ಕೋಪ ಹುಟ್ಟಿಸದ, ನಿರುಪದ್ರವಿ ಮತ್ತು ಸುರಕ್ಷಿತ ಬೈಗುಳಗಳು !
ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್‌
ಬೈಯುವುದು ಒಂದು ಕಲೆ. ಮನಸ್ಸಿಗೆ ಬೇಸರವಾಗದಂತೆ ಬೈಯುವುದು ಜಾಣ್ಮೆ. ಯಾರಿಗೆ ಆಗಲಿ ಬೈದಾಗಬೇಸರವಾಗುವುದು ಸಹಜ. ಅದರಲ್ಲೂ ಬೋ. ಮಗ.., ಸೂ.ಮಗ.. ಬಡ್ಡಿಮಗ ಅಂದ್ರೆ ಮುಗಿದೇ ಹೋಯಿತು.
ಅಂದು ಜಗಳ, ಹೊಡೆದಾಟ ಗ್ಯಾರಂಟಿ. ಬಹುತೇಕ ಜಗಳ, ಹೊಡೆದಾಟಕ್ಕೆ ಈ ಬೋ. ಮಗ.., ಸೂ. ಮಗ.. ಬಡ್ಡಿಮಗನೇ ಕಾರಣ. ಇನ್ನು ಕೆಲವರಿಗೆ ಈ ಪದಪುಂಜಗಳನ್ನು ಬಳಸದಿದ್ದರೆ ಸಮಾಧಾನವಿಲ್ಲ. ಕೆಲವರು ತಮಾಷೆಗೆ ಹಾಗೆ ಬೈಯುವುದುಂಟು. ಕೆಲವರು ತಮಾಷೆಗಾದ್ದರಿಂದ ಹಾಗೆ ಬೈಸಿಕೊಳ್ಳುವುದುಂಟು. ಕೆಲವರು ಹಾಗೆ ಕರೆದರೇ ಚೆಂದ.
ಸಿನಿಮಾ ನಟ ದಿವಂಗತ ಅಂಬರೀಷ್ ಬಹಳ ಮರ್ಯಾದೆಯಿಂದ ಮಾತಾಡಿಸಿದರೆ ತಪ್ಪು ತಿಳಿದುಕೊಳ್ಳುವವರಿದ್ದರು.‘ಯಾಕೋ ಅಣ್ಣ ಮೂಡಿನಲ್ಲಿ ಇ, ಬಹಳ ಮರ್ಯಾದೆಯಿಂದ ಮಾತಾಡಿಸುತ್ತಿzನೆ’ ಎಂದು ಬೇಸರ ವ್ಯಕ್ತಪಡಿಸುತ್ತಿದ್ದರು. ಅದೇ ಅಂಬರೀಷ್, ಬೈಗುಳದಿಂದ ಶುರು ಹಚ್ಚಿಕೊಂಡರೆ, ಮಹದಾನಂದ. ಅಣ್ಣ ಬಹಳಪ್ರೀತಿಯಿಂದ ಮಾತಾಡಿಸಿದರು ಎಂದು ಖುಷಿ. ಕೆಲವರಿಗೆ ಬೈಯಲು ಬರುವುದಿಲ್ಲ. ಬೈದರೆ ತಮ್ಮ ಮರ್ಯಾದೆ(ಹಾಳಾಗಿ) ಹೋಗುತ್ತದೆ ಎಂದು ಅವರು   ಸಂಭಾವಿತರಂತೆಬೈಯುತ್ತಾರೆ.
ಡಾ. ರಾಜಕುಮಾರ್ ಅವರಿಗೆ ತೀರಾ ಸಿಟ್ಟು ಬಂದಾಗ, ಹೆಚ್ಚೆಂದರೆ ‘ಕತ್ತೆ ಬಡವ’ ಎಂದು ಬೈಯುತ್ತಿದ್ದರು. ಅವರು ನಟಿಸಿದ ಸಿನಿಮಾಗಳಲ್ಲೂ ಆ ಬೈಗುಳವೇ ಇರುತ್ತಿತ್ತು. ಇನ್ನು ಪಾತ್ರಕ್ಕೆ ತಕ್ಕ ಹಾಗೆ ಅವರು ಬೇರೆ ಬೈಗುಳಬಳಸಿರಬಹುದು. ಆದರೆ ಅದರಲ್ಲೂ ಅವರು ಬಹಳ ಎಚ್ಚರಿಕೆ ವಹಿಸುತ್ತಿದ್ದರು. ಉತ್ತರ ಕರ್ನಾಟಕದವರು ಬೈಗುಳಕ್ಕೆ ಬಹಳ ಪ್ರಸಿದ್ಧ. ‘ಉತ್ತರಕರ್ನಾಟಕದ ಬೈಗುಳಗಳ ಕೋಶ’ ಎಂದೇ ನನ್ನಸ್ನೇಹಿತರಾದ ವೀರಯ್ಯ ಹಿರೇಮಠ ಅವರು ಪುಟ್ಟ ಪುಸ್ತಕವನ್ನೇ ಬರೆದಿದ್ದಾರೆ.
ಅವುಗಳಲ್ಲಿ ಅನೇಕ ಬೈಗುಳಗಳನ್ನುಪ್ರಯೋಗಿಸಿದರೆ ನೋವಾಗುವುದಿಲ್ಲ. ಕಾರಣ ಅವು ಅವಾಚ್ಯ ಪದಗಳಲ್ಲ. ಉದಾಹರಣೆಗೆ, ಪ್ಯಾಲಿ ಅಥವಾ ಹುಚ್ಪ್ಯಾಲಿ. ’ಅಂವ ಪ್ಯಾಲಿ ಇದ್ದಾಗ ಇದಾನ’ ಎಂದು ಬೈಸಿಕೊಂಡರೆ, ಬಹಳ ನೋವಾಗುವುದಿಲ್ಲ. ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡದಲ್ಲಿ ಹೆಚ್ಚು ಬಳಕೆಯಲ್ಲಿದ್ದ, ಪಿರ್ಕಿ, ಪಿರ್ಕಸ್, ಅಂಡೆಪಿರ್ಕಿ ಕೂಡ ನೋವುಂಟುಮಾಡುವ ಬೈಗುಳವಲ್ಲ. ಈಗ ಈ ಬೈಗುಳ ಹೆಚ್ಚು ಜನಪ್ರಿಯವಾಗಿದೆ. ಕಾರಣ ಇವು ಮೃದು ಬೈಗುಳಗಳು. ಇವು ಜಾತಿವಾಚಕ, ಸಂಬಂಧ ವಾಚಕ ಬೈಗುಳಗಳಲ್ಲ. ಇವು ಒಂಥರಾ ಸ್ವಭಾವ ವಾಚಕ ಬೈಗುಳಗಳು.
ಇದೇ ರೀತಿಯ ಇನ್ನೊಂದು ಸ್ವಭಾವವಾಚಕ ಬೈಗುಳಗಳಿವೆ. ಉದಾಹರಣೆಗೆ, ದಮಡ್ಡು, ಪೇದ್ರು, ಬೋದಾಳ, ತಿರಸಟ್ಟು,ಮಿಂದಾಳ, ಬೊಕಾಮ ..ಇತ್ಯಾದಿ. ಇವು ಅರ್ಥವೇ ಇಲ್ಲದ ಬೈಗುಳಗಳು. ಅರ್ಥವಿಲ್ಲದ ಬೈಗುಳಗಳು ನಿರುಪದ್ರವಿಗಳು.ಅವುಗಳಿಗೆ ಸಣ್ಣ ಕೋಪ ಹುಟ್ಟಿಸುವ ಗುಣಗಳಿಲ್ಲ, ಆದರೆ ಬೈಯುವವರಿಗೆ ಆ ಸಂದರ್ಭಕ್ಕೆ ಸಮಾಧಾನಕೊಡಬಹುದಷ್ಟೆ.
ಗಮನ ಸೆಳೆದ ಶೀರ್ಷಿಕೆಗಳು
ಮೊನ್ನೆ ಆಸ್ಟ್ರೇಲಿಯಾದ ಗಬ್ಬಾದಲ್ಲಿ ಭಾರತ ಕ್ರಿಕೆಟ್ ತಂಡ ಆಸ್ಟ್ರೇಲಿಯಾ ತಂಡವನ್ನು ಊಹೆಗೂ ಮೀರಿದ ಚಮತ್ಕಾರದಲ್ಲಿ ಮಣಿಸಿ, ಸರಣಿ ಗೆದ್ದುಕೊಂಡಾಗ, ಯಾವ ಯಾವ ಪತ್ರಿಕೆಗಳು ಹೇಗೆ ಹೆಡ್ ಲೈನ್ ಕೊಡಬಹುದು ಎಂಬ ಕುತೂಹಲವಿತ್ತು.
ನಾವು ಯಾವ ಹೆಡ್ ಲೈನ್ ನೀಡಿದ್ದೇವೋ (ಗಬ್ಬಾದಲ್ಲಿ ಗೆಲುವಿನ ಹಬ್ಬ) ಅದೇ ಹೆಡ್ ಲೈನನ್ನು‘ವಿಜಯ ಕರ್ನಾಟಕ’ ಪತ್ರಿಕೆಯೂನೀಡಿತ್ತು. ಒಂದೇ ಹೆಡ್ ಲೈನನ್ನು ಒಂದಕ್ಕಿಂತ ಹೆಚ್ಚು ಪತ್ರಿಕೆ ನೀಡುವುದು ತೀರಾ ಅಪರೂಪವಾದರೂ ಅಂಥ ಅನೇಕನಿದರ್ಶನಗಳಿವೆ. ಮುಂಬೈಯಿಂದ ಪ್ರಕಟವಾಗುವ ‘ಫ್ರೀ ಪ್ರೆಸ್ ಜರ್ನಲ್’ ಪತ್ರಿಕೆ ರಿಷಬ್ ಪಂತ್ ಬ್ಯಾಟಿಂಗ್ ಹೇಗೆ ನಿರ್ಣಾಯಕ ಪಾತ್ರವನ್ನು ವಹಿಸಿತು ಎಂಬುದನ್ನು ಹೈಲೈಟ್ ಮಾಡಿತ್ತು.
ಆ ಪತ್ರಿಕೆ ಆ ಸುದ್ದಿಗೆ ನೀಡಿದ ಹೆಡ್ ಲೈನ್ -’    . ಪಂತ್ ಮತ್ತು ಪ್ಯಾಂಟ್ ಇವೆರಡೂ ಒಂದೇ ಅಕ್ಷರಗಳನ್ನು ಹೊಂದಿರುವುದರಿಂದ, ಆ ಪದದ ಜತೆ ಆಟವಾಡಿತ್ತು. ದಿಲ್ಲಿ ಆವೃತ್ತಿಯ ‘ಇಂಡಿಯನ್ ಎಕ್ಸ್ ಪ್ರೆಸ್’ ಪತ್ರಿಕೆಯ ಸುದ್ದಿಮನೆ ಯಲ್ಲಿರುವವರಿಗೆ ಯಾವ ಹೆಡ್ ಲೈನ್ ನೀಡಬೇಕು ಎಂಬುದು ಗೊತ್ತಾಗದೇ ಕೊನೆಗೆ,      ಎಂದಷ್ಟೇ ಬರೆದಿತ್ತು. ಇದು ಒಂದರ್ಥದಲ್ಲಿ ಹೆಡ್ ಲೈನನ್ನು ಮೀರಿದ ಹೆಡ್ ಲೈನ್. ಹೆಡ್ ಲೈನ್ ನೀಡಲು ಪದಗಳಿಲ್ಲ ಎಂಬುದು ಅತ್ಯಂತ ಶಕ್ತಿಶಾಲಿ ಹೆಡ್ ಲೈನೇ.
ಅದೇ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜಾದೂಗಾರನ ‘ಅಬ್ರಕಡಬ್ರ’ ಮಂತ್ರವನ್ನು ಸ್ವಲ್ಪ ಪಲ್ಲಟಗೊಳಿಸಿ, ಗಬ್ಬಾದಲ್ಲಿನಡೆದಿದ್ದು ಜಾದೂ ಎಂಬುದನ್ನು ಬಣ್ಣಿಸುವ ಪ್ರಯತ್ನವಾಗಿ !  ಎಂಬ ಶೀರ್ಷಿಕೆ ನೀಡಿತ್ತು. ಈ ಎಶೀರ್ಷಿಕೆ ಗಳೂ ಒಂದಲ್ಲ ಒಂದು ರೀತಿಯಲ್ಲಿ ಗಮನ ಸೆಳೆಯುವಂಥದ್ದೇ.
ಅವರು ಇರುವುದೇ ಹಾಗೆ !ನೀವು ಜೋಸ್ ಪೆಪ್ ಮುಜಿಕಾ ಅವರ ಹೆಸರನ್ನು ಕೇಳಿರಬಹುದು, ಇವರು ಉರುಗ್ವೆ ದೇಶದ ಅಧ್ಯಕ್ಷರಾಗಿದ್ದರು. ಅವರು ಜಗತ್ತಿನ ಅತ್ಯಂತ ಬಡ ಅಧ್ಯಕ್ಷ ಎಂದೇ ಪ್ರಸಿದ್ಧ. ಮೂಲತಃ ಗೆರಿ ಫೈಟರ್ ಆಗಿದ್ದ ಮುಜಿಕಾ ಹದಿನಾಲ್ಕು ವರ್ಷ ಜೈಲಿನಲ್ಲಿದ್ದ. ಅತ್ಯಂತ ಘನಘೋರ ಶಿಕ್ಷೆಯನ್ನು ಅನುಭವಿಸಿದ.೨೦೦೯ರಲ್ಲಿ ಉರುಗ್ವೆ ಅಧ್ಯಕ್ಷನಾಗಿ ಆಯ್ಕೆಯಾದಾಗ, ಅರಮನೆಯಂಥ ವಿಲಾಸಿ ಅಧಿಕೃತ ನಿವಾಸದಲ್ಲಿ ಉಳಿಯುವ ಬದಲು ತನ್ನ ಪತ್ನಿಯೊಂದಿಗೆ ಸಾಮಾನ್ಯ ಗುಡಿಸಲಿನಲ್ಲಿ ವಾಸಿಸಲು ಆರಂಭಿಸಿದ.
ಅರಮನೆಯಲ್ಲಿ ಅಧ್ಯಕ್ಷರ ಸೇವೆಗೆಂದು ಅರವತ್ತೈದು ಸೇವಕರಿದ್ದರು. ಅವರೆಲ್ಲರನ್ನು ಬೇರೆ ಬೇರೆ ಕೆಲಸಗಳಿಗೆ ವರ್ಗ ಮಾಡಿದ.ಅಗತ್ಯವಿzಗ ಮಾತ್ರ ಕರೆಯುವುದಾಗಿ ಹೇಳಿದ. ಅಧ್ಯಕ್ಷನಾಗಿದ್ದ ಅವಽಯಲ್ಲಿ ಪಡೆದ ಸರಕಾರಿ ಸಂಬಳದ ಶೇ.೯೦ರಷ್ಟು ಹಣವನ್ನು ದಾನ ಮಾಡಿದ. ಆತನ ಬಳಿಯಿದ್ದ ಏಕಮಾತ್ರ ಲಕ್ಸುರಿ ಅಂದರೆ ವೊಲ್ಕ್ಸ್ ವಾಗೆನ್ ಬೀಟಲ್ ಕಾರು. ಅದನ್ನು ಅವನು೧೯೮೭ರಲ್ಲಿ ಖರೀದಿಸಿದ್ದ.
ಸರಕಾರಿ ಖರ್ಚಿನಲ್ಲಿ ದುಂಡು ವೆಚ್ಚ ಮಾಡುವ ಜಾಗತಿಕ ನಾಯಕರನ್ನು ಬಹಿರಂಗ ವಾಗಿಯೇ ಟೀಕಿಸಿದ ಮುಜಿಕಾ, ಜನರ ಹಣದಲ್ಲಿ ಮೋಜು ಉಡಾಯಿಸಲು ಅಧ್ಯಕ್ಷರಿಗೆ ಅಥವಾ ಪ್ರಧಾನಿಗಳಿಗೆ ನೈತಿಕ ಹಕ್ಕಿಲ್ಲ ಎಂದು ಬಲವಾಗಿ ಪ್ರತಿಪಾದಿಸಿದ.ಕೆಲವು ವರ್ಷಗಳ ಹಿಂದೆ ನಾನು ಆಫ್ರಿಕಾದ ರುವಾಂಡಾ ದೇಶಕ್ಕೆ ಹೋದಾಗ, ಅಲ್ಲಿನ ರಾಜತಾಂತ್ರಿಕ ಅಧಿಕಾರಿಯೊಬ್ಬರುಹೇಳಿದ ಪ್ರಸಂಗವಿದು. ಆಫ್ರಿಕಾದಲ್ಲಿ ಮಲಾವಿ ಎಂಬ ಪುಟ್ಟ ದೇಶವಿದೆ.
೨೦೧೨ರಿಂದ ಎರಡು ವರ್ಷಗಳ ಕಾಲ ಆದೇಶವನ್ನು ಜಾಯ್ಸ ಬಂಡಾ ಎಂಬಾಕೆ ಅಧ್ಯಕ್ಷೆಯಾಗಿದ್ದರು. ಆಕೆ ಅಧ್ಯಕ್ಷೆ ಯಾಗುತ್ತಲೇ, ಅಧ್ಯಕ್ಷರು ಮಾತ್ರ ಬಳಸುತ್ತಿದ್ದ ಜೆಟ್ ವಿಮಾನ ಮಾರಿಬಿಟ್ಟಳು. ವಿಮಾನದಲ್ಲಿ ಪ್ರಯಾಣ ಮಾಡುವ ಪ್ರಸಂಗ ಬಂದಾಗ ಪ್ಯಾಸೆಂಜರ್ ವಿಮಾನದಲ್ಲಿ ಹೋಗುತ್ತಿದ್ದಳು. ವಿದೇಶ ಪ್ರವಾಸದಲ್ಲೂ ಸಾರ್ವಜನಿಕ ವಿಮಾನವನ್ನೇ ಬಳಸುತ್ತಿದ್ದಳು.ಅಧ್ಯಕ್ಷರು ವಿವಿಧ ಸಂದರ್ಭ, ಸನ್ನಿವೇಶಗಳಲ್ಲಿ ಬಳಸುತ್ತಿದ್ದ ಅರವತ್ತು ಬೆಂಜ್ ಕಾರುಗಳನ್ನು ಸಹ ಮಾರಾಟಮಾಡಿ ಬಿಟ್ಟಳು.
ವಿಮಾನ ಮತ್ತು ಕಾರುಗಳನ್ನು ಮಾರಿದ್ದರಿಂದ ಬಂದ ಹಣವನ್ನು ಬಡವರ ಭೋಜನ ಯೋಜನೆಗೆ ನಿಯೋಜಿಸುವಂತೆ  ಹೇಳಿದಳು. ಇದರಿಂದ ಹತ್ತು ಲಕ್ಷ ಜನರಿಗೆ ಮಧ್ಯಾಹ್ನದ ಬಿಸಿಯೂಟ ಸಿಗುವಂತಾಯಿತು. ಅಷ್ಟು ಜನರ ಉಪವಾಸಕ್ಕೆ ಕಾರಣವಾದ ಐಷಾರಾಮಿ ಜೀವನ ತನಗೆ ಬೇಡ ಎಂದು ಆಕೆ ಎಲ್ಲವನ್ನೂ ತಿರಸ್ಕರಿಸಿದಳು. ನಾನು೨೦೧೫ರ ಡಿಸೆಂಬರ್‌ನಲ್ಲಿ ನೇಪಾಳದ ಖಟ್ಮಂಡುವಿನಲ್ಲಿ ಆ ದೇಶದ ಮಾಜಿ ಪ್ರಧಾನಿ ಸುಶೀಲ್ ಕೊಯಿರಾಲ ಅವರನ್ನು ಭೇಟಿ ಮಾಡಿದ್ದೆ.
ಅವರು ಪ್ರಧಾನಿ ಪಟ್ಟದಿಂದ ಕೆಳಗಿಳಿದು ಕೇವಲ ಒಂದು ತಿಂಗಳಾಗಿತ್ತು. ಅವರು ತಮ್ಮದೆನ್ನುವ ಒಂದು ಮನೆಯೂ ಇರಲಿಲ್ಲ. ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸುವುದಕ್ಕಿಂತ ಮುನ್ನ ಅವರು ಬಾಡಿಗೆಮನೆಯಲ್ಲಿ ವಾಸಿಸುತ್ತಿದ್ದರು. ಕೆಲ ಕಾಲ ಬಾಡಿಗೆ ಹಣ ಹೊಂದಿಸಲಾಗದೆ ಅವರು ತಮ್ಮ ಸಹೋದರನ ಮನೆಯಲ್ಲಿವಾಸಿಸುತ್ತಿದ್ದರು. ನಾನು ಖಟ್ಮಂಡುವಿನಲ್ಲಿ ಇದ್ದ ಸಂದರ್ಭದ ಒಂದು ಸುದ್ದಿ ಪ್ರಕಟವಾಗಿತ್ತು. ಅದೇನೆಂದರೆ, ಸುಶೀಲ್ ಕೊಯಿರಾಲ ಅವರ ಆಸ್ತಿಗಳೆಂದರೆ ಕೇವಲ ಮೂರು ಮೊಬೈಲ್ ಫೋನುಗಳು ಮಾತ್ರ ಎಂದು.
‘ಸರಕಾರದ ಹಣ ಬಳಸುವುದೆಂದರೆ ಹಂಗಿನ, ನಂಜಿನ ಹಣ ಬಳಸಿದಂತೆ. ನಾನು ಜನರ ಹಣ ಬಳಸುವುದಿಲ್ಲ. ನನಗಾಗಿ ಸರಕಾರ ಏನನ್ನೂ ಖರ್ಚು ಮಾಡಬೇಕಿಲ್ಲ. ನನಗೆ ಜನ ಅಧಿಕಾರ ಕೊಟ್ಟಿರುವುದು ದರ್ಪ ಮೆರೆಯಲು ಅಲ್ಲ’ ಎಂದು ಅವರು ಹೇಳುತ್ತಿದ್ದರು. ರಾಜಮನೆತನದವರ ಹೊರತಾಗಿ ಬೇರೆ ಯಾರೂ ಅಧಿಕಾರಕ್ಕೇರಲು ಅಸಾಧ್ಯ, ಪ್ರಧಾನಿಮಂತ್ರಿ ಹುದ್ದೆಹಣವಂತರಿಗೆ ಮಾತ್ರ ಮೀಸಲು ಎಂಬ ಸ್ಥಾಪಿತ ನಿಯಮವನ್ನು ಕಿತ್ತೆಸೆದು ಪ್ರಧಾನಿಯಾಗಿದ್ದ ಕೊಯಿರಾಲ ಕೊನೆ ತನಕ ಹಾಗೇಇದ್ದರು.
ನ್ಯೂಝಿಲ್ಯಾಂಡ್ ಪ್ರಧಾನಿ ಜಸಿಂದ ಆರ್ಡರ್ನ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಕಳೆದ ಮೂವತ್ತು ವರ್ಷಗಳಲ್ಲಿ ಅಧಿಕಾರ ದಲ್ಲಿರುವಾಗಲೇ ಹಡೆದವಳೆಂಬ ಪ್ರಖ್ಯಾತಿಗೆ ಒಳಗಾದ ಆರ್ಡರ್ನ, ಹೆರಿಗೆ ಬೇನೆ ಶುರುವಾಗುತ್ತಿದ್ದಂತೆ ಆಯ್ದುಕೊಂಡಿದ್ದು ಸರಕಾರಿ ಆಸ್ಪತ್ರೆಯನ್ನು. ಅವಳು ಯಾವ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿಕೊಳ್ಳಬಹುದು ಎಂಬ ಬಗ್ಗೆ ತೀವ್ರ ಕುತೂಹಲವಿತ್ತು. ಪ್ರಧಾನಿಯಾಗಿ ಆಕೆ ಖಾಸಗಿ ಆಸ್ಪತ್ರೆಯನ್ನು ಆಯ್ದುಕೊಳ್ಳಬಹುದಿತ್ತು. ಆದರೆ ಆಯ್ದುಕೊಂಡಿದ್ದು ಸರಕಾರಿ ಆಸ್ಪತ್ರೆಯನ್ನು.
ನಮ್ಮ ದೇಶದಲ್ಲಿ ಪ್ರಧಾನಿ ಬಿಡಿ, ಒಬ್ಬ ಶಾಸಕ ಅಥವಾ ಕಾರ್ಪೊರೇಟರ್ ಕೂಡ ತನ್ನ ಹೆಂಡತಿಯನ್ನು ಸರಕಾರಿ ಆಸ್ಪತ್ರೆಗೆಸೇರಿಸುತ್ತಾನಾ? ಸಾಧ್ಯವೇ ಇಲ್ಲ.
ಕಲಾಂ ಮತ್ತು ಶಿಷ್ಟಾಚಾರ
ಡಾ.ಕಲಾಂ ಶಿಷ್ಟಾಚಾರಗಳ ಬಗ್ಗೆ ಬಹಳ ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಅವರಿಗೆ ಅದು ಒಗ್ಗಿ ಬರುತ್ತಿರಲಿಲ್ಲ. ಆದರೆ ಪ್ರೋಟೋ ಕಾಲ್ ಅಧಿಕಾರಿಗಳು ಅವರ ಕೆಲಸ ಮಾಡುತ್ತಿದ್ದರು. ಒಮ್ಮೆ ದಿಲ್ಲಿ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಪ್ರತಿವರ್ಷ ಅದರ ಸಂಸ್ಥಾಪಕ ರಾಮನಾಥ ಗೋಯೆಂಕಾ ಹೆಸರಿನಲ್ಲಿ ಕೊಡ ಮಾಡುವ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಡಾ.ಕಲಾಂ ಅವರನ್ನು ಆಮಂತ್ರಿಸಿ ದ್ದರು.
ರಾಜದೀಪ ಸರದೇಸಾಯಿ ಮತ್ತು ಬರ್ಖಾ ದತ್ತ ಅವರಿಗೆ ಆ ವರ್ಷದ ಪ್ರಶಸ್ತಿಗೆ ಆಯ್ಕೆಯಾಗಿದ್ದರು. ಡಾ.ಕಲಾಂ ಅವರು ಸಿದ್ಧಭಾಷಣ ಓದುವ ಬದಲು, ಆಶುಭಾಷಣ ಆರಂಭಿಸಿದರು. ಹ್ಯಾಂಡ್ ಮೈಕ್ ಹಿಡಿದು ಮಾತಾಡುತ್ತಾ ಮಾತಾಡುತ್ತ ವೇದಿಕೆಯಿಂದ ಕೆಳಗಿಳಿದು ಸಭಿಕರ ಮುಂದೆ ಹೋದರು. ನಂತರ ವೇದಿಕೆಯ ಕೆಳಗೆ ನಿಂತು ವೇದಿಕೆಯ ಮೇಲಿದ್ದವರಿಗೆ ಪ್ರಶ್ನೆಗಳನ್ನು ಕೇಳಿದರು. ಒಂದು ಸಂದರ್ಭದಲ್ಲಿ ವೇದಿಕೆಯ ಅಂಚಿನಲ್ಲಿ ಒಂದು ಅಂಡು ಊರಿ ಕುಳಿತರು.
ಶಿಷ್ಟಾಚಾರ ಅಧಿಕಾರಿಗಳು ತಬ್ಬಿಬ್ಬಾಗಿ ಹೋದರು. ಸಿದ್ಧ ಭಾಷಣ ಓದಬೇಕಾದ ರಾಷ್ಟ್ರಪತಿಗಳು ಆಶುಭಾಷಣ ಆರಂಭಿಸಿದರೇ, ಪ್ರೋಟೋಕಾಲ್ ಅಧಿಕಾರಿಗಳು ಕಕ್ಕಾಬಿಕ್ಕಿಯಾಗುತ್ತಾರೆ. ಅದರಲ್ಲೂ ಅವರು ವೇದಿಕೆ ಬಿಟ್ಟು ಕೆಳಗಿಳಿದರೆ ಮುಗಿದೇ ಹೋಯಿತು. ಆದರೆ ಡಾ.ಕಲಾಂ ಅವರು ಸಭಿಕರ ಮಧ್ಯೆ ನಡೆದಿದ್ದರು. ವೇದಿಕೆಯಲ್ಲಿ ಇತರ ಗಣ್ಯರೆಲ್ಲ ಆಸನದ ಮೇಲೆ ಕುಳಿತಿದ್ದರೆ, ರಾಷ್ಟ್ರಪತಿಗಳು ಮಾತ್ರ ನೆಲದ ಮೇಲೆ ಕುಳಿತಿದ್ದರು. ತಕ್ಷಣ ಅವರ ಬಳಿ ಪ್ರೋಟೋಕಾಲ್ ಅಧಿಕಾರಿಗಳು ಒಂದು ಆಸನವನ್ನು ತಂದಿಟ್ಟರು.
ಆದರೆ ರಾಷ್ಟ್ರಪತಿ ಯವರು ಅದರ ಮೇಲೆ ಕುಳಿತುಕೊಳ್ಳಲಿಲ್ಲ. ಭಾರತದ ಯಾವ ರಾಷ್ಟ್ರಪತಿಯೂ ಅಧಿಕಾರದಲ್ಲಿದ್ದಾಗಲಿ,ನಂತರವಾಗಲಿ ಆ ರೀತಿ ನೆಲದ ಮೇಲೆ ಕುಳಿತಿರಲಿಲ್ಲ. ಆದರೆ ಜನಸಾಮಾನ್ಯರ ರಾಷ್ಟ್ರಪತಿ ಎಂದೇ ಜನಪ್ರಿಯರಾಗಿದ್ದ ಡಾ.ಕಲಾಂ ವಿಷಯದಲ್ಲಿ ಇದು ಸಹಜವಾಗಿತ್ತು. ಮರುದಿನ ದೇಶಾದ್ಯಂತ ಎಲ್ಲಾ ಪತ್ರಿಕೆಗಳಲ್ಲಿ ರಾಷ್ಟ್ರಪತಿಯವರು ವೇದಿಕೆಯಅಂಚಿನಲ್ಲಿ ಒಂದು ಅಂಡು ಊರಿ ಕುಳಿತ ಫೋಟೋ ಪ್ರಕಟವಾಗಿತ್ತು.
ಬ್ಲೂ ಬುಕ್ ಪ್ರಕಾರ, ಇದು ಶಿಷ್ಟಾಚಾರದ ಬಹುದೊಡ್ಡ ಲೋಪ. ದೇಶದ ರಾಷ್ಟ್ರಪತಿ ನೆಲದ ಮೇಲೆ ಕುಳಿತುಕೊಳ್ಳುವುದುಅಂದರೆ ತಮಾಷೆಯಾ?! ಅಂಥ ನಡೆಯಿಂದ ಪ್ರೋಟೋಕಾಲ್ ಅಧಿಕಾರಿ ಮನೆಗೇ ಹೋಗಬೇಕು. ಆದರೆ ಡಾ.ಕಲಾಂಅಧಿಕಾರ ದಲ್ಲಿ ಇದ್ದಷ್ಟು ವರ್ಷ ಅಂತ ಶಿಷ್ಟಾಚಾರ ಉಲ್ಲಂಘನೆಯನ್ನು ಅನೇಕ ಸಲ ಮಾಡಿದರು. ಆದರೂ ಮಾನ್ಯುಯಲ್ಪ್ರಕಾರ ಅದು ಕ್ರಿಯಾಲೋಪ ಎಂದೇ ದಾಖಲಾಗಿವೆ ಮತ್ತು ಇದು ಯಾವ ಕಾರಣಕ್ಕೂ ಪುನರಾವರ್ತನೆ ಆಗಬಾರದು,ಸಂಪ್ರದಾಯ ಆಗಬಾರದು ಮತ್ತು ಅನುಕರಣೆಯೂ ಆಗಬಾರದು ಎಂದು ಸ್ಪಷ್ಟವಾಗಿ ಬರೆಯಲಾಗಿದೆ.
ರಾಷ್ಟ್ರಪತಿ ಅವರ ಕಾರ್ಯಕ್ರಮದಲ್ಲಿ ಒಂದು ಸಣ್ಣ ಶಿಷ್ಟಾಚಾರ ಲೋಪಕ್ಕೂ ಆಸ್ಪದವಿರುವುದಿಲ್ಲ. ಸಣ್ಣ – ಪುಟ್ಟದೋಷ ಗಳನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಅದರಲ್ಲೂ ಸರಣಿ ಲೋಪಗಳಾದರೆ ಮುಗಿದೇ ಹೋಯಿತು. ಡಾ.ಕಲಾಂ ರಾಷ್ಟ್ರಪತಿಯಾಗಿದ್ಧಾಗ, ಇಂಥ ಲೋಪಗಳು ಮೇಲಿಂದ ಮೇಲೆ ನಡೆಯುತ್ತಿದ್ದವು. ರಾಷ್ಟ್ರಪತಿಗಳು ಈ ರೀತಿ ಶಿಷ್ಟಾಚಾರ ಉಲ್ಲಂಘಿಸಿ ದಾಗ ಏನು ಮಾಡಬೇಕು ಎಂಬ ಬಗ್ಗೆ ಪ್ರೋಟೋಕಾಲ್ ಅಽಕಾರಿಗಳು ಸನ್ನದ್ಧರಾಗಿರುವುದನ್ನು ರೂಢಿಸಿಕೊಂಡರು.
ಯಾವುದಾದರೂ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಅವರು ಕುಳಿತುಕೊಳ್ಳುವ ಆಸನದಲ್ಲಿ ಬೇರೆ ಗಣ್ಯರು (ರಾಜ್ಯಪಾಲರು, ಮುಖ್ಯಮಂತ್ರಿಗಳು) ಆಕಸ್ಮಿಕವಾಗಿ ಕುಳಿತುಕೊಂಡರೆ, ಪ್ರೋಟೋಕಾಲ ಅಧಿಕಾರಿಗಳು ಅವರನ್ನು ಮುಲಾಜಿಲ್ಲದೇ ಎಬ್ಬಿಸುತ್ತಾರೆ. ಒಮ್ಮೆ ಭೋಪಾಲ್‌ನಲ್ಲಿ ನಡೆದ ಶಾಲಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಾ.ಕಲಾಂ, ವೇದಿಕೆಯೇರಿ ಮುಖ್ಯಮಂತ್ರಿಗಳುಕುಳಿತುಕೊಳ್ಳಬೇಕಾದ ಆಸನದಲ್ಲಿ ಕುಳಿತುಬಿಟ್ಟರು.
ಪ್ರೋಟೋಕಾಲ್ ಅಧಿಕಾರಿ ಮೆಲ್ಲಗೆ ರಾಷ್ಟ್ರಪತಿಯವರ ಕಿವಿಯಲ್ಲಿ ಈ ಪ್ರಮಾದವನ್ನು ಗಮನಕ್ಕೆ ತಂದರು. ಆದರೆ ಡಾ.ಕಲಾಂ ಏಳಲಿಲ್ಲ. ಗಣ್ಯರೆಲ್ಲ ಆಸೀನರಾದ ಬಳಿಕ ಅವರನ್ನು ಎಬ್ಬಿಸುವುದು ಸರಿ ಅಲ್ಲ ಎಂದರು. ಆದರೆ ವೇದಿಕೆಯ ಮಧ್ಯದಲ್ಲಿರ ಬೇಕಾದ ರಾಷ್ಟ್ರಪತಿಯವರು ಒಂದು ಪಕ್ಕಕ್ಕೆ ಸರಿದಂತಾಗಿತ್ತು. ಇದನ್ನು ಶಿಷ್ಟಾಚಾರ ಉಲ್ಲಂಘನೆ ಎಂದೇ ಭಾವಿಸಲಾಯಿತು.ರಾಷ್ಟ್ರಪತಿ ಅವರು ಯಾವುದೇ ಕಾರ್ಯಕ್ರಮದಲ್ಲಿ ಭಾಗವಹಿಸಲಿ, ಮಿನಿಟ್ ಟು ಮಿನಿಟ್ ಕಾರ್ಯಕ್ರಮ ನಿಗದಿಯಾಗಿರುತ್ತದೆ. ಮುಂದಿನ ಐದು ನಿಮಿಷಗಳಲ್ಲಿ ಏನಾಗಬಹುದು ಎಂಬುದು ಭಗವಂತನ ಹೊರತಾಗಿ ಬೇರೆ ಯಾರಿಗೂ ಗೊತ್ತಾಗುವುದಿಲ್ಲ. ಆದರೆ ಪ್ರೋಟೋಕಾಲ್ ಅಧಿಕಾರಿಗಳಿಗೆ ರಾಷ್ಟ್ರಪತಿ ಭವನದಿಂದ ಹೊರಟ ರಾಷ್ಟ್ರಪತಿ ವಾಪಸ್ ಬರುವವರೆಗೆ ಏನೇನಾಗುತ್ತದೆ ಎಂಬುದು ಕರಾರುವಾಕ್ಕಾಗಿ ಗೊತ್ತಿರುತ್ತದೆ.
ಅದರಲ್ಲಿ ಸಣ್ಣ ಪುಟ್ಟಬದಲಾವಣೆಯಾಗಲಿ, ಮಾರ್ಪಾಡುಗಳಾಗಲಿ ಆಗುವುದಿಲ್ಲ. ಸಮಯದ ವಿಷಯದಲ್ಲಿ ಪ್ರೋಟೋಕಾಲ್ ಅಽಕಾರಿಗಳು ಯಮನಿಗಿಂತ ಖಂಡಿತವಾದಿಗಳು. ಪ್ರಮಾಣವಚನ, ಪದ್ಮ ಪ್ರಶಸ್ತಿ ಪ್ರದಾನ ಮುಂತಾದ ಅತಿ ಪ್ರಮುಖ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಹೆಚ್ಚೆಂದರೆ ಐದು ಸೆಕೆಂಡ್ ವ್ಯತ್ಯಾಸವಾಗಬಹುದು. ಅದಕ್ಕಿಂತ ಹೆಚ್ಚು ವಿಳಂಬವಾಗು ವುದೇ ಇಲ್ಲ. ಐದಾರು ನಿಮಿಷ ಸಹ ತಡವಾಗುವ ಪ್ರಶ್ನೆಯೇ ಇಲ್ಲ.
ಬಹಳ ಅಪರೂಪದ ಸಂದರ್ಭದಲ್ಲಿ, ಅಂದರೆ ಪ್ರಧಾನಿ ಮತ್ತು ರಾಷ್ಟ್ರಪತಿ ಇಬ್ಬರು ಭಾಗವಹಿಸುವ ಒಂದೇ ಕಾರ್ಯಕ್ರಮದಲ್ಲಿ ಪ್ರಧಾನಿ ಆಗಮಿಸುವುದು ಎರಡು – ಮೂರು ನಿಮಿಷ ವಿಳಂಬವಾದರೆ, ( ಹಾಗಾಗುವುದು ತೀರಾ ತೀರ ವಿರಳ) ರಾಷ್ಟ್ರಪತಿ ಯವರು ಪ್ರಧಾನಿ ಬಂದ ನಂತರ ಬರಬೇಕಾದುದರಿಂದ ಒಂದೆರಡು ನಿಮಿಷ ತಡವಾಗಬಹುದು. ಅದನ್ನು ಸಹ ಶಿಷ್ಟಾಚಾರ ಉಲ್ಲಂಘನೆ ಅಥವಾ ಭದ್ರತಾ ಲೋಪ ಎಂದೇ ಪರಿಗಣಿಸುತ್ತಾರೆ.
ಏಳು ಪೆಗ್ ಕುಡಿದ ನಂತರ..ಫೇಸ್ ಬುಕ್‌ನಲ್ಲಿ ಯಾರೋ ಬರೆದಿದ್ದನ್ನು ಕಿರಣ್ ಕುಮಾರ್ ಎಸ್. ಅವರು ಟ್ವೀಟ್ ಮಾಡಿದ್ದರು. ನಿನ್ನೆ ರಾತ್ರಿ , ನನ್ನ ಸ್ನೇಹಿತರಿಗೆ ಪಾರ್ಟಿ ವ್ಯವಸ್ಥೆ ಮಾಡಿದ್ದೆ. ಏಳು ಪೆಗ್ ಹಾಕಿದ ನಂತರ ನನಗೆ ಡ್ರೈವ್ ಮಾಡುವ ಬಗ್ಗೆ ಯಾವುದೇ ಸಂದೇಹಗಳಿರಲಿಲ್ಲ. ನನ್ನ ಡ್ರೈವಿಂಗ್ ಸಾಮರ್ಥ್ಯದ ಬಗ್ಗೆ ನನಗೆ ನಂಬಿಕೆಯಿತ್ತು. ಆದರೆ ನಾನು ಜವಾಬ್ದಾರಿಯಿಂದ ವರ್ತಿಸಲು ನಿರ್ಧರಿಸಿದೆ. ಹೀಗಾಗಿ ಓಲಾ ಕ್ಯಾಬ್ ಬುಕ್ ಮಾಡಿ ಮನೆಗೆ ಹೋದೆ ಎಂದು ಒಬ್ಬಾತ ಸ್ಟೇಟಸ್ ಹಾಕಿದ್ದನಂತೆ.
ಅದಕ್ಕೆ ಅವನ ಸ್ನೇಹಿತನ ಕಾಮೆಂಟ್: ನಿನ್ನಜ್ಜಿ, ಓಲಾ ಕ್ಯಾಬ್ ಬುಕ್ ಮಾಡಿಕೊಂಡು ಎಲ್ಲಿ ಹೋದೆ? ಪಾರ್ಟಿ ನಡೆದಿದ್ದು ನಿನ್ನ ಮನೆಯ ಆಲ್ವಾ?