ಇಷ್ಟಕ್ಕೂ ಬ್ರಾಹ್ಮಣರು ಬಿಟ್ಟಿ ಬಿದ್ದಿದ್ದಾರೆಯೇ ?
ಹಂಪಿ ಎಕ್ಸ್‌’ಪ್ರೆಸ್
ದೇವಿ ಮಹೇಶ್ವರ ಹಂಪಿನಾಯ್ಡು
ಬಿ.ಪಿ. ಧುತ್ತಗಿರಿ. ಇವರ ಹೆಸರು ಕನ್ನಡಿಗರಿಗೆ ಅಪರಿಚಿತ. ಆದರೆ ಇವರ ಸಂಪತ್ತಿಗೆ ಸವಾಲ್ ಮಾತ್ರ ಕನ್ನಡಿಗರಿಗೆ ಚಿರಪರಿಚಿತ.೧೯೭೪. ಇವರ ಮೂಲಕಥೆಯನ್ನಾಧರಿಸಿ ಅದೇ ಹೆಸರಿನಲ್ಲಿ ‘ಸಂಪತ್ತಿಗೆ ಸವಾಲ್’ ಚಲನಚಿತ್ರ ವನ್ನು ನಿರ್ಮಿಸಲು ನಿರ್ಮಾಪಕಎ.ಎನ್. ಮೂರ್ತಿ ಮತ್ತು ನಿರ್ದೇಶಕ ಶೇಷಗಿರಿರಾವ್ ಅವರು ಮುಂದಾದಾಗ ಕನ್ನಡ ಚಲನಚಿತ್ರವೇ ದಂಗಾಗಿತ್ತು. ಅದರಲ್ಲೂ, ರಾಜಣ್ಣನವರಂಥ ಸಂಭಾವಿತ ನಟರು ‘ಭದ್ರ’ನ ಪಾತ್ರವನ್ನು ನಿರ್ವಹಿಸಲು ಹಿಂಜರಿದಿದ್ದರು. ಏಕೆಂದರೆ ಈ ಚಿತ್ರದ ಕಥಾವಸ್ತುವೇ ಹಾಗಿತ್ತು.
ಮೇಲ್ಜಾತಿಯ ಸಾಹುಕಾರ ಸಿದ್ದಪ್ಪನನ್ನು ಎದುರಾಕಿಕೊಂಡು ಆತನ ದರ್ಪ ದುರಂಹಕಾರ ಗಳಿಗೆ ಸವಾಲಾಗಿ, ಬುದ್ದಿ ಕಲಿಸುವ ಮೊಂಡನ ಪಾತ್ರ. ಬೇವರ್ಸಿ ಹಳೇ ಬೇವರ್ಸಿ ಬಿಕನಾಸಿ ವಡ್ಡ ಮಾದ, ತಂದೆಯನ್ನೇ ಮಗ ಮನೆಹಾಳ ಎನ್ನುವುದು ಹೀಗೆಹಳ್ಳಿಯಲ್ಲಿನ ಸಹಜ ಬೈಗುಳ ಅವಾಚ್ಯ ಶಬ್ಧಗಳು ವರ್ಣ ಜಾತಿನಿಂದನೆ ವ್ಯಕ್ತಿನಿಂದನೆ ಒಳಗೊಂಡ ಕಥೆಯನ್ನು ಸಿನಿಮಾಮಾಡಿ ಗೆಲ್ಲುವುದು ಒಂದು ಸವಾಲಾಗಿತ್ತು.
ಆದರೆ ಅಂದು ಚಿ.ಉದಯಶಂಕರ್ ಅವರು ಈ ಚಿತ್ರದ ಮೂಲಕಥೆಯ ಆಶಯಕ್ಕೆ ಚ್ಯುತಿಯಾಗದಂತೆ ಸಮಾಜಕ್ಕೂ ತಪ್ಪು ಸಂದೇಶ ಹೋಗದಂತೆ ಯಾವ ಜಾತಿಗಳಿಗೂ ನೋವಾಗದಂತೆ ತಮ್ಮ ಸಾಮಾಜಿಕ ಬದ್ಧತೆ ಪಾಂಡಿತ್ಯದಿಂದ ಸಂಭಾಷಣೆ ಸಾಹಿತ್ಯವನ್ನು ರಚಿಸಿದರು. ಅದರಲ್ಲೂ ಮನುಷ್ಯನ ನೀಚತನವನ್ನು ಬಗ್ಗುಬಡಿದು ಪ್ರಾಣಿಗಳೇ ಮೇಲೆಂದು ಸಾರುವ ‘ಯಾರೇಕೂಗಾಡಲಿ’ ಗೀತೆಯನ್ನು ರಾಜ್ ಅವರು ಹಾಡಲು ನಿರಾಕರಿಸಿದ್ದರು. ‘ಈ ಹಾಡು ಹಾಡಿದರೆ ಜನ ಏನು ತಿಳಿದುಕೊಳ್ಳುತ್ತಾರೆಯೋ ಏನೋ’ ಎಂಬ ಕಳವಳ ವ್ಯಕ್ತಪಡಿಸಿದ್ದರು.
ಆದರೂ ಬಾಲಕೃಷ್ಣ, ಎಂ.ವಿ.ರಾಜಮ್ಮ, ಅವರೆಲ್ಲರೂ ಸೇರಿ ಇದರಲ್ಲಿ ತಪ್ಪೇನಿಲ್ಲಾ, ಸಮಾಜದಲ್ಲಿನ ಡೊಂಕುಗಳನ್ನೇ ಬರೆದಿದ್ದಾರೆ ನೀವು ಧೈರ್ಯವಾಗಿ ಹಾಡಿ’ ಎಂದು ಧೈರ್ಯ ತುಂಬಿ ಹಾಡಿಸಿದರು. ಇಂದು ಕನ್ನಡ ಚಿತ್ರರಂಗದಲ್ಲಿ ಸಂಪತ್ತಿಗೆ ಸವಾಲ್ ಚಿತ್ರದ ಸಂಭಾಷಣೆ ರಾಜ್ ಅವರ ವೀರಭದ್ರ ಜತೆಗೆ ಪ್ರತಿಯೊಂದು ಪಾತ್ರವೂ ಸಮಾಜದ ಪ್ರತಿಯೊಬ್ಬರ ಮೆಚ್ಚುಗೆ ಪಡೆದು ಮೈಲುಗಲ್ಲಾಗಿದ್ದು ಇತಿಹಾಸ.
ಇನ್ನು ಟಿ.ವಿ.ಸಿಂಗ್ ಠಾಕುರ್ ನಿರ್ದೇಶನದ ‘ಮಂತ್ರಾಲಯ ಮಹಾತ್ಮೆ’ ಚಿತ್ರದಲ್ಲಿ ಬ್ರಾಹ್ಮಣರಾದ ರಾಘವೇಂದ್ರಸ್ವಾಮಿಯ ಪಾತ್ರವನ್ನು ರಾಜ್ ಮಾಡುತ್ತಾರೆ ಎಂದು ತಿಳಿದ ಅನೇಕ ಮಂದಿ ಅವರನ್ನು ‘ಮಾಂಸ ಕೋಳಿ ತಿನ್ನುವ ಈತ ರಾಘವೇಂದ್ರಸ್ವಾಮಿಯಾಗುವುದು ಸಾಧ್ಯವೇ’ ಎಂದಿದ್ದರು. ಆದರೆ ರಾಜ್ ಅವರಿಗೆ ಬ್ರಾಹ್ಮಣತ್ವ ವೆಂದರೆ ಅದೊಂದು ವ್ರತವೆಂಬ ಅನುಭೂತಿ ಇತ್ತು. ಆ ಪಾತ್ರಕ್ಕಾಗಿಯೇ ಮಾಂಸಾಹಾರವನ್ನು ತ್ಯಜಿಸಿ ಧ್ಯಾನ ವ್ರತ, ಮಡಿ ಆಚರಿಸಿಕೊಂಡು ರಾಘವೇಂದ್ರ ಸ್ವಾಮಿಗಳ ಪರಕಾಯಪ್ರವೇಶ ಮಾಡಿ ತೋರಿಸಿದರು.
ಇದು, ಪ್ರಾಥಮಿಕ ಶಾಲೆಯ ಓದನ್ನೂ ಪೂರೈಸದ ರಾಜ್ ಅವರಲ್ಲಿದ್ದ ಬ್ರಾಹ್ಮಣತ್ವದ ಮೇಲಿನ ಶ್ರದ್ಧೆ ಭಕ್ತಿ ಗೌರವ. ಅದಕ್ಕೇ ಹೇಳುವುದು ಸಿನಿಮಾ ಕೇವಲ ಮನರಂಜನೆ ಯಲ್ಲಾ, ಅದು ಸಾಮಾಜಿಕ ಕಳಕಳಿ, ಬದ್ಧತೆ, ಹೊಣೆಗಾರಿಕೆಗಳುಳ್ಳ ಮಾಧ್ಯಮವೆಂದು. ಖಾಲಿಪೋಲಿ ಗಳು ತಿಕ್ಕಲು ತೆವಲುಗಳಿಗಾಗಿ ಅಯೋಗ್ಯರು ಅವಿವೇಕಿ ಗಳೆಲ್ಲಾ ಮನಸೋಇಚ್ಛೆಇಂದು ಚಿತ್ರರಂಗವನ್ನು ಆಳುತ್ತಿರುವುದು ದುರಂತ.
ಆಗೆಲ್ಲಾ ಸಮಾಜವನ್ನೇ ಹಾಳುಮಾಡುವಂಥ ಜಾತಿ ಜಾಗೃತಿಗಳಿರಲಿಲ್ಲ. ಬ್ರಾಹ್ಮಣರಾಗಲಿ ದಲಿತರಾಗಲಿ ಮತ್ತಾವುದೇ ಜಾತಿಯಾಗಲಿ ಜನ ಇದ್ದದ್ದನ್ನು ಇದ್ದಾಗೆಯೇ ನೋಡಿ ಅರಿತು ಅದರಲ್ಲಿನ ಸರಿತಪ್ಪು ಗಳನ್ನು ಗ್ರಹಿಸಿ ತಿದ್ದಿಕೊಳ್ಳುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ರಾಜಕಾರಣದ ಅಡ್ಡಪರಿಣಾಮ ದಿಂದಾಗಿ ಪ್ರತಿಯೊಂದು ಮಠಗಳಿಗೂ ಜಾತಿಜನ ಗಳಿಗೂ ತಮ್ಮ ಜಾತಿಗಳ ಮೇಲೆ ಅಪರಿಮಿತ ಅಭಿಮಾನ ಜಾಗೃತವಾಗಿಬಿಟ್ಟಿದೆ.
ಕನ್ನಡದ ಬಿಗ್‌ಬಾಸ್ ಶೋನಲ್ಲಿ ಹಿರಿಯನಟ ಸಿಹಿ ಕಹಿ ಚಂದ್ರು ಪ್ರತಿಸ್ಪರ್ಧಿಗೆ ಆಡುಮಾತಿನಲ್ಲಿ ‘ವಡ್ಡ’ ಎಂದು ಕರೆದದ್ದಕ್ಕೇ ಜನ ಪ್ರತಿಕ್ರಿಯಿಸಿ, ಕೂಡಲೇ ಕ್ಷಮೆಕೇಳುವಂತೆ ಮಾಡಿದ್ದರು. ಡ್ರಾಮ ಜೂನಿಯರ್ಸ್ ಶೋನಲ್ಲಿ ಪುಟ್ಟಮಕ್ಕಳ ಪ್ರದರ್ಶನ ದಲ್ಲಿ ಬ್ರಾಹ್ಮಣರನ್ನು ಹೀಯಾಳಿಸುವಂಥ ಸನ್ನಿವೇಶ ಜರುಗಿದಾಗ ತೀರ್ಪುಗಾರರಾಗಿದ್ದ ಟಿ.ಎನ್. ಸೀತಾರಾಂ ಅವರು ಶೋನಿಂದ ನಿರ್ಗಮಿಸಿದರು. ಬಾಹುಬಲಿ ಚಿತ್ರದ ಕಾಲ್ಪನಿಕ ‘ಕಾಲಕೇಯ’ ಪಾತ್ರವನ್ನೂ ಜಾತಿಯೊಂದಿಗೆ ಸಮೀಕರಿಸಿ ನೋಡಿದರು.
ರಾಕ್ಷಸ ವರ್ತನೆಯ ಮಹಿಷಾಸುರನಾಗಲಿ, ನರಹಂತಕ ವೀರಪ್ಪನ್ ಆಗಲಿ, ಒಸಾಮ ಬಿನ್ ಲಾಡೆನ್ ಸಂತತಿಯ ಭಯೋತ್ಪಾದಕ ರಾಗಲಿ ಅವರ ಜಾತಿಧರ್ಮಗಳಿಗೆ ಮೊದಲು ಮರ್ಯಾದೆ ಗೌರವ ನೀಡಬೇಕಾದ ದುರ್ಗತಿ ತಲೆದೋರಿದೆ. ಇನ್ನು ‘ರಿಯಾಲಿಟಿ’ಗೆ ಬಂದರೆ ಇಂದು ಪ್ರತಿಯೊಂದು ಜಾತಿಗಳೂ ಒಂದೊಂದು ಸಾಮ್ರಾಜ್ಯ ಕಟ್ಟಿಕೊಳ್ಳುವ ಧಾವಂತ ದಲ್ಲಿದೆ. ಧರ್ಮ ರಕ್ಷಣೆಯ ಕೇಸರಿ ಕಾಯ ಮೂಲಭೂತ ಕರ್ತವ್ಯವು ಹಳ್ಳಹಿಡಿದು ಕೇವಲ ಜಾತಿರಕ್ಷಣೆಯ ರಾಜಕೀಯಕ್ಕಿಳಿದಿವೆ.
ಹೀಗಾಗಿ ಇಂದು ಜಾತಿಗಳ ಮೇಲೆ ಕೂದಲೆಳೆಯಷ್ಟು ಅಪಚಾರ ವಾದರೂ ಯಾರೂ ಸಹಿಸಿಕೊಳ್ಳದಂಥ ಸೂಕ್ಷ್ಮ ಮತ್ತು ಅಪಾಯದ ಸ್ಥಿತಿಯಲ್ಲಿದೆ. ಆದ್ದರಿಂದ ಇಂದು ಮಕ್ಕಳಾಗಲಿ ಮೇದಾವಿಗಳಾಗಲಿ ಮಾತನಾಡುವಾಗ ಬಹಳ ಎಚ್ಚರಿಕೆಯಿಂದ ಮಾತನಾಡಬೇಕಿದೆ. ಇತ್ತೀಚೆಗೆ ಬಿಡಗಡೆಯಾದ ಪೊಗರು ಸಿನಿಮಾ ವಿಚಾರಕ್ಕೆ ಬಂದರೆ ಆ ಚಿತ್ರತಂಡದವರೆಲ್ಲರೂ ಪ್ರಜ್ಞಾವಂತರೇ.
ಕಳೆದ ವರ್ಷ ಕರೋನಾ ಸಂಕಷ್ಟದಲ್ಲಿ ನಿರ್ಮಾಣಗೊಂಡ ಪವನ್ ಒಡೆಯರ್ ನಿರ್ದೇಶನದ ‘ಬದಲಾಗು ನೀ’ ಗೀತೆಯಲ್ಲಿಕಾಣಿಸಿಕೊಂಡ ನಟರುಗಳು ಕ್ರೀಡಾಪಟುಗಳು ರಾಜಕಾರಣಿಗಳಿಗಿಂತ ಹೆಚ್ಚು ಗಮನಸೆಳೆದ ನಟ ಧೃವ ಸರ್ಜಾ. ಏಕೆಂದರೆ ಧೃವ ಸರ್ಜಾ ಕರೋನ ಜಾಗೃತಿ ಮಾತುಗಳನ್ನಾಡಿ ಕೊನೆಗೆ ‘ಜೈ ಶ್ರೀರಾಮ್ ಜೈ ಆಂಜನೇಯ’ ಎಂದಾಗಲೇ ಅವರಲ್ಲಿನ ಭಕ್ತಿ ಆಸ್ತಿಕತೆ ಸಂಸ್ಕಾರವನ್ನು ಪರಿಚಯಿಸಿತ್ತು. ಧೃವ ಸರ್ಜಾ ನೇರವಾಗಿ ಅರ್ಜುನ್ ಸರ್ಜಾ ಅವರ ಸಂಸ್ಕಾರವುಳ್ಳ ವ್ಯಕ್ತಿ. ಶ್ರೀರಾಮ ಹನುಮ ಗೋವು ಗುಡಿಗಳ ಅನುಭೂತಿಯುಳ್ಳ ಕುಟುಂಬದವರು. ಆದರೆ ಇಂದು ಪೊಗರು ಚಿತ್ರದಲ್ಲ ಅವರ ಪಾತ್ರದ ಸುತ್ತ ಚಿತ್ರಿಸಲಾದ ದೃಶ್ಯಗಳು ಸಂಭಾಷಣೆಗಳು ನೇರ ಬ್ರಾಹ್ಮಣತ್ವವನ್ನೇ ಗುರಿಯಾಗಿಸಿಕೊಂಡಂತೆ ಕಂಡಿರುವುದು ನಿಜಕ್ಕೂ ಆಶ್ಚರ್ಯ.
ಒಂದು ಚಿತ್ರಕಥೆ ಸಿದ್ದವಾಗಬೇಕಾದರೆ ಅದರಲ್ಲಿ ನಿರ್ದೇಶಕ ನಿರ್ಮಾಪಕ ನಾಯಕನಟನ ಅಭಿಪ್ರಾಯಗಳು ಧೋರಣೆಗಳೂ ನಿರ್ಧಾರವಾಗುತ್ತದೆ. ಈ ಚಿತ್ರದ ವಿಚಾರವಾಗಿ ಹೇಳಬೇಕಾದರೆ ನಿರ್ಮಾಪಕ ಗಂಗಾಧರ್ ಅವರು ಚಿತ್ರದ ಪೂರ್ಣ ನಂಬಿಕೆಮತ್ತು ಜವಾಬ್ದಾರಿಯನ್ನು ನಿರ್ದೇಶಕ ನಂದಕಿಶೋರ್ ಅವರಿಗೆ ನೀಡಿದ್ದರೆ ಸುಳ್ಳಲ್ಲ. ನಂದಕಿಶೋರ್ ಸಹ ಸಭ್ಯನಟ ಸುಽರ್ ಅವರ ಪುತ್ರ. ಅವರಿಗೂ ಸಾಮಾಜಿಕ ಬದ್ಧತೆಗಳಿವೆ ಎಂದೇ ಅಂದುಕೊಳ್ಳೋಣ. ಚಿತ್ರದ ನಾಯಕ ಪಾತ್ರದ ಒರಟುತನ ಮುಗ್ಧತನ ಇದರ ಕಲ್ಪನೆ ಕಥೆ ನಂದಕಿಶೋರ್ ಅವರದ್ದೇ ಅಗಿರಬಹುದು. ಇನ್ನು ಇಷ್ಟೆಲ್ಲಾ ರಾದ್ಧಾಂತಕ್ಕೆ ಕಾರಣವಾದ ಸಂಭಾಷಣೆ ಬರೆದವರು ಪ್ರಶಾಂತ ರಾಜಪ್ಪ ಎಂಬ ಸಂಭಾಷಣೆಕಾರ.
ಒಂದು ಚಿತ್ರಕ್ಕೆ ಸಂಭಾಷಣೆ ಬರೆಯಬೇಕೆಂದರೆ ಆ ಪಾತ್ರದ ವ್ಯಕ್ತಿತ್ವ ಆ ಪಾತ್ರದ ಮೇಲೆ ಇನ್ನಿತರ ಪಾತ್ರಗಳ ನಡವಳಿಕೆ ಪ್ರಭಾವಗಳನ್ನು ಆಧರಿಸಿ ಆ ಚಿತ್ರದ ಕಥೆಗೆ ಪೂರಕವಾಗಿ ಪದಗಳನ್ನು ಬಳಸಬೇಕಾಗುತ್ತದೆ. ಧೃವ ಸರ್ಜಾ ಪಾತ್ರದ ಒರಟುತನ ಅದರಲ್ಲಿನ ಒಳ್ಳೆಯತನ, ಮೊದಲು ಕೆಟ್ಟವನಾಗಿ ನಂತರ ಒಳ್ಳೆಯವ ನಾಗುವುದು ಹೀಗೆ. ಇಂಥ ನೂರಾರು ಪಾತ್ರಗಳ ಚಿತ್ರಗಳನ್ನುನಾವು ಹೆಸರಿಸಬಹುದು. ಆದರೆ ಪೊಗರಿನಲ್ಲಿ ಬ್ರಾಹ್ಮಣರನ್ನು ಇಷ್ಟೊಂದು ಅವಹೇಳನ ಮಾಡುವ ಸಂಭಾಷಣೆ ಬರೆಯಲುಪ್ರಶಾಂತ್ ರಾಜಪ್ಪನಿಗೆ ಅಂಥ ಪ್ರಚೋದನೆ ಸ್ಫೂಸೂರ್ತಿ ಯಾದರೂ ಏನು ಎಂಬುದು ಇಲ್ಲಿ ಗಮನಾರ್ಹ.
ಕೆಲ ಸಂದರ್ಭದಲ್ಲಿ ಸಂಭಾಷಣೆಕಾರನ ವೈಯಕ್ತಿಕ ಧೋರಣೆ, ಆತನ ಪೂರ್ವಗ್ರಹ ಚಿಂತನೆಗಳೂ ಚಿತ್ರದ ಸಂಭಾಷಣೆಯ ಮೇಲೆ ಪ್ರಭಾವ ಬೀರುತ್ತದೆ. ಪ್ರಶಾಂತ ರಾಜಪ್ಪ ನಂಥವರು ಜನ ಸಿಳ್ಳೆ ಹೊಡೆಯುವಂಥ ಸಂಭಾಷಣೆ ಬರೆದು ತನ್ನಲ್ಲಿರುವ ಪ್ರತಿಭೆಯನ್ನು ತೋರಿಸಿಕೊಳ್ಳುವ ಉತ್ಸಾಹದಲ್ಲಿ ಬ್ರಾಹ್ಮಣರನ್ನು ಹಿಗ್ಗಾಮಗ್ಗ ಅವಮಾನಿಸುವ ಸ್ವಾತಂತ್ರ್ಯ ಪಡೆದಿದ್ದಾರೆಂದರೆ ಬ್ರಾಹ್ಮಣರೇನು ಬಿಟ್ಟಿಬಿದ್ದಿದ್ದಾರೆಯೇ?.
ಹೋಗಲಿ, ನಿರ್ದೇಶಕ ನಂದಕಿಶೋರ್ ನಟ ಧೃವ ಸರ್ಜಾ ಅವರಾದರೂ ‘ಏ ಬೇಡ ಮಗಾ, ಇಂಥದ್ದನೆಲ್ಲಾ ತೋರಿಸವ ಕಾಲ ಇದಲ್ಲ, ಜನ ಹುಷಾರಾಗಿದ್ದಾರೆ. ಹೀಗೆಲ್ಲಾ ಸಂಭಾಷಣೆ ದೃಶ್ಯಗಳನ್ನು ತುರುಕುವುದು ಬೇಡ. ಇದನ್ನೇ ಬೇರೆ ರೀತಿಯಲ್ಲಿ ಯಾರಿಗೂ ನೋವಾಗದಂತೆ ತೋರಿಸುವ ಪ್ರಯತ್ನ ಮಾಡೋಣ’ ಎಂಬ ಕಳಕಳಿ ತೋರಬಹುದಿತ್ತು. ಅಥವಾ ಧೃವಸರ್ಜಾ ಅವರಂಥ ನಟರ ಮೇಲೆಯೇ ಇಡೀ ಚಿತ್ರ ನಿಂತಿರುವಾಗ ಚಿತ್ರೀಕರಣದ ಸಮಯ ದಲ್ಲಾದರೂ ಇಂಥ ಯಡವಟ್ಟುಗಳು ದೃಶ್ಯಗಳು ಸಂಭಾಷಣೆಗಳು ಬೇಡ ಬದಲಾಯಿಸಿ ಎಂದು ಹೇಳಿದ್ದರೂ ನಂದ ಕಿಶೋರ್ ಆಗಲಿ ನಿರ್ಮಾಪಕರಾಗಲಿ ಅಲ್ಲಗಳೆಯುವಂತಿರಲಿಲ್ಲ.
ಹೀಗಾಗಿ ಬ್ರಾಹ್ಮಣರ ಅವಹೇಳನ ಸಂಭಾಷಣೆ, ದೃಶ್ಯಗಳು ಪ್ರಜ್ಞಾಪೂರ್ವಕವಾಗಿಯೇ ಚಿತ್ರಿಸಲಾಗಿದೆಯೆಂದು ಮೇಲ್ನೋಟಕ್ಕೆಸ್ಪಷ್ಟವಾಗುತ್ತದೆ. ಇದೇ ಪ್ರಯತ್ನವನ್ನು ಸಮಾಜದ ಇನ್ನಿತರೆ ಜಾತಿಗಳ ಮೇಲೆ ಪ್ರಯೋಗಿಸಿ ದ್ದಿದ್ದರೆ ಈ ಚಿತ್ರತಂಡಕ್ಕೆ ಎಂಥಭಯಾನಕ ಅನುಭವ ವಾಗುತ್ತಿತೆಂದು ಹೇಳಬೇಕಿಲ್ಲ. ಇಲ್ಲಿ ಸೆನ್ಸಾರ್ ಮಂಡಳಿಯ ಅಸ್ತಿತ್ವವೇನು ಎಂಬ ಪ್ರಶ್ನೆ ಮತ್ತು ಸಂಶಯವೂ ಹುಟ್ಟಿಕೊಳ್ಳುತ್ತದೆ. ಇನ್ನು, ಧೃವ ಸರ್ಜಾ ಪಾತ್ರಕ್ಕೆ ಒಂದು ಜಾತಿಯ ಪಟ್ಟಿ ಅಂಟಿಸಿ, ‘ಅಯ್ಯೋ ಇಂಥ ಜಾತಿಯ ಪಾತ್ರದ ನಾಯಕ ಹೀಗೆಲ್ಲಾ ಒರಟಾಗಿ ಅಸಹ್ಯವಾಗಿ ಸಮಾಜ ವಿರೋಧಿಯಾಗಿ ವರ್ತಿಸುವ ಗುಣದವನಾಗಿ ತೋರಿಸಿದ್ದಾರೆ.
ಇದು ನಮ್ಮ ಜಾತಿಗೆ ಮಾಡಿದ ಅವಮಾನ, ಕೂಡಲೇ ಈ ಚಿತ್ರವನ್ನು ನಿಷೇಧಿಸಿ’ ಎಂದು ಯಾವನೂ ಹೇಳುವುದಿಲ್ಲ. ಇಂಥ ಪಾತ್ರಗಳನ್ನು ಮಕ್ಕಳೂ ಸಹ ನೋಡಿ ಆನಂದಿಸಿ ಮನೋರಂಜನೆ ‘ಮನೋವಿಕಾಸ’ (!) ಪಡೆಯಬೇಕು. ಅಲ್ಲವೇ?. ನೆನಪಿರಲಿ, ಹೆಂಡ ಬಸಿಯುವ ವೃತ್ತಿ ಧರ್ಮದ ಈಡಿಗ ಸಮಾಜದವರಾದ ಡಾ.ರಾಜ್ ಅವರು ತಮ್ಮ ಬೀಗರಾದ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದ ಕಾಲದಲ್ಲೇ ‘ಜೀವನಚೈತ್ರ’ ಎಂಬ ಕಾದಂಬರಿ ಆಧಾರಿತ ಕುಡಿತದ ದುಷ್ಟ ಪರಿಣಾಮಗಳ ವಿರುದ್ಧ ದಂಗೆ ಏಳುವಂಥ ಚಿತ್ರವನ್ನು ಸಮಾಜಕ್ಕೆ ನೀಡಿ ಸಾರಾಯಿ ಅಂಗಡಿಗಳಿಗೆ ಬೆಂಕಿಹಚ್ಚುವಷ್ಟು ಪ್ರಭಾವ ಬೀರಿದ್ದರು.
ಇಂಥ ಗಂಡೆದೆ ಸಾಮಾಜಿಕ ಬದ್ಧತೆ ಇಂದು ಯಾವ ‘ಮನುಷ್ಯನಿಗಾದರು’ ಇದೆಯೇ. ಆ ಚಿತ್ರದಲ್ಲಿ ರಾಜ್ ಪಾತ್ರ ಜೋಡಿದಾರ ವಿಶ್ವನಾಥ ಅವರ ಮನೆಯಲ್ಲೇ ಗುಂಡಿನ ಪಾರ್ಟಿ ಮಾಡುತ್ತಿದ್ದರೆ ಅದನ್ನು ಧ್ವಂಸಗೊಳಿಸಿ ಕುಡುಕರನ್ನು ಹೊರಹಾಕಿ ಸ್ವಂತ ಮಕ್ಕಳಿಗೆ ಉಗಿಯುವ ಸನ್ನಿವೇಶದೆಯಲ್ಲಾ, ಈಗಲೂ ಜನ ಸಿಳ್ಳೆ ಚಪ್ಪಾಳೆ ಹೊಡೆದು ಸಂಭ್ರಮಿಸುತ್ತಾರೆ. ಈಗಿನ ಪ್ರಶಾಂತರಾಜಪ್ಪನಂಥ ಅತ್ಯುತ್ಸಾಹಗಳಾಗಿದ್ದರೆ ಆ ಸನ್ನಿವೇಶದಲ್ಲಿ ‘ಅಮ್ಮಾ ಅಕ್ಕಾ..’ ಎಂದೆಲ್ಲಾ ಬರೆದು ಕುಡುಕರೇ ಸಿಳ್ಳೆ ಚಪ್ಪಾಳೆಹೊಡೆದು ದಂಗೆಯೆದ್ದು ಜೀವನಚೈತ್ರವನ್ನೇ ನಿಷೇಧಿಸಿ ಎಂದು ಹೋರಾಟ ಮಾಡಿಬಿಡುವಂತೆ ಸಂಭಾಷಣೆ ಬರೆಯುತ್ತಿದ್ದ ರೇನೋ. ಅದೇ ನೋಡಿ ಚಿ. ಉದಯಶಂಕರ್, ದೊರೆ ಭಗವಾನ್ ಮತ್ತು ಈಗಿನ ‘ಏನುಬೇಕಾದರೂ’ ಮಾಡಬಹುದೆಂದುಅಂದುಕೊಂಡಿರುವ ಮಂದಿ ಗಳಿಗಿರುವ ವ್ಯತ್ಯಾಸ.
ಪ್ರಶಾಂತ ರಾಜಪ್ಪನಂಥವರು ತಿಳಿದುಕೊಳ್ಳ ಬೇಕಾದದ್ದೇನೆಂದರೆ ಒಂದು ಜಾತಿಯನ್ನು ನಿಂದಿಸಿ ಸಂಭಾಷಣೆ ಬರೆದು ಸಿಳ್ಳೆಚಪ್ಪಾಳೆ ಗಿಟ್ಟಿಸುವುದು ದೊಡ್ಡದಲ್ಲ. ಅಂಥ ಸಾವಿರ ಮಂದಿ ‘ಪ್ರತಿಭಾವಂತರು’ ಹಾದಿಬೀದಿಯಲ್ಲಿ ಸಿಗುತ್ತಾರೆ. ಆದರೆಸಿನಿಮಾ ವನ್ನು ಎಲ್ಲಾ ಜಾತಿಭೇದಗಳಿಲ್ಲದೆ ಸಿನಿಮಾವನ್ನು ನೋಡಿ ಒಪ್ಪಿಕೊಳ್ಳುತ್ತಾರಲ್ಲಾ ಅದು ನಿಜವಾದ ಪ್ರತಿಭೆ.ಸದ್ಯದ ಕನ್ನಡ ಚಲನಚಿತ್ರರಂಗದ ಪರಿಸ್ಥಿತಿ ನೋಡಿದರೆ ಅಂಥ ಪ್ರತಿಭಾವಂತ, ಜ್ಞಾನವುಳ್ಳ ಸಂಭಾಷಣೆ ಕಾರರಾರೂ ಕಾಣ ಸಿಗುತ್ತಿಲ್ಲ.
ಸಿಗುತ್ತಿರು ವವರೆಲ್ಲಾ ಇಂಥ ‘ಆಕ್ಸಿಡೆಂಟ್’ ‘ಹಿಟ್ ಅಂಡ್ ರನ್’ ಸಾಹಿತಿಗಳೂ, ಚಿತ್ರೀಕರಣದ ದಿನ ಸಂಭಾಷಣೆ ಬರೆಯುವ ‘ಮೇದಾವಿ ಗಳೇ’. ಕುರುಕ್ಷೇತ್ರ ದಂಥ ಪೌರಾಣಿಕ ಚಿತ್ರಕ್ಕೆ ತೆಲುಗಿನ ಜೆ.ಕೆ. ಭಾರವಿ ಅವರಿಂದ ತೆಲುಗಿನಲ್ಲಿ ಸಂಭಾಷಣೆ ಬರೆಯಿಸಿ ನಾಗೇಂದ್ರ ಪ್ರಸಾದ ರನ್ನು ಜತೆಗೂಡಿಸಿದರೆಂದರೆ ನಮ್ಮಲ್ಲಿ ಸಾಹಿತ್ಯ ಪ್ರತಿಭೆಗಳ ಕೊರತೆ ಎಷ್ಟಿರಬಹುದು ಯೋಚಿಸಿ? ಈಗ ನಿರ್ದೇಶಕ ನಂದಕಿಶೋರ್ ಮತ್ತು ಧೃವ ಸರ್ಜಾ ಇಬ್ಬರೂ ಕ್ಷಮೆಯಾಚಿಸಿ ವಿವಾದಿತ ದೃಶ್ಯ ಗಳನ್ನು ಕೈಬಿಟ್ಟಿರಬಹುದು. ಆದರೆ ಮಾಡಬಾರದ್ದು ಮಾಡಿ ಕ್ಷಮೆಯಾಚಿಸುವುದು ಪ್ರಜ್ಞಾವಂತರ ಲಕ್ಷಣವಲ್ಲ.
‘ಈ ಚಿತ್ರದಲ್ಲಿ ಬರುವ ಸನ್ನಿವೇಶಗಳು ಪಾತ್ರ ಗಳು ಎಲ್ಲವೂ ಕಾಲ್ಪನಿಕ, ಯಾರನ್ನೂ ನೋಯಿಸುವ ಉದ್ದೇಶ ಇಲ್ಲ’ ಎಂದು ತೋರಿಸುವುದು ಮತ್ತು ಮದ್ಯಪಾನ, ಧೂಮಪಾನದ ದೃಶ್ಯಗಳನ್ನು ವೈಭವೀಕರಿಸಿ ಪರದೆಯ ಮೇಲೆ ಶಾಸನಬದ್ಧ ಎಚ್ಚರಿಕೆ ನೀಡುವುದೂ ಮತ್ತು ಬಾಹ್ಮಣರ ಪಾತ್ರವನ್ನು ಸೃಷ್ಟಿಸಿ ಅವರನ್ನು ಅವಮಾನಿಸಿ ಮಜಾಮಾಡಿ ಈಗ ಕ್ಷಮೆಯಾಚಿಸು ವುದು ಎಲ್ಲವೂ ಒಂದೇ.
ಬ್ರಾಹ್ಮಣರೇ ಆದ ಉಪೇಂದ್ರ ಅವರು ‘ಓಂ’ ಚಿತ್ರದಲ್ಲಿ ಬ್ರಾಹ್ಮಣ ಹುಡುಗನೊಬ್ಬ ಸಂದರ್ಭಕ್ಕೆ ಸಿಲುಕಿ ರೌಡಿಯಾಗುವುದನ್ನು ತೋರಿಸಿ ದಾಗಲೂ ರಾಜ್ ಮತ್ತು ವರದರಾಜ್ ಅವರೂ ಆಕ್ಷೇಪಿಸಿದ್ದರು. ಆದರೆ ಆ ಚಿತ್ರಲ್ಲಿ ರೌಡಿಸಂ ತ್ಯಜಿಸುವಂಥ ಉತ್ತಮವಾದ ಸಾಮಾಜಿಕ ಸಂದೇಶವನ್ನು ನೀಡುವುದರ ಮೂಲಕ ಆ ಚಿತ್ರ ಗೆದ್ದಿತ್ತು. ‘ಎ’ ಚಿತ್ರದಲ್ಲಿ ಗಣೇಶ ಮೂರ್ತಿ ಯೊಂದಿಗೆ ಅಸಭ್ಯವಾಗಿ ಮಾತನಾಡಿ ವಿಗ್ರಹವನ್ನು ಬಾವಿಗೆ ಎಸೆಯುವುದು, ‘ಉಪೇಂದ್ರ’ ಚಿತ್ರದಲ್ಲಿ ಪೂಜಾರಿಗೆ ವಿಸ್ಕಿ ಕುಡಿಸುವುದು, ರಕ್ತಕಣ್ಣೀರು ಚಿತ್ರದಲ್ಲೂ ಅನಾಗರಿಕನಾಗಿ ಸುಸಂಸ್ಕೃತ ಹೆಂಡತಿ, ತಾಯಿಯನ್ನು ಅವಮಾನಿಸುವುದು ಇಂಥದ್ದನೆಲ್ಲಾ ಜನ ನೋಡಿ ಸಹಿಸಿಕೊಂಡು ಪ್ರೋತ್ಸಾಹಿಸಿದ್ದಾರೆ.
ಆದರೆ ಈಗ ಸಮಾಜ ಮೊದಲಿನಂತಿಲ್ಲ. ಸಿದ್ದರಾಮಯ್ಯ ನಿರಂತರ ಹಿಂದೂ ವಿರೋಧಿ ಹೇಳಿಕೆ ನೀಡಿದರೂ, ಧರ್ಮವನ್ನುಮೀರಿ ಅವರ ಪರ ನಿಲ್ಲುವ ಜಾತಿಕಾರಣಗಳಿವೆ. ದೊರಸ್ವಾಮಿ ಯಂಥ ‘ಕಾಲ್ಪನಿಕ’ ಸ್ವಾತಂತ್ರ ಹೋರಾಟಗಾರರು, ಅಮೂಲ್ಯ, ಕನ್ನಯ್ಯ, ದಿಶಾರಂಥ ದೇಶದ್ರೋಹಿಗಳನ್ನೂ ವೈಭವೀಕರಿಸಿ, ನಕಲಿ ಹೋರಾಟಗಾರರನ್ನು ನೆಚ್ಚಿಕೊಂಡು ಕೂರುವಂಥ ಅನಿವಾರ್ಯತೆ ರಾಜಕೀಯ ಪಕ್ಷಗಳಿಗಿವೆ. ದೇಶಕ್ಕಿಂತ ವೋಟ್ ಬ್ಯಾಂಕ್ ದೊಡ್ಡದು, ಹಿಂದೂ ಧರ್ಮಕ್ಕಿಂತ ಜಾತಿಯೇ ದೊಡ್ಡದು ಎಂಬ ಆಧುನಿಕ ಸಿದ್ಧಾಂತಗಳು ಸೃಷ್ಟಿಯಾಗಿವೆ. ಕೇರಳದಲ್ಲಿ ಓಂಕಾರವನ್ನು ನಿಷೇಧಿಸುವ ಜಿಹಾದಿಗಳು ಹುಟ್ಟಿಕೊಂಡಿದ್ದಾರೆ.
ರಾಮಮಂದಿರಕ್ಕೆ ಹಣ ನೀಡಬೇಡಿ ಎನ್ನುವ ಭಯೋತ್ಪಾದಕ ಮನಸ್ಥಿತಿಗಳಿವೆ, ದೇಣಿಗೆ ಸಂಗ್ರಹಿಸುವ ಮಂದಿ ಯನ್ನು ಕೊಲ್ಲಲಾಗುತ್ತಿದೆ. ಅದಕ್ಕಿಂತ ಹೆಚ್ಚಾಗಿ ಸಮಾಜದಲ್ಲಿ ಪ್ರತಿಯೊಂದು ಜಾತಿಯೂ ಸೂಕ್ಷ್ಮ ಸಂವೇದನೆಯಲ್ಲಿವೆ. ಸಂದರ್ಭ ಹೀಗಿರುವಾಗ ಕನಿಷ್ಟ ಚಲನಚಿತ್ರದಲ್ಲಾದರೂ ಸಮಾನತೆಯ ಸಾಮಾಜಿಕ ಸಂದೇಶ, ಜತೆಗೆ ಆರೋಗ್ಯಕರ ಮನೋರಂಜನೆ, ಆನಂತರ ಸಂಪಾದನೆಯ ನೀತಿಯನ್ನು ಇಂದಿನ ಚಿತ್ರರಂಗ ಅಳವಡಿಸಿಕೊಳ್ಳಬೇಕಿದೆ. ನಂದ ಕಿಶೋರ್ ತರುಣ್ ಕಿಶೋರ್ ದಶಕಗಳಕಾಲ ಸಹಾಯಕರಾಗಿ ದುಡಿದು ಸಂಪಾದಿಸಿದ ತಮ್ಮ ಖ್ಯಾತಿ ಜನಪ್ರಿಯತೆಯನ್ನು ‘ಟೈಂಬಾಂಬ್’ನಂಥ ಅಪ್ರಬುದ್ಧಸಂಭಾಷಣೆಕಾರರಿಂದ ಹಾಳುಮಾಡಿಕೊಳ್ಳದೆ ಸಮಾಜಿಕ ಬದ್ಧತೆ ಯೊಂದಿಗೆ ಕನ್ನಡಚಲನಚಿತ್ರದ ಘನತೆಯನ್ನು ಹೆಚ್ಚಿಸು ವಂತಾಗಲಿ. ಎಲ್ಲಾ ಜಾತಿಯ ಪ್ರೇಕ್ಷಕರನ್ನು ಮೆಚ್ಚಿಸುವಂತಾಗಲಿ.