ನಂಬಿಕೆ ಇರಲಿ, ಮರುಳಾಗದಿರುವ ಎಚ್ಚರವೂ ಇರಲಿ
ನಾಡಿಮಿಡಿತ
ವಸಂತ ನಾಡಿಗೇರ
ರಾಜ್ಯ ಸಚಿವ ಸಂಪುಟ ವಿಸ್ತರಣೆ, ಖಾತೆ ಹಂಚಿಕೆ, ದೆಹಲಿಯಲ್ಲಿ ರೈತರ ಚಳವಳಿ, ಗಣರಾಜ್ಯೋತ್ಸವ, ಕರೋನಾ ಇತ್ಯಾದಿಸುದ್ದಿಗಳಲ್ಲಿ ಮುಳುಗಿಹೋಗಿದ್ದಾಗ ಒಂದು ಸುದ್ದಿ ಸದ್ದಿಲ್ಲದೆ ನಡೆದುಹೋಯಿತು.
ಬಹುತೇಕ ಪತ್ರಿಕೆಗಳಲ್ಲಿ ಅದು ಒಳಪುಟದಲ್ಲಿ ಮಾಮೂಲಿ ಸುದ್ದಿಯಂತೆ ಪ್ರಕಟ ವಾಯಿತು. ನಾವು ಸುದ್ದಿಯನ್ನು ನೋಡುವ ದೃಷ್ಟಿಕೋನ ಬದಲಾಗಿದೆಯೋ, ಅಥವಾ ನಮ್ಮ ಸುದ್ದಿಯ ಆದ್ಯತೆ ಬದಲಾಗಿದೆಯೋ ಅಥವಾ ಮತ್ತೇನೋ ಗೊತ್ತಿಲ್ಲ. ಆದರೆಈ ರೀತಿಯ ಸುದ್ದಿಗಳು ಇತ್ತೀಚೆಗೆ ಸರಿಯಾಗಿ ವರದಿ ಯಾಗದೆ ಸತ್ತುಹೋಗುತ್ತಿವೆ ಯೆನೋ ಅನಿಸುತ್ತಿದೆ.
ಇಷ್ಟಕ್ಕೂ ಆ ಸುದ್ದಿಯಾದರೂ ಏನು? ನೆರೆಯ ಆಂಧ್ರದ ಚಿತ್ತೂರು ಜಿಲ್ಲೆಯ ಮದನಪಲ್ಲಿ, ಅಂದರೆ ನಮ್ಮ ಕೋಲಾರದಿಂದ ಸುಮಾರು 75 ಕಿಮೀ ದೂರದಲ್ಲಿ, ಕಳೆದ ಭಾನುವಾರ ಎದೆ ನಡುಗಿಸುವಂಥ ಘಟನೆಯೊಂದು ನಡೆಯಿತು. ತಂದೆ ತಾಯಿಯೇ ತಮ್ಮ ಇಬ್ಬರು ಹೆಣ್ಣು ಮಕ್ಕಳನ್ನು ಹೊಡೆದು ಸಾಯಿಸಿದ ಕೃತ್ಯವದು. ಹಾಗೆಂದು ಇದು ಬರ್ಬರ ಕೃತ್ಯ ಎಂದು ಬರೆಯಲಾಗುವಮಾಮೂಲಿ ಕ್ರೈಮ್ ಕೃತ್ಯವಲ್ಲ. ಹಣ, ಹೆಣ್ಣು, ಮಣ್ಣಿಗಾಗಿ ನಡೆದ, ಇಲ್ಲವೆ ಕೌಟುಂಬಿಕ ಕಲಹ ಇತ್ಯಾದಿ ಕಾರಣಕ್ಕಾಗಿ ನಡೆದ ಕೊಲೆಯಲ್ಲ.
ಬದಲಾಗಿ ಈ ಇಬ್ಬರನ್ನು ಬಲಿಕೊಡಲಾದ ಹೃದಯ ಕಲಕುವ ಕಥೆಯದು. ಈ ಘಟನೆಯ ಹಿನ್ನೆಲೆಯನ್ನು ನೋಡಿದರೆ ಮನಸ್ಸು ಮತ್ತಷ್ಟು ಭಾರವಾಗುತ್ತದೆ. ಇದರಲ್ಲಿ ಮಾನವ ಸಂಬಂಧ, ನಂಬಿಕೆ – ಮೂಢನಂಬಿಕೆ, ನಮ್ಮ ಸಾಮಾಜಿಕ ಪರಿಸ್ಥಿತಿ – ಹೀಗೆಇನ್ನೂ ಹತ್ತು ಹಲವು ಸಂಗತಿಗಳು ತಳುಕು ಹಾಕಿಕೊಂಡಿವೆ. ಮತ್ತೊಮ್ಮೆ ಈ ಪ್ರಕರಣದ ವಿವರಗಳನ್ನು ಗಮನಿಸೋಣ. ಈ ದಂಪತಿಯ ಹೆಸರು ವಿ. ಪದ್ಮಾ ಮತ್ತು ಪುರುಷೋತ್ತಮ ನಾಯ್ಡು. ಪುರುಷೋತ್ತಮ ಅವರು ಕಾಲೇಜೊಂದರಲ್ಲಿ ವೈಸ್ ಪ್ರಿನ್ಸಿಪಲ್. ಪತ್ನಿ ಪದ್ಮಜಾ ಎಂಎಸ್‌ಸಿಯಲ್ಲಿ ಚಿನ್ನದ ಪದಕ ವಿಜೇತೆ.
ಐಐಟಿಗೆ ತರಬೇತಿ ನೀಡುವ ಶಿಕ್ಷಣ ಸಂಸ್ಥೆಯೊಂದರಲ್ಲಿ ಪ್ರಮುಖ ಹುದ್ದೆ. ಅಂದರೆ ಇಬ್ಬರೂ ಸುಶಿಕ್ಷಿತರು. ಗೌರವಾನ್ವಿತ,ದೊಡ್ಡ ಹುದ್ದೆಯಲ್ಲಿರುವವವರು. ನೋಡಿದರೆ ಸಾಕಷ್ಟು ಸ್ಥಿತಿವಂತರಂತೆ ಕಾಣುತ್ತಾರೆ. ಇವರಿಗೆ ಅಲೇಖ್ಯಾ (27) ಮತ್ತ ಸಾಯಿ ದಿವ್ಯಾ (22) ಎಂಬಿಬ್ಬರು ಬೆಳೆದುನಿಂತ ಹೆಣ್ಣುಮಕ್ಕಳು. ಇಬ್ಬರೂ ತಮಗಿಷ್ಟವಾದ ಶಿಕ್ಷಣ ಪಡೆದಿದ್ದರು. ಇನ್ನೇನು ಬದುಕು ಕಟ್ಟಿಕೊಳ್ಳಬೇಕು ಎಂಬ ಸಮಯದಲ್ಲಿ ಅವರ ಜೀವನವೇ ಮುಗಿದುಹೋಗಿದೆ.
ಆದರೆ ರೋಗದಿಂದಲೋ, ಅಪಘಾತ, ಮತ್ತಿತರ ದುರ್ಘಟನೆಯಲ್ಲೋ ಸಾವಿಗೀಡಾಗಿದ್ದಲ್ಲ. ಸ್ವತಃ ತಂದೆ ತಾಯಿಯರ ಕೈಯಿಂದಲೇ ಅವರು ಮೃತಪಟ್ಟಿದ್ದಾರೆ. ಹಾಗೆಂದು ಪೋಷಕರಿಗೆ ಮಕ್ಕಳ ಮೇಲೆ ಪ್ರೀತಿ ಇರಲಿಲ್ಲ ಎಂದಲ್ಲ. ಆಥವಾ ಅವರನ್ನು ಕಂಡರೆ ಆಗುತ್ತಿಲ್ಲ ಎಂದೂ ಅಲ್ಲ. ಆದರೆ ಅದಾವುದೋ ಮಾಯೆ, ಮೋಡಿ, ನಂಬಿಕೆಗೆ ಕಟ್ಟುಬಿದ್ದು ಹೆತ್ತ ಮಕ್ಕಳನ್ನೇ ಬಲಿ ತೆಗೆದುಕೊಂಡಿದ್ದಾರೆ. ಇಬ್ಬರೂ ಸೇರಿಕೊಂಡು ಮಕ್ಕಳನ್ನು ಡಂಬೆಲ್‌ನಿಂದ ಹೊಡೆದು ಸಾಯಿಸಿದ್ದಾರೆ.
ಬೇರೆ ಕಡೆ ಓದುತ್ತಿದ್ದ ಮಕ್ಕಳು ಕರೋನಾ ಪಿಡುಗು ಪ್ರಾರಂಭವಾದ ಬಳಿಕ ಊರಿಗೆ ಬಂದು ಅಪ್ಪ ಅಮ್ಮನ ಜತೆ ವಾಸಿಸುತ್ತಿದ್ದರು. ಈ ಸಮಯದಲ್ಲಿ ಕುಟುಂಬ ಹೊರ ಬಂದಿದ್ದೇ ಅಪರೂಪ. ಕೆಲಸದವರನ್ನೂ ಬಿಡಿಸಿದ್ದ ರಂತೆ. ಅಕ್ಕಪಕ್ಕದವರೊಡನೆಯೂ ಒಡನಾಟ ಇರಲಿಲ್ಲ. ಆದರೆ ಮನೆಗೆ ಜ್ಯೋತಿಷಿಗಳು, ತಾಂತ್ರಿಕರು ಬರುತ್ತಿದ್ದರಂತೆ. ಆಗಾಗ ಪೂಜೆ, ಪುನಸ್ಕಾರಗಳು ನಡೆಯುತ್ತಿದ್ದ ವಂತೆ ಅದೇನು ಪೂಜೆ ಮಾಡುತ್ತಿದ್ದರೋ, ತಾಂತ್ರಿಕರು ಏನು ತಂತ್ರ ಮಾಡಿದರೋ ಗೊತ್ತಿಲ್ಲ.
ಆ ದುರ್ದಿನ ಬಂದೇ ಬಿಟ್ಟಿತು. ಇಬ್ಬರೂ ಮಕ್ಕಳನ್ನು ತಾಯಿ ಹೊಡೆದು ಸಾಯಿಸಿ ಬಿಟ್ಟಳಂತೆ. ತಂದೆ ಅಗತ್ಯ ಸಹಕಾರ ನೀಡಿದ ನಂತೆ. ತಾವು ಹೀಗೆ ಹೀಗೆ ಮಾಡಿದ್ದಾಗಿ ಆ ಪುರುಷೋತ್ತಮ ತಮ್ಮ ಘನಂಧಾರಿ ಕೃತ್ಯವನ್ನು ಅನಂತರ ತಮ್ಮ ಸಹೋದ್ಯೋಗಿ ಗಳಿಗೆ ತಿಳಿಸಿದರಂತೆ. ಇಷ್ಟಕ್ಕೂ ಇವರೇಕೆ ಇಂಥ ಮತಿಹೀನ ಕೃತ್ಯಕ್ಕಿಳಿದರು? ದಂಪತಿ ತಾಂತ್ರಿಕರ ವಶೀಕರಣಕ್ಕೆ ಒಳಗಾಗಿದ್ದರು. ಇವರ ಬಂಧನದ ಬಳಿಕ ಆಘಾತಕಾರಿ ಅಂಶಗಳು ಬಯಲಾಗಿವೆ.
‘ಕಲಿಯುಗ ಮುಗಿಯುತ್ತದೆ. ಸತ್ಯಯುಗ ಆರಂಭ ವಾಗುತ್ತದೆ. ಆದ್ದರಿಂದ ನಿಮ್ಮ ಮಕ್ಕಳನ್ನು ಬಲಿ ತೆಗೆದುಕೊಂಡುಬಿಡಿ. ಅನಂತರ ಅವರು ಮತ್ತೆ ಹುಟ್ಟಿಬರುತ್ತಾರೆ’ ಎಂದು ತಾಂತ್ರಿಕರು ಹೇಳಿದ್ದರಂತೆ. ಅದನ್ನು ನಂಬಿಯೇ ಅವರು ತಮ್ಮಿಬ್ಬರು ಮುದ್ದಾದ ಮಕ್ಕಳನ್ನು ಕೊಂದು ಹಾಕಿದ್ದು. ವಿಷಯ ಗೊತ್ತಾಗಿ ಮನೆಗೆ ಪೊಲೀಸರು ಬಂದಾಗ ಎರಡು ಶವಗಳು ಅಲ್ಲಿಯೇಇದ್ದವು. ‘ಶವಗಳನ್ನು ತೆಗೆದುಕೊಂಡು ಹೋಗಬೇಡಿ, ಅವು ಹಾಗೆಯೇ ಇರಲಿ. ನಮ್ಮ ಮಕ್ಕಳು ಮತ್ತೆ ಹುಟ್ಟಿಬರುತ್ತಾರೆ’ ಎಂದು ಆ ಮಹಾತಾಯಿ ಬಡಬಡಿಸುತ್ತಿದ್ದಳಂತೆ.
ಅವರ ಮನೆಗೆ ಬರುತ್ತಿದ್ದ ತಾಂತ್ರಿಕರು ಕರ್ನಾಟಕದವರು ಎಂಬ ವರದಿಗಳೂ ಇವೆ. ಮತ್ತೊಂದು ಹೈಪ್ರೊಫೈಲ್ ಪ್ರಕರಣವನ್ನುಗಮನಿಸೋಣ. ಶರವಣ ಭವನ ಯಾರಿಗೆ ಗೊತ್ತಿಲ್ಲ ಹೇಳಿ?. ಅತಿ ಪ್ರಖ್ಯಾತ ಹೋಟೆಲ್ ಚೇನ್ ಅದು. ಅದರ ಒಡೆಯರ ಹೆಸರು ರಾಜಗೋಪಾಲ್ ಅಂತ. ಅವರ ಜೀವನವೇ ಒಂದು ಸಾಹಸ ಮತ್ತು ಯಶೋಗಾಥೆ. ಚಿಕ್ಕವರಾಗಿದ್ದಾಗ ಟೀ ಶಾಪ್ ಇಟ್ಟುಕೊಂಡಿ ದ್ದರು. ಅಂಗಡಿ ಯೊಂದರಲ್ಲಿ ಸಹಾಯಕರಾಗಿ ಕೆಲಸ ಮಾಡಿದರು.
ಅನಂತರ ಚಿಕ್ಕ ಹೋಟೆಲ್ ಪ್ರಾರಂಭಿಸಿ ಯಶಸ್ಸು ಕಂಡರು. ಶರವಣ ಭವನದ ಸಾಮ್ರಾಜ್ಯ ಕಟ್ಟಿದರು. ಆ ಬಳಿಕ ಅವರುಹಿಂತಿರುಗಿ ನೋಡಿದ್ದೇ ಇಲ್ಲ. ಮುಟ್ಟಿದ್ದೆಲ್ಲ ಚಿನ್ನ.ದೇಶ, ವಿದೇಶಗಳಲ್ಲಿ ಶರವಣ ಭವನಗಳು ತಲೆ ಎತ್ತಿದವು. ತಮ್ಮ ನೌಕರರನ್ನು ಚೆನ್ನಾಗಿ ನೋಡಿಕೊಳ್ಳುತ್ತಿದ್ದರು. ಇಂಥ ರಾಜಗೋಪಾಲ್‌ಗೆ 2001ರಿಂದ ದುರ್ದೆಸೆ ಆರಂಭವಾಯಿತು. ಹಾಗೆ ನೋಡಿದರೆ ಅವರಿಗೆ ಅದಾಗಲೇ ಇಬ್ಬರು ಹೆಂಡಿರಿದ್ದರು. ಆ ಪೈಕಿ ಎರಡನೆಯವಳು ಅವರ ನೌಕರನ ಹೆಂಡತಿಯೇ. ಇಷ್ಟರ ಮೇಲೂ ಮೂರನೇ ಮದುವೆಗೆ ಮುಂದಾದರು. ಅದೂ ಜ್ಯೊತಿಷಿಯ ಸಲಹೆ ಮೇರೆಗೆ.
‘ನಿಮ್ಮ ನೌಕರನ ಮಗಳನ್ನು ಮದುವೆಯಾದರೆ ದೆಸೆ ಖುಲಾಯಿಸುತ್ತದೆ’ ಎಂದು ಹೇಳಿದ್ದರಂತೆ. ಅದನ್ನೇ ಬಲವಾಗಿ ನಂಬಿದರು ರಾಜ ಗೋಪಾಲ್. ಅದೇ ಪ್ರಕಾರ ನಡೆದುಕೊಳ್ಳಲು ಮುಂದಾದರು. ಅವರ ಹೋಟೆಲ್‌ನಲ್ಲಿ ರಾಮಸ್ವಾಮಿ ಎಂಬ ಉದ್ಯೋಗಿ ಇದ್ದರು. ಅವರಿಗೆ ಒಬ್ಬ ಮಗಳು. ಹೆಸರು ಜೀವಜ್ಯೋತಿ. ಆಕೆಯ ಮೇಲೆ ರಾಜಗೋಪಾಲ್ ಗೆ ಕಣ್ಣುಬಿತ್ತು. ‘ನನಗೆ ಅವಳನ್ನು ಮದುವೆ ಮಾಡಿಕೊಡು ಎಂದು ದುಂಬಾಲು ಬಿದ್ದರು. ಆದರೆ ಜೀವಜ್ಯೋತಿಗೆ ಇಷ್ಟವಿರಲಿಲ್ಲ.
ಆಕೆ ಶಾಂತ ಕುಮಾರ್ ಎಂಬ ಯುವಕನ ಜತೆ ವಿವಾಹವಾದಳು. ಇದು 1999ರ ಮಾತು. ಅದಾಗಿಯೂ, ‘ಗಂಡನಿಗೆ ಡೈವರ್ಸ್ ಕೊಟ್ಟುಬಿಡು. ನನ್ನನ್ನು ಮದುವೆ ಆಗು’ ಎಂದು ಪುಸಲಾಯಿಸಿದರೂ ಆಕೆ ಜಪ್ಪಯ್ಯ ಎನ್ನಲಿಲ್ಲ. ಇದರಿಂದ ಕೆರಳಿದ ರಾಜಗೋಪಾಲ್, ಶಾಂತಕುಮಾರ್‌ನನ್ನು ಅಪಹರಣ ಮಾಡಿಸಿದರು. ಅನಂತರ ಆತನ ಮೃತದೇಹ ಪತ್ತೆ ಆಯಿತು.ದೂರಿ ನನ್ವಯ ರಾಜ ಗೋಪಾಲ್ ಬಂಧನವಾಯಿತು.
ಜಾಮೀನಿನ ಮೇಲೆ ಬಿಡುಗಡೆಯೂ ಆಯಿತು. ಆದರೆ ಇಷ್ಟಕ್ಕೆ ಸುಮ್ಮನಾಗದ ಅವರು ಮತ್ತೆ ಜೀವಜ್ಯೋತಿಯ ಜೀವ ಹಿಂಡ ತೊಡಗಿದರು. ‘ಕೇಸ್ ವಾಪಸ್ ಪಡೆದುಕೋ. 6 ಲಕ್ಷ ರು. ಕೊಡುತ್ತೇನೆ’ ಎಂದು ಆಮಿಷ, ಬೆದರಿಕೆ ಎಲ್ಲ ಒಡ್ಡಿದರು. ಪ್ರಕರಣ ಮತ್ತೆ ಕೋರ್ಟ್ ಮೆಟ್ಟಿಲೇರಿತು. ಸ್ಥಳೀಯ ನ್ಯಾಯಾಲಯವು ರಾಜಗೋಪಾಲ್‌ಗೆ 10ವರ್ಷ ಶಿಕ್ಷೆ ವಿಧಿಸಿತು. ಆದರೆ ಇದು ಇಲ್ಲಿಗೆ ನಿಲ್ಲಲಿಲ್ಲ. ಪ್ರಕರಣ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತು.
ಅಲ್ಲಿ ರಾಜಗೋಪಾಲ್‌ಗೆ ಮತ್ತಷ್ಟು ಸಂಕಷ್ಟವೇ ಉಂಟಾಯಿತು. ಶಿಕ್ಷೆಯ ಪ್ರಮಾಣ ವನ್ನು ಜೀವಾವಧಿಗೆ ಹೆಚ್ಚಿಸಲಾಯಿತು. ಜೀವಜ್ಯೋತಿಗೆ 50 ಲಕ್ಷ ರು. ಪರಿಹಾರ ನೀಡಲೂ ಸೂಚಿಸಿತು. ಹೀಗೆ ಶಿಕ್ಷೆಗೆಗೆ ಗುರಿಯಾಗಿ, ಅವಮಾನಕ್ಕಿಡಾದ ರಾಜಗೋಪಾಲ್ ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದರು.
ಕೋರ್ಟ್ ಆದೇಶದ ಮೇರೆಗೆ ಆಂಬುಲೆನ್ಸ್‌ನಲ್ಲೆ ವಿಚಾರಣೆಗೆ ಹಾಜರಾದರು. ಸ್ವಲ್ಪದಿನಗಳ ಬಳಿಕ ನಿಧನ ಹೊಂದಿದರು.ಕಷ್ಟಪಟ್ಟು ಮೇಲೆ ಬಂದು ಯಶಸ್ಸಿನ ಉತ್ತುಂಗಕ್ಕೇರಿದ ವ್ಯಕ್ತಿಯೊಬ್ಬ ಜ್ಯೋತಿಷಿಯ ಮಾತು ಕೇಳಿ ಮಾಡಬಾರದ್ದನ್ನು ಮಾಡಿದ ಕಾರಣ ಆಗಬಾರದ್ದು ಆಯಿತು. ಇನ್ನೊಂದು ಪ್ರಕರಣ 2018ರಲ್ಲಿ, ದೆಹಲಿಯ ಬುರಾರಿ ಎಂಬಲ್ಲಿ ನಡೆದಿದ್ದು. ಇದೂ ದಾರುಣ ವಾದುದು. ರಾಜಸ್ಥಾನ ಮೂಲದ ಕುಟುಂಬವೊಂದು ದೆಹಲಿ ಹೊರ ವಲಯದ ಈ ಸ್ಥಳಕ್ಕೆ ದಶಕಗಳ ಹಿಂದೆ ವಲಸೆ ಬಂದಿತ್ತು.
ಮನೆಯ ಯಜಮಾನ ಭೋಪಾಲ್ ಸಿಂಗ್. ಊರಿನಲ್ಲಿರುವ ಹೊಲ, ಮನೆ ಮಾರಾಟ ಮಾಡಿ ಇಲ್ಲಿಗೆ ಸ್ಥಳಾಂತರಗೊಂಡಿದ್ದರು. ಮಕ್ಕಳು ಕಿರಾಣಿ ಅಂಗಡಿ, ಪ್ಲೈವುಡ್ ಶಾಪ್ ಇತ್ಯಾದಿಗಳನ್ನು ತೆರೆದಿದ್ದರು. ಮನೆ ಕಟ್ಟಿಸಿದ್ದರು. ಎಲ್ಲವೂ ಹೀಗೆ ಚೆನ್ನಾಗಿ ನಡೆಯುತ್ತಿರಲಾಗಿ ಭೋಪಾಲ್‌ಸಿಂಗ್ ವಯೋಸಹಜ ಕಾರಣದಿಂದ ತೀರಿಹೋದರು. ಇದಾದ ಬಳಿಕ ಹಿರಿಮಗ ಮನೆಯಜವಾಬ್ದಾರಿ ಹೊರುತ್ತಾನೆ. ಆದರೆ ಕ್ರಮೇಣ ಈ ಕುಟುಂಬದ ಜೀವನಶೈಲಿಯೇ ಬದಲಾಗುತ್ತದೆ. ಅವರು ಹೆಚ್ಚು ಹೆಚ್ಚು ಅಧ್ಯಾತ್ಮದತ್ತ ವಾಲುತ್ತಾರೆ.
ಹೀಗೆಯೇ ಮುಂದುವರಿಯುತ್ತಿರಲಾಗಿ 2018ರಲ್ಲಿ ಒಂದು ದಿನ ಕುಟುಂಬದ 10 ಜನರು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗುತ್ತಾರೆ. ತಾಯಿಯನ್ನು ಮಾತ್ರ ಉಸಿರುಗಟ್ಟಿಸಿ ಸಾಯಿಸಿರಲಾಗುತ್ತದೆ. ಪೊಲೀಸರು ಬಂದು ತನಿಖೆ ಕೈಗೊಂಡರು. ನೈಜಕಾರಣ ಕೊನೆಗೂ ನಿಗೂಢವಾಗಿಯೇ ಉಳಿಯಿತು. ಆದರೆ ರಾಜಸ್ಥಾನದಲ್ಲಿಯೇ ಉಳಿದುಕೊಂಡಿದ್ದ ಕುಟುಂಬದ ಇನ್ನೊಬ್ಬ ಸದಸ್ಯ ಹಾಗೂ ಅಕ್ಕಪಕ್ಕದವರು ಹೇಳುವ ಪ್ರಕಾರ ನಡೆದಿರಬಹುದಾದ ಘಟನೆ ಇದು.
ಇಡೀ ಕುಟುಂಬ ದೆಹಲಿಗೆ ಬಂದು ಬದುಕು ಕಟ್ಟಿಕೊಂಡ ಸಂದರ್ಭದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದ್ದು ಹೌದು. ಅದೇರೀತಿ ಕೆಲವೊಮ್ಮೆ ಏರಿಳಿತವನ್ನೂ ಕಂಡಿತ್ತು. ಪ್ಲೈವುಡ್ ಶೋರೂಂಗೆ ಒಮ್ಮೆ ಬೆಂಕಿಬಿದ್ದು ನಷ್ಟ ವಾಗುತ್ತದೆ. ಹಿರಿಯ ಮಗ ಈ ದುರಂತ ದಲ್ಲಿ ಗಾಯಗೊಳ್ಳುತ್ತಾರೆ. ಆಘಾತ ದಿಂದಲೋ ಏನೋ ಧ್ವನಿ ಹೋಗಿಬಿಡುತ್ತದೆ. ಈ ನಡುವೆಯೇ ಯಜಮಾನ ನಿಧನಹೊಂದಿದ್ದು. ಆ  ಸಂದರ್ಭದಲ್ಲಿ ಉತ್ತರಕ್ರಿಯಾದಿ ಕರ್ಮಗಳನ್ನು ಕೈಗೊಳ್ಳುತ್ತಾರೆ. ಅದರ ಭಾಗವಾಗಿ ಗರುಡಪುರಾಣವಾಚನ ನಡೆದಿರುತ್ತದೆ. ಅದೇನಾಗುತ್ತೋ ಏನೊ. ಹಿರಿಯ ಮಗ ಇದ್ದಕ್ಕಿದ್ದಂತೆ ಜೋರಾಗಿ ಕಿರುಚಲು ಪ್ರಾರಂಭಿಸುತ್ತಾರೆ. ಅಂದರೆ ಧ್ವನಿ ಬರುತ್ತದೆ.
ತಂದೆಯ ಆತ್ಮ ತನ್ನ ದೇಹವನ್ನು ಪ್ರವೇಶಿಸಿದ್ದು ಎಲ್ಲ ಸಲಹೆ ಸೂಚನೆಗಳನ್ನು ನೀಡುತ್ತಿದೆ ಎಂದು ಹೇಳುತ್ತಾರೆ. ಇದರ ಬಳಿಕವೇ ಅವರ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಂಡು ಬಂದಿದ್ದು. ಏನು ಮಾಡಬೇಕು, ಏನು ಮಾಡಬಾರದು; ಹೇಗಿರಬೇಕು, ಹೇಗಿರಬಾರದು  ಎಂಬುದನ್ನು ಆತ ತನ್ನ ಕುಟುಂಬದವರಿಗೆ ಸ್ಪಷ್ಟ ಸೂಚನೆ ನೀಡುತ್ತಿರುತ್ತಾನೆ. ಅವರೆಲ್ಲರೂ ಅದನ್ನು ಪಾಲಿಸಬೇಕು ಅಷ್ಟೇ. ದುರಂತ ಸಂಭವಿಸಿದ ದಿನ ಅದೆಂಥದೋ ತಪಸ್ಸು ಮಾಡಲು ತಂದೆಯ ಆತ್ಮ ಸೂಚನೆ ಕೊಟ್ಟಿರುತ್ತದಂತೆ. ಅದೇನು ತಪಸ್ಸೋ ಗೊತ್ತಿಲ್ಲ. ಎಲ್ಲರೂ ತಮ್ಮ ಬಾಯಿಗೆ ಟೇಪ್ ಅಂಟಿಸಿಕೊಂಡಿರುತ್ತಾರೆ.
ಕೈಕಾಲುಗಳನ್ನೂ ಕಟ್ಟಿ ಕೊಂಡಿರುತ್ತಾರೆ. ಚಾವಣಿಯ ಒಂದೇ ಹುಕ್ಕಿನಿಂದ ಎಲ್ಲರೂ ನೇಣುಬಿಗಿದುಕೊಂಡಿರುತ್ತಾರೆ. ಇದೇ ಸ್ಥಿತಿಯಲ್ಲಿ ಮೃತ ಪಡುತ್ತಾರೆ. ಆದರೆ ಅವರು ಏನನ್ನು ಸಾಧಿಸಲು ಹೊರಟಿದ್ದರು ಎಂಬುದು ಕೊನೆಗೂ ಗೊತ್ತಾಗುವುದೇ ಇಲ್ಲ.ಇಂಥ ಇನ್ನೂ ಹತ್ತು ಹಲವು ಪ್ರಕರಣಗಳನ್ನು ಉಲ್ಲೇಖಿಸಬಹುದು. ಈ ಎಲ್ಲ ಪ್ರಕರಣಗಳ ಸಾರಾಂಶ ಇಷ್ಟೇ. ಇವರೆಲ್ಲ ತಿಳಿದವರು. ವಿದ್ಯಾವಂತರು, ಬುದ್ಧಿವಂತರು. ಸಾಕಷ್ಟು ಹಣ, ಹೆಸರು ಮಾಡಿದವರು.
ಸಮಾಜದಲ್ಲಿ ಸ್ಥಾನಮಾನ ಹೊಂದಿರುವಂಥವರು. ಆದರೆ ಅದ್ಯಾವುದೋ ಮಾಯೆಗೆ ಸಿಲುಕಿ ತಮ್ಮ ಹಾಗೂ ಇತರರಬದುಕನ್ನು ನರಕ ಮಾಡಿಕೊಂಡವರು. ಮದನಪಲ್ಲಿ ಪ್ರಕರಣವನ್ನೇ ತೆಗೆದುಕೊಂಡರೆ ಆ ದಂಪತಿ ತಾಂತ್ರಿಕ ಶಿಕ್ಷಣ ಪಡೆದವರು. ಆದರೆ ತಾಂತ್ರಿಕ, ಮಾಂತ್ರಿಕರ ಕೈವಶವಾದರು. ಅವರ ಮಾತಿಗೆ ಕಟ್ಟುಬಿದ್ದು ತಮ್ಮ ಬಾಳನ್ನೇ ಹಾಳುಮಾಡಿಕೊಂಡವರು. ಬುರಾರಿ ಪ್ರಕರಣದಲ್ಲಿ ಕುಟುಂಬದ ಹಿರಿಯನೊಬ್ಬನ ಹುಚ್ಚಾಟಕ್ಕೆ ಇಡೀ ಕುಟುಂಬ ಬಲಿಯಾಗಬೇಕಾಯಿತು.
ಇಲ್ಲ ಎಂದು ಹೇಳಲಾಗಿದೆ ಅವನ ಮಾತನ್ನು ಕೇಳಿದರೋ, ಅಥವಾ ಆತ ಅವರ ಮೇಲೆ ಒಂದು ರೀತಿ ಮಾನಸಿಕವಾಗಿ ಪರಿಣಾಮ ಬೀರಿದನೋ ಎಂಬುದನ್ನು ಹೇಳುವುದು ಕಷ್ಟ. ಏಕೆಂದರೆ ಇನ್ನೊಬ್ಬರ ಮಾತಿಗೆ ಮನ್ನಣೆ ಕೊಟ್ಟು ಸಾವಿನ ಬಾಗಿಲು ತಟ್ಟುವುದು ಸುಲಭ ಸಾಧ್ಯದ ಕೆಲಸವಲ್ಲ. ಅವರು ಹೀಗೆ ಮಾಡಬೇಕೆಂದರೆ ಅಷ್ಟೊಂದು ಗಾಢ ಪ್ರಭಾವಕ್ಕೆ ಒಳಗಾಗಿರ ಬೇಕಾಗುತ್ತದೆ. ತಂತ್ರ ಮಂತ್ರದಲ್ಲಿಇದನ್ನು ವಶೀಕರಣ ಎನ್ನಬಹುದು. ವೈಜ್ಞಾನಿಕವಾಗಿ ಸಮ್ಮೊಹಿನಿ ಅಂದರೆ ಹಿಪ್ನಾಟಿಸಂ ಎಂದು ಕರೆಯಬಹುದು.ಅಂತೂ ಇದು ಒಂದು ರೀತಿಯ ಸನ್ನಿ. ಇಂಥ ಅನೇಕ ಘಟನೆಗಳನ್ನು ಮೌಢ್ಯ ಎಂದು ಕರೆಯಲಾಗುತ್ತದೆ.
ನಮ್ಮ ರಾಜ್ಯದಲ್ಲಿ ಮೌಢ್ಯಾಚರಣೆ ನಿಷೇಧ ಕಾನೂನನ್ನು ಸಿದ್ದರಾಮಯ್ಯ ಸರಕಾರದ ಅವಧಿಯಲ್ಲಿ ಜಾರಿಗೆ ತರಲು ಮುಂದಾಗಿತ್ತು. ಆದರೆ ಅದು ರಾಜಕೀಯ ಮತ್ತಿತರ ಬಣ್ಣ ಪಡೆಯಿತೇ ವಿನಾ ನೈಜ ಉದ್ದೇಶದ ಬಗ್ಗೆ  ಸರಿಯಾದ ಜಾಗೃತಿ ಆಗಲೇ ಇಲ್ಲ. ಈ ಕಾನೂನಿನ ಬಗ್ಗೆ ಚರ್ಚೆಗಳು ಆರಂಭವಾದಾಗ, ನಂಬಿಕೆ ಎಂದರೇನು, ಮೂಢನಂಬಿಕೆ ಯಾವುದು ಎಂಬಿತ್ಯಾದಿ ಮಂಥನಗಳು ನಡೆದವಾದರೂ ಬಗೆಹರಿಯಲಿಲ್ಲ. ಕಾನೂನಿನ ವಿರುದ್ಧ ವಾಗಿರುವವರು ಅದನ್ನೇಕೆ ನಿಷೇಧಿಸುವಿರಿ, ಇದನ್ನೇಕೆನಿಷೇಧಿಸಿಲ್ಲ ಎಂಬಿತ್ಯಾದಿಯಾಗಿ ಪ್ರತಿಪಾದಿಸಿದರು. ಇದರಲ್ಲಿ ಬೇಕಾದುದನ್ನು ಸೇರಿಸಿ, ಬೇಡವಾದುದನ್ನು ಕಯಬಿಡಲಾಗಿದೆ ಎಂಬ ಆರೋಪ ಗಳು ಕೇಳಿಬಂದವು.
ಕಾಯಿದೆಯ ಪರವಾಗಿರುವರು ಅದರ ಅಗತ್ಯವನ್ನು ಪ್ರತಿಪಾದಿಸಿದರು. ಆದರೆ ನಂಬಿಕೆ ಮತ್ತು ಮೂಢನಂಬಿಕೆಯ ನಡುವಿನಗೆರೆ ತುಂಬ ತೆಳುವಾದುದು. ನಂಬುವವರಿಗೆ ಅದು ನಂಬಿಕೆ ಅಷ್ಟೆ. ಒಂದು ಲೆಕ್ಕಕ್ಕೆ ಅದು ಸರಿಯೇ. ಉದಾಹರಣೆಗೆ ಪೂಜೆ ಪುನಸ್ಕಾರದಲ್ಲಿ ನಂಬಿಕೆ ಇಲ್ಲದಿರುವವರು ಅದನ್ನು ಬಿಡಬಹುದು. ಹೊರತು ಇತರರೂ ಅದನ್ನು ಮಾಡಬಾರದು; ಅದು ಮೂಢನಂಬಿಕೆ ಎಂದರೆ ತಪ್ಪಾದೀತು. ಗ್ರಹಣ ಆಚರಣೆ ಬಗ್ಗೆ ಪ್ರತಿಬಾರಿ ಗ್ರಹಣ ಬಂದಾಗಲೂ ಚರ್ಚೆಗಳು ಗರಿಗೆದರುತ್ತವೆ. ಇದೊಂದು ಸೌರಮಂಡಲದಲ್ಲಿ ನಡೆಯುವ ಸಹಜ ವಿದ್ಯಮಾನ ಎಂಬುದು ವೈಜ್ಞಾನಿಕವಾಗಿ ನೋಡುವವರ ತರ್ಕ. ಆದರೆಗ್ರಹಗತಿಗೆ ಅನುಗುಣವಾಗಿ ಗ್ರಹಚಾರ ಬದಲಾಗುತ್ತದೆ.
ಆದ್ದರಿಂದ ಇದರಿಂದ ಪಾರಾಗಲು ಜಪತಪಾದಿ ಅನುಷ್ಠಾನ ಮಾಡಬೇಕು ಎಂಬುದು ಆಸ್ತಿಕರ ಪ್ರತಿಪಾದನೆ. ಅದಕ್ಕೇ ಮೊದಲೇ ಹೇಳಿದ್ದು: ನಂಬಿಕೆ ಅಪನಂಬಿಕೆಯ ನಡುವಿನ ಗೆರೆ ತೆಳುವಾದದ್ದು ಎಂದು. ಆಚರಣೆ ಸರಿಯಲ್ಲ ಎಂದು ಹೇಳುವವವರು ತಮ್ಮ ಪಾಡಿಗೆ ತಾವು ಆಚರಣೆ ಮಾಡದೆ ಸುಮ್ಮನಿದ್ದರಾಯಿತು. ಅದನ್ನು ಬಿಟ್ಟು ಗ್ರಹಣ ಹಿಡಿದಾಗ ಸ್ಮಶಾನಕ್ಕೆ ಹೋಗಿ ತಿನ್ನುವುದರಿಂದ ಏನು ಸಾಧಿಸಿದಂತಾಗುತ್ತದೆ.
ಆದರೆ ಈ ಕಡೆಗೆ ಇವನ್ನೆಲ್ಲ ನಂಬುವವರೂ ಕೂಡ ಒಂದು ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ನಂಬಿಕೆ ಎನ್ನು ವುದು ನಮ್ಮಲ್ಲೇ ಇರಬೇಕು. ಬೇರೆಯವರು ಅದನ್ನು ಬಿತ್ತುವುದಾಗಲೀ, ನಾವು ಅವರ ಒತ್ತಡ, ಪ್ರಭಾವಕ್ಕೆ ಒಳಗಾಗಿ ಏನನ್ನಾದರೂ ಮಾಡಿದರೆ ನಮಗೇ ಅದರಿಂದ ಅನಾಹುತವಾಗುತ್ತದೆ. ಏಕೆಂದರೆ ಮೆಲೆ ವಿವರಿಸಿದ ಉದಾಹರಣೆಗಳನ್ನು ನೋಡಿದಾಗ ಅವರು ಜ್ಯೋತಿಷಿಗಳ, ತಾಂತ್ರಿಕ, ಮಂತ್ರಿಕರ ಮಾತಿಗೆ ಮರುಳಾಗಿ ಒಂದು ರೀತಿಯಲ್ಲಿ ಅವರ ಬಲೆಗೆ ಬಿದ್ದಂಥವರು.
ಜನರ ಅಸಹಾಯಕತೆ, ದೌರ್ಬಲ್ಯ, ಅನಿವಾರ್ಯತೆ ಮೊದಲಾದವುಗಳನ್ನು ದುರುಪಯೋಗ ಪಡಿಸಿಕೊಳ್ಳು ವುದು ಕೆಲವರಹುನ್ನಾರ.ಅದಕ್ಕೆ ನಾವು ಬಲಿಯಾಗ ಬಾರದು. ಒಂದಷ್ಟು ಮಾನಸಿಕ ನೆಮ್ಮದಿ, ಭರವಸೆ, ಆಶಾಭಾವ ಉಂಟಾಗಲು ಈ ರೀತಿಯ ಪೂಜೆ ಪುನಸ್ಕಾರ, ಜ್ಯೋತಿಷ್ಯ, ಭವಿಷ್ಯ ನೆರವಾಗಬಲ್ಲದು. ಆದರೆ ಅದೇ ನಮಗೆ ಮುಳುವಾಗ ಬಾರದು. ಈ ನಿಟ್ಟಿನಲ್ಲಿ ನಾವೆಲ್ಲ ಜಾಗೃತರಾಗಬೆಕು. ಜಾಗೃತಿಯನ್ನು ಮೂಡಿಸಬೇಕು.
ನಾಡಿಶಾಸ್ತ್ರನಂಬಿ ಕೆಟ್ಟವರಿಲ್ಲವೋ ಎಂಬ ಮಾತು ನಿಜಕೆಡುವುದಕ್ಕಾಗಿಯೇ ನಂಬಬಾರದು ಮನುಜಮಂತ್ರಕ್ಕೆ ಮಾವಿನಕಾಯಿ ಉದುರುವುದಿಲ್ಲಮಂತ್ರ ತಂತ್ರ ನಂಬಿ ಅತಂತ್ರರಾಗಬೇಕಿಲ್ಲ