ಯಡತೊರೆ ಮಠದಲ್ಲಿ ಶಿಷ್ಯ ಸ್ವೀಕಾರ
ತನ್ನಿಮಿತ್ತ
ನಂ.ಶ್ರೀಕಂಠ ಕುಮಾರ್‌
ಜಗದ್ಗುರು ಶ್ರೀಶಂಕರ ಭಗವತ್ಪಾದರು ಉಪನಿಷದ್ ಪ್ರತಿಪಾದ್ಯವಾದ ಅದ್ವೆತ ಸಿದ್ಧಾಂತದ ತಳಹದಿಯ ಮೇಲೆ ಸನಾತನ ಧರ್ಮ ವನ್ನು ಪುನಃ ಪ್ರತಿಷ್ಠಾಪನೆಯನ್ನು ಮಾಡಿ, ಅದರ ಸಂರಕ್ಷಣೆಗಾಗಿ ಭರತ ಖಂಡದ ನಾಲ್ಕು ದಿಕ್ಕುಗಳಲ್ಲಿ ಆಮ್ನಾಯ ಪೀಠಗಳನ್ನು ಸ್ಥಾಪಿಸಿದರು. ಆ ಪೀಠಗಳಲ್ಲಿ ದಕ್ಷಿಣಾಮ್ನಾಯ ಶೃಂಗೇರಿ ಶ್ರೀಶಾರದಾ ಪೀಠವು ಅಚ್ಛಿನ್ನ ಗುರು ಪರಂಪರೆಯಿಂದ ಕಂಗೊಳಿಸು ತ್ತಿದೆ. ಕಾಲಕ್ರಮೇಣದಲ್ಲಿ ಶೃಂಗೇರಿ ಶ್ರೀಶಾರದಾ ಪೀಠಾಧೀಶ್ವರರ ಆಶೀರ್ವಾದದಿಂದ ದಕ್ಷಿಣ ಭಾರತದಲ್ಲಿ ಅದ್ವೆತ ಪರಂಪರೆಯ ಅನೇಕ ಮಠಗಳು ಎಲ್ಲೆಡೆ ಸ್ಥಾಪಿತ ವಾದವು.
ಅಂತಹ ಮಠಗಳಲ್ಲಿ ಒಂದಾದ ಸುಮಾರು ಎಂಟು ನೂರು ವರ್ಷಗಳ ಹಿಂದೆ ಪರಮ ತಪಸ್ವಿಗಳೂ, ಯೋಗಿಗಳೂ ಆದ ಶ್ರೀಯೋಗಾನಂದೇಶ್ವರ ಸರಸ್ವತೀ ಮಹಾಸ್ವಾಮಿಗಳು ಮೈಸೂರು ಜಿಲ್ಲೆಯ ಕೃಷ್ಣರಾಜ ನಗರದಲ್ಲಿನ ಪವಿತ್ರ ಕಾವೇರಿ ನದಿತೀರದ ಯಡತೊರೆ ಎಂಬಲ್ಲಿ ಮಠವೊಂದನ್ನು ವೈದಿಕ ಧರ್ಮಾನುಷ್ಠಾನವಾಗಿ ಸ್ಥಾಪಿಸಿದರು.
ಶ್ರೀ ಮಠದಲ್ಲಿ ಗುರು ಪರಂಪರೆಯು ನಿರಂತರವಾಗಿ ಮುಂದುವರೆಯಬೇಕೆನ್ನುವ ಉದ್ದೇಶದಿಂದ ಪರಮ ಪೂಜ್ಯ ಶ್ರೀ ಶಂಕರ ಭಾರತೀ ಮಹಾಸ್ವಾಮಿಗಳವರು ಉತ್ತರಾಽಕಾರಿ ಶಿಷ್ಯರನ್ನು ಸ್ವೀಕರಿಸಲು ಸಂಕಲ್ಪಿಸಿದ್ದಾರೆ. ಶ್ರೀಮತಿ ಗಾಯತ್ರೀ ಮತ್ತು ಶ್ರೀಸತ್ಯನಾರಾಯಣ ಶಾಸಿರವರ ಎರಡನೇ ಸುಪುತ್ರರಾದ ಬ್ರಹ್ಮಚಾರಿ ಭಾಸ್ಕರ ಶರ್ಮಾರವರು ಗುರು ಕೃಪೆಗೆ ಪಾತ್ರರಾಗಿದ್ದು, ಇವರಿಗೆ ಸನ್ಯಾಸ ದೀಕ್ಷೆಯನ್ನು ನೀಡಿ ಉತ್ತರಾಧಿಕಾರಿ ಶಿಷ್ಯರನ್ನಾಗಿ ಪರಿಗ್ರಹಿಸಲು ಸಂಕಲ್ಪಿಸಲಾಗಿದೆ.
ಉತ್ತರಾಧಿಕಾರಿ ಶಿಷ್ಯ ಸ್ವೀಕಾರ ಮಹೋತ್ಸವವು ದಿನಾಂಕ 15.2.2021ಸ್ವಸಿಶ್ರೀ ಶಾರ್ವರಿ ಸಂವತ್ಸರದ ಮಾಘ ಶುಕ್ಲ ಚತುರ್ಥಿ ಸೋಮವಾರ ಬೆಳಗ್ಗೆ ಶ್ರೀ ಜಪ್ಯೇಶ್ವರಾದಿ ಸಮಸ್ತ ದೇವತಾ ದರ್ಶನ, ಗುರು ದೇವತಾ ಪ್ರಾರ್ಥನೆ, ಗಣಪತಿ ಪೂಜೆ, ಪುಣ್ಯಾಹ ವಾಚನ, ಮಾತೃಕಾ ಪೂಜೆ, ನಾಂದೀ ಶ್ರಾದ್ಧಾ, ಕೃಚ್ಛ್ರಾಚರಣೆ, ಅಷ್ಠ ಶ್ರಾದ್ಧಗಳನ್ನು ನೆರವೇರಿಸಲಾಗುವುದು.
ಮಾರನೇ ದಿನ ಉಪವಾಸಾದಿ ಸಂಕಲ್ಪ, ಬ್ರಹ್ಮಾನ್ಪಾದಾನ ಆಚರಣೆ ಹಾಗೂ ದಿನಾಂಕ 17.2.2021ರ ಬುಧವಾರ ಅಂದರೆ ಮಾಘ ಶುಕ್ಲ ಷಷ್ಠಿಯಂದು ಬೆಳಗ್ಗೆ ಪುರುಷ ಸೂಕ್ತ ಹೋಮ, ರಜಾ ಹೋಮ, ನಂತರ ಕಾವೇರಿ ನದಿಯಲ್ಲಿ ಪ್ರೇಷೋಚ್ಛಾರಣ ಪೂರ್ವಕ ಸರ್ವ ಭೂತಾಭಯ ಪ್ರದಾನ ಹಾಗೂ ಮಹಾಸ್ವಾಮಿಗಳವರು ಕಾಷಾಯ ವಸ, ದಂಡ ಕಮಂಡಲು ಅನುಗ್ರಹಿಸಲಿದ್ದಾರೆ.
ಆನಂತರ ಶ್ರೀ ಮಠದಲ್ಲಿ ಪ್ರಣವೋಪದೇಶ, ಮಹಾವಾಕ್ಯೋಪದೇಶ, ಪರ್ಯಂಕ ಶೌಚ, ಯೋಗಪಟ್ಟ ಪ್ರಧಾನ, ಗುರುಪೂಜೆ, ದೇವತಾ ದರ್ಶನ ಶುಭ ಕಾರ್ಯಗಳೊಂದಿಗೆ ಸಂಪನ್ನವಾಗಲಿದೆ. ಪ್ರಸ್ತುತ ಹಳೇ ಮೈಸೂರು ಭಾಗದ ಆಸ್ತಿಕ ಬಂಧುಗಳಿಗೆ ಈ ಕಾರ್ಯಕ್ರಮವು ಮಹತ್ತರವಾದ ಧಾರ್ಮಿಕ ಆಚರಣೆ ಎಂದೇ ಭಾಸಲಾಗಿದೆ. ಶಿಷ್ಯ ಸ್ವೀಕಾರಕ್ಕೆ ಭಾಜನರಾಗುತ್ತಿರುವ ಭಾಸ್ಕರ ಶರ್ಮಾರವರು ಎಂಜಿನಿಯರಿಂಗ್ ಪದವಿ ಹೊಂದಿದ್ದು, ಬಾಲ್ಯದಿಂದಲೂ ಸನಾತನ ಧರ್ಮದಲ್ಲಿ ಆಸಕ್ತಿ ಹೊಂದಿ ಹಾಗೂಅಧ್ಯಯನ ಮಾಡಿ ಪೂಜ್ಯ ಶ್ರೀಗಳವರಲ್ಲಿ ಅಪಾರ ಶ್ರದ್ಧಾಭಕ್ತಿಯನ್ನು ಹೊಂದಿದ್ದರು.
ಅನೇಕ ವರ್ಷಗಳಿಂದ ಶ್ರೀಮಠದ ಧಾರ್ಮಿಕ ಸಂಸ್ಥೆಯಾದ ವೇದಾಂತ ಭಾರತೀ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿ ಕೊಂಡಿದ್ದು, ಇದರೊಂದಿಗೆ ಅಧ್ಯಯನ, ಅನುಷ್ಠಾನಗಳನ್ನು ನಿಷ್ಠೆಯಿಂದ ಆಚರಿಸಿಕೊಂಡು ಬಂದಿದ್ದಾರೆ.