ಅಧ್ಯಾತ್ಮಿಕ ಪುನರುಜ್ಜೀವನದ ಪ್ರವಾಸೋದ್ಯಮ ಅಗತ್ಯ
ಅಭಿಮತ
ಪ್ರಮೋದ ಹೆಗಡೆ
ಶಿಲಾಯುಗದಿಂದ ಪ್ರಾರಂಭವಾಗುವ ಮಾನವನ ಇತಿಹಾಸ ಇಂದು ಸೈಬರ್ ಯುಗಕ್ಕೆ ಬಂದು ನಿಂತಿದೆ.
ಬುದ್ಧಿ ಭಾವಗಳ ಹಂಗಿಲ್ಲದ ಯಂತ್ರಗಳು ನಾನಾ ರೀತಿಯ ಅತ್ಯಾಧುನಿಕ ಉಪಕರಣಗಳು ನಮ್ಮ ಕೆಲಸವನ್ನು ಸರಳಗೊಳಿಸಿವೆ.ಸಂಪರ್ಕ ವ್ಯವಸ್ಥೆಯಲ್ಲಿ ನಂಬಲಸಾಧ್ಯವಾದ ಕ್ರಾಂತಿಯಾಗಿದೆ. ಕೆಲವೇ ವರ್ಷಗಳ ಹಿಂದೆ ಕೇವಲ ಕಲ್ಪನೆಗಳಾಗಿದ್ದ ಅನೇಕಸಂಗತಿಗಳು ಇಂದು ವಾಸ್ತವಕ್ಕೆ ಇಳಿದಿವೆ. ಪರಿಣಾಮವಾಗಿ ಹಲವು ಬದಲಾವಣೆಗಳು, ಬದಲಾವಣೆಗನುಗುಣವಾಗಿ ಉದ್ಯಮ ಗಳು ಬೆಳೆದು ನಿಂತಿದೆ.
ಹಾಗೆ ಬೆಳೆದು ಬಂದ ಉದ್ಯಮದಲ್ಲಿ ಪ್ರವಾಸೋದ್ಯಮವೂ ಒಂದು. ಕಳೆದ ಮೂವತ್ತು ವರ್ಷಗಳಲ್ಲಿ ಜಾಗತಿಕ ಪ್ರವಾಸೋದ್ಯಮ ದಲ್ಲಿ ಗಮನಾರ್ಹ ಬದಲಾವಣೆಗಳನ್ನು ನಾವು ನೋಡುತ್ತಿದ್ದೇವೆ. ಮನುಷ್ಯನ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತಿದ್ದಂತೆ ಜೀವನ ಮಟ್ಟದಲ್ಲಿ ಬದಲಾವಣೆಗಳು ಕಂಡುಬಂದಿವೆ. ಅವನ ಬಿಡುವಿನ ವೇಳೆಯನ್ನು ತುಂಬಿಕೊಡುವ ಕುತೂಹಲವನ್ನು ತಣಿಸುವ ಹುಡುಕಾಟಕ್ಕೆ ಹೊಸ ಆಯಾಮವನ್ನು ತೋರಿಸುವ ಬೃಹತ್ ಉದ್ಯಮವಾಗಿ ಪ್ರವಾಸೋದ್ಯಮ ನಿಂತಿದೆ.
ವಾಣಿಜ್ಯ ಚಟುವಟಿಕೆಗಳನ್ನು ಉತ್ತೇಜಿಸುವ ಪ್ರವಾಸೋದ್ಯಮವೂ ಒಂದು ಕಡೆಯಾದರೆ, ಶೈಕ್ಷಣಿಕ ಪ್ರವಾಸೋದ್ಯಮ, ನಿಸರ್ಗ ಸೌಂದರ್ಯದ ಪರಿಸರ ಸ್ನೇಹಿ ಪ್ರವಾಸೋದ್ಯಮ ಮತ್ತು ಇತ್ತೀಚೆಗೆ ಅಧ್ಯಾತ್ಮಿಕ ಪ್ರವಾಸೋದ್ಯಮ ನಮ್ಮ ಮುಂದಿರುವ ಆಯ್ಕೆಗಳಾಗಿವೆ. ದೇಶವನ್ನು ಸುತ್ತುತ್ತಾ ಹೋದಂತೆ ನಾನು ಎನ್ನುವ ಸಂಕುಚಿತ ಪರಿಧಿಯಿಂದ ನಾವು ಎನ್ನುವ ವೈಶಾಲ್ಯತೆ ಯೆಡೆಗೆ ತೆರೆದುಕೊಳ್ಳುತ್ತೇವೆ.
ಪ್ರವಾಸ ಎನ್ನುವುದು ಕೇವಲ ವ್ಯವಹಾರಿಕ ಪ್ರಪಂಚಕ್ಕೆ ಮಾತ್ರ ಸೀಮಿತವಾಗದೆ ಮನುಷ್ಯನ ಮನೋವಿಕಾಸಕ್ಕೆ, ಅಂತರಂಗದ ಅರಿವಿಗೆ ಕಾರಣವಾಗುವ ಅಂಶವಾಗಿ ವಿಸ್ತರಿಸಲ್ಪಡುತ್ತದೆ. ಹತ್ತಾರು ಭಾಷೆ, ಸಮುದಾಯ, ಜನಾಂಗ, ಆಚಾರ – ವಿಚಾರ, ಸಂಸ್ಕೃತಿಯ ಸಂಪರ್ಕಕ್ಕೆ ನಾವು ಬರುವುದರಿಂದ ನಮ್ಮ ಅರಿವಿನ ವಿಸ್ತಾರ ಹೆಚ್ಚಾಗುತ್ತದೆ. ಜಗತ್ತನ್ನು ನೋಡುವ ದೃಷ್ಟಿ ಬದಲಾಗುತ್ತದೆ. ನಾವು ಎನ್ನುವುದು ಅಹಂಕಾರವಾಗದೆ ಹೆಮ್ಮೆಯಾಗುತ್ತದೆ.
ಸುಂದರ ಜಗತ್ತಿನ ನಿರ್ಮಾಣಕ್ಕೆ, ಅರಿವಿನ ಬದುಕಿಗೆ ಸಹಬಾಳ್ವೆ, ಸಹಜೀವನಕ್ಕೆ ಪ್ರವಾಸೋದ್ಯಮ ಪೂರಕವಾಗುತ್ತಿದೆ. ನಮ್ಮ ಪ್ರವಾಸಕ್ಕೆ, ಪ್ರಯಾಣಕ್ಕೆ ಭಕ್ತಿ, ದೇವರಮೇಲಿನ ನಂಬಿಕೆ ಸೇರಿಕೊಂಡಾಗ ಅದು ಯಾತ್ರೆಯಾಗುತ್ತದೆ. ಅಧ್ಯಾತ್ಮದ ಔನ್ನತ್ಯವನ್ನು ಅರಿತುಕೊಳ್ಳುವ ಮಾರ್ಗವಾಗುತ್ತದೆ. ಪ್ರವಾಸೋದ್ಯಮದಲ್ಲಿ ಅಧ್ಯಾತ್ಮ ಮಿಳಿತವಾದಾಗ ಸಂತರು ಬಯಸಿದ ಶಾಂತಿಯ ಜಗತ್ತು ನಮಗೆ ಸಿಗಲು ಸಾಧ್ಯ. ಅಧ್ಯಾತ್ಮ ಎನ್ನುವುದು ಜ್ಞಾನದ ಅರಿವಿನ ಪರಮೊಚ್ಛ ಸ್ಥಿತಿಯೇ ಅಧ್ಯಾತ್ಮ, ಅದು ಆತ್ಮ ಸಾಕ್ಷಾತ್ಕಾರ, ಅಂತರಂಗದ ಉತ್ಕಟವಾದ ಅರಿವು.
ಭಗವಂತನನ್ನು ಅರ್ಥಾತ್ ಸೃಷ್ಟಿಯನ್ನು ಅರಿಯುವ ಮಹಾನ್ ಪ್ರಕ್ರಿಯೆ, ಇಂತಹ ಒಂದು ಅಧ್ಯಾತ್ಮದ ಔನ್ನತ್ಯಕ್ಕೆಪ್ರವಾಸೋದ್ಯಮ ಯಾವಾಗಲೂ ಪೂರಕ ಪ್ರಕೃತಿಯ ಮಡಿಲಿನಲ್ಲಿರುವ ಸುಂದರವಾದ ದೃಶ್ಯಗಳು, ಪ್ರೇಕ್ಷಣೀಯ ಸ್ಥಳಗಳು, ಗಿಡ, ಮರ, ಬಳ್ಳಿ, ಪ್ರಾಣಿ, ಪಕ್ಷಿ ಪ್ರಪಂಚದ ವೈವಿಧ್ಯತೆಗಳು, ವೈಪರಿತ್ಯಗಳು ಸೃಷ್ಟಿಯ ಅಗಾಧತೆಯನ್ನು ತೆರೆದಿಡುತ್ತವೆ. ನಿಸರ್ಗ ಕವಿ ವರ್ಡ್ಸ್‌ವರ್ತ್‌ನ ಪ್ರಕಾರ – ನಿಸರ್ಗ ದೇವರ ಪ್ರಕಟವಾದ ರೂಪ, ಅದು ಭಗವಂತನ ದೃಶ್ಯ ಕಾವ್ಯ ಪ್ರಕೃತಿಯ ಮಡಿಲಿನಲ್ಲಿಯೇ ಭಗವಂತನ ದರ್ಶನ ಸಾಧ್ಯ. ಪ್ರಕೃತಿ ಭಗವಂತನ ಅಗಾಧತೆಯನ್ನು, ಮನುಷ್ಯ ಕುಬ್ಜತೆಯನ್ನು, ಅಸಹಾಯಕತೆಯನ್ನು ಸದಾ ಪ್ರಕಟಪಡಿಸುತ್ತದೆ. ಈ ಅರಿವನ್ನು ಮೂಡಿಸಲು ಭಗವಂತನ ಸೃಷ್ಟಿಯಲ್ಲಿ ನಂಬಿಕೆಯನ್ನು ಮೂಡಿಸಲು ಪ್ರವಾಸೋದ್ಯಮದಲ್ಲಿ ಅಧ್ಯಾತ್ಮ ಇರಲೇ ಬೇಕು.
ಇಂತಹ ಪ್ರವಾಸೋದ್ಯಮ ಮಾತ್ರ ಮಾನವೀಯ ಮೌಲ್ಯಗಳನ್ನು, ಧನಾತ್ಮಕ ಚಿಂತೆಗಳನ್ನು ಬೆಳೆಸಲು ಸಾಧ್ಯ. ಪ್ರಕೃತಿ ಯಾವಾಗಲೂ ಮನುಷ್ಯನ ಅತ್ಯುತ್ತಮ ಶಿಕ್ಷಕ, ಮಾರ್ಗದರ್ಶಕ, ಜೀವ ವೈವಿಧ್ಯದ ಮೂರ್ತ ರೂಪವಾಗಿರುವ ನಿಸರ್ಗದೊಂದಿಗೆ ನಮ್ಮ ಋಷಿ ಮುನಿಗಳ ಅನುಸಂಧಾನದ ಪ್ರತಿಫಲವಾಗಿ ಭಾರತೀಯ ಸಂಸ್ಕೃತಿ, ಭಾರತೀಯ ತತ್ತ್ವಜ್ಞಾನ ಮೈದಾಳಿದೆ. ಉದಾತ್ತ ಆದರ್ಶಗಳನ್ನು ಸಂದೇಶಗಳನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದೆ.
ಪ್ರಕೃತಿ ದೇವರ ಕೊಡುಗೆ ಎನ್ನುವುದನ್ನು ಅರಿಯಲು ಪ್ರವಾಸೋದ್ಯಮ ಪೂರಕವಾಗಿದೆ. ಜಗತ್ತು ಗೊಂದಲದ ಗೂಡಾಗುತ್ತಿದೆ. ಭೌತಿಕ ಸುಖದ ಅಮಲಿನಲ್ಲಿ ಮನುಷ್ಯತ್ವ ನಾಶವಾಗುತ್ತಿದೆ.  ಅಧ್ಯಾತ್ಮಿಕ ಪುನರುಜ್ಜೀವನ ಅದನ್ನು ಉತ್ತೇಜಿಸುವ ಪ್ರವಾಸೋದ್ಯಮ ಇಂದಿನ ಅಗತ್ಯ.