ನೇತಾಜಿ ಚಿತಾಭಸ್ಮದ ಡಿಎನ್‌ಎ ಪರೀಕ್ಷೆಯಾಗಲಿ
ಸಾಂದರ್ಭಿಕ
ಎಲ್.ಪಿ.ಕುಲಕರ್ಣಿ
ಅಪ್ರತಿಮ ದೇಶಭಕ್ತ ನೇತಾಜಿ ಸುಭಾಷ್ ಚಂದ್ರ ಬೋಸ್ರ ಜನ್ಮದಿನವಾದ ಜನವರಿ –೨೩ನ್ನು ‘ಪರಾಕ್ರಮ ದಿವಸ’ ವನ್ನಾಗಿ ಆಚರಿಸಲಾಗಿದೆ.
ನೇತಾಜಿಯವರ೧೨೫ನೇ ಜನ್ಮ ದಿನಾಚರಣೆಯನ್ನು ಆಚರಿಸುತ್ತಿರುವ ಈ ಶುಭ ಸಂದರ್ಭದಲ್ಲಿ, ಅವರ ಜನ್ಮದಿನವನ್ನು ‘ಪರಾಕ್ರಮ ದಿವಸ’ ಎಂದು ಆಚರಿಸಲು ನಿರ್ಧರಿಸಿದ್ದು ಭಾರತೀಯರಾದ ನಮಗೆ ಹೆಮ್ಮೆಯ ಸಂಗತಿ. ನ್ಯಾಯಮೂರ್ತಿ ಮುಖರ್ಜಿ ಆಯೋಗದ ವರದಿಯ ‘ವಿಶ್ವಾಸಾರ್ಹತೆ’ಯನ್ನು ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕುಟುಂಬದ ಇಬ್ಬರು ಸದಸ್ಯರು ಪ್ರಶ್ನಿಸಿದ್ದಾರೆ.
ಯಾವುದೇ ಕಾರಣ ಅಥವಾ ಸಂದರ್ಭದ ಮಾಹಿತಿ ನೀಡದೇ ಈ ವರದಿಯು, ಸ್ವಾತಂತ್ರ್ಯ ಸಂಗ್ರಾಮದ ಕೇಂದ್ರ ಬಿಂದುವಾಗಿದ್ದನೇತಾಜಿ ಅವರ ಸಾವನ್ನು ಘೋಷಿಸಿದೆ ಎಂದು ಸದಸ್ಯರು ಉಲ್ಲೇಖಿಸಿದ್ದಾರೆ. ಈ ಕುರಿತು ಕಳೆದ ವರ್ಷದ ಆಗಸ್ಟ್೨೪ರಂದುಬಹಿರಂಗ ಪತ್ರ ಬರೆದಿರುವ ನೇತಾಜಿ ಅವರ ಮೊಮ್ಮಗ ಸೂರ್ಯ ಬೋಸ್ ಮತ್ತು ಮೊಮ್ಮಗಳು ಮಾಧುರಿ ಬೋಸ್, ‘ನೇತಾಜಿಅವರು ವಿಮಾನ ಅಪಘಾತದಲ್ಲಿ ಮೃತಪಟ್ಟಿಲ್ಲ ಹಾಗೂ ಟೋಕಿಯೋದಲ್ಲಿ ಇರುವ ರೆಂಕೋಜಿ ದೇವಸ್ಥಾನದಲ್ಲಿ ಇದ್ದಚಿತಾಭಸ್ಮ ನೇತಾಜಿ ಅವರದ್ದಲ್ಲ ಎಂದು ನ್ಯಾಯಮೂರ್ತಿ ಮನೋಜ್ ಕುಮಾರ್ ಮುಖರ್ಜಿ ಅವರು೨೦೦೫ರ ನವೆಂಬರ್೮ರ ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ.
೧೯೯೯ರಲ್ಲಿ ನಿಯೋಜಿಸಲ್ಪಟ್ಟ ಈ ಮುಖರ್ಜಿ ಆಯೋಗವು, ನೇತಾಜಿ ಅವರು ಹೇಗೆ, ಎಲ್ಲಿ, ಯಾವ ಕಾರಣದಿಂದ ಮೃತರಾ ದರು? ಎಂಬ ಯಾವ ವಾಹಿತಿಯನ್ನೂ ವರದಿಯಲ್ಲಿ ನೀಡಿಲ್ಲ ಎಂದು ಅವರಿಬ್ಬರೂ ತಿಳಿಸಿದ್ದಾರೆ. ರೆಂಕೋಜಿ ದೇವಸ್ಥಾನಕ್ಕೆ ಸಂಬಂಧಿಸಿದ ಅಧಿಕಾರಿಗಳು ಪೂರ್ಣ ಸಹಕಾರದ ಭರವಸೆ ನೀಡಿದ್ದರೂ, ಅಲ್ಲಿ ದೊರಕಿದ್ದ ಚಿತಾಭಸ್ಮದ ಡಿಎನ್‌ಎ ಪರೀಕ್ಷೆಯನ್ನು ಆಯೋಗವು ನಡೆಸಿಲ್ಲ.
ಕಳೆದ೧೫ವರ್ಷಗಳಿಂದ ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ನವನವೀನ ಆವಿಷ್ಕಾರ ಗಳು, ತಾಂತ್ರಿಕತೆಗಳು ಬಂದಿದ್ದು, ತಕ್ಷಣದಚಿತಾಭಸ್ಮದ ಡಿಎನ್‌ಎ ಪರೀಕ್ಷೆ ನಡೆಸಬೇಕು ಎಂದು ಸೂರ್ಯ ಬೋಸ್ ಹಾಗೂ ಮಾಧುರಿ ಬೋಸ್ ತಮ್ಮ ಪತ್ರದಲ್ಲಿಕೋರಿದ್ದಾರೆ. ‘ನೇತಾಜಿ ಸುಭಾಸ್ ಚಂದ್ರ ಬೋಸ್ ಅವರು ಮೃತಪಟ್ಟಿದ್ದಾರೆ’ ಎಂದಷ್ಟೇ ನ್ಯಾಯಮೂರ್ತಿ ಮುಖರ್ಜಿ ಅವರು ತಮ್ಮ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ತೈವಾನ್‌ನಲ್ಲಿ ಯಾವುದೇ ವಿಮಾನ ಅಪಘಾತ ಆ ಸಂದರ್ಭದಲ್ಲಿ ನಡದೇ ಇಲ್ಲಹಾಗೂ ಅದರಲ್ಲಿ ನೇತಾಜಿ ಅವರು ಮೃತಪಟ್ಟಿಲ್ಲ ಎನ್ನುವ ಕುರಿತು ಮುಖರ್ಜಿ ಅವರು ನೀಡಿರುವ ಸಾಕ್ಷ ಹಾಗೂ ಪ್ರಮುಖ ತರ್ಕಗಳು ಯಾವುದೇ ವಿಶ್ವಾಸರ್ಹತೆಯನ್ನು ಹೊಂದಿಲ್ಲ’ ಎಂದೂ ಸಹ ಆರೋಪಿಸಿದ್ದಾರೆ.
ಅದು ಭಾರತೀಯರು ಸ್ವಾತಂತ್ರ್ಯ ಹೋರಾಟ ಮಾಡುತ್ತಿದ್ದ ಸಮಯ.೧೯೨೧ರ ಕೊನೆಯಲ್ಲಿ ಇಂಗ್ಲೆಂಡಿನ ರಾಜಕುಮಾರನಭಾರತದ ಭೇಟಿ ನಿಗದಿಯಾಗಿತ್ತು. ಜಲಿಯನ್ ವಾಲಾ ಬಾಗ್ ಹತ್ಯಾಕಾಂಡವನ್ನು ಮುಂದಿಟ್ಟುಕೊಂಡು ಈ ಭೇಟಿಯ ವಿರುದ್ಧದೇಶಾದ್ಯಂತ ಪ್ರತಿಭಟನೆ ನಡೆಸಲು ಕಾಂಗ್ರೆಸ್ ಕರೆ ನೀಡಿತು. ಈ ವಿಷಯಕ್ಕೆ ಸಂಬಂಧಿಸಿದಂತೆ ಕೇವಲ೨೪ವರ್ಷ ವಯೋಮಾನದ ತರುಣ ಬಂಗಾಳದಲ್ಲಿ ಉಗ್ರ ಪ್ರತಿಭಟನೆಯನ್ನು ಆಯೋಜಿಸಿದನು. ಆಗ ಸರಕಾರ೧೯೨೨ರ ಫೆಬ್ರವರಿ೭ರಂದು ಆತನನ್ನು ಬಂಧಿಸಿ ಆರು ತಿಂಗಳು ಕಾರಾಗೃಹವಾಸಕ್ಕೆ ದಬ್ಬಿತು. ಈ ಶಿಕ್ಷೆ ಘೋಷಿಸಿದಾಗ ‘ಕೇವಲ ಆರು ತಿಂಗಳೇ?! ನನ್ನದೇನು ಕೋಳಿ ಕದ್ದ ಅಪರಾಧವೇ?’ ಎಂದು ನುಡಿದಿದ್ದ ಆ ತೇಜೋಮಯ, ಧೀರ, ವೀರ, ಶೂರ, ದೇಶಭಕ್ತ ಯುವಕ ಬೇರಾರೂ ಅಲ್ಲ.
ಅವರೇ ನಮ್ಮ ನೇತಾಜಿ ಸುಭಾಷ್ ಚಂದ್ರ ಬೋಸ್. ಭಾರತವು ಸ್ವಾತಂತ್ರ್ಯ ಪಡೆಯಲು ಕಾರಣವಾದ ಸಂಗ್ರಾಮದಲ್ಲಿ ಧುಮುಕಿಭಾರತ ಮಾತೆಯ ಸೇವೆಗೈದ ಮಹಾನ್ ಕ್ರಾಂತಿಕಾರಿಗಳ ಪೈಕಿ ನೇತಾಜಿ ಸುಭಾಷ್ ಚಂದ್ರ ಬೋಸ್‌ರವರ ಕೊಡುಗೆ ಅಪಾರವಿದೆ.೨೩ನೇ ಜನವರಿ೧೮೯೭ರಂದು ಒಡಿಶಾದ ಕಟಕ್‌ನಲ್ಲಿ ಸುಭಾಷ್ ಚಂದ್ರ ಬೋಸ್ ಜನಿಸಿದರು.
ತಂದೆ ಜಾನಕೀನಾಥ ಬೋಸ್ ಮತ್ತು ತಾಯಿ ಪ್ರಭಾವತಿ ದೇವಿ. ಓದಿನಲ್ಲಿ ಜಾಣನಾಗಿದ್ದ ಸುಭಾಷ್೧೯೧೩ರಲ್ಲಿ ಮೆಟ್ರಿಕ್ಯುಲೇಷನ್ ಪರೀಕ್ಷೆ ಪಾಸು ಮಾಡಿ,೧೯೧೯ರಲ್ಲಿ ಕೋಲ್ಕತಾದ ಪ್ರೆಸಿಡೆನ್ಸಿ ಕಾಲೇಜಿನಿಂದ ಬಿ.ಎ (ತತ್ತ್ವಶಾಸ್ತ್ರ) ಪದವಿ ಪಡೆದರು. ಈ ನಡುವೆ ದೇಶದಡೆ ಸ್ವಾತಂತ್ರ್ಯ ಸಂಗ್ರಾಮದ ಜ್ವಾಲೆ ಭುಗಿಲೆದ್ದಿತ್ತು. ಆ ಸಂದರ್ಭದಲ್ಲಿ ರೌಲಟ್ ಕಾಯಿದೆ ಪ್ರಕಾರ ಸ್ವಾತಂತ್ರ್ಯ ಹೋರಾಟಗಾರರನ್ನು ದೇಶದ್ರೋಹದ ಹೆಸರಿನಲ್ಲಿ ಬಂಧಿಸಿ ಉಗ್ರವಾದ ಶಿಕ್ಷೆಗೆ ಗುರಿಮಾಡುತ್ತಿದ್ದ ಬ್ರಿಟೀಷ್ ಸರಕಾರದ ಕ್ರಮವನ್ನು ಖಂಡಿಸಲು ಜಲಿಯನ್ ವಾಲಾ ಭಾಗ್‌ನಲ್ಲಿ ಸಭೆ ಸೇರಿದ್ದ ಜನರ ಮೇಲೆ ಬ್ರಿಟಿಷ್ ಅಧಿಕಾರಿ ಜನರಲ್ ಡಯರ್‌ನ ನೇತೃತ್ವದಲ್ಲಿ ನಡೆದ ಗುಂಡಿನ ಸುರಿಮಳೆಯಿಂದಾದ ಭಾರತೀಯರ ಹತ್ಯಾಕಾಂಡದಲ್ಲಿ೩೭೯ಅಮಾಯಕರು ಬಲಿಯಾದರೆ೧೨,೦೦೦ಜನ ಗಾಯಗೊಂಡರು.
ಒಟ್ಟು೧೬೩೦ಸುತ್ತು ಗುಂಡುಗಳನ್ನು ಹಾರಿಸಲಾಗಿತ್ತು. ಈ ಘಟನೆ ನಡೆದ ತಕ್ಷಣವೇ ಡಯರ್ ನಗರದಲ್ಲಿ ಕರ್ಪ್ಯೂ ವಿಧಿಸಿದನು. ಇದರಿಂದಾಗಿ ಗಾಯಾಳುಗಳಿಗೆ ಸರಿಯಾದ ವೈದ್ಯಕೀಯ ನೆರವು ದೊರೆಯದಾಯಿತು. ಈ  ಘಟನೆ ಭಾರತದ ಇತಿಹಾಸದಲ್ಲಿಯೇ ಹೃದಯ ವಿದ್ರಾವಕ ಮತ್ತು ಕರಾಳ ಘಟನೆ ಎನಿಸಿತು. ಅಷ್ಟೇ ಅಲ್ಲದೆ ಈ ಘಟನೆ ಸುಭಾಷ್ ಚಂದ್ರ ಬೋಸರ ಜೀವನಕ್ಕೆ ಹೊಸ ತಿರುವು ನೀಡಿತು. ಇದೇ ಘಟನೆ೧೨ವರ್ಷದ ಬಾಲಕ ಭಗತ್ ಸಿಂಗ್‌ರ ಮನಸ್ಸನ್ನು ಕಲಕಿ ಸ್ವಾತಂತ್ರ್ಯ ಸಂಗ್ರಾಮಕ್ಕೆ ಎಳೆದು ತಂದಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
ಇತ್ತ ಸುಭಾಷರು೧೯೧೯ರಲ್ಲಿ ತಮ್ಮ೨೨ನೇ ವಯಸ್ಸಿನಲ್ಲಿಯೇ ಐಸಿಎಸ್ (ಇಂಡಿಯನ್ ಸಿವಿಲ್ ಸರ್ವಿಸ್) ಓದಲು ಇಂಗ್ಲೆಂಡಿಗೆಪ್ರಯಾಣ ಬೆಳೆಸಿದರು.೧೯೨೦ರಲ್ಲಿ ನಡೆದ ಪರೀಕ್ಷೆಯಲ್ಲಿ೪ನೇ ರ‍್ಯಾಂಕಿನಲ್ಲಿ ಪಾಸಾದರು. ಪರೀಕ್ಷೆಗಾಗಿ ಓದಿದ ಇತಿಹಾಸದಪಾಠಗಳು ಸುಭಾಸರಿಗೆ ಮುಂದಿನ ಸ್ವಾತಂತ್ರ್ಯ ಹೋರಾಟಕ್ಕೆ ಸಹಾಯ ಮಾಡಿದವು. ಐಸಿಎಸ್ ಪರೀಕ್ಷೆ ಪಾಸು ಮಾಡಿದ್ದರೂಆಂಗ್ಲರ ಕೈ ಕೆಳಗೆ ದುಡಿಯಲಾರೆ ಎಂದು ದೃಢ ಸಂಕಲ್ಪಮಾಡಿ ಐಸಿಎಸ್ ಪದವಿಯನ್ನು ನಿರಾಕರಿಸಿದರು.
ಐಸಿಎಸ್ ಪರೀಕ್ಷೆ ಪಾಸು ಮಾಡಿದ ಇವರಿಗೆ ದೇಶದಲ್ಲಿಯೇ ಅತಿ ಉನ್ನತವಾದ ಅಧಿಕಾರವುಳ್ಳ ನೌಕರಿ, ಅದರ ಜತೆಗೆ ಹಲವಾರು ಸರಕಾರಿ ಸೌಲಭ್ಯಗಳು ಮತ್ತು ವೈಭವಯುತವಾದ ಜೀವನ ಸಿಗುತ್ತಿತ್ತು. ಆದರೆ ಸುಭಾಷರಿಗೆ ಅದು ಭಾರತದ ಸ್ವಾತಂತ್ರ್ಯದ ಮುಂದೆ ತೃಣಕ್ಕೆ ಸಮಾನವಾಗಿ ಕಂಡಿತು. ಕಾಂಗ್ರೆಸ್‌ನ ಡೋಲಾಯಮಾನ ನೀತಿಗಳಿಗೆ ಬೇಸತ್ತು ಬಂಗಾಳದ ಆಕ್ರಮಣಕಾರಿ ರಾಷ್ಟ್ರೀಯ ವಕ್ತಾರರಾಗಿದ್ದ ಚಿತ್ತರಂಜನ್ ದಾಸ್ ಸ್ವರಾಜ್ ಪಕ್ಷ ಎಂಬ ಸಂಘಟನೆಯನ್ನು ಸ್ಥಾಪಿಸಿದರು. ಈ ಸಂದರ್ಭದಲ್ಲಿ ಸುಭಾಷ್ ಚಂದ್ರ ಬೋಸ್ ಚಿತ್ತರಂಜನ್ ದಾಸರ ಜತೆಗೆ ಸ್ವಾತಂತ್ರ್ಯ ಚಟುವಟಿಕೆಗಳಲ್ಲಿ ಭಾಗಿಯಾದರು.
೧೯೩೨ರ ಅಕ್ಟೋಬರ್‌ನಲ್ಲಿ ಚಿತ್ತರಂಜನ್ ದಾಸರು ಪ್ರಾರಂಭಿಸಿದ್ದ ‘ಫಾರವರ್ಡ್ ’ ಎಂಬ ದಿನ ಪತ್ರಿಕೆಯ ನಿರ್ವಹಣೆ ಜವಾಬ್ದಾರಿ ಯನ್ನು ಬೋಸರು ವಹಿಸಿಕೊಂಡರು.೧೯೨೫ಜೂನ್೧೬ರಂದು ಚಿತ್ತರಂಜನ್ ದಾಸರು ನಿಧನಹೊಂದಿದರು.೧೯೨೭ರ ನವೆಂಬರ್‌ನಲ್ಲಿ ಸುಭಾಷ್ ಬಂಗಾಳ ಪ್ರದೇಶದ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಆಯ್ಕೆಯಾದರು. ಆದರೆ ಗಾಂಧಿ ಪ್ರಣೀತ ಸೌಮ್ಯ ಮಾರ್ಗಕ್ಕೆ ಸುಭಾಷರದು ತುಂಬಾ ಭಿನ್ನ ಎಂಬುದು ಕ್ರಮೇಣ ಗೊತ್ತಾಯಿತು.
ಮದ್ರಾಸಿನ ಸೆರೆಮನೆಯಲ್ಲಿದ್ಧಾಗ, ಅ ಜೈಲಿನ ಗೋಡೆಗಳ ಮಧ್ಯ೧೯೩೨ರಲ್ಲಿ ‘ದಿ ಇಂಡಿಯನ್ ಸ್ಟ್ರಗಲ್’ ಎಂಬ ಪುಸ್ತಕ ಬರೆಯಲಾರಂಭಿಸಿದರು. ಪಿತ್ತಕೋಶದ ದುರ್ಬಲತೆಯಿಂದ ಬಳಲಿದ ಬೋಸರು ಚಿಕಿತ್ಸೆಗೆಂದು ಜೈಲಿನಿಂದ ಷರತ್ತಿನ ಮೇಲೆ ಬಿಡುಗಡೆಹೊಂದಿ ವಿದೇಶಕ್ಕೆ ತೆರಳಿದರು. ವಿಯನ್ನಾದಲ್ಲಿ ಚಿಕಿತ್ಸೆ ಪಡೆದುಕೊಂಡರು. ಚೇತರಿಸಿಕೊಳ್ಳುತ್ತಲೇ ಯರೋಪಿನ ಹಲವಾರು ದೇಶಗಳಿಗೆ ಪ್ರವಾಸ ಕೈಗೊಂಡರು. ಭಾರತದ ಸ್ವಾತಂತ್ರ್ಯ ಹೋರಾಟವನ್ನು ಭದ್ರಗೊಳಿಸಲು ಇಂಗ್ಲೆಂಡ್, ವಿಯೆನ್ನಾ, ಜೊಕೊಸ್ಲೊವಾಕಿಯಾ, ಪೋಲೆಂಡ್, ಜರ್ಮನ್‌ಗಳಲ್ಲಿ ಸುತ್ತಾಡಿದರು.
೧೯೩೩ರಲ್ಲಿ ಇಟಲಿಯ ಪ್ರಧಾನಿ ಬೆನಿಟೋಮುಸಲೋನಿಯನ್ನು ಭೇಟಿ ಮಾಡಿದರು.೧೯೩೭ರಲ್ಲಿ ಸುಭಾಷಸರು ಸ್ವದೇಶಕ್ಕೆ ಮರಳಿದರು. ಇದಾದ ಐದು ವರ್ಷಗಳ ನಂತರ ಜೈಲಿನಿಂದ ತಪ್ಪಿಸಿಕೊಂಡು ಜರ್ಮನಿಗೆ ಹೋಗಿ೩೦೦ಸೈನಿಕರನ್ನೊಳ ಗೊಂಡಂತೆ ‘ಅಜಾದ್ ಹಿಂದ್ ಫೌಜ್’ (ಇಂಡಿಯನ್ ನ್ಯಾಷನಲ್ ಆರ್ಮಿ) ಎಂಬ ಸೈನ್ಯ ಕಟ್ಟಿ ಭಾರತದ ಸ್ವಾತಂತ್ರ್ಯ ಸಂಗ್ರಾಮ ದಲ್ಲಿ ಸಕ್ರೀಯವಾಗಿ ತೊಡಗಿದರು. ಆಗ ನಡೆಯುತ್ತಿದ್ದ ಎರಡನೇ ಮಹಾಯುದ್ಧದಲ್ಲಿ ಅಮೆರಿಕಾದಲ್ಲಿ ಬಂಧಿಯಾಗಿದ್ದ೩೦೦೦ಜನ ಭಾರತೀಯರನ್ನು ಮನವೊಲಿಸಿ ಇಂಡಿಯನ್ ನ್ಯಾಷನಲ್ ಆರ್ಮಿಗೆ ಸೇರಿಸಿ ಬಲಿಷ್ಠ ಸೇನೆ ಕಟ್ಟಿದರು.
ನಂತರ ಅದು ೩೦,೦೦೦ ಸೈನಿಕರ ತಂಡ ವಾಯಿತು. ಹೀಗೆ ತಮ್ಮ ಸೈನ್ಯ ಬಲದೊಂದಿಗೆ ಮೊದಲಿಗೆ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳನ್ನು ವಶಪಡಿಸಿ ಕೊಂಡರು. ಭಾರತದ ನೆಲ ಸ್ವಾತಂತ್ರ್ಯದ ಸವಿಯುಂಡ ಪ್ರಥಮ ಅನುಭವ ಅದು. ಸುಭಾಷರು ಈ ದ್ವೀಪಗಳಿಗೆ ‘ಸ್ವರಾಜ್’ ಮತ್ತು ‘ಶಹೀದ್’ ಎಂದು ನಾಮಕರಣ ಮಾಡಿದರು.೧೮ನೇ ಆಗಸ್ಟ್೧೯೪೫ರ ಸಂಜೆ೫ಗಂಟೆಯ ಸಮಯ ಸುಭಾಷ್ ಚಂದ್ರ ಬೋಸ್ ಜಪಾನಿನ ಥೈಪೆ ನಗರದಿಂದ ಮುಂಚೂರಿಯಾಗೆ ತೆರಳಲು ವಿಮಾನ ಹತ್ತಿದರು. ಆದರೆ ವಿಮಾನ ೩೦ ಅಡಿಯಷ್ಟು ಎತ್ತರಕ್ಕೆ ಹಾರುತ್ತಿದ್ದಂತೆ ಅಪಘಾತಕ್ಕೆ ಈಡಾಯಿತು. ಈ ದೇಶಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ನಮ್ಮೆಲ್ಲ ಪ್ರೀತಿಯ ನೇತಾಜಿ ಹೀಗೆ ದುರಂತ ಅಂತ್ಯವನ್ನು ಕಾಣಬೇಕಾಯಿತು.
ಆದರೆ ಅವರ ಸಾವಿನ ಬಗ್ಗೆ ಹಲವಾರು ಸಂಶಯಗಳಿವೆ. ಅವರ ನಿಗೂಢ ಕಣ್ಮರೆ ಇಂದಿಗೂ ಯಕ್ಷ ಪ್ರಶ್ನೆಯಾಗೇ ಉಳಿದಿದೆ. ಏಕೆಂದರೆ೧೯೪೫ಆಗಸ್ಟ್೧೮ರಂದು ಯಾವುದೇ ವಿಮಾನ ಅಪಘಾತವಾಗಿಲ್ಲವೆಂದು ಜಪಾನ್ ಸರಕಾರ ಹೇಳಿದೆ.೧೯೮೫ರವರೆಗೆ ಸುಭಾಷರು ಒಬ್ಬ ಸನ್ಯಾಸಿಯ ರೂಪದಲ್ಲಿ ಭರತದ ನೆಲೆಸಿದ್ದರು ಮತ್ತು ಅವರನ್ನು ಭಾರತದಲ್ಲಿ ನೋಡಿದ್ದಾಗಿಅನೇಕರು ಹೇಳಿದ್ದಾರೆ.
ನೇತಾಜಿಯವರ ಆಜಾದ್ ಹಿಂದ್ ಸೈನ್ಯದಿಂದ ಜಪಾನ್ ಸೇನೆಯ ಗುಪ್ತಚರ ಅಧಿಕಾರಿ ಜನರಲ್ ಇವಾಇಚೀ–ಜೀವಾರಾ೧೯೭೯ರಲ್ಲಿ ಟೋಕಿಯೋದ ಮಂದಿರವೊಂದರಲ್ಲಿ ಇಡಲಾಗಿದ್ದ ಬೋಸ್‌ರವರ ಅಸ್ಥಿಗಳನ್ನು ಪಡೆದುಕೊಳ್ಳಲು ಹಾಗೂ ಅದನ್ನು ನೋಡಿಕೊಳ್ಳಲು ಭಾರತ ಸರಕಾರದ ಬಳಿ ಮನವಿ ಮಾಡಿಕೊಂಡಿದ್ದರು. ಈ ವೇಳೆ ದಿವಂಗತ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಈ ವಿಚಾರವಾಗಿ ಮುಂದಿನ೧-೨ವರ್ಷ ಗಳಲ್ಲಿ ನಿರ್ಧಾರ ಮಾಡಲಾಗುವುದು ಎಂದಿದ್ದರು.
೧೯೯೫ರಲ್ಲೂ ಪಿ.ವಿ. ನರಸಿಂಹ ರಾವ್ ಸರಕಾರವು ಗೃಹ ಸಚಿವಾಲಯ, ಗುಪ್ತಚರ ಇಲಾಖೆ ಹಾಗೂ ಉನ್ನತ ರಾಜತಾಂತ್ರಿಕ ರೊಂದಿಗೆ ವಿಚಾರ ವಿಮರ್ಶೆ ಮಾಡಿದ ಬಳಿಕ ‘ನೇತಾಜಿ’ಯ ಅಸ್ಥಿಗಳನ್ನು ತರುವ ನಿರ್ಧಾರವನ್ನು ಮುಂದೂಡಲಾಗಿತ್ತು.ನೇತಾಜಿ ಪತ್ನಿ ಯಾಮಿನಿಯವರಿಗೆ ಆರ್ಥಿಕ ಸಹಾಯ ಮಾಡಲು ಅಂದಿನ ನೆಹರೂ ಸರಕಾರ ಆಸಕ್ತಿ ತೋರಿಸಿತ್ತು. ಅವರಿಗೆ ಆರ್ಥಿಕ ಸಹಾಯ ನೀಡುವ ವಿಚಾರವಾಗಿ ನೆಹರೂ ರವರು ವಿತ್ತ ಸಚಿವಾಲಯ ಹಾಗೂ ವಿದೇಶಾಂಗ ಸಚಿವಾಲಯಕ್ಕೆಆದೇಶಿಸಿದ್ದರು.
ಸುಭಾಷ್‌ರವರ ಹಿರಿಯ ಸಹೋದರ ಶರತ್ ಚಂದ್ರ ಬೋಸ್‌ರ ಬಳಿ ಮಾತನಾಡಿದ್ದ ಗಾಂಧೀಜಿ ಸುಭಾಷ್ ರವರು ವಿಮಾನ ಅಪಘಾತದಲ್ಲಿ ಅಸುನೀಗಿದ್ದಾರೆ ಎಂದು ತಮಗೆ ಅನಿಸುವುದಿಲ್ಲ ಎಂದಿದ್ದರಂತೆ. ಹೀಗಾಗಿ ಅವರ ಶ್ರಾದ್ಧ ಮಾಡದಂತೆ ಗಾಂಧೀಜಿ ಕೇಳಿಕೊಂಡಿದ್ದರಂತೆ. ಆದರೆ೧೯೯೫ರ ಫೆಬ್ರವರಿ೬ರಂದು ಅಂದಿನ ಗೃಹ ಮಂತ್ರಿಯ ಹಸ್ತಾಕ್ಷರವಿರುವ ಕೇಂದ್ರೀಯ ಕ್ಯಾಬಿನೆಟ್‌ನ ಒಂದು ನೋಟಿನಲ್ಲಿ ನೇತಾಜಿಯವರು೧೯೪೫ರಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂಬುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದಿತ್ತು.
ಹೀಗಾಗಿ ಎಲ್ಲರೂ ಈ ವಿಚಾರವನ್ನು ಒಪ್ಪಿಕೊಂಡಿದ್ದರು.೧೯೭೮ರ ಡಿಸೆಂಬರ್೭ರಂದು ಫುಲ್ ನಂಬರ್೭ರಲ್ಲಿ ಕೇಳಲಾಗಿದ್ದ ಪ್ರಶ್ನೆಗೆ ನೀಡಲಾದ ಉತ್ತರದಲ್ಲಿ೧೯೫೧ರಲ್ಲಿ  ಟೋಕಿಯೋದಲ್ಲಿದ್ದ ಭಾರತೀಯ ಮಿಷನ್‌ನಲ್ಲಿದ್ದವರ ಬಳಿ ಸುಭಾಷ್ ಚಂದ್ರ ಬೋಸ್‌ರವರ ಆತ್ಮೀಯರೂ ಆಗಿದ್ದ ಕೆಲ ಭಾರತೀಯರು ನೇತಾಜಿ ಬಳಿ ಇದ್ದ ಡಬ್ಬಿಯಲ್ಲಿ ಚಿನ್ನ, ಬೆಳ್ಳಿ ಹಾಗೂ ಹಣವಿತ್ತು ಎಂಬ ಮಾಹಿತಿ ನೀಡಿದ್ದರಂತೆ. ಅದೇನೆ ಇರಲಿ ದೇಶಕಂಡ ಅದ್ಭುತ ದೇಶಾಭಿಮಾನಿ ಗಳಲ್ಲಿ ಸುಭಾಷ್ ಚಂದ್ರ ಬೋಸರು ಅಗ್ರಪಂಕ್ತಿಯಲ್ಲಿ ನಿಲ್ಲುತ್ತಾರೆ.
ಅವರ ಆದರ್ಶಗಳು ಭಾರತದ ಯುವಕರಿಗೆ ಸದಾ ಪ್ರೇರಣೆ.೧೯೪೫ರ ಆಗಸ್ಟ್೧೮ರಂದು ತೈವಾನ್‌ನಲ್ಲಿ ನಡೆದ ವಿಮಾನಅಪಘಾತದಲ್ಲಿ ನೇತಾಜಿ ಅವರು ಮೃತಪಟ್ಟಿದ್ದಾರೆ ಎಂದು ಜಪಾನ್ ಸರಕಾರ ಅಧಿಕೃತವಾಗಿ ಘೋಷಿಸಿ೭೬ವರ್ಷ ಕಳೆದಿದ್ದರೂ, ವಾಸ್ತವದಲ್ಲಿ ನಡೆದದ್ದೇನು ಎನ್ನುವುದು ಇಂದಿಗೂ ಹಲವರ ಮನಸ್ಸಿನಲ್ಲಿ ಸಂಶಯವಾಗಿಯೇ ಉಳಿದಿದೆ ಎಂದು ನೇತಾಜಿಯ ಕುಟುಂಬದ ಸದಸ್ಯರು ತಮ್ಮ ಈಗಿನ ಪತ್ರದಲ್ಲಿ ಪ್ರಸ್ತಾಪಿಸಿದ್ದಾರೆ.
ಈ ವಿಷಯವನ್ನು ಈಗಿನ ಕೇಂದ್ರ ಸರಕಾರ ಗಂಭೀರವಾಗಿ ಪರಿಗಣಿಸಿ ನೇತಾಜಿಯ ಆ ಸಾವಿನ ನಿಗೂಢತೆಯ ಸತ್ಯಾಂಶವನ್ನು ಬಹಿರಂಗಪಡಿಸುವುದೇ ಎಂಬುದನ್ನು ಕಾದು ನೋಡಬೇಕಿದೆ.