ಅತ್ತೆ-ಸೊಸೆ ಜಗಳ ಆಡಲೇ ಬೇಕೇ ?
ಅಭಿವ್ಯಕ್ತಿ
ಡಾ.ಕೆ.ಪಿ.ಪುತ್ತೂರಾಯ
ಅತ್ತೆಯಾದವಳು, ಶಿಸ್ತು-ಸಂಪ್ರದಾಯಗಳಿಗೆ ಹೆಚ್ಚು ಒತ್ತು ಕೊಟ್ಟರೆ, ಸೊಸೆಯಾದವಳ ಆಸಕ್ತಿ- ಅಭಿರುಚಿಗಳೇ ಬೇರೆ, ಅದು ಅಡಿಗೆಯಿಂದ ಹಿಡಿದು ಅತಿಥಿ ಸತ್ಕಾರ, ಹಬ್ಬ ಹುಣ್ಣಿಮೆಗಳವರೆಗೆ ವಿಸ್ತರಿಸುತ್ತದೆ. ಅತ್ತೆಗೆ ರಾತ್ರಿಯೆಲ್ಲಾ ನಿದ್ದೇನೇ ಬರೋದಿಲ್ಲಾ, ಸೊಸೆಗೆ ಬೆಳಗಾದರೂ ಎಚ್ಚರಾನೇ ಆಗೋಲ್ಲ, ಅತ್ತೆಗೆ ತನ್ನ ಮಗಳು ಮಾತ್ರ ಸರಿ, ಸೊಸೆಯೆಂದರೆ, ಏಕೋ ಕಣ್ಣುರಿ!
ಅತ್ತೆ-ಸೊಸೆ ಜಗಳವಾಡಲೇ ಬೇಕೇ? ಖಂಡಿತಬೇಕಿಲ್ಲ, ಆದರೂ ಕೆಲವು ಮನೆಗಳಲ್ಲಿ ಅತ್ತೆ-ಸೊಸೆ ಜಗಳವಾಡುತ್ತಿರುತ್ತಾರೆ. ಇದು ಸಣ್ಣ ಪುಟ್ಟ ಭಿನ್ನಾಭಿಪ್ರಾಯ, ಮುನಿಸು, ವಾದ, ಚರ್ಚೆಗಳಿಂದ ಹಿಡಿದು ನೆರೆಹೊರೆಯವರಿಗೆ, ಬಂಧುಮಿತ್ರರಿಗೆಲ್ಲಾ ಗೊತ್ತಾಗಿರುವಷ್ಟು ಮಟ್ಟಕ್ಕೆ ಬೆಳೆದಿರುತ್ತದೆ.
ಅತ್ತೆ-ಸೊಸೆ ಮಾತುಕತೆ ಬಿಟ್ಟಿರೋದರಿಂದ ಆರಂಭವಾಗಿ ಇಬ್ಬರೂ ಬೇರೆ ಮನೆ ಮಾಡುವಷ್ಟು ಹಂತಕ್ಕೆ ತಲುಪಿರುತ್ತದೆ. ಒಟ್ಟಿನಲ್ಲಿ ಎಂದೂ ಒಮ್ಮೆಯೂ ಜಗಳವಾಡದ ಅತ್ತೆ- ಸೊಸೆಯಂದಿರೇ ಬಹಳ ಅಪರೂಪವೆನ್ನಬಹುದು. ಕಾರಣ ಭಿನ್ನ ಭಿನ್ನವಾದ ಆರ್ಥಿಕ-ಕೌಟುಂಬಿಕ- ಸಾಂಸ್ಕೃತಿಕ ಹಿನ್ನೆಲೆಯಿಂದ ಬಂದ ಇಬ್ಬರು, ಅದೂ ಹೆಣ್ಣುಮಕ್ಕಳು ಒಮ್ಮೆಯೂ ಜಗಳವಾಡದೆ, ಹಾಲುಜೇನಿನಂತೆ ಇದ್ದಾರೆ ಎಂದರೆ ನಂಬಲು ಕೊಂಚ ಕಷ್ಟವಾದ ವಿಷಯ.
ಇವರಿಗೆ ಜಗಳವಾಡಲು ದೊಡ್ಡ ದೊಡ್ಡ ವಿಷಯಗಳೇ ಬೇಕೆಂದಿಲ್ಲ, ಸಣ್ಣ ಪುಟ್ಟ ಕ್ಷುಲ್ಲಕ ಕಾರಣಗಳೂ ಸಾಕು! ಬೆಳಗಿನ ಸಮಯವೇಳೆ ಹತ್ತು ಗಂಟೆ ಕಳೆದು ಹತ್ತು ನಿಮಿಷಗಳಾಗಿರುತ್ತವೆ. ಅತ್ತೆ ಸೊಸೆಯನ್ನು ಕೇಳುತ್ತಾಳೆ ’ಈಗ ಸಮಯವೆಷ್ಟು?’ ಸಹಜವಾಗಿಯೇ ಸೊಸೆ ‘ಹತ್ತು-ಹತ್ತು’ ಎನ್ನುತ್ತಾಳೆ. ಇಷ್ಟನ್ನೇ ಅಪಾರ್ಥ ಮಾಡಿಕೊಂಡ ಅತ್ತೆ ಸಿಟ್ಟಿನಿಂದ ಗುಡುಗುತ್ತಾಳೆ, ‘ಹತ್ತು -ಹತ್ತು ಎಂದು ಎರಡು ಬಾರಿ ಹೇಳಲು ನಾನೇನು ಕಿವುಡಿಯೇ?’ ಇದು ಅತ್ತೆಯ ಸಮಚಾರವಾದರೆ, ‘ನೀನು ನಿನ್ನ ಗಂಡನ ಮನೆಗೆ ಮೊದಲ ಬಾರಿಗೆ ಹೋದಾಗ ಏನು ಮಾಡಿದೆ?’ ಎಂಬ ಗೆಳತಿಯರ ಪ್ರಶ್ನೆಗೆ ಹೊಸದಾಗಿ ಮದುವೆ ಆದ ಹುಡುಗಿ ಉತ್ತಾರಿಸುತ್ತಾಳೆ, ‘ನಾನು ಬಿಕ್ಕಿ ಬಿಕ್ಕಿ ಅತ್ತೆ.
ಯಾಕೆ ಗೊತ್ತೇ? ಬಾಗಿಲ ಎದುರಿಗೆ ನಿಂತಿದ್ದರು ಮುಖ ದೊಡ್ಡದು ಮಾಡಿಕೊಂಡ ನನ್ನ ಅತ್ತೆ?’ ಈ ಶೀತಲ ಸಮರ ನಡೆಯುತ್ತಿದ್ದ ಒಂದು ಮನೆಯಲ್ಲಿ ನೇರವಾಗಿ ಅತ್ತೆಯನ್ನು ಬಯ್ಯಲಾಗದ ಸೊಸೆ ಮನೆಯ ಮುಂದೆ ನಾಯಿಯನ್ನು ನೋಡಿಕೊಂಡು ಅತ್ತೆಗೆ ಕೇಳುವಂತೆ ಹೀಗೆ ಹೇಳುತ್ತಿರುತ್ತಾಳೆ “ಊರಿನ ಎಲ್ಲಾ ಮುದಿ ನಾಯಿಗಳಿಗೆ ಸಾವು ಬಂತು, ಆದರೆ, ಈ ನಮ್ಮ ಮನೆಯ ಮುದಿ ನಾಯಿಗೆ ಇನ್ನೂ ಸಾವು ಬಂದಿಲ್ಲ. ಇದಕ್ಕೆ ಇನ್ನು ಎಷ್ಟು ದಿನ ಅಂತ ಬದುಕುವ ಆಸೆನೋ, ಯಾವ ಪುರುಷಾರ್ಥಕ್ಕಾಗಿ ಇದು ಬದುಕಿ ಉಳಿದಿದೆಯೋ, ಮೂರು ಹೊತ್ತಿನ ಊಟಕ್ಕೆ ಕಾಯೋದನ್ನು ಬಿಟ್ಟರೆ ಇದಕ್ಕೆ ಬೇರೆ ಕೆಲಸಾನೇ ಇಲ್ಲ.
ಇದರಿಂದ ಮನೆಗೆ ಮೂರು ಕಾಸಿನ ಪ್ರಯೋಜನವಿಲ್ಲ. ಇಂತಹ ಮುದಿಯರು ಇದ್ದರಷ್ಟು ಇರದಿದ್ದರೆಷ್ಟು?” ಸೊಸೆಯ ಮಾತಿನ ಗೂಡಾರ್ಥವನ್ನು ತಕ್ಷಣ ಅರಿತುಕೊಂಡ ಅತ್ತೆ ಕೂಡಾ ಸುಮ್ಮನಿರಲಾರದೆ, ಮೂಲೆಯಲ್ಲಿ ಮಲಗಿದ್ದ ಬೆಕ್ಕನ್ನು ನೋಡಿಕೊಂಡು ಸೊಸೆಗೂ ಕೇಳಿಸುವಂತೆ ಹೀಗೆ ಹೇಳುತ್ತಿರುತ್ತಾಳೆ, “ನೋಡಲು ಬೆಳ್ಳಗೆ ತೆಳ್ಳಗೆ ಇದೇಂತ ಈ ಬೆಕ್ಕನ್ನು ಮನೆಗೆ ತಂದು ಬಿಟ್ಟೆವು. ಈಗ ನೋಡಿದರೆ, ಇದು ಬರೀ ಕಳ್ಳಿ ಬೆಕ್ಕು, ಗುಳ್ಳೆ ನರಿ ತರ ಕದ್ದು ತಿಂದು ತಿಂದು ಈಗ ಆನೆಮರಿ ತರ ಆಗಿದೆ.
ನನಗಂತೂ ಸಾಕಾಗಿದೆ” ಇವರಿಬ್ಬರ ಮಾತುಗಳನ್ನು ಕೇಳಿಕೊಂಡ ಮಗ ಅಸಾಹಯಕನಾಗಿ, ಒಳ್ಳೇ ಗೂಬೇ ತರ ಸುಮ್ಮಗಿರುತ್ತಾನೆ. ಕೆಲವೊಮ್ಮೆ ಅತ್ತೆಯ ಸಾವನ್ನೇ ನೀರೀಕ್ಷಿಸುತ್ತಿರುವ ಇಲ್ಲವೇ ಅವಳ ಸಾವಿಗೇ ಕಾರಣವಾಗುವ ಸೊಸೆಯಂದಿರೂ ಇದ್ದಾರೆ. “ಇಲ್ಲಿಒಂದು ಒಳ್ಳೆಯ ಹಾಸ್ಯೋತ್ಸವ ನಡೆಯುತ್ತಿದೆ. ಹೊಟ್ಟೆ ಹುಣ್ಣಾಗುವಷ್ಟು ನಗಿಸ್ತಾ ಇದ್ದಾರೆ, ನಕ್ಕೂ ನಕ್ಕೂ ಸಾಯಬೇಕು ನೋಡಿ” ಎಂಬ ಗೆಳತಿಯ ದೂರವಾಣಿ ಕರೆಗೆ ಸೊಸೆ “ನಕ್ಕು ನಕ್ಕು ಸಾಯುವಂತಿದ್ದರೆ, ನನ್ನ ಅತ್ತೆಯನ್ನು ಕಳುಹಿಸಿ ಕೊಡುತ್ತೇನೆ”ಅನ್ನೋದೇ, ಇಲ್ಲವೇ”ವೃದ್ಧಾಶ್ರಮ ಪ್ರಾರಂಭಿಸಿದ್ದೇವೆ, ನಿಮ್ಮ ಕೊಡುಗೆ ಏನು”, ಅಂದವರಿಗೆ “ನಮ್ಮ ಅತ್ತೆಯವರು” ಅನ್ನೋದೇ, ಮುಂದಿನ ಮನೆಯ ಜಲಜ ಹಿಂದಿನ ಮನೆಯ ಗಿರಿಜಳಿಗೆ ಕೇಳುತ್ತಾಳೆ” ನಿಮ್ಮ ಅತ್ತೆಯವರು ಈಗ ಹೇಗಿದ್ದಾರೆ?” ಅಯ್ಯೋ ಅವರು ಸತ್ತು ಹೋಗಿ ತಿಂಗಳಾಯ್ತು” “ ಹೌದಾ, ನೀವೇ ಪುಣ್ಯವಂತರಪ್ಪಾ. ಅಂದ ಹಾಗೆ ಅವರು ಹೇಗೆ ಸತ್ತರು?” “ಅದೇ ನಮ್ಮ ತೋಟದಲ್ಲಿ ಸುತ್ತಾಡಲುಹೋದಾಗ ಕಾಲು ಜಾರಿ ಬಾವಿಯ ಕೆಳೆಗೆ ಬಿದ್ದು ಬಿಟ್ಟರು.
ಬಿದ್ದವರು ಮತ್ತೆ ಮೇಲೆ ಬರಲೇ ಇಲ್ಲ“ ಸದ್ಯ ! “ಅಯ್ಯೋ ನಮಗೂ ತೋಟ ಬಾವಿ ಎಲ್ಲಾ ಇದೇರಿ, ನಮ್ಮ ಅತ್ತೆನೂ ಅಲ್ಲಿಗೆ ಆಗಾಗ ಹೋಗ್ತಾ ಇರ‍್ತಾರೆ, ಆದರೂ ಬಾವಿಗೆ ಬಿದ್ದೇ ಇಲ್ಲ ನೋಡಿ ಎಲ್ಲವೂ ದೈವೇಚ್ಛೆ!.” ಅಷ್ಟರಲ್ಲಿ ಗಿರಿಜ ಸಣ್ಣ ಸ್ವರದಲ್ಲಿ “ದೈವೇಚ್ಛೆ ಹಾಗಿರುವಲ್ಲಿ ಒಂದಷ್ಟು ಮನುಷ್ಯ ಪ್ರಯತ್ನವೂ ಬೇಕಾಗುತ್ತದೆ ನೋಡಿ” ಎಂಬುದಾಗಿ ತಳ್ಳುವ ಕೈಗಳನ್ನು ತೋರಿಸುತ್ತಾ ಹೇಳುತ್ತಾಳೆ.
ಅಷ್ಟರಲ್ಲಿ ಪಕ್ಕದ ಮನೆಯ ವನಜ “ನಮ್ಮ ಅತ್ತೆನೂ ಸತ್ತೇ ಹೋದರು ನೋಡಿ” ಎಂದು ಹೇಳುತ್ತಾ ಹೊರಬಂದರು. “ಹೇಗೆ ಸತ್ತರು” ಎಂದು ಕೇಳಲಾಗಿ ವನಜಾ ಹೇಳಿದಳು “ಒಂದು ದಿನ ನಮ್ಮ ಅತ್ತೆ ನನ್ನ ಹೊಟ್ಟೆಯ ಒಳಗೆ ಇಲಿ ಓಡಾಡಿದಂತಾಗುತ್ತಿದೆ,ಏನಾದರೂ ಕೊಡೇ” ಅಂತ ಅಂದ್ರು ನಾನು ತಕ್ಷಣ “ಇಲಿ ಪಾಷಾಣ ಕೊಟ್ಟು ಬಿಟ್ಟೆ, ಇಲಿ ಜೊತೆ ಇವರೂ ಸತ್ತು ಬಿಟ್ರು” ಅನ್ನೋದೆ!
ಇವೆಲ್ಲಾ ಮಗನ ಮದುವೆಯ ನಂತರದ ಹೊಸ ಹುಡುಗಿ ತಂದೊಡ್ಡುವ ಸಮಸ್ಯೆಗಳು.೨೦-೩೦ವರ್ಷಗಳು ಬೇಕು ಒಂದು ತಾಯಿಗೆ, ತನ್ನ ಮಗನನ್ನು ಸಾಕಿ ಸಲಹಿ ಬೆಳೆಸಲು. ಆದರೆ, ಕೇವಲ೨೦-೩೦ನಿಮಿಷಗಳು ಸಾಕು ಅವನ ಮಡದಿಗೆ ಈ ಮಗನತಲೆಯನ್ನು ಕೆಡಿಸಲು” ಎಂಬ ಮಾತಿನಲ್ಲಿ, ಸ್ವಲ್ಪ ಸತ್ಯವಿದೆ. ಅತ್ತೆ ಸೊಸೆ ಜಗಳದಿಂದಾಗಿ ಎಷ್ಟೊಂದು ಸಂಸಾರಗಳು ಒಡೆದು ಹೋಗಿಲ್ಲ!
ಹೆತ್ತವರು-ಮಕ್ಕಳು ದೂರವಾಗಿಲ್ಲ, “ಇಷ್ಟು ವರ್ಷಗಳ ಕಾಲ, ನನ್ನ ಸೆರಗ ಹಿಂದೆಯೇ ಓಡಾಡುತಿದ್ದ ಹುಡುಗ ಈಗ ಹೊಸದಾಗಿಬಂದ ಈ ಹುಡುಗಿಯ ಹಿಂದೆಯೇ ಬಿದ್ದಿರುತ್ತಾನೆ. ಎಂದರೆ ಹೇಗೆ?” ಎಂಬುದು ಅಮ್ಮನ ಸಂಕಟವಾದರೆ, “ನಿಮ್ಮನ್ನೇ ನಂಬಿ ತಾಯಿ ತಂದೆ, ತವರು ಎಲ್ಲರನ್ನೂ ಬಿಟ್ಟು ಬಂದ ನನ್ನನ್ನು ನೀವೇ ಕೈಬಿಟ್ಟರೆ, ನಾನೆಲ್ಲಿಗೆ ಹೊಗಲಿ? ಏನು ಮಾಡಲಿ”ಎಂಬುದು ಗಂಡನಿಗೆ ಮಡದಿಯ ಪ್ರಶ್ನೆ.
ಅತ್ತೆ ಸೊಸೆಯರ ನಡುವೆ ಭಿನ್ನಾಭಿಪ್ರಾಯಗಳು ಬರಲು, ಅವರಿಬ್ಬರ ಭಿನ್ನ ಭಿನ್ನಭಿಪ್ರಾಯಗಳು ಒಂದು ಕಾರಣವಾದರೆ, ತಾವೆಲ್ಲಿ ತಮ್ಮ ಸ್ಥಾನ-ಮಾನಗಳನ್ನು ಕಳಕೊಂಡೇವು ಎಂಬ ಭಯ ಇನ್ನೊಂದು ಕಾರಣ. ಆದುದರಿಂದಲೇ ಇಬ್ಬರೂ, ತಮ್ಮ ಹಕ್ಕುಭಾದ್ಯತೆಗಳನ್ನು ಬಿಟ್ಟುಕೊಡಲು ಒಲ್ಲದ ಮನಸ್ಥಿತಿಗೆ ಒಳಗಾಗಿರುತ್ತಾರೆ. ಸಹಜ ಸ್ವಾಭಾವಿಕವಾಗಿಯೇ, ತಲೆಮಾರು ಅಂತರಗಳು ಮಗುದೊಂದು ಕಾರಣ. ಅತ್ತೆಯಾದವಳು, ಶಿಸ್ತು-ಸಂಪ್ರದಾಯಗಳಿಗೆ ಹೆಚ್ಚು ಒತ್ತು ಕೊಟ್ಟರೆ, ಸೊಸೆಯಾದವಳ ಆಸಕ್ತಿ- ಅಭಿರುಚಿಗಳೇ ಬೇರೆ, ಅದು ಅಡಿಗೆಯಿಂದ ಹಿಡಿದು ಅತಿಥಿ ಸತ್ಕಾರ, ಹಬ್ಬ ಹುಣ್ಣಿಮೆಗಳವರೆಗೆ ವಿಸ್ತರಿಸುತ್ತದೆ.
ಅತ್ತೆಗೆ ರಾತ್ರಿಯೆಲ್ಲಾ ನಿದ್ದೇನೇ ಬರೋದಿಲ್ಲಾ, ಸೊಸೆಗೆ ಬೆಳಗಾದರೂ ಎಚ್ಚರಾನೇ ಆಗೋಲ್ಲ, ಅತ್ತೆಗೆ ತನ್ನ ಮಗಳು ಮಾತ್ರ ಸರಿ,ಸೊಸೆಯೆಂದರೆ, ಏಕೋ ಕಣ್ಣುರಿ! ಇದನ್ನೇ ತಿಳಿ-ಹೇಳುವ ಹಾಸ್ಯ ಪ್ರಸಂಗವೊಂದು ಹೀಗಿದೆ. ಮೊನ್ನೆ ನನ್ನ ಪರಿಚಯದ ಮಹಿಳೆಯೊಬ್ಬರು ಪಾರ್ಕಿನಲ್ಲಿ ಸಿಕ್ಕಿದರು. ಅವರಿಗೆ ಎರಡು ಮಕ್ಕಳು, ಒಂದು ಹೆಣ್ಣು ಒಂದು ಗಂಡು. ಇಬ್ಬರಿಗೂ ಮದುವೆಆಗಿದೆ. ಲೋಕಾಭಿರಾಮವಾಗಿ ನಾನು ಅವರನ್ನ ಕೇಳಿದೆ. “ನಿಮ್ಮ ಮಗ ಹೇಗಿದ್ದಾನೆ?” ಉತ್ತರವಾಗಿ ಅವರು ಹೇಳಿದರು, “ಅಯ್ಯೋ ಅವನ ಕತೆ ಕಣ್ಣೀರ ಕಥೆ ನೋಡಿ.
ಓದಿರುವ ಹುಡುಗಿ ಅಂತ ಒಂದು ಹುಡುಗಿಯ ಜೊತೆ ಮದುವೆ ಮಾಡಿಸಿದೆನಲ್ಲ! ಗೊತ್ತೆ ಆಗಲಿಲ್ಲ ನೋಡಿ, ಆಕೆ ಎಂತಹ ಸೊಂಬೇರಿ ಹುಡುಗಿಯೆಂದು! ಬೆಳಗ್ಗೆ ಬೇಗ ಏಳೋದಿಲ್ಲ ಎದ್ದ ಮೇಲೂ ಕೆಲಸಾನೇ ಮಾಡೊಲ್ಲ. ಪಾಪ, ನನ್ನ ಮಗನೇ ಅವಳಿಗೆ ಬೆಡ್ ಕಾಫಿ ಮಾಡಿ ತಂದು ಕೊಡಬೇಕು; ಅವನೇ ಅಡುಗೆ ಮಾಡಬೇಕು, ಮನೆ ಕೆಲಸ ಮಾಡಬೇಕು ಅಯ್ಯೋ ಅವನ ಕಷ್ಟ ಹೇಳ ತೀರದು,” ಹೋಗಲಿ ಬಿಡಿ, ನಿಮ್ಮ ಮಗಳಿಗೆ ಮದುವೆ ಆಗಿದೆಯೆಲ್ಲ; ಆಕೆ ಹೇಗಿದ್ದಾಳೆ? ಮತ್ತೆ ನಾನು ಅವರನ್ನು ಕೇಳಿದೆ.
ಅದಕ್ಕವರು “ಅವಳು ಪುಣ್ಯ ಮಾಡಿದಾಳೆ ರಾಣಿ ತರ ಇದ್ದಾಳೆ, ಜಾಲಿಯಾಗಿ ಮಲ್ಕೋಂಡಿರುತ್ತಾಳೆ. ಎಲ್ಲಾ ಕೆಲಸ ನನ್ನ ಅಳಿಯನೇ ಮಾಡುತ್ತಿದ್ದಾನೆ”, ಎಂತಹ ವಿಪರ್ಯಾಸ! ಮಗಳಿಗೂಂದು ಮಾನದಂಡ , ಸೊಸೆಗೊಂದು ಮಾನದಂಡ! ಇದು ತರವಲ್ಲ. ಯಾವ ಮನೆಯಲ್ಲಿ ಅತ್ತೆಯಾದವಳು ಸೊಸೆಯನ್ನು ತನ್ನ ಸ್ವಂತ ಮಗಳಂತೆ, ಹಾಗೂ ಸೊಸೆಯಾದವಳೂ ಅತ್ತೆಯನ್ನು ತನ್ನ ತಾಯಿಯಂತೆ ಪ್ರೀತಿಸುತ್ತಾರೋ, ಆ ಮನೆಯಲ್ಲಿ ಅತ್ತೆ ಸೊಸೆ ಜಗಳವೆಂದೂ ಇರಲಾರದು.
ಮುಖ್ಯವಾಗಿ ಅತ್ತೆ ಸೊಸೆಯರಿಬ್ಬರೂ ತಾವು ಪ್ರತಿಸ್ಪರ್ಧಿಗಳು ಎಂಬ ಭಾವದಿಂದ ಹೊರಬರಬೇಕು ಅತ್ತೆ-ಮಾವನವರ ಸೇವೆ ಮಾಡುವ ಅವಕಾಶ, ಒಂದು ಸೌಭಾಗ್ಯವೆಂದು ಸೊಸೆಯಾದವಳು ತಿಳಿದುಕೊಂಡರೆ, ಹಾಗೂ ಸೊಸೆಯಾದವಳು ಕುಟುಂಬದ ಕಣ್ಣು ಎಂಬುದಾಗಿ ಅತ್ತೆಯಾದವಳು ತಿಳಿದುಕೊಂಡರೆ, ಎಲ್ಲಿದೆ ಅತ್ತೆ ಸೊಸೆ ಜಗಳ? ಹೆತ್ತವರಿಗೆ ಒಳ್ಳೆಯ ಮಗ-ಮಗಳು ಆದಂತೆ, ಅತ್ತೆ-ಮಾವನವರಿಗೂ ಒಳ್ಳೆಯ ಅಳಿಯ/ಸೊಸೆಯಾಗಬೇಕಾದುದು ಆದರ್ಶ ದಂಪತಿಗಳ ಲಕ್ಷಣ. ಅಂತೆಯೇ ಅತ್ತೆಯಾದವಳು ಒಂದು ಕಾಲದಲ್ಲಿ ತಾನೂ ಸೊಸೆಯಾಗಿದ್ದೆ ಎಂಬುದನ್ನು ಮರೆಯದೇ, ಸೊಸೆಯಾದವಳು ತಾನು ಒಂದು ದಿನ ಅತ್ತೆಯಾಗ ಲಿರುವವಳೆಂಬುದನ್ನು ಮರೆಯದಿದ್ದರೆ, ಅತ್ತೆ ಸೊಸೆ ಜಗಳಗಳೇ ಇರೋದಿಲ್ಲ.
ಒಟ್ಟಿನಲ್ಲಿ ಅತ್ತೆ ಸೊಸೆ ಜಗಳವಾಡಲೇ ಬೇಕೆಂದಿಲ್ಲ, ಜಗಳವಾಡಲೂಬಾರದು.