ಮಾರ್ಗಸೂಚಿ ಪಾಲನೆಗೆ ಸೌಲಭ್ಯಗಳ ಕೊರತೆ
ಅಭಿಮತ
ಮಂಜುನಾಥ್‌ ಡಿ.ಎಸ್‌
ಕರೋನಾ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಸರಕಾರ ಆಗಿಂದಾಗ್ಗೆ ಹಲವು ನಿಯಮಗಳನ್ನು ಜಾರಿಗೆ ತರುತ್ತಿದೆ. ಇದು ಅಗತ್ಯವೂ ಆಗಿದೆ. ಆದರೆ, ಸಂವಹನ ಮತ್ತು ಸಮನ್ವಯತೆಯ ಕೊರತೆ ಹಾಗೂ ಪಾಲಿಸಲು ಕ್ಲಿಷ್ಟವಾಗಿರುವ ಕಾರಣದಿಂದ ಕೆಲವು ನಿಯಮಗಳು ಚರ್ಚೆಗೆ ಗ್ರಾಸವಾಗಿರುವುದಷ್ಟೇ ಅಲ್ಲದೆ ನಾಗರಿಕರ ಆಕ್ರೋಶಕ್ಕೂ ಕಾರಣವಾಗಿವೆ.
ಪ್ರಾಥಮಿಕ ಶಾಲಾ ತರಗತಿಗಳನ್ನು ಪ್ರಾರಂಭಿಸಲು ಸರಕಾರ ಇನ್ನೂ ಖಚಿತ ನಿರ್ಧಾರ ಕೈಗೊಂಡಿಲ್ಲ. ಅಂತಹುದರಲ್ಲಿ, ಅಂಗನವಾಡಿಗಳನ್ನು ತೆರೆದು ಪಾಠಗಳನ್ನು ಆರಂಭಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೂಚನೆ ನೀಡಿರು ವುದು ವಿಪರ್ಯಾಸವೇ ಸರಿ. ಇಲಾಖೆಯ ಈ ಕ್ರಮ ವಿವಾದಕ್ಕೆ ಕಾರಣವಾಗಿದೆ. ಪೋಷಕರು ಮತ್ತು ಅಂಗನವಾಡಿ ಕಾರ್ಯಕರ್ತ ರಲ್ಲಿ ಅಸಮಾಧಾನ ಮೂಡಿಸಿದೆ.
ಈ ನಿರ್ಧಾರ ಕೈಗೊಂಡು ಮಾರ್ಗಸೂಚಿಗಳನ್ನು ರೂಪಿಸುವ ಮುನ್ನ ಸಂಬಂಧಪಟ್ಟವರು ಅಂಗನವಾಡಿಗಳ ವಾಸ್ತವ ಸ್ಥಿತಿ ಯನ್ನು ಗಣನೆಗೆ ತೆಗೆದುಕೊಂಡಂತೆ ಕಾಣುವುದಿಲ್ಲ.೮ಡಿಸೆಂಬರ್೨೦೨೦ರ ದೈನಿಕವೊಂದರಲ್ಲಿ ಪ್ರಕಟವಾದ ವರದಿ ರಾಜ್ಯದಲ್ಲಿರುವ ಅಂಗನವಾಡಿಗಳ ಸ್ಥಿತಿ ಚಿಂತಾಜನಕವಾಗಿರುವುದರ ಬಗ್ಗೆ ಕಾಳಜಿ ವ್ಯಕ್ತಪಡಿಸಿದೆ. ಅಂಗನವಾಡಿ ಕೇಂದ್ರಗಳಲ್ಲಿನ ಸ್ಥಳಾಭಾವ, ಶಿಥಿಲ ಕಟ್ಟಡಗಳು, ಶೌಚಾಲಯಗಳಿಲ್ಲದ ಅಂಗನವಾಡಿಗಳು, ಒಂದೇ ಕಟ್ಟಡದಲ್ಲಿ ಎರಡೆರಡು ಕೇಂದ್ರಗಳನ್ನು ನಡೆಸುವ ದುಸ್ಥಿತಿ, ಸ್ವಂತ ಸೂರಿಲ್ಲದ್ದರಿಂದ ಸಾಕಷ್ಟು ಅಂಗನವಾಡಿ ಕೇಂದ್ರಗಳನ್ನು ಬಾಡಿಗೆ ಕಟ್ಟಡಗಳಲ್ಲಿ ನಡೆಸುತ್ತಿರುವ ಪರಿಸ್ಥಿತಿ, ಇತ್ಯಾದಿ ವಾಸ್ತವಾಂಶಗಳನ್ನು ಈ ವರದಿ ಹೊರಗೆಡಹಿದೆ.
ಕರ್ನಾಟಕದ೩೫,೦೪೩ಅಂಗನವಾಡಿ ಕೇಂದ್ರಗಳಲ್ಲಿ ನೀರಿನ ಸೌಲಭ್ಯವಿಲ್ಲದಿರುವ ಅಂಶವನ್ನು ಜಿಲ್ಲಾಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದಿರುವುದಾಗಿ೨೦೨೧ಜನವರಿಯ ಕಡೆಯ ವಾರದಲ್ಲಿ ಪ್ರಕಟವಾದ ಪತ್ರಿಕಾ ವರದಿ ಯೊಂದು ತಿಳಿಸುತ್ತದೆ. ಕೆಲವು ಅಂಗನವಾಡಿಗಳಲ್ಲಿ ಕಾರ್ಯಕರ್ತರು ಒಂದೆರಡು ಕಿಲೋಮೀಟರ್ ದೂರದಿಂದ ನೀರು ತರಬೇಕಾದ ಪರಿಸ್ಥಿತಿ ಇದೆಯೆಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತರ ಸಂಘದ ಕಾರ್ಯದರ್ಶಿಗಳು ತಿಳಿಸಿದ್ದಾರೆ.
ಹೀಗೆ ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿರುವ ಅಂಗನವಾಡಿ ಕೇಂದ್ರಗಳಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳುವುದು, ಮಕ್ಕಳು ಕೈ ತೊಳೆದುಕೊಳ್ಳಲು ವ್ಯವಸ್ಥೆ ಮಾಡುವುದು, ಮಕ್ಕಳ ನಡುವೆ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ವಾಸ್ತವ ದಲ್ಲಿ ಸಾಧ್ಯವೆ? ಎಂಬುದನ್ನು ಸೂಚನೆ ನೀಡಿದವರು ಯೋಚಿಸಿದಂತೆ ಕಾಣುವುದಿಲ್ಲ. ಮಾರ್ಗದರ್ಶಿ ಸೂತ್ರಗಳ ಪ್ರಕಾರ ಅಂಗನವಾಡಿ ಕೇಂದ್ರಗಳನ್ನು ಸ್ಯಾನಿಟೈಸ್ ಮಾಡಬೇಕು, ಮಕ್ಕಳು ಸಾಬೂನಿನಿಂದ ಕೈತೊಳೆದುಕೊಳ್ಳಬೇಕು.
ಆದರೆ, ಇದಕ್ಕೆ ಬೇಕಾದ ಪರಿಕರಗಳನ್ನು ಒದಗಿಸುವ ಕುರಿತು ಇಲಾಖೆ ಮೌನವಹಿಸಿದೆ. ಸಣ್ಣ ವಯಸ್ಸಿನ ಮಕ್ಕಳಿಗೆ ಮಾಸ್ಕ್ ಹಾಕಿ ಮೂರು ನಾಲ್ಕು ತಾಸು ಕೂರಿಸುವುದರ ಹಿಂದಿನ ತಾಸವನ್ನೂ ಇವರು ಗಣನೆಗೆ ತೆಗೆದುಕೊಂಡಂತಿಲ್ಲ. ಅಂಗನವಾಡಿಗಳ ದೈನಂದಿಕ ನಿರ್ವಹಣೆಯಲ್ಲಿನ ಸವಾಲುಗಳ ಹಿನ್ನೆಲೆಯಲ್ಲಿ ಕಾರ್ಯಕರ್ತೆಯರು ಮಾರ್ಗಸೂಚಿಯನ್ನು ಪಾಲಿಸುವುದು ಸೂಚಿಸಿದಷ್ಟು ಸುಲಭವಲ್ಲ ಎಂಬ ಸತ್ಯವನ್ನು ಇಲಾಖೆ ಮನಗಾಣಬೇಕಿದೆ.
ಹಾಗಾಗಿ, ಈಗ ಕೈಗೊಂಡಿರುವ ಆತುರದ ನಿರ್ಧಾರವನ್ನು ಮರು ಪರಿಶೀಲಿಸಬೇಕಾದ ಜರೂರಿದೆ. ಇದು ಅಂಗನವಾಡಿ ಕಾರ್ಯಕರ್ತೆಯರ ಮನವಿಯೂ ಆಗಿದೆ. ಅಂಗನವಾಡಿಗಳ ಪ್ರಸ್ತುತ ವಾಸ್ತವ ಸ್ಥಿತಿಯನ್ನು ಗಮನದಲ್ಲಿರಿಸಿಕೊಂಡು ಸಾಧಕ ಬಾಧಕಗಳ ಬಗ್ಗೆ ಚಿಂತನೆ ನಡೆಸಿದ ನಂತರವಷ್ಟೇ ಅಂಗನವಾಡಿಗಳನ್ನು ಆರಂಭಿಸುವುದು ಯುಕ್ತ.