ನೇತಾಜಿ ಜನ್ಮದಿನ ದೇಶಪ್ರೇಮ ದಿವಸವಾಗಲಿ
ತನ್ನಿಮಿತ್ತ
ಎಂ.ರಾಜ್’ಕುಮಾರ್‌
ಸಂಘಟನಾ ಕಾರ್ಯದರ್ಶಿ, ನೇತಾಜಿ ಸುಭಾಷ್ ಚಂದ್ರ ಬೋಸ್ ಅಧ್ಯಯನ ಟ್ರಸ್ಟ್
ಸುಭಾಷ್ ಚಂದ್ರ ಬೋಸ್ ಅವರು ಅಪ್ರತಿಮ ವ್ಯಕ್ತಿತ್ವ ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ ನೀಡುವುದಾದರೆ, ಬೋಸ್ ಅವರಿಗೆ ನೇತಾಜಿ ಎನ್ನುವ ಬಿರುದಾಂಕಿತವನ್ನು ನೀಡಿದ್ದು, ಮತ್ಯಾರು ಅಲ್ಲ. ಸ್ವತಃ ಮಹಾತ್ಮ ಗಾಂಧೀಜಿ ಅವರು. ವಿಶ್ವದ ಹಲವು ನಾಯಕರು ನೇತಾಜಿ ಅವರನ್ನು ವಿಶ್ವದ ನಾಯಕ ಎಂದು ಒಪ್ಪಿಕೊಂಡಿದ್ದರು.
ಸ್ವಾತಂತ್ರ್ಯ ಭಾರತದ ಕನಸು ಕಂಡವರು ಒಬ್ಬಿಬ್ಬರಲ್ಲ. ಇಂದಿನ ಸ್ವಾತಂತ್ರ್ಯ ಭಾರತಕ್ಕಾಗಿ ಲಕ್ಷಾಂತರ ದೇಶಪ್ರೇಮಿಗಳು ತಮ್ಮ ಜೀವ ಮತ್ತು ಜೀವನವನ್ನು ಮುಡುಪಾಗಿಟ್ಟರು.
ಲಕ್ಷಾಂತರ ಮಂದಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡುವುದಕ್ಕೆ ಪ್ರೇರೆಪಿಸಿದವರ ಸಂಖ್ಯೆಯೂ ಸಾವಿರಾರಿದೆ. ಆದರೆ ಅವರ ಸಾಲಿನಲ್ಲಿ ಕೆಲ ವ್ಯಕ್ತಿತ್ವವನ್ನು ವೈಭವೀಕರಿಸಿದರೆ, ಇನ್ನು ಕೆಲವರ ಕೆಲಸವನ್ನು ಕಂಡು ಕಾಣದಂತೆ ನೋಡುತ್ತಿರುವುದುನೋಡಿದ್ದೇವೆ. ದೇಶಕ್ಕಾಗಿಯೇ ಮಡಿದ, ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಿಟ್ಟರೂ, ಅವರ ಕಾರ್ಯವನ್ನು ಸರಿಯಾದ ರೀತಿಯಲ್ಲಿ ಬಿಂಭಿಸುವ ಅಥವಾ ಪ್ರಚಾರ ಪಡಿಸದೇ ಆ ವ್ಯಕ್ವಿತ್ವವನ್ನೇ ಭಿನ್ನ ರೀತಿ ತೋರಿಸಿರುವ ಪೈಕಿ ಮೊದಲ ಸಾಲಿನಲ್ಲಿ ಸುಭಾಷ್ ಚಂದ್ರ ಬೋಸ್ ಅವರು ನಿಲ್ಲುತ್ತಾರೆ.
ದೇಶ ಕಂಡ ಅಪ್ರತಿಮ ದೇಶಪ್ರೇಮಿ, ಭಕ್ತ ಹಾಗೂ ಪ್ರಚಂಡ ಸಂಘಟನಾ ಚತುರ ಸುಭಾಷ್ ಚಂದ್ರ ಬೋಸ್ ಅವರ ವ್ಯಕ್ತಿತ್ವಮಹಾತ್ಮ ಗಾಂಧೀಜಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ವ್ಯಕ್ತಿತ್ವದಷ್ಟೇ ಶ್ರೇಷ್ಠವಾಗಿದೆ. ಆದರೂ ಎಲ್ಲೋ ಒಂದು ಬೋಸ್ ಅವರನ್ನು ಸೈಡ್‌ಲೈನ್ ಮಾಡುವ ಕೆಲಸವನ್ನು ಇತಿಹಾಸಕಾರರು ಮಾಡಿದ್ದಾರೆ ಎನ್ನುವ ಬೇಸರವಂತು ಅನೇಕರಲ್ಲಿದೆ.
ಸುಭಾಷ್ ಚಂದ್ರ ಬೋಸ್ ಅವರು ಅಪ್ರತಿಮ ವ್ಯಕ್ತಿತ್ವ ಎನ್ನುವುದಕ್ಕೆ ಒಂದು ಸಣ್ಣ ಉದಾಹರಣೆ ನೀಡುವುದಾದರೆ, ಬೋಸ್ ಅವರಿಗೆ ನೇತಾಜಿ ಎನ್ನುವ ಬಿರುದಾಂಕಿತವನ್ನು ನೀಡಿದ್ದು, ಮತ್ಯಾರು ಅಲ್ಲ. ಸ್ವತಃ ಮಹಾತ್ಮ ಗಾಂಧೀಜಿ ಅವರು. ಇನ್ನು ವಿಶ್ವದ ಹಲವು ನಾಯಕರು ನೇತಾಜಿ ಅವರನ್ನು ವಿಶ್ವದ ನಾಯಕ ಎಂದು ಒಪ್ಪಿಕೊಂಡಿದ್ದರು. ವಿಶ್ವಮಟ್ಟದಲ್ಲಿಯೇ 1940ರ ಅವಧಿ ಯಲ್ಲಿಯೇ ರೆಡಿಯೋ ಮೂಲಕ ಬ್ರಿಟೀಷರೇ ನಾನಿದ್ದೇನೆ ಎಂದು ಘರ್ಜಿಸುವ ಮೂಲಕ, ಸ್ವಾತಂತ್ರ್ಯ ಭಾರತಕ್ಕೆ ತಮ್ಮದೇಯಾದ ಕೊಡುಗೆಯನ್ನು ನೀಡಿದ್ದರು.
ಬ್ರಿಟೀಷರಿಗೆ ಸಿಂಹ ಸ್ವಪ್ನವಾಗಿದ್ದ ನೇತಾಜಿ ಅವರ ವ್ಯಕ್ತಿತ್ವ, ಭಾರತದ ಇತಿಹಾಸಕಾರರಿಗೆ ಮಾತ್ರ ಹೆಚ್ಚು ಕಾಣಿಸಲೇ ಇಲ್ಲ. ಎಲ್ಲೋ ಒಂದು ಕಡೆ ಮಹಾತ್ಮ ಗಾಂಧಿ, ಅಂಬೇಡ್ಕರ್ ಅವರನ್ನು ರಾಷ್ಟ್ರ ನಾಯಕರು ಎಂದು ಕಾಣುವ ನಾವು, ನೇತಾಜಿ ವಿಷಯದಲ್ಲಿ ಮಾತ್ರ ಪಶ್ಚಿಮ ಬಂಗಾಳಕ್ಕೆ ಸೀಮಿತಗೊಳಿಸುತ್ತಿದ್ದೇವೆ. ಇಲ್ಲಿ ಒಂದು ವಿಷಯವನ್ನು ಹೇಳಲು ಬಯಸುತ್ತೇನೆ.ಇಂದಿನ ಡಿಜಿಟಲ್ ಕಾಲದಲ್ಲಿ ಸಂಘಟನೆ ಎನ್ನುವ ವಿಷಯ ಬಂದಾಗ ಹೆಣಗಾಡುತ್ತೇವೆ.
ಆದರೆ ಬ್ರಿಟಿಷ್ ಕಾಲದಲ್ಲಿ, ಕಠಿಣ ನಿಯಮಾವಳಿಗಳಿದ್ದರೂ, ಆ ಎಲ್ಲ ಸಂಕೋಲೆಗಳನ್ನು ಮೀರಿ ನೇತಾಜಿ ಅವರು ತಮ್ಮದೇ ಯಾದ ಸೇನೆ ಯೊಂದನ್ನು ಸಿದ್ಧಪಡಿಸಿದ್ದರು. ಅದರಲ್ಲಿ 3500ಕ್ಕೂ ಹೆಚ್ಚು ಸೈನಿಕರನ್ನು ಹೊಂದಿದ್ದರು. ಇದಿಷ್ಟೇ ಅಲ್ಲದೇ ಬ್ರಿಟೀಷ್ ಆಡಳಿತದ ವಿರುದ್ಧ ಸಿಂಗಾಪುರದಲ್ಲಿಯೇ ಕುಳಿತುಕೊಂಡು ಪ್ರತ್ಯೇಕ ಸರಕಾರವನ್ನು ರಚಿಸಿದ ಎದೆಗಾರಿಕೆ ಅವರದ್ದು. ಆದರೆ ಅವರನ್ನು ಕೇವಲ ಒಂದು ಪ್ರಾಂತ್ಯಕ್ಕೆ ಸೀಮಿತಗೊಳಿಸಲಾಯಿತು. ಸ್ವಾತಂತ್ರ್ಯದ ಬಳಿಕ ಏಳು ದಶಕಗಳ ಕಾಲ ನೇತಾಜಿ ಅವರನ್ನು ಎಲೆಮರೆಯಲ್ಲಿಯೇ ಮುಚ್ಚಿಟ್ಟು ಆಗಿದೆ. ಇನ್ನಾದರೂ, ಅವರಿಗೆ ಸಿಗಬೇಕಾದ ಗೌರವ ನೀಡಬೇಕಿದೆ.
ಬಿಜೆಪಿ, ಆರ್‌ಎಸ್‌ಎಸ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ನೇತಾಜಿ ಅವರ ಜನ್ಮ ದಿನಾಚರಣೆಯನ್ನು ಪರಾಕ್ರಮಿ ದಿವಸ್ ಎಂದು ಆದೇಶ ಹೊರಡಿಸಿದ್ದಾರೆ. ಆದರೆ ಈ ಎಲ್ಲರೂ ಮೊದಲು ಅರ್ಥ ಮಾಡಿಕೊಳ್ಳಬೇಕಿರುವುದು ಪರಾಕ್ರಮಿಯ ಶಬ್ದ ಅರ್ಥವನ್ನು. ಬೋಸ್ ಅವರಿಗೆ ಪರಾಕ್ರಮಿ ಎನ್ನುವ ಶಬ್ದವನ್ನು ಬಳಕೆ ಮಾಡುವುದೇ ನನ್ನ ಪ್ರಕಾರ ಬಹುದೊಡ್ಡ ತಪ್ಪು. ಏಕೆಂದರೆ, ಪರಾಕ್ರಮಿ ಎನ್ನುವ ಪದವನ್ನು ನೆರೆ ರಾಜ್ಯದ ಆಕ್ರಮಣ ಮಾಡಿ ಗೆದ್ದುಕೊಂಡು ಬಂದವರಿಗೆ ಬಳಸ ಲಾಗುತ್ತದೆ. ಆದರೆ ನೇತಾಜಿ ಅವರು ಎಂದಿಗೂ ರಾಜ್ಯವನ್ನು ಗೆದ್ದುಕೊಂಡು ಬರಲು ಹೋಗಲಿಲ್ಲ.
ಬದಲಿಗೆ ನಮ್ಮ ದೇಶದ ಸ್ವಾತಂತ್ರ್ಯವನ್ನು ಮರಳಿ ನಮ್ಮ ದೇಶಕ್ಕೆ ಪಡೆಯಲು ಹೋರಾಡಿದರು. ಆದ್ದರಿಂದ ಪರಾಕ್ರಮಿ ದಿವಸ್ಎನ್ನುವ ಬದಲು ದೇಶಪ್ರೇಮಿ ದಿವಸ್ ಎಂದಾಗಲಿ. ಈ ನಿಟ್ಟಿನಲ್ಲಿ ಈಗಾಗಲೇ ರಾಜ್ಯ ಹಾಗೂ ಕೇಂದ್ರ ಸರಕಾರದ ಮೇಲೆ ಒತ್ತಡ ಹೇರಲಾಗಿದೆ. ಜ.23ರಂದು ಅಂದರೆ ಇಂದು (ಶನಿವಾರ) ನೇತಾಜಿ ಅವರ ೧೨೫ನೇ ಜನ್ಮದಿನಾಚರಣೆಯ ಈ ಸಮಯದಲ್ಲಿ, ನಾನೊಂದು ವಿಷಯವನ್ನು ಹೇಳಲೇ ಬೇಕು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸುಭಾಷ್ ಚಂದ್ರ ಬೋಸ್ ಅವರ ಹೆಸರಿ ನಲ್ಲಿ 1997ರವರೆಗೆ ದೇಶದಲ್ಲಿ ಒಂದೇ ಒಂದು ಭವನ ಅಥವಾ ಸಂಸ್ಥೆ ಇರಲಿಲ್ಲ ಎಂದರೆ ಅಚ್ಚರಿಯಾಗುತ್ತದೆ. ಆದರೆ ಇದು ಸತ್ಯ.
ಆದರೆ ಒಂದು ಹೆಮ್ಮೆಯ ಸಂಗತಿ ಎಂದರೆ, ಅವರ ಹೆಸರಿನಲ್ಲಿ ಮೊದಲು ಭವನ ನಿರ್ಮಾಣವಾಗಿದ್ದು ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ. 1997ರಲ್ಲಿ ಅಂದಿನ ವಿಧಾನಪರಿಷತ್ ಸಭಾಪತಿಯಾಗಿದ್ದ ಡಿ.ಬಿ ಕಲ್ಮನ್ಕರ್ ಅವರು ಸುಭಾಷ್ ಚಂದ್ರ ಬೋಸ್ ಅವರ ನೂರನೇ ವರ್ಷದ ನೆನಪಿನಲ್ಲಿ ಟ್ರಸ್ಟ್ ಮಾಡಿ, ಯುವಕರಲ್ಲಿ ನೇತಾಜಿ ಅವರ ಆದರ್ಶವನ್ನು ತುಂಬುವ ಕೆಲಸವನ್ನು ಮಾಡಬೇಕು ಎನ್ನುವ ಉದ್ದೇಶದಿಂದ ಆರಂಭಿಸಲಾಯಿತು. ಇದಕ್ಕಾಗಿ ಬಿಡಿಎದಿಂದ ಒಂದು ಎಕರೆ ಭೂಮಿಯನ್ನು ಪಡೆದು, ಕಟ್ಟಡವನ್ನು ನಿರ್ಮಿಸಲಾಯಿತು. ಆ ಕಟ್ಟಡ ದೇಶದಲ್ಲಿ ನೇತಾಜಿ ಅವರ ಹೆಸರಲ್ಲಿ ನಿರ್ಮಾಣ ಗೊಂಡ ಮೊದಲ ಕಟ್ಟಡ. ಇದಕ್ಕೆ ಭೂಮಿಪೂಜೆ ಯನ್ನು ಅಂದಿನ ಪ್ರಧಾನ ಮಂತ್ರಿಗಳಾಗಿದ್ದ ಎಚ್.ಡಿ ದೇವೇಗೌಡರು, ಸುಭಾಷ್ ಚಂದ್ರ ಬೋಸ್ ಅವರ ಮಗಳು ಅನಿತಾ ಪಫ್, ಅಳಿಯ ಮಾರ್ಟಿನ್ ಪಫ್ ಭಾಗವಹಿಸಿದ್ದರು. ಇದಾದ ಬಳಿಕ ಟ್ರಸ್ಟ್ ವತಿಯಿಂದ ವಿಧಾನಸೌಧದ ಮುಂಭಾಗ 12 ಅಡಿ ಎತ್ತರ ಪುತ್ಥಳಿಯನ್ನು ಸ್ಥಾಪಿಸುವ ಮೂಲಕ ಅವರ ನೆನಪನ್ನು ಹಸಿರಾಗಿಸುವ ಪ್ರಯತ್ನವನ್ನು ಮಾಡಲಾಗಿದೆ.
ಈ ಟ್ರಸ್ಟ್ ವತಿಯಿಂದ ಕಳೆದ ಒಂದೂವರೆ ದಶಕದಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವನ್ನು ದೇಶಪ್ರೇಮ ದಿವಸ್ ಎಂದು ಆಚರಿಸಬೇಕು. ಇದರೊಂದಿಗೆ ಮಹಾತ್ಮ ಗಾಂಧಿ ಅವರಿಗೆ ಮಾಡುವ ಗೌರವ ಸಮರ್ಪಣೆ ಬೋಸರಿಗೂ ಮಾಡಬೇಕು. ಗಾಂಧಿ ಜಯಂತಿಯಂದು ಎಲ್ಲ ಸರಕಾರಿ ಕಚೇರಿ, ಶಾಲಾ ಕಾಲೇಜುಗಳಲ್ಲಿ ವಿಜೃಂಭಣೆ ಯಿಂದ ಆಚರಿಸಿಕೊಂಡು, ಧ್ವಜ ಹಾರಿಸಿ ಆಚರಿಸುವ ಕಾರ್ಯ ನಡೆದಿದೆ. ಇದೇ ರೀತಿಯಲ್ಲಿ ಸುಭಾಷ್ ಚಂದ್ರ ಬೋಸ್ ಅವರ ಜಯಂತಿಯನ್ನು ರಾಷ್ಟ್ರಧ್ವಜಹಾರಿಸಿ ನೇತಾಜಿ ಅವರಿಗೆ ಗೌರವ ಸಮರ್ಪಣೆ ಮಾಡಬೇಕು. ಈ ಮೂಲಕ ಇಂದಿನ ಪೀಳಿಗೆಯ ಮಕ್ಕಳಿಗೆ ಬೋಸ್ ಅವರ ದೇಶಪ್ರೇಮ, ಆದರ್ಶ ಹಾಗೂ ಬೋಸ್ ಅವರ ಕನಸಿನ ಭಾರತವನ್ನು ತಿಳಿಸುವ ಕೆಲಸವನ್ನು ಮಾಡಬೇಕು.
ಇದರೊಂದಿಗೆ ದೇಶದ ಎಲ್ಲ ಸರಕಾರಿ ಕಚೇರಿಗಳಲ್ಲಿ ಗಾಂಧೀಜಿ ಅವರ ಫೊಟೋಗಳನ್ನು ಕಡ್ಡಾಯವಾಗಿ ಹಾಕಬೇಕು ಎಂದುಆದೇಶ ಹೊರಡಿಸಲಾಗಿದೆ. ಇದೇ ರೀತಿ ನೇತಾಜಿ ಅವರ ಫೋಟೋವನ್ನು ಹಾಕಬೇಕು. ಇದಕ್ಕೆ ಕಾರಣವೂ ಇದೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಅವರು ಹುಟ್ಟಿದ್ದು ಬಂಗಾಳದ ಶ್ರೀಮಂತ ಕುಟುಂಬದಲ್ಲಿ. ಸಿರಿವಂತ ಕುಟುಂಬದಲ್ಲಿ ಜನಿಸಿದರೂ,ದೇಶವನ್ನು ದಾಸ್ಯ ಮುಕ್ತಗೊಳಿಸಲು ತಮ್ಮ ಜೀವನವನ್ನೇ ಮುಡಿಪಾಗಿಟ್ಟರು. ಬಳಿಕ ಇಂದಿನ ಯುವಕರಿಗೆ ಕಬ್ಬಿಣದ ಕಡಲೆಯಾಗಿರುವ ಐಎಎಸ್ ಪರೀಕ್ಷೆಯನ್ನು ಕೇವಲ ಪಾಸು ಮಾಡದೇ, ನಾಲ್ಕನೇ ರ‍್ಯಾಂಕ್ ಗಳಿಸಿದ್ದರು.
ಮನಸು ಮಾಡಿದ್ದರೆ ಅಂದು ಬ್ರಿಟಿಷ್ ಸರಕಾರದ ಅವಧಿಯಲ್ಲಿ ಉತ್ತಮ ಹುದ್ದೆಯನ್ನು ಪಡೆಯಬಹುದಾಗಿತ್ತು. ಆದರೆ ಬ್ರಿಟೀಷರ ದಾಸ್ಯದ ಸುಖಕ್ಕಿಂತ, ಸ್ವಾತಂತ್ರ್ಯ ಭಾರತ ದಲ್ಲಿ ಸಾಯುವುದು ಲೇಸು ಎಂದು, ಅಂತಹ ಹುದ್ದೆಯನ್ನು ತೊರೆದುಸ್ವಾತಂತ್ರ್ಯ ಸಂಗ್ರಾಮಕ್ಕೆ ಧುಮಿಕಿದ್ದರು. ಆದ್ದರಿಂದ ನೇತಾಜಿ ಅವರನ್ನು ಪರಾಕ್ರಮಿ ಎನ್ನುವುದಕ್ಕಿಂತ, ದೇಶಕ್ಕಾಗಿ ಹೋರಾಡಿದ ದೇಶಪ್ರೇಮಿ ಎನ್ನುವುದನ್ನು ಯುವಕರಿಗೆ ತಿಳಿಸ ಬೇಕಾಗಿದೆ. ಟ್ರಸ್ಟ್ ವತಿಯಿಂದ ಈಗಾಗಲೇ ರಾಜ್ಯದ ಮೂಲೆ ಮೂಲೆಗೆ ತೆರಳಿ,ನೇತಾಜಿ ಅವರ ಕುರಿತು ಜಾಗೃತಿ ಮೂಡಿಸುವ ಕೆಲಸವನ್ನು ಮಾಡಲಾಗುತ್ತಿದೆ.
ಮಕ್ಕಳಿಗೆ ಪಠ್ಯ ದೊಂದಿಗೆ ಇತರೆ ರೀತಿಯಲ್ಲಿಯೂ ಮಕ್ಕಳಿಗೆ ಸುಭಾಷ್ ಚಂದ್ರ ಬೋಸ್ ಅವರ ಕುರಿತಾದ ಮಾಹಿತಿ ಲಭ್ಯವಾಗ ಬೇಕು. ಈ ನಿಟ್ಟಿನಲ್ಲಿ ಟ್ರಸ್ಟ್ ವತಿಯಿಂದ ಮಕ್ಕಳಿಗೆ ಸುಭಾಷ್ ಚಂದ್ರ ಬೋಸ್ ಅವರ ಕುರಿತಾದ ಮಾಹಿತಿಯನ್ನು ನೀಡುವ ಉದ್ದೇಶದಿಂದ, ಕಾಶ್ಮೀರದಿಂದ ಕನ್ಯಾಕುಮಾರಿ ತನಕ ನೇತಾಜಿ ಚೇತನ ಯಾತ್ರೆ ಯನ್ನು ಆಯೋಜಿಸ ಲಾಗಿತ್ತು. ನನ್ನ ಸೌಭಾಗ್ಯ ವೆಂದರೆ ಈ ಯಾತ್ರೆಯ ರಾಜ್ಯದ ಸಮನ್ವಯತೆಯನ್ನು ನಾನು ಮಾಡಿದ್ದೆ.
ಈ ಸಮಯದಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಿಗೂ ತೆರಳಿ ನೇತಾಜಿ ಅವರ ಕುರಿತಾದ ಮಾಹಿತಿಗಳನ್ನು ಪ್ರಮುಖರು ಹಾಗೂ ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡಿದ್ದೆವು. ರಾಜ್ಯದ ಉದ್ದಗಲಕ್ಕೆ ನಾವು ಹೋದಾಗ, ನೇತಾಜಿ ಹೆಸರಿಗೆ ಇರುವ ಶಕ್ತಿ ನನಗೆ ಕಾಣಿಸಿತು. ಆದ್ದರಿಂದ ಸುಭಾಷ್ ಚಂದ್ರ ಬೋಸ್ ಅವರನ್ನು ಕೇವಲ ಪರಾಕ್ರಮಿ ಅಥವಾ ಪಶ್ಚಿಮ ಬಂಗಾಳಕ್ಕೆ ಸೀಮಿತಗೊಳಿ ಸದೇ, ಇಡೀ ರಾಷ್ಟ್ರ ವ್ಯಾಪಿ ಅವರ ಬಗ್ಗೆ ಮಾಹಿತಿ ಒದಗಿಸಬೇಕು.
ಇದಕ್ಕಾಗಿ ಕೇಂದ್ರ ಸರಕಾರ ಕೂಡಲೇ ಅವರ ಜನ್ಮದಿನವನ್ನು ದೇಶಪ್ರೇಮ ದಿವಸ್ ಎಂದು ಘೋಷಿಸಬೇಕು. ದೇಶಕ್ಕಾಗಿ ಮಡಿದ ಆ ದಿವ್ಯಚೇತನಕ್ಕೆ 125ನೇ ಜನ್ಮದಿನದ ಶುಭಾಶಯವನ್ನು ಈ ಮೂಲಕ ಕೋರುತ್ತೇನೆ.