ಸದಾ ಬೆಳಗುತ್ತಿರುವ ಎಕ್ಸ್’ರೇ ಬೆಳಕು ಮೇಡಂ ಕ್ಯೂರಿ
ಸಾಂದರ್ಭಿಕ
ಮಲ್ಲಿಕಾರ್ಜುನ ಹೆಗ್ಗಳಗಿ
ಬ್ರೋನಾ ಪ್ಯಾರಿಸ್ಸಿನಲ್ಲಿ ಓದು ಮುಗಿಸಿ ಅಲ್ಲಿಯ ಕ್ಯಾಸಿಮೀರ್ ಎಂಬವವರನ್ನು ಮದುವೆಯಾಗಿ ಆಸ್ಪತ್ರೆ ಆರಂಭಿಸಿ ದರು. ಮೇರಿಗೆವಿಜ್ಞಾನ ಓದುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅಕ್ಕ ಬ್ರೋನಾ ಮೇರಿ ಅವರನ್ನು ಪ್ಯಾರಿಸಿಗೆ ಆಮಂತ್ರಿಸಿದರು.ಇದು ಮೇರಿ ಅವರ ಬದುಕಿನ ಬಹುದೊಡ್ಡ ಟಿರ್ನಿಂಗ್ ಪಾಯಿಂಟ್ ಆಯಿತು.
ಪ್ರತಿ ವರ್ಷ ಫೆಬ್ರವರಿ ಮಾಸದ 11ನೇ ದಿನಾಂಕದಂದು ವಿಜ್ಞಾನ ಕ್ಷೇತ್ರದಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಸ್ಮರಿಸಿಕೊಳ್ಳ ಲಾಗುತ್ತದೆ. ವಿಜ್ಞಾನದಲ್ಲಿ ಮಹಿಳೆ ಎಂದಾಕ್ಷಣ ಮೊದಲು ಹೊಳೆಯುವ ಹೆಸರು ‘ಮೇಡಂ ಕ್ಯೂರಿ’ ಅವರದ್ದು. ಭಾರತದ ಸ್ವಾತಂತ್ರ್ಯ ಚಳುವಳಿಯ ಕೈದಿಯಾಗಿ ಜೈಲಿನಲ್ಲಿದ್ದ ಲಾಲ್ ಬಹದ್ದೂರ್ ಶಾಸ್ತ್ರೀ ಅವರ ಮೇಲೆ ನೊಬೆಲ್ ಪ್ರಶಸ್ತಿ ಪಡೆದ ವಿಜ್ಞಾನಿ ಮೇರಿ ಕ್ಯೂರಿ ಬದುಕು ಬಹಳ ಪ್ರಭಾವ ಬೀರಿತ್ತು.
ಅವರು ತುಂಬ ಕಷ್ಟಪಟ್ಟು ಮೇರಿ ಕ್ಯೂರಿ ಅವರ ಜೀವನ ಚರಿತ್ರೆಯ ಮೇಡಂ ಕ್ಯೂರಿ ಪುಸ್ತಕ ಪಡೆದರು. ಅದನ್ನು ತುಂಬ ಆಸಕ್ತಿಯಿಂದ ಹಿಂದಿ ಭಾಷೆಗೆ ಅನುವಾದಿಸಿ ಜೈಲಿನಲ್ಲಿದ್ದುಕೊಂಡೇ ಪ್ರಕಟಿಸಿದರು. ಮೇಡಂ ಕ್ಯೂರಿ ಬದುಕು ತಮಗೆ ಸೂರ್ತಿಯ ಭಗವತ್ ಗೀತೆಯೇ ಆಗಿತ್ತು ಎಂದು ಶಾಸ್ತ್ರೀಜೀಯವರು ಹೇಳಿದ ಮಾತು ಮೇಡಂ ಕ್ಯೂರಿ ಅವರ ಮಹಾನ್ ಬದುಕಿಗೆ ಸಾಕ್ಷಿಯಾ ಗಿದೆ. ಈಚೆಗೆ ಹೊಸದಿಲ್ಲಿಯಲ್ಲಿ ನಡೆದ ವಿಜ್ಞಾನ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಮೇರಿ ಕ್ಯೂರಿಯ ಬದುಕು ಹೋರಾಟ – ಸಾಧನೆ ಜಗತ್ತಿನ ಮಹಿಳೆಯರಿಗೆ ಸೂರ್ತಿ ನೀಡುವ ಕಥೆಯಾಗಿದೆ ಎಂದು ಬಣ್ಣಿಸಿದ್ದಾರೆ.
ಅವರ152ನೆಯ ಜನ್ಮ ವರ್ಷವನ್ನು ಈಗ ಜಗತ್ತಿನ ತುಂಬ ವಿಜ್ಞಾನದ ಹಬ್ಬವಾಗಿ ಮತ್ತು ಎಕ್ಸ್‌ರೇ ಸಪ್ತಾಹವಾಗಿ ಆಚರಿಸ ಲಾಗುತ್ತಿದೆ. ರಷ್ಯಾ ಸಾಮ್ರಾಜ್ಯದ ಚಕ್ರಾಧಿಪತ್ಯದ ದಬ್ಬಾಳಿಕೆಯಲ್ಲಿ ನಲುಗಿದ್ದ ಮಧ್ಯ ಯುರೋಪಿನ ಒಂದು ಪುಟ್ಟದೇಶವಾದ ಪೋಲೆಂಡ್‌ನಲ್ಲಿ ಮೇರಿ ಕ್ಯೂರಿ ನವೆಂಬರ್ 7, 1867ರಲ್ಲಿ ಜನಿಸಿದರು. ತಂದೆ ಪ್ಲಾಡಿಸ್ಯಾವ್ ಸ್ಲ್ಯೋಡೋವ್ನಿ, ತಾಯಿ ಬ್ರೋನಿಸ್ಲವಾ ಇಬ್ಬರೂ ವೃತ್ತಿಯಿಂದ ಅಧ್ಯಾಪಕರಾಗಿದ್ದರು. ಈ ದಂಪತಿಗೆ ಐದು ಜನ ಮಕ್ಕಳು. ಕೊನೆಯವಳೇ ಮೇರಿ. ಈಕೆ ಯನ್ನು ಎಲ್ಲರೂ ಪ್ರೀತಿಯಿಂದ ಮನ್ಯಾ ಎಂದು ಕರೆಯುತ್ತಿದ್ದರು.
ಮೇರಿ ಅವರ ತಂದೆ ತಾಯಿ ತುಂಬ ಬದ್ಧತೆಯ ಸರಳ ಜೀವನ ನಡೆಸುವವರಾಗಿದ್ದರು. ಆಡಳಿತದ ಕಿರುಕುಳದಿಂದ ಈ ಕುಟುಂಬ ಬಹಳ ತೊಂದರೆಗೆ ಸಿಲುಕಿತು. ತಾಯಿ ಕ್ಷಯರೋಗದಿಂದ ಬಳಲತೊಡಗಿದರು. ಇಬ್ಬರು ಸಹೋದರಿಯರು ವಿಷಮ ಜ್ವರಕ್ಕೆ ತುತ್ತಾಗಿ ಅಸುನೀಗಿದರು. ಮುಂದೆ ಕೆಲವೇ ದಿನಗಳಲ್ಲಿ ತಾಯಿಯೂ ನಿಧನರಾದರು. ಹೀಗೆ ಆಘಾತಗಳ ಸರಮಾಲೆಯನ್ನೇ ಮೇರಿ ಬಾಲ್ಯದಲ್ಲಿ ಅನುಭವಿಸಬೇಕಾಯಿತು.
ಮೇರಿ ಅವರು ಚೆನ್ನಾಗಿ ಓದಬೇಕು, ವಿಶ್ವವಿದ್ಯಾಲಯದ ಪದವಿಗಳನ್ನು ಪಡೆಯಬೇಕು ಎಂಬ ಅದಮ್ಯ ಆಸಕ್ತಿ ಬಾಲ್ಯದಲ್ಲಿಯೇಹೊಂದಿದ್ದರು. ಇದು ಅವರ ಬಹುದೊಡ್ಡ ಕನಸು ಕೂಡ ಆಗಿತ್ತು. ಅಧ್ಯಯನದಲ್ಲಿ ಅವರ ಏಕಾಗ್ರತೆ ಅವರ ವಿಶೇಷಗುಣ ವಾಗಿತ್ತು. ಅವರ ತಂದೆ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ವಿಜ್ಞಾನ ಪ್ರಯೋಗ ಉಪಕರಣಗಳು ಬಾಲ್ಯದಲ್ಲಿ ಮೇರಿಗೆ ಆಟದ ಆಟಿಕೆ ಗಳಾಗಿದ್ದವು. ಇದರಿಂದಾಗಿ ಅವರಿಗೆ ಸಹಜ ವಾಗಿ ವಿಜ್ಞಾನದಲ್ಲಿ ಕುತೂಹಲ ಬೆಳೆಯಿತು. ಆದರೆ ಆಗ ಹೆಣ್ಣು ಮಕ್ಕಳು ವಿಜ್ಞಾನ ಓದುವುದಕ್ಕೆ ಅವಕಾಶವಿರಲಿಲ್ಲ.
ಹೆಣ್ಣು ಮಕ್ಕಳು ವಿಜ್ಞಾನ ಕಲಿಯಕೂಡದು ಎಂದು ದೊರೆ ಕಟ್ಟಾಜ್ಞೆ ಮಾಡಿದ್ದರು. ಹೀಗಾಗಿ ಮೇರಿ ಮನೆಯಲ್ಲಿ ಗುಪ್ತವಾಗಿ ವಿಜ್ಞಾನ ಪುಸ್ತಕ ಓದುವುದನ್ನು, ತಮಗೆ ತಿಳಿದ ವಿಜ್ಞಾನ ಪ್ರಯೋಗಗಳನ್ನು ಮಾಡುತ್ತಿದ್ದರು. ಮೇರಿಯ ಅಕ್ಕ ಬ್ರೋನಾ ವೈದ್ಯಕೀಯ ಕಲಿಯಲು ಪ್ಯಾರಿಸ್‌ಗೆ ಹೋದರು. ಅಕ್ಕನಿಗೆ ಸಹಾಯ ಮಾಡುವುದಕ್ಕಾಗಿ ಮೇರಿ ಶ್ರೀಮಂತರ ಮನೆಯ ಕೆಲಸದ ವಳಾಗಿ ಕೆಲಸಮಾಡ ತೊಡಗಿದರು.
ತನಗೆ ಸಂಬಳ ರೂಪದಲ್ಲಿ ಪ್ರತಿ ತಿಂಗಳು ಬರುತ್ತಿದ್ದ400ರೂಬೆಲ್ ಅಕ್ಕನಿಗೆ ಕಳಿಸಿಕೊಡುತ್ತಿದ್ದರು. ತಮ್ಮ ಖರ್ಚಿಗೆ ಒಂದು ಪೈಸೆಯನ್ನೂ ಇಟ್ಟುಕೊಳ್ಳುತ್ತಿರಲಿಲ್ಲ. ಅಕ್ಕ ಕಲಿತರೆ ಸಾಕು ಎಂಬ ಹಂಬಲವನ್ನು ಅವರು ಹೊಂದಿದ್ದರು. ಬ್ರೋನಾ ಪ್ಯಾರಿಸ್ಸಿ ನಲ್ಲಿ ಓದು ಮುಗಿಸಿ ಅಲ್ಲಿಯ ಕ್ಯಾಸಿಮೀರ್ ಎಂಬವವರನ್ನು ಮದುವೆಯಾಗಿ ಆಸ್ಪತ್ರೆ ಆರಂಭಿಸಿದರು. ಮೇರಿಗೆ ವಿಜ್ಞಾನಓದುವುದಕ್ಕೆ ಅವಕಾಶ ಮಾಡಿಕೊಡಬೇಕು ಎಂದು ಅಕ್ಕ ಬ್ರೋನಾ ಮೇರಿ ಅವರನ್ನು ಪ್ಯಾರಿಸಿಗೆ ಆಮಂತ್ರಿಸಿದರು. ಇದು ಮೇರಿ ಅವರ ಬದುಕಿನ ಬಹುದೊಡ್ಡ ಟಿರ್ನಿಂಗ್ ಪಾಯಿಂಟ್ ಆಯಿತು.
1890ರಲ್ಲಿ ಮೇರಿ ಪ್ಯಾರಿಸ್ಸಿಗೆ ತೆರಳಿದರು. ಅಕ್ಕ ಮತ್ತು ಭಾವ ಇವರ ನೆರವಿನಿಂದ ಪ್ಯಾರೀಸ್‌ನ ಸೋಬನನ್ನಿ ವಿಶ್ವವಿದ್ಯಾಲಯ ದಲ್ಲಿ ಪ್ರವೇಶ ಪಡೆದರು. ಅಲ್ಲಿಯ ಸುಸಜ್ಜಿತ ಪ್ರಯೋಗಾಲಯ, ಗ್ರಂಥಾಲಯ ಮತ್ತು ಪ್ರೀತಿಯ ವಾತಾವರಣ ಮೇರಿಯ ಬೆಳವಣಿಗೆಗೆ ಮೆಟ್ಟಿಲುಗಳಾದವು. ಆಸಕ್ತಿಯಿಂದ ಒಂದೇ ತಿಂಗಳಲ್ಲಿ ಫ್ರೆಂಚ್ ಭಾಷೆಯನ್ನು ಕಲಿತರು.
ಇದರಿಂದ ಅವರ ಬೆಳವಣಿಗೆಯ ಹಾದಿ ಇನ್ನೂ ಸುಲಭವಾಯಿತು. ಅವರು ತುಂಬ ಏಕಾಗ್ರತೆಯಿಂದ ಅಧ್ಯಯನ ಮಾಡಿದ ಫಲವಾಗಿ1893ರಲ್ಲಿ ಭೌತಶಾಸ್ತ್ರದಲ್ಲಿ ಪ್ರಥಮ ಸ್ಥಾನ ಪಡೆದು ಉಚ್ಛ ಪದವಿ ಪರೀಕ್ಷೆ ಪಡೆದು ತೇರ್ಗಡೆ ಹೊಂದಿದರು. ಮುಂದೆ ಗಣಿತ ಅಧ್ಯಯನ ಮಾಡಿ1994ರಲ್ಲಿ ವಿಶ್ವವಿದ್ಯಾಲಯಕ್ಕೆ ದ್ವಿತೀಯ ಸ್ಥಾನ ಪಡೆದು ಪಾಸಾದರು. ಸಮಾರಂಭ ಒಂದರಲ್ಲಿ ಯುವ ವಿಜ್ಞಾನಿ ಪಿಯರಿ ಮತ್ತು ಕ್ಯೂರಿ ಅವರ ಭೇಟಿ ಆಕಸ್ಮಿಕವಾಗಿ ನಡೆಯಿತು.
ತಮ್ಮ ಅಧ್ಯಯನದ ಬಗ್ಗೆ ಚರ್ಚಿಸಿ ಇಬ್ಬರೂ ಆತ್ಮೀಯರಾದರು. ಜುಲೈ 26, 1896ರಂದು ಮೇರಿ ಹಾಗೂ ಪಿಯರಿ ಅವರ ವಿವಾಹ ನಡೆಯಿತು. ಈ ದಂಪತಿಗೆ ಮುದ್ದಾದ ಹೆಣ್ಣುಮಗು ಜನಿಸಿತು. ಈಕೆಗೆ ಐರೀನ್ ಎಂದು ನಾಮಕರಣ ಮಾಡಿದರು. ಮಗು ಜನಿಸಿದ ಕೆಲವೇ ದಿನಗಳಲ್ಲಿ ತಮ್ಮ ಆರೋಗ್ಯವನ್ನು ಗಮನಿಸದೇ ಸಂಶೋಧನೆಯಲ್ಲಿ ತೊಡಗಿದರು. ಪ್ಲಿಚ್‌ಬ್ಲೆಂಡ್ ಎಂಬ ಖನಿಜದಲ್ಲಿ ಥೋರಿಯಂ ಹಾಗೂ ಯುರೆನಿಯಂ ಧಾತುವಿನ ವಿಕಿರಣ ಶಕ್ತಿಯ ತೀವ್ರತೆಯನ್ನು ಗುರುತಿಸಿದರು.
ಅವರು ಹಗಲೂ ರಾತ್ರಿ ಪ್ರಯೋಗ ಮುಂದುವರಿಸಿದರು. ಅನೇಕ ಬಾರಿ ಅವರ ಪ್ರಯೋಗಾಲಯದಿಂದ ಮನೆಗೆ ಬರುತ್ತಿರಲಿಲ್ಲ.1898ರಲ್ಲಿ ಅವರು ಪೊಲೊನಿಯಮ್ ಮತ್ತು ರೇಡಿಯಂ ಎಂಬ ಎರಡು ಹೊಸ ಧಾತುಗಳನ್ನು ಕಂಡು ಹಿಡಿದರು. ಇದೇ ಅವಧಿ ಯಲ್ಲಿ34ವಿಜ್ಞಾನ ಪ್ರಬಂಧಗಳನ್ನು ಬರೆದರು. ಅವು ಅನೇಕ ವಿಜ್ಞಾನ ಸಂಚಿಕೆಗಳಲ್ಲಿ ಪ್ರಕಟವಾದವು. ಇವರ ಅಪೂರ್ವ ಸಾಧನೆಗಾಗಿ1903ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ಲಭಿಸಿತು. ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಪ್ರಥಮ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
1911ರಲ್ಲಿ ರಸಾಯನ ಶಾಸ್ತ್ರದಲ್ಲಿ ಎರಡನೆಯ ನೊಬೆಲ್ ಪ್ರಶಸ್ತಿ ಪ್ರಾಪ್ತವಾಯಿತು. ಅತ್ಯುನ್ನತ ಗೌರವದ ಪ್ರಶಸ್ತಿಯಾದನೂಬೆಲ್ ಅನ್ನು ಎರಡು ಬಾರಿ ಪಡೆದ ಕೆಲವರಲ್ಲಿ ಮೇಡಂ ಕ್ಯೂರಿಯೂ ಒಬ್ಬರು. ಅವರ ರೇಡಿಯಂ ಸಂಶೋಧನೆ ಇಂದುವೈದ್ಯಕೀಯ ರಂಗದಲ್ಲಿ ತುಂಬ ಉಪಯುಕ್ತವಾಗಿ ಬೆಳೆದಿದೆ. ಇದು ಎಕ್ಸ್‌ರೇ ಪ್ರಯೋಗಕ್ಕೆ ಉಪಯುಕ್ತವಾಗಿದೆ. ಮೇರಿ ಅವರೇ ತಮಗೆ ಲಭ್ಯವಿದ್ದ ಸೌಲಭ್ಯಗಳನ್ನು ಬಳಸಿಕೊಂಡು ಎಕ್ಸ್‌ರೇ ಯಂತ್ರವನ್ನು ತಯಾರಿಸಿದರು.
ಇದನ್ನು ಒಂದನೆಯ ಮಹಾ ಯುದ್ಧದಲ್ಲಿ ಗಾಯಗೊಂಡ ಸೈನಿಕರನ್ನು ಉಪಚರಿಸಲು ಬಳಸಲಾಯಿತು. ಇದು ಜಗತ್ತಿನ ಗಮನ ಸೆಳೆಯಿತು. ಮೇರಿಯವರ ಸಂಶೋಧನೆ ಮನುಕುಲದ ಆರೈಕೆಗೆ ವರದಾನವಾಯಿತು. ಜಗತ್ತಿನ ವಿಜ್ಞಾನ ಸಂಶೋಧನೆಯ ಚರಿತ್ರೆ ಯಲ್ಲಿ ಮೇರಿ ಕ್ಯೂರಿ ಅವರಿಗೆ ಅಗ್ರಸ್ಥಾನವಿದೆ. ಅವರ ಬಗ್ಗೆ ಜಗತ್ತಿನ ಪ್ರಸಿದ್ಧ ವಿಜ್ಞಾನಿಗಳಾದ ಅಲ್ಬರ್ಟ್ ಐನ್‌ಸ್ಟೆನ್ ಮತ್ತು ಮ್ಯಾಕ್ಸ್ ಪ್ಲೈಂಕ್‌ ಬಹಳ ಅಭಿಮಾನ ಹೊಂದಿದರು. ಈಗ ಪೋಲೆಂಡ್ ದೇಶದಲ್ಲಿ ಮೇರಿ ಕ್ಯೂರಿ ಹೆಸರಿನಲ್ಲಿ ವಿಶ್ವವಿದ್ಯಾಲಯ ತಲೆ ಎತ್ತಿದೆ. ಅವರು ತಮ್ಮ ಆರೋಗ್ಯವನ್ನು ಲೆಕ್ಕಿಸದೇ ವಿಕಿರಣ ಸಂಶೋಧನೆ ಮುಂದುವರಿಸಿದರು.
ಇದರಿಂದಾಗಿ ಅವರು ಕ್ಯಾನ್ಸರ್‌ಗೆ ತುತ್ತಾದರು. ಅವರು 1934 ಜುಲೈ 4 ರಂದು ತಮ್ಮ ಪ್ರಯೋಗಾಲಯದಲ್ಲಿಯೇ ಕೊನೆಯ ಉಸಿರು ಎಳೆದರು. ಆದರೆ ಅವರು ನೀಡಿದ ಎಕ್ಸರೇ ಬೆಳಕು ಸದಾ ಪ್ರಜ್ವಲಿಸುತ್ತಿದೆ.