ಪುರಂದರ ನೀ ಎಷ್ಟು ಹತ್ತಿರ
ಸಾಂದರ್ಭಿಕ
ಡಾ.ಎಂ.ಆರ್‌.ಸತ್ಯನಾರಾಯಣ, ಗಮಕ ವಿದ್ವಾನ್‌
ಸಂತ ಶ್ರೀ ತ್ಯಾಗರಾಜರು ಪ್ರಹ್ಲಾದ ಭಕ್ತಿ ವಿಜಯದಲ್ಲಿ ನಾಂದಿ ಪದ್ಯಗಳನ್ನು ಬರೆಯುವ ಸಂದರ್ಭದಲ್ಲಿ ಪುರಂದರರನ್ನು ಸ್ಮರಿಸುತ್ತಾರೆ. ಆ ಸಾಲು ಹೀಗಿದೆ.
‘ದುರಿತ ವ್ರಾತಮುಲೆಲ್ಲನು ಪರಿಮಾರ್ಚೆಡಿ ಹರಿಗುಣಮುಲ ಬಾಹುಚುನೆಪುಡುನ್, ಪರವಶುಡ್ಯೆವೆಲಯು ಪುರಂದರ ದಾಸುನಿ ಮಹಿಮ ಮುಲನು ದಲಚೆದಮದಿಲೋನ್’ ಪುರಂದರದಾಸರಲ್ಲದೆ ನಾಮದೇವ, ತುಕಾರಾಮ, ಜ್ಞಾನದೇವ, ಸಹದೇವ, ಜಯದೇವ, ನಾರಾಯಣ ತೀರ್ಥ ಮುಂತಾದವರ ನಾಮೋಚ್ಚಾರಣೆ ಮಾಡಿ ಕಥೆಯನ್ನು ಆರಂಭಿಸುವ ವಾಡಿಕೆ ನಮ್ಮ ಸಂಪ್ರದಾಯ ದಲ್ಲಿತ್ತು.
ದಾಸರೆಂದರೆ ಪುರಂದರ ದಾಸರಯ್ಯ ಎಂಬ ನುಡಿ ಈಗಲೂ ಜಗಜ್ಜನಿತ. ದಾಸ ವಿರಚಿತ ಸಾಹಿತ್ಯ ಸಕಲ ಸಾಹಿತ್ಯ ಶಿರೋರತ್ನ ಎಂದರೆ ತಪ್ಪಿಲ್ಲ.೧೫ನೇ ಶತಮಾನವನ್ನು ಕುಮಾರ ವ್ಯಾಸ ಯುಗ ಎಂದು ಕರೆಯಬಹುದು. ಈ ಶತಮಾನ ಕರ್ನಾಟಕದ ಚರಿತ್ರೆಯಲ್ಲಿ ಅತ್ಯಂತ ಮಹತ್ವದ ದೀರ್ಘ ಅವಽ. ಆಗ ಜನಿಸಿದ ಭಕ್ತಿ ಸಾಹಿತ್ಯವೆಂಬ ಪ್ರಕಾರ ಮತ್ತಿದನ್ನು ಮೀರಿ ನಿಲ್ಲುವ ಸಾಹಿತ್ಯಬೇರಾವ ದೇಶದಲ್ಲೂ ಕಾಣಲು ಬರುವುದಿಲ್ಲ. ಆ ವರೆಗೆ ಬಂದ ಕಾವ್ಯ ಸಾಹಿತ್ಯ ಹಳೆಗನ್ನಡ ಬಳಕೆ ಯದು.
ವಚನ ಸಾಹಿತ್ಯ ಆಡು ಭಾಷೆಯದು. ದಾಸ ಸಾಹಿತ್ಯ ಸಹ ಆಡು ಭಾಷೆಯದೇ ಆದರೂ ಅದಕ್ಕೆ ಲೇಪವಾದದ್ದು ಭಕ್ತಿ?. ದೇವನನ್ನು ಹತ್ತಿರ ಮಾಡಿಕೊಂಡ, ಹೇಗೆಂದರೆ ಹಾಗೆ ಸ್ವಾಮಿಯಂತೆ, ಸಖನಂತೆ, ಪತಿಯಂತೆ, ಮಗನಂತೆ ನಿಲ್ಲಿಸಿಕೊಂಡು ಮಾತನಾಡಿಸಿ ಅವನ ಲೀಲಾ ವಿನೋದಗಳನ್ನು ಪದ ಪದ್ಯಗಳಲ್ಲಿ ಚಿತ್ರಿಸಿ ಸಂಸ್ಕೃತಗಂಧದಿಂದ ಕನ್ನಡ ಚಂದನ ತೇದ ಕೀರ್ತಿ ಹರಿದಾಸರದು.
ಇಂತಹ ಭಕ್ತಿ ಸಾಹಿತ್ಯ ಭಂಡಾರ ಭರತ ಖಂಡದಲ್ಲಿ ಬಿಟ್ಟು ಬೇರೆಲ್ಲೂ ಈ ಮಟ್ಟದಲ್ಲಿರಲು ಸಾಧ್ಯವಾದಂತಿಲ್ಲ. ಏಕೆಂದರೆ,ನಮ್ಮ ದೇಶದವರ ಮನಸ್ಸು – ಸಂಸ್ಕಾರ ವಿಭಿನ್ನ ರೀತಿಯದು. ಸಾಹಿತ್ಯ ಸಂದರ್ಭದಲ್ಲಿ ಆಗಾಗ ಆಡುವ, ಕೇಳಿ ಬರುವಮಾತೆಂದರೆ ಜಾತಿ. ಕಣ್ಣಿನಿಂದ ಕನ್ನಡವನ್ನು ವಿಭಜಿಸುವುದು. ಹಿಂದಿನವರಿಗೆ ಇಂಥ ಸಂಕುಚಿತತೆ ಇರಲಿಲ್ಲ. ಜೈನ ಸಾಹಿತ್ಯ,ವೀರಶೈವ ಸಾಹಿತ್ಯ, ಬ್ರಾಹ್ಮಣರ ಸಾಹಿತ್ಯ ಎಂದು ನಾಮಕರಣ ಮಾಡಿ ಅವರವರದು ಅನ್ನುವ ರೀತಿಯಲ್ಲಿ ವ್ಯಾಖ್ಯಾನಿಸುವಸಣ್ಣತನ ಕನ್ನಡ ಸಾಹಿತ್ಯವನ್ನು ಕಾಡಿದೆ. ಈ ಮೂರರಲ್ಲು ಪಾಂಡಿತ್ಯ ಪೂರ್ಣವೂ, ಕಾಠಿಣವೂ, ಸರಳ ರೀತಿಯಸಾಹಿತ್ಯವೂ ಇವೆ. ಸಾಂಪ್ರದಾಯಿಕ, ಸಾರ್ವತ್ರಿಕವಾದ ಇಂಥ ವಿಫಲ ಸಾಹಿತ್ಯವನ್ನು ಒಟ್ಟಾರೆ ಗಮನಿಸಿ ಪರಸ್ಪರ ಸಾಮ್ಯತೆಗಳನ್ನು ತಿಳಿಸಬೇಕಿರುವ ಸಂದರ್ಭ ಅನಿವಾರ್ಯವಾಗಿದೆ.
ಕಾವ್ಯಗಳೆಲ್ಲವನ್ನು ಅಪ್ಪಿಕೊಳ್ಳುವ, ಅಪ್ಪಿ ಮುದ್ದಾಡಿ, ಓದಿ, ಸುಖಿಸಿ, ಅದರ ಆನಂದವನ್ನು ಉಣಬಡಿಸುವ ಕೆಲಸ ಎಂದಿಗಿಂತ ಇಂದು ಅಗತ್ಯವಾಗಿದೆ. ಇನ್ನು ನೇರವಾಗಿ ವಿಷಯಕ್ಕೆ ಬರುವುದಾದರೆ; ಕರ್ನಾಟಕ ಸಂಗೀತ ಪಿತಾಮಹರು ಹರಿದಾಸ ಸಾಹಿತ್ಯದ ಮುಖ್ಯ ಪ್ರವರ್ತಕರೂ ಎನಿಸಿದ ಶ್ರೀಪುರಂದರ ದಾಸರು ಕನ್ನಡ ದಾಸ ವ್ಮಾಯದ ಆದ್ಯರು.
ಅವರು ರಚಿಸಿದ್ದು ನಾಲ್ಕು ಮುಕ್ಕಾಲು ಲಕ್ಷ ದೇವರ ನಾಮ ಗಳೆಂದು ಪ್ರತೀತಿ ಇದ್ದರೂ ಪ್ರಸ್ತುತ ದಕ್ಕಿರುವುದನ್ನಾದರೂ ಬಳಸುವ ಮೂಲಕ ಕನ್ನಡಿಗರು ಕೃತಾರ್ಥರಾಗ ಬೇಕಾಗಿದೆ. ವಿಜಯ ನಗರದ ಸಾಮ್ರಾಜ್ಯ ನಾಶವಾದ ಸಂದರ್ಭದಲ್ಲೇ ದಾಸ ಸಾಹಿತ್ಯದ ಭಂಡಾರ ಕೂಡ ಸುಮಾರು ಭಾಗ ನಾಶ ವಾಯಿತೆಂದು ಹೇಳುತ್ತಾರೆ.
ನಮಗೆ ಇರುವುದನ್ನೆ ಅರಗಿಸಿಕೊಳ್ಳಬೇಕಿದೆ. ಈ ದಿಸೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಾಸ ಸಾಹಿತ್ಯ ಸಂಪುಟವನ್ನಹೊರತಂದಿದೆ. ಇದೊಂದು ಸುಕೃತದ ಸಮಾಚಾರ. ಈ ಬರಹದಲ್ಲಿ ನಾನು ದಾಸ ಸಾಹಿತ್ಯ ಕುರಿತಾದ ಕೆಲವು ವೈಯಕ್ತಿಕಚಿಂತನೆಗಳನ್ನು ಒಬ್ಬ ಶುದ್ಧ ಕೇಳುಗನಾಗಿ ಕೆಲವು ಅಂಶಗಳನ್ನು ಗಮನಕ್ಕೆ ತರಲು ಇಚ್ಚಿಸುತ್ತೇನೆ.
ದಾಸರೆಂದರೆ ಪುರಂದರ ದಾಸರು ನಿಜ, ಅರ್ಥಪೂರ್ಣವಾದ ಮಾತು. ಆದರೆ ಅವರ ಕೀರ್ತನೆಗಳಲ್ಲಿ ನಾವು ಆರಿಸಿರುವುದೆಷ್ಟು; ಮೊದ ಮೊದಲು ಅಲ್ಲಿ ಇಲ್ಲಿ ಕೆಲವು ಪ್ರಕಾಶಕರು ಹೊರತಂದ ಚಿಕ್ಕ ಪುಸ್ತಕ ಗಳಿಂದ ದೇವರನಾಮಗಳನ್ನು ಆಯ್ದು ಹಾಡುತ್ತಿದ್ದುದು. ಆ ನಂತರ ಸಮಗ್ರ ದಾಸ ಸಾಹಿತ್ಯ ನಮ್ಮ ಕಣ್ಣ ಮುಂದೆ ಬಂದಿದ್ದರೂ, ಅವ್ಯಾವುದನ್ನೂ ನೋಡದೆ ಹೇಳಿದನ್ನೇ ಹೇಳೋ ಕಿಸುಬಾಯಿದಾಸ ಅನ್ನುವಂತೆ ಹಾಡಿದನ್ನೆ ಹಾಡುವುದು ತುಂಬಾ ಪ್ರಸಿದ್ಧಿ ಪಡೆದ ಅಥವಾ ಯಾರಿಂದಲೋ ಅಪಾರ ಪ್ರಚಾರ ಗೊಂಡು ಖ್ಯಾತಿಗಳಿಸಿದ್ದನ್ನು ಪುನರಾವರ್ತನೆ ಮಾಡುವುದು ಸರ್ವೇ ಸಾಧಾರಣ ಕಂಡ ಬರುವ ಅಂಶ.
ಉದಾಹರಣೆಗೆ: ಬಿ.ಎಸ್. ರಾಜಯ್ಯಂಗಾರ್ ಹಾಡಿದ ಆಡಿಸಿದಳೆಶೋದೆ ಜಗದೋದ್ಧಾರನ? ಎಂಬ ಕೃತಿ, ಜಾನ್ ಬಿ ಹಿಗ್ಗಿನ್ಸ್ ಹಾಡಿದ ‘ಕೃಷ್ಣ ನೀ ಬೇಗನೆ ಬಾರೋ?’, ಎಂ.ಎಲ್. ವಸಂತ ಕುಸೂರಿ ಅವರ ಕಂಠದಿಂದ ಮೂಡಿದ ‘ಬಾರೋ ಕೃಷ್ಣಯ್ಯ?’, ಆರ್.ಕೆ. ಶ್ರೀಕಂಠನ್ ಅವರು ಹಾಡಿದ ನಾರಾಯಣ ನಿನ್ನ ನಾಮದ ಸ್ಮರಣೆಯ ಮೊದಲಾದವು ಬಹುತೇಕ. ಎಷ್ಟೋ ಕಲಾವಿದರು ಕಚೇರಿಗಳಲ್ಲಿ ಈಗಲೂ ಹಾಡಿ ಹಾಡಿ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದಾರೆ.
ಕನಕದಾಸರ ‘ತೊರೆದು ಜೀವಿಸಬಹುದೆ? ಈ ಕೃತಿಯಂತೂ ಅತ್ಯಂತ ಜನಪ್ರಿಯ ಹಾಡಾಗಿದೆ. ಇದರ ಸಂಗೀತ ಸಂಯೋಜನೆ ವಸಂತ ಕನಕಾಪುರ್ ಅವರದು. ಹಾಡಿದವರು, ಎಂ. ವೆಂಕಟೇಶ್ ಕುಮಾರ್ ಅವರು. ಆಗಿನ ದಿನಗಳಲ್ಲಿ ದೇವರ ನಾಮ ಗಳಲ್ಲಿ ಹೆಸರು ಮಾಡಿದ್ದವರೆಂದರೆ ಎ. ಸುಬ್ಬ ರಾಯರು. ಬಹುಮಂದಿ ಸುಬ್ಬರಾಯರ ಸಂಗೀತ ಕಚೇರಿಯಲ್ಲಿ ದೇವರ ನಾಮಗಳಿರುತ್ತವೆ ಎಂದು ಕೇಳಲು ಬರುತ್ತಿದ್ದುದುಂಟು.
ಎಷ್ಟೋ ದೇವರ ನಾಮಗಳಿಗೆ ಪ್ರಸಿದ್ಧ ವಿದ್ವಾಂಸರು ಸ್ವರ ಮಟ್ಟುಗಳನ್ನು ಹಾಕಿ ಪ್ರಕಟಿಸಿದ್ದರು. ತ್ಯಾಗರಾಜರ ಕೀರ್ತನೆ ಗಳಂತೆ(ಪ್ರಸಿದ್ಧ ಚೌಕಟ್ಟಿನಲ್ಲಿ) ದಾಸರ ಪದಗಳು ಹೀಗೆ ಹಾಡಬೇಕೆಂಬ ನಿಯಮಕ್ಕೆ ಒಳಪಡದೆ ಹೋದದು ದುರದೃಷ್ಟ; ಈ ದಿಸೆಯಲ್ಲಿವೀಣೆ ರಾಜೇರಾಯರು ಮೊದಲಾದವರು ಕೆಲಸ ಮಾಡಿದ್ದರು. ಅದಕ್ಕೂ ಮೊದಲೇ ಆಸ್ಥಾನ ವಿದ್ವಾನ್ ಸೋಸಲೆ ರಾಮದಾಸರುಹಾಡಿಕೊಂಡು ಪ್ರಚಾರ ಮಾಡಿದು ದನ್ನು ಗಮನಿಸಬೇಕು.
ಮೋಹನರಾಗದಲ್ಲಿ ಹಾಡುವ ಸತತ ಗಣನಾಥ ಸಿದ್ಧಿಯ ನೀವ ಕಾರ್ಯದಲ್ಲಿ ಸುರುಟಿ ರಾಗದಲ್ಲಿ ಹಾಡುವ? ಇಂದಿನ ದಿನವೇ ಶುಭ ದಿನವು. ಜೋಳಿಗೆ ಹಿಡಿದು ಊರೂರು ಅಲೆವ ದಾಸರು ಪದ ಹೇಳಿದರೆ ಹೊರತು ಸ್ವರ ಪ್ರಸ್ತಾರವನ್ನಲ್ಲ. ದಾಸ ಧರ್ಮ ಪ್ರತಿಪಾದನೆ, ಲೋಕ ನೀತಿ, ಸಮಾಜದ ಓರೆ ಕೋರೆ ಗಳನ್ನು ತಿದ್ದುವ ಜ್ಞಾನ ಭಕ್ತಿ ವೈರಾಗ್ಯದ ಮೂಲಕ ಜನರ ಮನಸ್ಸನ್ನು ಹದಗೊಳಿಸುವ ಇಂತಹ ಮಹತ್ವದ ಉದ್ದೇಶ ದಾಸರದು.
ಈಗಾಗಿ ದಾಸರ ಪದಗಳು ಪದವಾಗಿ ದೇವರ ನಾಮಗಳೆನಿಸಿದವು. ತ್ಯಾಗರಾಜ ಮುಂತಾದವರದು ಕೀರ್ತನೆ ಗಳೆನಿಸಿದವು. ಪದ ಕಳೆದರು ಹಾಡುವುದೇ ಹಾಡುತ್ತಾ ಹಾಡುತ್ತಾ ಹೋದರೆ ಹಾದಿ ಸುಗಮ ಎನಿಸುತ್ತಿತ್ತು.
ಬುದ್ಧಿಮಾತು:ಹರಿದಾಸರ ರೀತಿ ನೀತಿಗಳನ್ನು ತಿಳಿಸುವ ಪರಿ ನೋಡು ಆದದ್ದಾಯಿತು. ಇನ್ನಾದರು ಒಳ್ಳೆ ಹಾದಿ ಹಿಡಿಯೊ ಪ್ರಾಣಿ ದುರ್ನಡತೆಯಿಂದ ಹೋದರು ಇಹಪರದಿ ಮೋದವೆಂದಿಗು ಕಾಣೆ. ಕಲ್ಲಾಗಿ ಇರಬೇಕು ಕಠಿಣಭವತೊರೆಯೊಳಗೆಬಿಲ್ಲಾಗಿ ಇರಬೇಕು ತನ್ನವರೊಳಗೆ ಮೆಲ್ಲನೆ ಮಾಧವನ ಮನವ ಮೆಟ್ಟಿಸಬೇಕು ಬೆಲ್ಲವಾಗಿರಬೇಕು ಬಲ್ಲವರೊಳಗೆ ಬುದ್ಧಿಯಲಿ ತನುಮನವ ತಿದ್ದಿಕೊಳ್ಳಲಿ ಬೇಕು ಮುದ್ದಾಗಿ ಇರಬೇಕು ಮುನಿಯೋಗಿಗಳಿಗೆ ವಿಷಯ ಭೋಗದ ತೃಣಕೆ ಉರಿಯಾಗಿರಲು ಬೇಕು ಬಲ್ಲಿದ ನೀನೆಂದು ಬಡವರ ಬಾಯ ಬಡಿಯ ಬೇಡ ಮಾಡು ದಾನದರ್ಮ, ಪರ ಉಪಕಾರದ ಮೂಡರೊಡನೆ ಆಡದಿರುಕೇಡನೆಣಿಸದಿರು ಎಚ್ಚರಿಕೆ; ಸತ್ಯವಂತರ ಸಂಗವಿರಲು ತೀರ್ಥವ್ಯಾತಕೆ ನಿತ್ಯ ಅನ್ನದಾನವಿರಲು ಭಯವು ಯಾತಕೆತಾನು ಉಣ್ಣದ ಪರರಿಗೀಯದ ಧನವಿದ್ಯಾತಕೆ ಮಾನಹೀನನಾಗಿ ಬಾಳ್ವ ಮನುಜನೇತಕೆ ಜ್ಞಾನವಿಲ್ಲದೆ ನೂರು ಕಾಲ ಬದುಕಲೇತಕೆ.
ತನ್ನ ಮಾನಿನಿಯ ತೊರೆದ ಮೇಲೆ ಭೋಗವ್ಯಾತಕೆ ಮನ್ನಕೆಯರಿಯ ರಾಜ್ಯವಾಳದ ಧೊರೆಯು ಏತಕೆ ಮುನ್ನಕೊಟ್ಟು ಹುಟ್ಟಿದಲ್ಲದೆ ಬಯಸಲ್ಯಾತಕೆ ತನ್ನಕಾರ್ಯಕಾಗಿ ಪರರ ಕೆಡಿಸುವ ಸಂಗಬೇಡ ಘನ್ನ ಮಹಿಮ ಪುರಂದರವಿಠಲನ ಮರೆಯಬೇಡಅಜ್ಞಾನಿಗಳ ಕೂಡ ಅಧಿಕ ಸ್ನೇಹಕ್ಕಿಂತ ಸುಜ್ಞಾನಿಗಳ ಕೂಡೆ ಜಗಳವೆ ಲೇಸು. ಇಂಥ ಲೋಕನೀತಿ ಲೆಕ್ಕಕ್ಕಿಲ್ಲ. ಮಾತು ಮಾತಿಗೆ ಜನರನ್ನ ತಿದ್ದುವುದು.
ಯಾವುದು ಹಿತ – ಯಾವುದು ಅಹಿತ ಜೀವನ ಅಂದರೆ ಏನು ಹೇಗಿರಬೇಕು ಎಂಬಂಥ ನುಡಿ ಮುತ್ತುಗಳು. ಇವು ಗಾದೆಗಳೂ ಹೌದು, ಸಾರ್ವತ್ರಿಕ ತತ್ವದ ನುಡಿಗಳೂ ಹೌದು. ಇರುವುದ ರೊಳಗೆ ಸವೆಸು, ಆಸೆ ಬೇಡ. ಅರಸನ ಓಲಗಕ್ಕಿಂತ ತಿಂದುಂಬುವುದೆ ಲೇಸು.ಹಂಗಿಸುವವನ ಪಾಲೋಸರಕ್ಕಿಂತ ನೀರು ಕುಡಿವುದೆ ಲೇಸು. ಕುಹುಕರ ಸಂಗಕ್ಕಿಂತ ಅಡವಿ ಯೊಳಗೆ ಇರುವುದೆ ಲೇಸು.ಅಸಮಬಲ ನಮ್ಮ ಶ್ರೀ ಪುರಂದರ ವಿಠಲ ನಿಷಿ ದಿನದಿ ನೆನೆಯುತ್ತ ಬಾಳುವುದೆ ಲೇಸು. ಏನೇ ವಿಷಯ ಹೇಳಿದರು ಅದು ಕೊನೆ ಮುಟ್ಟುವುದು ವಿಠಲಗಲ್ವೆ!
ಪಾಪಿ ಬಲ್ಲನೆ ಪರರ ಸುಖ ದುಃಖವ. ಕೋಪಿ ಬಲ್ಲನೆ ಶಾಂತಿ ಶೀಲ ಸದ್ಗುಣವ. ಕತ್ತೆ ಬಲ್ಲುದೆ ಕತ್ತುರಿಯ ಪರಿಮಳವ. ಈಕೃತಿಯಂತೂ ದೊಡ್ಡ ಪಾಠವಿದ್ದಂತೆ. ಹೂವಿನ ಸುಗಂಧ ಹೇ ನಿಗೇನು ಗೊತ್ತು? ಶ್ವಾನಕ್ಕೆ ತಿಳಿದೀತೆ ರಾಗ ಭೇದ ಹೀನನಿಗೆ ಸುಗುಣ ದುರ್ಗುಣಗಳು ತಿಳಿಯಲಾದೀತೆ !  ಕಾಗೆ ಬಲ್ಲುದೆ ಕೋಗಿಲೆಯ ಸ್ವರವನ್ನು ರೋಗಿ ಬಲ್ಲನೆ ಪಕ್ವ ಭೋಜನದ ಸವಿಯ ಹೇಡಿ ಬಲ್ಲನೆ ರಣದ ಸಾಹಸದ ಶೌರ್ಯವನು ಜೋಗಿ ಬಲ್ಲನೆ ಮನೆಯೊಳಿಲ್ಲ.
ಉಂಟು ಎಂಬುದನ್ನು ಬೇಡಿದುದ ನಮ್ಮ ಶ್ರೀ ಪುರಂದರ ವಿಠಲ ನೊಲ್ ನಾಡದೈವಂಗಳು ಕೊಡಬಲ್ಲವೆ ಮರುಳೆ. ಯಾರಲ್ಲಿ ಕೇಳಬೇಕೋ, ಏನನ್ನು ಕೇಳಬೇಕೋ ಕೇಳು ಕೊಡುತ್ತಾನೆ. ವಿಠಲ ವಲದಲ್ಲಿ ಉಳಿದ ದೈವಗಳು ನಿನ್ನ ಕಷ್ಟಕ್ಕೆ ಬರುವವೆ ?ದಾಸರು ಪದಪದಗಳಲ್ಲಿ ಬಗೆ ಬಗೆಯಲ್ಲಿ ಲೋಕಕ್ಕೆ ಬೇಕಾದ ಉಕ್ತಿಯಲ್ಲಿ ಬೊಗಸೆ ಬೊಗಸೆ ನೀಡಿದ್ದಾರೆ. ಪರಿಶುದ್ಧವಾಗಿಬಾಳುವುದಕ್ಕೆ ಏನು ಅಗತ್ಯವೋ ಅವೆಲ್ಲ ಇಲ್ಲಿವೆ. ಓದಲಿಕ್ಕೆ ವ್ಯವದಾನ ಬೇಕು. ಅರ್ಥಮಾಡಿಕೊಂಡು ಜೀವನದಲ್ಲಿಅಳವಡಿಸಿಕೊಳ್ಳಲು ಶಕ್ಯನಿರಬೇಕು.
ಹರಿಯ ಮಾರ್ಗವನ್ನನುಸರಿಸಿ, ಸ್ವಯಂ ಹರಿದಾಸ ರೆನಿಸಿ, ಸ್ವಾರ್ಥ ಪರಿತ್ಯಜಿಸಿ ಲೋಕೋಪಕಾರ ಮಾಡಿದವರು  ಹರಿದಾಸರು. ಅಂದರೆ, ದಾಸರು ಯಾರಿಗೆ ತಾನೆ ದೂರ ವಾದರು ಅವರ ಧರ್ಮ ಲೋಕನೀತಿ, ಯಾವ ಕಾಲಕ್ಕೆ ಬೇಡ? ಹೆಚ್ಚು ಕಡಿಮೆ೯ನೇ ಶತಮಾನದಿಂದ ಈ ದಾಸ ಸಾಹಿತ್ಯದ ಜೀವನದಿ ಹರಿದಿದೆ. ಕ್ರಿ.ಶ೮೭೯ರ ಸರಿ ಸುಮಾರಿನಲ್ಲಿದ್ದ ಅಚಲಾನಂದರೇ ದಾಸ ಸಾಹಿತ್ಯ ರಚನೆಗೆ ಮೊದಲಿಗರು ಎಂದು ಇತಿಹಾಸ ಹೇಳಿದೆ. ಕವಿರಾಜ ಮಾರ್ಗದ ಪ್ರೌಢಿಮೆ ಗಮನಿಸಿದರೆ ನೃಪತುಂಗನ ಕಾಲಕ್ಕಿಂತ ಎಷ್ಟೋ ಮೊದಲೇ ಕನ್ನಡ ಗ್ರಂಥಗಳು ರಚಿತವಾಗುತ್ತಿತ್ತು ಎಂಬುದು ಅರ್ಥ ವಾಗುತ್ತದೆ.
ಹಲ್ಮಿಡಿಯ ಶಾಸನದಲ್ಲಿ ಅರ್ಥವಾಗದ ಒಂದು ಶಬ್ದವೂ ಇಲ್ಲ ಎಂದ ಮೇಲೆ ಕನ್ನಡದ ವಿಲೀನತೆ ತಿಳಿದೀತು. ಅಚಲಾನಂದರ ಬಳಿಕ ದಾಸ ಸಾಹಿತ್ಯ ಕತ್ತಲೆಯಲ್ಲಿ ಕರಗಿ ಹೋಯಿತು. ಅನಂತರ ಅದು ಪುನಶ್ಚೇತನಗೊಂಡಿದ್ದೇ ಕ್ರಿ.ಶ.೧೨೦೫ರಿಂದ೧೨೧೪ರಲ್ಲಿ. ಈ ಅವಧಿಯಲ್ಲಿ ಶ್ರೀಮನ್ಮಧ್ವಾಚಾರ್ಯರು ಪೀಠವನ್ನೇರಿದ ಬಳಿಕ ನರಹರಿ ಬಳಿಕ ತೀರ್ಥರು ಭಾಗವತ ಧರ್ಮ ಪ್ರಚಾರಕ್ಕಾಗಿ ಕನ್ನಡ ದೇವರ ನಾಮಗಳನ್ನು ನಾಡಿಗೆ ನೀಡಿದರು.
ನರಹರಿ ತೀರ್ಥರದು ಕೇವಲ ನಾಂದಿಯಷ್ಟೆ. ಅವರ ರಚನೆಗಳು ಹೆಚ್ಚಿಲ್ಲಇದ್ದೀತೇನೋ ತಿಳಿದಿಲ್ಲ? ದಕ್ಕಿರುವುದು ಕೇವಲ ಬೆರಳಿನಷ್ಟು ಮಾತ್ರ. ಆ ನಂತರ ದಾಸ ಸಾಹಿತ್ಯಕ್ಕೆ ಪುನಃ ಕತ್ತಲಿನ ದಿನಗಳೇ; ಧರ್ಮ ಭೋಧನೆಗಾಗಿ ಸ್ವಾಮಿಯಾದ ನರಹರಿ ತೀರ್ಥರು ರಚನೆಗಳ ಕಡೆ ಗಮನ ಹರಿಸಿದಂತೆ ಕಾಣದೆ ಇದ್ದದು ಈ ಒಂದು ಧೀರ್ಘಕಾಲದ ಶೂನ್ಯತೆಗೆ ಕಾರಣ ವಾಯಿತೇನೋ ಎನ್ನಬಹುದು. ಅಂದರೆ ಕ್ರಿ.ಶ೧೪೫೦ರವರೆಗೆ ದಾಸ ಸಾಹಿತ್ಯ ಲಭ್ಯವಿಲ್ಲವಾಯಿತು. (ಗಮನಿಸಿ ಕುಮಾರ ವ್ಯಾಸನ ಕಾಲ೧೪೩೦ರಿಂದ) ಆಗ ಶ್ರೀಪಾದರಾಯರ ಕಾಲ, ಅವರ ಕಾಲದಿಂದಲೇ ಹರಿದಾಸ ಸಾಹಿತ್ಯ ಪುನರ್ ಜನ್ಮ ತಾಳಿತು ಎನ್ನಬಹುದು.
ಸಂಗೀತದಲ್ಲಿ ಸುಳಾದಿ? ಅನ್ನುವ ಪರಿಭಾಷೆ ಯಿಂದ ಕರ್ನಾಟಕ ಗಾಯನಕ್ಕೆ ಹೊಸ ಬೆಳಕನ್ನು ನೀಡಿದ ಕೀರ್ತಿಗೆ ಭಾಜನರು ಶ್ರೀಪಾದ ರಾಯರು. ಇವರ ನಂತರದವರೇ ವ್ಯಾಸರಾಯರು.೬೦ವರ್ಷ ಕಾಲದ ದೀರ್ಘ ಅವಧಿ ಅದೊಂದು ಕರ್ನಾಟಕ ಇತಿಹಾಸದಲ್ಲಿ ಸುವರ್ಣ ಯುಗ. ಗಾಯಕರಿಗೆ, ಶಾಸಕೋವಿದರಿಗೆ, ಪಂಡಿತರಿಗೆ ಆಶ್ರಯ, ಮತಸಹಾನುಭೂತಿ, ರಾಜಕಾರಣನಿಪುಣತೆ ಈ ಎಲ್ಲ ಸದ್ಗುಣಗಳ ಭಂಡಾರ ಶ್ರೀವ್ಯಾಸ ರಾಯರದು.
ಇವರ ಪ್ರಮುಖ ಶಿಷ್ಯರೇ ಶ್ರೀಪುರಂದರ ದಾಸರು. ಕರ್ನಾಟಕ ಸಂಗೀತ ಸಾಹಿತ್ಯ ಸುವರ್ಣಯುಗ ಗಾಯನದ ಮೂಲಕ ಕನ್ನಡ ಭಾಷಾ ಪ್ರಚಾರ, ಧರ್ಮ ಪ್ರಚಾರ ಮಾಡಿ ಸಮಾಜದ ಉದ್ಧಾರಕ್ಕಾಗಿ ಕಂಕಣ ಕಟ್ಟಿದವರು ಭಕ್ತಿ ಪಂಥವನ್ನು ಬೆಳೆಸಿದವರು ಶ್ರೀ ಪುರಂದರರು. ಆರಂಭದಲ್ಲಿ ಹೇಳಿರುವಂತೆ೧೫ನೇ ಶತಮಾನದ ಪುಣ್ಯವೋ ಏನೋ ಸಂಸ್ಕೃತ ಗ್ರಂಥಗಳಲ್ಲಿನ ಅಭಿಪ್ರಾಯ ಗಳನ್ನು ಸಂಸ್ಕೃತ ದಲ್ಲೆ ಹೇಳಿದಾಗ, ಓದಿದಾಗ ಕೇಳುಗರ ಮೇಲೆ ಆಗುತ್ತಿದ್ದ ಪರಿಣಾಮಕ್ಕೂ ಅದೇ ಪರಿಣಾಮ ಹರಿದಾಸರ ತಾಯ್ನುಡಿಯಲ್ಲಿ ಓದಿದಾಗ, ಕೇಳಿದಾಗ ಮನಸ್ಸಿನ ಮೇಲಾಗುವ ಪರಿಣಾಮಕ್ಕೂ ಅಜಗಜಾಂತರ ವ್ಯತ್ಯಾಸ ಎಂಬುದು ವೇದ್ಯ ಸಂಗತಿ ಮತ್ತು ಆ  ಸಂತೋಷವೇ ಬೇರೆ. ಬೆಲ್ಲ ಸಿಹಿಯನ್ನು ಸವಿದರೆ ಮಾತ್ರತಾನೆ.
ಅದರ ಸಹಿತನದ ಅರಿವು ಆಗಲು ಸಾಧ್ಯ. ಶಿಷ್ಟ ಜನರಲ್ಲಿ ಭಯ ಸಾಮಾನ್ಯ. ಅವರಲ್ಲಿ ದೇಹ ಗೇಹ ಸಹವಾಸಗಳು ಪವಿತ್ರ. ಸದಾಚಾರವನ್ನು ಚಾಚೂ ತಪ್ಪದೆ ಪರಿ ಪಾಲಿಸುವ ಜನ ಅವರು. ಶುಚಿಗು ಮಹತ್ವ ನೀಡುವವರು. ಆಚಾರದ ಹಳೇ ವಿಚಾರದೆಡೆಯೂ ಗಮನ ಅವರಿಗೆ. ಇದೇ ಶುಚಿ ಕನ್ನಡದಲ್ಲಿ ಮಡಿ? ಎನಿಸಿದೆ. ಈಗಿನ ದಿನಗಳಲ್ಲಿ ಮಡಿಯೇ ಮೈಲಿಗೆಯಾಗಿದೆ. ಮಡಿ ಎಂದರೆ ಏನು? ಯಾವುದು ಮಡಿ ಅಂತವೇ ದಾಸರು ವಿಷದ ಪಡಿಸಿದ್ದಾರೆ.
ಅಜ್ಞಾನದ ಮಡಿಯಿಂದ ಸುಜ್ಞಾನದ ಮಡಿಯತ್ತ ಕೊಂಡೊಯ್ಯುತ್ತಾರೆ. ಎಷ್ಟು ಕಾಠಿಣ್ಯ ನುಡಿ ಎಂದರೆ ‘ಮಡಿಯೂ ನೀನೇ ಮೈಲಿಗೆಯೂ ನೀನೆ, ಸುಡಲಿ ನಿನ್ನ ಮಡಿ ಬಿಕನಾಸಿ, ಚರ್ಮವ ತೊಳೆದರೆ ಕರ್ಮ ಹೋಗುವುದೆ, ಬಿಟ್ಟು ಬಿಡದೆ ಕಾವೇರಿಲಿ ಮುಳುಗಲು ಮುಟ್ಟು ಹೋದೀತೇ ಬಿಕನಾಸಿ. ದಾಸರ ಮಾತು ಹೇಗಿದೆ ಎಂದರೆ ಕಾಸಿದ ಕಬ್ಬಣದ ಸಲಾಕೆಯಂತೆ; ಭಕ್ತಿ ಇಲ್ಲದ ಮೇಲೆ ತನುವ ನೀರೊಳಗದ್ದಿ -ಲವೇನು. ಸ್ನಾನದ ಮಹತ್ವ ಸಾರುವ ಈ ಕೃತಿಯಲ್ಲಿ ಕೊನೆಗೆ ಸೃಷ್ಟಿಯೊಳಗೆ ಶ್ರೀಪುರಂದರ ವಿಠಲನ ಮುಟ್ಟ ವಿಭಜಿಸಿದರೆ ವಿರಜಾಸ್ನಾನ ಎನ್ನುತ್ತಾರೆ.
ಸಾರಾಂಶವೆಂದರೆ ನೀವು ಯಾವುದನ್ನು ಮಡಿ ಎಂದು ಅರ್ಥೈಸುವಿರೋ ಅದು ಮೈಲಿಗೆಯಲ್ಲ ಯಾವುದು ಮೈಲಿಗೆಯೆಂದುತಿಳಿಯುತ್ತೀರೋ ಅದು ಎಂದಿಗೂ ಮಡಿ ಅಲ್ಲ. ಜ್ಞಾನ, ಭಕ್ತಿ, ವೈರಾಗ್ಯ ಮಾರ್ಗ ತೋರಿ ಸರಿದಾರಿಲಿ ನಡೆವುದಕ್ಕೆ ದಾರಿದೀಪವಾದ ದಾಸ ಸಾಹಿತ್ಯ ಕನ್ನಡದ ಭಾಗ್ಯವೇ ಸರಿ. ದಾಸರು ಏನುತಾನೆ ಬಿಟ್ಟಿದ್ದಾರೆ ಎಂದರೆ ಯಾವುದನ್ನು ಉಳಿಸಿದ್ದಾರೆ ಎನ್ನುವುದಕ್ಕೆ ಉತ್ತರವಿಲ್ಲ. ಈ  ಸಾಹಿತ್ಯ ಅದು ಹೇಗೆ ಪುಂಖಾನು ಪುಂಖವಾಗಿ ಹರಿದಿದೆ  ಎಂದರೆ ನಮ್ಮ ದೇಶದಲ್ಲಿ ಯೋಗ ಬಹು ಪ್ರಸಿದ್ಧ. ಈಗಂತೂ ಎಲ್ಲರೂ ಆರೋಗ್ಯ ವರ್ಧನೆಗೆ ಯೋಗ ಮೊರೆ ಹೋಗು ವವರೆ. ಪುರಂದರ ದಾಸರ ಈ ಪದ ಗಮನಿಸಿ, ಯೋಗಕ್ಕೂ ಈಶೃತಿಗೂ ಹೇಗಿದೆ ಸಂಬಂಧ ನೋಡಿ.
ಕಣ್ಣಿನಿಂದಲಿ (ಕಣ್ಣಿನೊಳಗೆ) ನೋಡ ಹರಿಯ (ಒಳ ಗಣ್ಣಿನಿಂದಲಿ ನೋಡೋ ಮುಜುಗದೊರೆಯ ಆಧಾರ ಮೊದಲಾದ ಆರು | ಚಕ್ರ ಶೋಧಿಸಿ ಬಿಡಬೇಕು ಈ ಕ್ಷಣ ಮೂರು ಸಾಧಿಸಿ ಸುಷುಮ್ನವೇರು | ಅಲ್ಲಿ ಬೇಧಿಸಿ ನೀ ಪರಬ್ರಹ್ಮನ ಸೇರು ಎವೆಯಿಕ್ಕದೆ ಮೇಲೆ ನೋಡಿ | ಬೇಗ ಪವನನಿಂದಲಿ ವಾಯುಬಂಧವ ಮಾಡಿ ಕವಿದುನಾದದ ಪಾಕಮಾಡಿ | ಅಲ್ಲಿ ನವವಿಧ ಭಕುತೀಲಿ ನಲಿನಲಿದಾಡಿಅಂದದೊಳಗೆ ಆಡುತ್ತಾನೆ | ಭಾನು ಮಂಡಲ ನಾರಾಯಣನೆಂಬುದನೇ ಕೊಡಲಿ ತುದಿಯೊಳಿದ್ದಾನೆ (ನಮ್ಮ ಪುರಂದರ ವಿಠಲ ಪಾಲಿಸುತ್ತಾನೆ.
ಹರಿದಾಸರ ರೀತಿ ನೀತಿಗಳನ್ನು ವಿವರಿಸುವ ದಾಸರ ಪದಗಳು ಅಸತ್ಯವನ್ನು ಖಡಾ ತುಂಡವಾಗಿ ಖಂಡಿಸುತ್ತವೆ. ಯೋಗ ಹೇಗೆ ಹೇಗೋ ಮಾಡುವಂಥದಲ್ಲ. ಶಾಸದ ಪ್ರಕಾರ ನೀತಿ ನಿಯಮಗಳಿವೆ. ಅದೆಷ್ಟು ಮಂದಿ ಯೋಗ ಶಿಕ್ಷಕರು ಯೋಗಶಾಸ್ತ್ರವನ್ನೇ ಕುರಿತು ಪುರಂದರದಾಸರ ಈ ಕೃತಿಯನ್ನು ಓದಿದ್ದಾರೋ ತಿಳಿದಿಲ್ಲ. ಹರಿದಾಸ ಸಾಹಿತ್ಯ ಕನ್ನಡದ ಅನರ್ಘ್ಯ ರತ್ನ. ಪುರಂದರರಿಂದ ಕನಕರಿಂದ ಮೊದಲಾಗಿ ವಿಜಯ ದಾಸರು, ಗೋಪಾಲದಾಸರು,ಜಗನ್ನಾಥದಾಸರು, ಮುದ್ದು ಮೋಹನ ದಾಸರು, ಶ್ರೀಪಾದ ರಾಯರು, ವ್ಯಾಸ ರಾಯರು, ವಾದಿರಾಜರು, ಶ್ರೀಷ ದಾಸರು, ಮಹಿಪತಿ ದಾಸರು ಮೊದಲಾದ ದಾಸ ಪರಂಪರೆ ಅಲ್ಲದೆ, ಇಂದಿಗೂ ಸಹ ಅಂಕಿತ ಪಡೆದವರಿಂದ ದೇವರನಾಮಗಳು ರಚನೆಗೊಳ್ಳುತ್ತಿದೆ ಎಂದರೆ ಇನ್ನೆಷ್ಟು ಪ್ರಭಾವ ಬಿದ್ದಿರಬೇಕು.
೫ಶತಮಾನ ಗಳು ಕಳೆದರು ನಿಂತಿಲ್ಲ ಎಂದರೆ ಆ ಸಾಹಿತ್ಯಕ್ಕೆ ಇರುವ ಶಕ್ತಿ – ಸತ್ವ ಎಂಥದು ಎಂಬುದನ್ನು ತಿಳಿಯಬೇಕು. ದಾಸ ಸಾಹಿತ್ಯ ಕನ್ನಡ ನಾಡಿನ ಜೀವ. ಜೀವ ಎಂದರೆ ನೀರು? ಎಂಬರ್ಥವಿದೆ. ಆದ್ದರಿಂದ ಅದು  ನಮ್ಮ ಹಸನಾದ ಬದುಕಿಗೆ ಅನಿವಾರ್ಯ. ಭಾಗವತ ಧರ್ಮ ವನ್ನು ಅದರ ಮೂಲಕ್ಕೆ ಚ್ಯುತಿ ಬಾರದಂತೆ ಔಚಿತ್ಯ ಕೆಡದಂತೆ ಎಚ್ಚರವಹಿಸಿ, ಕರ್ನಾಟಕದಲ್ಲಿ ಪಸರಿಸಿದವರು ಅಚ್ಚಗನ್ನಡದ ಹರಿದಾಸರು. ಈ ಮಹನೀಯರು ಆರಿಸಿದ್ದು, ಭಕ್ತಿ ಪಂಥ ವನ್ನು. ವಿಜಯದಾಸರು ಸುಳಾದಿಯೊಂದರಲ್ಲಿ ಪುರಂದರರ ಗುರುಗಳನ್ನು ಹೀಗೆ ಚಿತ್ರಿಸಿದ್ದಾರೆ.
ದಾಸರ ನಿಜಕಾರುಣ್ಯ ಪಾತ್ರನು ನಾನು ದಾಸರ ಹೆಬ್ಬಾಗಿಲು ಕಾಯುವವ ನಾನು ದಾಸರ ಮನೆಯಂಗಳ ಬಳಿವವ ನಾನುದಾಸರ ಮನೆ ಸಮ್ಮಾರ್ಜಕ ನಾನು ……… ದಾಸ ದಾಸೀ ಜನರ ದಾಸನು ನಾನು ಭೂಷಣವೆನಗಿದು ಆವಾವ ಕಾಲಕುದಾಸ ಜನರ ಪ್ರಿಯ ವಿಜಯ ವಿಠಲನ ದಾಸನಾದವನಿಗೆ ಯಾವದು ಕೊರತೆ ನಮ್ಮ ಕನ್ನಡ ರಸಿಕ ಶ್ರೋತೃವೃಂದ ಎಷ್ಟು ಅಲ್ಪತೃಪ್ತ ರೆಂದರೆ, ಸಂಗೀತ ಕಚೇರಿಯಲ್ಲಿ ಕೊನೆಪಕ್ಷ ಒಂದು ಕನ್ನಡ ದೇವರ ನಾಮವನ್ನು ಕೇಳಿಬಿಟ್ಟರೆ ಅವರಿಗೆ ಅದೇನೋ ಖುಷಿ. ನಮ್ಮ ರಾಜ್ಯದವರುಗಳು ಉಳಿದು ಬೇರೆಡೆಯಿಂದ ಬಂದ ಕಲಾವಿದರು ಮೂರು ಗಂಟೆಯ ತಮ್ಮ ಕಚೇರಿಯಲ್ಲಿ ದೇವರ ನಾಮಗಳನ್ನು ಹಾಡುತ್ತಿದುದ್ದು ಒಂದೋ ಅಥವಾ ಎರಡೋ ನನ್ನ೪೦ವರ್ಷಗಳ ಅನುಭವದಲ್ಲಿ ಮೈಸೂರು, ಬೆಂಗಳೂರು, ಶಿವಮೊಗ್ಗ ಮುಂತಾದೆಡೆಗಳಲ್ಲಿ ಕಚೇರಿ ನಡೆಸಿಕೊಟ್ಟ ಬೇರೆ ನಾಡಿನವರು ಕನ್ನಡ ಕೀರ್ತನೆಗಳನ್ನು ಹಾಡುತ್ತಲೇ ಇರಲಿಲ್ಲ. ಹೀಗಾಗಿಯೂ ನಾವು ಸಹಿಷ್ಣುಗಳು.
ಆದರೆ, ಇತ್ತೀಚಿನ ವರ್ಷಗಳಲ್ಲಿ ಹೊರಗಿನಿಂದ ಬಂದು ಕಚೇರಿ ಗಳನ್ನು ನೀಡುವ ಕಲಾವಿದರು ಸಾಕಷ್ಟು ದಾಸರ ಕೀರ್ತನೆ ಗಳನ್ನು ತಮ್ಮ ಕಚೇರಿಯಲ್ಲಿ ಅಳವಡಿಸುತ್ತಿರುವುದು ಸಮಾಧಾನಕರ ಅಂಶ.