ಮಾನವೌನ್ನತ್ಯದ ಕನಕದಾಸರೇ ಇರಲಿ !
ಪ್ರತಿಕ್ರಿಯೆ
ಹೊರೆಯಾಲ ದೊರೆಸ್ವಾಮಿ
ಇತ್ತೀಚಿಗೆ, ಸಾಹಿತಿ ಅರವಿಂದ ಮಾಲಗತ್ತಿಯವರು ಮೈಸೂರಿನ ಸಮಾರಂಭವೊಂದರಲ್ಲಿ ಮಾತನಾಡುತ್ತಾ ಪ್ರಮುಖಹರಿದಾಸರಲ್ಲೊಬ್ಬರಾದ ಕನಕದಾಸರ ಹೆಸರನ್ನು ಕನಕ ವ್ಯಾಸ ಅಥವಾ ಕನಕರು ಎಂದು ಹೆಸರಿಸಿದರೆ ಸಾಕು.
ದಾಸ ಎಂಬ ಪದ ಬಳಕೆ ಬೇಡ ಎಂದು ಹೇಳಿದ ಮಾತು ಸಾಂದರ್ಭಿಕವಾಗಿರಬಹುದೇ ಹೊರತು ಸಾರ್ವತ್ರಿಕವಾದುದಲ್ಲ, ಸಾರ್ವಕಾಲಿಕವೂ ಅಲ್ಲ ಮತ್ತು ಅಗತ್ಯವಾಗಿಯೂ ತೋರುವುದಿಲ್ಲ. ದಾಸಃ (ದಾಸ) ಎಂಬ ಸಂಸ್ಕೃತ ಪದಕ್ಕೆ ಭೃತ್ಯ, ಸೇವಕ ಎಂಬ ಅರ್ಥವಿರುವುದೇನೋ ನಿಜ. ಅದು ಹೀನಾರ್ಥವಾಗುತ್ತದೆಂಬುದೂ ನಿಜ. ಆದರೆ, ಭಕ್ತಿ ಪ್ರಪಂಚದಲ್ಲಿ ಸಮರ್ಪಣೆ, ಶರಣು, ಪ್ರಪತ್ತಿಮಾರ್ಗ ಇವುಗಳೇ ಪ್ರಧಾನವಾಗಿರುವುದು ಸಹಜವಾಗಿದೆ ಮತ್ತು ಭಾರತೀಯ ಭಕ್ತಿಪಂಥ ಚಳುವಳಿಯಲ್ಲಿ ಈ ಅಂಶಗಳೇ ಪ್ರಧಾನವಾಗಿರುವುದನ್ನು ನಾವು ಸುಲಭವಾಗಿ ಗುರುತಿಸಬಹುದು. ಇದು ಇತಿಹಾಸ.
ಈ ಅರ್ಥದಲ್ಲೇ ಕನಕದಾಸರು ಹರಿದಾಸ ಸಾಹಿತ್ಯದ ಆರಾಧ್ಯ ದೈವವದ ಹರಿಗೆ ದಾಸರಾಗಿದ್ದಾರೆಯೇ ಹೊರತು ಅನ್ಯತ್ರ ಅಲ್ಲ. ಅಂದರೆ, ಅವರು ವೈಷ್ಣವ (ಶ್ರೀವೈಷ್ಣವ) ಸಂಪ್ರದಾಯವನ್ನು ಅನುಸರಿಸುತ್ತಾ ಅದರಲ್ಲೇ ಮೋಕ್ಷವನ್ನು ಕಂಡರಲ್ಲದೆ ಶೈವಸಂಪ್ರದಾಯದಲ್ಲಲ್ಲ. ಈ ಬಗ್ಗೆ ಇನ್ನಷ್ಟು ಸ್ಪಷ್ಟನೆಗಾಗಿ ನಾವು ಅವರ ಕೀರ್ತನೆಗಳನ್ನೇ ಪ್ರಧಾನವಾಗಿ ನೋಡಬೇಕಾಗಿದೆ.
ಪ್ರಸ್ತುತ, (ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ಹರಿದಾಸ ಸಾಹಿತ್ಯ ಭಾಗದಿಂದ ಡಾ. ಟಿ. ಎನ್.ನಾಗರತ್ನ ಅವರು ಸಂಪಾದಿಸಿ, ಪ್ರಕಟಿಸಿರುವ ಶ್ರೀ ಕನಕದಾಸರ ಕೀರ್ತನೆಗಳು ಎಂಬ ಕೃತಿಯನ್ನು ಇಲ್ಲಿ ಪರಿಗಣಿಸಲಾಗಿದೆ) ಕೃತಿಯಲ್ಲಿ ಅಧಿಕೃತವಾಗಿ ಲಭ್ಯವಿರುವ187ಕೀರ್ತನೆಗಳಲ್ಲಿ (ಏಕೈಕ ಆಕರ ಮತ್ತು ಮುಂಡಿಗೆಗಳೂ ಸೇರಿದಂತೆ ಒಟ್ಟು333ರಚನೆಗಳು) ದಾಸರು ತಮ್ಮನ್ನು ಕನಕದಾಸ’ ಎಂದು ಉಲ್ಲೇಖಿಸಿಕೊಂಡಿರುವ2ಕೀರ್ತನೆಗಳು ಲಭ್ಯವಾಗುತ್ತವೆ.
ಹಾಡಿದನು ಮುಂಡಿಗೆಯ ಆದಿಕೇಶವರಾಯ |ಬಲ್ಲವರು ಹೇಳಿರಯ್ಯ ಕನಕದಾಸನ ಕತೆ||(167ನೆಯ ಕೃತಿಯ ಕೊನೆಯ ಪಾದಗಳು)ಬೆಡಗ ಬಲ್ಲರೆ ಪೇಳಿ ಕನಕದಾಸ|ನೊಡೆಯಾದಿಕೇಶವರಾಯ ಬಲ್ಲನೀ ಬೆಡಗ ||(184ನೆಯ ಕೃತಿಯ ಕೊನೆಯ ಪಾದಗಳು)ಅಲ್ಲದೆ, ಕನಕದಾಸರ ಬಗ್ಗೆ ವಿಶೇಷ ಅಧ್ಯಯನ ನಡೆಸಿರುವ ನನ್ನ ಗುರುಗಳೂ ಆಗಿದ್ದ ದಿ|| ಸುಧಾಕರ ಅವರು ಕನಕದಾಸರ ಕೃತಿಗಳು ಎಂಬ ಕೃತಿಯಲ್ಲಿ ಅಡಿ ಟಿಪ್ಪಣಿಯಾಗಿ ಕೊಟ್ಟಿರುವ ಒಂದು ಉಗಾಭೋಗದ ಕೊನೆಯಲ್ಲಿ –ಭಾಗವತರೊಳಗೆ ಯೋಗೇಂದ್ರ ಕೃಷ್ಣನ್ನ | ಬಾಗಿನಮಿಸುವ ದಾಸಜನರ ಪೋಷಕ |ಕಾಗಿನೆಲೆಯಾದಿಕೇಶವರಾಯ ದಾಸೋತ್ತಮರಗುಣವ ಕನಕದಾಸ ಪೇಳಿದನು (ಪು;24-25) ಎಂದಿದೆ. ಇಲ್ಲೆಲ್ಲ ಕನಕದಾಸ ಎಂಬ ಹೆಸರೇ ಸ್ಪಷ್ಟವಾಗಿದೆ. ಅಲ್ಲದೆ, ಚಿತ್ರದುರ್ಗ ವಾಸಿಯಾದ ಖ್ಯಾತ ವಿದ್ವಾಂಸರಾದ ಬಿ. ರಾಜಶೇಖರಪ್ಪನವರು ಉಡುಪಿಯಲ್ಲಿ ದೊರೆತ, ಅಂದಾಜು17ನೆಯ ಶತಮಾನಕ್ಕೆ ಸೇರಿದ ತಾಳೆಗರಿಯಲ್ಲಿ … ಆಗ ದೇವರ ಪಶ್ಚಿಮ ದಿಕ್ಕಿನಲ್ಲೂ ಬಂದು ನಿಂತು ಸ್ತುತಿ ಮಾಡುವಾಗ್ಯೆ ಶ್ರೀಕೃಷ್ಣ ದೇವರು ಪಡುಮುಖ ವಾಗಿ ತಿರುಗಿ ನಿಂತು ಎರಡು ಗೋಡೆಗಳೂ ವಡದು ಹೋಗಿ ಆತನಿಗೆ ಕಾಣಿಸಿಕೊಂಡರೂ|
ಆ ಪ್ರಕಾರ ಶ್ರೀಕೃಷ್ಣ ದೇವರು ತಿರುಗಿ ನಿಂತದು ಮತು(ಮತ್ತು) ಗೋಡೆ ವಡದು ಸಹಾ ದೇವರ ಮಹಾತ್ಮೆಯಿಂದಾ ಅದುಹೊರತ್ತು(ಹೊರತು) ಕನಕದಾಸನಗೋಸ್ಕರ ಅದಲ್ಲಾ ಯಂತಾ(ಅಂತಾ) ಬ್ರಾಂಹಣರು ತಿಳಕೊಂಡರೂ. . .ಎಂದಿದೆ. ತಥ್ಯವೇನೆಂದರೆ ಕನಕದಾಸರಾಗಿಯೇ ತಮ್ಮನ್ನು ಕಾಗಿನೆಲೆಯ ಆದಿಕೇಶವನಲ್ಲಿ ಸಮರ್ಪಿಸಿಕೊಂಡಿರುವುದು ಬಹು ಖಚಿತವಾಗಿದೆ.
ದಾಖಲೆಯು ಹೀಗೆ ಲಭ್ಯವಾಗುತ್ತಿರುವಾಗ ಅವರನ್ನು ಈಗ ಬೇರೊಂದು ಹೆಸರಿನಲ್ಲಿ ಸಂಬೋಧಿಸ ಹೊರಡುವುದು ಇತಿಹಾಸಕ್ಕೆ ಬಗೆದ ಅಪಚಾರವಾಗುತ್ತದೆ ಮಾತ್ರವಲ್ಲ ಬಹು ಹಗುರದ ಅಭಿಪ್ರಾಯವಾಗುತ್ತದೆ. ಮಾತ್ರವಲ್ಲ, ಕೆಲವೊಂದು ತಾಂತ್ರಿಕತೆಗೂ ತೊಡಕಾಗುತ್ತದೆ ಅಲ್ಲದೆ, ಕನಕದಾಸರು ಒಂದು ಕೀರ್ತನೆಯಲ್ಲಿ ತಮ್ಮನ್ನು ಅಪವರ್ಗೀಕರಿಸಿಕೊಂಡು ಹೇಳಿರುವ ಮಾತುಗಳುಅವರ ವ್ಯಕ್ತಿತ್ವದ ಔನ್ನತ್ಯವನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ.
ಆ ಕೀರ್ತನೆ ಹೀಗಿದೆ(ಕೀರ್ತನೆ.74)ದಾಸದಾಸರ ಮನೆಯ ದಾಸಿಯ ಮಗ ನಾನು |ಸಾಸಿರ ನಾಮದೊಡೆಯ ರಂಗಯ್ಯನ ಮನೆಯ||ಪ||ಶಂಕುದಾಸರ ಮನೆಯ ಕೊಂಕುದಾಸನಾನಯ್ಯ | ಮಂಕುದಾಸನು ನಾನು ಮರುಳುದಾಸ| ಸಂಕೀರ್ತನೆಯ ಮಾಡಿ ನೆನೆವ ಭಕ್ತರ ಮನೆಯ |ಬಂಕದಿಂ ಬಾಗಿಲ ಕಾಯ್ವ ಬಡದಾಸ ನಾನಯ್ಯ ||ಕಾಳುದಾಸನ ಮನೆಯ ಕೀಳುದಾಸ ನಾನಯ್ಯ |ಆಳುದಾಸನು ನಾನು ಮೂಳದಾಸ | ಬಾಳಾಕ್ಷಸಖನಿನ್ನ ಭಜಿಪ ಭಕ್ತರ ಮನೆಯ |ಆಳಿನಾಳಿನದಾಸನಡಿದಾಸ ನಾನಯ್ಯ ||ಹಲವು ದಾಸರ ಮನೆಯ ಹೊಲೆದಾಸನಾನಯ್ಯ | ಕುಲಲ್ಲದದಾಸ ಕುರುಬದಾಸ |ಮಲಹರ ರಂಗ ನಿನ್ನ ಮನೆಯ ಮಾದಿಗದಾಸ | ಸಲೆಮುಕ್ತಿ ಪಾಲಿಸೊ ಆದಿಕೇಶವರಾಯ ||
ಹೀಗೆ, ತಮ್ಮನ್ನು ಅತ್ಯಾತಿ ಅತಿ ಶ್ರೀಸಾಮಾನ್ಯನೆಂದು ಹೆಸರಿಸಿಕೊಳ್ಳುವ, ಬಹು ಔದಾರ‍್ಯ ವ್ಯಕ್ತಿತ್ವದ ಕನಕದಾಸರನ್ನು ಈಗಿನ್ನೊಂದು ಹೆಸರಿನಿಂದ ನಿರ್ದೇಶಿಸಬೇಕೆಂದು ಬಯಸುವುದು ಸರಿಯಾದ ಚಿಂತನೆಯಲ್ಲವೆಂದು ನಾವಾದರೂ ಭಾವಿಸ ಬೇಕಿದೆ.
ಈ ಹಿಂದೆ ಮಾತೆ ಮಹಾದೇವಿಯವರು ಬಸವಣ್ಣ ನವರ ವಚನಗಳ ಅಂಕಿತವನ್ನು ಕೂಡಲ ಸಂಗಮದಿಂದ ಲಿಂಗಾನಂದವಾಗಿ ಮಾರ್ಪಡಿಸಿ, ಬಲ್ಲವರೆಲ್ಲರ ಕೆಂಗಣ್ಣಿಗೆ ಗುರಿಯಾದರೆಂಬುದು ನಮಗೆ ನೆನಪಿದ್ದರೆ ಸಾಕು. ಇತಿಹಾಸ ಇತಿಹಾಸವೇ.
ಏನು ಆಗಿದೆಯೋ ಅದು ಆಗಿಹೋಗಿದೆ. ಈಗ ಆಗುಮಾಡದೆ ಇರಲು ಸಾಧ್ಯವಿಲ್ಲ. ಕೊನೆಯದಾಗಿ, ನಾವು ಕನಕದಾಸರನ್ನು ನಮ್ಮ ದೇಶದ ಒಬ್ಬ ಸಾಮಾಜಿಕ ಹರಿಕಾರರಾಗಿ ಕಾಣಬೇಕೇ ಹೊರತು ಬೇರೆ ಅನ್ಯ ನಾಮಾಂತರ ದಲ್ಲಲ್ಲ. ಅದು ಕೇವಲ ಮೇಲ್ಪದರದ ಒಂದು ಪ್ರಯತ್ನವಷ್ಟೆ. ಯಾವುದೇ ವ್ಯಕ್ತಿಯ ಹೆಸರು ಕೇವಲ ಒಂದು ಗುರುತಿಗಾಗಿಯೇ ಹೊರತು ಬೇರೇನಲ್ಲ. ಈ ದೃಷ್ಟಿಯಿಂದ ತಳದಿಂದ ಎದ್ದು ಮಾನವೌನ್ಯತ್ಯದ ಶಿಖರವೇರಿದ ನಮ್ಮ ಕನಕದಾಸರು ಈ ನಾಡು ಕಂಡ ಒಂದು ಅಪೂರ್ವ ಸೋಜಿಗ.