ಇಲ್ಲದ ಗುಜರಿ ನೀತಿ – ಸಹಜ ಉಸಿರಾಟಕ್ಕೇ ಫಜೀತಿ
ಪ್ರಸ್ತುತ
ಗುರುರಾಜ ಎಸ್‌.ದಾವಣಗೆರೆ
ಏರುತ್ತಿರುವ ವಾಯುಮಾಲಿನ್ಯ ತಡೆಯುವ ವಿಚಾರ ಬಂದಾಗಲೆಲ್ಲ ರಸ್ತೆಗಳಲ್ಲಿ ಸಂಚರಿಸುತ್ತ ದಟ್ಟ ಹೊಗೆಯುಗುಳುವಅವಧಿ ಮೀರಿದ ವಾಹನಗಳ ಸಂಚಾರವನ್ನು ನಿಷೇಧಿಸುವ ವಿಷಯವೂ ಪ್ರಸ್ತಾಪವಾಗುತ್ತದೆ.
ಆದರೆ ಅವುಗಳ ಓಡಾಟವನ್ನು ತಡೆಯುವ ಕೇಂದ್ರ ಹಾಗೂ ರಾಜ್ಯ ಸರಕಾರಗಳ ಸ್ಪಷ್ಟ ನೀತಿ ನಿರ್ದೇಶನ ಇಲ್ಲದ್ದರಿಂದ ಅವಧಿ ಮೀರಿದ ಲಕ್ಷ ಲಕ್ಷ ಮುದಿ ವಾಹನಗಳು ಮಾಲಿನ್ಯ ಹಬ್ಬಿಸುತ್ತಲೇ ಇವೆ. ಜನರ ಆರೋಗ್ಯ ಕೆಡಿಸುತ್ತಲೇ ಇವೆ. ಗುಜರಿ ಯೋಗ್ಯ ವಾಹನಗಳ ಜತೆ ಹೊಸದಾಗಿ ರಸ್ತೆಗಿಳಿಯುತ್ತಿರುವ ಲಕ್ಷಗಟಗ್ಟಲೆ ವಾಹನಗಳು ಮಾಲಿನ್ಯವನ್ನು ಮತ್ತಷ್ಟು ಹೆಚ್ಚಿಸಲಿವೆ.
೨೦೧೬ರಿಂದಲೂ ‘ಗುಜರಿ ನೀತಿ’ ರೂಪಿಸಲು ಹೆಣಗುತ್ತಿರುವ ಕೇಂದ್ರ ಸರಕಾರ ಹಳೆಯ ವಾಹನಗಳ ಸಂಚಾರ ನಿಷೇಧ ಮತ್ತು ಅವುಗಳಿಂದ ಹೊಮ್ಮುವ ಮರು ಬಳಕೆ ಮಾಡಬಹುದಾದ ಲೋಹ, ಬೋಲ್ಟ್, ನಟ್ಟು ಮತ್ತಿತರ ವಸ್ತುಗಳನ್ನು ಹೇಗೆ ವಿಲೇವಾರಿ ಮಾಡಬೇಕು ಎಂಬ ಬಗ್ಗೆ ಖಚಿತ ವಿಧಿ ವಿಧಾನ ರೂಪಿಸುವುದರಲ್ಲೇ ಇದೆ. ಸರಕಾರದ ನಿಧಾನ ಗತಿಯ ಲಾಭ ಪಡೆದು ಕೊಳ್ಳುತ್ತಿರುವ ಲಾರಿ ಮಾಲೀಕರು ಎಗ್ಗಿಲ್ಲದೆ ವಾತಾವರಣಕ್ಕೆ ಇಂಗಾಲದ ವಿಷ ತುಂಬುತ್ತಿದ್ದಾರೆ.
ಹೊಸ ಮೋಟಾರು ವಾಹನ ಕಾಯಿದೆ ಕರಡು ನಿಯಮದಂತೆ ಹೊಸದಾಗಿ ರಸ್ತೆಗಿಳಿಯುತ್ತಿರುವ ವಾಹನಗಳು ಭಾರತ್ ಸ್ಟೇಜ್ –೬ಪ್ರಮಾಣ ಹೊಂದಿರಲೇಬೇಕು. ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಜರ್ಮನಿಯ ‘ಗಿಜ್’ ಸಂಸ್ಥೆ ಜಂಟಿಯಾಗಿ ದೇಶದ ಆರು ಪ್ರಮುಖ ನಗರಗಳಲ್ಲಿ೨೦೧೬ರಲ್ಲಿ ನಡೆಸಿದ ಸಮೀಕ್ಷೆಯಂತೆ ಶೇ೧೩ಲಾರಿ, ಶೇ೮ಬಸ್, ಶೇ೫ತ್ರಿಚಕ್ರ ವಾಹನ ಗಳು, ಶೇ೩ರಷ್ಟು ಕಾರ್ ಮತ್ತು ಶೇ೭ರಷ್ಟು ದ್ವಿಚಕ್ರ ವಾಹನಗಳು ಸೇರಿ ನಮ್ಮಲ್ಲಿ೮೭ಲಕ್ಷ ಗುಜರಿ ವಾಹನಗಳಿದ್ದವು.
ಅಂದಾಜು ಲೆಕ್ಕಾಚಾರದಂತೆ ಇನ್ನೆ ದು ವರ್ಷಗಳಲ್ಲಿ ಅವಧಿ ಮೀರಿ ಸಂಚರಿಸುವ ವಾಹನಗಳ ಸಂಖ್ಯೆ೨ಕೋಟಿ ಮೀರಲಿದೆ. ಸರಕಾರದ ನ್ಯಾಶನಲ್ ಕ್ಲೀನ್ ಏರ್ ಪ್ರೋಗ್ರಾಂನಂತೆ೨೦ವರ್ಷ ಹಳೆಯ ವಾಹನಗಳನ್ನು ಗುಜರಿಗೆ ಹಾಕಬೇಕೆಂದು ನಿಯಮವಿದೆಯಾದರೂ ಸದ್ಯಕ್ಕೆ ಅಂಥ ವಾಹನಗಳ ಸಂಖ್ಯೆ ಎಷ್ಟಿದೆ ಎಂಬ ನಿಖರ ಲೆಕ್ಕಾಚಾರ ಸರಕಾರದ ಬಳಿ ಇಲ್ಲ. ಮಾರಾಟ ಮತ್ತು ನೋಂದಣಿಯಾಗುವ ವಾಹನಗಳು ಕಾಲಕ್ರಮೇಣ ಹಲವು ಕೈ ಬದಲಾಗುವುದರಿಂದ ಅದರ ಖಚಿತ ದತ್ತಾಂಶವೂ ಇಲ್ಲ. ರಸ್ತೆಗಿಳಿಯುವ ವಾಹನ೨೦ವರ್ಷಗಳವರೆಗೆ ಮಾತ್ರ ಓಡಬಹುದು ಎಂದಾದರೆ೨೦೧೮ರ ವೇಳೆಗೆ ದೇಶದ ಶೇ೩೧ರಷ್ಟು ವಾಹನಗಳು ಗುಜರಿಗೆ ಸೇರಬೇಕಿತ್ತು.
ವಯಸ್ಸಾದರೂ ಓಡುತ್ತಿರುವ ವಾಹನಗಳಲ್ಲದೆ ಸುಮಾರು೪೦ಲಕ್ಷ ವಾಹನಗಳು ರಸ್ತೆಯ ಅಕ್ಕ ಪಕ್ಕ, ಪೊಲೀಸು ಠಾಣೆಗಳ ಮುಂದೆ, ಊರ ಹೊರಗೆ, ಗ್ಯಾರೇಜುಗಳಲ್ಲಿ ತುಕ್ಕು ಹಿಡಿಯುತ್ತ ನಿಂತಿವೆ. ಅವು ಉಂಟು ಮಾಡುವ ನೀರು, ಮಣ್ಣು, ಗಾಳಿಯ ಮಾಲಿನ್ಯ ಹೊಸ ವಾಹನಗಳಿಗಿಂತ ಶೇ೭೦ಕ್ಕಿಂತ ಜಾಸ್ತಿ. ಭಾರತ್ ಸ್ಟೇಜ್೧ಪ್ರಮಾಣಪತ್ರ ಹೊಂದಿರುವ ಬೃಹತ್ ಡೀಸೆಲ್ ವಾಹನಗಳು ಬಿಎಸ್-೬ಶ್ರೇಣಿಯ ವಾಹನಗಳಿಗಿಂತ೩೬ಪಟ್ಟು ಹೆಚ್ಚಿನ ಮಾಲಿನ್ಯಕಣಗಳನ್ನು ಹೊಮ್ಮಿಸುತ್ತಿವೆ.
ಇದರಲ್ಲಿ೨೦೦೦ಇಸವಿಗೆ ಮುಂಚೆ ತಯಾರಾದ ಸರಕು ಸಾಗಣೆ ವಾಹನಗಳ ಪ್ರಮಾಣ ಶೇ೧೫ರಷ್ಟಿದ್ದು ಇವು ಉಂಟು ಮಾಡುವ ಮಾಲಿನ್ಯ ಹೊಸ ವಾಹನದ ಮಾಲಿನ್ಯಕ್ಕಿಂತ೨೫ರಿಂದ೩೦ಪಟ್ಟು ಹೆಚ್ಚು ಎಂಬುದು ಕೇಂದ್ರ ಸರಕಾರದ ರಸ್ತೆ ಸಂಚಾರ ಮತ್ತು ಹೆದ್ದಾರಿ ಸಚಿವಾಲಯದ ವರದಿಯಲ್ಲೇ ಇದೆ. ಅಮೆರಿಕದ ಸಮಾಜ ಸೇವಾ ಸಂಸ್ಥೆ ಮತ್ತು ಮುಂಬೈ ಐಐಟಿ೨೦೧೩ರಲ್ಲಿ ನಡೆಸಿದ ಅಧ್ಯಯನದಂತೆ ೨೦೦೫ಕ್ಕಿಂತ ಹಿಂದೆ ತಯಾರಾದ ವಾಹನಗಳು ಒಟ್ಟು ಮಾಲಿನ್ಯದ ಶೇ೭೦ರಷ್ಟಕ್ಕೆ ಕಾರಣವಾಗಿದ್ದವು.
ಆಟೊಮೋಟಿವ್ ಇಂಡಸ್ಟ್ರಿಯಲ್ ಸ್ಟಾಂಡರ‍್ಡ್ () –೧೨೯ರ ಪ್ರಕಾರ ವಾಹನ ತಯಾರಿಕೆಗೆ ಬಳಕೆಯಾಗುವ ಬಹುತೇಕವಸ್ತುಗಳು ರೀ ಸೈಕಲ್ ಆಗುವಂತಿರಬೇಕು, ವಾಹನ ಮುದಿಯಾಗಿ ಇನ್ನೇನು ಗುಜರಿಯಾಗುತ್ತದೆ ಎನ್ನುವಾಗ ಅದರ ಶೇ೮೫ಭಾಗ ಪುನರ್ಬಳಕೆಗೆ ಯೋಗ್ಯವಾಗಿರಬೇಕು ಮತ್ತು ಸೀಸ, ಪಾದರಸ, ಕ್ಯಾಡ್ಮಿಯಂ, ಕ್ರೋಮಿಯಂನಂಥ ಭಾರದ ಲೋಹ ಗಳಬಳಕೆ ಇರಕೂಡದು, ಬಳಸಿದ ಪ್ಲಾಸ್ಟಿಕ್‌ನ ಗ್ರೇಡ್ ನಮೂದಾಗಲೇಬೇಕು ಎಂಬ ನಿಯಮವಿದೆ.
ಉತ್ಪಾದಕರೇ ಗುಜರಿ ವಿಲೇವಾರಿ ಮಾಡಬೇಕೆಂಬ ಎಕ್ಸ್ಟೆಂಡೆಡ್ ಪ್ರೊಡ್ಯೂಸರ್ ರೆಸ್ವಾನ್ಸಿಬಿಲಿಟಿ (ಇಪಿಆರ್) ನಿಯಮವನ್ನು ನಮ್ಮಲ್ಲಿ ಅನ್ವಹಿಸು ವುದು ಕಷ್ಟ ಎಂದು () –೧೨೯ರಿಂದ ಅದನ್ನು ಹೊರಗಿಟ್ಟು ಸರಕುಸಾಗಣೆ ವಾಹನಗಳಿಗೆ ಅನ್ವಯಿಸ ದಿರುವುದು ಮಾಲಿನ್ಯ ನಿಯಂತ್ರಣಕ್ಕೆ ದೊಡ್ಡ ಅಡ್ಡಿಯಾಗಲಿದೆ.
ಮಾಲಿನ್ಯ ನಿಯಂತ್ರಿಸಲು ಕೋಲ್ಕತ್ತ, ದೆಹಲಿ, ಮುಂಬೈಗಳಲ್ಲಿ ವಾಣಿಜ್ಯ ವಾಹನಗಳ ವಯೋಮಿತಿಯನ್ನು೧೫ವರ್ಷಗಳಿಗೆ ನಿಗದಿ ಮಾಡಲಾಗಿದೆ. ಕರ್ನಾಟಕ, ಮಹಾರಾಷ್ಟ್ರಗಳಲ್ಲಿ ಹೆಚ್ಚಿನ ಗ್ರೀನ್ ಟ್ಯಾಕ್ಸ್ ವಿಧಿಸಲಾಗುತ್ತಿದೆ. ಗುಜರಿಯನ್ನು ಹೊಸದಕ್ಕೆ ಬದಲಾಯಿಸುವಾಗ ಉತ್ತಮ ಬೆಲೆ ನೀಡಿ, ಎಲೆಕ್ಟ್ರಿಕ್ ವಾಹನಗಳಿಗೆ ಹೆಚ್ಚಿನ ಸಬ್ಸಿಡಿ ನೀಡಿ ಮಾರಾಟವನ್ನು ವೃದ್ಧಿಸಿ, ಓಡಾಟ ಹೆಚ್ಚಿಸಿದಲ್ಲಿ ಮಾಲಿನ್ಯ ನಿಯಂತ್ರಿಸಬಹುದು.