ನಂದಾದೇವಿ ಶಿಖರದಲ್ಲಿ ಅಮೆರಿಕದ ಗೂಢಚಾರರು
ಶಶಾಂಕಣ
ಶಶಿಧರ ಹಾಲಾಡಿ
ನಂದಾದೇವಿ ಪರ್ವತ ಶಿಖರದ ತಪ್ಪಲಲ್ಲಿರುವ ರೈನಿ, ಲಾತಾ ಮೊದಲಾದ ಹಳ್ಳಿಗಳಲ್ಲಿ ಇಂದು ದುಃಖ ಮಡುಗಟ್ಟಿದೆ. ಋಷಿಗಂಗಾ ನದಿಯ ದಡದಲ್ಲಿರುವ ಆ ಸೂಕ್ಷ್ಮ ಪ್ರದೇಶದಲ್ಲಿ ಸುರಂಗ ತೋಡಿ ವಿದ್ಯುತ್ ಉತ್ಪಾದಿಸುವ ಕಾಮಗಾರಿಯನ್ನು ಕೈಗೊಂಡಿದ್ದಸುಮಾರು200ಜನ, ಆ ಸುರಂಗದಲ್ಲೇ ಹೂತು ಹೋಗಿದ್ದಾರೆ.
ನಂದಾ ದೇವಿ ಶಿಖರದ ಕಡೆಯಿಂದ ಹರಿದು ಬರುವ ಗಂಗಾ ನದಿಯ ಉಪನದಿಗಳಲ್ಲಿ, ಕಳೆದ ವಾರ ಒಮ್ಮೆಗೇ ಹರಿದು ಬಂದ ಪ್ರವಾಹದಿಂದಾದ ಅನಾಹುತಕ್ಕೆ ಸಾಟಿಯೇ ಇಲ್ಲ. ಆ ನದಿಯಲ್ಲಿ ಆಕಸ್ಮಿಕ ಪ್ರವಾಹ ಬಂದರೆ, ಕೆಲಸ ಗಾರರ ರಕ್ಷಣೆ ಹೇಗೆ ಎಂಬ ವಿವೇಚನೆಯನ್ನೇ ಮಾಡದೇ, ‘ಕಾಮಗಾರಿಯ ಸಲುವಾಗಿ ಕಾಮಗಾರಿ’ ನಡೆಸಿದ ಪರಿಣಾಮದಿಂದಾಗಿ200ಕ್ಕೂ ಹೆಚ್ಚು ಕೆಲಸಗಾರರು ಕೆಸರಿನಲ್ಲೇ ಭೂಗತರಾಗಬೇಕಾಯಿತು. ತಪೋವನ ಎಂಬ ಸುಂದರ ಹೆಸರಿನ ವಿದ್ಯುತ್ ಯೋಜನೆಯಲ್ಲಿ ತೊಡಗಿಸಿದ್ದ ಸಾವಿರಾರು ಕೋಟಿ ರುಪಾಯಿಗಳ ಹಣವು ನೀರಿನಲ್ಲಿ ತೊಳೆದು ಹೋದ ಸುದ್ದಿ ಒಂದೆಡೆಯಾದರೆ, ಮೊದಲಿನಿಂದಲೂ ಅದು ಅಸ್ಥಿರ ಭೂಮಿ ಎಂಬ ಮಾಹಿತಿ ಯಿದ್ದರೂ ಅಲ್ಲಿ ಅಂತಹ ಪರಿಸರ ವಿರೋಧಿ ಕಾಮಗಾರಿ ಯನ್ನು ಕೈಗೊಳ್ಳಲು ಅನುಮತಿ ಯನ್ನು ಯಾಕಾದರೂ ನೀಡ ಬೇಕಿತ್ತು ಎಂಬ ಪ್ರಶ್ನೆ ಇನ್ನೊಂದೆಡೆ.
ತೀವ್ರ ಕಡಿದಾದ ಆ ಕಣಿವೆಯಲ್ಲಿ, ನದಿಯ ಪಕ್ಕದಲ್ಲೇ ಸುರಂಗ ಕೊರೆದು ಅದರಲ್ಲಿ ನೂರಾರು ಕೆಲಸಗಾರ ರನ್ನು ನಿಯೋಜಿಸಿ,ಅಕಸ್ಮಾತ್ ಹಿಮ ಕರಗಿ ಪ್ರವಾಹ ಬಂದರೆ ಅವರ ರಕ್ಷಣೆ ಹೇಗೆಂಬ ಯೋಚನೆಯನ್ನೇ ಮಾಡದೇ ಮುಂದುವರಿದ ಈಯೋಜನೆಯು, ವಸಾಹುತ ಆಡಳಿತದ ಕಾಲದಲ್ಲಿ ನಡೆಯುತ್ತಿದ್ದ ‘ಕ್ಷಣಿಕ ಲಾಭ’ದ ಯೋಜನೆಗಳನ್ನು ನೆನಪಿಸುತ್ತದೆ.ಇಷ್ಟಕ್ಕೂ ಚಳಿಗಾಲದ ಈ ಫೆಬ್ರವರಿಯಲ್ಲಿ ಋಷಿಗಂಗಾ ನದಿಯಲ್ಲಿ ಪ್ರವಾಹ ಬಂದಿದ್ದಾದರೂ ಹೇಗೆ? ಅತಿ ಹೆಚ್ಚು ಶೀತ ಇರುವ ಈ ಕಾಲದಲ್ಲಿ ಹಿಮದ ಗೋಡೆಗಳು ಕುಸಿಯುವ ಸಂಭವ ತೀರಾ ಕಡಿಮೆ, ಅದೇ ರೀತಿ ಹಿಮ ನೀರ್ಗಲ್ಲ ನದಿಗಳು (ಗ್ಲೇಷಿಯರ್) ಕರಗುವ ಸಂಭವವೂ ಕಡಿಮೆ.
ಈಚಿನ ದಶಕಗಳಲ್ಲಿ ಭೂಮಿಯ ಉಷ್ಣತೆ ಏರುವ ವಿದ್ಯಮಾನದಿಂದಾಗಿ, ಜಗತ್ತಿನ ಎಲ್ಲಾ ಹಿಮನೀರ್ಗಲ್ಲ ನದಿಗಳು ತುಸು ತುಸುವಾಗಿಯೇ ಕರಗುತ್ತಿರುವುದು ಕಟುಸತ್ಯವಾದರೂ, ಋಷಿಗಂಗಾದಲ್ಲಿ ಕಳೆದ ವಾರ ಬಂದ ಪ್ರವಾಹಕ್ಕೆ ಅದು ಕಾರಣವಲ್ಲ. ಹಿಮಾಲಯವನ್ನು ಬಹುಕಾಲದಿಂದ ಅಧ್ಯಯನ ಮಾಡುತ್ತಾ ಬಂದಿರುವ ಹವಾಮಾನ ತಜ್ಞರು ಸಹ, ಫೆಬ್ರವರಿಯ ಚಳಿಯ ದಿನಗಳಲ್ಲಿ ಹಿಮ ಕರಗಿ ಇಷ್ಟು ದೊಡ್ಡ ಮಟ್ಟದ ಪ್ರವಾಹ ಉಂಟಾಗುವ ಸಾಧ್ಯತೆ ಬಹುಮಟ್ಟಿಗೆ ಇಲ್ಲ ಎಂದೇ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಹಾಗಿದ್ದರೆ, ನಂದಾ ದೇವಿ ಶಿಖರದ ತಪ್ಪಲಿನಲ್ಲಿರುವ ಋಷಿಗಂಗಾ ನದಿಯಲ್ಲಿ, ಪಕ್ಕದ ಧವಳ ಗಂಗಾದಲ್ಲಿ ಒಮ್ಮೆಗೇ ಪ್ರವಾಹ ಉಂಟಾದ ಕಾರಣವಾದರೂ ಏನು? ಋಷಿಗಂಗಾ ನದಿಯ ದಡದಲ್ಲಿರುವ ರೈನಿ ಗ್ರಾಮದ ಹಿರಿಯರು ಹೇಳುವ ಮಾತುಗಳನ್ನು ಕೇಳಿದರೆ ಸಣ್ಣ ಮಟ್ಟದ ತಲ್ಲಣ ಉಂಟಾಗುತ್ತದೆ.1965ರಲ್ಲಿ ಅಮೆರಿಕದ ಗೂಢಚರ ಸಂಸ್ಥೆ ಸಿಐಎ ಮತ್ತು ನಮ್ಮ ದೇಶದ ಸೇನಾ ಸಿಬ್ಬಂದಿ ನಡೆಸಿದ ಕಾರ್ಯಾಚರಣೆಯಲ್ಲಿ, ನಂದಾ ದೇವಿ ಶಿಖರದ ಹತ್ತಿರ ಕೊಂಡೊಯ್ದ ಪ್ಲುಟೋನಿಯಂ ಪರಮಾಣು ವಿದ್ಯುತ್ ಸ್ಥಾವರದಿಂದಲೇ ಈ ಪ್ರವಾಹ ಬಂದಿರಬಹುದು ಎಂಬ ಊಹೆ ಆ ಗ್ರಾಮದ ಹಿರಿಯರದ್ದು.
ನಂದಾದೇವಿ ಶಿಖರಕ್ಕೆ1965ರಲ್ಲಿ ಹೋಗಿದ್ದ ಇಂಡೊ ಅಮೆರಿಕನ್ ರಹಸ್ಯ ಸಾಹಸಯಾತ್ರೆಯ ತಂಡದಲ್ಲಿ ಪೋರ್ಟರ್ ಕೆಲಸ ಮಾಡಿದ್ದ ಕಾರ್ತಿಕ್ ಸಿಂಗ್ ಎಂಬ92ವರ್ಷದ ಹಿರಿಯರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ! ಪರ್ವತದ ನಾಲ್ಕನೆಯ ಕ್ಯಾಂಪ್ ತನಕ ಆ ಒಂದು ರಹಸ್ಯ ವಸ್ತುವನ್ನು ಹೊರಲು ನಿಯೋಜಿತ ತಂಡದಲ್ಲಿ ಇವರೂ ಸೇರಿದ್ದರು. ಕ್ಯಾಂಪ್4ತಲುಪಿದ ನಂತರ ಆ ಪರ್ವತದಲ್ಲಿ ಬೀಸತೊಡಗಿದ ಭೀಕರ ಬಿರುಗಾಳಿಯಿಂದಾಗಿ, ಆ ವಸ್ತುವನ್ನು ಅಲ್ಲೇ ಬಿಟ್ಟು, ಎಲ್ಲರೂ ವಾಪಸಾದರು ಎಂದು ಕಾರ್ತಿಕ್ ಸಿಂಗ್ ತಿಳಿಸಿದ್ದಾರೆ. ಆ ನಿಗೂಢ ವಸ್ತುವೇ ಈ ಬಾರಿಯ ಪ್ರವಾಹಕ್ಕೆ ಕಾರಣವೆ?
ರೈನಿ ಗ್ರಾಮದ ಹಿರಿಯರು ಹೇಳಿದ್ದರಲ್ಲಿ ಕೆಲವು ಅಂಶಗಳು ಸತ್ಯಸ್ಯ ಸತ್ಯ.1965ರಲ್ಲಿ ಅಮೆರಿಕದ ಗೂಢಚಾರರು, ಪರ್ವತಾ ರೋಹಿಗಳು ಮತ್ತು ಭಾರತದ ಪರ್ವತಾರೋಹಿಗಳ ಒಂದು ತಂಡವು ರಹಸ್ಯವಾಗಿ ನಂದಾದೇವಿ ಶಿಖರಕ್ಕೆ ಸಾಹಸ ಯಾತ್ರೆ ಮಾಡಿದ್ದಂತೂ ನಿಜ.1965ರಲ್ಲಿ ಎವರೆಸ್ಟ್ ಏರಿದ ನಮ್ಮ ದೇಶದ ತಂಡದ ನಾಯಕ ಕ್ಯಾಪ್ಟನ್ ಕೊಯ್ಲಿಯವರ ನಾಯಕತ್ವದಲ್ಲಿ1965ರಲ್ಲಿ ಈ ರಹಸ್ಯ ಸಾಹಸಯಾತ್ರೆ ಹೊರಟಿತ್ತು. ವಿಶೇಷ ಎಂದರೆ,1977ರ ತನಕ ಈ ಅಪಾಯಕಾರಿ ಸಾಹಸಯಾತ್ರೆಯ ಕುರಿತು ಹೊರಜಗತ್ತಿಗೆ, ಭಾರತದ ಜನರಿಗೆ ಯಾವ ವಿವರಗಳೂ ಗೊತ್ತಿರಲಿಲ್ಲ.
ಅಮೆರಿಕದ ‘ಔಟ್‌ಸೈಡ್’ ಪತ್ರಿಕೆಯು1977ರಲ್ಲಿ ಈ ರಹಸ್ಯವನ್ನು ಬಯಲು ಮಾಡಿ, ಅವರ ದೇಶದ ಗೂಢಚಾರ ಸಂಸ್ಥೆಯಾದ ಸಿಐಎ ಯನ್ನು ತರಾಟೆಗೆ ತೆಗೆದುಕೊಂಡಿತ್ತು. ಏಕೆಂದರೆ, ಆ ಸಾಹಸವು ವಿಫಲವಾಗಿತ್ತು ಮತ್ತು ಭಾರತದ ಲಕ್ಷಾಂತರ ಜನರಿಗೆವಿಕಿರಣದ ಸಂಭಾವ್ಯ ಅಪಾಯವನ್ನು ತಂದೊಡ್ಡಿತ್ತು! ಸಿಐಎಯ ನೇತೃತ್ವದಲ್ಲಿ, ಭಾರತ ಸರಕಾರದ ಸಹಮತದೊಂದಿಗೆ, ಅಮೆರಿಕ ಮತ್ತು ಭಾರತದ ಪರ್ವತಾರೋಹಿಗಳ ತಂಡವು, ಕ್ಯಾಪ್ಟನ್ ಕೊಹ್ಲಿ ನೇತೃತ್ವದಲ್ಲಿ, ಪ್ಲುಟೋನಿಯಂ ಪರಮಾಣು ಶಕ್ತಿಯ ಮಿನಿ ವಿದ್ಯುತ್ ಸ್ಥಾವರವನ್ನು ನಂದಾ ದೇವಿ ಶಿಖರದ ಹತ್ತಿರ ಬಿಟ್ಟು ಬಂದಿದ್ದಾರೆ ಎಂಬ ಅಮೆರಿಕದ ಪತ್ರಿಕೆ ಆ ವರದಿಯು, ಸಣ್ಣ ಮಟ್ಟದ ಗಾಬರಿ, ತಲ್ಲಳ, ಕಳವಳವನ್ನು ಹುಟ್ಟುಹಾಕಿತ್ತು.
1977ರಲ್ಲಿ ಪ್ರಧಾನಿಯಾಗಿದ್ದ ಮೊರಾರ್ಜಿ ದೇಸಾಯಿಯವರು ಈ ಬಗ್ಗೆ ಒಂದು ಹೇಳಿಕೆ ನೀಡಿ,12ವರ್ಷಗಳ ಮುಂಚೆ ಇಂತಹ ದೊಂದು ಕಾರ್ಯಾಚರಣೆ ನಡೆದದ್ದು ನಿಜ ಎಂದು ಹೇಳಿದ್ದರ ಜತೆ, ಆ ಪರಮಾಣು ಸ್ಥಾವರ ಏನಾಯಿತು ಎಂಬ ಮಾಹಿತಿ ಇಲ್ಲಎಂದು ಹೇಳಿದರು.1965ರ ಆ ರಹಸ್ಯ ಕಾರ್ಯಾಚರಣೆಯ ನಾಯಕತ್ವ ವಹಿಸಿದ್ದ ಕ್ಯಾಪ್ಟನ್ ಕೊಯ್ಲಿಯವರು, ನಿವೃತ್ತಿಯ ನಂತರ ಈಚೆಗೆ ಇದರ ಕುರಿತು ವಿವರ ನೀಡಿದ್ದು, ಅಂತಹ ಅಪಾಯಕಾರಿ ಅಣುಸ್ಥಾವರ ನಂದಾದೇವಿ ಶಿಖರದಲ್ಲಿ ಕಳೆದು ಹೋಗಿದ್ದು ನಿಜ ಎಂದರು.
ಚೀನಾ ವಿರುದ್ಧ ಗೂಢಚಾರಿಕೆ ಮಾಡಲು ಅಮೆರಿಕ ಅಂದು ನಮ್ಮ ದೇಶವನ್ನು ಉಪಯೋಗಿಸಿಕೊಂಡಿತ್ತು! ನಮ್ಮ ದೇಶದ ಸೇನಾ ದೌರ್ಬಲ್ಯ, ತಪ್ಪು ನಿರ್ಣಯ ಗಳಿಂದಾಗಿ,1962ರಲ್ಲಿ ಚೀನಾ ದಾಳಿ ಮಾಡಿ, ನಮ್ಮ ಸೈನಿಕರನ್ನು ಸೋಲಿಸಿತು. ಈ ನಡುವೆ ಅಮೆರಿಕವು ವಿಯೆಟ್ನಾಂ ಯುದ್ಧದಲ್ಲಿ ತೊಡಗಿಕೊಂಡಿತ್ತು. ಶೀತಲ ಯುದ್ಧದ ಆ ದಿನಗಳಲ್ಲಿ, ರಷ್ಯಾ ಸಹಾಯದಿಂದ1964ರಲ್ಲಿ ಚೀನಾವು ತನ್ನ ಮೊದಲ ಪರಮಾಣು ಸೋಟ ಪರೀಕ್ಷೆ ನಡೆಸಿ, ಅಮೆರಿಕಕ್ಕೆ ಭಯ ಹುಟ್ಟಿಸಿತ್ತು. ಚೀನಾ ದೇಶವು ಪರಮಾಣು ಬಾಂಬ್ ಹೊತ್ತು ಸಾಗಿಸಬಲ್ಲ ಕ್ಷಿಪಣಿಗಳನ್ನು ತಯಾರಿಸುತ್ತಿರಬಹುದೇ ಎಂದು ತಿಳಿಯುವುದು ಅಮೆರಿಕಕ್ಕೆ ಅವಶ್ಯಕವಾಗಿತ್ತು. ಆ ಸಮಯದಲ್ಲಿ ನಮ್ಮ ದೇಶದ ಪ್ರಧಾನಿಯಾಗಿದ್ದವರು ಲಾಲ್ ಬಹದ್ದೂರ್ ಶಾಸ್ತ್ರಿ.
ನಮ್ಮ ಸೇನೆಯ ಸಹಕಾರ ಪಡೆದು, ಒಂದು ಪರ್ವತಾರೋಹಿ ಗಳ ತಂಡವನ್ನು ನಂದಾದೇವಿ ಶಿಖರಕ್ಕೆ ಕಳುಹಿಸಲು ಸಿಐಎ ಯೋಜನೆ ರೂಪಿಸಿತು. ಆ ತಂಡದ ಉದ್ದೇಶ ವೆಂದರೆ, 25,465 ಅಡಿ ಎತ್ತರದ ನಂದಾ ದೇವಿ ಶಿಖರದ ಹತ್ತಿರ ಒಂದುಪ್ಲುಟೋನಿಯಂ ಪರಮಾಣು ಸ್ಥಾವರವನ್ನು ಸ್ಥಾಪಿಸಿ, ಅದು ತಯಾರಿಸುವ ವಿದ್ಯುತ್ ಸಹಾಯ ಪಡೆದು, ಅಲ್ಲಿಂದ ಚೀನಾದ ಕ್ಷಿಪಣಿಗಳ ಚಲನೆಯನ್ನು ಗ್ರಹಿಸುವ ಪ್ರೇಷಕ ಗಳನ್ನು ಜೋಡಿಸಿ, ಚೀನಾದ ಯುದ್ಧ ಸಾಹಸದ ವಿವರ ಸಂಗ್ರಹಿಸುವುದು.
ಸುಮಾರು ೫೬ ಕಿಲೋ ತೂಕದ ಆ ಅಪಾಯಕಾರಿ ವಿದ್ಯುತ್ ಸ್ಥಾವರವನ್ನು ಹೊತ್ತುಕೊಂಡು ಹೋಗಲು ಷೆರ್ಪಾ ಮತ್ತು ಪೋರ್ಟರ್‌ಗಳನ್ನು ಆಯ್ಕೆ ಮಾಡಲಾಯಿತು. ೧೯೬೩ರಲ್ಲಿ ಎವರೆಸ್ಟ್ ಏರಿದ್ದ ಅಮೆರಿಕದ ಪರ್ವತಾರೋಹಿಗಳು ಮತ್ತು ಅಂದು ಅವರಿಗೆ ಸಹಾಯ ಮಾಡಿದ್ದ ಷೆರ್ಪಾಗಳ ಈ ತಂಡದಲ್ಲಿದ್ದರು. ಭಾರತೀಯ ಸೇನೆಯ ಅಧಿಕಾರಿ, ಪರ್ವತಾರೋಹಿ ಕ್ಯಾಪ್ಟನ್ ಕೊಹ್ಲಿಯವರ ನೇತೃತ್ವದಲ್ಲಿ ಹೊರಟ ಈ ತಂಡವು, ಚಮೋಲಿ ಜಿಲ್ಲೆಯ ರೈನಿ ಗ್ರಾಮದ ಮೂಲಕ ನಂದಾದೇವಿಯತ್ತಸಾಗಿತು. ಶಿಖರದಿಂದ ೨,೦೦೦ ಅಡಿ ಕೆಳಗಿದ್ದ ನಾಲ್ಕನೆಯ ಕ್ಯಾಂಪ್ ತನಕ ಪ್ಲುಟೋನಿಯಂ ಪರಮಾಣು ವಿದ್ಯುತ್ಸ್ಥಾವರ ವನ್ನು ಪೋರ್ಟರ್‌ಗಳು ಸಾಗಿಸಿದರು.
ಆದರೆ ಅಂದು ಬೀಸಿದ ಹಿಮ ಬಿರುಗಾಳಿ ಮತ್ತು ಅಪಾಯಕಾರಿ ವಾತಾವರಣದಿಂದಾಗಿ, ಇನ್ನು ಮುಂದೆ ಸಾಗಿದರೆಅಪಾಯ ಎಂದು ಕ್ಯಾಪ್ಟನ್ ಕೊಯ್ಲಿ ನಿರ್ಧರಿಸಿದರು. ಮುಂದೆ ಸಾಗಿದ್ದರೆ, ತಂಡದ ಸದಸ್ಯರು ಸಾಯುವ ಸಾಧ್ಯತೆಯಿತ್ತು.56ಕಿಲೊ ತೂಕದ ಆ ವಿದ್ಯುತ್  ಸ್ಥಾವರವನ್ನು ಅಲ್ಲೇ ಬಿಟ್ಟು, ವಾಪಸಾದರು. 1966ರಲ್ಲಿ ಆ ನಂದಾದೇವಿ ಶಿಖರದಲ್ಲಿ ಅಮೆರಿಕದ ಗೂಢಚಾರರು ಸ್ಥಾವರವನ್ನು ಹುಡುಕಲು ಮತ್ತೊಂದು ತಂಡ ಹೊರಟಿತು.
ಆದರೆ ಸಿಗಲಿಲ್ಲ. 1965 ಮತ್ತು 1968ರ ನಡುವೆ ಸುಮಾರು ೧೨ ತಂಡಗಳು ಈ ಅಪಾಯಕಾರಿ ಸ್ಥಾವರವನ್ನು ಹುಡುಕಲುಯತ್ನಿಸಿದವು. ಸಿಗಲಿಲ್ಲ. ಅಮೆರಿಕದ ಯುದ್ಧ ಹೆಲಿಕಾಪ್ಟರು ಗಳಲ್ಲಿ ಕುಳಿತು, ವಿಕಿರಣ ಪತ್ತೆ ಸಾಧನ ಹಿಡಿದು, ಅಮೆರಿಕದವಿಜ್ಞಾನಿ ಗಳು ಆ ಸ್ಥಾವರವನ್ನು ಪತ್ತೆ ಹಚ್ಚಲು ಯತ್ನಿಸಿದರೂ ಯಶ ದೊರೆಯಲಿಲ್ಲ.
ನಮ್ಮ ದೇಶದವರಿಗೆ ಆ ದಿನಗಳಲ್ಲಿ ಪರಮಾಣು ವಿಕಿರಣದ ಅಪಾಯದ ಅರಿವು ಇರಲಿಲ್ಲವೆ? ಹಾಗಾದರೆ ಯಾಕೆ ಅನುಮತಿ ನೀಡಿದರು? ಈ ಪ್ರಶ್ನೆಗಿಂತ, ಅಮೆರಿಕದವರಿಗೆ ವಿಕಿರಣದ ಅಪಾಯದ ಕುರಿತು ಅಂದು ಬಹಳಷ್ಟು ಮಾಹಿತಿ ಇತ್ತು. ಜಪಾನಿನಲ್ಲಿ ಎರಡು ಅಣುಬಾಂಬ್ ಪ್ರಯೋಗಿಸಿದ ನಂತರ, ಶಾಂತ ಸಾಗರದ ಬಿಕಿನಿ ದ್ವೀಪ ಮತ್ತು ಇತರ ಪ್ರದೇಶಗಳಲ್ಲಿ ಅಮೆರಿಕವು ಹಲವು ಪರಮಾಣು ಸೋಟ ಗಳನ್ನು ನಡೆಸಿ, ವಿಕಿರಣದ ಅಪಾಯವನ್ನು ಮನಗಂಡಿತ್ತು.
ಆದರೂ, ಗಂಗಾ ನದಿಯ ಉಪನದಿಗಳು ಹುಟ್ಟುವ ನಂದಾ ದೇವಿಯ ಶಿಖರದಲ್ಲಿ ಪ್ಲುಟೋನಿಯಂ ಪರಮಾಣು ವಿದ್ಯುತ್ಸ್ಥಾವರವನ್ನು ಸ್ಥಾಪಿಸಲು ಅದು ಮುಂದಾಗಿದ್ದು ಏಕೆ? ಆ ಸ್ಥಾವರದಿಂದ ಹೊರಸೂಸುವ ವಿಕಿರಣವು, ಗಂಗಾನದಿಯಲ್ಲಿಸೇರಿದರೆ ಉತ್ತರ ಭಾರತದ ಉದ್ದಕ್ಕೂ ಗಂಡಾಂತರವನ್ನೇ ಉಂಟು ಮಾಡ ಬಹುದು ಎಂದು ಗೊತ್ತಿದ್ದರೂ ಇಂತಹದುಸ್ಸಾಹಸ ಕೈಗೊಂಡಿದ್ದು ಏಕೆ? ಭಾರತವೆಂದರೆ,1965ರಲ್ಲೂ ಒಂದು ವಸಾಹತು ದೇಶವೆಂದೇ ಅಮೆರಿಕದ ಭಾವನೆ ಇತ್ತು,  ಅಲ್ಲವೆ? ಭಾರತದ ಲಕ್ಷಾಂತರ ಜನಸಾಮಾನ್ಯರಿಗೆ ವಿಕಿರಣದ ಅಪಾಯ ತಗುಲಿದರೆ, ಅಮೆರಿಕಕ್ಕೆ ಆಗಬೇಕಾದ್ದಾದರೂಏನು? ಅಮೆರಿಕದ ಸಿಐಎ ವರ್ತನೆ ನೋಡಿದರೆ ಇಂತಹ ಭಾವನೆ ಮೂಡುತ್ತದೆ.
1965ರಲ್ಲಿ ನಂದಾ ದೇವಿ ಶಿಖರದಲ್ಲಿ ಕಳೆದು ಹೋದ ಆ ಪ್ಲುಟೋನಿಯಂ ಪರಮಾಣು ವಿದ್ಯುತ್ ಸ್ಥಾವರ ಇಂದಿಗೂಪತ್ತೆಯಾ ಗಿಲ್ಲ! ಅಮೆರಿಕದ ದಾರ್ಷ್ಟ್ಯ ಎಷ್ಟೆಂದರೆ,1967ರಲ್ಲಿ ನಮ್ಮ ಸರಕಾರವನ್ನು ಒಪ್ಪಿಸಿ, ಇನ್ನೊಂದು ಸಾಹಸಯಾತ್ರೆಯನ್ನು ಕೈಗೊಂಡಿತು. 22510 ಅಡಿ ಎತ್ತರದ, ನಂದಾದೇವಿ ಹತ್ತಿರದ ನಂದಾ ಕೋಟ್ ಪರ್ವತ ಶಿಖರದಲ್ಲಿ ಇಂತಹದ್ದೇಸ್ಥಾವರವನ್ನು ಸ್ಥಾಪಿಸುವ ಆ ಯಾತ್ರೆಯ ನಾಯಕತ್ವವವನ್ನು ವಹಿಸಿದವರು ಸಹ ಕ್ಯಾಪ್ಟನ್ ಕೊಹ್ಲಿ. ಈ ಬಾರಿ ಆ ಅಪಾಯಕಾರಿ ಸ್ಥಾವರವನ್ನು ನಂದಾಕೋಟ್ ಶಿಖರದ ಹತ್ತಿರ ಸ್ಥಾಪಿಸುವಲ್ಲಿ ಯಶಸ್ವಿಯಾದರು.
ಆ ಪರಮಾಣು ಸ್ಥಾವರದ ವಿದ್ಯುತ್‌ಶಕ್ತಿಯಿಂದ ಕೆಲಸ ಮಾಡಿದ ಪ್ರೇಷಕವು, ಚೀನಾದ ಕ್ಷಿಪಣಿಗಳ ಮಾಹಿತಿಯನ್ನು ಸಂಗ್ರಹಿಸಿ, ದೂರಗಾಮಿ ಕ್ಷಿಪಣಿಗಳನ್ನು ಚೀನಾ ತಯಾರಿಸುತ್ತಿಲ್ಲ ಎಂಬ ಮಾಹಿತಿಯನ್ನು ನೀಡಿತು. ಕೇವಲ ಮೂರು ತಿಂಗಳುಗಳ ನಂತರ ಅದು ಕೆಲಸ ಮಾಡುವುದನ್ನು ನಿಲ್ಲಿಸಿತು. ಆ ಸ್ಥಾವರಕ್ಕೆ ಏನಾಯಿತು ಎಂದು ಪರಿಶೀಲಿಸಲು, 1968ರಲ್ಲಿ ರಾವತ್ ಎಂಬುವವರ ನೇತೃತ್ವದಲ್ಲಿ ತಂಡವೊಂದು ನಂದಾಕೋಟ್ ಶಿಖರವನ್ನು ತಲುಪಿತು.
ಅಲ್ಲಿ ಅವರಿಗೊಂದು ಅಚ್ಚರಿ ಕಾದಿತ್ತು. ಆ ಪ್ಲುಟೋನಿಯಂ ಪರಮಾಣು ವಿದ್ಯುತ್ ಸ್ಥಾವರವು ಹಿಮದಲ್ಲಿ ಹೂತುಹೋಗಿದ್ದು, ಅದರ ಸುತ್ತಲೂ ಎಂಟು ಅಡಿ ಅಗಲದ ಸುರಂಗದಂತಹ ಗುಹೆ ಸೃಷ್ಟಿ ಯಾಗಿತ್ತು! ಆ ಸ್ಥಾವರದ ಬಿಸಿಯಿಂದಾಗಿ, ಸುತ್ತಲಿದ್ದ ಹಿಮವು ನಿರಂತರ ವಾಗಿ ಕರಗಿ, ಗುಹೆ ರೂಪುಗೊಂಡಿತ್ತು. ನಂದಾದೇವಿಯಲ್ಲಿ ಕಳೆದು ಹೋಗಿರುವ ಸ್ಥಾವರ ದಿಂದಲೂ ಇಂತಹ ಹಿಮ ಕರಗುವ ಚಟುವಟಿಕೆ ನಡೆದಿರ ಬಹುದೆ? ಅದರಿಂದ ಪ್ರವಾಹ ಬರುವ ಸಾಧ್ಯತೆ ಇದೆಯೆ? ನಂದಾ ದೇವಿ ಶಿಖರದ ಹತ್ತಿರ, ಹಿಮದ ರಾಶಿಯಲ್ಲಿ ಕಳೆದು ಹೋಗಿರುವ ಅಪಾಯಕಾರಿ ವಿಕಿರಣ ಸೂಸುವ ಶಕ್ತಿ ಹೊಂದಿರುವ ಆ ವಿದ್ಯುತ್ ಸ್ಥಾವರವನ್ನು ಪತ್ತೆ ಹಚ್ಚುವ ಕುರಿತು ಆಗಾಗ ಕೆಲಸಗಳು ನಡೆಯುತ್ತಿವೆ.
2004-07ರ ಅವಧಿಯಲ್ಲಿ ಅಲ್ಲಿಂದ ಹರಿದು ಬರುವ ನೀರಿನಲ್ಲಿ ಅಪಾಯಕಾರಿ ವಿಕಿರಣ ಇದೆಯೇ ಎಂದು ಪರೀಕ್ಷೆನಡೆಸ ಲಾಯಿತು. ಅಂದು ಸಂಗ್ರಹಿಸಿದ ಎರಡು ಮಾದರಿಗಳ ಪೈಕಿ, ಒಂದು ಮಾದರಿ ಯಲ್ಲಿ ಇಲ್ಲ ಎಂಬ ವರದಿ ಬಂದರೆ,ಇನ್ನೊಂದು ಮಾದರಿಯ ನೀರಿನಲ್ಲಿ ವಿಕಿರಣ ಪ್ರಮಾಣ ಇದೆ ಎಂಬ ಫಲಿತಾಂಶ ಬಂದಿದೆ ಎಂದು ಪೀಟ್ ಟಕೆಡ ಎಂಬ ಅಮೆರಿಕನ್ ಪರ್ವತಾರೋಹಿ ಹೇಳಿದ್ದಾನೆ. ಇಂತಹ ಹಲವು ಮಾಹಿತಿಗಳು ನಂದಾದೇವಿಯ ಸುತ್ತಲೂ ಹೆಣೆದುಕೊಂಡಿದ್ದು, ಅಮೆರಿಕದ ಆ ರಹಸ್ಯ ಕಾರ್ಯಾಚರಣೆಯ ನಿಗೂಢಗಳನ್ನು ಒಂದೊಂದಾಗಿ ಬಿಚ್ಚಿಡುತ್ತಿದೆ.
ಒಂದಂತೂ ಸ್ಪಷ್ಟ. ಇಂದಿಗೂ ಪತ್ತೆಯಾಗದೇ ಇರುವ ಆ ಪ್ಲುಟೋನಿಯಂ ಸ್ಥಾವರದ ಆಯಸ್ಸು ಇನ್ನೂ ಮುಗಿದಿಲ್ಲ.ಆ ವಿಕಿರಣದ ಅರ್ಧ ಆಯಸ್ಸು ೮೭ ವರ್ಷ. ಅಕಸ್ಮಾತ್ ಅದರ ವಿಕಿರಣ ಸೋರಿಕೆಯಾದರೆ, ಭಾರತದ ಉದ್ದಕ್ಕೂ ಹರಿಯುವಗಂಗಾನದಿಯ ತುಂಬಾ ಕ್ಯಾನ್ಸರ್ ತರಬಲ್ಲ ವಿಷದ ನಂಜು ತುಂಬಿಹೋಗುತ್ತದೆ. ಉತ್ತರ ಭಾರತದ ಲಕ್ಷಾಂತರಜನ ಸಾಮಾನ್ಯರ ಬದುಕು ನಾಶವಾಗುತ್ತದೆ. ಹಾಗಾದ ಪಕ್ಷದಲ್ಲಿ, ಇಂತಹದೊಂದು ದುಸ್ಸಾಹಸ ಮಾಡಿದ ಅಮೆರಿಕದ ಧೂರ್ತತೆಯನ್ನು ಕ್ಷಮಿಸಲು ಯಾರಿಂದಲೂ ಸಾಧ್ಯವಾಗದು. ಜತೆಗೆ, ಪಾಶ್ಚಾತ್ಯ ದೇಶಗಳು ನಮ್ಮ ದೇಶವನ್ನು ಇಂದಿಗೂ ಒಂದು ವಸಾಹತು ಎಂದು ಪರಿಗಣಿಸು ತ್ತವೆಂಬ ವಿಚಾರ ಋಜುವಾತಾದೀತು. ಹಾಗಾಗದಿರಲಿ ಎಂದೇ ನನ್ನ ಹಾರೈಕೆ.