ರಸ್ತೆ ದುರವಸ್ಥೆ, ನಮ್ಮ ಅಸಡ್ಡಾಳ ವ್ಯವಸ್ಥೆ
ನಾಡಿಮಿಡಿತ
ವಸಂತ ನಾಡಿಗೇರ
ನಾನಾ ಕಾರಣಗಳಿಗಾಗಿ ಪಾದಯಾತ್ರೆಗಳು ನಡೆಯುತ್ತವೆ. ಆದರೆ ಇದು ಅತಿ ಅಪರೂಪದ, ವಿಶೇಷವಾದ ಹಾಗೂ ಹೃದಯಸ್ಪರ್ಶಿ ಪಾದಯಾತ್ರೆಯಾಗಿತ್ತು. ಇವರೆಲ್ಲ ಧಾರವಾಡ ಜಿಲ್ಲಾಧಿಕಾರಿ ಕಚೇರಿಯಿಂದ ಆರಂಭಿಸಿ ಹೆದ್ದಾರಿಗೆ ಆಗಮಿಸಿದರು.
ಇದು ಶ್ರದ್ಧಾಂಜಲಿ ಸಲ್ಲಿಸುವ ಉದ್ದೇಶದ ಪಾದಯಾತ್ರೆ. ಅದಕ್ಕಾಗಿಯೇ ಇದು ಅತ್ಯಪರೂಪದ್ದು ಎಂದು ಹೇಳಿದ್ದು. ಏನು ಮತ್ತು ಏಕೆ ಶ್ರದ್ಧಾಂಜಲಿ ಎಂದಿರಾ? ಇದರ ವಿವರ ಕೇಳಿದರೆ ಎಲ್ಲರ ಮನವೂ ಕಲಕುತ್ತದೆ. ಅವರೆಲ್ಲ ದಾವಣಗೆರೆಯವರು. ಅಲ್ಲಿನ ಸೇಂಟ್ ಪಾಲ್ಸ್ ಶಾಲೆಯ ಹಳೆಯ ವಿದ್ಯಾರ್ಥಿನಿಯರು. ವಾಟ್ಸ್ ಆಪ್ ಗ್ರೂಪ್ ಮೂಲಕ ಈ ಮಹಿಳೆಯರು ಸಂಪರ್ಕದಲ್ಲಿರು ತ್ತಿದ್ದರು. ಹಲವರು ವೈದ್ಯರು.
ಮತ್ತೆ ಕೆಲವರು ಇನ್ನೂ ಬೇರೆ ಬೇರೆ ಉದ್ಯೋಗಗಳಲ್ಲಿದ್ದರು. ಆಗಾಗ ಭೇಟಿಯಾಗುತ್ತಿದ್ದರು. ಊಟಕ್ಕೆ ಸೇರುತ್ತಿದ್ದರು. ಟ್ರಿಪ್‌ಗೆ ಹೋಗುತ್ತಿದ್ದರು. ಈ ಬಾರಿ ಸಂಕ್ರಾಂತಿ ಸಂದರ್ಭದಲ್ಲಿ ಗೋವಾ ಪ್ರವಾಸಕ್ಕೆ ಹೊರಟು ನಿಂತಿದ್ದರು. ಇದಕ್ಕಾಗಿ ಅಲ್ಲಿನ ರೆಸಾರ್ಟ್ ಬುಕ್ ಮಾಡಿದ್ದರು. ಟೆಂಪೊ ಟ್ರಾವಲರ್ ಬುಕ್ ಮಾಡಿ ಬೆಳಗಿನ ಜಾವ 3 ಗಂಟೆಗೆ ಪ್ರಯಾಣ ಆರಂಭಿಸಿದ್ದರು. ಮಾರ್ಗಮಧ್ಯೆಧಾರವಾಡದಲ್ಲಿ ತಿಂಡಿ ತಿಂದು ಮುಂದೆ ಸಾಗುವ ಯೋಜನೆ ಇತ್ತು.
ಆದರೆ ಹುಬ್ಬಳ್ಳಿ ದಾಟಿ ಧಾರವಾಡಕ್ಕೆ ಇನ್ನು 8 ಕಿಮೀ ದೂರದಲ್ಲಿರುವಂತೆ, ಇಟಿಗಟ್ಟಿ ಗ್ರಾಮದ ಬಳಿ ದುರಂತ ನಡೆದು ಹೋಯಿತು. ಅವರಿದ್ದ ಟಿಟಿಗೆ ಎದುರಿನಿಂದ ಬಂದ ಲಾರಿ ಅಪ್ಪಳಿಸಿತು.18ಜನರ ಪೈಕಿ12ಮಂದಿ ಮೃತಪಟ್ಟರು. ಇದೊಂದು ಅಪಘಾತದಿಂದ18ಜನರ ಕುಟುಂಬದಲ್ಲಿ ಕತ್ತಲು ಆವರಿಸಿತು. ಕನಸುಗಳು ಕಮರಿ ಹೋದವು. ಕೆಲವರು ಅನಾಥರಾದರು. ಹೀಗೆ ಕಥೆಗಳು ಬಿಚ್ಚಿಕೊಳ್ಳುತ್ತ ಹೋಗುತ್ತವೆ. ಈ ಅಪಘಾತದ ಬಗ್ಗೆ ಪ್ರಧಾನಿ ಕೂಡ ದಿಗ್ಭ್ರಮೆ ವ್ಯಕ್ತಪಡಿಸಿ, ಸಂತಾಸ ಸೂಚಿಸಿದರು.
ಆದರೆ ಈ ಪ್ರಕರಣದ ವಿಶೇಷ ಏನೆಂದರೆ, ಸಂತಾಪ ಸೂಚಿಸಿ, ತನಿಖೆಗೆ ಆದೇಶಿಸಿ, ಪರಿಹಾರ ನೀಡುವಲ್ಲಿಗೆ ಮುಗಿಯಲಿಲ್ಲ. ದುರಂತದಲ್ಲಿ ತಮ್ಮವರನ್ನು ಕಳೆದುಕೊಂಡ ಕುಟುಂಬ ಸದಸ್ಯರು, ಬಂಧು ಬಾಂಧವರೆಲ್ಲ ದೂರದ ದಾವಣಗೆರೆಯಿಂದ ಬಂದರು.40ಕಾರುಗಳಲ್ಲಿ ಒಟ್ಟು200ಜನರು ಆಗಮಿಸಿದರು. ಇಟಿಗಟ್ಟಿ ಗ್ರಾಮದಲ್ಲಿ, ಅಪಘಾತ ಸಂಭವಿಸಿದ ಸ್ಥಳದಲ್ಲಿ ಸೇರಿದರು. ಅಗಲಿದ ತಮ್ಮ ಪ್ರೀತಿಪಾತ್ರರಿಗೆ ಶ್ರದ್ಧಾಂಜಲಿ ಸಲ್ಲಿಸಿದರು. ಮೃತ10ತಾಯಂದಿರ ಫೋಟೊಗಳನ್ನು ರಸ್ತೆಯಲ್ಲೇ ಇರಿಸಿ ಆರತಿ ಬೆಳಗಿದರು. ಹಾಡು ಹೇಳಿದರು.
ಈ ಸಂದರ್ಭದಲ್ಲಿ ನೆರೆದಿದ್ದ ವರೆಲ್ಲರೂ ಕಣ್ಣೀರು ಹಾಕಿದರು. ಈ ದೃಶ್ಯ ಭಾವುಕವಾಗಿತ್ತು. ಎಲ್ಲರೂ ಸಮಾನ ದುಃಖಿಗಳೇ. ಆದರೆ ಒಬ್ಬರನ್ನೊಬ್ಬರು ಸಂತೈಸುತ್ತಿದ್ದರು. ನೆರೆದಿದ್ದ ಇತರರು, ಪೊಲೀಸ್ ಮತ್ತಿತರ ಅಧಿಕಾರಿಗಳು ಮೂಕವಿಸ್ಮಿತರಾಗಿದ್ದರು. ಇದೇ ಸ್ಥಳದಲ್ಲಿ ಹಿಂದೆ ಸಂಭವಿಸಿದ ಅಪಘಾತದಲ್ಲಿ ತಮ್ಮವರನ್ನು ಕಳೆದುಕೊಂಡಿರುವ ಕೆಲವರೂ ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ದರು. ಅವರು ಮಾತನಾಡುವಾಗಲೂ ಮನಸ್ಸಿನ ದುಃಖ ದುಮ್ಮಾನ ಕಣ್ಣೀರಿನ ರೂಪದಲ್ಲಿ ವ್ಯಕ್ತವಾಗಿತ್ತು.
ಇನ್ನು ಲವರಿಗೆ ಮೌನ ಮತ್ತು ಕಣ್ಣೀರೇ ಮಾತಾಗಿತ್ತು. ಅಪಘಾತ ದಲ್ಲಿ ಐವರ ಪ್ರಾಣ ಉಳಿಸಲು ನೆರವಾದ ನಿಂಗಪ್ಪಎಂಬುವವರು ಮಾತನಾಡುತ್ತ ಭಾವುಕರಾದರು. ಅವರು ಈ ಹಿಂದೆಯೂ ಇಂಥ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದಾರೆ.ಅಪಘಾತ ಸಂಭವಿಸಿದಾಗ ತಕ್ಷಣ ನೆರವಿಗೆ ಧಾವಿಸಿದ್ದಾರೆ. ಹೀಗಾಗಿ ಇದು ಅವರಿಗೆ ಹೊಸದೇನೂ ಅಲ್ಲ. ನಿಜಹೇಳಬೇಕೆಂದರೆ ನಿಂಗಪ್ಪ ಮತ್ತಿತರ ಅಲ್ಲಿನ ಸ್ಥಳೀಯರಿಗೆ ಇದು ಸಾಮಾನ್ಯ. ಆದರೆ ಒಂದೇ ದುರಂತದಲ್ಲಿ12ಮಂದಿ ಮೃತರಾದುದು ಹಾಗೂ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಇಷ್ಟು ಜನರು ಬಂದಿದ್ದು, ಇದರಲ್ಲಿ ಸ್ಥಳೀಯರು, ಸ್ಥಳೀಯ ಸಂಘ ಸಂಸ್ಥೆಗಳು ಕೈಜೋಡಿಸಿದ್ದು ಮಾತ್ರ ಹೊಸದಾಗಿತ್ತು.
ಹೀಗೆ, ದುರಂತ ತಂದ ದುಃಖ ಮತ್ತು ಕಣ್ಣೀರಿಗಿಂತ ಈ ಸಮಸ್ಯೆಯ ಗಂಭೀರತೆಯ ಬಗ್ಗೆ ಅಂದು ಎಲ್ಲರ ಗಮನ ಸೆಳೆದಿದ್ದು ವಿಶೇಷ ವಾಗಿತ್ತು. ಸಂಬಂಧಪಟ್ಟವರಿಗೆ ಒಂದು ಸ್ಪಷ್ಟ ಸಂದೇಶ ರವಾನೆಯಾಗಿತ್ತು. ಹಾಗಾದರೆ ಈ ದುರಂತ ಎಲ್ಲರ ಗಮನ ಸೆಳೆದಿದ್ದು ಹೇಗೆ ಮತ್ತು ಏಕೆ ಎಂಬುದು ಇಲ್ಲಿ ಮುಖ್ಯ. ದುರಂತ ಸಂಭವಿಸಿದ್ದು ಹುಬ್ಬಳ್ಳಿ ಧಾರವಾಡ ಬೈಪಾಸ್ ಹೆದ್ದಾರಿಯಲ್ಲಿ ಸುಮಾರು 36 ಕಿಮೀ ನಷ್ಟಿದೆ. ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಯಾಗಿರುವ ಇದು ಸಾವಿನ ಹೆದ್ದಾರಿ ಎಂದರೂ ತಪ್ಪಲ್ಲ.
ಏಕೆಂದರೆ ಸುವರ್ಣ ಚತುಷ್ಪಥ ಯೋಜನೆ ಅಡಿ ಈಗ ಎಲ್ಲ ಹೆದ್ದಾರಿಗಳು ಈ ಕಡೆ ನಾಲ್ಕು ಹಾಗೂ ಇನ್ನೊಂದು ಬದಿಯಲ್ಲಿ ನಾಲ್ಕು – ಹೀಗೆ ಎಂಟು ಪಥಗಳ ರಸ್ತೆಯಾಗಿರುತ್ತವೆ. ಎಲ್ಲ ವಾಹನಗಳು ಸುಗಮವಾಗಿ, ವೇಗವಾಗಿ, ಸುರಕ್ಷಿತವಾಗಿ ಸಾಗಬಹುದು. ಆದರೆ ಈ36ಕಿಮೀ. ಮಾರ್ಗದಲ್ಲಿ ಇದು ಸಾಧ್ಯವಿಲ್ಲ. ಏಕೆಂದರೆ ಇಲ್ಲಿ ರಸ್ತೆ ಕಿರಿದಾಗಿದೆ. ಹೀಗಾಗಿ ಅಪಘಾತ ಇಲ್ಲಿ ಸಾಮಾನ್ಯಎಂಬಂತಾಗಿದೆ ಹಾಗೂ ಇದು ಮೃತ್ಯುಕೂಪವಾಗಿ ಪರಿಣಮಿಸಿದೆ.
ಎರಡೂ ಕಡೆಯಿಂದ ರಾಜಮಾರ್ಗದಲ್ಲಿ ರಾಜಗಾಂಭೀರ್ಯ ದಿಂದ ಬರುವ ವಾಹನಗಳು ಈ ಸ್ಥಳಕ್ಕೆ ಬರುತ್ತಿದ್ದಂತೆ ರಸ್ತೆಯು ಬಾಟಲಿಯ ಕತ್ತಿನಂತೆ ಇದ್ದಕ್ಕಿದ್ದಂತೆ ಕಿರಿದಾಗುತ್ತದೆ. ಇದರ ಅರಿವಿಲ್ಲದೆಯೋ, ಅಥವಾ ನಿರ್ಲಕ್ಷ್ಯದಿಂದಲೋ ವೇಗವಾಗಿ ಬರುವ ವಾಹನಗಳು ಅಪಘಾತಕ್ಕೆ ಈಡಾಗುವ ಸಂಭವ ಹೆಚ್ಚು. ಈ ಹೆದ್ದಾರಿಯಲ್ಲಿ ಇದುವರೆಗೆ422ಅಪಘಾತಗಳು ಸಂಭವಿಸಿವೆ. 164 ಮಂದಿ ಮೃತಪಟ್ಟಿದ್ದಾರೆ.
465ಜನರಿಗೆ ಗಾಯಗಳಾಗಿವೆ.2020ರಲ್ಲೇ33ಅಪಘಾತಗಳು ನಡೆದಿವೆ.16ಮಂದಿ ಮೃತಪಟ್ಟಿದ್ದು55ಜನರು ಗಾಯ ಗೊಂಡಿದ್ದಾರೆ.2021ರ ಆರಂಭದಲ್ಲೇ ಅಂದರೆ ಜನವರಿ15ರಂದು ಈ ಘೋರ ದುರಂತ ಸಂಭವಿಸಿದೆ. ಇಷ್ಟಕ್ಕೂ ಇದು ಸಾವಿನ ಹೆದ್ದಾರಿಯಾಗಿ ಪರಿಣಮಿಸಿರು ವುದಾದರೂ ಯಾಕೆ ಎಂಬುದನ್ನು ಗಮನಿಸಿದರೆ ಶಾಕ್ ಆಗುತ್ತದೆ. ನಮ್ಮ ವ್ಯವಸ್ಥೆಯ ಬಗ್ಗೆ ಕೋಪ, ಜುಗುಪ್ಸೆ ಎರಡೂ ಒಟ್ಟಿಗೇ ಆಗುತ್ತದೆ. ಏಕೆಂದರೆ ಇದು ಎರಡು ದಶಕಗಳಿಂದಲೂ ಇರುವ ಸಮಸ್ಯೆ.
ಅಂದಿನಿಂದ ಇಂದಿನ ವರೆಗೂ ಬಿಡದೆ ಕಾಡುತ್ತಿರುವ ಕಂಟಕ. ಆದರೆ ನಮ್ಮ ಸರಕಾರಿ ವ್ಯವಸ್ಥೆಯೇ ಹೀಗಿರುವುದರಿಂದ ಹೀಗೆಯೇ ಮುಂದುವರಿದಿದೆ. ದುರಂತಗಳು ಸಂಭವಿಸಿದಾಗಲೆಲ್ಲ ಸಂತಾಪ, ಪರಿಹಾರ ಇತ್ಯಾದಿಗಳು ಸಂಪ್ರದಾಯದಂತೆ ನಡೆದು ಅದನ್ನು ಮರೆಯುತ್ತೇವೆ – ಮತ್ತೊಂದು ಅಪಘಾತ ನಡೆಯುವ ತನಕ. ಈ ಸಮಸ್ಯೆಯ ಹಿನ್ನೆಲೆಯನ್ನು ಅರಿಯಲು20ವರ್ಷ ಹಿಂದಕ್ಕೆ ಹೋಗಬೇಕಾಗುತ್ತದೆ. ಆಗೆಲ್ಲ ಈಗಿನಂತೆ ಸುವರ್ಣ ಚತುಷ್ಪಥ ರಸ್ತೆಗಳಿರಲಿಲ್ಲ.
ಹೆದ್ದಾರಿಯಾದರೂ ಒಂದೇ ರಸ್ತೆಯಲ್ಲಿ ದ್ವಿಮುಖ ಸಂಚಾರ ಇರುತ್ತಿತ್ತು. ಪ್ರಮುಖ ಊರಿರುವ ಜಾಗದಲ್ಲಿ ಸಂಚಾರ ದಟ್ಟಣೆ ಅಽಕವಾಗಿರುವುದರಿಂದ ಬೈಪಾಸ್ ರಸ್ತೆಗಳನ್ನು ನಿರ್ಮಿಸಲಾಗುತ್ತಿತ್ತು. ಹುಬ್ಬಳ್ಳಿ ಧಾರವಾಡದ ನಡುವೆಯೂ ಇಂಥದೊಂದು ಬೈಪಾಸ್ ರಸ್ತೆ ನಿರ್ಮಾಣಕ್ಕೆ1998ರಲ್ಲಿ ಖಾಸಗಿ ಸಂಸ್ಥೆಯೊಂದಕ್ಕೆ ಗುತ್ತಿಗೆ ನೀಡಲಾಯಿತು. ಇದು ನಿರ್ಮಿಸಿ, ನಿರ್ವಹಿಸಿ, ಹಸ್ತಾಂತರಿಸಿ (ಬಿಒಟಿ) ಸ್ವರೂಪದ ಯೋಜನಾ ಒಪ್ಪಂದ. ಆ ಪ್ರಕಾರ ಗುತ್ತಿಗೆ ಪಡೆದಿರುವ ಸಂಸ್ಥೆ ಇದನ್ನು ನಿರ್ಮಿಸಿ, ನಿರ್ವಹಿಸುತ್ತಿದೆ. ಆಗಿನ ಒಪ್ಪಂದಂತೆ ಇದು ಈಗಿರುವ ಸ್ವರೂಪದಲ್ಲಿ ನಿರ್ಮಾಣವಾಗಿತ್ತು.
2024ರ ವರೆಗೆ ಇದೇ ಒಪ್ಪಂದ ಜಾರಿಯಲ್ಲಿರುತ್ತದೆ. ಹೀಗಾಗಿ ರಸ್ತೆಯು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸುಪರ್ದಿಯಲ್ಲಿಲ್ಲ. ಬದಲಾಗಿ ಖಾಸಗಿ ಸಂಸ್ಥೆಯ ನಿರ್ವಹಣೆಯಲ್ಲಿದೆ. ಇದೇ ಕಾರಣಕ್ಕಾಗಿ36ಕಿಮೀ. ಉದ್ದದ ಈ ರಸ್ತೆಯ ಭಾಗ ಮಾತ್ರ ಅಂದು ಹೇಗಿತ್ತೋ ಇಂದು ಕೂಡ ಹಾಗೆಯೇ ಇದೆ. ರಸ್ತೆ ಅಗಲೀಕರಣ ಮಾಡಲು ಈ ಒಪ್ಪಂದ ಅಡ್ಡಿಯಾಗುತ್ತಿತ್ತು. ಕೋರ್ಟು ಕಚೇರಿಯ ಸಮಸ್ಯೆ ಉಂಟಾಗುತ್ತಿತ್ತು. ಕೊನೆಗೆ ರಾಜ್ಯ ಸರಕಾರ ರಸ್ತೆಯನ್ನು ಖಾಸಗಿ ಸಂಸ್ಥೆಯಿಂದ ತನ್ನ ವಶಕ್ಕೆ ವಾಪಸ್ ಪಡೆದಿದೆ. ಆದರೆ ಮತ್ತದೇ ಇಚ್ಛಾಶಕ್ತಿಯ ಕೊರತೆಯೋ, ಅಸಡ್ಡೆಯೋ, ನಿರ್ಲಕ್ಷ್ಯವೋ ಗೊತ್ತಿಲ್ಲ.
ಒಟ್ಟಿನಲ್ಲಿ ಈ ವಿಷಯದಲ್ಲಿ ಪ್ರಗತಿ ಆಗಿಲ್ಲ. ದುರಂತಗಳು ನಿಂತಿಲ್ಲ. ಹಾಗೆಂದು ಜನರೇನೂ ಸುಮ್ಮನಿಲ್ಲ. ಸಂಘ ಸಂಸ್ಥೆಗಳೂ ಸಾಕಷ್ಟು ಸಲ ದನಿ ಎತ್ತಿವೆ. ಆದರೆ ಮತ್ತದೇ ಚಾನಸ ಪ್ರವೃತ್ತಿಯಿಂದಾಗಿ ಸಮಸ್ಯೆ ಹಾಗೆಯೇ ಉಳಿದಿದೆ. ಪರಿಹಾರ ಮರೀಚಿಕೆ ಯಾಗಿದೆ. ದುರಂತ, ಸಾವು – ನೋವು ನಿಂತಿಲ್ಲ. ಕೇಂದ್ರ ಹೆದ್ದಾರಿ ಖಾತೆ ಸಚಿವರು ಈಚೆಗೆ ಹುಬ್ಬಳ್ಳಿಗೆ ಬಂದಾಗಲೂ ಈ ಸಮಸ್ಯೆಯ ಬಗ್ಗೆ ಅವರ ಗಮನ ಸೆಳೆಯಲಾಗಿದೆ. ಈ ದುರಂತದ ಬಳಿಕ ಸುಪ್ರೀಂ ಕೋರ್ಟ್ ಕೂಡ ನೋಟಿಸ್ ನೀಡಿದೆ. ಹೀಗಾಗಿ ಇಟಿಗಟ್ಟಿ ಪ್ರಕರಣವು ಇಕ್ಕಟ್ಟಾದ ಈ ಸಾವಿನ ದಾರಿಯನ್ನು ಸರಿದಾರಿಗೆ ತರುವುದೇ ಎಂಬುದನ್ನು ಕಾದು ನೊಡಬೇಕಾಗಿದೆ. ಇಲ್ಲಿ ಗಮನಿಸ ಬೇಕಾದ ಮತ್ತೊಂದು ಅಂಶವೆಂದರೆ ಆ ದಿನದ ಶ್ರದ್ಧಾಂಜಲಿ ಕಾರ್ಯಕ್ರಮಮದಲ್ಲಿ ಇಷ್ಟು ಜನರು ಭಾಗವಹಿಸಿದ್ದರೂಜನಪ್ರತಿನಿಧಿಗಳ ಸುಳಿವಿರಲಿಲ್ಲ. ಇದೇ ನಮ್ಮ ವ್ಯವಸ್ಥೆಯನ್ನು ಕಾಡುತ್ತಿರುವ ಬಲುದೊಡ್ಡ ಸಮಸ್ಯೆ.
ಸಾವು ನೋವು ಸಹಜವಾದದ್ದೇ. ಕಾಯಿಲೆ ಕಸಾಲೆಯಿಂದ ಸಾವು ಬರುವುದು ಒಂದು ಥರ. ಇನ್ನಿತರ ಕೆಲವು ಕಾರಣಗಳಿಂದಲೂ ಮರಣ ಸಂಭವಿಸಬಹುದು. ಆದರೆ ಅಪಘಾತದಲ್ಲಿ ಸಂಭವಿಸುವ ಸಾವು ನೋವು ತುಂಬ ಅನ್ಯಾಯ. ಘೋರ ಮತ್ತು ಭೀಕರ. ಏಕೆಂದರೆ ಬಹುತೇಕ ಸಂದರ್ಭಗಳಲ್ಲಿ ಜನರು ತಮ್ಮದಲ್ಲದ ತಪ್ಪಿಗೆ ಪ್ರಾಣ ಕಳೆದುಕೊಳ್ಳುತ್ತಾರೆ. ಕೇಂದ್ರ ಸರಕಾರವು ಸಂಸತ್ತಿಗೆ ನೀಡಿರುವ ಮಾಹಿತಿಯ ಪ್ರಕಾರ ಭಾರತದಲ್ಲಿ ಅಪಘಾತಗಳ ಸಂಖ್ಯೆ ಜಗತ್ತಿನಲ್ಲೇ ಅತ್ಯಧಿಕವಾಗಿದೆ.
2019ರ ಅಂಕಿ ಅಂಶದ ಪ್ರಕಾರ ಆ ವರ್ಷ ಒಟ್ಟು 480652 ಅಪಘಾತ ಪ್ರಕರಣಗಳು ವರದಿಯಾಗಿವೆ.151113ಜನರು ಮೃತಪಟ್ಟಿದ್ದಾರೆ. ಅಂದರೆ ಪ್ರತಿದಿನ 414 ಸಾವು ಅಥವಾ ಪ್ರತಿ ಗಂಟೆಗೆ17ಜನರು ಅಪಘಾತದಲ್ಲಿ ಸಾವಿಗೀಡಾಗು ತ್ತಾರೆ. ಗಾಯ ಗೊಳ್ಳುವುದು, ಅಂಗವೈಕಲ್ಯಕ್ಕೆ ಒಳಗಾಗುವುದು, ಆಸ್ಪತ್ರೆ ಖರ್ಚು ಇದೆಲ್ಲ ಬೇರೆ. ಕರ್ನಾಟಕ ರಾಜ್ಯವು ಸರಾಸರಿ40ಸಾವಿರ ಅಪಘಾತಗಳೊಂದಿಗೆ ಐದನೇ ಸ್ಥಾನದಲ್ಲಿದೆ. ಅದೇ ರೀತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯು ಅಪಘಾತಕ್ಕೆ ಪ್ರಮುಖ ಕಾರಣ ವಾಗಿದ್ದರೂ ಕೆಟ್ಟ ರಸ್ತೆಗಳ ಪಾತ್ರ ಪ್ರಮುಖವಾಗಿದೆ.
ರಾಜ್ಯದಲ್ಲಿ ಕೆಟ್ಟ ರಸ್ತೆಗಳು, ಅದರಲ್ಲೂ ವಿಶೇಷವಾಗಿ ರಸ್ತೆಗುಂಡಿಗಳಿಂದಾಗಿ ಪ್ರತಿವರ್ಷ2000ಜನರು ಮೃತಪಡುತ್ತಾರೆ.4000ಕ್ಕೂ ಹೆಚ್ಚು ಮಂದಿ ಗಾಯಗೊಳ್ಳುತ್ತಾರೆ. ತಮ್ಮ ಮಗ ರಸ್ತೆಗುಂಡಿಗೆ ಬಲಿಯಾದ ಬಳಿಕ ಮುಂಬೈನ ವ್ಯಕ್ತಿಯೊಬ್ಬರು ಸ್ವತಃರಸ್ತೆಗುಂಡಿ ಮುಚ್ಚುವ ಕೆಲಸವನ್ನು ಮಾಡುತ್ತಿರುವ ವಿಷಯದ ಬಗ್ಗೆ ಈ ಅಂಕಣದಲ್ಲೇ ಹಿಂದೊಮ್ಮೆ ಬರೆದಿದ್ದೆ. ಈಗಾಗಲೇ ತಿಳಿಸಿರುವಂತೆ ಈ ರೀತಿಯ ಅಪಘಾತಗಳಲ್ಲಿ ತಮ್ಮವರನ್ನು ಕಳೆದುಕೊಂಡಾಗ ಆಗುವ ನೋವು ಭಯಂಕರವಾದುದು. ಮೊನ್ನೆ ಮೊನ್ನೆಯಷ್ಟೇ ಯುವತಿಯೊಬ್ಬಳು ರಸ್ತೆ ಅಪಘಾತಕ್ಕೆ ಬಲಿಯಾದ ಸುದ್ದಿ ಸಾಕಷ್ಟು ಸದ್ದು ಮಾಡಿತ್ತು.
ಆಕೆ ಎಂಬಿಬಿಎಸ್ ಸೇರಿದ್ದಳು. ಒಂದು ದಿನ ಮಾತ್ರ ಕಾಲೇಜಿನ ಮೆಟ್ಟಿಲು ತುಳಿದಿದ್ದಳು. ಎರಡನೇ ದಿನ ಕಾಲೇಜಿಗೆ  ಹೋಗು ತ್ತಿದ್ದಾಗ ಆಕೆಯ ಸ್ಕೂಟರ್‌ಗೆ ವಾಹನ ಬಡಿದು ಮರಣಹೊಂದಿದಳು. ಇದಕ್ಕೆ ಕಾರಣ ಮತ್ತದೇ ನಿರ್ಲಕ್ಷ್ಯದ ಚಾಲನೆ ಮತ್ತು ಕೆಟ್ಟ ರಸ್ತೆಗಳು. ರಸ್ತೆಗಳು ಇರಬೇಕಾದುದು ಸುಗಮ ಸಂಚಾರಕ್ಕೆ. ಆದರೆ ಇವೇ ಜೀವ ತೆಗೆಯುವ ಯಮಸ್ವರೂಪಿ ಗಳಂತಾದರೆ ಏನು ಮಾಡುವುದು? ರಸ್ತೆ ಅಪಘಾತಗಳಿಂದ ಸಾವು ನೋವು ಸಂಭವಿಸಿದಾಗ ಪರಿಹಾರ ಕೊಟ್ಟರೆ ಆಯಿತೆ? ಹೋದ ಜೀವ ಮರಳಿ ಬರುವುದೇ? ಕುಟುಂಬಸ್ಥರ ಕಣ್ಣಿರು ಒರೆಸುವವರಾರು? ಸರಿಯಾಗಿ ನೋಡಿದರೆ ರಾಜಧಾನಿ ಬೆಂಗಳೂರಲ್ಲೇ ಒಂದು ರಸ್ತೆಯೂ ನೆಟ್ಟಗಿಲ್ಲ. ಇದಕ್ಕೆ ಕಾರಣ ಎಲ್ಲರಿಗೂ ಗೊತ್ತೇ ಇದೆ.
ಗುತ್ತಿಗೆದಾರರು ಕೆಲಸವನ್ನು ಒಪ್ಪ ಓರಣವಾಗಿ ಮಾಡುವುದಿಲ್ಲ. ಅದಕ್ಕೆ ಕಾರಣಗಳು ಏನಾದರೂ ಇರಬಹುದು. ಒಂದೊಮ್ಮೆ ಚೆನ್ನಾಗಿರುವ ರಸ್ತೆ ಮಾಡಿದರೂ ಮರುದಿನವೇ ಅದನ್ನು ಅಗೆಯಲು ಜಲಮಂಡಲಿ ಯವರೋ, ವಿದ್ಯುತ್ ಮಂಡಲಿಯವರೋಒಳಚರಂಡಿಯವರೋ, ಕೇಬಲ್‌ನವರೋ ಹಾಜರಾಗಿರುತ್ತಾರೆ. ಒಮ್ಮೆ ರಸ್ತೆ ಅಗೆದ ಮೇಲೆ ಅದು ಮತ್ತೆ ಮೊದಲಿನಂತಾಗುವುದು ಕನಸೇ ಸರಿ. ಹೆಚ್ಚೆಂದರೆ ತೇಪೆ ಹಾಕಿ ಹೋಗಬಹುದಷ್ಟೇ.
ಯಾಕೆ ಹೀಗೆ ? ಇದೆಲ್ಲ ಸಂಬಂಧಿಸದವರಿಗೆ ಗೊತ್ತಿರುವುದಿಲ್ಲವೆ? ಯಾಕಿಲ್ಲ? ಚೆನ್ನಾಗಿ ಗೊತ್ತಿರುತ್ತದೆ. ಆದರೆ ಮತ್ತದೇ ಅಸಡ್ಡೆ. ಮತ್ತದೇ ಭ್ರಷ್ಟಾಚಾರ, ಮತ್ತದೇ ಮತ್ತಿನ್ನೆನೋ ವಿಷಯಗಳು. ನಾವೂ ಸಹ ಇದಕ್ಕೆ ಒಂಥರಾ ಒಗ್ಗಿಕೊಂಡಿದ್ದೇವೆ. ಹೆಚ್ಚೆಂದರೆ ಗೊಣಗುತ್ತೇವೆ. ಅವರಿವ ರನ್ನು ಬೈಯುತ್ತೇವೆ. ಹಿಡಿಶಾಪ ಹಾಕುತ್ತೇವೆ. ಸುಮ್ಮನಾಗುತ್ತೇವೆ. ಅದರಾಚೆ ಯಾರೂ ಯೋಚನೆ ಮಾಡುವುದಿಲ್ಲ. ಮಾಡಿದರೂ ನಮ್ಮ ಜಡ್ಡುಗಟ್ಟಿರುವ ವ್ಯವಸ್ಥೆಯಲ್ಲಿ ಇದಕ್ಕೆ ಪರಿಹಾರ ಸಿಗುವ ಭರವಸೆ ಇಲ್ಲ.
ಹೀಗಾಗಿ ಎಲ್ಲರೂ ಒಂದು ರೀತಿ ನಿರಾಶರಾಗಿದ್ದಾರೆ. ಸಿನಿಕರಾಗಿದ್ದಾರೆ. ಈ ಸಂದರ್ಭದಲ್ಲಿ, ಹಿಂದೆ ವಿಡಿಯೊ ಒಂದನ್ನು ನೋಡಿದ ನೆನಪಾಗುತ್ತಿದೆ. ಅದು ಬಹುಶಃ ರಷ್ಯದ ಒಂದು ನಗರ. ಅಲ್ಲಿಯೂ ಹೀಗೇ ಒಂದು ರಸ್ತೆ ಹದಗೆಟ್ಟಿತ್ತು. ರಸ್ತೆ ತುಂಬ ಗುಂಡಿ ಬಿದ್ದುಗುಂಡಾಂತರವೆದ್ದಿತ್ತು. ನಾಗರಿಕರೂ ಸಾಧ್ಯವಿರುವ ಎಲ್ಲವನ್ನೂ ಮಾಡಿದರು. ಆದರೆ ದಪ್ಪ ಚರ್ಮದ, ಸ್ಥಳೀಯ ಆಡಳಿತದ ಕಿವಿಗೆ ಇದು ಬೀಳಲೇ ಇಲ್ಲ. ಕೊನೆಗೆ ಅಲ್ಲಿನ ಜನರು ಒಂದು ಉಪಾಯ ಮಾಡಿದರು. ಆ ಊರಿನ ಮೇಯರ್‌ನ ಒಂದು ಫೋಟೊ ಪ್ರಿಂಟ್ ಹಾಕಿಸಿದರು.
ಅದನ್ನು ರಸ್ತೆ ಗುಂಡಿ ಇರುವ ಜಾಗದಲ್ಲಿ ಇರಿಸಿದರು. ಹೋಗಿಬರುವ ವಾಹನಗಳೆಲ್ಲ ಫೋಟೊವನ್ನು ತುಳಿದು ತುಳಿದು ಹೋಗುತ್ತಿದ್ದವು. ಇದರಿಂದ ಕಿರಿಕಿರಿಯಾದರೂ ತೋರಿಸಿಕೊಳ್ಳದ ಆ ಮೇಯರ್ ತನ್ನ ಭಾವಚಿತ್ರವನ್ನು ಅಲ್ಲಿಂದ ತೆಗೆಸಿದ. ಆದರೆ ಮರುದಿನ ಮತ್ತೆ ಹಾಜರ್. ಈ ವಿಷಯ ಸ್ಥಳಿಯ ಪತ್ರಿಕೆಗಳಲ್ಲಿ ಪ್ರಕಟ ವಾಯಿತು. ಟಿವಿ ಚಾನೆಲ್‌ಗಳಲ್ಲಿ ಪ್ರಸಾರವಾಯಿತು. ಕೊನೆಗೆ ವಿಧಿ ಇಲ್ಲದೆ ರಸ್ತೆಯನ್ನು ಸರಿ ಮಾಡಿದರಂತೆ ಮೇಯರ್. ನಮ್ಮಲ್ಲೂ ಈ ಪ್ರಯೋಗವೂ ಆಗಿದೆ. ಗುಂಡಿಬಿದ್ದ ರಸ್ತೆಗಳಲ್ಲಿ ಚಿತ್ರ ಬಿಡಿಸಲಾಗಿದೆ. ಭತ್ತದ ಸಸಿ ನಾಟಿ ಮಾಡಲಾಗಿದೆ.
ಆದರೆ ಆಗೆಲ್ಲ ಒಂದಷ್ಟು ತೇಪೆ ಹಚ್ಚುವ ಕಾರ್ಯ ನಡೆಯುತ್ತದೆಯೇ ಹೊರತು ಸಮಸ್ಯೆಗೆ ಸೂಕ್ತ ಮತ್ತು ಸಮಗ್ರ ಪರಿಹಾರ ಕಂಡುಹಿಡಿಯುವ ಗೋಜಿಗೆ ಯಾರೂ ಹೋಗುತ್ತಿಲ್ಲ. ಜನರ ಆಕ್ರೋಶ, ಕೋರ್ಟ್ ಛೀಮಾರಿ, ತಪರಾಕಿ ಎಲ್ಲವೂ ಆದರೂ ಯಾವ ಪರಿಣಾಮವೂ ಆಗುತ್ತಿಲ್ಲ. ಇದಕ್ಕೆ ಕಾರಣ ನಮ್ಮ ರಾಜಕಾರಣಿಗಳು, ಅಧಿಕಾರಿಗಳು ಸೂಕ್ಷ್ಮತೆಯನ್ನು ಕಳೆದುಕೊಂಡಿರುವುದು. ಹಾಗೆಯೇ ಜನರೂ ವಿಶ್ವಾಸ ಕಳೆದುಕೊಂಡಿದ್ದಾರೆ. ಆದರೆ ಇಟಿಗಟ್ಟಿ ಯಂಥ ಪ್ರಕರಣಗಳು ಅಲ್ಲೊಂದು ಇಲ್ಲೊಂದು ನಡೆಯುತ್ತವೆ. ಅದಕ್ಕಾಗಿಯೇ ಅದು ವಿಶೇಷ ಕಾರ್ಯಕ್ರಮ ಎಂದು ಹೇಳಿದ್ದು. ಇದನ್ನು ಎಲ್ಲರೂ ಅನುಸರಿಸಬೇಕು.
ಜಡ್ಡು ಗಟ್ಟಿರುವ ನಮ್ಮ ವ್ಯವಸ್ಥೆಯ ಕೊರಳುಪಟ್ಟಿಯನ್ನು ಹಿಡಿದು ಕೇಳುವಂತಾಗಬೇಕು. ಇಲ್ಲದಿದ್ದರೆ ಈ ಸಮಸ್ಯೆಗಳಿಗೆಪರಿಹಾರ ಮರೀಚಿಕೆಯೇ ಸರಿ.
ನಾಡಿಶಾಸ್ತ್ರಸರಿಯಾಗಿ ಇಲ್ಲದಿದ್ದರೆ ರೋಡುಅಪಘಾತಕ್ಕೆ ಆಗಬೇಕು ಈಡುನೆಟ್ಟಗೆ ರಸ್ತೆ ಮಾಡದಿರೆ ನೋಡುಆದೀತು ಅಪಘಾತಗಳ ಬೀಡು