ಕದಡುವ ಕೌಟುಂಬಿಕ ವಾತಾವರಣ; ಮಿತ ಕುಟುಂಬ ಮತ್ತು ಶಿಕ್ಷಣ ಕಾರಣವೇ ?
ಅಭಿವ್ಯಕ್ತಿ
ರಮಾನಂದ ಶರ್ಮಾ
ಹೀಗೊಂದು ಚಿಂತನೆ ಮುಖ್ಯವಾಗಿ ಗ್ರಾಮಾಂತರ ಪ್ರದೇಶದಲ್ಲಿ ಟಾಪ್ ಗೇರ್‌ನಲ್ಲಿ ಕಾಣುತ್ತಿದೆ. ಬಹುತೇಕ ಪ್ರತಿಕುಟುಂಬದಲ್ಲಿಯೂ ಗಂಭೀರವಾಗಿ ಮತ್ತು ಉಚ್ಚ ಸ್ತರದಲ್ಲಿ ದಿನಕ್ಕೊಮ್ಮೆಯಾದರೂ ಕೇಳುತ್ತದೆ.
ಕುಟುಂಬದಲ್ಲಿನ ಅಂತರಿಕ ಕ್ಷೋಭೆ, ಕಲಹ, ಭಿನ್ನಾಭಿಪ್ರಾಯಗಳಿಗೆ ಸ್ವಲ್ಪ ವಿಚಿತ್ರವಾದರೂ, ಇವುಗಳೇ ಕಾರಣ ಎಂದು ದೃಢವಾಗಿ ಬೊಟ್ಟು ಮಾಡಿ ತೋರಿಸುತ್ತಾರೆ ಮತ್ತು ಉದಾಹರಣೆ ಸಹಿತ ವಿವರಿಸುತ್ತಾರೆ. ಅವರು ನೀಡುವ ಪ್ರತಿಯೊಂದು ಉದಾಹರಣೆ ಮತ್ತು ವಿವರಣೆ ಅವರ ಚಿಂತನೆಯದೃಷ್ಟಿಯನ್ನು ಎತ್ತಿ ಹಿಡಿಯುತ್ತದೆ. ಮುಂದಿನ ದಿನಗಳು ಹೇಗೆ ಎಂದು ಪ್ರತಿಯೊಬ್ಬರೂ ಚಿಂತಾಕ್ರಾಂತರಾಗಿದ್ದಾರೆ.
ಈ ಚಿಂತೆ, ನೋವು, ಭವಿಷ್ಯದ ಬಗೆಗಿನ ನಿರಾಶಾದಾಯಕ ನಿಟ್ಟುಸಿರು ಕೆಲವು ಕುಟುಂಬದಲ್ಲಿ ನಿರಂತರವಾಗಿ ಹೊರಹೊಮ್ಮುತ್ತಿದ್ದರೆ, ಕೆಲವು ಕುಟುಂಬಗಳಲ್ಲಿ ಘನತೆ ಗೌರವಕ್ಕಾಗಿ ಮುಚ್ಚಿಡುತ್ತಾರೆ ಮತ್ತು ಇನ್ನು ಕೆಲವರು ಆಪ್ತರಿಗಷ್ಟೇ ಅರುಹುತ್ತಾರೆ. ಈ ಪರಿಸ್ಥಿತಿ ಹೆಚ್ಚಾಗಿ ಕಾಣುವುದುಮಲೆನಾಡು ಮತ್ತು ಕರಾವಳಿ ಪ್ರದೇಶದಲ್ಲಿ. ಇಂದು ಯಾವ ಹಳ್ಳಿಗೇ ಹೋಗಲಿ, ಎಲ್ಲವೂ ವೃದ್ಧಾಶ್ರಮಗಳಂತೆ ಕಾಣುತ್ತವೆ.
ಮನೆಯಲ್ಲಿ ಬದುಕಿನ ಮುಸ್ಸಂಜೆಯಲ್ಲಿರುವ ತಂದೆ – ತಾಯಿಯರು ಕಾಣುತ್ತಾರೆ. ಕೀಲಿಯನ್ನೇ ಕಾಣದ ಮನೆಯ ಮುಂಬಾಗಿಲಿಗೆ ಈಗ ಕೀಲಿ ಹಾಕಿರುವುದು ಕಾಣುತ್ತದೆ. ಮನೆಯ ಬಾಗಿಲಿಗೆ ಕೀಲಿ ಹಾಕಬಾರದು, ಮನೆಗೆ ಬರುವ ಲಕ್ಷ್ಮಿ ಹಿಂತಿರುಗಿ ಹೋಗಬಹುದು ಎನ್ನುವ ಲಾಗಾಯ್ತನಿಂದ ಬಂದ ಪರಂಪರೆ ನೇಪಥ್ಯಸೇರಿದೆ. ಸದಾ ಗೋವುಗಳಿಂದ ತುಂಬಿರುತ್ತಿದ್ದ ಕೊಟ್ಟಿಗೆ ಬರಿದಾಗಿದ್ದು, ಗೋಪೂಜೆಗೆ ಗೋವು ಇಲ್ಲದ ಮನೆಗಳು ಇವೆ.
ಹೆಚ್ಚು ಹಾಲು ಕೊಡುವ ಜರ್ಸಿ ಅಕಳನ್ನು ಸಾಕಿ ಹತ್ತಿರದ ಡೈರಿಗೆ ಹಾಲು ಪೂರೈಕೆ ಮಾಡುತ್ತಿದ್ದ ಮನೆಗಳು ಈಗ ತಮ್ಮ ದಿನನಿತ್ಯದ ಬಳಕೆಗೆ ಹತ್ತಿರದ ಡೈರಿಯಿಂದ ಹಾಲು ತರುವದೃಶ್ಯ ನೋಡಿದಾಗ ಕರುಳು ಮಿಡಿಯುತ್ತದೆ. ಅತ್ತಿಂದಿತ್ತ ಸದಾ ಓಡಾಡುತ್ತಾ, ಅಪರಿಚಿತರು ಕಂಡಾಗ ಕೂಗುತ್ತಿರುವ ನಾಯಿಗಳು ನಾಪತ್ತೆಯಾಗಿದ್ದರೆ, ಟಣ್ಣನೆ ಜಿಗಿದು ಮರೆಯಾಗುತ್ತಿರುವ ಬೆಕ್ಕುಗಳು ಖಾಯಂ ಅಗಿ ಕಾಣೆಯಾಗಿವೆ.
ಮನೆಯಂಗಳದಲ್ಲಿ ಅಡಿಕೆ ಸುಲಿಯುವ ಕೆಲಸ, ಗದ್ದೆ ನಾಟಿ ಮಾಡುವ, ಕೊನೆಕೊಯ್ಯಲು ದೃಶ್ಯಗಳು ಫಲಗುತ್ತಿಗೆದಾರರು ಎನ್ನುವ ವ್ಯವಸ್ಥೆಯಿಂದ ಸ್ವಲ್ಪ ಸರಳವಾಗುತ್ತಿದೆ. ಇದರಲ್ಲಿ ನಷ್ಟವಾಗುತ್ತಿದ್ದರೂ, ಕೂಲಿಗಳ ಅಭಾವ ಮತ್ತು ಸಮಯಕ್ಕೆ ಸರಿಯಾಗಿ ನಿಭಾಯಿಸಲಾಗದ ಅಸಹಾಯಕತೆ ಅವರನ್ನು ಒಲ್ಲದ ಮನಸ್ಸಿನಿಂದ ಈ ಪ್ರಪಾತಕ್ಕೆ ದೂಡುತ್ತಿದೆ. ಫಲ ಗುತ್ತಿಗೆದಾರ ಅಡಿಕೆಕೊನೆಯನ್ನು ಗಿಡದ ಮೇಲಿಂದ ಸ್ವಲ್ಪವೂ ಕರುಣೆ ಇಲ್ಲದೇ ಎಳೆಯುವಾಗ, ಅವುಗಳನ್ನು ಟೆಂಪೋಗೆ ತುಂಬುವಾಗ ಅವನಿಗರಿವಿಲ್ಲ ದಂತೆ ಹನಿಗಳು ಕಣ್ಣಿನಿಂದ ಇಳಿಯುತ್ತದೆ.
ಯಾರೋ ಅಡಿಕೆಕೊನೆಗಳನ್ನು ಕಣ್ಣೆದುರಿಗೇ ಲೂಟಿ ಮಾಡುತ್ತಿರುವ ವೇದನೆ. ತೀರಾ ಇತ್ತೀಚಿನವರೆಗೆ ಊಟದ ಮನೆಯಲ್ಲಿ ಸದಾ ಎರಡು ಪಂಕ್ತಿಯಲ್ಲಿ ಮನೆಯವರು ಊಟಮಾಡುತ್ತಿದ್ದರು. ಮನೆ ಯಾವಾಗಲೂ ನೆಂಟರು – ಇಷ್ಟರು, ಪರಿಚಯ ದವರಿಂದ ತುಂಬಿರುತ್ತಿತ್ತು. ಕೆಲಸದ ಆಳುಗಳು ಬೆಳಗಿನ ಅರು ಗಂಟೆಗೆ ಮನೆ ಬಾಗಿಲಿಗೆ ಬರುತ್ತಿದ್ದರು ಮತ್ತು ಕತ್ತಲಾಗುವವರೆಗೆ ದುಡಿಯುತ್ತಿದ್ದರು. ಈಗ ಮನೆಯಲ್ಲಿ ಬಹುತೇಕ ಇಬ್ಬರು ಅಥವಾ ಗರಿಷ್ಠ ನಾಲ್ಕು ಜನರು. ಒಬ್ಬರ ಎದುರಿಗೆ ಒಬ್ಬರು ಕುಳಿತು ಊಟ ತಿಂಡಿ.
ಹುಣ್ಣಿಮೆಗೋ ಅಮಾವಾಸ್ಯೆಗೋ ಎನ್ನುವಂತೆ ನೆಂಟರಿಷ್ಟರ ಅಗಮನ. ಅವರು ಬಂದರೂ ಒಂದೆರಡು ತಾಸು ಇದ್ದು ಹೋಗುವವರೇ ವಿನಾ ಮೊದಲಿನಂತೆ೨ – ೩ದಿನ ಉಳಿಯುವವರಲ್ಲ. ಕೆಲಸದಾಳುಗಳು ಕೆಲಸಕ್ಕ ಬರುವಾಗ ಸುಮಾರು೮ಘಂಟೆಗಳು. ಸಾಯಂಕಾಲದ ಧಾರಾವಾಹಿ ಶುರು ವಾಗುವ ಮೊದಲು ಅವರು ಜಾಗ ಖಾಲಿ ಮಾಡುತ್ತಾರೆ. ಮೇಲ್ವಿಚಾರಣೆ ಇಲ್ಲದ ಆಳುಗಳ ಕೆಲಸ ಹೇಗಿರುತ್ತದೆ ಎನ್ನುವುದು ಎಲ್ಲರಿಗೂ ತಿಳಿದವಿಷಯ.
ಇತ್ತೀಚಿನವರೆಗೆ ಅವರ ಬದುಕು ಅಷ್ಟು ಸುಖಕರವಾಗಿರದಿದ್ದರೂ, ಅವರಲ್ಲಿ ಒಂದು ರೀತಿಯ ತೃಪ್ತಿ, ಸಮಾಧಾನ ಮತ್ತು ನೆಮ್ಮದಿ ಇತ್ತು. ಮನೆತಂಬ ಮಕ್ಕಳು, ಸದಾ ಬಂದುಹೋಗುವ ನೆಂಟರಿಷ್ಟರು, ಕಷ್ಟದದರೂ ಸಮೀಕರಣವಾಗುವ ಖರ್ಚು -ವೆಚ್ಚಗಳು, ನಿರಂತರವಾಗಿ ಬರುವ ಹಬ್ಬ– ಹುಣ್ಣಿಮೆಗಳು, ಮಂಗಳ ಕಾರ್ಯಗಳು ಅವರನ್ನು ಲವಲವಿಕೆಯಲ್ಲಿ ಇಡುತ್ತಿದ್ದವು. ಹೆಚ್ಚಿನವರ ಶಿಕ್ಷಣ ಆಗಿನ ಕಾಲದ ಮ್ಯಾಟ್ರಿಕ್ ಅಥವಾ ಮುಲ್ಕಿಗೆ ಸೀಮಿತವಾಗುತ್ತಿದ್ದು, ಬದುಕಿನ ಆಸರೆಗಾಗಿ ಊರು ಬಿಟ್ಟು ಹೋಗುವುದು ತೀರಾ ಅಪರೂಪವಾಗಿತ್ತು.
ಭೂ ಹಿಡುವಳಿ ಬಹುಷಃ ಯಾರಿಗೂ ಎರಡಂಕೆ ಎಕರೆ ಮೀರುತ್ತಿರಲಿಲ್ಲ. ಅವರ ಭೂ ಹಿಡುವಳಿ ಕಾಲು ಎಕರೆ ಯಿಂದ ಗರಿಷ್ಠ೪ – ೫ಎಕರೆ ಇರುವುದೇ ಹೆಚ್ಚು. ಆದರೂ ಅಷ್ಟರಲ್ಲಿಯೇ ಬದುಕು ಆರಕ್ಕೇಳದೆ ಮೂರಕ್ಕೆ ಇಳಿಯದೇ ಹೇಗೋ ನಡೆಯುತ್ತಿತ್ತು. ಆದರೆ,೭೦ – ೮೦ರ ದಶಕದಲ್ಲಿ ಅವರ ಏಕಮೇವ ಮತ್ತು ಜೀವನಾಧಾರದ ಬೆಳೆಯ ದರ ಪಾತಾಕ್ಕಿಳಿದಾಗ ಅವರ ಅರ್ಥಿಕ ಮತ್ತು ಸಾಮಾಜಿಕ ಬದುಕು ಕುಸಿಯಿತು. ಬದುಕಿನ ಬಂಡಿ ಮುಂದೆ ಸಾಗದಿರಲು ಅವರೆಗೆ ಈ ಚಿಕ್ಕಹಿಡುವಳಿ ಮತ್ತು ಬೆಳೆಯನ್ನೇ ನಂಬಿಕೊಂಡು ಬದುಕಿನ ರಥಸಾಗಿಸುತ್ತಿದ್ದವರು ಮುಖ್ಯವಾಗಿ ವಿದ್ಯಾಭ್ಯಾಸದಒಂದು ಹಂತ ತಲುಪಿದವರು ಮತ್ತು ಯುವಕರು ಬದುಕನ್ನು ಅರಸಿ ಪಟ್ಟಣ ಸೇರತೊಡಗಿದರು.
ಬದುಕಿನಲ್ಲಿ ತಮಗೆ ಅನುವಂಶಿಕವಾಗಿ, ತಲತಲಾಂತರದಿಂದ ಬಂದ ಕೃಷಿಯನ್ನು ತೊರೆದು ಜೀವನಾಧಾರಕ್ಕೆ ಬೇರೆ ಆಯಾಮಗಳನ್ನುಹುಡುಕಿದರು. ವಿಚಿತ್ರವೆಂದರೆ ಹೀಗೆ ಹಳ್ಳಿ ಬಿಟ್ಟು ಪಟ್ಟಣ ಸೇರಿದವರು ಹಿಂತಿರುಗಿ ನೋಡಲಿಲ್ಲ. ಮಳೆ ಇರಲಿ, ಕಂಬಳಿ ಹೊದೆಯುವ ಚಳಿ ಇರಲಿ,ಮೈಮೇಲೆ ಬೊಕ್ಕೆ ಏಳುವ ಬಿಸಿಲಿರಲಿ, ತಳ ಊರಿದ ಗಟ್ಟಿಯಾದರು, ಜೀರೊದಿಂದ ಅರಂಭಿಸಿ ಸ್ಥಿತಿವಂತರೂ ಆದರು. ಹಾಗೆಯೇ, ಕ್ರಮೇಣ ತಮ್ಮವರನ್ನೂ ಕರೆಸಿಕೊಂಡು ಅವರಿಗೂ ಬದುಕಿನ ಮಾರ್ಗವನ್ನು ತೋರಿಸಿ, ಬದುಕು ಇನೊಬ್ಬರಿಗೂ ಬದುಕಲು ಅವಕಾಶ ಮಾಡಿಕೊಡುಎನ್ನುವ ಮಾತನ್ನು ಅಳವವಡಿಸಿಕೊಂಡರು.
ಕಡಿಮೆ ಮತ್ತು ನಿರ್ಬಂಧಿತ ಆದಾಯದಲ್ಲಿ ಬದುಕಿನ ಬಂಡಿಯನ್ನು ನಡೆಸುವುದು ಕಷ್ಟ ಎನ್ನುವ ಕಹಿ ಸತ್ಯವನ್ನು ತಿಳಿದ ಇವರು, ಹುಟ್ಟಿಸಿದ ದೇವರು ಹುಲ್ಲು ಮೇಯಿಸನೇ ಎನ್ನುವ ಆಶಾಭಾವನೆಯನ್ನು ಬದಿಗೊತ್ತಿ, ಸಾಮಾನ್ಯವಾಗಿ ಕಬಡ್ಡಿ ಟೀಮ್‌ನಂತೆ ಇರುವ ಕುಟುಂಬ ಪ್ರಮಾಣ ವನ್ನು, ಸರಕಾರದ ಕುಟುಂಬ ಯೋಜನೆ ಒತ್ತಾಸೆಗೆ ಸ್ಪಂದಿಸಿ ಸರಕಾರವೂ ಬೆರಗಾಗುವಂತೆ, ಮನೆಗೆ ಮೂರು ಮಕ್ಕಳು, ಅರತಿಗೊಬ್ಬ ಮಗಳು – ಕೀರ್ತಿಗೊಬ್ಬ ಮಗನನ್ನೂ ಮೂಲೆಗೆ ಸರಿಸಿ, ವಂಶ ಉಳಿಸಲು ಮನೆಗೊಬ್ಬ ಮಗತತ್ತ್ವವನ್ನು ಅಳವಡಿಸಿಕೊಂಡರು.
ಹಾಗೆಯೇ ಮನೆಯ ಹಿರಿಯರು ಸದಾ ಗೊಣಗುವ, ನಿನ್ನಪ್ಪನ ಹಾಗೆ ಆಗಬೇಡ. ಶಾಲೆಗೆ ಹೋಗಿ ನಾಲ್ಕಕ್ಷರ ಕಲಿತು ಹೊಡ್ಡ ನೌಕರಿ ಹಿಡಿ ಎನ್ನುವುದರ ಪರಿಣಾಮವೋ ಏನೋ, ಕಾಯಾ, ವಾಚಾ ಮನಸಾ ಅದನ್ನು ಸ್ವೀಕರಿಸಿ ಪುಸ್ತಕದ ಬ್ಯಾಗನ್ನು ಬೆನ್ನಿಗೇರಿಸಿ ಹೊರ ಹೋದರು. ಇಂದು ಅವರೆ ಶಿಕ್ಷಣದ ಎಲ್ಲಾ ಕ್ಷೇತ್ರವನ್ನು ಗೂಳಿಯಂತೆ ನುಗ್ಗಿ ಹತ್ತಾರು ಪ್ರಮಾಣ ಪತ್ರಗಳನ್ನು ಹಿಡಿದು ಹೊರಬಂದು ಒಳ್ಳೊಳ್ಳೆ ಉದ್ಯೋಗ ಹಿಡಿದು, ತಾಲೂಕು, ಜಿ, ರಾಜ್ಯ, ದೇಶ ಮತ್ತು ಜಗತ್ತಿನಾದ್ಯಂತ ಕಾಣುತ್ತಿದ್ದಾರೆ.
ಆಡು ಮುಟ್ಟದ ಗಿಡ ಇಲ್ಲ ಎನ್ನುವಂತೆ, ಇವರು ಹೋಗದ ಸ್ಥಳವಿಲ್ಲ, ಮಾಡದ ಕೆಲಸವಿಲ್ಲ. ಒಂದು ರೀತಿಯಲ್ಲಿ ಸರ್ವಾಂತರ್ಯಾಮಿ. ಇವರು ಅನುಭವಿಸುತ್ತಿರುವ ತೃಪ್ತಿದಾಯಕ ಬದುಕನ್ನು ಬಿಟ್ಟು ಊರಿಗೆ ಮರಳಿ ಕೆಸರುಗದ್ದೆಯಲ್ಲಿ ನೇಗಿಲು ಹಿಡಿಯಬಹುದೇ? ಅಡಿಕೆ ಮರದ ಚಂಡೆಯನ್ನು ಬಗ್ಗಿಸಿ ಕೊನೆಕೊಯ್ಯ ಬಹುದೇ, ಕೊನೆಗಳಿಗೆ ಮದ್ದು ಹೊಡೆಯುಬಹುದೇ, ಕೈ ತೊಗರು ಮಾಡಿಕೊಂಡು ಅಡಿಕೆ ಸುಲಿಯಬಹುದೇ? ಸಾರಿಗೆ, ಸಂಪರ್ಕ ಸರಿಯಾಗಿ ಇಲ್ಲದ, ದಟ್ಟಡವಿಯ ಮಧ್ಯದ, ನಾಲ್ಕು ಗುಡ್ಡಗಳ ಸಂದಿಯಲ್ಲಿರುವ, ಸ್ವಾತಂತ್ರ್ಯ ದೊರಕಿ ಏಳು ದಶಕಗಳು ಕಳೆದರೂ ಕನಿಷ್ಠ ನಾಗರಿಕ ಸೌಲಭ್ಯಕ್ಕೆ ಹೋರಾಡುವ ಪರಿಸ್ಥಿತಿ ಇರುವ ಹಳ್ಳಿ ಕೊಂಪೆಗಳಿಗೆ ಮರಳಬಹುದೇ? ಬೆಲೆ ಇದ್ದಾಗ ಬೆಳೆ ಇಲ್ಲ..
ಬೆಳೆ ಇದ್ದಾಗ ಬೆಲೆ ಇಲ್ಲ ಎನ್ನುವ ಕೃಷಿ ವ್ಯವಸ್ಥೆಗೆ ಅವರು ಬರಬಹುದೇ? ಉನ್ನತ ಶಿಕ್ಷಣದ ಕಾಲೇಜುಗಳಿಲ್ಲದ, ಸರಿಯಾದ ಅಸ್ಪತ್ರೆಗಳಿಲ್ಲದ, ದುಡಿಯವ ಕೈಗಳಿಗೆ ಉದ್ಯೋಗ ನೀಡುವ ಉದ್ಯಮಗಳು ಇಲ್ಲದ ಊರಿಗೆ ಅವರು ಮುಖ ತೋರಿಸಬಹುದೇ? ಆಧುನಿಕ ಬದುಕಿಗೆ ಇಷ್ಟು ದಿನ ಹೊಂದಿಕೊಂಡಿರುವವರು, ಸರಿಯಾದ ದಿಕ್ಕು ದೆಸೆ ಇಲ್ಲದ ಅನಿಶ್ಚತೆಯ ಬದುಕಿಗೆ ಬಾಗಬಹುದೇ? ಜೀವನದ ಮುಸ್ಸಂಜೆಯಲ್ಲಿರುವ, ಶತಕದ ಆಸು ಪಾಸಿನಲ್ಲಿರುವ ಮೂರು ಎಕರೆ ಭಾಗಾಯತ ( ಅಡಿಕೆ ತೋಟ) ಮತ್ತು ಎರಡು ಎಕರೆ ತರಿ (ಭತ್ತದ ಗದ್ದೆ) ಇರುವ ಮಂಜಯ್ಯನವರು (ಕಾಲ್ಪನಿಕ ಹೆಸರು) ಅಭಿಪ್ರಾಯವನ್ನು ಕೇಳುವುದಾದರೆ, ಇದು ಕುಟುಂಬ ಯೋಜನೆ ಮತ್ತು ಸಾಕ್ಷರತೆಯನ್ನು ಗಂಭೀರವಾಗಿ ಪರಿಗಣಿಸಿ ಬದುಕಿನಲ್ಲಿ ಅಳವಡಿಸಿರುವುದರ ನೇರ ಪರಿಣಾಮ.
ಹಿರಿ ಮಗಳು ಮದುವೆಯಾಗಿ ಗಂಡನೊಂದಿಗೆ ಜರ್ಮನಿಯಲ್ಲಿ ವಾಸ. ಎರಡನೆ ಮಗ ಕ್ಯಾಲಿಫೋರ್ನಿಯಾದಲ್ಲಿ ಒಂದು ಉತ್ತಮ ಉದ್ಯೋಗಕ್ಕೆ ಲಾಗ್ ಇನ್ ಆಗಿ ಬಹುತೇಕ ಸದ್ಯದಲ್ಲಿಯೇ ಹಸಿರು ಕಾರ್ಡ್ ಹಿಡಿಯುವವನಿzನೆ. ಮೂರನೆಯವನು ಲಂಡನ್ ನಲ್ಲಿ. ತಮ್ಮ ನಂತರ ತಮ್ಮ ಜಮೀನಿನ ಕಥೆಏನಾಗಬಹುದೆನ್ನುವ ಚಿಂತೆಯಲ್ಲಿ ಈ ದಂಪತಿಗಳ ವಯಸ್ಸು ಮಾಮೂಲಿಗಿಂತ ವೇಗದಲ್ಲಿ ಹೆಚ್ಚಾಗುತ್ತಿದೆ. ಸಾಯುವ ಮೊದಲು ನೀರು ಬಿಡುವುದುಹೋಗಲಿ, ಅಂತ್ಯ ಸಂಸ್ಕಾರಕ್ಕಾದರೂ ಬರಬಹುದೇ ಎನ್ನುವ ವ್ಯಥೆ ಅವರನ್ನು ಹಿಂಜುತ್ತಿದೆ.
ಸುಬ್ಬಾರಾಯರ ಎರಡೂ ಮಕ್ಕಳಿಗೆ ಬೆಂಗಳೂರಿನಲ್ಲಿ ಯಾವುದೋ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ. ಸರತಿಯಂತೆ ಅಣ್ಣ ತಮ್ಮಂದಿರು ತಿಂಗಳಿಗೊಮ್ಮೆ ಊರಿಗೆ ಬಂದು ವಯಸ್ಸಾದ ತಂದೆ ತಾಯಿಯರನ್ನು ನೋಡಿ ಹೋಗುತ್ತಾರೆ. ಇದರಲ್ಲಿ ಯಾಂತ್ರಿಕತೆಯ ಹೊರತಾಗಿ ಇನ್ನೇನೂ ಕಾಣುವುದಿಲ್ಲ. ಯಾರಾದರೂ ಏನಾದರೂ ಅಂದಾರು ಎನ್ನುವ ಭಯ ಅವರ ಬರುವಿಕೆಯ ಹಿಂದೆ ಗೋಚರಿಸುತ್ತದೆ. ಎಷ್ಟೋ ಪ್ರಕರಣಗಳಲ್ಲಿ ತಮ್ಮನು ಊರಿಗೆ ಹೋಗಲಿ ಎಂದು ಅಣ್ಣ, ಅಣ್ಣನು ಊರಿಗೆ ಹೋಗಲಿ ಎಂದು ತಮ್ಮ ತರಾಟೆ ತೆಗೆಯುವುದು ಸಾಮಾನ್ಯವಾಗಿ ಕಾಣುತ್ತಿದೆ.
ನಗರದ ಕಾಂಕ್ರೀಟ್ ಜಂಗಲ್ ಬಿಟ್ಟು ಊರಿನ ಜಡ ಬದುಕಿಗೆ ಮರಳದಿರಲು ಹೆಂಡತಿ ಮಕ್ಕಳ ವರಾತ ಬೇರೆ. ಕೃಷಿ ಕಾರ್ಮಿಕರ ಕೊರತೆ ಒಂದಾದರೆ,ಸಂಬಳ ಕೊಡಲಾರದಷ್ಟು ದುಬಾರಿ ಬೇರೆ. ಹಿಡುವಳಿ ಚಿಕ್ಕದಾದರೂ, ಅದನ್ನುನಿರ್ವಹಿಸಲಾಗದ ಅಸಹಾಯಕತೆ ಇನ್ನೊಂದು ಕಡೆ. ತಾವು ದಶಕಗಳ ಕಾಲ ನಿರ್ವಹಿಸಿದ ಜಮೀನು ನಿರ್ವಹಣೆ ಇಲ್ಲದೇ ಬಾಡುವುದನ್ನು ನೋಡಿ, ಹೇಳಲೂ ಆಗದೇ , ಹೇಳದೇ ಇರಲೂ ಆಗದೇ ಅನುಭವಿಸುವ ಸಂಕಟ ಇನ್ನೊಂದು ಕಡೆ ಎರಡು ಮೂರು ದಿನಗಳಿಗೊಮ್ಮೆ ರಾತ್ರಿ ಬರುವ ಮಕ್ಕಳ, ಮೊಮ್ಮಕ್ಕಳ ಫೋನ್‌ಗೆ ಕಾಯುತ್ತಾ, ದಿನಪೂರ್ತಿ ಧಾರಾವಾಹಿ ಗಳನ್ನು ನೋಡುತ್ತಾ ದಿನಕಳೆಯುವುದು ಅವರಿಗೆ ಅಭ್ಯಾಸವಾಗಿದೆ.
ಬಹುತೇಕ ಎಲ್ಲರ ಮನೆಯಲ್ಲೂ ಇದೇ ಪರಿಸ್ಥಿತಿ ಇರುವಾಗ , ಮನೆಗೆ ಬರುವ ನೆಂಟರಿಷ್ಟರೂ ಕಡಿಮೆಯಾಗಿದ್ದಾರೆ. ನೆಂಟರು ಮನೆಗೆ ಬಂದಾಗಇತ್ತೀಚೆಗೆ ನಿಮ್ಮ ಮಗ ಮೊಮ್ಕಕ್ಕಳು ಬಂದಿದ್ದಾ.. ಹಬ್ಬಕ್ಕೆ ಬರ್ತಾರಾ.. ಎಂದು ಅವರು ಇವರನ್ನು,  \ಇವರು ಅವರನ್ನು ವಿಚಾರಿಸಿಕೊಳ್ಳುತ್ತಾರೆ.ಮುಂದೇನು ಎಂದು ಭವಿಷ್ಯದ ಬಗೆಗೆ ಜತೆಯಾಗಿ ಚಿಂತಿಸುತ್ತಾರೆ. ಅನುವಂಶಿಕವಾಗಿ ಬಂದ, ಮಳೆ – ಚಳಿ – ಬಿಸಿಲು ಎನ್ನದೇ ಬೆವರು ಸುರಿಸಿ ದುಡಿದತಮ್ಮ ಅಸ್ತಿ ಪರರ ಪಾಲಾಗಬಹುದೆನ್ನುವ ಭೀತಿ ಅವರನ್ನು ಸದಾ ಕಾಡುತ್ತದೆ.
ಈ ಸಮಸ್ಯೆಗೆ ಪರಿಹಾರ ಇಲ್ಲವೆಂದಿಲ್ಲ. ಈ ಭಾಗದ ರಾಜಕೀಯ ಧುರೀಣರು ಇದನ್ನು ಗಂಭೀರವಾಗಿ ಯೋಚಿಸಬೇಕಾಗಿದೆ. ಇಲ್ಲಿಂದ ಬದುಕುಅರಸಿ ಹೊರ ಹೋದ ಯುವಕರು ಹಿಂತಿಗಿರುಗಿ ಬರುವಂತ ಉದ್ಯೋಗದ ವಾತಾವರಣವನ್ನು ಇಲ್ಲಿ ಕಲ್ಪಿಸಬೇಕಾಗಿದೆ. ಸಾಫ್ಟ್ವೇರ್ ವಲಯದಲ್ಲಿಹೆಚ್ಚಿನವರು ಕಾಣುತ್ತಿದ್ದು, ಅವರು ಇಲ್ಲಿಯೇ ಲಾಗ್ ಇನ್ ಆಗುಂವಂಥ ವ್ಯವಸ್ಥೆ ಆಗಬೇಕಾಗಿದೆ. ವರ್ಷ ಗಳ ಹಿಂದೆ ಸಾಫ್ಟ್ವೇರ್ ದಿಗ್ಗಜರೊಬ್ಬರು ಈನಿಟ್ಟಿನಲ್ಲಿ ಮಾತನಾನಾಡಿದ್ದರು. ಅವರಿಗೆ ಇಲ್ಲಿಯೇ ಉದ್ಯೋಗ ಸಿಗುವಂತಾದರೆ, ನಿರ್ಲಕ್ಷ್ಯಕ್ಕೊಳಗಾಗಿರುವ ಕೃಷಿ ಪುನಶ್ಚೇತನಗೊಳ್ಳಬಹುದು ಎಂದು ಅವರು ಹೇಳಿದ್ದರು.
ಅವರು ತಮ್ಮ ಉದ್ಯೋಗ ದೊಂದಿಗೆ ತಮ್ಮ ಚಿಕ್ಕ ಪುಟ್ಟ ಜಮೀನು ಗಳನ್ನು ಮತ್ತು ಜೀವನದ ಮುಸ್ಸಂಜೆಯಲ್ಲಿರುವ ಹಿರಿಯರನ್ನು ನೋಡಿಕೊಳ್ಳಬ ಹುದು ಎಂದು ಹೇಳಿದ್ದರು. ಹೊರ ಹೋದವರಲ್ಲಿ ಕನಿಷ್ಠ ಶೇ.೨೫ಜನರಾದರೂ, ಹಿಂತಿರುಗಿದರೆ, ಸಂಕಷ್ಟದಲ್ಲಿರುವ ಕೌಟುಂಬಿಕ ವ್ಯವಸ್ಥೆ ಹಳಿ ಏರಬಹುದು. ನಿರ್ಲಕ್ಷ್ಯಕ್ಕೊಳಪಡುತ್ತಿರುವ ಕೃಷಿ ಚೇತರಿಸಿಕೊಳ್ಳಬಹುದು. ಇವು ಬಹುತೇಕ ಕೃಷಿ ಕುಟುಂಬದಲ್ಲಿ ಮತ್ತು ವಿದ್ಯೆಯನ್ನು ಗಂಭೀರ ವಾಗಿ ಪರಿಗಣಿಸಿದ ಸಂಸಾರದಲ್ಲಿ ಕಾಣುವ ಬದಲಾವಣೆಯ ದೃಶ್ಯಗಳು.