ವ್ಯಾಲೈಂಟೈನ್ಸ್ ಡೇ ಆಚರಣೆ ನಿಷೇಧಿಸಿ
ಅಭಿವ್ಯಕ್ತಿ
ಪ್ರಮೋದ ಮುತಾಲಿಕ್‌, ರಾಷ್ಟ್ರೀಯ ಅಧ್ಯಕ್ಷರು, ಶ್ರೀರಾಮ ಸೇನಾ
ಪ್ರೇಮಿಗಳ ದಿನ ಎಂಬುದು ಹೇಗೆ ಬಂತು? ಎಲ್ಲಿಂದ ಬಂತು? ಯಾರು ತಂದರು? ಇವು ಮಹತ್ವವಲ್ಲ. ಯಾಕೆ ತಂದರು? ಉದ್ದೇಶ ಏನು ಎಂಬುದು ಮುಖ್ಯ ವಾದದ್ದು. ಉದ್ದೇಶ ಗೊತ್ತಾದಲ್ಲಿ ದೇಶ, ಧರ್ಮ, ಸಂಸ್ಕೃತಿ ಬಗ್ಗೆ ಸ್ವಾಭಿಮಾನ ಇದ್ದವರು ವ್ಯಾಲೈಂಟೈನ್ಸ್ ಡೇ ಆಚರಿಸುವುದಿಲ್ಲ ಎಂಬ ವಿಶ್ವಾಸ ಇದೆ.
‘ಡೇ’ ಆಚರಣೆ ಬಂದದ್ದೆ ವಿದೇಶಿಗಳಿಂದ ಎಂಬುದು ಸತ್ಯವಾಗಿದೆ. ಮೆಕಾಲೆ ಎಂಬ ಬ್ರಿಟೀಷ್ ಅಧಿಕಾರಿ ಅಪ್ಪನಿಗೆ1832ರಲ್ಲಿ ಪತ್ರ ಬರೆದಿದ್ದಾನೆ. ಭಾರತ ಒಂದು ಅತ್ಯುತ್ತಮ ಸಂಸ್ಕಾರ, ಸಂಸ್ಕೃತಿ ಉತ್ತಮ ರೀತಿ ನೀತಿಗಳು ಇರುವ ದೇಶ ಇದು. ಇಲ್ಲಿ ನೀರುವಿ-ಲವಾಗಿದೆ, ಉತ್ತಮ ಯೋಜನೆಗಳಿವೆ, ಶಿಕ್ಷಣದ ಪದ್ಧತಿ (ಗುರುಕುಲ ಶಿಕ್ಷಣ) ಸರ್ವೋತ್ತಮವಾಗಿದೆ, ಕಳ್ಳತನ, ಮೋಸ, ದ್ವೇಷ ರಹಿತ ಸಮನ್ವಯದ ಸಮಾಜ ಭಾರತದಲ್ಲಿದೆ.
ಭಾರತ ಬ್ರಿಟಿಷರ ಆಡಳಿತಕ್ಕೊಳ ಪಡಿಸಬೇಕಾದರೆ ಬಹಳ ಬದಲಾವಣೆ ತರಬೇಕಾಗುತ್ತದೆ. ಬಹಳ ಪರಿಶ್ರಮ ಹಾಕಬೇಕಾಗುತ್ತದೆ ಎಂದು ಪತ್ರದಲ್ಲಿ ದೀರ್ಘವಾಗಿ ಉಲ್ಲೇಖಿಸಿದ್ದಾನೆ. ಬ್ರಿಟೀಷರು ಎಲ್ಲವನ್ನು ಅಂದರೆ ಶಿಕ್ಷಣ, ನೀರು, ಸಮನ್ವಯ, ಕೃಷಿ ಪದ್ಧತಿ,ನ್ಯಾಯ – ನೀತಿ ಇತ್ಯಾದಿ ಎಲ್ಲವನ್ನು ಬದಲಾವಣೆ ಮಾಡಿ ಭಾರತೀಯ ಸಂಸ್ಕೃತಿಯನ್ನು ವಿಕೃತಿಗೊಳಿಸಿದರು.
ಗುಲಾಮಿ ಮಾನಸಿಕತೆಯನ್ನು ಸಮಾಜದಲ್ಲಿ ಬಿತ್ತಿದರು. ಪಾಶ್ಚಾತ್ಯ ಅನುಕರಣೆಯನ್ನು ಶಿಕ್ಷಣ ಪದ್ಧತಿಯಲ್ಲಿ ತೂರಿಸಿದರು. ಸ್ವತಂತ್ರ್ಯ ಬಂದು73ವರ್ಷ ಕಳೆದರೂ ಬ್ರಿಟಿಷರ ಶಿಕ್ಷಣ, ನ್ಯಾಯಾಲಯ, ಕಾನೂನು, ವೇಷ -ಭೂಷಣ, ಕೃಷಿ, ಇತ್ಯಾದಿ ಅದನ್ನೇ ಅನುಸರಿಸಿ ಅಧೋಗತಿಗೆ ಹೋಗುತ್ತಿದ್ದೇವೆ. ವ್ಯಾಲೈಂಟೈನ್ಸ್ ಡೇ, ಫ್ರೆಂಡ್‌ಶಿಪ್ ಡೇ, ರೋಜ್ ಡೇ, ಮದರ್ ಡೇ, ಫಾದರ್ ಡೇ, ಚಿಲ್ಡ್ರನ್ಸ್ ಡೇ ಇತ್ಯಾದಿ ಇವೆಲ್ಲವೂ ನಮ್ಮದಲ್ಲ ಪಾಶ್ಚಾತ್ಯರ ಬಳುವಳಿ.
ಇವೆಲ್ಲವೂ ಯಾಕೆ ಆಚರಣೆ ಅಂದರೆ ಭಾರತೀಯ ಯುವಶಕ್ತಿ ನಿಸ್ತೇಜಗೊಳಿಸಲು, ನಿಷ್ಕ್ರಿಯ ಮಾಡಲು, ದುರ್ಬಲಗೊಳಿಸುವುದು ಇವುಗಳ ಮೂಲ ಉದ್ದೇಶವಾಗಿದೆ. ಭಾರತದ ಹಬ್ಬಗಳು ಸಂಕ್ರಾಂತಿ, ಯುಗಾದಿ, ಹೋಳಿ ಹುಣ್ಣಿಮೆ, ವಿಜಯ ದಶಮಿ, ಇತ್ಯಾದಿ ಗಳುಶಾಸ್ತ್ರೋಕ್ತಹಾಗೂ ವೈಜ್ಞಾನಿಕ ಗಳಾಗಿವೆ. ಜಾತ್ರೆ – ಯಾತ್ರೆ ಉತ್ಸವಗಳು ಎಷ್ಟು ಸಮಂಜಸವಾಗಿವೆ. ಸಮರಸತೆ, ಸಮನ್ವ ಯತೆ, ವೈವಿಧ್ಯತೆ ಕಾಣಬಹುದು.
ಇವೆಲ್ಲ ಆಚರಣೆಗಳಲ್ಲಿ ಆನಂದ, ಪ್ರೀತಿ, ವಿಶ್ವಾಸ, ಉಲ್ಲಾಸ ಇರುತ್ತದೆ. ವ್ಯಾಲೈಂಟೈನ್ಸ್ ಡೇ ಆಚರಣೆಗಳಲ್ಲಿ ಉದ್ವೇಗ, ಉನ್ಮಾದ, ಪ್ರಚೋದನೆ, ಕ್ಷಣಿಕ ಆನಂದ, ಕಾಮ ಇತ್ಯಾದಿಗಳನ್ನು ಕಾಣಬಹುದು. ಇದರಿಂದ ಅನಾರೋಗ್ಯ, ಮಾನಸಿಕ ಕಿರಿಕಿರಿ, ವಿಪರೀತ ವೆಚ್ಚ, ದ್ವೇಷ, ಅಸೂಯೆ, ಸಾಮಾಜಿಕ ಅಶಾಂತಿಗೆ ಕಾರಣ ವಾಗುತ್ತದೆ. ‘ಪ್ರೇಮಿಗಳ ದಿನ’ ಅವೈಜ್ಞಾನಿಕವಾಗಿದ್ದು, ಅಸಂಬದ್ಧ ವಾಗಿದೆ. ಪ್ರೇಮಕ್ಕೆ ನಮ್ಮ ವಿರೋಧ ಇಲ್ಲ. ಪ್ರೀತಿ ಪ್ರೇಮ ಸಹಜವಾದ ಪ್ರಕ್ರಿಯೆಯಾಗಿದೆ.
ಇದಕ್ಕೆ ‘ದಿನ’ ನಿಶ್ಚಯಿಸುವುದಕ್ಕೆ ಮಾತ್ರ ನಮ್ಮ ವಿರೋಧವಿದೆ. ‘ವ್ಯಾಲೈಂಟೈನ್ಸ್ ಡೇ’ ದಿನದ ಹಿಂದೆ ಬಹಳ ಕಾಣದ ಕೈಗಳು ಕೆಲಸ ಮಾಡುತ್ತವೆ. ಉದಾಹರಣೆಗೆ ಬಹುರಾಷ್ಟ್ರೀಯ ವ್ಯಾಪಾರ ಕೇಂದ್ರಗಳು ಪ್ರೇಮಿಗಳ ದಿನದ ಹಿಂದೆ ಸಂಪೂರ್ಣ ಪಾತ್ರಧಾರಿ ಗಳಾಗಿವೆ. ನಾನು ಮೊದಲೇ ಹೇಳಿದ ಹಾಗೆ ಇಲ್ಲಿಯ ಯುವಕ ಯುವತಿಯರನ್ನು ದುರ್ಬಲಗೊಳಿಸುವುದಕ್ಕಾಗಿ ಡ್ರಗ್ ಮಾಫಿಯಾ, ಸೆಕ್ಸ್ ಮಾಫಿಯಾ, ವೈನ್ ಮಾಫಿಯಾ, ಗಿಫ್ಟ್ ಮಾಫಿಯಾ, ಹೋಟೆಲ್ ಮಾಫಿಯಾ ಇತ್ಯಾದಿಗಳು ಪ್ರೇಮಿಗಳ ದಿನದ15ದಿನ ಮುಂಚೆಯೇ ಚುರುಕಾಗಿ ಕಾರ್ಯದಲ್ಲಿ ಇಳಿಯುತ್ತವೆ.
ಎಲ್ಲ ವಾಹಿನಿಗಳಲ್ಲಿ ವ್ಯಾಲೈಂಟೈನ್ಸ್ ಡೇ ಜಾಹಿರಾತುಗಳಿಂದ ನೆನಪಿಸಲಾಗುತ್ತದೆ, ಪ್ರೋತ್ಸಾಹಿಸಲಾಗುತ್ತದೆ. ಯುವಕ – ಯುವತಿ ಯರಿಗೆ ಆಫರ್‌ಗಳ ಸುರಿಮಳೆ ಗಯ್ಯುತ್ತವೆ. ಪ್ರೇಮಿಗಳ ದಿನ ಬೇಕಾಗುವ ಎಲ್ಲ ವಸ್ತುಗಳ ಹೋಟೆಲ್‌ಗಳ ಬೆಲೆ ಏರಿಸಲಾಗುತ್ತದೆ. ನಮ್ಮ ಹುಚ್ಚು ಮನಸ್ಸಿನ, ವಿಕೃತ ಮನಸ್ಸಿನ ಯುವಕರು – ಯುವತಿಯರು ಅವುಗಳ ಬೆಲೆ ಎಷ್ಟೇ ಹೆಚ್ಚಿದರೂ ಖರೀದಿಸಿ ಪರಸ್ಪರ ವಿನಿಮಯ ಮಾಡಿಕೊಳ್ಳುತ್ತಾರೆ. ತಂದೆ – ತಾಯಿಗೆ ಪೀಡಿಸುತ್ತಾರೆ.
ಬೇರೆ ಬೇರೆ ನೆಪ ಹೇಳಿ ಹಣ ಸಂಗ್ರಹಿಸುತ್ತಾರೆ. ಕೆಲವರು ಕಳ್ಳತನಕ್ಕೂ ಇಳಿಯುತ್ತಾರೆ. ಒಟ್ಟಿಗೆ ವರ್ಷಕ್ಕೊಮ್ಮೆ ಆಚರಿಸುವ ಪ್ರೇಮ ದಿನ ಮಜಾ ಉಡಾಯಿಸಬೇಕು. ಬೆಂಗಳೂರಿನಂಥ ಬೃಹತ್ ಪಟ್ಟಣಗಳಿಂದ ಈಗ ಈ ಸಂಸ್ಕೃತಿ ತಾಲೂಕು ಹಾಗೂ ದೊಡ್ಡ ದೊಡ್ಡ ಹಳ್ಳಿಗಳಿಗೂ ಪಸರಿಸುತ್ತಾ ಇದೆ. ಶೃಂಗೇರಿ ಶಾರದಾಂಬೆ ದರ್ಶನ ಮಾಡಿಕೊಂಡು ಒಬ್ಬರು ಹಿತೈಷಿಗಳ ಮನೆಗೆ ಭೇಟಿ ಕೊಟ್ಟಿದ್ದೆ. ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ತಂದೆ ತಾಯಿಗೆ – ಗೆಳತಿಯರು ಹೇಳಿದ್ದನ್ನು ತಿಳಿಸಿದಳು.
ನಿನಗೆ ಬಾಯ್ ಫ್ರೆಂಡ್‌ ಇಲ್ಲವಾ? ನಮ್ಮ ಜತೆಗೆ ಬರಬೇಡ. ವ್ಯಾಲೈಂಟೈನ್ಸ್ ಡೇ ಆಚರಿಸಲು ನಿನಗೆ ಹಕ್ಕಿಲ್ಲ. ಹಾಗಾಗಿ ನಿನ್ನ ಸ್ನೇಹನಮಗೆ ಬೇಡ ಅಂತಾ ಹೇಳಿದ್ದಾರೆ. ಬೆಂಗಳೂರಲ್ಲಿ ವೈನ್ ಹಾಗೂ ಹೋಟೆಲ್ ಮಾಫಿಯಾದ ಉದಾಹರಣೆ ತಿಳಿಸುತ್ತೇನೆ ಕೇಳಿ. ಆಘಾತ ಮತ್ತು ಆಶ್ಚರ್ಯ ಆಗಬಹುದು. ಪಾಲಕರು, ಶಿಕ್ಷಣ ಮಂಡಳಿಯವರು, ಸಮಾಜ ಚಿಂತಕರು ಇದನ್ನು ತಿಳಿದುಕೊಳ್ಳ ಬೇಕು. ಬೆಂಗಳೂರಿನ ಎಲ್ಲ ಪಬ್‌ಗಳಲ್ಲಿ18ರಿಂದ30ವಯಸ್ಸಿನ ಹುಡುಗಿಯರಿಗೆ (ಮಾತ್ರ) ಉಚಿತ ವೈನ್ ಕೊಡಲಾಗುತ್ತದೆ. ವಾರದ ಏಳುದಿನ ಉಚಿತ.
ಅಷ್ಟೇ ಅಲ್ಲ, ಬೇಕಾದಷ್ಟು ಮತ್ತು ಬೇಕಾದ ಬ್ರ್ಯಾಂಡ್ ವೈನ್‌ಗಳನ್ನು ಕುಡಿಯಬಹುದು. ಇದೆಲ್ಲ ಹುಡುಗಿಯರಿಗೆ ಮಾತ್ರಕರುವನ್ನು ಕರೆದುಕೊಂಡು ಬಂದಲ್ಲಿ ಹಸು ತಾನಾಗಿಯೇ ಬರುತ್ತದೆ. ಹಾಗೆಯೇ ಹುಡುಗಿಯರಿಗೆ ಉಚಿತ ಎಂದು ಆಕರ್ಷಣೆ ಮಾಡಿದರೆ, ಹುಚ್ಚು ವಿಕೃತ ಮಾನಸಿಕ ಯುವಕರು ತಾನಾಗಿಯೇ ಹುಡುಗಿಯರ ಹಿಂದೆ ಪಬ್ ಪ್ರವೇಶಿಸುತ್ತಾರೆ. ಹೇಗಿದೆ ಆಫರ್! ಫ್ರೀ ವೈನ್ ಚಟ ಒಮ್ಮೆ ಅಂಟಿಕೊಂಡಲ್ಲಿ ಮುಂದಿನ ದುಷ್ಪರಿಣಾಮಗಳ ಕಲ್ಪನೆ ಮಾಡಿಕೊಳ್ಳಿರಿ.
ಬೆಂಗಳೂರು ಪ್ರವಾಸದಲ್ಲಿದ್ದಾಗ ಒಂದು ಮಧ್ಯಮ ವರ್ಗದ ಮನೆಗೆ ಹೋಗಿದ್ದೆ. ಇಬ್ಬರು ಹೆಣ್ಣುಮಕ್ಕಳು. ಒಬ್ಬಳು9ನೇ ತರಗತಿ, ಇನ್ನೊಬ್ಬಳು ಪಿಯುಸಿ ಓದುತ್ತಿದ್ದಾಳೆ. ಪಿಯುಸಿ ಓದುವ ಹುಡುಗಿಯ ಬ್ಯಾಗಿನಲ್ಲಿ ಸಿಗರೇಟ್ ಪ್ಯಾಕೆಟ್, ಡ್ರಗ್ ಪೌಡರ್, ಚಿಕ್ಕ ವೈನ್ ಬಾಟಲ್ ಸಿಕ್ಕಿತು. ಮಗಳಿಗೆ ಏನು ಹೇಳಿದರೂ ಕೇಳುತ್ತಿಲ್ಲ. ಹಿರಿಯರಿಂದ ಹೇಳಿಸಿ ಆಯ್ತು, ಪೂಜೆ ಮಾಡಿಸಿ ಆಯ್ತು ಏನೂ ಪ್ರಯೋಜನ ಆಗಲಿಲ್ಲ ಎಂದು ತಂದೆ ತಾಯಿ ಅಳುತ್ತಾ ಹೇಳಿದರು. ಇದು ಒಂದು ಮನೆಯ ಕಥೆ ಅಲ್ಲ, ಇಂಥ ಸಾವಿರಾರು ಮನೆಯ ವ್ಯಥೆಯಾಗಿದೆ.
ಇನ್ನು ಪ್ರೇಮಿಗಳ ದಿನದ ನಿಮಿತ್ತ ಬೇರೆ ಬೇರೆ ಆಫರ್‌ಗಳ ಮೂಲಕ ಯುವಕ/ ಯುವತಿ ಯರನ್ನು ಹಾಳು ಮಾಡುವ ದಿನ ನಮ್ಮ ಸಂಸ್ಕೃತಿಗೆ ಶೋಭೆ ತರುವುದೇ? ನಾವು ಹಿಂದು ಸಂಘಟನೆ ಮೂಲಕ ಸಾಕಷ್ಟು ಹೋರಾಟ ಮಾಡಿ, ಜಾಗೃತಿ ಮೂಡಿಸಿ ಇಡಿ ರಾಜ್ಯದ ಕಾಲೇಜುಗಳಲ್ಲಿ ಆಚರಣೆ ಆಗದಿರುವ ಹಾಗೆ ಮಾಡಿದ್ದೇವೆ. ನಮ್ಮ ಪ್ರಯತ್ನದಿಂದ25ಪ್ರತಿಶತ ತಡೆದಿದ್ದೇವೆ. ನಮ್ಮಪ್ರಯತ್ನಕ್ಕೆ ವ್ಯಾಲೈಂಟೈನ್ಸ್ ಡೇ ಪರವಾಗಿರುವ ಭೂತಾಕಾರವಾಗಿ ಬೆಳೆಯುತ್ತಿರುವ ಮಾಫಿಯಾಗಳು ನಮ್ಮನ್ನು ತಡೆಯುತ್ತವೆ. ಹೆದರಿಸುತ್ತಾರೆ. ಶಾರೀರಿಕ ಹಲ್ಲೆ ಕೂಡ ಮಾಡಿದ್ದಾರೆ. ಮುಂದೆಯೂ ಮಾಡುತ್ತಾರೆ.
2010ರಲ್ಲಿ ಬೆಂಗಳೂರಿನಲ್ಲಿ ‘ಪ್ರೇಮಿಗಳ ದಿನ’ದ ಬಗ್ಗೆ ಒಂದು ವಾಹಿನಿಯಲ್ಲಿ ಚರ್ಚೆ ಮಾಡುತ್ತಿರುವ ಸಮಯದಲ್ಲಿ ನನ್ನ ಮುಖಕ್ಕೆ ಮಸಿ ಬಳಿದು ಅವಮಾನ ಮಾಡಲಾಗಿತ್ತು. ಈ ರೀತಿ ಸಾಕಷ್ಟು ಅವಮಾನ, ಹಲ್ಲೆ, ಪೊಲೀಸ್ ಕೇಸ್‌ಗಳನ್ನು ಎದುರಿಸಿ ಯೂ ನಾವು ಜಾಗೃತಿ ಮೂಡಿಸುವುದು ಹಾಗೂ ಈ ಮಾಫಿಯಾಗಳನ್ನು ತಡೆಯುವ ಕಾರ್ಯ ನಡೆಯುತ್ತಲೇ ಇದೆ. ನನಗೆಬೆಂಗಳೂರಿನ ಎಂಬತ್ತೇರಡು ಕಾಲೇಜಿನ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿಯವರು, ಧನ್ಯವಾದ ಹಾಗೂ ಅಭಿನಂದನೆ ಪತ್ರಗಳನ್ನು ಕಳುಹಿಸಿದ್ದಾರೆ, ‘ವ್ಯಾಲೈಂಟೈನ್ಸ್ ಡೇ’ ಆಚರಣೆ ಕಾಲೇಜಿನ ಕ್ಯಾಂಪಸ್‌ನಲ್ಲಿ ತಡೆಯಲು ಆಗುತ್ತಿರಲಿಲ್ಲ. ಶ್ರೀರಾಮ ಸೇನೆ ಹೆಸರಿನಲ್ಲಿ ನೋಟೀಸ್ ಬೋರ್ಡಿಗೆ ‘ಪ್ರೇಮಿಗಳ ದಿನ’ದ ವಿರೋಧ ಪತ್ರ ಅಂಟಿಸಿದ್ದರಿಂದ ನಮಗೆ ಅನುಕೂಲ ವಾಗಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಕ್ಯಾಂಪಸ್‌ನಲ್ಲಿ ಆಚರಣೆ ನಿಂತಿದೆ.
‘ವ್ಯಾಲೈಂಟೈನ್ಸ್ ಡೇ’ ನಿಮಿತ್ತ15ದಿನದಿಂದ ಮೊದಲು ಇದರ ದುಷ್ಪರಿಣಾಮ ಪ್ರಾರಂಭ ವಾಗಿರುತ್ತದೆ. ಹೋಟೆಲ್ ಟೇಬಲ್ ಬುಕ್ಕಿಂಗ್, ಹುಡುಗಿಯರ ಬುಕ್ಕಿಂಗ್, ಲಾಡ್ಜ್‌ಗಳಲ್ಲಿ ರೂಂ ಬುಕ್ಕಿಂಗ್, ಪಾರ್ಕ್‌ಗಳು, ಪ್ರವಾಸಿ ಕೇಂದ್ರಗಳ ಬುಕ್ಕಿಂಗ್, ಇನ್ನು ಏನೇನೊ ನಡೆಯತ್ತದೆ. ವ್ಯಾಲೈಂಟೈನ್ಸ್ ಡೇ ಹೆಸರಿನಲ್ಲಿ ಮಾಫಿಯಾ ಗಳಂತೂ ಕೋಟಿಗಟ್ಟಲೇ ಲಾಭ ಗಳಿಸುತ್ತಾರೆ. ವೈನ್ವ್ಯವಹಾರ ಸಾವಿರಾರು ಕೋಟಿ ನಡೆಯುತ್ತದೆ.
ಕಾಂಡೋಮ್ ಮಾರಾಟದ ಏರಿಕೆ ಸಹಿಸಲು ಸಾಧ್ಯವೇ ಇಲ್ಲ, ಇದು ಪ್ರೇಮಿಗಳ ದಿನ! ನಮ್ಮ ಭಾರತೀಯ ಸಂಸ್ಕೃತಿಗೆ ಕಳಂಕ ತರುವುದು ನಮ್ಮ ಯುವಶಕ್ತಿ ಹಾಳಾಗುವ ‘ವ್ಯಾಲೈಂಟೈನ್ಸ್ ಡೇ’ ಬೇಡ ಇದನ್ನು ವಿರೋಧಿಸಿರಿ ಪಾಲಕರು, ಸಮಾಜದ ಹಿತಚಿಂತಕರು, ಸರಕಾರವು ಕೂಡಾ ಇದನ್ನು ಗಂಭೀರವಾಗಿ ಚಿಂತಿಸಿ ನಿಷೇಧಿಸಬೇಕು. ‘ವ್ಯಾಲೈಂಟೈನ್ಸ್ ಡೇ’ ಹಿಂದೆ – ಮುಂದೆಎಷ್ಟು ರೇಪ್‌ಗಳು, ಅಪಘಾತ (ಕುಡಿದು ವಾಹನ ಚಾಲನ)  ಗಳು, ಕಿಡ್ನಾಪ್‌ಗಳು, ಕೊಲೆಗಳು ನಡೆಯುತ್ತವೆ. ಪ್ರೀತಿ ಎಂಬುದು ಒಂದು ಪವಿತ್ರ ಭಾವನೆ, ಪ್ರೀತಿ ಎಂಬುದು ನಿಸ್ವಾರ್ಥ ಸ್ವಾದ, ಪ್ರೀತಿಗೆ ಜಾತಿ, ಭಾಷೆ, ಮತದ ಲೇಪನ ಇಲ್ಲ.
ಪ್ರೀತಿ ಹುಡುಗ ಹುಡುಗಿಯಲ್ಲಿ ಮಾತ್ರ ಅಲ್ಲ, ತಾಯಿ – ತಂದೆ ಪ್ರೀತಿ, ಸಹೋದರ – ಸಹೋದರಿಯರ ಪ್ರೀತಿ, ಗೆಳೆಯರ ಪ್ರೀತಿ, ಪುಸ್ತಕ ಪ್ರೇಮ, ಪ್ರಾಣಿಗಳ ಪ್ರೀತಿ, ದೇಶ ಪ್ರೇಮ, ಕೃಷಿ ಪ್ರೇಮ, ಇತ್ಯಾದಿ ಇವೆಲ್ಲವುಗಳಲ್ಲಿ, ನಿಸ್ವಾರ್ಥ, ಪವಿತ್ರ ಪ್ರೀತಿ ಇದೆ.‘ವ್ಯಾಲೈಂಟೈನ್ ಡೇ’ ಆಚರಣೆಯಲ್ಲಿ ಸ್ವಾರ್ಥ, ಕಾಮ, ಉದ್ವೇಗ, ಉನ್ಮಾದ ತುಂಬಿದೆ. ನಿತ್ಯ ಪವಿತ್ರ, ನಿಸ್ವಾರ್ಥ ಪ್ರೀತಿಗೆ ಅವಕಾಶ ಕೊಡಿ.
ಅದರ ಆನಂದವೇ ಚಿರವಾದದ್ದು, ಕಳೆದ10ವರ್ಷಗಳಿಂದ ‘ವ್ಯಾಲೈಂಟೈನ್ಸ್ ಡೇ’ ಬೇಡ: ಮಾತಾ – ಪಿತಾ ಪೂಜನ ಬೇಕು ಎಂದುಆಚರಿಸುತ್ತಿದ್ದೇವೆ. ರಾಜ್ಯದಲ್ಲಿ ನೂರಕ್ಕೂ ಹೆಚ್ಚು ಕಡೆಗೆ ತಂದೆ – ತಾಯಿ ಪಾದ ಪೂಜೆ ಮಾಡುತ್ತೇವೆ. ಯುವಕ – ಯುವತಿಯರು ನಿಸ್ತೇಜ, ನಿಷ್ಕ್ರಿಯರಾಗುವ ಮುನ್ನ ಎಚ್ಚರಗೊಳ್ಳೋಣ. ನಮ್ಮ ಹಿಂದೂ ಸಂಸ್ಕೃತಿ ಉಳಿಸೋಣ, ದೇಶ ಸುಭದ್ರಗೊಳಿಸೋಣ ಎಂಬುದೇ ನಮ್ಮ ಕಳಕಳಿಯ ಪ್ರಾರ್ಥನೆ.