ಬೈ ಎನ್ನದಿರೋಣ, ಬೈಡನ್‌ರನ್ನು ನೋಡಿ ಬೆಳೆಯೋಣ
ನಾಡಿಮಿಡಿತ
ವಸಂತ ನಾಡಗೇರ
ವಿಶ್ವದಲ್ಲಿ ನೂರಾರು ದೇಶಗಳಿವೆ. ಆದರೆ ಕೆಲವು ರಾಷ್ಟ್ರಗಳು ಮಾತ್ರ ಎಲ್ಲರ ಗಮನ ಸೆಳೆಯುತ್ತವೆ. ಅಲ್ಲಿ ನಡೆಯುವ ರಾಜಕೀಯ,ಸಾಮಾಜಿಕ, ಆರ್ಥಿಕ ವಿದ್ಯಮಾನಗಳು ವಿಶ್ವದ ಇತರ ದೇಶಗಳ ಮೇಲೆ ಪ್ರಭಾವ ಬೀರುವುದು ಇದಕ್ಕೆ ಕಾರಣ.
ಅಂಥವುಗಳಲ್ಲಿ ಅಮೆರಿಕ ಅಗ್ರಗಣ್ಯ ಎಂದರೂ ತಪ್ಪಲ್ಲ. ಅಮೆರಿಕಕ್ಕೆ ನೆಗಡಿಯಾದರೆ ಇತರ ದೇಶಗಳು ಸೀನುತ್ತವೆ ಎಂದು ಹೇಳುವಷ್ಟರ ಮಟ್ಟಿಗೆ ಅದು ಪ್ರಬಲ ಮತ್ತು ಪ್ರಭಾವಿ. ಅದಕ್ಕಾಗಿಯೇ ಅದನ್ನು ವಿ ಶ್ವದ ದೊಡ್ಡಣ್ಣ ಎಂದು ಕರೆಯುವುದು. ಈ ಪೀಠಿಕೆ ಏಕೆ ಎಂದರೆ ಈಚೆಗೆ ಅಲ್ಲಿ ಅಧ್ಯಕ್ಷೀಯ ಚುನಾವಣೆ ನಡೆಯಿತು. ಜಗತ್ತಿನ ಪ್ರಬಲ ರಾಷ್ಟ್ರವೊಂದರ ಅಧ್ಯಕ್ಷೀಯ ಚುನಾವಣೆ ಎಂದರೆ ಸಹಜವಾಗಿ ಎಲ್ಲರ ಗಮನ ಸೆಳೆಯುತ್ತದೆ. ಈ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ಅವರನ್ನು ಸೋಲಿಸಿ ನೂತನ ಅಧ್ಯಕ್ಷರಾಗಿ ಆಯ್ಕೆಯಾದವರು ಜೋ ಬೈಡನ್.
ಅವರೀಗ ಅಮೆರಿಕದ೪೬ನೇ ಅಧ್ಯಕ್ಷರು.  ಆದರೆ ನಾನು ಹೇಳಬಯಸಿರುವುದು ಈ ವಿಚಾರವೂ ಅಲ್ಲ. ಬದಲಾಗಿ ಜೀವನದಲ್ಲಿ ಹೇಗೆ ತಿರುವು ಗಳು ಬರುತ್ತವೆ; ಅದಕ್ಕೆ ಜನರು ಹೇಗೆ ಸ್ಪಂದಿಸುತ್ತಾರೆ. ಅದನ್ನು ಎದುರಿಸಲಾಗದೆ ಹೇಗೆ ಕೆಲವರು ಕುಸಿದು ಕೂರುತ್ತಾರೆ. ಹಾಗೆಯೇ ಇನ್ನು ಕೆಲವರು ಹೇಗೆ ಅದೆಲ್ಲವನ್ನೂ ಮೆಟ್ಟಿ ನಿಂತು ಹೇಗೆ ಎತ್ತರಕ್ಕೆ ಬೆಳೆದರು ಎಂಬುದ ಬಗ್ಗೆ. ಜೋ ಬೈಡನ್ ಇದಕ್ಕೊಂದು ಅತ್ಯುತ್ತಮ ಉದಾಹರಣೆ. ಬೈಡನ್ ಅವರಿಗೀಗ೭೮ವರ್ಷ ವಯಸ್ಸು. ಸಹಜವಾಗಿಯೇ ಅವರು ಅಮೆರಿಕದ ಅತಿ ಹಿರಿಯ ಅಧ್ಯಕ್ಷರಾಗಿದ್ದಾರೆ.
ಅರವತ್ತಕ್ಕೆ ಅರಳು ಮರಳು ಎನ್ನುತ್ತಾರೆ. ಇದರ ಅರ್ಥವೇನೆಂದರೆ ಆ ವಯಸ್ಸಿಗೆ ಬರುವ ಹೊತ್ತಿಗೆ ನಮ್ಮಲ್ಲಿ ಅನೇಕರು ಎಲ್ಲ ವಿಧವಾಗಿ ಜರ್ಜರಿತರಾಗಿತ್ತೇವೆ. ಬಗೆ ಬಗೆಯ ಬವಣೆಗಳನ್ನು ಅನುಭವಿಸಿ ಬಸವಳಿದಿರುತ್ತೇವೆ. ಬಾಳ ಮುಸ್ಸಂಜೆಯ ವಯಸ್ಸಿಗೆ ಬಂದರೂ ನಿವೃತ್ತಿಯ ಬಳಿಕ ನೆಮ್ಮದಿಯ ಜೀವನ ನಡೆಸುವ ವ್ಯವಸ್ಥೆ ಅನೇಕರಿಗೆ ಇರುವುದಿಲ್ಲ. ದೇಹವೂ ನಾನಾ ಕಾಯಿಲೆ ಕಸಾಲೆಗಳಿಂದ ದಣಿದಿರುತ್ತದೆ. ಮೊದಲಿನ ಶಕ್ತಿಯಾಗಲೀ, ಉತ್ಸಾಹವಾಗಲೀ, ಆಸಕ್ತಿ ಯಾಗಲೀ ಇರುವುದಿಲ್ಲ. ಹೆಚ್ಚು ಖರ್ಚು, ಹೆಚ್ಚು ಜವಾಬ್ದಾರಿ, ಹೆಚ್ಚು ಕೆಲಸದ ಒತ್ತಡ.
ಹೀಗೆ ಎಲ್ಲವೂ ಹೆಚ್ಚಾಗಿರುತ್ತದೆ. ಆದರೆ ಅದಕ್ಕೆ ತಕ್ಕುದಾದ ಆದಾಯ, ಆರೋಗ್ಯ ಇತ್ಯಾದಿ ಇರುವುದಿಲ್ಲ. ಇವೆಲ್ಲವೂ ಮನುಷ್ಯನನ್ನು ಹಣ್ಣಾಗಿಸಿರುತ್ತದೆ. ಮಾಗಿಸಿರುತ್ತದೆ, ಬಾಗಿಸಿರುತ್ತದೆ. ಇನ್ನುಳಿದಿರುವ ಜೀವನವನ್ನು ಹೇಗಾದರೂ ಕಳೆದುಬಿಟ್ಟರೆ ಸಾಕು ಎಂಬ ಮನಸ್ಥಿತಿಗೆ ತಂದಿಟ್ಟಿರುತ್ತದೆ. ಬದುಕಿನ ಮೊದಲ ಭಾಗದಲ್ಲಿ ಸೂಕ್ತ ಯೋಜನೆ, ವ್ಯವಸ್ಥೆಯ ಕೊರತೆಯೂ ಇದಕ್ಕೆ ಕಾರಣ ಇರಬಹುದು. ಅಥವಾ ಪರಿಸ್ಥಿತಿ, ಸನ್ನಿವೇಶದ ದೆಸೆಯಿಂದಲೂ ಹೀಗಾಗಿರಬಹುದು.
ಇದರ ನಡುವೆಯೂ ಅರವತ್ತಕ್ಕೆ ಅರಳು ಮರಳು ಎಂಬ ಮಾತನ್ನು ದ.ರಾ. ಬೇಂದ್ರೆಯವರು, ‘ಅರವತ್ತಕ್ಕೆ ಮರಳಿ ಅರಳು’ ಎಂದು ಹೇಳಿದ್ದಾರೆ ಎಂಬುದನ್ನೂ ನಾವೆಲ್ಲರು ಗಮನಿಸಬೇಕು. ಇದು ಸರಿಯಾಗಿಯೇ ಇದೆ. ಇದನ್ನೇ ಇಂಗ್ಲೀಷಿನಲ್ಲಿ ‘ಲೈಫ್ ಬಿಗಿನ್ಸ್ ಅಟ್ಸಿಕ್ಸ್ಟಿ’ ಅನ್ನೋದು. ಬೈಡನ್‌ಗೂ ಇದಕ್ಕೂ ಏನು ಸಂಬಂಧ ಎಂದು ಮತ್ತೆ ನೀವು ಕೇಳಬಹುದು.೮೦ರ ಈ ಇಳಿವಯಸ್ಸಿನಲ್ಲಿಅವರು ಅಧ್ಯಕ್ಷರಾಗಿರುವುದು ಈ ಮಾತನ್ನು ಪುಷ್ಟೀಕರಿಸುತ್ತದೆ ಎಂಬುದನ್ನು ಹೇಳುವುದಕ್ಕೆ ಇಷ್ಟೆಲ್ಲ ಪೀಠಿಕೆ.
ಅಲ್ಲದೆ ಮತ್ತೊಂದು ಗಮನಾರ್ಹ ವಿಷಯ ಏನೆಂದರೆ, ಅವರ ಜೀವನ ಹೂವಿನ ಹಾಸಿಗೆ ಆಗಿರಲಿಲ್ಲ. ವೈಯಕ್ತಿಕ ಹಾಗೂ ರಾಜಕೀಯ ಜೀವನದಲ್ಲಿ ಸಾಕಷ್ಟು ನೋವು, ದುಃಖ, ಏರಿಳಿತ, ಸಮಸ್ಯೆ, ಸಂಕಟ, ಹಿನ್ನಡೆ, ಅವಮಾನ – ಎಲ್ಲವನ್ನೂ ಅನುಭವಿಸಿದ್ದಾರೆ. ಆದ್ದರಿಂದಲೇ ಅವರ ಜೀವನ ನಮಗೆಲ್ಲ ಸೂರ್ತಿಯಾಗ ಬಲ್ಲದು. ಬದುಕಿನಲ್ಲಿ ಹೊಸ ಉತ್ಸಾಹ, ಜೀವಕಳೆ ತರಬಹುದು. ಅವರು ಹಿರಿಯ ಜೀವಗಳಿಗೆ ಒಂಥರಾ ಹೊಸ ಆಶಾಕಿರಣ ಇದ್ದಂತೆ.
ಜೋಸೆಫ್ ರಾಬಿನೆಟ್ ಬೈಡನ್ ಜನಿಸಿದ್ದು೧೯೪೨ರಲ್ಲಿ ಅಮೆರಿಕದ ಪೆನ್ಸಿಲ್ವೇನಿಯಾದಲ್ಲಿ. ತಂದೆ ರಾಬಿನೆಟ್, ತಾಯಿ ಕ್ಯಾಥರೀನ್. ಇಬ್ಬರು ಸೋದರರು, ಒಬ್ಬಳು ತಂಗಿ. ಇವರೇ ಹಿರಿಯರು. ಬಳಿಕ ಡೆಲ್‌ವೇರ್‌ನಲ್ಲಿ ವಾಸ. ತಂದೆ ಮೊದಲು ಶ್ರೀಮಂತರಾಗಿದ್ದರು. ಆದರೆ ವ್ಯಾಪಾರ, ವಹಿವಾಟಿನಲ್ಲಿ ನಷ್ಟವುಂಟಾಯಿತು. ಹೀಗಾಗಿ ಒಂಥರಾ ಮಧ್ಯಮವರ್ಗದ ಜೀವನ. ಸಣ್ಣ ಅಪಾರ್ಟ್‌ಮೆಂಟಿನಲ್ಲಿ ಬದುಕು. ಹೇಳಿಕೊಳ್ಳುವಂಥ ಬುದ್ಧಿವಂಥ ವಿದ್ಯಾರ್ಥಿಯೇನೂ ಆಗಿರಲಿಲ್ಲ.
ಆಟದಲ್ಲಿ ಸ್ವಲ್ಪ ಮುಂದಿದ್ದರಷ್ಟೆ. ಪಾಠ ಅಷ್ಟಕ್ಕಷ್ಟೆ.೧೯೬೫ರಲ್ಲಿ ಬಿಎ ಪದವಿ,೧೯೬೮ರಲ್ಲಿ ಕಾನೂನು ಪದವಿ ಪಡೆದರು. ಸ್ವಲ್ಪ ಕಾಲದವರೆಗೆ ಲಾ ಪ್ರಾಕ್ಟೀಸ್ ಮಾಡಿದರು. ಇದರ ಜತೆ ಮಾತನಾಡುವ ಕಲೆ ಗೊತ್ತಿತ್ತು. ನಾಯಕತ್ವ ಗುಣ ಇತ್ತು. ಹೀಗಾಗಿ ರಾಜಕಾರಣದತ್ತ ಆಕರ್ಷಿತರಾದರು. ಮೊದಮೊದಲು ರಿಪಬ್ಲಿಕನ್ ಪಕ್ಷದತ್ತ ಒಲವು ಹೊಂದಿದ್ದರಾದರೂ ಅನಂತರ ಡೆಮೊಕ್ರಾಟ್ ಪಕ್ಷದತ್ತ ವಾಲಿದರು.
೧೯೭೦ರಲ್ಲಿ ನ್ಯೂಕ್ಯಾಸಲ್ ಕೌಂಟಿ ಕೌನ್ಸಿಲರ್ ಆಗಿ ಆಯ್ಕೆಯಾಗುವುದರೊಂದಿಗೆ ರಾಜಕೀಯ ಜೀವನ ಆರಂಭವಾಯಿತು.೧೯೬೬ರಲ್ಲಿ ನೀಲಿಯಾ ಹಂಟರ್ ಎಂಬಾಕೆಯೊಡನೆ ಮದುವೆ. ಆದರೆ ಅದು ಅಷ್ಟು ಸುಲಭದ್ದಾಗಿರಲಿಲ್ಲ. ಏಕೆಂದರೆ ಬೈಡನ್ ಮತ್ತು ನೀಲಿಯಾ ಅವರ ಸಂಪ್ರದಾಯಗಳು ಬೇರೆ ಬೇರೆ. ಅಂತೂ ವಿರೋಧದ ನಡುವೆಯೂ ವಿವಾಹವಾಯಿತು.
ಅಲ್ಲಿಂದಲೇ ಇವರ ಹೋರಾಟದ ಬದುಕು ಆರಂಭ. ಇವರಿಗೆ ಇಬ್ಬರು ಗಂಡು ಮಕ್ಕಳು ಹಾಗೂ ಒಬ್ಬಳು ಮಗಳು. ಬದುಕು ಇದೇ ರೀತಿ ಸಾಗಿತ್ತು. ಈ ನಡುವೆ೧೯೭೩ರಲ್ಲಿ ಡೆಲ್‌ವೇರ್‌ನಿಂದ ಸೆನೆಟ್‌ಗೆ ಆಯ್ಕೆಯಾದರು. ಆಗ ಅವರಿಗೆ ಕೇವಲ೩೦ವರ್ಷ. ಹೀಗೆಜೀವನ ಆರಕ್ಕೇರತು ಎನ್ನುವಷ್ಟರಲ್ಲೇ ಬೈಡನ್ ಬದುಕಿನಲ್ಲಿ ಭಯಂಕರ ದುರಂತ ಸಂಭವಿಸಿತು. ಕ್ರಿಸ್ ಮಸ್ ಸಮಯದಲ್ಲಿ ಅವರ ಕುಟುಂಬದವರು ಶಾಪಿಂಗ್‌ಗೆ ಹೊರಟಿದ್ದರು. ಅವರ ಕಾರು ಹಾಗೂ ಮತ್ತೊಂದು ವಾಹನದ ನಡುವೆ ಅಪಘಾತಸಂಭವಿಸಿತು. ಇದರಲ್ಲಿ ಹೆಂಡತಿ ಹಾಗೂ ಕೇವಲ ಒಂದೂವರೆ ವರ್ಷ ವಯಸ್ಸಿನವಳಾಗಿದ್ದ ಮಗಳು ತೀರಿಹೋದರು. ಉಳಿದ ಇಬ್ಬರು ಮಕ್ಕಳಿಗೂ ತೀವ್ರ ಪೆಟ್ಟಾಯಿತು. ಆಗ ಅವರೊಡನೆ ಬೈಡನ್ ಇರಲಿಲ್ಲ.
ಹೀಗೆ ಬದುಕು ಜರ್ರನೆ ಮೂರಕ್ಕಿಳಿಯಿತು. ಸೆನೆಟರ್  ಆಗಿ ಆಯ್ಕೆಯಾದ ಸಂತಸವನ್ನು ಈ ದುರ್ಘಟನೆ ನುಂಗಿ ಹಾಕಿಬಿಟ್ಟಿತು. ಇದು ಅವರ ಬದುಕಿಗೆ ಮರ್ಮಾಘಾತವನ್ನೇ ನೀಡಿತು. ಇದರ ನಡುವೆಯೇ ಸೆನೆಟರ್ ಆಗಿ ಪ್ರಮಾಣವಚನ ಸ್ವೀಕರಿಸಿದರು. ಆಗಒಬ್ಬ ಮಗನ ಮುರಿದ ಕಾಲು ಇನ್ನೂ ಸರಿಹೋಗಿರಲಿಲ್ಲ. ಇಂಥದೊಂದು ದುಃಖಕರ ಸನ್ನಿವೇಶದಲ್ಲೇ ಬೈಡನ್ ಅವರ ಸಂಸತ್ ಸದಸ್ಯತ್ವದ ಜೀವನ ಆರಂಭವಾಯಿತು.
ಆಗ ಅವರ ಬದುಕು ಎಷ್ಟು ಕಠಿಣವಾಗಿತ್ತು ಎಂಬುದಕ್ಕೆ ಸಣ್ಣ ಉದಾಹರಣೆ: ಬೈಡನ್ ಕುಟುಂಬ ಇದ್ದುದು ಡೆಲ್ ವೇರ್‌ನಲ್ಲಿ. ಸಂಸತ್ ಇದ್ದುದು ವಾಷಿಂಗ್ಟನ್‌ನಲ್ಲಿ. ಅವರು ಪ್ರತಿದಿನ ಡೆಲ್‌ವೇರ್‌ನಿಂದ ವಾಷಿಂಗ್ಟನ್‌ಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ಸಂಜೆ ವಾಪಸ್.೯೦ನಿಮಿಷದ ಪ್ರಯಾಣ. ತಮ್ಮ ಇಬ್ಬರು ಮಕ್ಕಳನ್ನು ನೋಡಿಕೊಳ್ಳಬೇಕಾದ ಜವಾಬ್ದಾರಿ ಇತ್ತಲ್ಲ. ಅದಕ್ಕಾಗಿಈ ಕಷ್ಟವನ್ನು ತೆಗೆದುಕೊಂಡರು. ಇಂಥದೊಂದು ಸುದೀರ್ಘ ಪಯಣವನ್ನು ಅವರು೩೬ವರ್ಷಗಳ ಕಾಲ ಕೈಗೊಂಡರೆಂದರೆ ಬೈಡನ್ ಸಹನಾಶಕ್ತಿ ಎಷ್ಟಿರಬಹುದು ಎಂಬುದನ್ನು ಊಹಿಸಬಹುದು.
ಹಾಗೆಂದು ರಾಜಕೀಯ ಜೀವನ ಮತ್ತು ವೈಯಕ್ತಿಕ ಬದುಕು ಎರಡರಲ್ಲಿ ಒಂದನ್ನೂ ಕಡೆಗಣಿಸಲಿಲ್ಲ. ಎಷ್ಟೇ ಕಷ್ಟವಾದರೂ ಎರಡನ್ನೂ ನಿಭಾಯಿಸಿದರು. ಬೈಡನ್ ಬದುಕು ಒಂದು ರೀತಿ ಹೀಗೆ ದಿಕ್ಕಿಲ್ಲದೆ ಸಾಗುತ್ತಿದ್ದಾಗ ಅವರ ಬಾಳಿಗೆ ಹೊಸ ದಿಕ್ಕು ಸಿಗುವದಿನಗಳು ಬಂದವು. ಇವರ ಬಾಳಲ್ಲಿ ಜಿಲ್ ಟ್ರೇಸಿ ಜೇಕಬ್ಸ್ ಎಂಬ ಮಹಿಳೆಯ ಪ್ರವೇಶವಾಯಿತು. ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದರು.
೧೯೭೭ರಲ್ಲಿ ಜಿಲ್‌ರನನ್ನು ಬೈಡನ್ ವಿವಾಹವಾದರು. ಇವರಿಗೆ ಆಶ್ಲೇ ಬ್ಲೇಜರ್ ಎಂಬೊಬ್ಬ ಮಗಳಿದ್ದಾಳೆ. ಇದರ ಮಧ್ಯೆ ಬೈಡನ್೧೯೭೩ರಿಂದ೨೦೦೯ರವರೆಗೆ ಒಟ್ಟು ಆರು ಬಾರಿ ಸತತವಾಗಿ ಸೆನೇಟರ್ ಆಗಿ ಆಯ್ಕೆಯಾದರು. ಇದಕ್ಕೆ ಮುಖ್ಯ ಕಾರಣ ಜನರೊಡನೆ ಅವರ ಸಂಪರ್ಕ. ಸಂಸತ್ತಿನ ನಾನಾ ಸಮಿತಿಗಳ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಹತ್ತು ಹಲವು ಕಾನೂನು ರೂಪಿಸುವ ಕಾರ್ಯದಲ್ಲಿ ಕೈಜೋಡಿಸಿದರು. ಹೀಗೆ ಅವರೊಬ್ಬ ಯಶಸ್ವಿ ಮತ್ತು ಅನುಭವಿ ಸಂಸದೀಯಪಟುವಂತೂಆಗಿ ಅಷ್ಟೊತ್ತಿಗೆ ಹೊರಹೊಮ್ಮಿದ್ದರು. ಹಾಗೆಂದು ಬೈಡನ್ ಅಲ್ಪತೃಪ್ತರಲ್ಲ.
ರಾಜಕಾರಣದಲ್ಲಿ ಇನ್ನೂ ಎತ್ತರಕ್ಕೆ ಬೆಳೆಯಬೇಕೆಂಬ ತುಡಿತ ಮತ್ತು ಮಿಡಿತ ಇದ್ದೇ  ಇತ್ತು. ಹೀಗಾಗಿ೧೯೮೮ರಲ್ಲೇ ಅಧ್ಯಕ್ಷ ಸ್ಥಾನದ ಸ್ಪರ್ಧಾಕಾಂಕ್ಷಿಯಾದರು. ಡೆಮೊಕ್ರಾಟ್ ಪಕ್ಷದಿಂದ ಸ್ಪರ್ಧಿಸ ಬಯಸಿದರು. ಆಸೆ ಕೈಗೂಡಲಿಲ್ಲ. ಬಿಲ್ ಕ್ಲಿಂಟನ್ ಎರಡು ಬಾರಿ ಅಧ್ಯಕ್ಷರಾದರು.೨೦೦೮ರಲ್ಲಿ ಮರಳಿ ಯತ್ನವ ಮಾಡಿದರು. ಬರಾಕ್ ಒಬಾಮಾ ಕೂಡ ಆಗ ಪ್ರಬಲ ಸ್ಪರ್ಧಾಕಾಂಕ್ಷಿ ಯಾಗಿದ್ದರು. ಅದೃಷ್ಟ ಅವರಿಗೆ ಒಲಿಯಿತು. ಅಮೆರಿಕದಲ್ಲಿ ಡೆಮೊಕ್ರಾಟ್ಸ್ ಅಥವಾ ರಿಪಬ್ಲಿಕನ್ – ಹೀಗೆ ಯಾವ ಪಕ್ಷದಿಂದಲೇ ಆಗಲಿ, ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿ ಆಗಬೇಕೆಂದರೆ ಅವರು ಮೊದಲು ತಮ್ಮ ಪಕ್ಷದಲ್ಲೇ ಚುನಾವಣೆ ಎದುರಿಸಿ ಗೆಲ್ಲಬೇಕು.
ಬೈಡನ್ ಅವರು ಈ ಚುನಾವಣೆ ಸಂದರ್ಭದಲ್ಲಿ ಒಬಾಮಾರ ಪ್ರತಿಸ್ಪರ್ಧಿಯಾಗಿದ್ದರಲ್ಲವೆ? ಹೀಗಾಗಿ ಅವರನ್ನು ಸಾಕಷ್ಟುಟೀಕಿಸಿದ್ದರು. ಆದರೆ ಅಂತಿಮವಾಗಿ ಇಬ್ಬರ ನಡುವೆ ರಾಜಿ ಸಂಧಾನ ನಡೆದು ಒಬಾಮಾ ಅಧ್ಯಕ್ಷೀಯ ಅಭ್ಯರ್ಥಿಯಾದರು. ಬೈಡನ್‌ರನ್ನು ಉಪಾಧ್ಯಕ್ಷ ಸಹವರ್ತಿಯಾಗಿ ಆಯ್ಕೆಮಾಡಿಕೊಂಡರು.ಇವರಿಬ್ಬರೂ ಚುನಾಯಿತರಾಗಿ ಒಬಾಮಾ ಅಧ್ಯಕ್ಷರೂ, ಬೈಡನ್ ಉಪಾಧ್ಯಕ್ಷರೂ ಆದರು. ಅಲ್ಲಿಗೆ ಸೆನೆಟರ್ ಪಾತ್ರ ಮುಗಿದು ಬೈಡನ್ ಅವರ ಹೊಸ ಅವತಾರ ಶುರುವಾಯಿತು.
೨೦೧೩ರ ಚುನಾವಣೆಯಲ್ಲೂ ಇದರ ಪುನರಾವರ್ತನೆಯಾದ ಕಾರಣ ಬೈಡನ್ ಎರಡು ಬಾರಿ ಉಪಾಧ್ಯಕ್ಷ ಸ್ಥಾನವನ್ನು ಅಲಂಕರಿಸುವಂತಾಯಿತು.೨೦೧೩ರಲ್ಲಿ ಹೇಗೂ ಒಬಾಮಾ ಎರಡು ಅವಧಿ ಪೂರೈಸಿದರಲ್ಲ. ಹಿಗಾಗಿ ಅಧ್ಯಕ್ಷರಾಗಿ ಆಯ್ಕೆ ಯಾಗುವ ಆಸೆ ಮತ್ತೆ ಗರಿಗೆದರಿತು. ಆದರೆ ಅದೃಷ್ಟ ಮತ್ತೆ ಕೈಕೊಟ್ಟಿತು. ಹಿಲರಿ ಕ್ಲಿಂಟನ್‌ಗೆ ಸ್ಪರ್ಧಿಸುವ ಅವಕಾಶ ಸಿಕ್ಕಿತು. ಅವರೂ ಆಯ್ಕೆಯಾಗಲಿಲ್ಲ. ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾದರು.
ಅಲ್ಲಿಗೆ ಬೈಡನ್ ಒಂದು ರೀತಿ ನಿರುದ್ಯೋಗಿ ಯಾದರು. ಸೆನೇಟರ್ ಕೂಡ ಅಲ್ಲ. ಅಧಿಕಾರವೂ ಇಲ್ಲ. ಈ ಅವಧಿಯಲ್ಲಿ ಶಿಕ್ಷಕ ವೃತ್ತಿಗೆ ಮರಳಿದರು. ಜತೆಗೆ ಒಂದಷ್ಟು ಸಮಾಜಸೇವೆ ಇತ್ಯಾದಿ. ಇದರ ನಡುವೆ ಒಂದಷ್ಟು ಆರೋಗ್ಯ ಸಮಸ್ಯೆಯೂ ಇದ್ದವು.ಒಂದೆರಡು ಶಸ್ತ್ರಸಚಿಕಿತ್ಸೆಗೆ ಒಳಗಾಗಿದ್ದರು. ವಯಸ್ಸು ಬೇರೆ ಆಗಿತ್ತು. ಇನ್ನು ಅವರಿಗೆ ವಾನಪ್ರಸ್ಥಾಶ್ರಮವೇ ಗತಿ ಎಂಬಂಥ ಸ್ಥಿತಿಯೂ ನಿರ್ಮಾಣವಾಯಿತು. ಆದರೆ ಕಾಲ ಒಂದೇ ತೆರನಾಗಿರುವುದಿಲ್ಲ ನೋಡಿ.
೨೦೨೦ರ ಚುನಾವಣೆ ಬಂದೇ ಬಿಟ್ಟಿತ್ತು. ಟ್ರಂಪ್ ಸಹಜವಾಗಿ ಇನ್ನೊಂದು ಅವಧಿಗೆ ಸ್ಪರ್ಧಿಸಿದ್ದರು. ಡೆಮೊಕ್ರಾಟ್ ಅಭ್ಯರ್ಥಿ ಯಾರು ಎಂಬ ಜಿಜ್ಞಾಸೆ ಮತ್ತೆ ಶುರು ವಾಯಿತು. ಬೈಡನ್ ಎಂದಿನಂತೆ ಮತ್ತೆ ಕಣ್ಕಕ್ಕಿಳಿದರು. ಇನ್ನೂ ಹಲವರು ಪ್ರತಿಸ್ಪರ್ಧಿಗಳಿದ್ದರು. ಬರ್ನಿ ಸ್ಯಾಂಡರ್ಸ್ ಪ್ರಬಲ ಎದುರಾಳಿ. ಆದರೆ ಇವರೆಲ್ಲರನ್ನೂ ಹಿಂದಿಕ್ಕಿ ಡೆಮೊಕ್ರಾಟಿಕ್ ಪಕ್ಷದಿಂದ ಸ್ಪರ್ಧಿಸುವ ಅವಕಾಶ ಬೈಡನ್‌ಗೆ ಸಿಕ್ಕಿತು. ಟ್ರಂಪ್ ಜನಪ್ರಿಯತೆ ಕುಸಿದಿತ್ತು. ಜನ ಬದಲಾವಣೆ ಬಯಸಿದ್ದರು.
ಆದರೆ ಟ್ರಂಪ್ ಹೇಳಿಕೇಳಿ ಜಗಮೊಂಡ. ಶ್ರೀಮಂತ. ಅವರೆಲ್ಲಿ, ಸಾಧು ಸ್ವಭಾವದ ಹಾಗೂ ಅಷ್ಟೇನೂ ಸ್ಥಿತಿವಂತರಲ್ಲದ ಇವರೆಲ್ಲಿ? ಆದರೂ ತಮ್ಮ ಜನಪ್ರಿಯತೆಯನ್ನು, ಜನಸಂಪರ್ಕವನ್ನು, ಆಡಳಿತ ವಿರೋಧಿ ಅಲೆಯನ್ನು ನೆಚ್ಚಿಕೊಂಡ ಬೈಡನ್ ಬಿರುಗಾಳಿಯಂತೆ ಪ್ರಚಾರ ಮಾಡಿದರು. ಕೊನೆಗೂ ಅವರ ಬಯಕೆ ಈಡೇರಿತು. ಹೀಗೆ ಸುದೀರ್ಘ, ಛಲಬಿಡದ ಹೋರಾಟಕ್ಕೆಜಯದೊರೆತು ಬೈಡನ್, ಇದೀಗ ಅತ್ಯಂತ ಪ್ರಬಲ ರಾಷ್ಟ್ರದ ಅಧ್ಯಕ್ಷರು. ೪೭ನೇ ಉಪಾಧ್ಯಕ್ಷರಾಗಿದ್ದ ಅವರು ಇದೀಗ೪೬ನೇ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿದ್ದಾರೆ.
ಅಮೆರಿಕದ ಇತಿಹಾಸದಲ್ಲೇ ಅತಿ ಹಿರಿಯ ಅಧ್ಯಕ್ಷ ಎಂಬ ಹೆಗ್ಗಳಿಕೆ. ಇದು ಮಾತ್ರವಲ್ಲದೆ ಇನ್ನೂ ಹಲವು ಅಗ್ಗಳಿಕೆಗಳೂ ಇವೆ. ಅವರು ರೋಮನ್ ಕ್ಯಾಥೊಲಿಕ್. ನಿಕ್ಸನ್ ಬಳಿಕ ಇವರೇ ಎರಡನೆಯವರು.೩೦ನೇ ವಯಸ್ಸಿಗೆ ಮೊದಲ ಬಾರಿಗೆ ಸೆನೆಟರ್ಆಗಿದ್ದರಲ್ಲ. ಆಗ ಅತಿ ಕಿರಿಯ ಸೆನೆಟರ್ ಪಟ್ಟಿಯಲ್ಲಿ ಆರನೆಯವರಾಗಿದ್ದರು. ಜೋ ಬೈಡನ್ ಅವರ ಜೀವನದ ಈ ಕಥೆಯ ಸಾರಇಷ್ಟೇ. ಸಾಧನೆಗೆ ವಯಸ್ಸಿನ ಇತಿಮಿತಿ ಇಲ್ಲ. ಬಾಧಕಗಳು, ಏರಿಳಿತಗಳಿಂದ ಅಪ್ರತಿಭರಾಗಬೇಕಾಗಿಲ್ಲ.
ಕುಗ್ಗಿ, ಕುಸಿದು ಕೂರಬೇಕಿಲ್ಲ.೬೦ಆಯಿತು, ಇನ್ನು ರಾಮಕೃಷ್ಣ ಅಂತ ದೇವರಿಟ್ಟ ಹಾಗೆ ಇರೋಣ ಎನ್ನುವ ಮನೋಭಾವ ದವರಿಗೆ ಇಂಥ ಒಬ್ಬ ಬೈಡನ್ ಅಥವಾ ಕೆಎಫ್ಸಿಯ ಸ್ಯಾಂಡರ್ಸ್ ಅವರು ಮಾದರಿಯಲ್ಲವೆ? ಸ್ಯಾಂಡರ್ಸ್‌ರ ಕೆಎಫ್ಸಿ ಉತ್ತುಂಗಕ್ಕೇರಿದಾಗ ಅವರ ವಯಸ್ಸು೮೦ದಾಟಿತ್ತು. ಇಷ್ಟು ಮಾತ್ರವಲ್ಲದೆ ವಯಸ್ಸು, ಯಶಸ್ಸು ಕುರಿತಂತೆ ಒಂದು ಸಮೀಕ್ಷೆ ಯನ್ನು ನಡೆಸಲಾಗಿದ್ದು ಅದರ ಫಲಿತಾಂಶ ಕೂಡ ಎಂಥ ವಯಸ್ಸಾದವರಲ್ಲೂ ನವಚೈತನ್ಯವನ್ನು ತರಬಲ್ಲದು.
ಆ ಸಮೀಕ್ಷೆಯ ಸಂಕ್ಷಿಪ್ತ ವಿವರ ಹೀಗಿದೆ: ಮಾನವರ ಅತಿಫಲಪ್ರದ ವಯೋಮಾನವೆಂದರೆ೬೦-೭೦ವರ್ಷ. ಎರಡನೆಯದು೭೦-೮೦ವರ್ಷ. ಅನಂತರ೫೦-೬೦ವರ್ಷವಂತೆ. ನೊಬೆಲ್ ಪ್ರಶಸ್ತಿ ಪುರಸ್ಕೃತರ ಸರಾಸರಿ ವಯಸ್ಸು೬೨ವರ್ಷ. ವಿಶ್ವದಪ್ರಮುಖ ಕಂಪನಿಗಳ ಅಧ್ಯಕ್ಷರ ಸರಾಸರಿ ವಯಸ್ಸು೬೩ವರ್ಷ.೬೦ರಿಂದ೮೦ವರ್ಷ ನಮ್ಮ ಬದುಕಿನ ಅತ್ಯಂತ ಉತ್ಕೃಷ್ಟ ಮತ್ತು ಉತ್ತುಂಗದ ಕಾಲವಂತೆ. ಅಂದರೆ೬೦ಕ್ಕೆ ಅರಳು ಮರಳಲ್ಲ. ಅದು ಮರಳಿ ಅರಳುವ ಕಾಲ.
ನಾಡಿಶಾಸ್ತ್ರನೋಡದಿರೋಣ ಬರಿ ವಯಸ್ಸುನಾವು ಗೌರವಿಸೋಣ ಯಶಸ್ಸುಇದ್ದರೆ ಛಲಮನೋಬಲದ ಮನಸುಇದ್ದೇ ಇದೆ ಸಾಧನೆಗೆ ಒಳ್ಳೇ ಚಾನ್ಸು