ಭರತ ಖಂಡ ಕಂಡ ಏಕೈಕ ತ್ರಿವಿಧ ದಾಸೋಹಿ
ಸ್ಮರಣೆ
ಡಾ.ಶ್ರೀ ಶಿವಾನಂದ ಶಿವಾಚಾರ್ಯರು
ಒಂದು ಶತಮಾನದ ದೀರ್ಘ, ಸುದೀರ್ಘ ಬದುಕು. ಇದೊಂದು ಬಹುದೊಡ್ಡ ವಿಸ್ಮಯ. ಯಾರಾದರೂ ಸರಿ, ಆಶ್ಚರ್ಯಪಡಲೇ ಬೇಕು. ಶತಮಾನವನ್ನೇ ಬೆರಗುಗೊಳಿಸಿದಂಥ ವ್ಯಕ್ತಿತ್ವವದು.
ಎರಡು ಶತಮಾನಗಳ ಸಂಕ್ರಮಣವನ್ನು ಕಂಡ ಮಹಾಚೇತನವದು. ಸಾಮಾನ್ಯರು ಸಂವತ್ಸರಗಳ ಸಂಕ್ರಮಣವನ್ನು ಕಾಣುತ್ತಾರೆ. ಮಹಾನುಭಾವರು ಶತಮಾನಗಳ ಸಂಕ್ರಮಣಕ್ಕೆ ಸಾಕ್ಷಿಯಾಗುತ್ತಾರೆ. ಎರಡು ಶತಮಾನಗಳ ಸಂಕ್ರಮಣ, ಸಂಧಿಕಾಲಕ್ಕೆ ಸಾಕ್ಷಿಯಾದ ಸಿದ್ಧಗಂಗಾ ಶ್ರೀಗಳು ಈ ನಾಡಿನ ಸಾಕ್ಷಿಪ್ರಜ್ಞೆ. ಅವರೊಂದು ಅದಮ್ಯ ಚೇತನ.
ಪೂಜ್ಯ ಸಿದ್ಧಗಂಗಾ ಶ್ರೀಗಳದು ವಸುಧೈವ ಕುಟುಂಬ. ಪೂಜ್ಯರದು ಮಾತೃಹೃದಯ. ಅವರ ಮಾತೃಹೃದಯವದು ಜಗದಗಲ, ಮಿಗೆಯಗಲ! ಅದೊಮ್ಮೆ ಸಿದ್ಧಗಂಗಾ ಮಠಕ್ಕೆ ಹೋಗಿ ನೋಡಿದರೆ ಲೋಕದ ಮಕ್ಕಳೆಲ್ಲ ಇಲ್ಲಿಯೇ ಇದ್ದಾರೇನೋ ಎನ್ನುವ ಭಾವನೆ ಬರುತ್ತದೆ. ಸಿದ್ಧಗಂಗಾ ಮಠದಲ್ಲಿ ಮಕ್ಕಳ ಕಲರವವೇ ಘಂಟಾನಾದ. ಮಕ್ಕಳು ಪ್ರಸಾದ ಮಾಡುತ್ತಲಿದ್ದರೆ ಅದುವೇ ಲಿಂಗನೈವೇದ್ಯ.
ಸಂಧ್ಯಾಸಮಯದಲ್ಲಿ ಮಠದ ಆವರಣದಲ್ಲಿ ಸಹಸ್ರಾರು ಮಕ್ಕಳು ನಿತ್ಯದಲ್ಲೂ ಮಾಡುವ ಪ್ರಾರ್ಥನೆಯೇ ಬಹುದೊಡ್ಡ ಶಿವಪೂಜೆ. ಪೂಜ್ಯ ಸಿದ್ಧಗಂಗಾ ಶ್ರೀಗಳಿಗೆ ಸುತ್ತಮುತ್ತ ಮಕ್ಕಳಿರಬೇಕು. ಸುತ್ತಮುತ್ತ ಮಕ್ಕಳಿಲ್ಲದಿದ್ದರೆ, ಮಕ್ಕಳ ಕಲರವ ಅವರಿಗೆ ಕೇಳಿಸದಿದ್ದರೆ ಅವರ ಮನಸ್ಸಿಗೆ ಸೊಗಸೇ ಇರುವುದಿಲ್ಲ. ಮಠದ ಆವರಣದಲ್ಲಿ ಮಕ್ಕಳು ಸಂಚಾರ ಮತ್ತು ಸಂಚಲನವಿಲ್ಲದಿದ್ದರೆಸಿದ್ಧಗಂಗಾಶ್ರೀಗಳಿಗೆ ಉತ್ಸಾಹವೇ ಇರುತ್ತಿರಲಿಲ್ಲ. ಪರಮಪೂಜ್ಯ ಸಿದ್ಧಗಂಗಾ ಶ್ರೀಗಳು ತಮ್ಮ ಬದುಕಿಗೆ ‘ಬಹುಸ್ಯಾಮ’ ದೀಕ್ಷೆಯನ್ನು ಕೊಟ್ಟುಕೊಂಡಿದ್ದಾರೆ.
ಬಸವಾದಿ ಮಹಾನುಭಾವರು ಹನ್ನೆರಡನೆಯ ಶತಮಾನದಲ್ಲಿ ದಾಸೋಹದ ಪರಿಕಲ್ಪನೆಗೆ ಜನ್ಮಕೊಟ್ಟು ಅದನ್ನು  ಚಲಾವಣೆ ಯಲ್ಲಿ ತಂದರು. ಹನ್ನೆರಡನೆಯ ಶತಮಾನದಲ್ಲಿ ದಾಸೋಹ ತತ್ತ್ವವು ಭಕ್ತಿ ತತ್ತ್ವ ಮತ್ತು ಕಾಯಕ ತತ್ತ್ವಗಳಷ್ಟೇ ಜನಪ್ರಿಯ ವಾಗಿತ್ತು. ಭಕ್ತಿ, ಕಾಯಕ, ಅರಿವು, ಆಚಾರ, ಅನುಭವಮಂಟಪ, ದಾಸೋಹ., ಈ ಎಲ್ಲವನ್ನೂ ನಮ್ಮ ಕನ್ನಡನಾಡಿಗೆ ಹನ್ನೆರಡನೆಯ ಶತಮಾನವು ಕೊಡುಗೆಯಾಗಿ ನೀಡಿತು.
ಇವೆಲ್ಲವೂ ನಮ್ಮ ನಾಡಿಗೆ ಬಸವಕಾಲೀನ ಮಹತ್ತರ ಕೊಡುಗೆಗಳಾಗಿ ದಾಖಲಿಸಲ್ಪಟ್ಟಿವೆ. ದಾಸೋಹ ತತ್ತ್ವವು ಬಸವ ಕಾಲದಲ್ಲಿ ಇನ್ನು- ಮುನ್ನಿಲ್ಲದ ಪ್ರಸಿದ್ಧಿಯನ್ನು ಪಡೆದುಕೊಂಡಿತು. ಬಸವ ಸಮಕಾಲೀನ ಶರಣರೆಲ್ಲ ಕಾಯಕದಂತೆ ದಾಸೋಹವನ್ನು ಕೂಡ ತುಂಬ ಆಪ್ತವಾಗಿಸಿಕೊಂಡು ಮತ್ತು ಅದನ್ನವರು ತಮ್ಮ ಬದುಕಿನ ಅವಿಭಾಜ್ಯ ಅಂಗವನ್ನಾಗಿಸಿಕೊಂಡು ಬದುಕಿದರು. ಅವರು ಕಾಯಕದಲ್ಲಿ ಕೈಲಾಸವನ್ನು ಕಂಡರೆ ದಾಸೋಹದಲ್ಲಿ ದೇವರನ್ನು ಕಂಡರು.
ಹನ್ನೆರಡನೆಯ ಶತಮಾನದ ನಂತರದ ಕಾಲಘಟ್ಟದಲ್ಲಿ ದಾಸೋಹವು ನಿಧಾನಕ್ಕೆ ನೇಪಥ್ಯಕ್ಕೆ ಸರಿಯತೊಡಗಿತು. ನಂತರದ ದಿನಗಳಲ್ಲಿ ಅದು ತಟಸ್ಥವಾಯಿತು ಮತ್ತು ಅದು ಕೇವಲ ಗ್ರಂಥಸ್ಥವಾಯಿತು.೧೩ರಿಂದ೧೮ನೇ ಶತಮಾನದವರೆಗೆ ಅದರ ಸುದ್ದಿಯೇ ಇಲ್ಲ.೧೯ನೇ ಶತಮಾನದ ಆದಿಯಲ್ಲಿ ದಾಸೋಹ ತತ್ತ್ವಕ್ಕೆ ಮರುಜನ್ಮವನ್ನು ಕೊಟ್ಟು ಅದನ್ನು ಚಲಾವಣೆಗೆತಂದ ಕೀರ್ತಿ ಪರಮಪೂಜ್ಯ ಸಿದ್ಧಗಂಗಾ ಶ್ರೀಗಳಿಗೆ ಸಲ್ಲುತ್ತದೆ.
೧೨ನೇಶತಮಾನದ ನಂತರ ‘ದಾಸೋಹ’ ಪದಕ್ಕೆ ಮತ್ತು ಆ ಪದದ ಅರ್ಥಕ್ಕೆ ಚಲಾವಣಾಭಾಗ್ಯವನ್ನು ನೀಡುವ ಮೂಲಕ ಪೂಜ್ಯರು ದಾಸೋಹ ತತ್ತ್ವದ ಮರುಜವಣಿಯಾದರು; ಅದಕ್ಕವರು ಸಂಜೀವಿನಿಯಾದರು. ದಾಸೋಹಕ್ಕೆ ಮತ್ತು ದಾಸೋಹತತ್ತ್ವಕ್ಕೆ ಬಸವಣ್ಣನವರು ಜನ್ಮಕೊಟ್ಟರೆ ದಾಸೋಹಕ್ಕೆ ಮತ್ತು ದಾಸೋಹತತ್ತ್ವಕ್ಕೆ ಮರುಜನ್ಮ ಮತ್ತು ಪುನರ್ಜನ್ಮವನ್ನು ಕೊಟ್ಟವರು ನಮ್ಮ ಸಿದ್ಧಗಂಗಾ ಶ್ರೀಗಳು.
ಅವರನ್ನು ಭಕ್ತಾದಿಗಳು ‘ದಾಸೋಹಿ, ಮಹಾದಾಸೋಹಿ’ ಎಂದು ಕರೆದರೆ ಇಡೀ ನಾಡು ಅವರನ್ನು ‘ತ್ರಿವಿಧ ದಾಸೋಹಿ’ ಎಂದು ಕರೆದು, ತಾನು ಅಂಥ ತ್ರಿವಿಧ ದಾಸೋಹಿಗಳ ‘ಸಮಕಾಲೀನ’ ಎಂದು ಹುಬ್ಬೇರಿಸಿ, ಹಣೆ ಏರಿಸಿ ಸಂಭ್ರಮಿಸುತ್ತಲಿದೆ. ಪರಮ ಪೂಜ್ಯರು ನಮ್ಮೀ ಭರತಖಂಡ ಕಂಡ ಏಕೈಕ ‘ತ್ರಿವಿಧ ದಾಸೋಹಿ’.