ಜನಾಂಗೀಯ ನಿಂದನೆ ವಿಶ್ವಕ್ಕೆ ಅಂಟಿದ ಬಹುದೊಡ್ಡ ಕಳಂಕ
ಅಭಿವ್ಯಕ್ತಿ
ಚಂದ್ರಶೇಖರ ಬೇರಿಕೆ
ಅದು ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿದ್ದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ – ಗಾವಸ್ಕರ್ ಟ್ರೋಫಿ ಸರಣಿಯ 3ನೇ ಟೆಸ್ಟ್ ಪಂದ್ಯದ 3ನೇ ದಿನ. ಭಾರತದ ಭರವಸೆಯ ಬೌಲರ್‌ಗಳಾದ ಜಸ್‌ಪ್ರಿತ್ ಬುಮ್ರಾ ಮತ್ತು ಮೊಹಮ್ಮದ್ಸಿರಾಜ್ ಬೌಂಡರಿ ಗೆರೆಯತ್ತ ಫೀಲ್ಡಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಮೊಹಮ್ಮದ್ ಸಿರಾಜ್‌ನನ್ನು ಗುರಿಯಾಗಿಸಿಕೊಂಡು ಆಸ್ಟ್ರೇಲಿಯಾದ ಕೆಲವು ಪ್ರೇಕ್ಷಕರಿಂದ ‘ಕಂದು ನಾಯಿ’ ಮತ್ತು ‘ದೊಡ್ಡ ಕೋತಿ’ ಎಂಬ ನಿಂದನಾತ್ಮಕ ಶಬ್ದಗಳು ತೂರಿ ಬರುತ್ತದೆ.
ಜಸ್‌ಪ್ರಿತ್ ಬುಮ್ರಾನೂ ನಿಂದನೆಗಳನ್ನು ಎದುರಿಸುತ್ತಾರೆ. ಈ ವಿಚಾರವನ್ನು ಮೊಹಮ್ಮದ್ ಸಿರಾಜ್ ಕೂಡಲೇ ಭಾರತ ತಂಡದ ನಾಯಕ ಅಜಿಂಕ್ಯ ರಹಾನೆ ಗಮನಕ್ಕೆ ತಂದು ಸ್ಕ್ವೇರ್ ಲೆಗ್ ಅಂಪೈರ್ ಗೆ ಜನಾಂಗೀಯ ನಿಂದನೆಯಡಿ ದೂರು ನೀಡುತ್ತಾರೆ.ತಕ್ಷಣ ಆಸ್ಟ್ರೇಲಿಯಾದ ಭದ್ರತಾ ಸಿಬ್ಬಂದಿಗಳು ನಿಂದನೆಯಲ್ಲಿ ತೊಡಗಿದ್ದ 6 ಮಂದಿ ಪ್ರೇಕ್ಷಕರನ್ನು ಮೈದಾನದಿಂದ ಹೊರ ಗಟ್ಟುತ್ತಾರೆ.
ಮರುದಿನ 4ನೇ ದಿನದಾಟದಲ್ಲೂ ಆಸ್ಟ್ರೇಲಿಯಾ ಪ್ರೇಕ್ಷಕರಿಂದ ನಿಂದನೆಗಳು ಪುನರಾವರ್ತನೆಯಾಗುತ್ತದೆ. ಭಾರತ ಈ ಘಟನೆ ಯನ್ನು ತೀವ್ರವಾಗಿ ಖಂಡಿಸುತ್ತದೆ. ಕ್ರಿಕೆಟ್ ಆಸ್ಟ್ರೇಲಿಯಾ ಈ ಘಟನೆಯ ಬಗ್ಗೆ ಭಾರತದ ಕ್ಷಮೆಯಾಚಿಸಿ ಸೂಕ್ತ ಕ್ರಮದ ಭರವಸೆನೀಡುತ್ತದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಈ ಘಟನೆಯನ್ನು ಗಂಭೀರವಾಗಿ ಖಂಡಿಸಿ ‘ವರ್ಣಭೇದ ನೀತಿ ನಿಷೇಧವು ನಮ್ಮ ನೀತಿ ಸಂಹಿತೆಯ ಪ್ರಮುಖ ಭಾಗವಾಗಿದ್ದು, ಈ ಬಗ್ಗೆ ಕಟ್ಟುನಿಟ್ಟಾದ ನಿಯಮವೂ ಐಸಿಸಿ ಯಲ್ಲಿದೆ’ ಎಂದು ತಿಳಿಸುತ್ತಾ, ಘಟನೆ ಬಗ್ಗೆ ತೆಗೆದು ಕೊಂಡಿರುವ ಕ್ರಮದ ಬಗ್ಗೆ ವರದಿ ನೀಡುವಂತೆ ಕ್ರಿಕೆಟ್ ಆಸ್ಟ್ರೇಲಿಯಾಕ್ಕೆ ಸೂಚಿಸುತ್ತದೆ.
ಹಾಲಿ ಮತ್ತು ಮಾಜಿ ಕ್ರಿಕೆಟ್ ಆಟಗಾರರು, ಕ್ರೀಡಾ ಪ್ರೇಮಿಗಳು ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನೇಕ ಖಂಡನೆಗಳುವ್ಯಕ್ತವಾಗುತ್ತದೆ. ಸಿಡ್ನಿಯಲ್ಲಿ ಜನಾಂಗೀಯ ನಿಂದನೆಗೆ ಗುರಿಯಾಗಿದ್ದ ಮೊಹಮದ್ ಸಿರಾಜ್‌ಗೆ ಬ್ರಿಸ್ಬೇನ್‌ನಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದಲ್ಲೂ ಆತಿಥೇಯ ಆಸ್ಟ್ರೇಲಿಯಾದ ಪ್ರೇಕ್ಷಕರು ‘ಗ್ರಬ್’ (ಕೀಟ) ಎಂದು ನಿಂದಿಸಿದ್ದನ್ನು ಆಸ್ಟ್ರೇಲಿಯಾ ಪತ್ರಿಕೆ ವರದಿ ಮಾಡುತ್ತದೆ.
ವರ್ಗ ಮತ್ತು ವರ್ಣವ್ಯವಸ್ಥೆಯಡಿಯಲ್ಲಿನ ತಾರತಮ್ಯವು ಬ್ರಿಟಿಷರ ಕಾಲದಿಂದಲೂ ನಡೆದುಕೊಂಡು ಬಂದವುಗಳಾಗಿದ್ದು, ಇದು ವಿಶ್ವಕ್ಕೆ ಅಂಟಿದ ಬಹುದೊಡ್ಡ ಕಳಂಕ. ಜನಾಂಗೀಯ ನಿಂದನೆ, ವರ್ಣಬೇಧ ತಾರತಮ್ಯ ಎಂಬುದು ಒಂದು ನಿರ್ದಿಷ್ಟ ಜನಾಂಗ, ವ್ಯಕ್ತಿಯ ಧರ್ಮ, ಬಣ್ಣ, ಜಾತಿ, ದೇಶ, ಭಾಷೆ, ಸಂಸ್ಕೃತಿಯ ಅವಹೇಳನವಾಗಿದೆ. ಇವುಗಳ ಆಧಾರದಲ್ಲಿ ವ್ಯಕ್ತಿ – ವ್ಯಕ್ತಿಗಳನ್ನುನಿಂದಿಸುವುದು ಅಥವಾ ಹೀಯಾಳಿಸುವುದು ಒಂದು ವ್ಯಸನವಾಗಿದೆ. ಆಧುನಿಕತೆಯೆಡೆಗಿನ ಇಪ್ಪತ್ತೊಂದನೆಯ ಶತಮಾನದಲ್ಲೂ ಜಗತ್ತಿನಲ್ಲಿ ಕೆಲವರ ಮನಸ್ಥಿತಿ, ಪೂರ್ವಾಗ್ರಹ ಪೀಡೆ ಬದಲಾಗಿಲ್ಲ ಮತ್ತು ಈ ಪಿಡುಗಿಗೆ ಸಂಪೂರ್ಣ ಮುಕ್ತಿ ಸಿಕ್ಕಿಲ್ಲ ಎನ್ನುವುದು ದುರದೃಷ್ಟಕರ.
ಅದು ಕ್ರೀಡೆಗೂ ವಿಸ್ತರಿಸಿದ್ದು, ಇಂತಹ ಕುಚೇಷ್ಟೆಗಳು ಕೇವಲ ಕ್ರಿಕೆಟ್ ಪಂದ್ಯದಲ್ಲಿ ಮಾತ್ರ ಕಾಣಬರುವಂತದ್ದು ಅಲ್ಲ, ಹಾಗೆಯೇ ಕ್ರೀಡೆಗೆ ಹೊಸತೂ ಅಲ್ಲ. ಕ್ರೀಡಾ ಜಗತ್ತಿನ ದೊಡ್ಡ ಹಬ್ಬ ಒಲಿಂಪಿಕ್ಸ್‌ನಲ್ಲಿಯೂ ಇಂತಹ ಘಟನೆಗಳು ನಡೆಯುತ್ತಿರುವುದು ಖೇದಕರ ಸಂಗತಿ. ಫುಟ್  ಬಾಲ್‌ನಲ್ಲಂತೂ ಹೆಚ್ಚಿನ ಪ್ರಕರಣಗಳು ದಾಖಲಾಗಿದ್ದು, ಕ್ರೀಡಾ ಸಭ್ಯತೆಯನ್ನು ಮೀರಿದ ವರ್ತನೆ ಯಾಗಿದೆ.
ಇಂತಹ ಘಟನೆಗಳು ಕ್ರೀಡಾ ಮನೋಭಾವಕ್ಕೆ ವಿರುದ್ಧ ವಾಗಿದೆ ಮತ್ತು ಧಕ್ಕೆ ತರುವಂತದ್ದಾಗಿದೆ. ಸ್ಲೆಡ್ಜಿಂಗ್ ಮತ್ತು ಅದರ ಮುಂದುವರಿದ ಭಾಗವಾಗಿ ಮಾತಿನ ಚಕಮಕಿಗಳು,  ದೈಹಿಕ ತಿಕ್ಕಾಟಗಳು ಆಟಗಾರರ ಮಧ್ಯೆ ಸಾಮಾನ್ಯ.  ಆದರೆ ಕ್ರೀಡಾ ವಲಯದಲ್ಲಿ ಜನಾಂಗೀಯ ನಿಂದನೆ ಪ್ರಕರಣಗಳು ಈಗ ಮೇಳೈಸುತ್ತಿದೆ. ಇದು ಕ್ರಿಕೆಟ್ ಆಟದಲ್ಲಿ ಸಾಮಾನ್ಯ ಗಿದ್ದು, ಇಂತಹ ಘಟನೆಗೆ ಹಲವು ಆಟಗಾರರು ಗುರಿಯಾಗಿರುತ್ತಾರೆ.
2006ರಲ್ಲಿ ದಕ್ಷಿಣ ಆಫ್ರಿಕಾದ ಕ್ರಿಕೆಟಿಗ ಹಾಶೀಂ ಆಮ್ಲಾ ಅವರನ್ನು ಕ್ರಿಕೆಟ್ ವೀಕ್ಷಕ ವಿವರಣೆಗಾರ, ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಡೀನ್ ಜೋನ್ಸ್ ‘ಭಯೋತ್ಪಾದಕ’ ಎಂದು ವ್ಯಂಗ್ಯವಾಡಿದ್ದರು. ಇದಕ್ಕಾಗಿ ಡೀನ್ ಜೋನ್ಸ್ ಅವರನ್ನು ಕ್ರಿಕೆಟ್ ವೀಕ್ಷಕವಿವರಣೆಗಾರ ಹುದ್ದೆಯಿಂದ ಅಮಾನತು ಮಾಡಲಾಗಿತ್ತು.2014ರಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲೂ ಜನಾಂಗೀಯ ನಿಂದನೆ ವರದಿಯಾಗಿದ್ದು, ಟೂರ್ನಿಯಲ್ಲಿ ಆಡುವಾಗ ನನ್ನನ್ನು ‘ಕಾಲೂ’ ಎಂದು ನನ್ನ ಮೈಬಣ್ಣವನ್ನು ವ್ಯಂಗ್ಯ ಮಾಡಿದ್ದರು ಎಂದು ಸನ್‌ರೈಸರ‍್ಸ್ ಹೈದರಾಬಾದ್ ತಂಡದಲ್ಲಿ ಆಡುತ್ತಿದ್ದ ವೆಸ್ಟ್ ಇಂಡೀಸ್ ಆಟಗಾರ ಡಾರೆನ್  ಬಹಿರಂಗಪಡಿಸಿದ್ದರು.
ಜನಾಂಗೀಯ ನಿಂದನೆಯ ವಿಚಾರದಲ್ಲಿ ಅವಾಸ್ತವಿಕ ಆರೋಪಗಳೂ ಕೇಳಿ ಬರುತ್ತಿದೆ. 2008ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಇದೇ ಸಿಡ್ನಿ ಮೈದಾನದ ಪಂದ್ಯದಲ್ಲಿನ ‘ಮಂಕಿಗೇಟ್’ ಪ್ರಕರಣ ನಡೆದಿದ್ದು ಇದಕ್ಕೆ ನಿದರ್ಶನ. ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಮತ್ತು ಹರ್ಭಜನ್ ಸಿಂಗ್ ಆಡುತ್ತಿದ್ದ ಸಂದರ್ಭದಲ್ಲಿ ಬ್ರೆಟ್ ಲೀಯವರ ಉತ್ತಮ ಯಾರ್ಕರ್ ಎಸೆತವನ್ನು ಎದುರಿಸಿದ ಹರ್ಭಜನ್ ಸಿಂಗ್ ಅವರು ಬ್ರೆಟ್ ಲೀ ಬಳಿ ಬಂದು ಪ್ರಶಂಸಿದ್ದು ಬ್ರೆಟ್ ಲೀಯ ಸಹ ಆಟಗಾರ ಆಂಡ್ರೂಸೈಮಂಡ್ಸ್‌ಗೆ ಅಪಥ್ಯವಾಯಿತು. ಹರ್ಭಜನ್ ಸಿಂಗ್ ಹತ್ತಿರ ಬಂದ ಸೈಮಂಡ್ಸ್ ‘ನಮ್ಮ ತಂಡದಲ್ಲಿ ನಿನಗೆ ಯಾರೂ ಸ್ನೇಹಿತರಿಲ್ಲ’ ಎಂದು ರೇಗಿಸಿದರು. ಇದಕ್ಕೆ ಹರ್ಭಜನ್ ಸಿಂಗ್ ಕೂಡಾ ಖಾರವಾಗಿ ಪ್ರತ್ಯುತ್ತರ ನೀಡಿದ್ದರು.
ಹರ್ಭಜನ್ ಸಿಂಗ್ ಪ್ರತ್ಯುತ್ತರವನ್ನು ಆಸ್ಟ್ರೇಲಿಯನ್ನರು ಜನಾಂಗೀಯ ನಿಂದನೆ ಎಂದು ಅರ್ಥೈಸಿಕೊಂಡು ದೊಡ್ಡ ರಾದ್ಧಾಂತ ಮಾಡಿ ಆಂಡ್ರೂ ಸೈಮಂಡ್ಸ್‌ರವರನ್ನು ಹರ್ಭಜನ್ ಸಿಂಗ್ ‘ಮಂಕಿ’ ಎಂದು ಕರೆದಿರುವುದಾಗಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಮಧ್ಯ ಪ್ರವೇಶಿಸಿದ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಈ ಪ್ರಕರಣವನ್ನು ವಿಚಾರಣೆಗೆ ಒಳಪಡಿಸಿ ಪರಿಶೀಲಿಸಿದಾಗ ಬೆಳಕಿಗೆಬಂದಿದ್ದು ಏನೆಂದರೆ ಹರ್ಭಜನ್ ಸಿಂಗ್ ಪಂಜಾಬಿ ಭಾಷೆಯಲ್ಲಿ ‘ತೇರಿ ಮಾ ಕಿ’ ಎಂದಿದ್ದನ್ನು ಆಂಡ್ರೂ ಸೈಮಂಡ್ಸ್‘ಮಂಕಿ’ ಎಂದು ಅರ್ಥೈಸಿಕೊಂಡಿದ್ದರು.
ವರ್ಣಬೇಧ ನೀತಿಯ ಕಾರಣಕ್ಕಾಗಿ ದಕ್ಷಿಣ ಆಫ್ರಿಕಾ ತಂಡವನ್ನು 1920ರಿಂದ21ವರ್ಷಗಳ ಕಾಲ ಕ್ರಿಕೆಟ್‌ನಿಂದ ನಿಷೇಧಿಸ ಲಾಗಿತ್ತು. ಅಲ್ಲಿನ ಸರಕಾರದ ವರ್ಣಬೇಧ ನೀತಿ ಯಿಂದ ಕೂಡಿದ ನಿಯಮಗಳ ಪ್ರಕಾರ ಆ ದೇಶದ ತಂಡ ವನ್ನು ಶ್ವೇತವರ್ಣೀಯ ದೇಶ (ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್)ಗಳ ವಿರುದ್ಧ ಮಾತ್ರ ಆಡಲು ಅವಕಾಶ ನೀಡಲಾಯಿತು. ಅಲ್ಲದೇ, ಎದುರಾಳಿ ತಂಡ ದಲ್ಲಿ ಶ್ವೇತವರ್ಣೀಯ ಆಟಗಾರರು ಮಾತ್ರ ಇರತಕ್ಕದ್ದು ಎಂದು ಷರತ್ತು ವಿಧಿಸ ಲಾಗಿತ್ತು. ಇದಕ್ಕೆ ವ್ಯಾಪಕ ಅಂತಾರಾಷ್ಟ್ರೀಯ ಖಂಡನೆಗಳು ಮತ್ತು ಇದರ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಡ ಹೆಚ್ಚಾಗಿ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡಕ್ಕೆ ದೀರ್ಘಾವಧಿ ನಿಷೇಧ ಹೇರಿದ್ದು ಗಮನಾರ್ಹ.
ವರ್ಣಬೇಧ ನೀತಿ ಹೆಚ್ಚಾಗಿದ್ದ ದಕ್ಷಿಣ ಆಫ್ರಿಕಾದ ಕ್ರೀಡಾ ತಂಡಗಳಲ್ಲಿ ಕೇವಲ ಶ್ವೇತವರ್ಣೀಯರೇ ಆದ್ಯತೆ ಪಡೆಯುತ್ತಿದ್ದರು. ಇದು ಹೀಗೆಯೇ ಮುಂದುವರಿದರೆ ತಮ್ಮ ದೇಶದಲ್ಲಿ ಕ್ರೀಡೆ ಬೆಳೆಯುವುದಿಲ್ಲ ಎಂಬುದನ್ನು ಮನಗಂಡ ದಕ್ಷಿಣ ಆಫ್ರಿಕಾ ಸೂಕ್ತ ಕಾನೂನು ರೂಪಿಸುವುದರ ಮೂಲಕ ಇದಕ್ಕೊಂದು ಪರಿಹಾರ ಕಂಡುಕೊಂಡಿತ್ತು. ಅದರಂತೆ ಆ ದೇಶದ ರಾಷ್ಟ್ರೀಯ ಕ್ರೀಡಾ ತಂಡಕ್ಕೆ ಸದಸ್ಯರನ್ನು ಆಯ್ಕೆ ಮಾಡುವಾಗ ಶ್ವೇತವರ್ಣೀಯರು ಮತ್ತು ಕೃಷ್ಣವರ್ಣೀಯರು ಸಮಾನಾವಕಾಶ ಪಡೆಯಬೇಕು ಎಂದು ಕೋಟಾ ವ್ಯವಸ್ಥೆಯನ್ನು ಜಾರಿ ಮಾಡಿತ್ತು.
ಇದರಿಂದಾಗಿ ಆ ದೇಶದಲ್ಲಿ ಇತ್ತೀಚೆಗೆ ಪ್ರತಿಭಾನ್ವಿತ ಕ್ರೀಡಾಪಟುಗಳು ಬೆಳಕಿಗೆ ಬರುವಂತಾಯಿತು. ಪ್ರೇಕ್ಷಕರ ಅತಿರೇಕದ ವರ್ತನೆಗಳು ಮತ್ತು ಕ್ರೀಡಾಪಟು ಗಳ ನಡುವಿನ ಅನಾರೋಗ್ಯಕರ ಘಟನೆಗಳು ಸಭ್ಯರ ಆಟ ಎಂದೇ ಗುರುತಿಸಿಕೊಂಡಿರುವ ಕ್ರಿಕೆಟ್‌ನ ಘನತೆಗೆ ಕುಂದುಂಟು ಮಾಡುತ್ತಿದೆ. ಆಟ ದೇಶ – ದೇಶಗಳನ್ನು ಬೆಸೆಯಬೇಕೇ ಹೊರತು ದೇಶಗಳ ಮಧ್ಯೆ ಕಂದಕ ಸೃಷ್ಟಿಸುವುದಕ್ಕಲ್ಲ.
ವರ್ಣಬೇಧ ನೀತಿಯ ವಿರುದ್ಧ ಹೋರಾಡಿದ ದಕ್ಷಿಣ ಆಫ್ರಿಕಾದ ನೆಲ್ಸನ್ ಮಂಡೇಲಾ ‘ಕ್ರೀಡೆಗೆ ಜಗತ್ತನ್ನು ಬದಲಾಯಿಸುವ ತಾಕತ್ತಿದೆ. ಏಕಕಾಲಕ್ಕೆ ಹಲವರಿಗೆ ಸ್ಫೂರ್ತಿ  ತುಂಬುವ ಶಕ್ತಿ ಕ್ರೀಡೆಗೆ ಮಾತ್ರ ಇದೆ ಯುವಜನಾಂಗದೊಂದಿಗೆ ಯುವಜನತೆಯ ಭಾಷೆಯಲ್ಲಿಯೇ ಸಂವಹನ ಮಾಡುವ ಗುಣ ಕ್ರೀಡೆಗೆ ಇದೆ’  ಎಂದು ಹೇಳಿದ್ದರು.
ಸಿಡ್ನಿಯಲ್ಲಿ ಮೊನ್ನೆ ನಡೆದ ಘಟನೆಯನ್ನು ಖಂಡಿಸುವ ಸಲುವಾಗಿ ಕೃಷ್ಣಕುಮಾರ್ ಎಂಬ ಭಾರತದ ಕ್ರೀಡಾಭಿಮಾನಿ  ಕೆಲವೊಂದು ಪೇಪರ್ ಬರಹಗಳಾದ ‘ರಿವರ್ಲಿ ಈಸ್ ಗುಡ್, ರೇಸಿಸಂ ನಾಟ್’, ‘ನೋ ರೇಸಿಸಂ ಮೇಟ್’, ‘ಬ್ರೌನ್ ಇನ್‌ಕ್ಲೂಸನ್ ಮ್ಯಾಟರ‍್ಸ್’ ಆಂಡ್ ‘ಕ್ರಿಕೆಟ್ ಆಸ್ಟ್ರೇಲಿಯಾ – ಮೋರ್ ಡೈವರರ್ಸಿಟಿ ಪ್ಲೀಸ್’ ಎಂಬುದನ್ನು ಮೈದಾನದ ಒಳಗೆ ತೆಗೆದುಕೊಂಡು ಹೋಗಿ ಪಂದ್ಯಾಟದ ಸಮಯದಲ್ಲಿ ಪ್ರದರ್ಶಿಸಲು ಮುಂದಾಗಿದನ್ನು ತಡೆದ ಆಸ್ಟ್ರೇಲಿಯಾದ ಭದ್ರತಾ ಸಿಬ್ಬಂದಿ ಗಳುಕೃಷ್ಣಕುಮಾರ್‌ರನ್ನು ಗುರಿಯಾಗಿಸಿ, ‘ನೀವು ಈ ವಿಚಾರವನ್ನು ತಿಳಿಸಬೇಕೆಂದಿದ್ದರೆ, ನಿಮಗೆ ಸೇರಿರುವ ಸ್ಥಳ (ಭಾರತ)ಕ್ಕೆ ಹಿಂದಿರುಗಿ’ ಎಂದು ನಿಂದಿಸಿದ್ದು ವರದಿಯಾಗಿದೆ.
ಜನಾಂಗೀಯ ನಿಂದನೆ ಹಿಂಸಾತ್ಮಕ ಸ್ವರೂಪದ ಸಂಘರ್ಷಕ್ಕೂ ಕಾರಣವಾಗುತ್ತದೆ. ವರ್ಣ ವ್ಯವಸ್ಥೆಯಡಿಯಲ್ಲಿನ ಸಂಘರ್ಷದಲ್ಲಿ ಭಾರತದ ವಿದ್ಯಾರ್ಥಿಗಳನ್ನು ಆಸ್ಟ್ರೇಲಿಯಾದಲ್ಲಿ ಹತ್ಯೆ ಮಾಡಿದ ಉದಾಹರಣೆಗಳೂ ಇವೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲೆರಡು ಪಂದ್ಯದಲ್ಲಿ ಸಮಬಲದ ಫಲಿತಾಂಶ ಹೊರಬಿದ್ದ ಬಳಿಕ 3ನೇ ಪಂದ್ಯದಲ್ಲಿ ಸೋಲಿನ ಅಂಚಿಗೆ ಬಂದ ಭಾರತ ಈ ಪಂದ್ಯವನ್ನು ಡ್ರಾ ಮಾಡಿಕೊಳ್ಳಲೇಬೇಕು ಎಂದು ಭಾರತದ ದಾಂಡಿಗರು ನಿರ್ಧರಿಸಿ ಆ ನಿಟ್ಟಿನಲ್ಲಿ ನೆಲ ಕಚ್ಚಿ ನಿಲ್ಲಲುಪ್ರಯತ್ನ ಮುಂದುವರಿಸಿದ್ದರು.
ಭಾರತದ ದಾಂಡಿಗರು ರನ್ ಗಳಿಸಲು ಬಂದಿಲ್ಲ. ಬದಲಾಗಿ ಬಾಲ್ ಎಣಿಸಲು ಬಂದಿದ್ದಾರೆ ಎಂಬುದನ್ನು ಅರಿತ ಆಸ್ಟ್ರೇಲಿಯಾದಆಟಗಾರರು ಭಾರತದ ದಾಂಡಿಗರನ್ನು ಔಟ್ ಮಾಡಿ ಪೆಲಿಯನ್‌ಗೆ ಅಟ್ಟಲು ಸಾಧ್ಯವಿಲ್ಲ ಎಂಬುದನ್ನು ಮನಗಂಡು ಭಾರತದ ದಾಂಡಿಗರನ್ನು ಗಾಯಗೊಳಿಸಿ ಪೆಲಿಯನ್‌ಗೆ ಅಟ್ಟುವ ಸಲುವಾಗಿ ಆಸ್ಟ್ರೇಲಿಯಾದ ವೇಗದ ಬೌಲರ್‌ಗಳು ಭಾರತದ ದಾಂಡಿಗರ ತಲೆ ಮತ್ತು ಭುಜಗಳನ್ನು ಗುರಿಯಾಗಿಸಿಕೊಂಡು ಯಮರೂಪಿ ಮಾರಣಾಂತಿಕ ಬೌನ್ಸರ್‌ಗಳನ್ನು ಎಸೆದರು.
ಆಸ್ಟ್ರೇಲಿಯಾದ ಕ್ರಿಕೆಟ್ ಪಿಚ್‌ನಲ್ಲಿ ವೇಗದ ಬಾಲ್‌ಗಳನ್ನು ಎದುರಿಸುವುದು ಪ್ರತಿಮ ಸಾಹಸವೇ ಸರಿ. ಆದರೂ ಪಂದ್ಯವನ್ನು ಡ್ರಾಮಾಡಿಕೊಳ್ಳುವಲ್ಲಿ ಭಾರತ ಯಶಸ್ವಿಯಾಯಿತು. ಆಸ್ಟ್ರೇಲಿಯಾ ಪ್ರೇಕ್ಷಕರ ಜನಾಂಗೀಯ ನಿಂದನೆಯಂಥ ಕುಚೇಷ್ಟೆಯ ವರ್ತನೆ ಹಾಗೂ ಆಟಗಾರರು ತೋರಿದ ಕುಕೃತ್ಯದ ಪ್ರವೃತ್ತಿಯಿಂದ ಆಸ್ಟ್ರೇಲಿಯನ್ನರು ಅಂತಾರಾಷ್ಟ್ರೀಯ ‘ಕಪ್ಪು’ (ಅಪಕೀರ್ತಿ)ಗೆ ಗುರಿಯಾದರೆ ಸರಣಿಯ 4ನೇ ಮತ್ತು ನಿರ್ಣಾಯಕ ಟೆಸ್ಟನ್ನು ಗೆದ್ದ ಭಾರತ ಬಾರ್ಡರ್ – ಗವಾಸ್ಕರ್ ‘ಕಪ್’ ಮುಡಿಗೇರಿಸಿ ಕೊಂಡಿದ್ದು, ಇದು ಬಿಳಿ ಚರ್ಮದ ಆಸ್ಟ್ರೇಲಿನ್ನನ್ನರಿಗೆ ಮಸಿ ಬಳಿದಂತಾಯಿತು.
ಕ್ರಿಕೆಟ್‌ನಲ್ಲಿ ತಾರತಮ್ಯ ಅಥವಾ ಜನಾಂಗೀಯ ನಿಂದನೆ ತಡೆಗೆ ಕಠಿಣ ನೀತಿಗಳಿವೆ. ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯ ಪ್ರಕಾರ ಆಟಗಾರರು ಎದುರಾಳಿಗಳ ವಿರುದ್ಧ ಆಕ್ರಮಣಕಾರಿ ಮನೋಭಾವ ತೋರುವುದಾಗಲಿ, ಜನಾಂಗ, ಧರ್ಮ, ಸಂಸ್ಕೃತಿ, ಮೈಬಣ್ಣ, ಜನಾಂಗೀಯ ಮೂಲ, ರಾಷ್ಟ್ರೀಯತೆ, ಲಿಂಗ, ಲೈಂಗಿಕ ದೃಷ್ಟಿಕೋನ, ಅಂಗವೈಕಲ್ಯ, ವೈವಾಹಿಕ ಸ್ಥಿತಿ ಅಥವಾ ಮಾತೃತ್ವದ ಸ್ಥಿತಿ ಮುಂತಾದ ವಿಚಾರಗಳನ್ನು ಉಲ್ಲೇಖಿಸಿ ಅವಮಾನಿಸುವುದು, ಬೆದರಿಸುವುದು ಮುಂತಾದವುಗಳು ನಿಯಮಗಳಉಲ್ಲಂಘನೆಯಾಗಲಿದ್ದು, ಆರೋಪ ಸಾಬೀತಾದರೆ ಶಿಕ್ಷಾರ್ಹ ಅಪರಾಧ ಎಂದು ಪರಿಗಣಿಸಿ, ಸಸ್ಪೆನ್ಷನ್ ಪಾಯಿಂಟ್ ಆಧಾರದಲ್ಲಿ ಆಟಗಾರರಿಗೆ ಕೆಲವು ಪಂದ್ಯಗಳ ನಿಷೇಧ ಹೇರಬಹುದಾಗಿದ್ದು, ಅಂತಹ ತಪ್ಪುಗಳು ಪುನರಾವರ್ತನೆಯಾದರೆ ಕೆಲವು ಅವಧಿಗೆ ಅಥವಾ ಶಾಶ್ವತವಾಗಿ ನಿಷೇಧ ಹೇರಬಹುದಾಗಿದೆ.
ಹಾಗೆಯೇ ಪ್ರೇಕ್ಷಕರ ಆಕ್ಷೇಪಾರ್ಹ ವರ್ತನೆಗೂ ನಿಯಮಗಳಿದ್ದು, ಅದು ಪಂದ್ಯವನ್ನು ಆಯೋಜನೆ ಮಾಡುವ ದೇಶಗಳಕಾನೂನಿನ ಚೌಕಟ್ಟಿಗೆ ಒಳಪಟ್ಟಿರುತ್ತದೆ. ಕ್ರೀಡಾಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವ ಪ್ರೇಕ್ಷಕರಿಗೆ ಅಜೀವ ನಿಷೇಧ ಹೇರಿ ಮುಂದೆ ಯಾವುದೇ ಪಂದ್ಯಾಟಕ್ಕೂ ಕ್ರೀಡಾಂಗಣಕ್ಕೆ ಪ್ರವೇಶಿಸದಂತೆ ಗಮನ ಹರಿಸಿ ಕ್ರೀಡಾಸ್ಫೂರ್ತಿ ಬೆಳೆಯುವಂತಾಗಬೇಕು.ಬ್ಯಾಟ್ ಮತ್ತು ಚೆಂಡು ನಡುವಿನ ಹೋರಾಟದ ಕ್ರಿಕೆಟ್ ಆಟವನ್ನು ಪ್ರೇಕ್ಷಕರ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಿ ಆನಂದಿಸಬೇಕಾದ ಪ್ರೇಕ್ಷಕರು ಇಂತಹ ಕುಚೇಷ್ಟೆಯಲ್ಲಿ ತೊಡಗಿಸಿಕೊಂಡರೆ ಕ್ರೀಡಾಸ್ಫೂರ್ತಿ, ಕ್ರೀಡಾ ಮನೋಭಾವ ಎಂಬ ಪದಕ್ಕೆ ಅರ್ಥವಾದರೂ ಇದೆಯೇ?. ಅಷ್ಟಕ್ಕೂ ಕ್ರೀಡೆ ಎಂಬುದು ವ್ಯಕ್ತಿಯ ಧರ್ಮ, ಬಣ್ಣ, ಜಾತಿ, ದೇಶ, ಭಾಷೆ, ಸಂಸ್ಕೃತಿಯ ಆಧಾರದಲ್ಲಿ  ನಿರ್ಧಾರ ವಾಗುವ ವಿಷಯವೂ ಅಲ್ಲ.
ಒಂದು ವೇಳೆ ಚರ್ಮದ ಬಣ್ಣದ ಆಧಾರದ ಮೇಲೆ ಪಂದ್ಯದ ಫಲಿತಾಂಶ ನಿರ್ಧಾರವಾಗುವಂತಿದ್ದರೆ ಇತ್ತೀಚೆಗೆ ಮುಕ್ತಾಯಗೊಂಡ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಬಾರ್ಡರ್ – ಗಾವಸ್ಕರ್ ಟ್ರೋಫಿಯನ್ನು ಬಹುಶಃ ಭಾರತದ ಬದಲಿಗೆ ಆಸ್ಟ್ರೇಲಿಯವೇ ಗೆಲ್ಲುತ್ತಿತ್ತೇನೋ?