ಇಂದಿರಾ ಗಾಂಧಿಯ ಸರ್ವಾಧಿಕಾರವೆಲ್ಲಿ ? ಮೋದಿಯ ತಾಳ್ಮೆ ಎಲ್ಲಿ ?
ವೀಕೆಂಡ್ ವಿಥ್‌ ಮೋಹನ್‌
ಮೋಹನ್‌ ವಿಶ್ವ
ಅದು೧೯೮೪ರ ಜೂನ್ ತಿಂಗಳ ಮೊದಲವಾರ ಪಂಜಾಬಿನ ಅಮೃತಸರದ ‘ಗೋಲ್ಡನ್ ಟೆಂಪಲ್’ ನಲ್ಲಿ ರಕ್ತದೋಕುಳಿಯೇ ನಡೆದಿತ್ತು, ‘ಬಿಂದ್ರನ್ವಾಲ ನೆಂಬ’ ಖಲಿಸ್ತಾನಿ ಪ್ರತ್ಯೇಕತಾವಾದಿ ಉಗ್ರನನ್ನು ಹಿಡಿಯುವ ಸಲುವಾಗಿ ಅಂದಿನ ಪ್ರಧಾನ ಮಂತ್ರಿ ‘ಇಂದಿರಾ ಗಾಂಧಿ’  ‘ಆಪರೇಷನ್ ಬ್ಲೂ ಸ್ಟಾರ್’ ಕಾರ್ಯಾಚರಣೆ ನಡೆಸಿದ್ದರು.
ಇಂದಿರಾ ಗಾಂಧಿಯ ಸರಕಾರಕ್ಕೆ ಸವಾಲೆಸೆದಿದ್ದ ಪ್ರತ್ಯೇಕತಾವಾದಿಯನ್ನು ಸಿಖ್ಖರ ಪವಿತ್ರ ಮಂದಿರದೊಳಗೆ ಅಟ್ಟಾಡಿಸಿಕೊಂಡು ಭಾರತೀಯ ಸೇನೆ ಹೊಡೆದುರುಳಿಸಿತ್ತು. ಖಲೀಸ್ತಾನ್ ಪ್ರತ್ಯೇಕತಾ ವಾದಿಗಳು ಪಾಕಿಸ್ತಾನದೊಂದಿಗೆ ನಿಖಟ ಸಂಪರ್ಕಹೊಂದಿರುವುದರ ಬಗ್ಗೆ ನಿಖರ ಮಾಹಿತಿಯನ್ನು ಸಂಗ್ರಹಿಸಿದ್ದಂಥ ಭಾರತೀಯ ಗೃಹ ಇಲಾಖೆಯು ‘ಬಿಂದ್ರನ್ವಾಲ’ನು ಪಂಜಾಬ್ರಾಜ್ಯವನ್ನು ಪಾಕಿಸ್ತಾನದ ಸಹಾಯದೊಂದಿಗೆ ಪ್ರತ್ಯೇಕಿಸಿ ‘ಖಲೀಸ್ತಾನ್’ ದೇಶ ವನ್ನಾಗಿಸಲು ದೊಡ್ಡದೊಂದು ಚಳುವಳಿಯನ್ನೇ ನಡೆಸಲು ಸಿದ್ಧನಿದ್ದನೆಂಬ ವಿಷಯವನ್ನು ಬಹಿರಂಗ ಪಡಿಸಿತ್ತು.
ಪಂಜಾಬಿನೆಡೆ ಖಲೀಸ್ತಾನ್ ಚಳುವಳಿಗಾರರು ಭಯದ ವಾತಾವರಣವನ್ನು ಸೃಷ್ಟಿಸಲು ದೊಡ್ಡದೊಂದು ಯೋಜನೆಯನ್ನು ತಯಾರು ಮಾಡಿದ್ದರು. ಇದರ ಅಪಾಯವನ್ನರಿತ ‘ಇಂದಿರಾ ಗಾಂಧಿ’ ಹೀಗೆಯೇ ಬಿಟ್ಟರೆ ಪಂಜಾಬ್ ರಾಜ್ಯವು ಭಾರತದಿಂದ ಬೇರ್ಪಡುವುದರಲ್ಲಿ ಯಾವುದೇ ಅನುಮಾನ ವಿಲ್ಲವೆಂದರಿತು, ಈ ಚಳುವಳಿಯನ್ನು ಹತ್ತಿಕ್ಕಲೇಬೇಕೆಂಬ ಪಣತೊಟ್ಟು ‘ಬಿಂದ್ರನ್ವಾಲ’ ಹಾಗೂ ಆತನ ಸಹಚರರು ಅಡಗಿ ಕುಳಿತಿದ್ದಂಥ ‘ಗೋಲ್ಡನ್ ಟೆಂಪಲ’ ಮೇಲೆ ದೊಡ್ಡದೊಂದು ಸೈನಿಕ ಕಾರ್ಯಾಚರಣೆಯನ್ನು ನಡೆಸಿ ಆತನ ಜತೆಗೆ ಇಡೀ ತಂಡವನ್ನು ಮುಗಿಸಿಬಿಟ್ಟರು.
ತದನಂತರ ರಾಜೀವ್ ಗಾಂಧಿಯವರು ನೀಡಿದ ಹೇಳಿಕೆ ಯೊಂದರ ಪ್ರಕಾರ ಕಾರ್ಯಾಚರಣೆಯಲ್ಲಿ೭೦೦ಕ್ಕೂ ಅಧಿಕ ಜನರ ಮರಣವಾಯಿತು. ಅಮೆರಿಕದ ಗೂಢಚಾರ ಸಂಸ್ಥೆಯು ‘ಖಲೀಸ್ತಾನ್’ ಚಳುವಳಿಯನ್ನು ಬೆಂಬಲಿಸಿ ಹಿಂಬಾಗಿಲ ಮೂಲಕ ಹಲವು ರೀತಿಯ ಸಹಾಯವನ್ನು ಮಾಡಿತ್ತು. ಅಮೆರಿಕ ದೇಶವು ಮುಂದೆ ತೋರುವಂತೆ ಹಿಂದೆ ಎಂದೂ ನಡೆದುಕೊಳ್ಳುವುದಿಲ್ಲ, ಜಗತ್ತಿನಲ್ಲಿ ನಿರ್ಣಾಮ ವಾಗಿರುವ ಹಲವು ದೇಶಗಳ ಚರಿತ್ರೆಯನ್ನು ಒಮ್ಮೆ ನೋಡಿದರೆ ಅದರ ಹಿಂದಿನ ಸೂತ್ರದಾರ ಅಮೆರಿಕ ವಾಗಿರುತ್ತದೆ.
ಅಮೆರಿಕ ಕೇವಲ ಮುಂದಿನಿಂದ ಯುದ್ಧ ಮಾಡುವುದಿಲ್ಲ, ಹಿಂಬಾಗಿಲಿಂದಲೂ ಈ ರೀತಿಯ ಅರಾಜಕತೆಯನ್ನು ಸೃಷ್ಟಿಸಿಅದನ್ನು ಸರಿಪಡಿಸಲು ತಾನು ಮುಂದೆ ಬಂದು ಯುದ್ಧ ಮಾಡುವುದಾಗಿ ಹೇಳಿ ತನ್ನ ಕ್ರೌರ್ಯವನ್ನು ಮೆರೆಯುತ್ತದೆ. ಇಂದಿಗೂ ‘ದಕ್ಷಿಣ ಅಮೆರಿಕಾ’ ಖಂಡವು ಅಮೆರಿಕಾ ದೇಶವು ಸೃಷ್ಟಿಸಿದ ಅರಾಜಕತೆಯಿಂದ ಹೊರಬಂದಿಲ್ಲ. ‘ಖಲಿಸ್ತಾನ’ ಚಳುವಳಿ ಯಲ್ಲಿ ಅಮೆರಿಕಾ ದೇಶದ ಜತೆಗೆ ಪಾಕಿಸ್ತಾನ ಹಾಗೂ ರಷ್ಯಾ ದೇಶಗಳೂ ಕೈ ಜೋಡಿಸಿದ್ದವು. ಪಾಕಿಸ್ತಾನದ ಮೂಲಕ ಸಾವಿರಾರು ಉಗ್ರರು ಪಂಜಾಬಿನೊಳಗೆ ನುಗ್ಗಿರುವ ವಿಷಯ ‘ಇಂದಿರಾ ಗಾಂಧಿ’ಗೆ ತಿಳಿದಿತ್ತು, ಪರಿಸ್ಥಿತಿ ಕೈ ಮೀರಿ ಹೋಗುತ್ತಿದೆಯೆಂದು ತಿಳಿದ ‘ಇಂದಿರಾ ಗಾಂಧಿ’ ದೇವಸ್ಥಾನದ ಮೇಲೆ ದೊಡ್ಡದೊಂದು ಸೈನಿಕ ಕಾರ್ಯಾಚರಣೆಯನ್ನು ನಡೆಸಿದರು.
ಇಂದಿರಾ ಗಾಂಧಿಯವರ ಈ ನಡೆಯನ್ನು ಖಂಡಿಸಿ ದೇಶದಾದ್ಯಂತ ಸಿಖ್ಖರು ಪ್ರತಿಭಟನೆ ನಡೆಸಿದರು. ಇದನ್ನು ಖಂಡಿಸಿ ಸೈನ್ಯದಲ್ಲಿದ್ದಂಥ ಹಲವು ಸಿಖ್ ಅಧಿಕಾರಿಗಳು ರಾಜೀನಾಮೆ ನೀಡಿದರು, ಸರಕಾರವು ನೀಡಿದ್ದ ಹಲವು ಪ್ರಶಸ್ತಿಗಳನ್ನು ಹಿಂತಿರುಗಿಸಿ ದರು. ಈ ಕಾರ್ಯಾಚರಣೆ ನಡೆದ ಐದು ತಿಂಗಳಲ್ಲಿ ‘ಇಂದಿರಾ ಗಾಂಧಿ’ಯವರನ್ನು ಅವರದ್ದೇ ಸಿಖ್ ಅಂಗರಕ್ಷಕರು ಗುಂಡಿಕ್ಕಿ ಹತ್ಯೆಗೈದರು. ಇಂದಿರಾಗಾಂಧಿ  ಹತ್ಯೆಯ ನಂತರ ದೇಶದಾದ್ಯಂತ ನಡೆದ ಹಿಂಸಾಚಾರಗಳಲ್ಲಿ ಸಾವಿರಾರು ಸಿಖ್ಖರ ಮಾರಣ ಹೋಮವಾಯಿತು.
ಹಲವರು ‘ಇಂದಿರಾ ಗಾಂಧಿ’ಯವರು ಅಷ್ಟೊಂದು ಕಠಿಣ ನಿರ್ಧಾರವನ್ನು ಆತುರದಲ್ಲಿ ತೆಗೆದುಕೊಳ್ಳಬಾರದಿತ್ತೆಂದು ಹೇಳುತ್ತಾರೆ, ಮತ್ತೆ ಕೆಲವರು ಅವರ ನಿರ್ಧಾರ ಸರಿಯಿತ್ತೆಂದು ಹೇಳುತ್ತಾರೆ. ಏನೇ ಆದರು ಸಾವಿರಾರು ಸಿಖ್ಖರ ಮಾರಣ ಹೋಮಕ್ಕೆ ಕಾಂಗ್ರೆಸ್ ಪಕ್ಷ ನೇರವಾಗಿ ಕಾರಣವಾಗಿತ್ತು.
ಕಳೆದ ಕೆಲವು ತಿಂಗಳುಗಳಿಂದ ಮತ್ತದೇ ಸಿಖ್ಖರನ್ನು ರೈತರ ಹೆಸರಿನಲ್ಲಿ ಎತ್ತಿ ಕಟ್ಟಿ ದೇಶದಲ್ಲಿ ಆಂತರಿಕ ಅರಾಜಕತೆ ಸೃಷ್ಟಿಸುವಪ್ರಯತ್ನಗಳು ಕಾಂಗ್ರೆಸ್, ಕಮ್ಯುನಿಸ್ಟ್ ಹಾಗೂ ಖಲೀಸ್ತಾನ್ ಉಗ್ರರಿಂದ ನಡೆಯುತ್ತಿದೆ. ಭಾರತದಲ್ಲಿ ‘ರೈತ’ನ ವಿಚಾರ ಬಂತೆಂದರೆ ಭಾವನಾತ್ಮಕತೆಯು ಉಕ್ಕಿ ಬರುತ್ತದೆ. ರೈತನ ಹೆಸರಿನಲ್ಲಿ ಏನೇ ಮಾಡಿದರೂ ಯಾರೂ ವಿರೋಧಿಸುವುದಿಲ್ಲವೆಂಬ ಅಂಶ ಹಲವರ ತಲೆಯಲ್ಲಿ ಕುಳಿತಿದೆ. ಕೇಂದ್ರ ಸರಕಾರವು ಜಾರಿಗೆ ತಂದಿರುವ ನೂತನ ಕೃಷಿ ತಿದ್ದುಪಡಿ ಮಸೂದೆಗಳಿಂದ ರೈತರಿಗೆ ಉಪಯೋಗ ವಾಗುತ್ತದೆಯೆಂದು ತಿಳಿದಿದ್ದರೂ ಸಹ ಸುಳ್ಳು ಪ್ರಚಾರ ಗಳನ್ನು ಮಾಡಿ ದೇಶದಾದ್ಯಂತ ರೈತರನ್ನು ಎತ್ತಿ ಕಟ್ಟುವ ಪ್ರಯತ್ನ ನಡೆಯುತ್ತಿದೆ.
ಇದರ ಫಲವಾಗಿ ‘ಪಂಜಾಬ್’ ರಾಜ್ಯದಲ್ಲಿಯೂ ಪ್ರತಿಭಟನೆಯು ಶುರುವಾಯಿತು, ‘ಪಂಜಾಬ್’ ಹಾಗೂ ‘ಹರಿಯಾಣ’ದ ರೈತರು ದೆಹಲಿಯ ಹೊರ ವಲಯದಲ್ಲಿ ಸುಮಾರು ಮೂರು ತಿಂಗಳುಗಳ ಕಾಲ ಪ್ರತಿಭಟನೆಯನ್ನು ಮಾಡಿದರು. ಕೇಂದ್ರ ಸರಕಾರವುಹನ್ನೊಂದು ಬಾರಿ ಮಾತುಕತೆಗೆ ಕರೆದು ರೈತರು ಹೇಳಿದ ಸಲಹೆಗಳನ್ನು ಸ್ವೀಕರಿಸಿ ಹಲವು ತಿದ್ದುಪಡಿಗಳನ್ನು ಮಾಡಿದರೂ ಸಹಇವರ ಪ್ರತಿಭಟನೆ ನಿಲ್ಲಲಿಲ್ಲ. ನಿಧಾನವಾಗಿ ಪ್ರತಿಭಟನೆಯ ಹಿಂದಿನ ರಹಸ್ಯ ‘ಖಲೀಸ್ತಾನ್’ ಚಳುವಳಿಯ ಕಡೆಗೆ ತಿರುಗುವುದು ಕಂಡುಬರುತ್ತಿತ್ತು.
ಪ್ರತ್ಯೇಕತಾವಾದಿಗಳು ‘ಖಲೀಸ್ತಾನ್’ ಭಾವುಟ ಹಿಡಿದು ಪ್ರತಿಭಟನೆಯಲ್ಲಿ ಕುಳಿತರು, ರೈತರೆಂದು ಹೇಳಿಕೊಂಡು ಬಂದವರು, ಬುದ್ಧಿಜೀವಿಗಳನ್ನು ಜೈಲಿನಿಂದ ಬಿಡುಗಡೆ ಮಾಡಬೇಕೆಂಬ ಬೇಡಿಕೆಯಿಟ್ಟರು, ‘ಯೋಗೇಂದ್ರ ಯಾದವ್’ನಂಥ ಅಡಕಸಬಿಗಳು ಪ್ರತಿಭಟನೆ ನೇತೃತ್ವ ವಹಿಸಿದರು. ಕೆನಡಾ ದೇಶದಲ್ಲಿದ್ದಂಥ ‘ಖಲೀಸ್ತಾನ್’ ಬೆಂಬಲಿಗರು ಪ್ರತಿಭಟನೆಯ ಪರವಾಗಿ ನಿಂತರು. ಸುಮಾರು ಮೂರು ತಿಂಗಳುಗಳ ಕಾಲ ಇಷ್ಟೆ ನಡೆಯುತ್ತಿದ್ದರೂ ಸಹ ಕೇಂದ್ರ ಸರಕಾರವು ಪ್ರತಿಭಟನಾಕಾರರ ಮೇಲೆ ಯಾವ ರೀತಿಯ ಹಯನ್ನೂ ಮಾಡಲಿಲ್ಲ.
ತಾಳ್ಮೆಯಿಂದ ಪ್ರತಿಭಟನಾಕಾರರನ್ನು ಮಾತುಕತೆಗೆ ಕರೆಸಿ ಮಾತಾಡಿಸಿ ಕಳಿಸುತ್ತಿದ್ದರು. ಪ್ರತಿಭಟನೆಯು‘ಉಚ್ಚ ನ್ಯಾಯಾಲಯ’ದ ಕದ ತಟ್ಟಿತ್ತು, ನ್ಯಾಯಾಲಯವು ಪ್ರತಿಭಟನೆಯಲ್ಲಿ ಕುಳಿತಿರುವವರ ಮಾನವೀಯತೆಯದೃಷ್ಟಿಯಿಂದ ಈ ಕಾನೂನನ್ನು ಪುನಃ ಪರಿಶೀಲಿಸಬೇಕೆಂದು ಹೇಳಿ ತಿದ್ದುಪಡಿ ಜಾರಿಯನ್ನು ತಡೆ ಹಿಡಿಯಲು ಹೇಳಿತು,ನ್ಯಾಯಾಲಯದ ಆದೇಶದಂತೆ ಹಾಗೂ ಪ್ರತಿಭಟನಾಕಾರರ ಮಾತುಕತೆಯಂತೆ ಸರಕಾರವು ತಿದ್ದುಪಡಿಯನ್ನು ಹದಿನೆಂಟುತಿಂಗಳುಗಳ ಕಾಲ ಮುಂದೂಡಿತು. ಇಷ್ಟಾದರೂ ‘ಸೊ ಕಾಲ್ಡ್’ ರೈತರು ಪ್ರತಿಭಟನೆಯನ್ನು ಕೈ ಬಿಡಲಿಲ್ಲ, ತಿದ್ದುಪಡಿಯನ್ನುಸಂಪೂರ್ಣವಾಗಿ ಹಿಂಪಡೆಯುವುದೊಂದೇ ತಮಗೆ ಬೇಕಿರುವ ಪರಿಹಾರವೆಂದು ಹೇಳಿದರು.
ಜಗತ್ತಿನ ಗಮನ ಸೆಳೆಯಬೇಕೆಂಬ ಉದ್ದೇಶದಿಂದ ಪ್ರತಿಭಟನಾಕಾರರು ಗಣರಾಜ್ಯೋತ್ಸವ ದಿನದಂದು ದೆಹಲಿಯಲ್ಲಿ ದೊಡ್ಡ ದೊಂದು ‘ಟ್ರ್ಯಾಕ್ಟರ್ ಪೆರೇಡ್’ ನಡೆಸಲು ಅನುಮತಿ ನೀಡಬೇಕೆಂದು ನ್ಯಾಯಾಲಯ ಕ್ಕೆ ಅರ್ಜಿ ಹಾಕಿದರು. ಅರ್ಜಿಯನ್ನು ಪುರಸ್ಕರಿಸಿದ ನ್ಯಾಯಾಲಯವು ದೆಹಲಿ ಪೊಲೀಸರ ಅಂಗಳದಲ್ಲಿ ಚೆಂಡನ್ನು ಹಾಕಿತ್ತು, ‘ಟ್ರ್ಯಾಕ್ಟರ್ ಪೆರೇಡ್’ಗೆ ದೆಹಲಿ ಪೊಲೀಸರು ಅನುಮತಿ ನೀಡಿದರು. ‘ಟ್ರ್ಯಾಕ್ಟರ್ ಪೆರೇಡ್’ನ ಅನುಮತಿಯನ್ನು ದುರ್ಬಳಕೆ ಮಾಡಿಕೊಂಡಂಥ ಪ್ರತಿಭಟನಾ ಕಾರರು ಪೊಲೀಸರ ಮೇಲೆ ಹಗಳನ್ನು ಮಾಡಿ ದೆಹಲಿಯ ಕೆಂಪು ಕೋಟೆಗೆ ನುಗ್ಗಿ ಭಾರತದ ತ್ರಿವರ್ಣ ಧ್ವಜವನ್ನು ಕೆಳಗಿಳಿಸಿ ‘ಖಲೀಸ್ತಾನ್’ ಧ್ವಜವನ್ನು ಹಾರಿಸಿದರು.
ಸುಮಾರು ಮೂರು ಘಂಟೆಗಳ ಈ ಪ್ರಹಸನವನ್ನು ಇಡೀ ದೇಶವೇ ನೋಡುತಿತ್ತು, ನೋಡ ನೋಡುತ್ತಲೇ ಪ್ರತಿಭಟನಾ ನಿರತ ರೈತರು ಬೆತ್ತಲಾದರು. ‘ಖಲೀಸ್ತಾನ್’ ಉಗ್ರರ ಷಡ್ಯಂತ್ರವು ದೇಶದ ಮುಂದೆ ಬಯಲಾಯಿತು. ಪೊಲೀಸರನ್ನು ಹಿಗ್ಗಾ ಮುಗ್ಗಾ ಥಳಿಸುತ್ತಿದ್ದರೂ ಸಹ ಪ್ರತಿಭಟನಾನಿರತರನ್ನು ಗುಂಡಿಕ್ಕಿ ಕೊಲ್ಲುವ ಪ್ರಯತ್ನವನ್ನು ಪೊಲೀಸರು ಮಾಡಲಿಲ್ಲ. ಕಮ್ಯುನಿಸ್ಟರು, ನಗರ ನಕ್ಸಲರು, ದೇಶದ್ರೋಹಿಗಳು, ಖಲೀಸ್ತಾನ್ ಉಗ್ರರಿಗೆ ಇಂತಹ ದೊಂದೊಂದು ಘಟನೆ ನಡೆಯಬೇಕೆಂಬ ಅಸೆ ಇತ್ತು. ಕೇಂದ್ರಸರಕಾರದ ಕಡೆಗೆ ಬೆರಳು ತೋರಿಸಿ ಮೋದಿ ಸರಕಾರವು ರೈತರನ್ನು ಕೊಂದರೆಂಬ ಸುಳ್ಳು ಸುದ್ದಿ ಹಬ್ಬಿಸುವ ಹುನ್ನಾರ ಅವರದ್ದಾಗಿತ್ತು.
ಈ ಹಿಂದೆ೧೯೮೪ರಲ್ಲಿ ‘ಇಂದಿರಾ ಗಾಂಽ’ ಮಾಡಿದ ಕೆಲಸವನ್ನು ನರೇಂದ್ರ ಮೋದಿ ಮಾಡಲಿಲ್ಲ, ನಖಲಿ ಪ್ರತಿಭಟನಾಕಾರರಸಂಪೂರ್ಣ ವಿಷಯ ತಿಳಿದಿದ್ದರೂ ಸಹ ಮೋದಿ ಅಂತಹ ಕೆಲಸ ಮಾಡಲಿಲ್ಲ. ಕಳೆದ ವಾರ ನಡೆದ ಘಟನೆಯು೧೯೮೪ರಲ್ಲಿ ನಡೆದ ಘಟನೆಗಿಂತಲೂ ಭಯಂಕರವಾಗಿತ್ತು. ನರೇಂದ್ರ ಮೋದಿಯನ್ನು ‘ಹಿಟ್ಲರ್’ ಎಂದು ಕರೆಯುವ ಅಡಕಸುಬಿಗಳಿಗೆ ತಾಳ್ಮೆಯಿಂದಲೇ ಮೋದಿ ಉತ್ತರಿಸಿದ್ದರು.೧೯೮೪ಹಾಗೂ ಮೊನ್ನೆಯ ಘಟನೆ ಯನ್ನು ತಾಳೆಮಾಡಿ ನೋಡಿದರೆ ನಿಜವಾದ ಹಿಟ್ಲರ್ ‘ಇಂದಿರಾ ಗಾಂಧಿ’ಎಂದು ಎಲ್ಲರಿಗೂ ತಿಳಿಯುತ್ತದೆ. ಮೊನ್ನೆಯ ಘಟನೆ ಯನ್ನು ನೋಡುತ್ತಿದ್ದಂಥ ಕೋಟ್ಯಂತರ ಜನರು ‘ಇಂದಿರಾ ಗಾಂಧಿ’ ಮಾಡಿದ ರೀತಿಯಲ್ಲಿ ಮೋದಿಯು ಮಾಡಬೇಕಿತ್ತೆಂದು ಹೇಳುತ್ತಿದ್ದದ್ದು ಸುಳ್ಳಲ್ಲ, ಹಾಗೇನಾದರೂ ಮೋದಿ ಮಾಡಿದ್ದಿದ್ದರೆ ಅದೊಂದೇ ವಿಷಯವನ್ನು ಇಟ್ಟುಕೊಂಡು ಮುಂದಿನ ಮೂರು ವರ್ಷಗಳ ಕಾಲ ಮೋದಿಯನ್ನು ಜರೆಯುವಲ್ಲಿ ವಿರೋಧಿಗಳು ಕಾಲ ಕಳೆಯುತ್ತಿದ್ದರು.
ರೈತರ ಹೆಸರಿನಲ್ಲಿ ಪ್ರತಿಭಟನೆ ಮಾಡುತಿದ್ದಂಥ ಹೋರಾಟಗಾರರು ಮೋದಿಯವರ ತಾಳ್ಮೆಯನ್ನು ಅದೆಷ್ಟು ಪ್ರಶ್ನೆ ಮಾಡಿದ್ದ ರೆಂದರೆ, ಸರಕಾರದ ಯಾವುದೇ ಮಾತುಕತೆಗೆ ಒಪ್ಪಲಿಲ್ಲ. ಕಾಯಿದೆಯನ್ನು ವಾಪಾಸ್ ಪಡೆಯುವ ಬೇಡಿಕೆಯನ್ನು ಮುಂದಿಟ್ಟು ಬೇರೇನನ್ನು ಮಾತನಾಡುತ್ತಿರಲಿಲ್ಲ. ಸರ್ವೋಚ್ಚ ನ್ಯಾಯಾಲಯವು ಪರ ಹಾಗೂ ವಿರೋಧವಿರುವವರ ಸಮಿತಿಯನ್ನುರಚಿಸಲು ಆದೇಶ ನೀಡಿ, ಆ ಸಮಿತಿಯು ನೀಡಿದ ವರದಿಯನ್ನು ಪರಿಶೀಲಿಸಲಾಗುವುದೆಂದು ಹೇಳಿತ್ತು.
ನ್ಯಾಯಾಲಯದ ಈ ಆದೇಶವನ್ನು ಒಪ್ಪದ ಪ್ರತಿಭಟನಾಕಾರರು ತಮ್ಮ ಪರವಾಗಿರುವವರೇ ಸಮಿತಿಯಲ್ಲಿರ ಬೇಕೆಂಬ ಹಠ ಹಿಡಿದರು. ಕೃಷಿ ಸಚಿವರ ಮಾತಿಗೆ ಕಿಮ್ಮತ್ತಿಲ್ಲದಂತೆ ಮಾಡುತ್ತಿದ್ದರು, ಇವರ ಪ್ರತಿಭಟನೆಗೆ ನಗರ ನಕ್ಸಲರು ಜತೆಗೂಡಿರುವ ವಿಷಯ ತಿಳಿದಿದ್ದರೂ ಸಹ ರೈತರದ್ದು ಭಾವನಾತ್ಮಕ ವಿಚಾರವಾದ್ದರಿಂದ ಕೇಂದ್ರ ಸರಕಾರವು ಯಾವ ಕಠಿಣ ನಿರ್ಧಾರವನ್ನೂ ತೆಗೆದುಕೊಳ್ಳಲಿಲ್ಲ. ಪೌರತ್ವ ತಿದ್ದುಪಡಿ ಕಾಯಿದೆಯ ವಿಚಾರದಲ್ಲಿ ಇದೆ ರೀತಿಯ ಸುಳ್ಳುಸುದ್ದಿಗಳನ್ನು ಹಬ್ಬಿಸಿ ಮುಸಲ್ಮಾನ ರನ್ನು ಬೀದಿಗಿಳಿಯುವಂತೆ ಮಾಡಿದ್ದರು.
ತಿಂಗಳುಗಟ್ಟಲೆ ‘ಶಹೀನ್ ಬಾಗ್’ನ ರಸ್ತೆಯನ್ನು ಅಡ್ಡಗಟ್ಟಿ ಮೋದಿಯ ವಿರುದ್ಧ ಎತ್ತಿಕಟ್ಟಿದ್ದರು. ಯಾವಾಗ ತಮ್ಮ ಸುಳ್ಳುಗಳು ದೇಶದ ಜನರ ಮುಂದೆ ಬಯಲಾದವೋ, ಕೇಂದ್ರವು ಒಂದಿಂಚು ಬಗ್ಗುವುದಿಲ್ಲವೆಂಬ ಸ್ಪಷ್ಟ ಸಂದೇಶವು ಸಿಕ್ಕಿತೋ ಸುಳ್ಳು ಪ್ರತಿಭಟನೆಯನ್ನು ಕೈಬಿಟ್ಟರು. ಕಮ್ಯುನಿಷ್ಟರು, ಪಾಶಿಮಾತ್ಯ ಗುಪ್ತಚರ ಇಲಾಖೆಗಳು, ನಗರ ನಕ್ಸಲರಿಗೆ ಮೋದಿ ಹಾಗೂ ಅಮಿತ್ ಶಾ ಮತ್ತೊಮ್ಮೆ ನುಂಗಲಾರದ ತುತ್ತಾದರು.
ಸದಾ ಏನಾದರೊಂದು ಸುಳ್ಳು ಸುದ್ದಿಯನ್ನು ಹಬ್ಬಿಸಿ ಮೋದಿಯವರ ಮೇಲೆ ಮುಗಿಬೀಳಲು ಕಾಯುತ್ತಿರುವ ಇವರುಗಳಿಗೆ ಈ ಬಾರಿ ಸಿಕ್ಕಿದ್ದು ರೈತರೆಂಬ ಭಾವನಾತ್ಮಕ ವಿಷಯ. ರೈತರ ತಲೆಯಲ್ಲಿ ಸುಳ್ಳುಸುದ್ದಿಯನ್ನು ತುಂಬಿ ಮೋದಿಯ ಮೇಲೆ ಎತ್ತಿಕಟ್ಟಿದರು. ಅಂಬಾನಿ ಹಾಗೂ ಅದಾನಿಯ ಹೆಸರನ್ನು ಬಳಸಿಕೊಂಡು ರೈತರ ತಲೆ ಹಾಳು ಮಾಡಿದರು, ನಿಜವಾದ ರೈತ ನೂತನ ಕಾಯಿದೆಯ ತಿದ್ದುಪಡಿಯಿಂದ ಆದ ಲಾಭವನ್ನು ಅನುಭವಿಸಿಕೊಂಡು ಹೊಲದಲ್ಲಿ ಕೆಲಸ ಮಾಡುತಿದ್ದ.
ಮೋದಿಯನ್ನು ಇಳಿಸಲು ಬ್ರಹ್ಮಾಸವೊಂದು ಸಿಕ್ಕಿತೆಂದು ಖುಷಿಯಲ್ಲಿದ್ದವರಿಗೆ ಜನವರಿ೨೬ರಂದು ಆಶ್ಚರ್ಯ ಕಾದಿತ್ತು. ರೈತರ ಸೋಗಿನಲ್ಲಿದಂಥ ಖಲೀಸ್ತಾನ್ ಉಗ್ರರು ಕೆಂಪುಕೋಟೆಗೆ ನುಗ್ಗಿ ತ್ರಿವರ್ಣ ಧ್ವಜವನ್ನು ಕಿತ್ತು ಹಾಕಿದರೂ ಸಹ, ಪೊಲೀಸರು ಒಂದೇ ಒಂದು ಗುಂಡನ್ನು ಅವರೆಡೆಗೆ ಹೋಗಲಿಲ್ಲ. ಮೂರು ತಿಂಗಳ ಪ್ರತಿಭಟನೆಯಲ್ಲಿ ಮೋದಿ ಯನ್ನು ಹೀನಾಯವಾಗಿ ಬೈದರು, ಮೋದಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದರು. ಆದರೂ ಮೋದಿ ತನ್ನ ಕೆಲಸವನ್ನು ಶಾಂತ ರೀತಿಯಿಂದಲೇ ಮಾಡುತ್ತಿದ್ದರು.
ಕಾಂಗ್ರೆಸ್ಸಿನ ಸೋನಿಯಾ ಗಾಂಧಿ, ನರೇಂದ್ರ ಮೋದಿಯನ್ನು ‘ಸಾವಿನ ವ್ಯಾಪಾರಿ’ಎಂದು ಕರೆದಿದ್ದರು, ಮೊನ್ನೆಯ ಘಟನೆಯಲ್ಲಿ ಮೋದಿಯ ತಾಳ್ಮೆಯನ್ನು ನೋಡಿದರೆ ಯಾರಿಗಾದರೂ ಮೋದಿಯ ವ್ಯಕ್ತಿತ್ವದ ಅರಿವಾಗುತ್ತದೆ. ಇಂದಿರಾ ಗಾಂಧಿ ಸ್ಪರ್ಧಿಸಿದ್ದಂಥ ಚುನಾವಣೆಯಲ್ಲಿ ಅಕ್ರಮ ನಡೆದಿದೆಯೆಂದು ಅಲಹಾಬಾದ್  ನ್ಯಾಯಾಲಯವು ತೀರ್ಪು ನೀಡಿದ ಮೇಲೂ, ತೀರ್ಪಿನ ವಿರುದ್ಧಹೋಗಿ ಸಂವಿಧಾನವನ್ನೇ ತಿದ್ದುಪಡಿ ಮಾಡಿದ್ದ ‘ಇಂದಿರಾಗಾಂಧಿ’ ಎಲ್ಲಿ, ತಾಳ್ಮೆಯ ಮೂರ್ತಿ ‘ನರೇಂದ್ರ ಮೋದಿ’ ಎಲ್ಲಿ? ದೇಶದಅಸ್ತಿತ್ವವನ್ನೇ ಬುಡಮೇಲು ಮಾಡಿದ ‘ಇಂದಿರಾಗಾಂಧಿ’ಯ ವಿರುದ್ಧ ದೇಶದಾದ್ಯಂತ ನಡೆದ ಪ್ರತಿಭಟನೆಯಲ್ಲಿ ಸಿಕ್ಕ ಸಿಕ್ಕವರನ್ನು ಜೈಲಿಗೆ ಹಾಕಿ, ತುರ್ತು ಪರಿಸ್ಥಿತಿಯನ್ನು ಘೋಷಿಸಿದ ‘ಇಂದಿರಾಗಾಂಧಿ’ ನರೇಂದ್ರ ಮೋದಿಯ ಯಾವೊಂದು ಗುಣಕ್ಕೂ ಸರಿಸಮರಿಲ್ಲ.
‘ಇಂದಿರಾ ಗಾಂಧಿ’ಯೂ ಸಹ ನರೇಂದ್ರ ಮೋದಿಯವರ ರೀತಿಯಲ್ಲಿಯೇ ಜನಪ್ರಿಯತೆ ಪಡೆದಿದ್ದಂಥ ನಾಯಕಿ, ಆದರೆ ತನ್ನ ಜನಪ್ರಿಯತೆಯನ್ನು ಸ್ವಾರ್ಥಕ್ಕಾಗಿ ಬಳಸಿ ಕೊಂಡಿದ್ದು ಇಂದಿರಾ ಗಾಂಧಿ ಮಾತ್ರ. ‘ಮನ ಮೋಹನ್ ಸಿಂಗ್’ ಪ್ರಧಾನಮಂತ್ರಿ ಯಾಗಿದ್ದಾಗ ಮುಂಬೈ ನಗರದಲ್ಲಿ ಸಿಕ್ಕ ಸಿಕ್ಕ ಕಡೆಗಳಲ್ಲಿ ಉಗ್ರರು ನಾಗರಿಕರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ದಾಳಿಯ ರೂವಾರಿ ಪಾಕಿಸ್ತಾನವೆಂದು ತಿಳಿದಿದ್ದರೂ ಸಹ ಕಠಿಣ ಕ್ರಮವನ್ನು ಕೈಗೊಳ್ಳುವಲ್ಲಿ ಕಾಂಗ್ರೆಸ್ ಸರಕಾರ ವಿಫಲವಾಗಿತ್ತು.
ಅಷ್ಟೇ ಯಾಕೆ ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರಕಾರದಲ್ಲಿ ರೈತರ ಮೇಲೆ ಮನಬಂದಂತೆ ‘ಲಾಠಿ ಚಾರ್ಜ್’ ಮಾಡಲಾಗಿತ್ತು, ಪ್ರತಿಭಟನೆಯ ಸಂದರ್ಭದಲ್ಲಿ ನರೇಂದ್ರ ಮೋದಿ ಒಂದೇ ಒಂದು ಏಟನ್ನು ಹಾಕಲು ಬಿಡಲಿಲ್ಲ, ಯಾಕೆಂದರೆ ಅವರು ‘ಇಂದಿರಾ ಗಾಂಧಿ’ಯಲ್ಲ. ಕೆಲವೊಂದು ಸಮಸ್ಯೆಗಳಿಗೆ ಮೌನವೇ ಪರಿಹಾರವೆಂಬಂತೆ ಸುಮ್ಮನಿರಬೇಕು. ಮನಸ್ಸು ಹಾಗೂ ಮಾಡುವ ಕೆಲಸ ಶುದ್ಧ ವಾಗಿದ್ದರೆ ಯಾರಿಗೂ ಹೆದರಬೇಕಿಲ್ಲ. ರೈತರಿಗೆ ನೆರವಾಗುವ ಕಾನೂನುಗಳನ್ನು ಜಾರಿಗೆತರುವಾಗ ಉದ್ದೇಶ ಸ್ಪಷ್ಟವಾಗಿದ್ದ ರಿಂದ ಪ್ರತಿಭಟನೆಯು ಶುದ್ಧ ಸುಳ್ಳೆಂದು ಕೇಂದ್ರ ಸರಕಾರಕ್ಕೆ ತಿಳಿದಿತ್ತು.
ಒಂದೇ ಒಂದು ಲಾಠಿಯನ್ನು ಬಳಸದೆ ನಕಲಿ ಪ್ರತಿಭಟನಾಕಾರ ಅಸಲಿ ಬಣ್ಣವನ್ನು ದೇಶದ ಮುಂದೆ ಬಯಲು ಮಾಡುವಲ್ಲಿ ಮೋದಿ ಹಾಗೂ ಅಮಿತ್ ಶಾ ಯಶಸ್ವಿಯಾಗಿದ್ದರು. ಐಶಾರಾಮಿ ಜೀವನಕ್ಕಾಗಿ ತನ್ನ ತನವನ್ನೇ ಮಾರಿಕೊಂಡಿರುವ ಪತ್ರಕರ್ತ‘ರಾಜದೀಪ್ ಸರ್ದೇಸಾಯಿ’ ಟ್ರ್ಯಾಕ್ಟರ್ ಮಗುಚಿ ಬಿದ್ದು ಸತ್ತ ಪ್ರತಿಭಟನಾಕಾರನನ್ನು ಪೊಲೀಸರ ಗುಂಡಿನಿಂದ ರೈತನೊಬ್ಬಸತ್ತನೆಂದು ಸುಳ್ಳು ಹೇಳುವ ಮೂಲಕ ನಕಲಿ ಪ್ರತಿಭಟನೆಯನ್ನು ಮತ್ತೊಮ್ಮೆ ಬಟಾಬಯಲು ಮಾಡಿದ್ದ. ರೈತರಿಗೆ ಅಂಬಾನಿಹಾಗೂ ಅದಾನಿಯ ಗುಮ್ಮವನ್ನು ತೋರಿಸಿ ಮಂಕುಬೂದಿ ಎರಚುವ ಕೆಲಸ ಮಾಡುವ ರೈತ ನಾಯಕರು, ಇದುವರೆಗೂಅದೆಷ್ಟು ಭೂಮಿಯನ್ನು ರೈತರಿಂದ ಅಂಬಾನಿ ಕಿತ್ತುಕೊಂಡಿದ್ದರೆಂದು ಹೇಳಲಿ ನೋಡೋಣ? ಐಟಿಸಿ ಸಂಸ್ಥೆಯು ಕಳೆದ ಎರಡುದಶಕಗಳಿಂದ ರೈತರಿಂದ ನೇರವಾಗಿ ಗೋಧಿ, ಭತ್ತ, ಸಕ್ಕರೆ, ಬೇಳೆಗಳನ್ನು ಖರೀದಿ ಮಾಡುತ್ತಿದೆ, ಅವರೆಷ್ಟು ಭೂಮಿಯನ್ನುರೈತರಿಂದ ಕಿತ್ತುಕೊಂಡಿದೆಯೆಂಬ ಲೆಕ್ಕ ನೀಡಲಿ ನೋಡೋಣ? ನೋ ಚಾನ್ಸ್, ಇವರ ಬಳಿ ಉತ್ತರವಿಲ್ಲ ಯಾಕೆಂದರೆ ಇವರೆಲ್ಲರೂ ದಳಿಗಳ ಪರವಾಗಿ ಕೆಲಸ ಮಾಡುವ ನಕಲಿ ಪ್ರತಿಭಟನಾಕಾರರು.
‘ಇಂದಿರಾ ಗಾಂಧಿ’ ತನ್ನ ಸ್ವಾರ್ಥಕ್ಕಾಗಿ ಹೇರಿದ ‘ತುರ್ತು ಪರಿಸ್ಥಿತಿ’ಯ ಸಂದರ್ಭದಲ್ಲಿ ಮಾಧ್ಯಮಗಳ ಮೇಲೆ ಅದೆಷ್ಟು ಕಡಿವಾಣ ಹಾಕಿದ್ದರೆಂದರೆ, ಮುದ್ರಣವಾಗುವ ಮುನ್ನ ಪ್ರತಿಯೊಂದು ಪತ್ರಿಕೆಯ ಮುಖ್ಯಾಂಶಗಳು ಮೊದಲು ಇಂದಿರಾ ಗಾಂಧಿಗೆ ತಿಳಿಯಬೇಕಿತ್ತು. ತನ್ನ ವಿರುದ್ಧ ಬರೆದ ಪತ್ರಿಕೆಗಳನ್ನು ಸಂಪೂರ್ಣ ‘ಲಾಕ್ ಔಟ್’ ಮಾಡುತ್ತಿದ್ದರು. ಹಲವಾರು ಪತ್ರಕರ್ತರನ್ನು ಬಂಽಸಿ ಜೈಲಿಗಟ್ಟಿದ್ದರು, ಆದರೆ ಮೋದಿ ಒಬ್ಬೇ ಒಬ್ಬ ಪತ್ರಕರ್ತನಿಗೆ ಆ ರೀತಿ ಮಾಡಲಿಲ್ಲ. ತನ್ನ ವಿರುದ್ಧ ಕೆಟ್ಟ ಕೆಟ್ಟದಾಗಿ ಸುಳ್ಳು ಸುದ್ದಿ ಹಬ್ಬಿಸುತ್ತಿರುವ ಬರ್ಖಾ ದತ್, ರಾಜದೀಪ್ ಸರ್ದೇಸಾಯಿ, ಧ್ರುವ್ ರತೀ ನಂತಹ ಪತ್ರಕರ್ತರಿಗೆ ಇದುವರೆಗೂ ಏನನ್ನೂ ಮಾಡಲಿಲ್ಲ.
ತಮ್ಮ ಮಾಧ್ಯಮಗಳಲ್ಲಿ ಸರಕಾರದ ಬಗ್ಗೆ ಸುಳ್ಳುಸುದ್ದಿಯನ್ನು ಹಬ್ಬಿಸಿ ದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸುತ್ತಿದ್ದರೂ ಸಹ ‘ಇಂದಿರಾ ಗಾಂಧಿ’ಯವರ ರೀತಿಯಲ್ಲಿ ಯಾವೊಂದು ಕಠಿಣ ಕ್ರಮವನ್ನೂ ಕೈಗೊಳ್ಳಲಿಲ್ಲ. ಆದರೆ ಸತ್ಯವನ್ನು ಹೇಳಿದ ‘ಅರ್ನಾಬ್ಗೋಸ್ವಾಮಿ’ಯನ್ನು ಮಹಾರಾಷ್ಟ್ರದ ಕಾಂಗ್ರೆಸ್ ಸರಕಾರ ಬಂಧಿಸಿ ಜೈಲಿನಲ್ಲಿಟ್ಟಿತ್ತು. ಮೋದಿಯವರನ್ನು ಸರ್ವಾಧಿಕಾರಿ ಯೆನ್ನುವ ಕಾಂಗ್ರೆಸ್ ಪಕ್ಷದ ನಾಯಕರಿಗೆ ತಮ್ಮ ಅಧಿನಾಯಕಿಯಾಗಿದ್ದಂತಹ ‘ಇಂದಿರಾಗಾಂಧಿ’ ನಡೆಸಿದಂಥ ಸರ್ವಾಧಿಕಾರದಬಗ್ಗೆ ಮಾತನಾಡುವ ಮುಖವಿಲ್ಲ,‘ಮನ್ ಮೋಹನ್ ಸಿಂಗ್’ ರನ್ನು ಮೂಕ ಪ್ರೇಕ್ಷಕನ್ನಾಗಿ ಮಾಡಿ ಸರ್ವಾಧಿಕಾರಿಯಾಗಿಮೆರೆದ ಸೋನಿಯಾ ಗಾಂಧಿಯ ಧೋರಣೆಯನ್ನು ಸಮರ್ಥಿಸಿ ಕೊಳ್ಳುತ್ತಾರೆ.
ಕಾಂಗ್ರೆಸ್ಸಿನ ‘ಅಹ್ಮದ್ ಪಟೇಲ್’ ಸತ್ತು ಸಂಪಿಗೆ ಮರವಾಗಿದ್ದಾರೆ, ಆದರೆ ‘ಸೋನಿಯಾ ಗಾಂಧಿ’ಯ ಸರ್ವಾಧಿಕಾರದಿಂದ ಗುಜರಾತಿನ ಗೃಹ ಸಚಿವರಾಗಿದ್ದ ‘ಅಮಿತ್ ಶಾ’ರಿಗೆ ಅವರು ಕೊಟ್ಟಂಥ ಚಿತ್ರಹಿಂಸೆಯನ್ನು ಹೇಗೆ ತಾನೇ ಮರೆಯಲಾಗುತ್ತದೆ? ತನ್ನ ತಾಳ್ಮೆಯಿಂದಲೇ ಗುಜರಾತಿನ ಗೋಧ್ರಾ ಗಲಭೆಯ ಆರೋಪದಿಂದ ದೋಷ ಮುಕ್ತರಾಗಿ ಹೊರಬಂದಂಥ ‘ನರೇಂದ್ರ ಮೋದಿ’ ಎಂದೂ ಸಹ ಸೇಡಿನ ರಾಜಕೀಯವನ್ನು ಮಾಡಲಿಲ್ಲ.
‘ಇಂದಿರಾ ಗಾಂಧಿ’ಯ ಸರ್ವಾಧಿಕಾರದ ಧೋರಣೆಯಿಂದ ದೇಶದಾದ್ಯಂತ ಸಾವಿರಾರು ಸಿಖ್ಖರ ಮಾರಣಹೋಮವಾಯಿತು, ಇದೇಸಿಖ್ಖರು ಕಳೆದ ಮೂರು ತಿಂಗಳುಗಳ ಕಾಲ ಪ್ರತಿಭಟನೆಯ ಹೆಸರಿನಲ್ಲಿ ಆಡಿದ ಆಟವನ್ನು ಸಹಿಸಿಕೊಂಡು ಒಂದು ಲಾಠಿಯನ್ನೂ ಸಹ ಬೀಸಲು ಮೋದಿ ಬಿಡಲಿಲ್ಲ. ದೆಹಲಿಯ ಕೆಂಪುಕೋಟೆಯ ಮೇಲೆ ‘ಖಲೀಸ್ತಾನ್’ ಧ್ವಜವನ್ನು ಹಾರಿಸಿದರೂ ಒಬ್ಬೇ ಒಬ್ಬ ಸಿಖ್ಖನ ಮೇಲೆ ಗುಂಡು ಹಾರಿಸಲಿಲ್ಲ, ಯಾಕೆಂದರೆ ಇವರು ‘ನರೇಂದ್ರ ಮೋದಿ’ – ‘ಇಂದಿರಾ ಗಾಂಧಿ’ಯಲ್ಲ.