ಶಾಸಕಾಂಗವು ಮೋಜು ಮಾಡುವ ತಾಣವೇ ?
ಹಂಪಿ ಎಕ್ಸ್’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
ಮಹರ್ಷಿ ವಾಲ್ಮೀಕಿ ಕಾಡಿನಲ್ಲಿ ವಾಸಿಸುವ ಒಬ್ಬ ಬೇಡನಾದರೂ ಮಹಾಗ್ರಂಥ ರಾಮಾಯಣವನ್ನು ಬರೆದರು. ನಮ್ಮ ಹಳ್ಳಿ ಗಾಡಿನಲ್ಲಿನ ಹಿರಿಯರು ಮೂಳೆ ತಜ್ಞರಾಗ ದಿದ್ದರೂ ಉಳುಕು ಮೂಳೆ ಮುರಿತವನ್ನು ಅಂದಾಜಿಸಿ ಅದಕ್ಕೆ ದಬ್ಬೆಕಟ್ಟಿ ಚಿಕಿತ್ಸೆ ನೀಡಿ ಪಂಡಿತರೆನಿಸಿದ್ದರು.
ಶ್ರೀಕೃಷ್ಣ ದೇವರಾಯನ ಆಸ್ಥಾನದಲ್ಲಿನ ಅಷ್ಟದಿಗ್ಗಜ ಪಂಡಿತರ ಒಬ್ಬರಾದ ತೆನಾಲಿ ರಾಮಕೃಷ್ಣ ದುರಹಂಕಾರಿ ವಿದ್ವಾಂಸನೊಬ್ಬನಿಗೆ ಪಾಠ ಕಲಿಸಲು ತಿಲಕಾಷ್ಠಮಹಿಷಬಂಧನವೆಂಬ ಅಣಕ ಸೃಷ್ಟಿಸಿ ರಾಜಸಭೆಯ ಗೌರವವನ್ನು ಎತ್ತಿಹಿಡಿದರು.ಇಂದಿನಂತೆ ಯಾವುದೇ ತಂತ್ರಜ್ಞಾನಗಳಿಲ್ಲದ ಕಾಲದ ನಮ್ಮ ಧರ್ಮ – ಸಂಸ್ಕೃತಿ – ಸಾಮಾಜಿಕತೆ – ನಾಗರಿಕತೆ ಜಗತ್ತಿನ ಉತ್ಕೃಷ್ಟತೆಯನ್ನು ಪಡೆದಿತ್ತು. ಇದನ್ನೇ ಸರ್ವಜ್ಞಮೂರ್ತಿಯು ಅಕ್ಕರವು ಲೆಕ್ಕಕ್ಕೆ ತರ್ಕ ತಾ ವಾದಕ್ಕೆ ಮಿಕ್ಕ ಓದುಗಳು ತಿರುಪೆಗೆ ಮೋಕ್ಷಕ್ಕೆರಡಕ್ಕರವೇ ಸಾಕು ಸರ್ವಜ್ಞ ಎನ್ನುವ ಮೂಲಕ ಅಕ್ಷರ ಜ್ಞಾನಕ್ಕಿಂತ ತಾರ್ಕಿಕ ಜ್ಞಾನವೇ ಮಿಗಿಲೆಂದು ಸಾರಿದರು.
ಆದರೆ ಇದು ಆಧುನಿಕ ಯುಗ. ಸಂವಿಧಾನ – ಕಾಯಿದೆ – ಕಾನೂನು – ನ್ಯಾಯಾಲಯ – ಸಾಮಾಜಿಕ ಸೂತ್ರ ಗಳು, ಜಾತಿಆಧಾರಿತ ವ್ಯವಸ್ಥೆಗಳು, ಮೀಸಲಾತಿಗಳು, ಮಠಗಳು, ಸ್ವಾಮೀಜಿಗಳು, ಗುಲಾಮಗಿರಿಗಳು ಇವುಗಳನ್ನು ಸರಿದೂಗಿಸಿಕೊಂಡು ಹೋಗಬೇಕಾದ ಅನಿವಾರ್ಯ ವ್ಯವಸ್ಥೆ ಜಾರಿಯಲ್ಲಿದೆ. ಇಂದಿನ ಸಮಾಜದಲ್ಲಿ ದಿನನಿತ್ಯ ಹೊಸ ಹೊಸ ಆವಿಷ್ಕಾರಗಳು ತಂತ್ರಜ್ಞಾನಗಳು ತಂತ್ರ ಕುತಂತ್ರಗಳು ಸವಾಲುಗಳು ಹುಟ್ಟಿಕೊಳ್ಳುತ್ತಲೇ ಇರುತ್ತವೆ.
ಸಮಾಜವೆಂಬುದು ನಿತ್ಯವೂ ನಿಲ್ಲದ ಓಟವಾಗಿದೆ. ಜ್ಞಾನ ಕ್ರಿಯಾಶೀಲತೆ ನೈಪುಣ್ಯತೆ ದೂರಾಲೋಚನೆ ಮೈಗೂಡಿಸಿಕೊಂಡು ಓಡದಿದ್ದರೆ ಸೋಲು ಖಚಿತ. ಹೀಗಾಗಿ ಸರಕಾರವೂ ಸಮಾಜಕ್ಕಿಂತ ವೇಗವಾಗಿ ಆಡಳಿತ ನಡೆಸಬೇಕಾಗುತ್ತದೆ. ಕಳೆದ ವರ್ಷ ಕಣ್ಣಿಗೆ ಕಾಣದ ವೈರಾಣು ಕರೋನಾ ದಾಳಿಯನ್ನು ಮುನ್ನೆಚರಿಕೆ ಕ್ರಮ ಗಳೊಂದಿಗೆ ಲಾಕ್‌ಡೌನ್ ಜಾರಿಗೆ ತಂದು ಎದುರಿಸದ್ದಕ್ಕೆ ನಾವು ಗಳು ಇಂದು ಸುರಕ್ಷಿತರಾಗಿದ್ದೇವೆ.
ಒಂದೊಮ್ಮೆ ಸರಕಾರ ಕೊಂಚ ದಡ್ಡತನ ತೋರಿದ್ದರೂ ಬೀದಿಬೀದಿಗಳಲ್ಲಿ ಹೆಣಗಳು ಬಿದ್ದು ಅದನ್ನು ಸಾಗಿಸುವವರೂಇಲ್ಲದಷ್ಟು ಘೋರವಾದ ಸ್ಥಿತಿ ನಿರ್ಮಾಣವಾಗುತ್ತಿತ್ತು. ಸರಕಾರದ ಮಟ್ಟದಲ್ಲಿ ಹೊಣೆಗಾರಿಕೆಯುಳ್ಳವರು, ಸಮರ್ಥರು, ಸಾಮಾಜಿಕ ಕಾಳಜಿ ಹೊಂದಿದವರು ಇದ್ದಿದ್ದರಿಂದಲೇ ದೇಶ ಮತ್ತೇ ತಲೆಯೆತ್ತಿ ನಿಲ್ಲುತ್ತಿದೆ. ಇಂದು ಕರ್ನಾಟಕವಾಗಲಿ ದೇಶವಾಗಲಿ ಕರೋನಾ ವಿರುದ್ಧ ಗೆದ್ದಿದೆಯೆಂದರೆ ಅದು ಆಡಳಿತ ಮತ್ತು ಸಮಾಜದ ಗೆಲುವೂ ಹೌದು.
ಇಂಥ ಸಮಾಜದಲ್ಲಿ ಪ್ರಾಥಮಿಕ ಶಿಕ್ಷಣ ಕಲಿತು ಮಣ್ಣನ್ನು ಹದಮಾಡಿ ಇಟ್ಟಿಗೆ ಕೋಯ್ದು ಗೂಡು ಸುಟ್ಟು ಎಂಟಿಬಿ ಬ್ರಾಂಡಿ ನಲ್ಲಿ ಖ್ಯಾತಿಗಳಿಸಿದ ಎಂಟಿಬಿ ನಾಗರಾಜ್ ಈಗ ಸಾವಿರ ಕೋಟಿಯ ಸರದಾರ ರಾಗಿರುವುದು ಅವರ ದುಡಿಮೆಯ ಪ್ರತಿಫಲವಿರ ಬಹುದು. ಅವರು ಚುನಾವಣೆ ಯನ್ನು ಎದುರಿಸಿ ಗೆದ್ದು ಮಂತ್ರಿಯೂ ಆದರು. ಒಬ್ಬ ಪ್ರಜಾಪ್ರತಿನಿಧಿಯಾಗಲು ವಿದ್ಯೆ ಸಿರಿತನದ ಚೌಕಟ್ಟಿಲ್ಲ. ಜನಪ್ರೀತಿ ಯಿಂದಲೋ ಅಥವಾ ಹಣ ಸುರಿದೋ ಯಾರು ಎಂಥವನು ಬೇಕಾದರೂ ಚುನಾವಣೆಯಲ್ಲಿ ಗೆದ್ದು ಪವಿತ್ರ ವಾದ ವಿಧಾನಸಭೆಯಲ್ಲಿ ಸಂವಿಧಾನಾತ್ಮಕ ಸ್ಥಾನಮಾನ ಪಡೆಯಲೂಬಹುದು.
ಇದು ನಮ್ಮ ಸಂವಿಧಾನ ನೀಡಿದ ಬಹುದೊಡ್ಡ ಅವಕಾಶ. ಆದರೆ ಇಂದು ಮಾಹಿತಿ ತ್ರಂತ್ರಜ್ಞಾನಗಳ ಯುಗ. ಇಡೀ ರಾಜ್ಯದವ್ಯಾಪ್ತಿಯನ್ನು ಹೊಂದಿರುವ ಸಂವಿಧಾನಾತ್ಮಕ ಇಲಾಖೆ ಗಳನ್ನು ನಿಭಾಯಿಸಲು ಮಂತ್ರಿಯಾದವರಿಗೆ ಅದಕ್ಕೆ ತಕ್ಕ ಜ್ಞಾನ, ತಿಳಿವಳಿಕೆ ಯಾದರೂ ಇರಲೇ ಬೇಕಲ್ಲವೇ. ಒಂದು ಪದವಿ ಯನ್ನು ಅಲಂಕರಿಸುವವರಿಗೆ ಅದನ್ನು ಸಾರ್ಥಕ ಗೊಳಿಸುವ ಯೋಗ್ಯತೆ ಇಲ್ಲದಿದ್ದರೆ ಅದು ಸಾಮಾಜಿಕತೆಗೆ ವಿರುದ್ಧ ವಾಗುತ್ತದೆ.
ಶಾಸಕಾಂಗದಲ್ಲಿ ಸಿಕ್ಕಸಿಕ್ಕಿದವರೆ ಮಂತ್ರಿ ಗಳಾಗಲು ಕಾರಣ ಅದರ ಕೈಕೆಳಗಿರುವ ಕಾರ್ಯಾಂಗ ವ್ಯವಸ್ಥೆ. ಒಬ್ಬ ವಿದ್ಯಾರ್ಥಿ ಐಎಎಸ್ ಪದವಿಗಳಿಸಲು ಎಷ್ಟು ಕಷ್ಟಪಡಬೇಕಾಗುತ್ತದೆ ಎಂಬುದು ಅವನಿಗೆ ಅವನ ಕುಟುಂಬಕ್ಕೆ ಗೊತ್ತು. ಅಂಥ ಅಧಿಕಾರಿ ಗಳನ್ನು ಬಳಸಿಕೊಂಡು ಇಲಾಖೆಯನ್ನು ಆಳುವುದು ಯಾವುದೇ ಮಂತ್ರಿಗಳಿಗೆ ಸುಲಭವೇ ಆಗಿರುತ್ತದೆ. ಆದರೆ ಕೆಲ ಮತಿಗೆಟ್ಟ ಮಂತ್ರಿಗಳು ಅಧಿಕಾರಿಗಳನ್ನು ಕೆಟ್ಟದಾಗಿ ಬಳಸಿಕೊಂಡು ವ್ಯವಸ್ಥೆಯನ್ನು ಹಾಳು ಮಾಡುವುದು ಸುಳ್ಳೇನಲ್ಲ. ಅದರ ಫಲಿತಾಂಶವನ್ನು ಈಗಷ್ಟೇ ಅಬಕಾರಿ ಇಲಾಖೆಯ ನಿರ್ಗಮಿತ ಮಂತ್ರಿ ನಾಗೇಶ್ ಅನುಭವಿಸಿದ್ದಾರೆ.
ಹಿಂದಿನ ಮೈತ್ರಿ ಸರಕಾರದಲ್ಲಿ ಕೇವಲ ಪ್ರಾಥಮಿಕ ಶಿಕ್ಷಣ ಪಡೆದಿದ್ದ ಜಿ.ಟಿ. ದೇವೇಗೌಡ ಅವರಿಗೆ ಕುಮಾರಸ್ವಾಮಿ ಉನ್ನತ ಶಿಕ್ಷಣ ಖಾತೆಯನ್ನು ನೀಡಿದಾಗಲೇ ಶಾಸಕಾಂಗದ ವ್ಯವಸ್ಥೆ ನಗೆಪಾಟಲಿಗೀಡಾಗಿತ್ತು. ಆದರೂ ಜಿಟಿಡಿ ಯವರು ತಮಗಿದ್ದ ತಾರ್ಕಿಕಅನುಭವದಿಂದ ಮುಜುಗರದಿಂದಲೇ ನಿಭಾಯಿಸಿದರು. ಮೊದಲೆ ಶಾಸನಸಭೆಯ ಶಾಸಕರು ಗೆದ್ದುಬಂದರೂ ಆಡಳಿತದ ಸಂಪುಟದಲ್ಲಿ ಪಾಲ್ಗೊಳ್ಳಲು ತಮಗಿರುವ ಅರ್ಹತೆ ಸಾಲದೆಂದು ಮನಗಂಡು ತಮ್ಮ ಕ್ಷೇತ್ರಗಳ ಉಳಿದುಕೊಂಡು, ಅನುದಾನ ನೀಡಿದರಷ್ಟೇ ಸಾಕು ಕ್ಷೇತ್ರವನ್ನು ಅಭಿವೃದ್ಧಿ ಮಾಡಿ ಮುಂದಿನ ಬಾರಿಯೂ ಜನರ ವಿಶ್ವಾಸದಿಂದಲೇ ಗೆದ್ದು ಕೆಲಸ ಮಾಡೋಣ,ಮಂತ್ರಿಗಳಾಗಿ ಸೇವೆ ಮಾಡಲು ಪಕ್ಷದೊಳಗಿರುವ ಸಮರ್ಥರು ವಿದ್ಯಾವಂತ ಶಾಸಕರಿದ್ದಾರೆ.
ಪಕ್ಷ ತಮ್ಮನ್ನು ಗುರುತಿಸಿ ಕೊಟ್ಟರೆ ಮಂತ್ರಿಯಾಗೋಣ ಎಂಬ ಸಹಜ ಮತ್ತು ಉದಾರ ಮನಸ್ಥಿತಿಯ ರಾಜಕಾರಣ ಮಾಡಿ ಕೊಂಡು ಬರುತ್ತಿದ್ದರು. ಈಗ ನೋಡಿ, ಎಂಟಿಬಿ ನಾಗರಾಜ್ ತನಗೆ ನೀಡಿರುವ ಅಬಕಾರಿ ಇಲಾಖೆ ಬೇಡವೆನ್ನುತ್ತಿದ್ದಾರೆ. ಮತ್ತಿನ್ನಾವ ಖಾತೆ ಅವರಿಗೆ ನೀಡಬಹುದು?. ಇಷ್ಟಕ್ಕೂ ಶಾಸಕಾಂಗ ದಲ್ಲಿ ಎಲ್ಲವೂ ಪವಿತ್ರ ಖಾತೆಗಳೇ ಅಲ್ಲವೇ. ಅವುಗಳಲ್ಲಿ ದರಿದ್ರ ಖಾತೆಗಳೆಂಬುದೇನಾದರು ಇದೆಯೇ?. ಮೊದಲಿಗೆ ಮಂತ್ರಿಯಾಗುವವನು ಪವಿತ್ರವಾಗಿದ್ದರೆ ಸಾಕು. ಯಾವ ಶಾಸಕನಿಗೆ ಯಾವ ಖಾತೆ ನೀಡಬಹುದೆಂದು ಪಕ್ಷಗಳಿಗಿಂತ ಪ್ರಜ್ಞಾವಂತ ರಿಗೆ ಸರಿಯಾಗಿ ಗೊತ್ತಿರುತ್ತದೆ. ಅವರನ್ನೇ ಕೇಳಿ ನೋಡೋಣ!
ಇದೇ ಮಾತನ್ನು ಸರಕಾರಿ ನೌಕರನೊಬ್ಬ ನನಗೆ ಈ ಕಚೇರಿ ಬೇಡ ಆ ಕಚೇರಿ ಬೇಕು ಎಂದು ಹೇಳಲಿ, ಕೂಡಲೇ ಮೆಮೋ ನೀಡಿ ಮನೆಗೆ ಕಳಿಸುತ್ತಾರೆ. ರಾಜಕಾರಣದ ಕರ್ಮ ಸಿದ್ಧಾಂತವಿರಿಸಿಕೊಂಡು ಬಂದವರ ಮುಂದೆ ಯಾವಾಗ ಎಚ್.ಡಿ. ಕುಮಾರಸ್ವಾಮಿ ತನ್ನ ತಂದೆಯ ಸಿದ್ಧಾಂತವನ್ನೇ (?) ಧಿಕ್ಕರಿಸಿ ಯಡಿಯೂರಪ್ಪನವರೊಂದಿಗೆ ಕೂಡಿಕೊಂಡು ಮುಖ್ಯಮಂತ್ರಿಯಾದರೋ ಬಹುಶಃ ಅದೇ ಇಡೀ ರಾಜಕಾರಣದ ದಿಕ್ಕು ಮತ್ತು ಮನಸ್ಥಿತಿಯನ್ನೇ ಬದಲಾಯಿಸಿಬಿಟ್ಟಿತು.
ಕುಮಾರಸ್ವಾಮಿಯವರು ಶಾರ್ಟ್‌ಕಟ್ ರಾಜಕಾರಣ ಪರಿಚಯಿಸಿ ದಿಢೀರ್ ಮುಖ್ಯಮಂತ್ರಿಯಾದರ, ಆಗ ಜನತಾದಳದಲ್ಲಿದ್ದಸಿದ್ದರಾಮಯ್ಯ, ಬಸವರಾಜ ಹೊರಟ್ಟಿ, ಎಂಸಿ ನಾಣಯ್ಯ, ಪಿಜಿಆರ್ ಸಿಂಧ್ಯಾರಂಥ ಹಿರಿಯರೆ ದಂಗಾಗಿ ಹೋದರು. ಆಗಲೇ ನೋಡಿ ಎಲ್ಲಾ ಶಾಸಕರಲ್ಲೂ ಹೊಸಾ ಆಸೆ ಚಿಗುರೊಡೆದುಬಿಟ್ಟಿತು. ಯಾವುದು ಎತ್ಲಾಗಾನ ಹಾಳಾಗಿ ಹೋಗಲಿ. ನಾನು ಮಾತ್ರ ಕನಿಷ್ಠ ಮಂತ್ರಿ ಯಾದರೂ ಆಗಲೇ ಬೇಕು ಎಂಬ ಹಪಾಪಿಗೆ ಒಳಗಾಗಿಬಿಟ್ಟರು. ಇದರ ಪರಮಾವಧಿ ಎಷ್ಟರ ಮಟ್ಟಿಗೆತಲುಪಿತೆಂದರೆ, ಅದರ ದುಷ್ಪರಿಣಾಮ ನೇರ ಕುಮಾರ ಸ್ವಾಮಿಯವರ ಮೇಲೆಯೇ ಅಪ್ಪಳಿಸಿತು.
ಅತೃಪ್ತ ಶಾಸಕರು ರೆಬಲ್ ಸ್ಟಾರ್‌ಗಳಾಗಿ ಮೋದಿಯವರಿಗೇ ಪಾಠ ಹೇಳುವಂಥ (?) ಕುಮಾರಸ್ವಾಮಿಯವರ ಸರಕಾರಕೇವಲ ಹದಿನಾಲ್ಕು ತಿಂಗಳಿಗೇ ಮೊಗಚಿಬಿತ್ತು. ಇಂದು ಮಂತ್ರಿಗಿರಿಗಾಗಿ ಖಾತೆಗಳಿಗಾಗಿ ಶಾಸಕರನ್ನು ಅತೃಪ್ತ, ಅಡ್ಡದಾರಿ, ಅತ್ಯಾಚಾರದಂಥ ಧಾವಂತ ಮನಸ್ಥಿತಿಗೆ ಬದಲಾಗುವಂತೆ ಮಾಡಿದ್ದರಿಂದ ಈಗ ಶಾಸಕಾಂಗಕ್ಕೆ ಎಂಥ ರೋಗ ಬಡಿದಿದೆಯೆಂದರೆ, ಈಗಿನದಷ್ಟೇ ಅ, ಮುಂದೆ ಯಾವುದೇ ಪಕ್ಷದ ಸರಕಾರಗಳು ಬಂದರೂ ಗೆದ್ದು ಬರುವ ಎಲ್ಲಾ ಶಾಸಕರುಗಳೂ ಮಂತ್ರಿಗಿರಿಯನ್ನುಅನುಭವಿಸಿ ತೀರಲೇಬೇಕೆಂಬ ಪ್ರಲೋಭನೆಗೆ ಒಳಗಾಗಿ ಯಾವ ಸರಕಾರಗಳು ನೆಮ್ಮದಿಯಿಂದ ಪೂರ್ಣಾವಧಿ ತಲುಪುವುದು ಸಾಧ್ಯವೇ ಇಲ್ಲವೆಂಬ ನಂಬಿಕೆಯನ್ನು ಸೃಷ್ಟಿಸಿದೆ.
ಒಂದೊಮ್ಮೆ ಮಂತ್ರಿಯದರೂ ಖಾತೆ ಹಂಚಿಕೆಯಲ್ಲಿ ತನಗಿರದ ಯೋಗ್ಯತೆಯನ್ನು ಮೀರಿ ಖಾತೆಗಳನ್ನು ಕೇಳುವುದು, ಅರ್ಹತೆ ಇಲ್ಲದಿದ್ದರೂ ಉನ್ನತ ಖಾತೆಗಳಿಗೆ ಆಸೆಪಡುವುದು, ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ಪುಟಗಟ್ಟಲೆ ಕಥೆಕಪ್ಪುಚುಕ್ಕೆ ಗಳಿದ್ದರೂ ಗೃಹ ಖಾತೆಗೆ ಆಸೆಪಡುವುದು ಹೀಗೆ ಅಸಹಜ ಮತ್ತು ಅನೈತಿಕತೆಗಳಿಗೆ ಬಂದು ನಿಂತಿದೆ ನಮ್ಮ ಶಾಸಕಾಂಗ. ಇನ್ನು ಇದರೊಂದಿಗೆಜಾತಿಗಳು ಜಾತಿಗಳ ಮಠಾಧೀಶರುಗಳ ಹಸ್ತಕ್ಷೇಪ, ಪ್ರಭಾವ ಯಥೇಚ್ಚವಾಗಿದ್ದು ಯಾವುದೇ ಪಕ್ಷಗಳ ಸರಕಾರ ಗಳು ಅಭಿವೃದ್ಧಿ ಪ್ರಗತಿ ಆಡಳಿತಕ್ಕಿಂತ ಶಾಸಕರನ್ನು ನಿಭಾಯಿಸುವುದು ಜಾತಿಮಠಾಧೀಶರನ್ನು ಸಂತೈಸುವುದೇ ಪೂರ್ಣಾವಧಿಯ ಕೆಲಸವಾಗಿ, ಇಡೀ ರಾಜ್ಯವೇ ತಿಕ್ಕಲು ಹಿಡಿದು ಹೋಗುವುದರಲ್ಲಿ ಸಂಶಯವೇ ಇಲ್ಲ.
ಇಂಥ ಕೇಡುಗಾಲವು ಎ ರಾಜ್ಯಗಳಲ್ಲೂ ಸೃಷ್ಟಿಯಾದರೆ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಅಧೋಗತಿ ತಲುಪುವುದು ನಿಶ್ಚಿತ.ಇಂಥ ಕೆಟ್ಟ ಬೆಳವಣಿಗೆಗಳನ್ನು ತಡೆಯಬೇಕೆಂದರೆ, ಸರಕಾರ ಮತ್ತು ನ್ಯಾಯಾಲಯ ಕೆಲ ಹೊಸ ಸಂವಿಧಾನಾತ್ಮಕ ನೀತಿಗಳನ್ನು ಜಾರಿಗೆ ತರಲೇ ಬೇಕಿದೆ. ಪ್ರಾಥಮಿಕವಾಗಿ ಚುನಾವಣಾ ಆಯೋಗವು ಕಡ್ಡಾಯ ಮತದಾನವನ್ನು ಜಾರಿಗೆ ತರಬೇಕು. ಬಿ.ಫಾರಂಪಡೆಯುವ ಅಭ್ಯರ್ಥಿಗೆ ಇತಿಹಾಸ ನಾಗರಿಕತೆ ಸಂವಿಧಾನ ಸಮಾನತೆ ಸಾಮಾಜಿಕ ಜ್ಞಾನ ವನ್ನು ನಿರೂಪಿಸುವ ತುಲಾತ್ಮಕ ಪರೀಕ್ಷೆಗೆ ಒಳಪಡಿಸಬೇಕು.
ಇಂತಿಷ್ಟು ಕೋಟಿ ಆಸ್ತಿಗೆ ಸೀಮಿತಗೊಳಿಸಿ ಅದನ್ನು ಮೀರಿದರೆ ಚುನಾವಣೆಗೆ ಸ್ಪರ್ಧಿಸುವ ಅವಕಾಶ ವನ್ನು ಇಲ್ಲವಾಗಿಸಬೇಕು.ಇಲ್ಲದಿದ್ದರೆ ಹಣಬಲವೊಂದಿದ್ದರೆ ಏನು ಬೇಕಾದರೂ ಮಾಡುವ ನೀಚತಕ್ಕೆ ಅವಕಾಶ ವಾಗುತ್ತದೆ. ಚುನಾವಣೆಯಲ್ಲಿ ಗೆದ್ದು ಶಾಸಕನಾದಮೇಲೆ ಆಯಾ ಮತ ಕ್ಷೇತ್ರಗಳಲ್ಲಿನ ಸುಶಿಕ್ಷಿತರು ಮತ್ತು ನೀತಿವಂತರ ಒಂದು ಆಯೋಗವನ್ನು ಸೃಷ್ಟಿಸಿ ಶಾಸಕನ ಕರ್ತವ್ಯ ಸೇವೆ ಇವುಗಳನ್ನು ಗಮನಿಸುವುದು ಮತ್ತು ಹಾಗೇನಾದರು ನೀತಿ ತಪ್ಪಿ ಕುದುರೆ ಕತ್ತೆಯಂತೆ ವರ್ತಿಸಿದರೆ ಆತನ ಶಾಸಕತ್ವವನ್ನು ಆ ಕ್ಷೇತ್ರದ ಮತದಾರರೇ ಅಸಿಂಧುಗೊಳಿಸುವ ವ್ಯವಸ್ಥೆಯನ್ನು ಜಾರಿಗೆ ತರಬೇಕಿದೆ.
ಇನ್ನು ಆತನಿಗೆ ಮಂತ್ರಿಗಿರಿ ನೀಡಬೇಕಾದರೆ ಅವನ ವಿದ್ಯಾರ್ಹತೆ, ಅನುಭವ, ಪಾಂಡಿತ್ಯ, ಇವುಗಳನ್ನು ಆಧರಿಸಿ ಇಲಾಖೆಗೆ ಅನುಗುಣವಾಗಿ ಪರೀಕ್ಷೆಗಳನ್ನು ನೀಡಿ ಅದಕ್ಕೆ ತಕ್ಕಂತೆ ಖಾತೆ ನೀಡಬೇಕಿದೆ. ಉದಾಹರಣೆಗೆ ಲೋಕೋಪ ಯೋಗಿ ಇಲಾಖೆಯಲ್ಲಿ ಎಲ್ಲಿ ಎಂತೆಂಥ ಕಾಮಗಾರಿ ಕೈಗೊಳ್ಳಬಹುದು, ಎಷ್ಟು ದಿನಗಳಲ್ಲಿ ಎಷ್ಟು ಮಂದಿ ಕಾರ್ಯ ನಿರ್ವಹಿಸಿದರೆ ಅದು ಪೂರ್ಣಗೊಳ್ಳುತ್ತದೆ, ಎಂಥವರಿಗೆ ಗುತ್ತಿಗೆ ನೀಡಬೇಕು, ಆ ಗುತ್ತಿಗೆದಾರನ ಯೋಗ್ಯತೆಯೇನು, ಎಲ್ಲಿ ಹಣ ಪೋಲಾಗುತ್ತದೆ ಎಂದೆ ಬುದ್ದಿವಂತಿಕೆ ನಿಪುಣತೆ ಇವುಗಳನ್ನು ಅಳೆಯಬೇಕು.
ಇಂಥ ಅರ್ಹತೆ ಹೆಚ್ಚು ಮಂದಿ ಶಾಸಕರಿಗಿದ್ದರೆ ಹಿರಿತನ, ಸರದಿ ಪ್ರಕಾರವಾಗಿ ಮಂತ್ರಿಗಿರಿ ನೀಡಬೇಕು. ಇನ್ನು ಎಂಟಿಬಿ ಜಿಟಿಡಿಯಂಥ ಶಾಸಕರು ಗೆದ್ದು ಬಂದರೆ ಅವರಿಗೆ ವ್ಯವಹಾರಿಕ, ತಂತ್ರಜ್ಞಾನ, ಭೂವಿಜ್ಞಾನ, ಕಾನೂನು, ಸಂಸದೀಯದಂಥ ಖಾತೆಗಳಿಗಿಂತ ಮುಜರಾಯಿ ಅಬಕಾರಿ ಸಮಾಜ ಕಲ್ಯಾಣದಂಥ ಸಾರ್ವಜನಿಕ ಸಂಪರ್ಕವಿರುವ ಖಾತೆಗಳಲ್ಲಿ ಗೆದ್ದು ತೋರಿಸುವ ಅವಕಾಶ ನೀಡಬಹುದು. ಶಿಕ್ಷಣ, ಗಣಿಗಾರಿಕೆ, ಪ್ರವಾಸೋದ್ಯಮ, ನೀರಾವರಿ, ಜಲ ಸಂಪನ್ಮೂಲ ಹೀಗೆ ಇವುಗಳ ಕುರಿತುಜ್ಞಾನ ವಿದ್ದವರಿಗೆ ಮಾತ್ರ ನೀಡಬೇಕು.
ಮುಖ್ಯವಾಗಿ ಶಾಸಕನೊಬ್ಬ ಗೆದ್ದು ಬಂದಾಗಲೇ ಆತನಿಗಿರುವ ಅರ್ಹತೆ, ಯೋಗ್ಯತೆ ತಕ್ಕಂತೆ ತಾನು ಮಂತ್ರಿಯಾಗಬಹುದೇಇಲ್ಲವೇ ಎಂಬುದು ಖಚಿತವಾಗಬೇಕು. ಅದನ್ನು ಮೀರಿ ಮಂತ್ರಿಯಾಗಲೇ ಬೇಕೆಂದರೆ ಅಂಥವರಿಗೆ ಇಲಾಖೆ ಪರೀಕ್ಷೆಗಳನ್ನು ನೀಡಿ ಅದರಲ್ಲಿ ಉತ್ತೀರ್ಣ ರಾಗುವ ಕಟ್ಟುಪಾಡು ವಿಧಿಸಬೇಕು.
ಕಾರ್ಯಾಂಗ ದಲ್ಲಿ ಡಿ ದರ್ಜೆ ನೌಕರನೊಬ್ಬ ದ್ವಿತೀಯ ದರ್ಜೆಯ ಗುಮಾಸ್ತನ ಹುದ್ದೆಗೆ ಪದನ್ನೋತಿ ಪಡೆಯ ಬೇಕಾದರೆ ನಿಗದಿತ ಇಲಾಖಾ ಪರೀಕ್ಷೆಗಳನ್ನು ಬರೆದು ಅದರಲ್ಲಿ ತೇರ್ಗಡೆಯಾದರೆ ಮಾತ್ರ ಆತನಿಗೆ ಪ್ರಮೋಷನ್ನು. ಇಲ್ಲದಿದ್ದರೆ ಆತನ ಅರ್ಹತೆ ಅಷ್ಟಕ್ಕೇ ಸೀಮಿತ. ಇದೇ ನ್ಯಾಯ ಶಾಸಕಾಂಗ ದಲ್ಲೂ ಜಾರಿಯಾಗುವುದು ನಿಜವಾದ ಸಾಮಾಜಿಕ ನ್ಯಾಯ ಮತ್ತು ಸಮಾನತೆಯ ಅನುಷ್ಠಾನವಲ್ಲವೇ? ಕೇವಲ ನಲವತ್ತು ಖಾತೆಗಳನ್ನು ಇಟ್ಟುಕೊಂಡು, ಗೆದ್ದು ಬರುವ೨೨೪ಶಾಸಕರ ಜತೆಗೆ ವಿಧಾನ ಪರಿಷತ್ತಿನ ಸದಸ್ಯರು ಗಳನ್ನೂ ಕಟ್ಟಿಕೊಂಡು ಆಡಳಿತ ನಡೆಸುವುದು ಇನ್ನು ಮುಂದೆ ನಿಜಕ್ಕೂ ಯಮಸಾಹಸ.
ಆದ್ದರಿಂದ ಇರುವ ನಿಗಮ ಮಂಡಳಿಗಳು, ಪ್ರಾಧಿಕಾರಗಳನ್ನು ಸಂಪುಟ ದರ್ಜೆಗೆ ಪರಿವರ್ತಿಸಿ ಖಾತೆಗಳ ಸಂಖ್ಯೆಯನ್ನು ಏರಿಸ ಬಹುದು. ಇನ್ನೂ ಸುಲಭದ ಮಾರ್ಗ ವೆಂದರೆ, ಈಗಾಗಲೇ ವಿಧಾನ ಪರಿಷತ್ತು ಎಂಬ ಮೇಲ್ಮನೆಗೆ ಶಿಕ್ಷಣವಂತರು, ಪದವೀಧರರು, ಕಲೆ, ಸಂಸ್ಕೃತಿ, ಸಿನಿಮಾ, ಕ್ರೀಡೆ, ಸಮಾಜಸೇವೆ ಕ್ಷೇತ್ರ ಗಳನ್ನು ಪ್ರತಿನಿಧಿಸುವ ಸಂಭಾವಿತರನ್ನು ನೇಮಿಸಲಾಗುತ್ತ ದಲ್ಲವೇ, ಅದೇ ಮಾನದಂಡವನ್ನು ಅನುಸರಿಸಿ ಪ್ರತಿ ಇಲಾಖೆಗೂ ಸರಿಹೊಂದುವ ಆಯಾ ಕ್ಷೇತ್ರದಲ್ಲಿ ಪರಿಣಿತರಾಗಿರುವ ಗೆದ್ದು ಬಂದ ಶಾಸಕರಿಗೆ ಮಂತ್ರಿಸ್ಥಾನವನ್ನು ನಿಗದಿ ಗೊಳಿಸಲಿ.
ಆಗ ಶಾಸಕರಲ್ಲಿ ತನಗಿರುವ ಸ್ಥಾನ ಏನೆಂಬುದು ಸ್ಪಷ್ಟವಾಗಿ, ತನಗಾಗಿ ಬರುವ ಅವಕಾಶಕ್ಕಾಗಿ ಕಾಯುತ್ತಾನೆ. ಒಂದೇ ಅರ್ಹತೆ ಹೆಚ್ಚು ಶಾಸಕರಿಗಿದ್ದರೆ ಇಂತಿಷ್ಟು ತಿಂಗಳುಗಳ ಕಾಲ ಅವಕಾಶ ನೀಡಿ ಕಾರ್ಯಾಂಗ ದಲ್ಲಿರುವಂತೆ ಶಾಸಕರಿಗೂ ಸೇವಾಪುಸ್ತಕ ತೆರೆದು ಆ ಅವಧಿಯಲ್ಲಿ ಅವರು ನಿರ್ವಹಿಸುವ ಕಾರ್ಯಕ್ಷಮತೆ ಕರ್ತವ್ಯಕ್ಕೆ ಶಾಸನಬದ್ಧ ಅಂಕಗಳನ್ನು ನೀಡುವಂತಾಗಲಿ.ಆ ಅಂಕಗಳು ಆ ಶಾಸಕನ ಮುಂದಿನ ಚುನಾವಣೆ ಸ್ಪರ್ಧೆಗೆ ಮಂತ್ರಿಗಿರಿಗೆ ಸಹಕಾರಿಯಾಗುವಂತಾಗಲಿ.
ಮುಖ್ಯಮಂತ್ರಿಗಳು, ಮಂತ್ರಿಗಳು ತಮ್ಮ ಅನುಕೂಲಕ್ಕಾಗಿ ತಮ್ಮ ಆಪ್ತಸಹಾಯಕರಾಗಿ, ವಿಶೇಷ ಅಧಿಕಾರಿಗಳಾಗಿ, ಮಾಧ್ಯಮ ಸಲಹೆಗಾರರನ್ನಾಗಿ ಯೋಗ್ಯ ಮತ್ತು ಚಾಣಾಕ್ಷ ವ್ಯಕ್ತಿಗಳನ್ನು ನೇಮಿಸಿಕೊಳ್ಳುವುದಿಲ್ಲವೇ? ಹಾಗೆಯೇ ಆಯಾ ಖಾತೆಯನ್ನು ನಿಭಾಯಿಸಲು ಸಮರ್ಥನಾದ ಶಾಸಕನನ್ನು ಮಂತ್ರಿಯಾಗಿಸುವುದೂ ನ್ಯಾಯಸಮ್ಮತವಲ್ಲವೇ? ದ್ವಿಚಕ್ರ ಸವಾರನ ಸುರಕ್ಷತೆ ಗಾಗಿ ಲೈಸೆನ್ಸು ಹೆಲ್ಮೆಟ್ಟು, ಮೂರು ಜನರನ್ನು ಕೊಂಡೊಯ್ಯುವ ಒಬ್ಬ ಆಟೋ ಚಾಲಕನಿಗೆ ಅನೇಕ ಕಟ್ಟುಪಾಡುಗಳನ್ನು ಸರಕಾರ ವಿಧಿಸುವಾಗ ಇಡೀ ರಾಜ್ಯದ ಏಳು ಕೋಟಿ ಜನರನ್ನು ಆಳುವ ಶಾಸಕಾಂಗದ ಮಂತ್ರಿಗಳಿಗೆ ಯಾವುದೇ ಮಾನದಂಡವಿಲ್ಲ ದಿರುವುದು ಎಂಥ ನಾಚಿಗೇಡಲ್ಲವೇ? ಶಾಸಕಾಂಗವೇನು ಮನ ಬಂದಂತೆ ಮೋಜುಮಾಡುವ ವಂಡರ್ ಲಾ ಪಾರ್ಕೇ?.