಭಿವ್ಯಕ್ತಿ
ಮೋಹನದಾಸ ಕಿಣಿ
ರಾಜ್ಯ ಸರಕಾರದ ಆಡಳಿತ ಸುಧಾರಣೆ ಇಲಾಖೆಯು2021ರ ಜ.7ರಂದು ಹೊರಡಿಸಲಾದ ರಾಜ್ಯಪತ್ರದಲ್ಲಿ ರಾಜ್ಯ ಸರಕಾರಿನೌಕರರ ವಿರುದ್ಧ ಶಿಸ್ತು ಕ್ರಮಗಳನ್ನು ಬಿಗಿಗೊಳಿಸುವ ಕಾಯಿದೆ ಜಾರಿಗೊಳಿಸಿದೆ. ನಿಜವಾಗಿ ನೋಡಿದರೆ ಇದು ಹೊಸದಾಗಿ ಬಂದ ಕಾಯಿದೆಯೇನಲ್ಲ.
ಕರ್ನಾಟಕ ನಾಗರಿಕ ಸೇವಾ (ನಡತೆ) ನಿಯಮಗಳು1966ರಿಂದಲೇ ಜಾರಿಯಲ್ಲಿದೆ. ವಿಶೇಷವೆಂದರೆ ಆಗಲೂ – ಈಗಲೂ, ಇಂತಹ ಕಾನೂನನ್ನು ಜಾರಿಗೊಳಿಸುವ ಅಧಿಕಾರವಿರುವ ಉನ್ನತ ಮಟ್ಟದ ಅಧಿಕಾರಿಗಳಿಗೆ ಇದು ಅನ್ವಯಿಸುವುದಿಲ್ಲ. ಅದೇನಿದ್ದರೂ ಕೆಳಹಂತದ ನೌಕರರು, ಅಧಿಕಾರಿಗಳಿಗೆ ಮಾತ್ರ. ಹೊಸ ಕಾಯಿದೆಯನ್ನು ಹಳೆಯ ಕಾಯಿದೆಗೆ ಕಾಲಕಾಲಕ್ಕೆ ತರಲಾದ ತಿದ್ದುಪಡಿ ಮತ್ತು ಜಾಲತಾಣಗಳಲ್ಲಿ ಅಭಿಪ್ರಾಯಗಳನ್ನು ಬಿತ್ತರಿಸುವುದಕ್ಕೆ ಸಂಬಂಧಿಸಿದ ಕೆಲವೊಂದು ನಿರ್ಬಂಧ ಗಳನ್ನು ಹೇರಿರುವು ದನ್ನು ಒಳಗೊಂಡಂಥ ಅಂಶಗಳನ್ನು ಹೊಸದಾಗಿ ಸೇರಿಸಿ ರಚಿಸಲಾಗಿದೆ ಅಷ್ಟೇ.
ಯಾವುದೇ ಕಾನೂನು ಜಾರಿಯಾದರೂ, ಅದರಲ್ಲಿ ಏನೇ ಹೇಳಲಾಗಿದ್ದರೂ ರಾಜಕಾರಣಿಗಳ ಮತ್ತು ಉನ್ನತ ಅಧಿಕಾರಿಗಳ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕದಿದ್ದರೆ, ಸರಕಾರಿ ನೌಕರರಾಗಿರಲಿ, ಅಧಿಕಾರಿ ಯಿರಲಿ, ಯಾವುದೇ ಕಡತವನ್ನು, (ಅದು ಕಾನೂನಿಗೆವಿರುದ್ಧವಿದ್ದರೂ) ಜಾರಿಗೊಳಿಸಲು ಒಪ್ಪದಿದ್ದಾಗ ಮಾತ್ರ ಇಂತಹ ನಡತೆ ನಿಯಮಗಳ ಅಸ್ತ್ರ ಪ್ರಯೋಗವಾಗುತ್ತದೆ.
ಇಂತಹದಕ್ಕೆ ಉನ್ನತ ಅಧಿಕಾರಿಗಳೂ ಕೈಜೋಡಿಸುವುದು ಹಿಂದಿನಿಂದಲೂ ಬೆಳೆದುಬಂದ ಪರಂಪರೆ. ಕಾನೂನಿನಲ್ಲಿ ಏನೇ ಇರಲಿ, ರಾಜಕಾರಣಿಗಳ ವಿಧೇಯರಾಗಿರುವವರು ಎಡೆ ಸಲ್ಲುತ್ತಾರೆ. ಕರ್ತವ್ಯದಲ್ಲಿ ಪ್ರಾಮಾಣಿಕರಾಗಿ ಇರುವವರೇ ಬಲಿಪಶುಗಳು. ಇದು ಜನಸಾಮಾನ್ಯರಿಗೆ ಗೋಚರಿಸದ, ತೆರೆಮರೆಯ ಸತ್ಯ. ಇಂತಹ ಪ್ರಕರಣಗಳಲ್ಲಿ ಬಳಕೆಯಾಗುವ ಅಸ್ತ್ರವೇ ಶಿಸ್ತುಕ್ರಮ ಮತ್ತುವರ್ಗಾವಣೆ. (ನ್ಯಾಯಾಲಯವೂ ವರ್ಗಾವಣೆ ಮತ್ತು ಅಮಾನತು ಶಿಕ್ಷೆಯ ವ್ಯಾಖ್ಯಾನದಡಿ ಬರುವುದಿಲ್ಲ ಎನ್ನುತ್ತದೆ) ಕೋತಿ ಮೊಸರನ್ನ ತಿಂದು ಮೇಕೆ ಮೂತಿಗೆ ಒರೆಸಿದ ಗಾದೆಯಂತೆ ಯಾರೋ ತಪ್ಪು ಮಾಡಿ ಯಾರದೋ ತಲೆಗೆ ಕಟ್ಟುವಂಥ ಪ್ರಕರಣಗಳಸಂಖ್ಯೆ ಅನಾದಿಕಾಲದಿಂದಲೂ ಇದೆ.
ಉನ್ನತ ಕಚೇರಿಯ ಅಧಿಕಾರಿಗಳು, ಸಿಬ್ಬಂದಿಗಳು ಮಾಡುವ ಎಡವಟ್ಟುಗಳನ್ನು ಅಧೀನ ಸಿಬ್ಬಂದಿಗಳ ತಲೆಗೆ ಕಟ್ಟುವ ಪ್ರಕರಣ ಗಳನ್ನು ಸಾಕಷ್ಟು ನೋಡಿದ್ದೇನೆ. ಅನುಭವಿಸಿದ್ದೇನೆ ಕೂಡಾ. ಆಡಳಿತಾತ್ಮಕ ನಿರ್ಧಾರಗಳನ್ನು ದೊಡ್ಡವರು ಸೂಚಿಸಿದಂತೆ ಕಾರ್ಯರೂಪಕ್ಕೆ ತರುವುದು ಅಧೀನ ಕಚೇರಿಯ ಸಿಬ್ಬಂದಿಗಳ ಕರ್ತವ್ಯವೆಂದು ನಿಯಮ6()ಹೇಳುತ್ತದೆ. ಮೇಲಧಿಕಾರಿಗಳು ಮೌಖಿಕ ಆದೇಶ ನೀಡಬಾರದೆಂದು ನಿಯಮ6()ರಲ್ಲಿ ಹೇಳಲಾಗಿದೆ. ಇಂತಹ ಪ್ರಸಂಗಗಳಲ್ಲಿ ಅಡ್ಡಗೋಡೆಯ ಮೇಲಿಡುವ ಬುದ್ಧಿವಂತಿಕೆ ತೋರುವ ಅಧಿಕಾರಿಗಳ ಜಾಣತನಕ್ಕೆ ಒಂದು ಉದಾಹರಣೆ ಹೀಗಿದೆ ನೋಡಿ.
ಯಾವುದೋ ಒಂದು ಕಡತ ಅನುಮೋದನೆಗೆ ಮೇಲಧಿಕಾರಿಗಳ ಮೇಜಿಗೆ ಬರುತ್ತದೆ. ಅದು ಅವರ ಅಥವಾ ಅವರಿಗೂ ಮೇಲಿನವರ ಹಿತಾಸಕ್ತಿಗೆ ಅನುಗುಣವಾಗಿಲ್ಲದಿದ್ದಾಗ, ಚರ್ಚಿಸಿ ಎಂಬ ಟಿಪ್ಪಣಿಯೊಂದಿಗೆ ಕಡತ ವಾಪಸ್ಸು ಬರುತ್ತದೆ. ಇದು ಮೌಖಿಕ ಆದೇಶಕ್ಕೆ ಸಮಾನ. ನಂತರ ಅಧೀನ ಅಧಿಕಾರಿ / ನೌಕರರು ಅದೆಷ್ಟು ಬಾರಿ ಚರ್ಚೆಗೆ ಹೋದರೂ ಮತ್ತೆ ಬನ್ನಿ ಎಂದು ಸಾಗಹಾಕುತ್ತಾರೆ. ಚರ್ಚಿಸಲು ಬಂದ ಬಗ್ಗೆ ದಾಖಲೆ ಇರುವುದಿಲ್ಲವಲ್ಲ. ಸೂಕ್ತ ವೇದಿಕೆ ಸಿದ್ಧವಾಗುವವರೆಗೂ ಇದು ಮುಂದು ವರಿಯುತ್ತದೆ.
ಕೊನೆಯಲ್ಲಿ ಎಡವಟ್ಟೇ ನಾದರೂ ಆದರೆ ತಪ್ಪೆಲ್ಲವನ್ನೂ ಸಣ್ಣವರ ತಲೆಗೆ ಕಟ್ಟಿ ದೊಡ್ಡವರು ತೆಪ್ಪಗೆ ಜಾರಿಕೊಳ್ಳುತ್ತಾರೆ.2004ರಲ್ಲಿ ಆರೋಗ್ಯ ಇಲಾಖೆಯಲ್ಲಿ ಒಂದು ಪ್ರಕರಣ ನಡೆದಿತ್ತು. ‘ಸಿಗ್ಮಾ’ ಪ್ರಕರಣವೆಂದು ಕುಖ್ಯಾತಿ ಪಡೆದಿದ್ದ, ಈ ಪ್ರಕರಣದ ಸೂತ್ರದಾರರು ಆಗಿನ ಆರೋಗ್ಯ ಇಲಾಖೆಯ ನಿರ್ದೇಶಕರು, ಆಯುಕ್ತರು ಮತ್ತು ಅವರ ಆಪ್ತ ಶಾಖೆಯ ಸಿಬ್ಬಂದಿ. ಇವರು ಇದಕ್ಕೆ ನೇರ ಹೊಣೆಯಾದರೆ, ಕಚೇರಿಯ ಸಿಬ್ಬಂದಿ ಪರೋಕ್ಷವಾಗಿ ಜವಾಬ್ದಾರರು. ಆದರೆ ಇಲ್ಲಿ ನಡೆದದ್ದು ಮಾತ್ರ ಕೋತಿ – ಮೇಕೆಯ ನ್ಯಾಯ. ಈ ವಿಷಯ ವಿಧಾನಸಭೆಯಲ್ಲೂ, ಮಾಧ್ಯಮದಲ್ಲೂ ಸಾಕಷ್ಟು ಪ್ರಾಮುಖ್ಯತೆಗಳಿಸಿತ್ತು. ಪ್ರಕರಣದ ಸಂಕ್ಷಿಪ್ತವಿವರಣೆ ಹೀಗಿದೆ. ಹಿಂದೆ ಔಷಧಿ, ವೈದ್ಯಕೀಯ ಪರಿಕರಗಳ ಪೂರೈಕೆಗೆ ಕೇಂದ್ರೀಕೃತ ದರ ಗುತ್ತಿಗೆ ನಿಗದಿ ಪಡಿಸುವ ಪದ್ಧತಿಯಿರು ತ್ತಿತ್ತು.
ಕೆಲವು ರಾಜ್ಯಕ್ಕೆ ಸೀಮಿತವಾದರೆ ಇನ್ನೂ ಕೆಲವು ದೇಶದೆಡೆ ಅನ್ವಯವಾಗುತ್ತಿತ್ತು. ಹೀಗೆ ದರ ಗುತ್ತಿಗೆಯನ್ನು ಸ್ಪರ್ಧಾತ್ಮಕ ನೆಲೆಯಲ್ಲಿ ಯಶಸ್ವಿಯಾದ ಸಂಸ್ಥೆಗೆ ನೀಡಲಾಗುತ್ತದೆ ಹಾಗೂ ಯಾವ ಸಂಸ್ಥೆಗೆ ನೀಡಲಾಗಿದೆಯೋ ಆ ಸಂಸ್ಥೆಯ ಹೆಸರಿಗೆ ದರ ಮತ್ತಿತರ ಷರತ್ತುಗಳೊಂದಿಗೆ ಆದೇಶ ಹೊರಡಿಸಲಾಗುತ್ತಿತ್ತು. ಕೇಂದ್ರ ಸರಕಾರದಿಂದ ಹೊರಡಿಸಲಾದ ಇಂತಹದೊಂದು ಆದೇಶದಲ್ಲಿರುವ ಸಂಸ್ಥೆಯ ಹೆಸರನ್ನು ಕಂಪ್ಯೂಟರ್ ಬರಹದ ಮೂಲಕ ತಿದ್ದಿ ಇನ್ಯಾವುದೋ ಸಂಸ್ಥೆಯ ಹೆಸರಿಗೆ ಗುತ್ತಿಗೆಇರುವುದೆಂಬಂದಂತೆ ಒಂದು ಆದೇಶವನ್ನು ಸೃಷ್ಟಿಸ ಲಾಗುತ್ತದೆ. ಇದನ್ನು ಎಲ್ಲಾ ಅಧೀನ ಕಚೇರಿಗಳಿಗೆ ಕಳುಹಿಸಲಾಗುತ್ತದೆ.
ಕೇಂದ್ರ ಕಚೇರಿಯಿಂದ ಬಂದ ಆದೇಶವನ್ನು ಪಾಲಿಸುವುದು ಅಧೀನ ಅಧಿಕಾರಿಗಳ ಕರ್ತವ್ಯ ತಾನೇ. ಕೆಲವೊಂದು ಸಂಸ್ಥೆಗಳು ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಖರೀದಿ ಪ್ರಕ್ರಿಯೆ ಮಾಡಿದರೆ, ಇನ್ನೂ ಕೆಲವರು, ಕೇಂದ್ರ ಕಚೇರಿಗೆ ಪ್ರಸ್ತಾವನೆ ಕಳುಹಿಸಿ, ಅನುದಾನ ಮತ್ತು ಮಂಜೂರಾತಿ ಪಡೆದು, ಖರೀದಿಸಿದ್ದರು. ಈ ಎಲ್ಲಾ ಪ್ರಕ್ರಿಯೆಯಲ್ಲಿ ಆದಂತಹ ಏಕೈಕ ತಪ್ಪೆಂದರೆ, ಯಾವ ಸಂಸ್ಥೆಯ ಹೆಸರಿನಲ್ಲಿ ಆದೇಶವನ್ನು ಹೊರಡಿಸ ಲಾಗಿತ್ತೋ, ಅವರ ಬದಲು ಇನ್ಯಾರೋ ವ್ಯವಹಾರ ಮಾಡಿದ್ದು, ಹಾಗೂ ಇಡೀವ್ಯವಹಾರ ಆಗಿನ ನಿರ್ದೇಶಕರ ಮತ್ತು ಸಿಬಂದಿಯವರ ಮುತುವರ್ಜಿ ಮೇರೆಗೆ ನಡೆದಿತ್ತು.
ಆರ್ಥಿಕ ವರ್ಷ ಮುಗಿದು, ಖರೀದಿ, ಪೂರೈಕೆ, ಪಾವತಿಯೂ ಸೇರಿ ಎಲ್ಲವೂ ಮುಗಿದ ನಂತರ, ಯಾವುದೋ ಹಂತದಲ್ಲಿ ಹಠಾತ್ತನೆ ಈ ತಪ್ಪನ್ನು ಗುರುತಿಸಿದಂತೆ ನಾಟಕವಾಡಿ ನಿರ್ದೇಶಕರ ಕಚೇರಿಯಿಂದ, ಅಧೀನ ಕಚೇರಿಗಳಿಗೆ ಸಂಪೂರ್ಣ ಪ್ರಕ್ರಿಯೆಯನ್ನು ತಡೆಹಿಡಿಯಲು ತುರ್ತು ಸೂಚನೆ ನೀಡಲಾಗುತ್ತದೆ. ಆದರೆ ಅದಾಗಲೇ, ಖರೀದಿ, ಪೂರೈಕೆ ಮತ್ತು ಪಾವತಿ ಎಲ್ಲವೂ ಮುಗಿದಿತ್ತು. ಉನ್ನತ ವಲಯದಲ್ಲಿ ಕೋತಿ ಮೊಸರನ್ನು ಪೊಗದಸ್ತಾಗಿ ತಿಂದು ಮುಗಿಸಿದ ಮೇಲೆ ಇಡೀ ಪ್ರಕ್ರಿಯೆಯ ಹೊಣೆ ಅಧೀನ ಕಚೇರಿಗಳೆಂಬ ಮೇಕೆಗಳ ಮೂತಿಗೆ ಒರೆಸಿ, ಇಲಾಖೆಯ ನಿರ್ದೇಶಕರು ತನಗೆ ಸಿಗಬೇಕಾಗಿದ್ದ ಪಿಂಚಣಿ ಮತ್ತಿತರ ಸೌಲಭ್ಯಗಳನ್ನು ಪಡೆದು ಮೆತ್ತಗೆ ಜಾರಿ ಕೊಂಡಿದ್ದರು.
ಅಧೀನ ಕಚೇರಿಗಳ125ಕ್ಕೂ ಹೆಚ್ಚಿನ ನೌಕರರ, ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಆರಂಭವಾಯಿತು. ಪದೋನ್ನತಿ ತಡೆ, ಅಮಾನತ್ತು ಇತ್ಯಾದಿ ನಡೆದು, ಕೆಲವರು ಯಾವುದೇ ಸೌಲಭ್ಯ ಸಿಗದೆ ನಿವೃತ್ತರಾದರೆ, ಸುದೀರ್ಘ ನ್ಯಾಯಾಂಗ ಹೋರಾಟದ ನಂತರವೂ ಪಿಂಚಣಿ ಸೌಲಭ್ಯದಿಂದ ವಂಚಿತರಾಗಿ ಇಹಲೋಕವನ್ನು ತ್ಯಜಿಸಿದವರ ಉದಾಹರಣೆ ಕೂಡ ಇದೆ. ಇನ್ನೊಂದು ಪ್ರಕರಣದಲ್ಲಿ ಯಾರೋ ಒಬ್ಬರಿಗೆ ಕಿರುಕುಳ ನೀಡಿದ್ದೇನೆಂದು ದೂರರ್ಜಿ ಬರೆದಿದ್ದರು.
ಸ್ಥಳೀಯ ಲೋಕಾಯುಕ್ತ ಅಧಿಕಾರಿಗಳು ದೂರಿನಲ್ಲಿ ಸತ್ಯಾಂಶವಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವು ದೆಂದು ಅವರ ಕೇಂದ್ರ ಕಚೇರಿಗೆ ವರದಿ ಮಾಡಿಯೇ ಬಿಟ್ಟರು ಹಾಗೂ ಅಮಾನತ್ತಿಗೆ ಶಿಫಾರಸು ಕೂಡಾ ಮಾಡಿದರು. ಯಾವುದೇವಿಚಾರಣೆ, ನೋಟೀಸು ಇಲ್ಲದೆ ಅಮಾನತು ಆದೇಶವೂ ಹೊರಟಿತು. ಇದರಲ್ಲಿ ವಿಶೇಷವೇನೆಂದು ಕೇಳುವಿರಾ? ಸದರಿ ದೂರಿನಲ್ಲಿ ಪ್ರಸ್ತಾಪಿಸಲಾದ ದಿನದಂದು ನಾನು ತೀವ್ರ ಅನಾರೋಗ್ಯದಿಂದ, ಪ್ರಜ್ಞಾಹೀನ ಸ್ಥಿತಿಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದೆ.
ಯಾವುದೇ ದೂರನ್ನು ಮೇಲಧಿಕಾರಿಗಳ ಮೂಲಕವೇ ಸಲ್ಲಿಸಬೇಕೆಂದು (ಹೊಸ ಕಾಯಿದೆ ನಿಯಮ29)1966ರ ಕಾಯಿದೆ ನಿಯಮ27ರಲ್ಲಿ ಹೇಳಲಾಗಿದೆ. ಅದನ್ನೂ ಪಾಲಿಸದೆ, ನೇರವಾಗಿ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಲಾಗಿತ್ತು. ಹಾಗೆ ದೂರು ನೀಡಿದವರು, ದೂರನ್ನು ತನಿಖೆ ಮಾಡಿದೆನೆಂದು ಹೇಳಿದ ಸ್ಥಳೀಯ ಲೋಕಾಯುಕ್ತ ಅಧಿಕಾರಿಗಳು, ಅಮಾನತು ಮಾಡಲು ಇಲಾಖೆಯ ಆಯುಕ್ತರಿಗೆ ಶಿಫಾರಸು ಮಾಡಿದವರು, ಅಮಾನತು ಆದೇಶಕ್ಕೆ ಸಹಿ ಹಾಕಿದ ಉನ್ನತ ಅಧಿಕಾರಿಗಳು ಆರಾಮವಾಗಿ ಪದೋನ್ನತಿ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಪಡೆದು ಹಾಯಾಗಿದ್ದಾರೆ.
ಆದರೆ ಯಾವುದೇ ತಪ್ಪು ಮಾಡದಿದ್ದರೂ,ಅಮಾನತು ಶಿಕ್ಷೆ, ತೀವ್ರ ಅನಾರೋಗ್ಯದ ನಡುವೆ ಬೆಂಗಳೂರಿನ ನ್ಯಾಯಾಲಯಕ್ಕೆ ಓಡಾಟ, ಸಾವಿರಾರು ರುಪಾಯಿ ವೆಚ್ಚವಾದದ್ದು ನನಗೆ. ಇದೆಲ್ಲದರ ಹಿಂದಿನ ಕಾರಣವಿಷ್ಟೇ: ನಾನು ರಾಜಕಾರಣಿಯೊಬ್ಬರಕಾನೂನು ಬಾಹಿರ ಮೌಖಿಕ ಆದೇಶವೊಂದನ್ನು ಪಾಲಿಸಲು ನಿರಾಕರಿಸಿದ್ದು.
ಮೇಲಿನ ಪ್ರಕರಣದಲ್ಲಿ ಅಮಾನತು ಆದೇಶ ಹೊರಡಿಸಿದ ಅಽಕಾರಿ ಬೇರೊಂದು ಇಲಾಖೆಯಿಂದ ಹೆಚ್ಚುವರಿ ಪ್ರಭಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದವರು. ಹೆಚ್ಚುವರಿ ಪ್ರಭಾರದಲ್ಲಿ ಇರುವವರಿಗೆ ಇಂತಹ ಆದೇಶ ಹೊರಡಿಸುವ ಅಧಿಕಾರವಿಲ್ಲ. ಹಿರಿಯಅಧಿಕಾರಿಯಾಗಿದ್ದರೂ, ಇಂತಹ ಅಧಿಕಾರವಿಲ್ಲವೆಂದು ಗೊತ್ತಿದ್ದರೂ, ಆದೇಶ ಹೊರಡಿಸಿ, ಆರ್ಥಿಕ ನಷ್ಟ, ಮಾನಸಿಕ ಒತ್ತಡಕ್ಕೆ ಕಾರಣವಾದ ಆ ಅಧಿಕಾರಿಗೆ ಶಿಕ್ಷೆ ನೀಡುವವರು ಯಾರು? ಏಕೆಂದರೆ,1966ರ ನಿಯಮಗಳಾಗಲೀ,2020ರ ಹೊಸ ನಿಯಮ ಗಳಾಗಲೀ ಉನ್ನತ ಅಧಿಕಾರಿಗಳಿಗೆ ಅನ್ವಯಿಸದು. ಅಧಿಕಾರ ವ್ಯಾಪ್ತಿಯಿಲ್ಲದಿದ್ದರೂ ಆದೇಶ ಹೊರಡಿಸಿದ ಕುರಿತು ನ್ಯಾಯಾ ಲಯವೂ ಚಕಾರವೆತ್ತಿರಲಿಲ್ಲ, ಏಕೆಂದರೆ ಆಡಳಿತ ನ್ಯಾಯ ಮಂಡಳಿಯ ಇಬ್ಬರು ಸದಸ್ಯರಲ್ಲಿ ಒಬ್ಬರು ಇದೇ ವರ್ಗದಲ್ಲಿ ಕೆಲಸ ಮಾಡಿ ನಿವೃತ್ತರಾದಂತಹ ಅಧಿಕಾರಿಯಾಗಿರುತ್ತಾರೆ!
ಬೇರೆ ಉದ್ಯೋಗ ಮಾಡಬೇಡಿ, ಹೆಂಡತಿ ಮಕ್ಕಳ ಹೆಸರಿನಲ್ಲಿ ಕೂಡಾ ಸಲ್ಲದು. ಶೇರುಗಳಲ್ಲಿ ಹೂಡಿಕೆ ಮಾಡಬೇಡಿ, ಲಂಚ ತೆಗೆದುಕೊಳ್ಳಬೇಡಿ, (ತೆಗೆದು ಕೊಂಡರೂ ಸಿಕ್ಕಿ ಬೀಳಬೇಡಿ) ಆದರೆ ಮೇಲಿನವರಿಗೆ ಕಾಲಕಾಲಕ್ಕೆ ಹಪ್ತಾ ಮಾತ್ರ ತಪ್ಪದೇ ಕೊಡಿ. ಇದು ಅಲಿಖಿತ ನಿಯಮ. ಈ ಕಾಯಿದೆಯಲ್ಲಿ, ಸರಕಾರಕ್ಕೆ ವಿರುದ್ಧವಾಗದ, ಸಂವಿಧಾನ ವಿರೋಧಿ ಚಟುವಟಿಕೆಗಳಿಗೆ ಸಂಬಂಧಪಡದಂಥ ಲೇಖನ, ಪುಸ್ತಕ ಬರೆಯಲು ಯಾವುದೇ ನಿರ್ಬಂಧ, ಹಿಂದೆಯೂ ಇರಲಿಲ್ಲ, ಈಗಲೂ ಇಲ್ಲ.
ಆದಾಯ ಬರುವುದಿದ್ದರೆ ಸರಕಾರಕ್ಕೆ ತಿಳಿಸಬೇಕೆಂದು ವಿಧಿಸಲಾಗಿದೆ, ತಪ್ಪೇನಿಲ್ಲ. ಈ ಎಲ್ಲಾ ನಿಯಮಗಳು ಕುಟುಂಬ ಸದಸ್ಯ ರಿಗೂ ಅನ್ವಯಿಸುತ್ತದೆಂದು ಕೆಲವು ಮಾಧ್ಯಮಗಳಲ್ಲಿ ವರದಿಯಾಗಿದೆ. ಆದರೆ, ಸರಕಾರಿ ನೌಕರ / ಅಧಿಕಾರಿ ತನ್ನ ಅಧಿಕಾರ ವನ್ನು ಉಪಯೋಗಿಸಿ ಕುಟುಂಬದ ಸದಸ್ಯರಿಗೆ ಲಾಭವಾಗುವ ರೀತಿಯಲ್ಲಿ ವರ್ತಿಸಬಾರದೆಂಬ ನಿಯಮವಿದೆ, ಅಷ್ಟೇ. ಈಗಾಗಲೇ ಮದುವೆಯಾದವರನ್ನು ಮದುವೆಯಾಗಲು ಅಥವಾ ಸರಕಾರದ ಅನುಮತಿ ಪಡೆಯದೇ ಒಂದಕ್ಕಿಂತ ಹೆಚ್ಚು ಮದುವೆ ಆಗುವು ದಕ್ಕೆ ಇದ್ದ ನಿರ್ಬಂಧವನ್ನು ಈಗಿನ ಕಾಯಿದೆಯಲ್ಲಿ ಪುನರಾವರ್ತನೆ ಮಾಡಲಾಗಿದೆ.
ತಮಾಷೆಯ ವಿಷಯವೆಂದರೆ, ಎರಡನೇ ಮದುವೆ ಕುರಿತಂತೆ ಹಳೆಯ ನಿಯಮಗಳಲ್ಲಿ (ನಿಯಮ28) ಸರಕಾರದ ಪೂರ್ವಾನು ಮೋದನೆಯಿಲ್ಲದೆ ಎರಡನೇ ವಿವಾಹ ವಾಗುವಂತಿಲ್ಲ ಎಂದು ಇರುವುದಕ್ಕೆ ಹೆಚ್ಚುವರಿಯಾಗಿ ಹೊಸ ಕಾಯಿದೆಯ ನಿಯಮ30(2)ರಲ್ಲಿ ಪರಂತು, ಸರಕಾರಿ ನೌಕರರು ಎರಡನೇ ವಿವಾಹ ಮಾಡಿಕೊಳ್ಳಲು ಸಾಕಷ್ಟು ಸಿಂಧುವಾದ ಕಾರಣ ಗಳಿವೆಯೆಂದು, ಕಾನೂನಾತ್ಮಕವಾಗಿ ಅಂಗೀಕಾರಾರ್ಹವೆಂದು ನಿಯಮಿಸಲಾದ ಪ್ರಾಧಿಕಾರಕ್ಕೆ ಮನದಟ್ಟಾದರೆ ಅನುಮತಿ ನೀಡಬಹುದು ಎಂದು ಸೇರಿಸಿರುವುದರ ಹಿಂದಿನ ಉದ್ದೇಶ ಮಾತ್ರ ಅರ್ಥ ವಾಗುವುದಿಲ್ಲ.
ಕೆಲವರು ಅಭಿಪ್ರಾಯ ಪಡುವಂತೆ ಇದೊಂದು ಕ್ರಾಂತಿಕಾರಿ ಕಾಯಿದೆಯೂ ಅಲ್ಲ, ಕೆಲವು ನೌಕರ ಸಂಘಟನೆಗಳು ಪ್ರತಿಭಟಿಸು ವಂತೆ ನಿರಂಕುಶ ಆಡಳಿತಕ್ಕೆ ದಾರಿಯೂ ಅಲ್ಲ. ಒಟ್ಟಿನಲ್ಲಿ ಈಗ ತರಲು ಉದ್ದೇಶಿಸಿರುವ ಕರ್ನಾಟಕ ನಾಗರಿಕ ಸೇವಾ (ನಡತೆ)ನಿಯಮ ೨೦೨೧ ಹೊಸ ಬಾಟಲಿಯಲ್ಲಿರುವ ಹಳೆ ಮದ್ಯವಲ್ಲದೆ ಬೇರೇನೂ ಅಲ್ಲ.