ಭಾರತೀಯರಲ್ಲಿ ಸಮರೋತ್ಸಾಹ ಮೂಡಿಸಿದ ಅಪ್ರತಿಮ ನೇತಾಜಿ
ಸ್ಮರಣೆ
ಕಿರಣ್ ಕುಮಾರ್‌ ವಿವೇಕವಂಶಿ
ಸಾತಂತ್ರ್ಯವೆಂಬುದು ಯಾರೂ ಕೊಡುವಂಥ ಸರಕಲ್ಲ; ಅದು ನಾವು ಪಡೆದುಕೊಳ್ಳಬೇಕಾದದ್ದು – ಎಂಬ ನಂಬಿ ನಡೆದವರುನೇತಾಜಿ ಸುಭಾಷಚಂದ್ರಬೋಸ್.
ನೀವು ನಿಮ್ಮ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ತಂದುಕೊಡುತ್ತೇನೆ ಎಂಬ ನೇತಾಜಿ ಕರೆಯನ್ನು ಅಕ್ಷರಶಃ ಕಾರ್ಯಗತ ಗೊಳಿಸಿ ಸಾವಿರಾರು ಮಂದಿ ವೀರರು ರಕ್ತ ಚೆಲ್ಲಿ ಭಾರತದ ಸ್ವಾತಂತ್ರ್ಯವನ್ನು ಸಮೀಪಗತಗೊಳಿಸಿದರು. ಅತ್ಯಂತ ಉದಾತ್ತಅರ್ಥದಲ್ಲಿ ಸ್ವಾತಂತ್ರ್ಯ ಸೇನಾನಿಯಾಗಿದ್ದವರು ನೇತಾಜಿ. ಕೇವಲ ಮಿಲಿಟರಿ ಪರಿಭಾಷೆಯಲ್ಲಿ ಅರ್ಧಾಂತಕವಾಯಿತೆಂದು ಭಾವಿಸಲಾದ ಐ.ಎನ್.ಎ. ಅಭಿಯಾನವೇ ಭಾರತದಲ್ಲಿ ಆಂಗ್ಲಾಧಿಕಾರದ ಅಂತ್ಯವನ್ನು ಸನ್ನಿಹಿತಗೊಳಿಸಿದುದು.
ಅಲ್ಪಕಾಲದಲ್ಲಿ ಇಡೀ ಪೂರ್ವ ಏಷ್ಯದ ಭಾರತೀಯರೆಲ್ಲರಲ್ಲಿ ಸಮರೋತ್ಸಾಹ ಚಿಮ್ಮಿಸಿದರು ನೇತಾಜಿ. ಸುಭಾಷ್‌ಚಂದ್ರ ಬೋಸ್ 1897ರ ಜನವರಿ 23ರಂದು ಓರಿಸ್ಸಾದ ಕಟಕ್‌ನಲ್ಲಿ ಜಾನಕೀನಾಥ ಬೋಸ್ ಮತ್ತು ಪ್ರಭಾವತಿಯರ ಮಗನಾಗಿ ಜನಿಸಿ ದರು. ಐದು ವರ್ಷದವನಿದ್ದಾಗ ಇಂಗೀಷ್ ಮಿಷನರಿ ಶಾಲೆಗೆ ಸೇರಿದ್ದರು. 11ನೇ ವಯಸ್ಸಿಗೆ ಕ್ಯಾರೆವನ್ ಷಾ ಕೊಲಿಜಿಯೆಟ್ ಎಂಬ ಭಾರತೀಯ ಶಾಲೆಗೆ ಸೇರಿದರು.
ಇಲ್ಲಿ ಬೇಣಿಮಾಧವರಿಂದ ಬಬು ಪ್ರಭಾವಿತನಾದನಲ್ಲದೆ ಅವರಿಂದಲೇ ನೈತಿಕ ದೃಷ್ಟಿಯನ್ನು ಬೆಳೆಸಿಕೊಂಡರು. ಮುಂದೆ ರಾಮಕೃಷ್ಣ – ವಿವೇಕಾನಂದರಿಂದ ಆಕರ್ಷಿತರಾಗಿ ಅವರನ್ನೇ ಆದರ್ಶವಾಗಿ ತೆಗೆದುಕೊಂಡು ಅಧ್ಯಾತ್ಮ, ಸ್ವದೇಶ ಮತ್ತುಸ್ವಸಂಸ್ಕೃತಿಯ ಬಗ್ಗೆ ನಿಷ್ಠೆ ತಳೆದರು. ಇದರ ಪ್ರಭಾವವಾಗಿ 17ನೇ ವಯಸ್ಸಿಗೆ ಮನೆ ತೊರೆದು ಋಷಿಕೇಶ, ಹರಿದ್ವಾರ,ಮಥುರಾ, ಬೃಂದಾವನ, ವಾರಣಾಸಿ, ಗಯಾ ಮುಂತಾದ ತೀರ್ಥಕ್ಷೇತ್ರಗಳಿಗೆ ತೀರ್ಥಯಾತ್ರೆಗೆ ಹೊರಟರು.
ಇದು ಅವರಿಗೆ ಭಾರತೀಯ ಸಮಾಜದ ನೈಜ ದರ್ಶನ ಮಾಡಿಸಿತು. 1915ರಲ್ಲಿ ಇಂಟರ್ಮೀಡಿಯೇಟ್ ಪ್ರಥಮ ಶ್ರೇಣಿಯಲ್ಲಿ ಪಾಸಾಗಿ ಬಿ.ಎ ಡಿಗ್ರಿ ವ್ಯಾಸಂಗಕ್ಕೆ ಸೇರಿದರು. 1919ರಲ್ಲಿ ಪದವಿಯನ್ನೂ ದ್ವಿತೀಯ ರ‍್ಯಾಂಕಿನೊಂದಿಗೆ ತೇರ್ಗಡೆ ಹೊಂದಿದರು. ಮುಂದೆ ತನಗೆ ಇಷ್ಟವಿಲ್ಲದಿದ್ದರೂ ತಂದೆಯ ಒತ್ತಾಸೆ ಮೇರೆಗೆ ಐ.ಸಿ.ಎಸ್ ಪರೀಕ್ಷೆ ತೆಗೆದುಕೊಳ್ಳಲು ಇಂಗ್ಲೇಂಡಿಗೆ ತೆರಳಿ, ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಲ್ಲಿ ನಾಲ್ಕನೇ ರ‍್ಯಾಂಕಿನೊಂದಿಗೆ ತೇರ್ಗಡೆಯಾಗಿ ಚಾಣಾಕ್ಷತೆ ಮೆರೆದರಾದರೂ, ಬ್ರಿಟೀಷರ ಹತ್ತಿರ ಕೆಲಸಮಾಡುವುದನ್ನು ಕಠೋರವಾಗಿ ವಿರೋಧಿಸಿದರು.
1921ರ ಜುಲೈ16ರಂದು ಸ್ವದೇಶಕ್ಕೆ ಮರಳಿದ ಸುಭಾಷರು ಹಿಂದೆಯೇ ನಿರ್ಧರಿಸಿಕೊಂಡಂತೆ ಸ್ವಾತಂತ್ರ್ಯ ಸಾಧನೆಗಾಗಿ ತಮ್ಮನ್ನು ಪೂರ್ಣ ಅರ್ಪಿಸಿಕೊಳ್ಳಲು ಮುಂದಾದರು. ಇದೇ ದಿನ ಮುಂಬಯಿಯ ಮಣಿಭವನದಲ್ಲಿ ಗಾಂಧಿಯವರನ್ನು ಭೇಟಿಯಾದರು. ನಂತರ ದೇಶಬಂಧು ಚಿತ್ತರಂಜನ್ ದಾಸರೊಡನೆ ಸಂಪರ್ಕ ಮಾಡಿ ನ್ಯಾಷನಲ್ ವಾಲಂಟೀರ್ ಕೋನರ್ ಪ್ರಮುಖರಾಗಿ ನಿಯುಕ್ತ ಗೊಂಡರಲ್ಲದೆ ಹೊಸದಾಗಿ ಆರಂಭವಾಗಿದ್ದ ನ್ಯಾಷನಲ್ ಕಾಲೇಜಿನ ಪ್ರಾಂಶುಪಾಲರಾಗಿಯೂ ನೇಮಕರಾದರು.
ನಂತರ ಆಲ್ ಬೆಂಗಾಲ್ ಯೂತ್ ಲೀಗ್ ರಚಿಸಿ ಅದರ ಅಧ್ಯಕ್ಷರಾದರು. 1921ರ ಕೊನೆಯಲ್ಲಿ ಇಂಗ್ಲೇಂಡಿನ ರಾಜಕುಮಾರ ಬರುವುದನ್ನು ವಿರೋಧಿಸಿ 6ತಿಂಗಳ ಸೆರೆವಾಸಕ್ಕೆ ಒಳಪಟ್ಟರು. ಗಾಂಧಿಯವರೊಂದಿಗಿನ ಭಿನ್ನಾಭಿಪ್ರಾಯಗಳಿಂದಾಗಿಚಿತ್ತರಂಜನ್ ದಾಸರು ರಚಿಸಿದ ‘ಸ್ವರಾಜ್ಯ ಪಕ್ಷ’ದ ಹಾಗೂ ‘ಫಾರ್ವರ್ಡ್’ ದಿನಪತ್ರಿಕೆಯ ಮಂಚೂಣಿಯಲ್ಲೂ ಸುಭಾಷರು ನಿಂತರು. ಈ ಸಮಯದಲ್ಲಿ ಹಲವು ಬಾರಿ ಸೆರೆವಾಸ ಅನುಭವಿಸಿದ್ದುಂಟು.
ಉತ್ತರೋತ್ತರವಾಗಿ ಸ್ವರಾಜ್ಯ ಪಕ್ಷ ಬೆಳೆಯಿತಾದರೂ ದಾಸ್‌ರ ಅಕಾಲಿಕ ಮರಣ ಹಾಗೂ ಸುಭಾಷರ ಸುದೀರ್ಘ ಸೆರೆವಾಸದಿಂದ ಸ್ವಲ್ಪ ಕಾರ್ಯಕಲಾಪ ಕ್ಷೀಣಿಸಿತು. 1927ರಲ್ಲಿ ಬಂಗಾಳ ಪ್ರದೇಶ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಚುನಾಯಿತರಾದರು. ಭಾರತಕ್ಕೆ ಡೋಮಿನಿಯನ್ ಸ್ಥಾನಮಾನ, ಇರ್ವಿನ್ ಒಪ್ಪಂದ, ಅತ್ಯಂತ ಸೌಮ್ಯ ಧೋರಣೆ, ವಿಫಲ ಚಕ್ರಗೋಷ್ಠಿ, ಮಂದಗತಿಯ ಮತ್ತು ಏಕಪಕ್ಷೀಯ ನಿರ್ಧಾರಗಳಿಂದಾಗಿ ಗಾಂಧಿ ಮತ್ತು ಸುಭಾಷರ ನಡುವೆ ಭಿನ್ನಾಭಿಪ್ರಾಯ ಮೂಡಿತ್ತು.
1933ರಲ್ಲಿ ಬಂಧದಲ್ಲಿದ್ದಾಗ ಆರೋಗ್ಯಸ್ಥಿತಿ ಬಿಗಡಾಯಿಸಿದ ಕಾರಣ ಯುರೋಪಿಗೆ ಹೋಗಬೇಕಾಯ್ತು ಸುಭಾಷರು. ಇಲ್ಲಿಅನೇಕ ಮುತ್ಸದ್ದಿಗಳನ್ನು ಮತ್ತು ಗಣ್ಯರನ್ನು ಭೇಟಿ ಮಾಡಿದರು. ಅನೇಕ ಭಾಷಣಗಳನ್ನು ಭಾರತದ ಪರ ಮಾಡಿ ಜನಮನ್ನಣೆ ಪಡೆದರು. ಆಸ್ಟ್ರಿಯಾ, ಜರ್ಮನಿ, ವಿಯೆನ್ನಾ, ಪೋಲೆಂಡ್, ಇಟಲಿ ಸೇರಿದಂತೆ ಅನೇಕ ದೇಶಗಳ ಪ್ರವಾಸ ಕೈಗೊಂಡು ಭಾರತದ ಪರ ನಿಲುವುತಾಳುವಂತೆ ಮಾರ್ಮಿಕವಾಗಿ ಮನವರಿಕೆ ಮಾಡಿಕೊಟ್ಟರು. ಈ ಸಮಯದಲ್ಲಿಯೇ ದಿ ಇಂಡಿಯನ್ ಸ್ಟ್ರಗಲ ಎಂಬ ಪುಸ್ತಕವನ್ನು ರಚಿಸಿದರು.
1937ರಲ್ಲಿ ಎಮಿಲಿ ಶೆಂಕಲ್ ಎಂಬುವವರನ್ನು ಮದುವೆ ಯಾದರು. 1938ರಲ್ಲಿ ನಡೆದ ಹರಿಪುರ ಕಾಂಗ್ರೆಸ್ ಅಧಿವೇಶನದಅಧ್ಯಕ್ಷರಾಗಿದ್ದರು. 1939ರ ಅಧ್ಯಕ್ಷ ಸ್ಥಾನಕ್ಕೆ ಮತ್ತೆ ಸ್ಪರ್ಧಿಸಲು ಇಚ್ಛಿಸಿದಾಗ ಗಾಂಧಿ ವಿರೋಧಿಸಿದರಾದರೂ ಸುಭಾಷರು ಸ್ಪರ್ಧಿಸಿ ಡಾ.ಪಟ್ಟಾಭಿ ಸೀತಾರಾಮಯ್ಯ ಅವರ ವಿರುದ್ಧ 205 ಮತಗಳ ಅಂತರದಿಂದ ಗೆದ್ದರಾದರೂ ಮುಂದೆ ನಡೆದ ಗಾಂಧಿಯವರ ನಡೆಯಿಂದ ಹಾಗೂ ಇತರ ನಾಯಕರ ವರ್ತನೆಯಿಂದ ಬೇಸತ್ತು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ 1939ರಲ್ಲಿ ‘ಫಾರ್ವರ್ಡ್ ಬ್ಲಾಕ್’ ಪಕ್ಷವನ್ನು ಸ್ಥಾಪಿಸಿದರು.
1941ರ ಜನವರಿ ಹೊತ್ತಿಗೆ ಅವರು ಭೂಗತರಾದರು. ಮಾರುವೇಷದಲ್ಲಿ ಕಾಬೂಲ್ ಮೂಲಕ ಏಪ್ರಿಲ್ ಹೊತ್ತಿಗೆ ಬರ್ಲಿನ್ ತಲುಪಿ ಜರ್ಮನಿಯ ವಶದಲ್ಲಿದ್ದ ಭಾರತೀಯ ಯುದ್ಧಖೈದಿಗಳನ್ನು ಕೇಂದ್ರವಾಗಿಸಿ ‘ಇಂಡಿಯನ್ ಲಿಜನ್’ ಕಟ್ಟಹೊರಟರು. ಇದೇ ವರ್ಷ ನವೆಂಬರ್2ರಂದು ‘ಫ್ರೀ ಇಂಡಿಯಾ ಸೆಂಟರ್’ ಅಧಿಕೃತವಾಗಿ ಉದ್ಘಾಟನೆ ಯಾಯಿತು.
ಆಜಾದ್ ಹಿಂದ್ ಚಳುವಳಿ ಆರಂಭವಾಯಿತು ಮತ್ತು ‘ಜೈ ಹಿಂದ್’ ಎಂಬ ಘೋಷಣೆ ಮೊದಲ ಬಾರಿಗೆ ಮೊಳಗಿತು. ಈ ಸಂದರ್ಭದಲ್ಲಿಯೇ ಸುಭಾಷರಿಗೆ ‘ನೇತಾಜಿ’ ಎಂಬ ಬಿರುದು ಗೌರವಪೂರ್ವಕವಾಗಿ ಸಂದಿದ್ದು. ಸಿಂಗಪೂರ್, ಜರ್ಮನಿ, ಇಟಲಿ, ಬೆಲ್ಜಿಯಂ, ಜಪಾನ್, ಬರ್ಮ, ಥಾಯ್ಲೆಂಡ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಸಂಚರಿಸಿ ಭಾರತೀಯ ತರುಣರನ್ನು ಸಂಘಟಿಸಿಸೇನಾ ತರಬೇತಿ ನೀಡಿ ಐ.ಎನ್.ಎಯನ್ನು ಕಟ್ಟಿದರು.
ರೇಡಿಯೋ ಸರಣಿ ಭಾಷಣಗಳ ಮೂಲಕ ಎಲ್ಲರನ್ನೂ ಜಾಗೃತಗೊಳಿಸಿದರು. ರಾಸ್ ಬಿಹಾರಿ ಬೋಸ್ ಅವರ ಸ್ಥಾನಕ್ಕೆ ಬೋಸರೇ ಸೂಕ್ತವೆಂದು ತೀರ್ಮಾನಿ ದಂಡನಾಯಕ ನನ್ನಾಗಿ ಮಾಡಲಾಯಿತು. ಸಿಂಗಾಪುರದಲ್ಲಿ 1943ರ ಅಕ್ಟೋಬರ್ 23ರಂದು ಭಾರತ ದಲ್ಲಿ ಹೋರಾಟಗಾರರಿಗೆ ಆತ್ಮವಿಶ್ವಾಸ ತುಂಬಲು ನೇತಾಜಿ ಕ್ಷೀಪ್ರವಾಗಿ ‘ಸ್ವತಂತ್ರ ಭಾರತದ ಹಂಗಾಮಿ ಸರಕಾರ’ ರಚಿಸಿದ ಪ್ರಮಾಣ ವಚನ ಸ್ವೀಕರಿಸಿದರು. ಇದಕ್ಕೆ ಎಡೆ ಮಾನ್ಯತೆ ದೊರೆಯಿತು.
ಆದಷ್ಟು ಶೀಘ್ರವಾಗಿ ಸೇನೆಯನ್ನು ಬಲಿಷ್ಠಗೊಳಿಸಿ ಭಾರತದ ಗಡಿಯನ್ನು ಪ್ರವೇಶಿಸಬೇಕು – ಎಂಬುದು ಬೋಸರ ಗುರಿಯಾಗಿತ್ತು. ಸಾಂಕೇತಿಕವಾಗಿ ಅಂಡಮಾನ್ – ನಿಕೋಬಾರ್ ದ್ವೀಪಗಳನ್ನು ಜಪಾನ್ ಬಿಟ್ಟುಕೊಟ್ಟಿತು. ಕೋಹಿಮಾ ಮತ್ತು ಇಂಫಾಲಗಳ ಮೇಲೆ ಐ.ಎನ್.ಎ ದಾಳಿಮಾಡಿತು. ಈ ಹೋರಾಟವನ್ನು ಅದ್ವಿತೀಯ ಎಂದು ಹಲವು ಮಿಲಿಟರಿ ಪರಿಣಿತರು ಪ್ರಶಂಸಿಸಿದರು. ಜಪಾನ್ 2ನೇ ವಿಶ್ವಯುದ್ಧದಲ್ಲಿ ಸಂಪೂರ್ಣ ಸೋತು ಶರಣಾಗಿದ್ದರಿಂದ ಸೈಗಾನ್‌ನಿಂದ ದಾಯಿರೆನ್‌ಗೆ ವಿಮಾನದ ಮೂಲಕಹೊರಟರು.
ದುರದೃಷ್ಟ ಎಂಬಂತೆ ನೇತಾಜಿ ಇದ್ದ ವಿಮಾನ ಟಾಪೈ ಎಂಬ ಪ್ರದೇಶದಿಂದ ಉಡಾವಣೆಯಾಗುತ್ತಿದ್ದಾಗ ವಿಮಾನದ ಎಂಜಿನ್ ಕಾರ್ಯ ಸ್ಥಗಿತಗೊಂಡು ಅಪಘಾತ ಸಂಭವಿಸಿತು. ಕೆಲವರು ಸ್ಥಳದ ಮೃತಪಟ್ಟರು. ನೇತಾಜಿ ತುಂಬಾ ಗಾಯಗೊಂಡಿದ್ದು ಹೀಗೆ ಹೇಳಿದರು- ನಾನು ಉಳಿಯುವುದು ಅಸಂಭವ. ನೀವು ಭಾರತಕ್ಕೆ ಹಿಂದಿರುಗಿದ ಮೇಲೆ ಜನರಿಗೆ ಹೇಳಿ – ನಾನು ಕೊನೆಗಳಿಗೆ ಯವರೆಗೆ ನನ್ನ ದೇಶದ ವಿಮೋಚನೆಗಾಗಿ ಸೆಣೆಸಿದೆನೆಂದು. ಅವರು ಸಂಘರ್ಷ ಮುಂದುವರಿಸಬೇಕು. ಶೀಘ್ರವಾಗಿ ಭಾರತಮುಕ್ತವಾಗುವುದೆಂದು ನನಗೆ ಭರವಸೆ ಇದೆ.
ಇನ್ನು ಮುಂದೆ ಯಾರೂ ಭಾರತವನ್ನು ದಾಸ್ಯದಲ್ಲಿರಿಸಲಾರರು. ಇದೇ ಅವರ ಅಂತಿಮ ಹೇಳಿಕೆ. 18 ಆಗಸ್ಟ್1945ರಂದು ಕೊನೆ ಉಸಿರೆಳೆದರು ಎಂದು ಹೇಳಲಾಗುತ್ತದಾದರೂ ಈ ಕುರಿತಾಗಿ ಅನೇಕ ಸಂಶಯ ಮತ್ತು ಭಿನ್ನಾಭಿಪ್ರಾಯಗಳಿವೆ. ಅದೇನೆ ಇರಲಿ ಅನೇಕ ಶತಮಾನಗಳ ನಮ್ಮ ಸ್ವಾತಂತ್ರ್ಯ ಘರ್ಷ ಇಂದು ಯಶಸ್ಸಿನ ಒಂದು ಘಟ್ಟ ಮುಟ್ಟಿದೆ. ನಮ್ಮ ರಾಷ್ಟ್ರದ ಸ್ವತಂತ್ರ, ಸಾರ್ವಭೌಮ ಜೀವನವನ್ನು ಕಟ್ಟುವ ಸುವರ್ಣಸಂಧಿ ನಮಗಿಂದು ಒದಗಿ ಬಂದಿದೆ. ಇದೊಂದು ಸುವರ್ಣಸಂಧಿ ಆಗಿರು ವಂತೆಯೇ ಒಂದು ಗಂಭೀರ ಸವಾಲೂ ಆಗಿದೆ. ನಮ್ಮ ರಾಷ್ಟ್ರಜೀವನವನ್ನು ಯಾವ ಆದರ್ಶದ ಬೆಳಕಿನಲ್ಲಿ ಯಾವ ಸಿದ್ಧಾಂತದ ಅಡಿಗಲ್ಲ ಮೇಲೆ ಕಟ್ಟಬೇಕು – ಎಂಬ ಸವಾಲಿಗೆ ನಾವಿಂದು ಉತ್ತರ ಕೊಡಬೇಕಾಗಿದೆ.
ಕೋಟಿ ಕೋಟಿ ಭಾರತೀಯರ ಹೃದಯಕ್ಕೆ ನಮ್ಮ ಸ್ವತಂತ್ರ ರಾಷ್ಟ್ರ ಜೀವನದ ಅಮೃತಸ್ಪರ್ಶ ಮಾಡಿಸಿ ನಮ್ಮ ಜನಸಾಮಾನ್ಯರಅಂತಃಕರಣವನ್ನು ತಟ್ಟಿ ಎಬ್ಬಿಸುವ ರಾಷ್ಟ್ರೀಯ ಆದರ್ಶ ಗಳಬ್ಬರು ನೇತಾಜಿ. ಇಂತವರ ಚಿಂತನೆಗಳಿಂದ ಇಂದು ರಾಷ್ಟ್ರ ಪುನರ್ ನಿರ್ಮಾಣ ಆಗಬೇಕಿದೆ.