ಟೆಸ್ಟ್ ಕ್ರಿಕೆಟ್‌ಗೆ ರಹಾನೆ ಕ್ಯಾಪ್ಟನ್ ಆಗಲು ಸಕಾಲ
ವಿಶ್ಲೇಷಣೆ
ಬಿಷನ್ ಸಿಂಗ್‌ ಬೇಡಿ, ನಿವೃತ್ತ ಖ್ಯಾತ ಕ್ರಿಕೆಟಿಗ
ಆಸ್ಟ್ರೇಲಿಯಾದ ಗಾಬಾ ಮೈದಾನದಲ್ಲಿ ಮಂಗಳವಾರ ಸಂಜೆ ಭಾರತದ ತ್ರಿವರ್ಣ ಧ್ವಜ ಹಾರಾಡಿದ್ದನ್ನು ನೋಡಿ ಹೊಡೆದಕಿಕ್ ಇನ್ನೂ ಪೂರ್ತಿ ಇಳಿದಿಲ್ಲ. ಅಬ್ಬಾ, ಇದೊಂಥರಾ  ಆಗಿದೆ ಅಂತ ಕೂಡ ನನ್ನ ಹೆಂಡತಿಗೆ ಹೇಳಿದ್ದೆ!
ದೂರದ ದೇಶ. ಆಕ್ರಮಣಕಾರಿ ಪ್ರದೇಶ. ಆಸ್ಟ್ರೇಲಿಯಾ ಎಂಬ ಭದ್ರಕೋಟೆಯದು. ಆದರೆ, ಇಂದು ಆ ದೇಶ ಎಷ್ಟು ದೇಶೀಯವಾಗಿ ಹಾಗೂ ಅದೆಷ್ಟು ಭಾರತೀಯವಾಗಿ ಕಾಣಿಸುತ್ತಿದೆಯೆಂದರೆ, ಇನ್ನುಮುಂದೆ ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿ ಭಾರತೀಯನಿಗೂ ಅದು ಪ್ರವಾಸಿ ಆಕರ್ಷಣೆ ಯಾಗುವುದು ಗ್ಯಾರಂಟಿ. ಕ್ರಿಕೆಟ್ ಪ್ರೇಮಿಗಳು ತಮ್ಮ ಮಕ್ಕಳನ್ನು ಅಲ್ಲಿಗೆ ಕರೆದುಕೊಂಡು ಹೋಗಿ ‘ನೋಡು,ಇದನ್ನು ಫೀಲ್ ಮಾಡು, ಇಲ್ಲೇ ನಮ್ಮ ಕ್ರಿಕೆಟ್ ಕಲಿಗಳು ಗಾಯಗೊಂಡ ದೇಹ, ಮುರಿದ ಮೂಳ ಗಳನ್ನು ಹೊತ್ತುಕೊಂಡೇ ಅಸಾಮಾನ್ಯ ಸಾಹಸ ಪ್ರದರ್ಶಿಸಿ ಹಿಂದೆಂದೂ ಸಿಕ್ಕಿರದಿದ್ದ ಗೌರವ ಗಳಿಸಿಕೊಂಡರು’ ಎಂದು ಹೇಳುತ್ತಾರೆ.
ಆವತ್ತಿನ ಗೆಲುವಿನ ಪರಮಖುಷಿಯಿಂದ ಇನ್ನೂ ಸಾವರಿಸಿಕೊಳ್ಳುವುದಕ್ಕೂ ಮೊದಲೇ ನನ್ನ ಟ್ವೀಟರ್ ಹ್ಯಾಂಡಲ್ ಸ್ಫೋಟವಾಗಿತ್ತು. ಮಾಧ್ಯಮಗಳು ಎಲ್ಲೆಡೆ ಸುತ್ತಾಡಿ ಬ್ರಿಸ್ಬೇನ್ ರೋಮಾಂಚನವನ್ನು ಬಣ್ಣಿಸಲು ತಮ್ಮಿಂದ ಸಾಧ್ಯವಾದ ಅಷ್ಟೂ ಪ್ರಯತ್ನ ಮಾಡುತ್ತಿದ್ದವು. ಸೋಷಿಯಲ್ ಮೀಡಿಯಾಗಳು ಅದಕ್ಕಿಂತ ಒಂದು ಹೆಜ್ಜೆ ಮುಂದಿದ್ದವು. ಪ್ರತಿಯೊಬ್ಬ ಆಟಗಾರನ ಕುಟುಂಬದ ಸದಸ್ಯರ ಕುರಿತ ಮಾತಿಗಳನ್ನೂ ಅವು ಹೊರಗೆಳೆದು ಸಂಭ್ರಮಿಸಿದ್ದವು.
ಆದರೂ ನನಗೆ ಈ ಸಂಭ್ರಮದಲ್ಲಿ ಒಂದು ಸಂಗತಿ ಮಾತ್ರ ಅರ್ಥವಾಗಲಿಲ್ಲ. ಇಲ್ಲಿ ಆಟಗಾರರ ಹಿನ್ನೆಲೆಗೆ ಏಕೆ ಅಷ್ಟೆಲ್ಲಾ ಮಹತ್ವ ನೀಡಬೇಕು? ಏಕೆ ಅವರ ಕಷ್ಟದ ಕತೆಗಳನ್ನು ಎಲ್ಲರಿಗೂ ಒತ್ತಿ ಒತ್ತಿ ಹೇಳಬೇಕು? ಯಾರೋ ಒಬ್ಬ ಆಟಗಾರ ರಿಕ್ಷಾ ಡ್ರೈವರ್‌ನಮಗನಾಗಿದ್ದರೆ ಅದಕ್ಕೂ ಕ್ರಿಕೆಟ್‌ಗೂ ಏನು ಸಂಬಂಧ? ಆಟದ ಮೈದಾನದಲ್ಲಿ ಎಲ್ಲರೂ ಸಮಾನರು. ಹೀಗಾಗಿ ಆ ವಿಶೇಷಣಗಳು ಹಾಗೂ ಆಟಗಾರರನ್ನು ಹೊಗಳಲು ಬಳಸಿದ ಪದಗಳು ನನಗೆ ಕೆಸರಿನಂತೆ ಕಂಡವು.
ಯುವಕರು ಸಮಾನ ಮಾನದಂಡಗಳ ಮೂಲಕ ಪರಸ್ಪರ ಸ್ಪರ್ಧೆಯಲ್ಲಿ ಸೆಣಸುತ್ತಿರುವಾಗ ಅವರ ಬಗ್ಗೆ ಕನಿಕರ ವ್ಯಕ್ತಪಡಿಸುವ ಅಗತ್ಯವಾದರೂ ಏನಿದೆ? ಭಾರತೀಯ ಕ್ರಿಕೆಟ್ ತಂಡದಲ್ಲಿ ಆಡುವ ಅರ್ಹತೆ ಗಿಟ್ಟಿಸುವುದಕ್ಕಾಗಿ ಇವರು ಎಷ್ಟೆಲ್ಲಾ ಕಷ್ಟಪಟ್ಟಿದ್ದಾರೆಂಬುದನ್ನು ಎತ್ತಿ ಹೇಳಿದರೆ ಅದು ಬೇರೆಯವರಿಗೂ ಸೂರ್ತಿಯಾಗುತ್ತದೆಯೆಂದು ಜನರು ಭಾವಿಸಬಹುದು. ಆದರೆ ಸೋಷಿಯಲ್ ಮೀಡಿಯಾ ಹಾಗೂ ವಾಟ್ಸ್ ಆಪ್ ಫಾರ್ವರ್ಡ್ ಗಳಲ್ಲಿ ಇದು ಬಿಂಬಿತವಾಗುವ ರೀತಿಯೇ ಬೇರೆ.
‘ಇದು ಭಾರತೀಯ ಕ್ರಿಕೆಟ್‌ನ ಇತಿಹಾಸದಲ್ಲೇ ಅತಿದೊಡ್ಡ ಗೆಲುವು’ ಎಂಬ ವ್ಯಾಖ್ಯಾನಕ್ಕೂ ನನ್ನ ತಕರಾರಿದೆ. ಹೀಗೆ ಹೇಳಿದರೆ ಹಿಂದಿನ ಕೆಲ ಅದ್ಭುತ ಗೆಲುವುಗಳು ಕೇವಲ ಆ ಕ್ಷಣದ ಗೆಲುವುಗಳಾಗಿ ಮಹತ್ವ ಕಳೆದುಕೊಳ್ಳಬಹುದು. ನಾನಿದರ ಬಗ್ಗೆಸಾಕಷ್ಟು ಯೋಚಿಸಿದೆ. ಕೊನೆಗೆ, ಬಹಳ ಹಿಂದಿನ ಸಂಗತಿಗಳನ್ನೆಲ್ಲ ನೆನಪಿನ ಕೋಶದಲ್ಲಿ ಭದ್ರವಾಗಿ ಇಟ್ಟುಕೊಳ್ಳುವಂತೆ ಪ್ರಕೃತಿ ನಮ್ಮನ್ನು ರೂಪಿಸಿಲ್ಲವೆಂಬ ನಿರ್ಧಾರಕ್ಕೆ ಬಂದಿದ್ದೇನೆ.
ಕೇವಲ ಇತ್ತೀಚಿನ ನೆನಪುಗಳು ಮಾತ್ರ ನಮ್ಮಲ್ಲಿ ಜೀವಂತವಾಗಿರುತ್ತವೆ. ಅವು ಮಾತ್ರ ಆಗಾಗ ನಮಗೆ ಕಿಕ್ ನೀಡುತ್ತವೆ. ಹೀಗಾಗಿಗಾಬಾದ ಗೆಲುನಂತಹ ಸಂಭ್ರಮದ ಕ್ಷಣಗಳನ್ನು ಎಲ್ಲರೂ ಅದ್ಭುತವಾಗಿ ಸ್ವೀಕರಿಸಿ ಕುಣಿದಾಡುತ್ತಾರೆ. ಅದೇ ವೇಳೆ, ವರ್ತಮಾನದ ಸಂಭ್ರಮವನ್ನು ವೈಭವೀಕರಿಸುವ ಭರದಲ್ಲಿ ಹಳೆಯ ನೆನಪುಗಳು ಅಳಿಸಿಹೋಗಿ ಐತಿಹಾಸಿಕ ಕ್ಷಣಗಳು ಶಾಶ್ವತವಾಗಿ ನಮ್ಮ ನೆನಪಿನಿಂದ ಮರೆಯಾಗಿ ಬಿಡುತ್ತವೆ.
ವರ್ತಮಾನದ ಖುಷಿಯನ್ನು ಅನುಭವಿಸುವಾಗ ಉಂಟಾಗುವಾಗ ಅಪ್ಪಟ ಮನಶಾಸ್ತ್ರೀಯ ವಿದ್ಯಮಾನವಿದು.  ಈ ಅದ್ಭುತ ಗೆಲುವು ಕರೋನಾ ಮಹಾಮಾರಿಯ ಸಮಯದಲ್ಲಿ ಸಿಕ್ಕಿದ್ದು ಎಂಬುದು ಕೂಡ ಇದರ ಮಹತ್ವವನ್ನೂ ಸಂಭ್ರಮವನ್ನೂ ಹೆಚ್ಚಿಸಿದೆ. ಭಾರತ ದಲ್ಲಿ ಈ ಅವಧಿಯಲ್ಲಿ ನಾವು ಮನುಷ್ಯ- ವಿಕೃತ ವಿಪತ್ತುಗಳನ್ನೂ ಎದುರಿಸಬೇಕಾಗಿ ಬಂದಿತ್ತು. ಹೀಗಾಗಿ ಈ ಕ್ರಿಕೆಟ್ ಸರಣಿಯನ್ನು ಬೇಸರ ಹಾಗೂ  ಹತಾಶೆಯ ವಾತಾವರಣದ ನಡುವೆಯೇ ಆಡಲಾಗಿತ್ತು.
ಅದೃಷ್ಟವಶಾತ್ ಅಜಿಂಕ್ಯ ರಹಾನೆ ಮತ್ತವರ ಕಂಪನಿ ನಮ್ಮೆಲ್ಲರ ಬೇಸರದ ಚಹರೆಯಲ್ಲಿ ದೊಡ್ಡ ನಗು ಹಾಗೂ ಅಚ್ಚರಿ ಮೂಡಿಸಿತು. ಅದಕ್ಕಾಗಿ ನಾವು ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ವೈಯಕ್ತಿಕವಾಗಿ ನಾನಂತೂ ರಹಾನೆ ತನ್ನ ತಂಡದಲ್ಲಿಬರೀ ಗಾಯಗೊಂಡವರನ್ನೇ ಇರಿಸಿಕೊಂಡೂ ಕೂಡ ಅದ್ಭುತವಾದ ಮ್ಯಾಜಿಕ್ ಮಾಡಿದ್ದನ್ನು ನೋಡಿ ಬೋಲ್ಡ್ ಆಗಿದ್ದೇನೆ. ಕೈಲಿದ್ದ ಸ್ವಲ್ಪವೇ ಸಂಪನ್ಮೂಲ ಬಳಸಿಕೊಂಡು ಆತ ಪಂದ್ಯವನ್ನು ನಿಭಾಯಿಸಿದ ರೀತಿ ನನಗೆ ಟೈಗರ್ ಪಟೌಡಿಯನ್ನು ನೆನಪಿಸುತ್ತದೆ.
ಪಟೌಡಿ ಕ್ಯಾಪ್ಟನ್ ಆಗಿದ್ದ ಅಷ್ಟೂ ಸಮಯ ಭಾರತದ ಕ್ರಿಕೆಟ್ ತಂಡದಲ್ಲಿ ಎಲ್ಲದಕ್ಕೂ ಕೊರತೆಯಿತ್ತು. ಆದರೆ, ಅವರ ನಾಯಕತ್ವ ಭಾರತೀಯ ಕ್ರಿಕೆಟ್‌ಗೆ ಅದ್ಭುತ ತಿರುವು ನೀಡಿ ಹೊಸ ಕೈಕಾಲುಗಳನ್ನು ಕೊಟ್ಟಿತ್ತು. ನಮ್ಮ ದೇಶದ ಕ್ರಿಕೆಟ್‌ನಲ್ಲಿ ಭಾರತೀಯತೆಯನ್ನು ಹುಟ್ಟುಹಾಕಿದವರು, ಅದಕ್ಕೊಂದು ಆಕಾರ ಕೊಟ್ಟವರು ಟೈಗರ್ ಪಟೌಡಿ. ಸರ್ಕಲ್‌ನಲ್ಲಿ ಎಲ್ಲರೂಒಂದಾಗಿರುವುದರಲ್ಲಿರುವ ಥ್ರಿಲ್ಲನ್ನು ನಮ್ಮೆಲ್ಲರಿಗೂ ತೋರಿಸಿಕೊಟ್ಟ ಮೊದಲ ವ್ಯಕ್ತಿ. ನಿಮಗೆ ಗೊತ್ತಿರಲಿ, ಟೈಗರ್ ಪಟೌಡಿ ರಾಜಮನೆತನದಿಂದ ಬಂದವರು. ಅವರನ್ನು ಮೂಲೆಗೆ ತಳ್ಳಿದಾಗ ಈ ಪ್ರಭಾವವನ್ನು ಬಳಸಿ ಎದ್ದುಬರಬಹುದಿತ್ತು.
ಹಾಗೇನಾದರೂ ಮಾಡಿದ್ದರೆ ಅದು ಅವರ ವೃತ್ತಿಜೀವನವನ್ನೂ, ನಮ್ಮ ಅವಕಾಶಗಳನ್ನೂ ಬೇರೆ ರೀತಿಯಲ್ಲಿ ಹಾಳುಮಾಡು ತ್ತಿತ್ತು. ಆಗಿನ್ನೂ ನಮ್ಮ ದೇಶ ಪ್ರಜಾಪ್ರಭುತ್ವವನ್ನು ಅಪ್ಪಿಕೊಂಡು ಹೆಚ್ಚು ಸಮಯವಾಗಿರಲಿಲ್ಲ. ರಾಜ, ರಾಣಿಯರುಪುರಾಣಕ್ಕೂ, ಮಕ್ಕಳ ಆಟಕ್ಕೂ ಸೇರಿದ್ದರು. ಟೈಗರ್ ಯಾವತ್ತೂ ತಮ್ಮ ರಾಜಮನೆತನದ ಹಿನ್ನೆಲೆಯನ್ನು ಪ್ರದರ್ಶಿಸಲು ಹೋಗಲಿಲ್ಲ. ಕಷ್ಟಪಟ್ಟು ಕ್ರಿಕೆಟ್‌ನಲ್ಲಿ ಮೇಲೆ ಬಂದು, ನಿಸ್ವಾರ್ಥವಾಗಿ ಹಾಗೂ ಅಷ್ಟೇ ವಿಧೇಯರಾಗಿ, ತಮ್ಮೆಲ್ಲಾ ಶ್ರಮವನ್ನು ಧಾರೆಯೆರೆದು ಭಾರತೀಯ ಕ್ರಿಕೆಟ್ ತಂಡಕ್ಕೆ ಉತ್ತಮ ನಾಯಕತ್ವ ನೀಡಿದರು.
ರಹಾನೆಯಲ್ಲಿ ನನಗೆ ಈ ಎಲ್ಲಾ ಗುಣಗಳೂ ಕಾಣಿಸುತ್ತಿವೆ. ಈ ಪ್ರವಾಸದಲ್ಲಿ ನಾನು ರಹಾನೆಯನ್ನು ಇನ್ನೂ ಹತ್ತಿರದಿಂದ ಗಮನಿಸಿದ್ದೇನೆ. ಯಾವುದೇ ಕ್ಯಾಪ್ಟನ್‌ನ ಸಾಮರ್ಥ್ಯವಿರುವುದು ಬೌಲರ್‌ಗಳನ್ನು ಎಷ್ಟು ಚೆನ್ನಾಗಿ ಬಳಸಿಕೊಳ್ಳುತ್ತಾರೆ ಎಂಬುದರಲ್ಲಿ. ಇದರಲ್ಲಿ ರಹಾನೆ ಬಹಳ ಚಾಣಾಕ್ಷತನ ಮೆರೆದಿದ್ದಾರೆ. ಒಬ್ಬ ಕ್ಯಾಪ್ಟನ್‌ನ ಬೌಲಿಂಗ್ ಬದಲಾವಣೆ ಹಾಗೂಫೀಲ್ಡಿಂಗ್ ಪ್ಲೇಸ್‌ಮೆಂಟ್‌ನ ಸಾಮರ್ಥ್ಯವನ್ನು ಅಳೆಯಲು ಮೂರು ಟೆಸ್ಟ್ ಮ್ಯಾಚ್‌ಗಳು ಬೇಕಾದಷ್ಟಾಯಿತು.
ನಾನು ಎಷ್ಟೇ ಪ್ರಯತ್ನಿಸಿದರೂ ಅಥವಾ ನನ್ನಂತಹ ಆರಾಮ ಕುರ್ಚಿ ವಿಶ್ಲೇಷಕರು ಎಷ್ಟೇ ಹುಡುಕಿದರೂ ರಹಾನೆಯ ಒಂದೇ ಒಂದು ನಿರ್ಧಾರದಲ್ಲಿ ಕೊಂಕು ಹುಡುಕಲು ಸಾಧ್ಯವಾಗಲಿಲ್ಲ. ನನ್ನ ಅಭಿಪ್ರಾಯಗಳನ್ನು ಒಂದು ಕ್ಷಣ ಆಚೆಗಿಟ್ಟು, ಆಸ್ಟ್ರೇಲಿಯಾದ ನೆಲದಲ್ಲಿ ದೇಶಿ ಕ್ಯಾಪ್ಟನ್‌ಗಳನ್ನು ಸಾಮಾನ್ಯವಾಗಿ ಯಾವತ್ತೂ ಹೊಗಳದ ಇಯಾನ್ ಚಾಪೆಲ್‌ರ ಮಾತಿಗೆ ಒಮ್ಮೆ ಕಿವಿ ಕೊಡೋಣ.
ವಾಸ್ತವವಾಗಿ ಆಸ್ಟ್ರೇಲಿಯಾದ ಬಹುತೇಕ ಮಾಧ್ಯಮಗಳು ತಮ್ಮ ದೇಶಕ್ಕೆ ಬರುವ ದೇಶಿ ತಂಡಗಳ ನಾಯಕರನ್ನು ಮೆಚ್ಚಿಕೊಂಡು ಮಾತನಾಡುವುದು ತೀರಾ ಅಂದರೆ ತೀರಾ ಅಪರೂಪ. ಆದರೆ, ರಹಾನೆಗೆ ಇಯಾನ್ ಚಾಪೆಲ್ ಮತ್ತು ಆಸ್ಟ್ರೇಲಿಯಾದ ಅಷ್ಟೂಮುದ್ರಣ ಹಾಗೂ ಎಲೆಕ್ಟ್ರಾನಿಕ್ ಮಾಧ್ಯಮಗಳಿಂದ ಬಾಯ್ತುಂಬಾ ಹೊಗಳಿಕೆ ಸಿಕ್ಕಿತು. ವೈಯಕ್ತಿಕವಾಗಿ ನನಗೆ ಈ ಪ್ರವಾಸದಲ್ಲಿ ರಹಾನೆಯ ಕಣ್ಗಾವಲಿನಲ್ಲಿ ಭಾರತದ ಬೌಲರ್‌ಗಳು ಪ್ರವರ್ಧಮಾನಕ್ಕೆ ಬಂದಿದ್ದು ಬಹಳ ಮುಖ್ಯವಾದ ಸಂಗತಿಯಾಗಿಕಾಣಿಸುತ್ತದೆ.
ರವಿಚಂದ್ರನ್ ಅಶ್ವಿನ್ ಸುಲಭಕ್ಕೆ ತನ್ನ ಬೌಲಿಂಗ್‌ಗೆ ಅಥವಾ ವಿಕೆಟ್ ಹಿಂದಿರುವ ವ್ಯಕ್ತಿಯ ಕೈಚಳಕಕ್ಕೆ ಸಮಾಧಾನ ಪಟ್ಟುಕೊಳ್ಳುವ ವ್ಯಕ್ತಿಯಲ್ಲ. ಆದರೆ, ಈ ಬಾರಿ ಆತನ ಮುಖದಲ್ಲಿ ತೃಪ್ತಿಯಿತ್ತು. ತನ್ನ ಬಗ್ಗೆ ಹಾಗೂ ಕ್ಯಾಪ್ಟನ್ ಬಗ್ಗೆ ಆತ ತೃಪ್ತಿಗೊಂಡಿದ್ದರು. ಫೈನಲ್ ಪಂದ್ಯದಲ್ಲಿ ತಾನು ಆಡುತ್ತಿಲ್ಲದಿದ್ದರೂ ಮೈದಾನದಲ್ಲಿ ನಡೆಯುತ್ತಿದ್ದ ಆಟದಲ್ಲಿ ಆತಎಷ್ಟೊಂದು ಮುಳುಗಿ ಹೋಗಿದ್ದ ಎಂಬುದನ್ನು ನೋಡಿದರೆ ನನ್ನ ಮಾತು ಅರ್ಥವಾಗುತ್ತದೆ.
ಬಹಳ ವಿಮರ್ಶಾತ್ಮಕವಾಗಿ ನೋಡುವವರಿಗೂ ಕ್ಯಾಪ್ಟನ್ ರಹಾನೆಯ ಅಚಲಿತ, ಗೊಂದಲಗಳಿಲ್ಲದ ಹಾಗೂ ಶಾಂತಚಿತ್ತ ಖುಷಿ ಕೊಡುವಂತಿತ್ತು. ಅವರ ವ್ಯಕ್ತಿತ್ವಕ್ಕೆ ನಾನು ಸಂಪೂರ್ಣ ಸೋತಿದ್ದು ಟೆಸ್ಟ್ ಪಂದ್ಯದ ಕೊನೆಯಲ್ಲಿ. ಫಳ ಫಳ ಹೊಳೆಯುವ ಬಾರ್ಡರ್ ಗವಾಸ್ಕರ್ ಟ್ರೋಫಿಯನ್ನು ಅವರು ಟಿ.ನಟರಾಜನ್ ಎಂಬ ಮೊದಲ ಬಾರಿ ಟೆಸ್ಟ್ ಟೂರ್‌ಗೆ ಬಂದ ಯುವ ಆಟಗಾರನ ಕೈಗಿತ್ತರು. ಕ್ರಿಕೆಟ್ ದೇವರುಗಳು ಬಹುಶಃ ಇದನ್ನು ಸಂತೋಷದ ಕಣ್ಣುಗಳಿಂದ ನೋಡಿರಬಹುದು.
ನನ್ನ ಪಾಲಿಗಂತೂ ಇದು ಪ್ರಾಮಾಣಿಕ ಹಾಗೂ ಸರಳ ನಾಯಕತ್ವದ ಪರಾಕಾಷ್ಠೆ. ಆಸ್ಟ್ರೇಲಿಯಾದ ಪ್ರಸಿದ್ಧ ಕ್ರಿಕೆಟಿಗ ರಿಚಿ ಬೆನಾಡ್, ‘ನಾಯಕತ್ವವೆಂದರೆ೯೦ಪರ್ಸೆಂಟ್ ಅದೃಷ್ಟ ಮತ್ತು೧೦ಪರ್ಸೆಂಟ್ ಬುದ್ಧಿವಂತಿಕೆ. ಆದರೆ, ಆ೧೦ಪರ್ಸೆಂಟ್ಕೂಡ ಜಾಣತನವಿಲ್ಲದೆ ಅದನ್ನು ಪ್ರಯತ್ನಿಸಬೇಡಿ’ ಎಂದೊಮ್ಮೆ ಹೇಳಿದ್ದರು. ರಹಾನೆಯಲ್ಲಿ ಇವೆರಡೂ ಇವೆ. ಆದರೆ ಇವುಗಳ ಅನುಪಾತ ಬೇರೆಯಿದೆ.
ರಹಾನೆಯಲ್ಲಿ೫೦ಪರ್ಸೆಂಟ್ ಅದೃಷ್ಟ ಮತ್ತು೫೦ಪರ್ಸೆಂಟ್ ಜಾಣ್ಮೆಯಿದೆ. ರಹಾನೆ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದನಾಯಕನಾಗಲಿ ಎಂದು ಪರೋಕ್ಷವಾಗಿ ಒತ್ತಾಯಿಸುವುದಕ್ಕೆ ನಾನು ಇದನ್ನೆಲ್ಲ ಹೇಳುತ್ತಿಲ್ಲ. ವಿರಾಟ್ ಕೊಯ್ಲಿಯ ಬ್ಯಾಟಿಂಗ್ ಕರಿಯರ್‌ನಿಂದ ದೇಶದ ಕ್ರಿಕೆಟ್‌ಗೆ ಇನ್ನಷ್ಟು ಪ್ರಯೋಜವಾಗಲಿ ಎಂದು ಪ್ರಾಮಾಣಿಕವಾಗಿ ಬಯಸುವವರಲ್ಲಿ ನಾನೂ ಒಬ್ಬ.ಕ್ರಿಕೆಟ್‌ನಲ್ಲಿ ಸಾಮೂಹಿಕ ಜವಾಬ್ದಾರಿಗೆ ಬಹಳ ಮಹತ್ವವಿದೆ.
ಇದು ಕಾರ್ಪೊರೇಟ್ ಅಥವಾ ರಾಜಕೀಯ ಕ್ಷೇತ್ರದಂತಲ್ಲ. ಈ ಕ್ಷೇತ್ರಗಳಲ್ಲಿ ಎಲ್ಲರೂ ವೈಯಕ್ತಿಕ ಬೆಳವಣಿಗೆಗೇ ಮಹತ್ವ ನೀಡುತ್ತಾರೆ. ಆದರೆ, ಕ್ರೀಡೆಯಲ್ಲಿ, ಅದರಲ್ಲೂ ಕ್ರಿಕೆಟ್‌ನಲ್ಲಿ ಕ್ಯಾಪ್ಟನ್‌ಗಳು ತಮ್ಮ ತಂಡದಿಂದಾಗಿಯೇ ಈಜಿ ದಡ ಸೇರುತ್ತಾರೆಅಥವಾ ಮುಳುಗುತ್ತಾರೆ. ನನಗೆ ಇಲ್ಲೊಂದು ತುಂಟ ಯೋಚನೆ ಬರುತ್ತಿದೆ. ಭಾರತಕ್ಕೆ ದೀರ್ಘಾವಧಿಯಲ್ಲಿ ಗ್ರೇಟ್ ಬ್ಯಾಟ್ಸ್‌ಮನ್ವಿರಾಟ್ ಕೊಯ್ಲಿ ಬೇಕೋ ಅಥವಾ ಸಾಧಾರಣ ಕ್ಯಾಪ್ಟನ್ ವಿರಾಟ್ ಕ್ಲೊಯ್ಲಿಬೇಕೋ? ಇತ್ತೀಚಿನ ಘಟನೆಗಳು ನಮಗೆ ಫಟಾಫಟ್ ಉತ್ತರ ನೀಡುತ್ತಿವೆ.
ಟೆಸ್ಟ್ ಕ್ರಿಕೆಟ್‌ನ ನಾಯಕತ್ವವನ್ನು ರಹಾನೆ ವಹಿಸಿಕೊಂಡು, ವೈಟ್ ಬಾಲ್ ಕ್ರಿಕೆಟ್‌ನ ಹೊಣೆಯನ್ನು ಕೊಯ್ಲಿ ಹಾಗೂ ರೋಹಿತ್ ಶರ್ಮಾ ಹಂಚಿಕೊಳ್ಳುವುದು ಒಳ್ಳೆಯದು. ಆದರೆ, ಸದ್ಯಕ್ಕೆ ಯಾವೊಬ್ಬ ಆಯ್ಕೆ ದಾರರೂ ಇದನ್ನು ಸಾಧ್ಯವಾಗಿಸುವ ಹೊಣೆತೆಗೆದುಕೊಳ್ಳುವುದಿಲ್ಲ ಎಂಬುದು ನನಗೆ ಗೊತ್ತು. ಬಹುಶಃ ಕೊಯ್ಲಿಯೇ ಭಾರತದಲ್ಲಿ ನಡೆಯುವ ಇಂಗ್ಲೆಂಡ್ ವಿರುದ್ಧದ ಸರಣಿಯ ವೇಳೆ ರಹಾನೆಗೆ ನಾಯಕತ್ವ ಬಿಟ್ಟುಕೊಡುವುದು ಒಳ್ಳೆಯ ಮಾರ್ಗ.
ಭಾರತೀಯ ಕ್ರಿಕೆಟ್‌ನ ಭವಿಷ್ಯವನ್ನು ವಿಸ್ತಾರವಾದ ಕ್ಯಾನ್ವಾಸ್‌ನಲ್ಲಿ ನೋಡಿದರೆ ಅಲ್ಲಿ ದ್ವೇಷ, ಈರ್ಷ್ಯೆ ಯಂತಹ ಯಾವ ನೆಗೆಟಿವ್‌ಗಳಿಗೂ ಜಾಗವಿರುವುದಿಲ್ಲ. ಬರೆಯದೆ ಉಳಿದಿದ್ದು: ರಹಾನೆಗೆ ಭಾರತೀಯ ಟೆಸ್ಟ್ ಕ್ರಿಕೆಟ್ ತಂಡದ ನಾಯಕತ್ವ ಸಿಕ್ಕರೆಅವರೇನಾದರೂ ಮಹಾನ್ ಪ್ರಮಾದ ಮಾಡಿಬಿಡಬಹುದು ಎಂದು ನನಗೆ ಒಂದೇ ಒಂದು ಕ್ಷಣಕ್ಕೂ ಅನ್ನಿಸುವುದಿಲ್ಲ. ಸುದೀರ್ಘ ಕಾಲ ಕ್ರಿಕೆಟ್ ಆಡಿದ ಅನುಭವದಲ್ಲಿ ನಾನು ಆತ್ಮಶ್ವಾಸದಿಂದ ಹೇಳುವುದೇನೆಂದರೆ, ಮದ ತಲೆಗೇರಿದ ವ್ಯಕ್ತಿಗೆ ಕುಟುಕ್ಕನೆಮೊಟಕಿ ನೆಲಕ್ಕಿಳಿಸುವ ಚಾಕಚಕ್ಯತೆ ಕ್ರಿಕೆಟ್‌ಗಿದೆ.
ರಹಾನೆಗೆ ಅಂತಹ ಗತಿ ಬರುವ ಸಾಧ್ಯತೆಗಳು ತೀರಾ ಕಡಿಮೆ. ಏಕೆಂದರೆ ಆತನಿಗೆ ಯಾವ ರೀತಿಯಲ್ಲೂ ಅಂತಹ ದರ್ಪವಿರುವಂತೆ ಕಾಣಿಸುತ್ತಿಲ್ಲ.