ಬೇಂದ್ರೆ ಸಾಹಿತ್ಯದ ಪರಿಚಾರಕ ಈ ಸಾಧಕ
ಸಾಂದರ್ಭಿಕ
ಮಲ್ಲಿಕಾರ್ಜುನ ಹೆಗ್ಗಳಗಿ
ಅರವತ್ತು – ಎಪ್ಪತ್ತರ ದಶಕದಲ್ಲಿ ಕಾರ್ಮಿಕರ ಮುಷ್ಕರಗಳು ಮುನ್ನಲೆಯಲ್ಲಿದ್ದಾಗ, ಕಾರ್ಮಿಕರ ಸಭೆ ಸಮಾರಂಭದಲ್ಲಿ ಬೇಂದ್ರೆಅವರ ‘ಬರಿದೋ ಬರಿದು ಬಡವರ ಬಗ್ಗರ ತುತ್ತಿನ ಚೀಲ’ ಹೃದಯ ಕಲಕುವ ಕಾವ್ಯ ಕೇಳಿಬರುತ್ತಿದ್ದರೆ ಅಲ್ಲಿ ಡಾ.ಕೆ.ಎಸ್. ಶರ್ಮಾ ಇದ್ದಾರೆಂದೇ ಅರ್ಥ.
ಕೇರಳ ಮೂಲದ ಹಿರಿಯ ಕಾರ್ಮಿಕ ಧುರೀಣ ಡಾ.ಕೆ.ಎಸ್. ಶರ್ಮಾ ಅವರ ಮಾತೃಭಾಷೆ ತೆಲಗು. ಓದಿದ್ದು ತೆಲಗು ಮತ್ತು ಇಂಗ್ಲೀಷ್ ಮಾಧ್ಯಮದಲ್ಲಿ ಹುಬ್ಬಳ್ಳಿಯನ್ನು ಕೇಂದ್ರವನ್ನಾಗಿ ಮಾಡಿಕೊಂಡು ಕನ್ನಡ ಕಲಿತು ಜ್ಞಾನಪೀಠ ಪ್ರಶಸ್ತಿ ಪಡೆದ ಡಾ.ದ.ರಾ. ಬೇಂದ್ರೆ ಅವರ ಸಮಗ್ರ ಕಾವ್ಯ, ನಾಟಕ ಬರಹಗಳನ್ನು ಪುನಃ ಪ್ರಕಟಿಸಿ ಕನ್ನಡಿಗರ ಮನ ಮನೆಗೆ ತಲುಪಿಸುವಕೆಲಸವನ್ನು ಒಂದು ವ್ರತದಂತೆ ಮಾಡುತ್ತಿದ್ದಾರೆ.
ಡಾ.ಶರ್ಮಾ 1957ರಲ್ಲಿ ಎಲ್‌ಐಸಿ ಉದ್ಯೋಗಿಯಾಗಿ ಧಾರವಾಡಕ್ಕೆ ಬಂದರು. ಅವರಿಗೆ ಬೇಂದ್ರೆ ಅವರ ಪುತ್ರ ಡಾ. ವಾಮನ ಬೇಂದ್ರೆ ಸಾಹಿತಿಗಳಾದ ಪ್ರೊ.ಜಿ.ವಿ. ಕುಲಕರ್ಣಿ, ಡಾ. ರಾಘವೇಂದ್ರರಾವ್ ಅವರ ನಿಕಟ ಸಂಪರ್ಕ ಲಭಿಸಿತು. ಪ್ರೊ.ಜಿ.ವಿ. ಕುಲಕರ್ಣಿ ಅವರು ತಮ್ಮ ಮೊದಲ ಕವನ ಸಂಕಲನ ಮಧುಸಂಚಯ ಬಿಡುಗಡೆ ಸಂದರ್ಭದಲ್ಲಿ ಬೇಂದ್ರೆ ಅವರನ್ನು ಭೇಟಿ ಮಾಡಿಸಿ ‘ಈ ಶರ್ಮಾ ಇಂಗ್ಲಿಷಿನಲ್ಲಿ ಚೆನ್ನಾಗಿ ಬರಿತಾನೆ. ಕನ್ನಡದಲ್ಲಿ ಬರೆಯಬೇಕು ಎಂಬುದು ನಮ್ಮ ಆಶಯ’ ಎಂದು ಹೇಳಿದರು. ಅದಕ್ಕೆ ಬೇಂದ್ರೆ ಅವರು ‘ಅದೇನು ಮಹಾ ಅವನು ಈಗ ನಿರ್ಣಯಿಸಿದರೆ ಈಗ್ಲೆ ಬರಿತಾನೆ’ ಎಂದರು.
ಇದೇ ಶರ್ಮಾ ಅವರಿಗೆ ವರವಾಯಿತು. ಬೇಂದ್ರೆ ಅವರ ಸಲಹೆಯಂತೆ ಅಂದೇ ಕತ್ತಲೆಯಿಂದ ಬೆಳಕಿನೆಡೆಗೆ ಎಂಬ ಕವನ ಕಷ್ಟಪಟ್ಟು ಕನ್ನಡದಲ್ಲಿ ಬರೆದು ಗೆಳೆಯರಿಗೆ ತೋರಿಸಿ ಸಂತೋಷಪಟ್ಟರು. ಕನ್ನಡದಲ್ಲಿ ಬರೆಯಬೇಕು ಎಂಬ ಹಂಬಲ ಆರಂಭವಾಯಿತು. ಎಲ್‌ಐಸಿ ನೌಕರರ ಸಂಘದ ಅಧ್ಯಕ್ಷರಾಗಿದ್ದ ಶರ್ಮಾ ಅವರನ್ನು ಹಾವೇರಿಗೆ ವರ್ಗ ಮಾಡಲಾಯಿತು.ಸಂಘದ ಅಧ್ಯಕ್ಷನಾಗಿರುವ ತಮ್ಮನ್ನು ವರ್ಗಾವಣೆ ಮಾಡಕೂಡದು ಎಂದು ವಾದಮಾಡಿದರು.
ಈ ಕಾರಣಕ್ಕೆ ಅವರನ್ನು ಕೆಲಸದಿಂದ ಕಿತ್ತು ಹಾಕಲಾಯಿತು. ಶರ್ಮಾ ನಿರೋದ್ಯೋಗಿಯಾದರು. ಪ್ರೊ.ಜಿ.ವಿ. ಕುಲಕರ್ಣಿ ಅವರು ಆಸಕ್ತಿ ವಹಿಸಿ ಇವರನ್ನು ಪ್ರಮುಖ ಕನ್ನಡ ದಿನ ಪತ್ರಿಕೆಯೊಂದರ ಜಿಲ್ಲಾ ವರದಿಗಾರರನ್ನಾಗಿ ನೇಮಕ ಮಾಡಿಸಿದರು. ಕನ್ನಡ ಬಾರದ ಶರ್ಮಾ ತಮ್ಮ ವರದಿಗಳನ್ನು ಬೇರೋಬ್ಬರ ಹಸ್ತಾಕ್ಷರಗಳಲ್ಲಿ ಬರೆದು ಕಳಿಸತೊಡಗಿದರು. ಮುಂದೆ ಕೆಲವೇ ದಿನಗಳಲ್ಲಿವರದಿಗಳನ್ನು ಸ್ಪುಟವಾಗಿ, ಸರಳವಾಗಿ ಬರೆಯುವು ದನ್ನು ಅವರು ಕರಗತ ಮಾಡಿಕೊಂಡರು.
ಡಾ.ಶರ್ಮಾ ಅವರು ವರಕವಿ ಬೇಂದ್ರೆ ಅವರ ನಿಕಟ ಒಡನಾಟದಲ್ಲಿ ಬೆಳೆದವರು. ಅವರ ಅಪಾರ ಪ್ರೀತಿಯ ಸವಿ ಉಂಡವರು. ತಾನು ಬೇಂದ್ರೆ ಅವರ ಮಾನಸಪುತ್ರ ಎಂದೇ ಅವರು ಅಭಿಮಾನದಿಂದ ಹೇಳುತ್ತಾರೆ. ಡಾ.ಶರ್ಮಾ ಹುಬ್ಬಳ್ಳಿಯ ಬಸವೇಶ್ವರ ನಗರದಲ್ಲಿ೧೦ಎಕರೆ ವಿಶಾಲ ಭೂಮಿ ಖರೀದಿಸಿ ಅಲ್ಲಿ ವಿಶ್ವ ಶ್ರಮಿಕ ಕೇಂದ್ರ ಸ್ಥಾಪಿಸಿದ್ದಾರೆ.
ಈ ವಿಶಾಲ ಆವರಣವೆಲ್ಲ ಬೇಂದ್ರೆಮಯವಾಗಿದೆ. ಇಲ್ಲಿ ಡಾ.ದ.ರಾ.ಬೇಂದ್ರೆ ಸಂಶೋಧನಾ ಸಂಸ್ಥೆ, ಡಾ.ದ.ರಾ. ಬೇಂದ್ರೆ ಸಂಗೀತಅಕಾಡೆಮಿ, ಬೇಂದ್ರೆ ಬಯಲು ರಂಗಮಂದಿರ, ಬೇಂದ್ರೆ ಭವನ ಬೇಂದ್ರೆ ಪುತ್ಥಳಿ, ಬೇಂದ್ರೆ ಕುಟೀರ ಸ್ಥಾಪಿಸಿದ್ದಾರೆ. ಇದೆಲ್ಲಕ್ಕಿಂತಲೂ ಮುಖ್ಯವಾಗಿ ಡಾ.ವಾಮನ ಬೆಂದ್ರೆಯವರು ಸಂಪಾದನೆ ಮಾಡಿದ ಬೇಂದ್ರೆ ಅವರ 15000 ಪುಟಗಳ ಸಮಗ್ರ ಸಾಹಿತ್ಯವನ್ನು ಬೇಂದ್ರೆ ಸಂಶೋಧನ ಸಂಸ್ಥೆಯ ವತಿಯಿಂದ ಪ್ರಕಟಿಸಿದ್ದಾರೆ.
ಜ್ಞಾನಪೀಠ ಪ್ರಶಸ್ತಿ ಪಡೆದ ನಾಕು ತಂತಿ ಹಾಗೂ ಇತರ 4ಕವನ ಸಂಕಲನಗಳನ್ನು ಡಾ.ಕೆ. ರಾಘವೇಂದ್ರರಾವ್, ಡಾ.ವಾಮನ ಬೇಂದ್ರೆಯವರೊಡನೆ ಕೂಡಿ ಇಂಗ್ಲಿಷಿಗೆ ಅನುವಾದಿಸಿ ಪ್ರಕಟಿಸಿದ್ದಾರೆ. ಬೇಂದ್ರೆ ಅವರ ಬಹಳಷ್ಟು ಗೀತೆಗಳಿಗೆ ಸ್ವರ ಸಂಯೋಜನೆ ಮಾಡಿಸಿದ್ದಾರೆ. ವೀಣಾ ಶಿರಾಲಿ, ಆರ್. ವಸಂತದೇವಿ ಹಾಡಿದ್ದಾರೆ. ಬೇಂದ್ರೆ ಅವರು ಬರೆದ ಎಲ್ಲ ರಂಗಗೀತೆಗಳಿಗೆ ರಂಗಭೂಮಿಯ ಹಾಡುಗಳ ಶೈಲಿಯಲ್ಲಿ ಪಂಡಿತ ಕೃಷ್ಣಾಜಿ ಕುರ್ತುಕೋಟಿ ಅವರಿಂದ ಸಂಗೀತ ಸಂಯೋಜನೆ ಮಾಡಿಸಿ ಸಿ.ಡಿ.ಗಳನ್ನು ಮಾಡಿಸಿ ದ್ದಾರೆ.
ಸ್ವತಃ ರಂಗತಂಡ ಕಟ್ಟಿ ಬೇಂದ್ರೆ ಅವರು ಬರೆದ ಎಲ್ಲ ಟಕಗಳ ರಂಗಪ್ರದರ್ಶನ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ. ಈ ನಾಟಕಗಳನ್ನು ಸ್ವತಃ ಶರ್ಮಾರವರೇ ನಿರ್ದೇಶಿಸುತ್ತಾರೆ. ಬೇಂದ್ರೆ ಸಾಹಿತ್ಯ ಪ್ರಕಾಶನ ಹಾಗೂ ಪ್ರಚಾರಕ್ಕೆ ಅವರು ಸರಕಾರ ದಿಂದಾಗಲಿ ಸಂಘ ಸಂಸ್ಥೆಗಳಿಂದಾಗಲಿ ಒಂದು ಬಿಡಿಕಾಸೂ ಪಡೆದಿಲ್ಲ. ಅವಿವಾಹಿತರಾದ ಅವರು ತಮ್ಮನ್ನು ಬೇಂದ್ರೆ ಸೇವೆಗೆ ಅರ್ಪಿಸಿ ಕೊಂಡಿದ್ದಾರೆ. ಹುಬ್ಬಳ್ಳಿ ಕಾನೂನು ಮಹಾವಿದ್ಯಾಲಯ ದ ಪ್ರಾಚಾರ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಇದೊಂದು ಸೇವೆ, ತಪಸ್ಸು ಎಂದು ತಿಳಿದು ಶ್ರದ್ಧೆಯಿಂದ ಬೇಂದ್ರೆ ಸಾಹಿತ್ಯ ಪ್ರಚಾರ ಕೆಲಸ ಮಾಡುತ್ತಿರುವೆ. ಇದು ನನಗೆ ಅತ್ಯಂತ ಸಂತೋಷ ನೀಡಿದೆ ಎಂದು ಅವರು ವಿನಮ್ರವಾಗಿ ಹೇಳುತ್ತಾರೆ. ಡಾ.ಶರ್ಮಾ ಕನ್ನಡದಲ್ಲಿ ಸ್ವತಃ 20 ಕೃತಿಗಳನ್ನು ರಚಿಸಿದ್ದಾರೆ. ಅವರ ಲೆನಿನ್ ಗಾಂಧಿ ತುಲನಾತ್ಮಾಕ ಅಧ್ಯಯನ ಕೃತಿಗೆ ಮಹತ್ವದ ಸೋವಿಯತ್ ಲ್ಯಾಂಡ್ ನೆಹರು ಪ್ರಶಸ್ತಿ ಲಭಿಸಿದೆ. ‘ಮಾನವ ಸಮಾಚಾರ ಎಂಬ ಕನ್ನಡ ಇಂಗ್ಲಿಷ್ ದ್ವಿ ಭಾಷಾ ಪತ್ರಿಕೆಯನ್ನು ಸಂಪಾದಿಸಿ ಪ್ರಕಟಿಸಿದ್ದಾರೆ.
ಕುವಲಯ ಅವರ ಕ್ಯಾವನಾಮ. ಇದು ಅವರ ತಂದೆ ಎಂಬಾರ ಭಾಷಾಚಾರ್ಯ ತಾಯಿ ಸಂಪತ್ತಮ್ಮ ತೊಟ್ಟಿಲಲ್ಲಿ ಇಟ್ಟಹೆಸರು. ಬೇಂದ್ರೆ ಸಾಹಿತ್ಯ ಕುರಿತು ಡಾ. ಶರ್ಮಾ ಅಧಿಕಾರವಾಣಿಯಿಂದ ಮಾತನಾಡುತ್ತಾರೆ. ದೇಶದ ತುಂಬಾ ಸುತ್ತಾಡಿ ಬೇಂದ್ರೆ ಕುರಿತು ಉಪನ್ಯಾಸ ನೀಡಿದ್ದಾರೆ. – ನೀಡುತ್ತಿದ್ದಾರೆ. ಕಾರ್ಮಿಕ ಧುರೀಣರಾಗಿರುವ ಅವರು ಕಾರ್ಮಿಕರ ಹೋರಾಟಗಳಲ್ಲಿ ಬೇಂದ್ರೆ ಅವರ ‘ಬರಿದೋ ಬರಿದು ಬಡವರ ಬಗ್ಗರ ತುತ್ತಿನ ಚೀಲ’ ಕವನವನ್ನು ಕೇಳುಗರ ಮನ ಕಲಕುವಂತೆ ಅವರು ವಿವರಿಸುತ್ತಾರೆ. ಬೇಂದ್ರೆ ಬಡವರ ಕವಿ ದುಡಿಯುವವರ ಧ್ವನಿ ಎಂದು ವಿವರಿಸುತ್ತಾರೆ.
ರಾಜ್ಯದ ಸರಕಾರಿ66ಸಾವಿರ ದಿನಗೂಲಿ ನೌಕರನ್ನು ಒಂದುಗೂಡಿಸಿ ಸಂಘ ಕಟ್ಟಿ ದಿಟ್ಟ ಹೋರಾಟ ನಡೆಸಿ ಅವರಿಗೆ ಶಾಶ್ವತ ಪರಿಹಾರ ಕಲ್ಪಿಸಿರುವುದು ಶರ್ಮಾ ಅವರ ದೊಡ್ಡ ಸಾಧನೆ. ಡಾ. ಶರ್ಮಾ ಅವರಿಗೆ 81ರ ಇಳಿ ವಯಸ್ಸು ಅವರ ಉತ್ಸಾಹ ಎಳ್ಳಷ್ಟೂ ಕಡಿಮೆಯಾಗಿಲ್ಲ. ಮೈತುಂಬಾ ಮನದ ತುಂಬಾ ಕವಿ ಬೇಂದ್ರೆ ಅವರನ್ನು ತುಂಬಿಕೊಂಡು ಕ್ರಿಯಾಶೀಲರಾಗಿದ್ದಾರೆ. ಜನ ಅವರನ್ನು ಬೇಂದ್ರೆ ಅವರ ಮಾನಸ ಪುತ್ರ ಎಂದು ಕರೆಯುತ್ತಾರೆ.
ನಮ್ಮ ಸರಕಾರ ವಿಶ್ವಾವಿದ್ಯಾಲಯ ಮಾಡಬೇಕಾದ ಕನ್ನಡದ ಕೆಲಸವನ್ನು ತೆಲುಗು ಮೂಲದ ಡಾ.ಶರ್ಮಾ ಅವರು ಮಾಡು ತ್ತಿರುವುದು ನಿಜಕ್ಕೂ ಶ್ಲಾಘನೀಯ.