ರಾಹುಲ್ ಗಾಂಧಿ: ದೇಶ ಸರ್ವಾಧಿಕಾರಕ್ಕೆ ಬಲಿಯಾಗುವಲ್ಲಿ ನಿಮ್ಮ ಪಾತ್ರ ದೊಡ್ಡದು !
ವಿಶ್ಲೇಷಣೆ
ಕಪಿಲ್‌ ಕೋಮಿರೆಡ್ಡಿ, ರಾಜಕೀಯ ವಿಶ್ಲೇಷಕ
ರಾಹುಲ್ ಗಾಂಧಿಯವರೇ, ಭಾರತದ ಪ್ರಜಾಪ್ರಭುತ್ವ ದಿನೇ ದಿನೇ ಅಂದ ಕಳೆದುಕೊಳ್ಳುತ್ತಿದೆ. ಎಷ್ಟು ಅಂದರೆ ಇದನ್ನು ಸುಲಭ ವಾಗಿ ರಿಪೇರಿ ಮಾಡಲು ಸಾಧ್ಯವಿಲ್ಲ. ದೇಶದಲ್ಲಿ ಪ್ರಭಾವಿ ವಿರೋಧ ಪಕ್ಷವೊಂದು ಇದ್ದಿದ್ದರೆ ಹೀಗಾಗುತ್ತಿರಲಿಲ್ಲ. ನಾವೇಕೆಇಂದು ಈ ಸ್ಥಿತಿಗೆ ಬಂದು ನಿಂತಿದ್ದೇವೆ ಗೊತ್ತಾ? ದೇಶದ ಈ ದುರಂತ ಸ್ಥಿತಿಗೆ ನರೇಂದ್ರ ಮೋದಿ ಒಂದು ಕಾರಣವಾಗಿದ್ದರೆ,ನೀವು ನಿಮ್ಮೆಲ್ಲಾ ಡೀಸೆನ್ಸಿ ಹಾಗೂ ಉದಾತ್ತ ಉದ್ದೇಶಗಳ ಹೊರತಾಗಿಯೂ ಇನ್ನೊಂದು ಕಾರಣವಾಗಿದ್ದೀರಿ.
ಭಾರತ ಸರ್ವಾಧಿಕಾರದತ್ತ ಸಾಗಲು ಮೋದಿಯವರ ಮೊದಲ ಅಧಿಕಾರದ ಅವಧಿಯಲ್ಲೇ ಬೀಜ ಬಿತ್ತಲಾಗಿತ್ತು. ಆಗ, ಸ್ವಾಯತ್ತಸಂಸ್ಥೆಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕುತ್ತಾ ಬರಲಾಯಿತು. ಇನ್ನು ಇದೇ ಸರಕಾರ ಸತತ ಮೂರನೇ ಅವಧಿಗೇನಾದರೂ ಗೆದ್ದು ಬಂದರೆ ದೇಶದ ಮೇಲೆ ಅದರ ಪರಿಣಾಮ ಏನಾಗುತ್ತದೆ ಎಂಬುದರ ಚಿತ್ರಣ ಕಲ್ಪಿಸಿಕೊಳ್ಳೋಣ ಬನ್ನಿ. ಮೋದಿ ಸರಕಾರ ಮೂರನೇ ಬಾರಿಗೇನಾದರೂ ಗೆದ್ದಿತು ಎಂದಿಟ್ಟುಕೊಳ್ಳಿ, ಆಗ ಅದರ ಹೊಣೆಯನ್ನು ನೀವೇ ಹೊರಬೇಕಾಗುತ್ತದೆ.
ಏಕೆಂದರೆ, ಎರಡು ಐತಿಹಾಸಿಕ ಸೋಲಿನ ಹೊರತಾಗಿಯೂ ನೀವು ಕಾಂಗ್ರೆಸ್ ಪಕ್ಷದ ಚುಕ್ಕಾಣಿ ಬಿಡಲು ನಿರಾಕರಿಸಿದಿರಿ. ನಮ್ಮ ದೇಶದಲ್ಲಿ ಎಲ್ಲಾ ಕಡೆ ಅಸ್ತಿತ್ವ ಹೊಂದಿರುವ ಪ್ರಮುಖ ರಾಷ್ಟ್ರೀಯ ಪಕ್ಷಗಳು ಇರುವುದೇ ಎರಡು. ಒಂದು ಬಿಜೆಪಿ, ಇನ್ನೊಂದು ಕಾಂಗ್ರೆಸ್. ಯಾವುದೇ ರಾಜಕೀಯ ಪಕ್ಷವು ಸತತ ಎರಡು ಚುನಾವಣೆಗಳಲ್ಲಿ ದೇಶದ ಮತದಾರ ಯಾವುದನ್ನು ತಿರಸ್ಕರಿಸಿದ್ದಾನೋ ಅದನ್ನೇ ಇಟ್ಟುಕೊಂಡು ಮೂರನೇ ಬಾರಿ ಮತ ಕೇಳಲು ಹೋಗುವುದಿಲ್ಲ. ಹಾಗೆ ಮಾಡಿದರೆ ಅದು ಮತದಾರರಿಗೇ ಅವಮಾನ ಮಾಡಿದಂತೆ.
ಆದರೆ, ನೀವು ಅದನ್ನೇ ಮಾಡಲು ಹೊರಟಿರುವಂತೆ ಕಾಣುತ್ತಿದೆ. ಏಪ್ರಿಲ್‌ನಲ್ಲಿ ಅರ್ಧ ಡಜನ್ ವಿಧಾನಸಭೆ ಚುನಾವಣೆಗಳುಬರುತ್ತಿವೆ. ಕನಿಷ್ಠ ಪಕ್ಷ ಆ ಕಾರಣಕ್ಕಾದರೂ ಅಷ್ಟರೊಳಗೆ ನಿಮ್ಮ ಪಕ್ಷಕ್ಕೊಂದು ಪೂರ್ಣಾವಧಿ ನಾಯಕನನ್ನು ಹುಡುಕಬೇಕಿತ್ತು.ಅದರ ಬದಲು ಪಕ್ಷದ ನಾಯಕತ್ವವನ್ನು ಪ್ರಶ್ನಿಸಿದವರ ಬಾಯಿಮುಚ್ಚಿಸುವುದಕ್ಕೇ ಕಾಂಗ್ರೆಸ್ ಪಕ್ಷ ಕಸರತ್ತು ಮಾಡುತ್ತಿದೆ. ಇದಕ್ಕೆ ಕಾರಣ ಸ್ಪಷ್ಟ. ವಾಸ್ತವವಾಗಿ, ಮುಂಬರುವ ವಿಧಾನಸಭೆ ಚುನಾವಣೆಗೆ ತಯಾರಿ ಮಾಡಿಕೊಳ್ಳಬೇಕು ಎಂಬ ಕಾರಣಕ್ಕೆ ಹೊಸ ನಾಯಕನ ಆಯ್ಕೆ ತಡವಾಗುತ್ತಿಲ್ಲ. ಬದಲಿಗೆ, ಆ ಚುನಾವಣೆಗಳಲ್ಲಿ ಸೋಲು ನಿಶ್ಚಿತವಾಗಿರುವುದರಿಂದ, ಅದರ ದೂಷಣೆಯಿಂದ ನಿಮ್ಮನ್ನು ಬಚಾವು ಮಾಡುವುದಕ್ಕೋಸ್ಕರ ತಡ ಮಾಡಲಾಗುತ್ತಿದೆ.
ಅಂದರೆ, ಈಗಲೂ ಕಾಂಗ್ರೆಸ್ ಪಕ್ಷದ ಅತ್ಯುನ್ನತ ನಿರ್ಣಾಯಕ ಮಂಡಳಿಯ ಆದ್ಯತೆ ನಿಮ್ಮನ್ನು ರಕ್ಷಿಸುವುದೇ ಹೊರತು ಚುನಾವಣೆಗಳನ್ನು ಗೆಲ್ಲುವುದಲ್ಲ. ಜಗತ್ತಿನಾದ್ಯಂತ ಪ್ರಬುದ್ಧ ಪ್ರಜಾಪ್ರಭುತ್ವರುವ ರಾಷ್ಟ್ರಗಳಲ್ಲಿ ರಾಜಕೀಯ ಪಕ್ಷಗಳು ಚುನಾವಣೆಯಲ್ಲಿ ತಮ್ಮನ್ನು ಗೆಲ್ಲಿಸುವುದಕ್ಕಾಗಿ ನಾಯಕನ್ನು ನೇಮಕ ಮಾಡುತ್ತವೆ. ಆದರೆ, ಚುನಾವಣೆಯ ಕಾರಣಕ್ಕೆ ನಾಯಕನ ನೇಮಕವನ್ನು ವಿಳಂಬ ಮಾಡುವ ಏಕೈಕ ವಿಶಿಷ್ಟ ಪಕ್ಷವೆಂದರೆ ಕಾಂಗ್ರೆಸ್.
ಕಾಂಗ್ರೆಸ್ ಪಕ್ಷದ ತಂತ್ರಗಾರಿಕೆ ಎಷ್ಟು ದುರ್ಬಲವಾಗಿದೆ ಅಂದರೆ, ದೇಶದ ಜನಸಾಮಾನ್ಯ ಮತದಾರರು ಮೋದಿಯಿಂದ ಬೇಸತ್ತು, ಬೇರೆಲ್ಲೂ ಹೋಗಲು ಗತಿಯಿಲ್ಲದೆ, ದೇಶದ ಏಕೈಕ ಇನ್ನೊಂದು ರಾಷ್ಟ್ರವ್ಯಾಪಿ ಅಸ್ತಿತ್ವದ ರಾಜಕೀಯ ಪಕ್ಷವಾದ ಕಾಂಗ್ರೆಸ್‌ಗೇ ಮತ ಹಾಕುತ್ತಾರೆ, ಹಾಗಾಗಿ ನಾವು ಗೆಲ್ಲುತ್ತೇವೆ ಎಂಬ ನಿರೀಕ್ಷೆಯಲ್ಲಿ ನೀವು ಇದ್ದಂತಿದೆ. ಇದನ್ನೇ ನೀವು ನಂಬುತ್ತೀರಾದರೆ ಭ್ರಮೆಯಲ್ಲಿದ್ದೀರಿ ಎಂದೇ ಅರ್ಥ. ಏಕೆಂದರೆ ದೇಶದ ಮತದಾರರು ಮೋದಿ ಪರ ಒಲವು ತೋರಿಸಿದ್ದೇ  ಕಾಂಗ್ರೆಸ್ ಪಕ್ಷದ ವಂಶಪಾರಂಪರ‍್ಯ ರಾಜಕಾರಣದ ಕಾರಣಕ್ಕೆ.
ಆತ್ಮಗೌರವವುಳ್ಳ ಹಾಗೂ ಜಾತ್ಯತೀತತೆಯ ಮೌಲ್ಯವನ್ನು ಗೌರವಿಸುವ ಭಾರತೀಯನನ್ನು ಮುಗ್ಧನಂತೆ ನೋಡುತ್ತಿರುವುದುನಿಮ್ಮ ದೊಡ್ಡ ತಪ್ಪು. ನಿಮ್ಮ ಬದುಕಿನ ಮೌಲ್ಯಗಳಿಗೂ ಇವು ವಿರುದ್ಧವಾಗಿವೆ. ನಿಮ್ಮ ನಡತೆಯಲ್ಲಿ ಕಾಣಿಸುವ ದಯೆ ಹಾಗೂಅನುಕಂಪವನ್ನು ನಿಮಗೆ ವಂಶಪಾರಂಪರ್ಯವಾಗಿ ಬಂದ ಅನುಕೂಲಗಳು ಮಂಕಾಗಿಸಿವೆ. ನೀವು ಉದಾರತೆ ತೋರುವುದೇಈ ಸೌಕರ್ಯಗಳಿಂದಾಗಿ ಎಂದು ಜನ ಭಾವಿಸುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ಅತ್ಯಂತ ತಳಮಟ್ಟದಿಂದ ಬಂದ ಪ್ರಧಾನಿಯ ಕತೆಅವರ ರಾಜಕೀಯ ಪ್ರವರ್ಧಮಾನಕ್ಕೆ ದೊಡ್ಡ ಕೊಡುಗೆ ನೀಡಿದೆ.
ಪಾತ್ರೆ ತೊಳೆಯುತ್ತಿದ್ದ ತಾಯಿ, ಚಹಾ ಮಾರುತ್ತಿದ್ದ ತಂದೆಗೆ ಹುಟ್ಟಿದ ಮಗನೊಬ್ಬ ಹೇಗೆ ತನ್ನ ಅವಿರತ ಪರಿಶ್ರಮದಿಂದಅತ್ಯುನ್ನತ ಹುದ್ದೆಗೇರಿದ ನೋಡಿ ಎಂದು ಎಲ್ಲರೂ ಅಚ್ಚರಿ ಪಡುತ್ತಾರೆ. 2014ರಲ್ಲಿ ಅವರು ಗೆದ್ದಿದ್ದರ ಗುಟ್ಟು ಇದೇ. ಕಳೆದ ಆರು ವರ್ಷಗಳಲ್ಲಿ ನರೇಂದ್ರ ಮೋದಿ ತಮ್ಮ ಪಕ್ಷದ ಹೆಜ್ಜೆ ಗುರುತುಗಳನ್ನು ದೇಶದ ಮೂಲೆಮೂಲೆಗೆ, ಒಂದು ಕಾಲದಲ್ಲಿ ಹಿಂದುತ್ವ ವೆಂದರೆ ಸಿಡಿದೇಳುತ್ತಿದ್ದ ಪ್ರದೇಶಗಳಿಗೂ, ವಿಸ್ತರಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಭೂತಪೂರ್ವ ವಿಜಯ ದೊಂದಿಗೆ ಪುನರಾಯ್ಕೆಯಾದ ಒಂದು ವರ್ಷದ ನಂತರ ಪಕ್ಷದ ನಾಯಕತ್ವದ ಹುದ್ದೆಗಳಿಗೆ ಹೊಸ ರಕ್ತ ಹರಿಯುವಂತೆ ಬಿಜೆಪಿ ನೋಡಿಕೊಂಡಿದೆ. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಕಣ್ಣಿಗೆ ಕಾಣಿಸು ಒಂದೇ ಒಂದು ಬಡ್ತಿಯೆಂದರೆ ನಿಮ್ಮ ಸೋದರಿಯದು. ನಿಮ್ಮ ಪಕ್ಷದ ನಾಯಕತ್ವಕ್ಕಿರುವ ಆದ್ಯತೆಯೆಂದರೆ, ಪಕ್ಷವನ್ನು ಎರಡು ಬಾರಿ ಸೋಲಿನತ್ತ ಕೊಂಡೊಯ್ದ ನಾಯಕತ್ವದ ಸಾಮರ್ಥ್ಯವನ್ನು ಯಾರಾದರೂ ಸಣ್ಣದಾಗಿ ಅನುಮಾನಿಸಿದರೂ ಅವರನ್ನು ಅವಮಾನಿಸಿ, ಮೂಲೆಗೆ ತಳ್ಳುವುದು. ಕಳೆದ ಆಗಸ್ಟ್‌ನಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ‘ನೀವು ನಿಮ್ಮ ನಾಯಕತ್ವದ ಮೂಲಕ ಒಂದು ತಲೆಮಾರಿನ ಭಾರತೀಯರಲ್ಲಿ ಸ್ಫೂರ್ತಿ ತುಂಬಿದ್ದೀರಿ’ ಎಂಬ ಕಾರಣಕ್ಕೆ ನಿಮ್ಮ ‘ಕೈ ಬಲಪಡಿಸುವ’ ನಿರ್ಧಾರ ಕೈಗೊಳ್ಳುವ ಮೂಲಕ ಪಕ್ಷದಲ್ಲಿನ ಆಂತರಿಕ ಪ್ರಜಾಪ್ರಭುತ್ವದ ತಲೆಯ ಮೇಲೇ ಯಮಗಾಲು ಇಟ್ಟಿತು.
ಆ ನಿರ್ಧಾರದಲ್ಲಿನ ಯಾವುದಾದರೂ ಒಂದು ಪದವಾದರೂ ನಿಜವಾಗಿದ್ದಿದ್ದರೆ ಈಗ ಮೋದಿ ಸರಕಾರವೇ ಇರುತ್ತಿರಲಿಲ್ಲ. ಒಂದು ಕಾಲದಲ್ಲಿ ಜಗತ್ತಿನ ಅದ್ಭುತ ರಾಜಕೀಯ ಪಕ್ಷಗಳಲ್ಲಿ ಒಂದಾಗಿದ್ದ ಕಾಂಗ್ರೆಸ್ ಪಕ್ಷದಲ್ಲಿ ಇಂದು ನಾಯಕರು ತಮ್ಮ ಅಸ್ತಿತ್ವಕ್ಕಾಗಿ ಒಂದು ಕುಟುಂಬವನ್ನು ಪೂಜಿಸಿ ಮೆರೆಸುವ ಅನಿವಾರ್ಯತೆಯಲ್ಲಿ ಸಿಲುಕಿದ್ದಾರೆ. ನಾನು ಭಾರತವನ್ನು ಎಷ್ಟು ಪ್ರೀತಿಸುತ್ತೇನೆ ಗೊತ್ತಾ ಎಂದು ನೀವು ಹೇಳುತ್ತೀರಲ್ಲ, ನಿಜವಾಗಿಯೂ ದೇಶವನ್ನು ಅಷ್ಟೇ ಪ್ರೀತಿಸುತ್ತಿದ್ದರೆ ಈ ಸ್ವಯಂ ಸರ್ವನಾಶದ ಕೊಳಕು ಭಟ್ಟಂಗಿತನದ ಮನಸ್ಥಿತಿಯು ನಿಮ್ಮಲ್ಲಿ ದಿಗಿಲುಹುಟ್ಟಿಸಿ ತಿರುಗಿನಿಲ್ಲುವಂತೆ ಮಾಡಬೇಕು.
ನಿಜ ಏನೆಂದರೆ, ಕಾಂಗ್ರೆಸ್ ಪಕ್ಷ ಸ್ವಾರ್ಥಕ್ಕೋಸ್ಕರ ಹಾಗೂ ತನ್ನ ಮೂಲ ಕುಟುಂಬವನ್ನು ರಕ್ಷಿಸಿಕೊಳ್ಳುವುದಕ್ಕೋಸ್ಕರ ಸಮರ್ಥ ಪ್ರತಿಪಕ್ಷವೊಂದನ್ನು ದೇಶಕ್ಕೆ ನೀಡದೆ ಒಂದು ತಲೆಮಾರಿನ ಭವಿಷ್ಯವನ್ನೇ ಸರ್ವನಾಶ ಮಾಡಿದೆ. ನೀವು ಮೋದಿಯಿಂದ ಭಾರತದ ಪ್ರಜಾಪ್ರಭುತ್ವಕ್ಕೆ ಭಾರಿ ಅಪಾಯ ಬಂದಿದೆ ಎನ್ನುತ್ತೀರಿ. ಆದರೆ, ಭಾರತದಲ್ಲಿ ಪ್ರಜಾಪ್ರಭುತ್ವವನ್ನು ಕಟ್ಟಿ ಬೆಳೆಸಿದ ರಾಜಕೀಯ ಪಕ್ಷದಲ್ಲಿ ವಂಶಪಾರಂಪರ್ಯ ಸರ್ವಾಧಿಕಾರ ನಡೆಸುತ್ತಾ ನೀವು ಪ್ರಜಾಪ್ರಭುತ್ವವನ್ನು ಮರುಸ್ಥಾಪನೆ ಮಾಡ ಲಾರಿರಿ.
ಕಾಂಗ್ರೆಸ್ ಪಕ್ಷದ ಸೋದರ ಪಕ್ಷವಾದ ಬ್ರಿಟನ್ನಿನ ಲೇಬರ್ ಪಾರ್ಟಿಯ ಪ್ರಮುಖ ನಾಯಕರೊಬ್ಬರು ಇತ್ತೀಚೆಗೆ ನನ್ನ ಜತೆಮಾತನಾಡುತ್ತಾ, ‘ಪಕ್ಷದ ನಾಯಕತ್ವಕ್ಕಾಗಿ ನಿಮ್ಮ ಜತೆಗೆ ಸ್ಪರ್ಧೆ ಮಾಡುವ ವಾತಾವರಣ ಕೂಡ ಕಾಂಗ್ರೆಸ್‌ನಲ್ಲಿ ಇಲ್ಲದಿರುವುದರಿಂದ ಅಂತಿಮವಾಗಿ ಅದು ಭಾರತದ ಪ್ರಜಾಪ್ರಭುತ್ವಕ್ಕೇ ದೊಡ್ಡ ಹಾನಿ ಉಂಟುಮಾಡುತ್ತದೆ. ಶಶಿ ತರೂರ್, ಸಿದ್ದರಾಮಯ್ಯ, ಚಿದಂಬರಂರಂಥ ಅನುಭವಿ ರಾಜಕಾರಣಿಗಳು ಕೂಡ ತಮ್ಮ ರಾಜಕೀಯ ಮಹತ್ವಾಕಾಂಕ್ಷೆಗೆ ಗೆರೆ ಎಳೆದು ಕೊಂಡು ಸುಮ್ಮನೆ ಕುಳಿತುಬಿಡುವುದು ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಸಾಧ್ಯ’ ಎಂದು ಹೇಳಿದ್ದರು.
ತರೂರ್ ವಿಶ್ವಸಂಸ್ಥೆಯಲ್ಲಿ ಬೃಹತ್ ಅಧಿಕಾರಿ ವರ್ಗಕ್ಕೆ ಮುಖ್ಯಸ್ಥರಾಗಿದ್ದವರು. ಜಗತ್ತಿನ ಮೂಲೆಮೂಲೆಯ ನಿರಾಶ್ರಿತರಿಗೆ ಆಶ್ರಯ ನೀಡುವ ಸಂಕೀರ್ಣವಾದ ಅಂತಾರಾಷ್ಟ್ರೀಯ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಹಿಂದಿನ ಯುಗೋಸ್ಲಾವಿ ಯಾದಲ್ಲಿ ಶಾಂತಿ ಸ್ಥಾಪನೆ ಮಾಡುವ ಮಾತುಕತೆಯಲ್ಲಿ ಪ್ರಮುಖ ಪಾತ್ರ ನಿಭಾಯಿಸಿದ್ದರು. ಖಾಸಗಿ ಕ್ಷೇತ್ರದಲ್ಲಿದ್ದ ಆಕರ್ಷಕ ಅವಕಾಶಗಳನ್ನು ಬಿಟ್ಟು ದೇಶಸೇವೆ ಮಾಡುವುದಕ್ಕಾಗಿ ಅವರು ರಾಜಕೀಯವನ್ನೇ ವೃತ್ತಿಯಾಗಿ ಆಯ್ಕೆ ಮಾಡಿಕೊಂಡರು. ಕಮ್ಯುನಿಸ್ಟರ ಸಾಮ್ರಾಜ್ಯದಿಂದ ಮೂರು ಬಾರಿ ಲೋಕಸಭೆಗೂ ಆಯ್ಕೆಯಾಗಿದ್ದಾರೆ.
ಪ್ರಜಾಸತ್ತಾತ್ಮಕ ಜಗತ್ತಿನ ಯಾವುದೇ ದೇಶದ ಪ್ರಮುಖ ರಾಜಕೀಯ ಪಕ್ಷದ ನಾಯಕನ ಹುದ್ದೆಗೆ ಅವರ ಬಯೋಡೇಟಾದಷ್ಟು ತೂಕದ ಬಯೋಡೇಟಾ ಇನ್ನಾವುದಿರಲು ಸಾಧ್ಯ? ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ಅವರನ್ನು ‘ಅತಿಥಿ ಕಲಾವಿದರಂತೆ’ ನಡೆಸಿಕೊಳ್ಳಲಾಗುತ್ತಿದೆ. ಎಲ್ಲರೂ ಅತಿ ವಿಧೇಯರಾಗಿರಬೇಕು ಎಂಬ ನಿಮ್ಮ ಪಕ್ಷವೇ ಕಟ್ಟಿ ಬೆಳೆಸಿದ ಈ ಸಂಸ್ಕೃತಿ ಇಂದು ನಮ್ಮ ದೇಶದ ಪ್ರಜಾಪ್ರಭುತ್ವಕ್ಕೇ ಧಕ್ಕೆ ತಂದಿದೆ.
ಭಾರತ ಉಳಿಯಬೇಕೆಂದರೆ ಕಾಂಗ್ರೆಸ್ ಪಕ್ಷದಲ್ಲಿನ ‘ಅತಿಥಿ ಕಲಾವಿದರು’ ನಾಯಕತ್ವದ ಸ್ಪರ್ಧೆಗೆ ಇಳಿಯಬೇಕು. ದೇಶದ ಭವಿಷ್ಯವನ್ನು ಭದ್ರಗೊಳಿಸಬೇಕೆಂದರೆ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವನ್ನು ಪುನರ್‌ಸ್ಥಾಪನೆ ಮಾಡಲೇಬೇಕು. ಅದು ನಿಮ್ಮ ನಾಯಕತ್ವಲ್ಲದೆ ಸಾಧ್ಯವಿಲ್ಲ. ಪಕ್ಷವನ್ನು ಎರಡು ಹೀನಾಯ ಸೋಲಿಗೆ ಮುನ್ನಡೆಸಿದ ನಂತರ ನಿಮಗೆ ಹೆಸರು ಉಳಿಸಿಕೊಳ್ಳಲು ಇದೊಂದು ಸುವರ್ಣಾವಕಾಶ.
ನೀವೀಗ ನಮ್ಮ ದೇಶದ ಜಿಗ್ಮೆ ಸಿಂಗ್ಯೆ ವಾಂಗ್‌ಚುಕ್ ಆಗಬೇಕು. ಭೂತಾನ್‌ನ ಈ ರಾಜ ತನ್ನ ರಾಜಾಧಿಕಾರವನ್ನೇ ಬಳಸಿ ದೇಶದಹಿತಕ್ಕಾಗಿ ರಾಜಪ್ರಭುತ್ವದ ಅಧಿಕಾರವನ್ನು ಪ್ರಜಾಪ್ರಭುತ್ವಕ್ಕೆ ತಿರುಗಿಸಿದ ಮಹಾನ್ ವ್ಯಕ್ತಿ. ಆಸ್ಥಾನ ಭಟ್ಟಂಗಿಗಳೆಲ್ಲ ಹೀಗೆಮಾಡಬೇಡಿ ಎಂದೇ ಇವರ ಮೇಲೆ ಒತ್ತಡ ಹೇರುತ್ತಿದ್ದರು. ದೇಶದ ಪ್ರತಿಯೊಬ್ಬ ಪ್ರಜೆಯೂ ಈ ರಾಜನನ್ನು ದೇವರೆಂದುಭಾವಿಸುತ್ತಿದ್ದರು. ಆದರೆ, ಅದನ್ನೆಲ್ಲ ಬದಿಗೆ ಸರಿಸಿ, ದೇಶ ಅಭಿವೃದ್ಧಿ ಹೊಂದಬೇಕು, ನಮ್ಮ ದೇಶದಲ್ಲೂ ಪ್ರಜಾಪ್ರಭುತ್ವಇರಬೇಕು ಎಂಬ ಉದ್ದೇಶದಿಂದ ಇವರು ಆಧುನಿಕ ಸಂಧಾನವನ್ನು ಅಳವಡಿಸಿಕೊಂಡು ಪ್ರಜಾಪ್ರಭುತ್ವದ ಸ್ಥಾಪನೆ ಮಾಡಿದರು.
ತನ್ಮೂಲಕ ತಮ್ಮ ಕೈಯಾರೆ ರಾಜಪ್ರಭುತ್ವವನ್ನು ಹಿನ್ನೆಲೆಗೆ ಸರಿಸಿ, ರಾಜ ಕೂಡ65ವರ್ಷಕ್ಕೆ ನಿವೃತ್ತಿ ಹೊಂದಬೇಕು ಮತ್ತುರಾಜನನ್ನೂ ವಾಗ್ದಂಡನೆಯ ಮೂಲಕ ಪದಚ್ಯುತಗೊಳಿಸಲು ಅವಕಾಶವಿರಬೇಕು ಎಂಬ ಕಾನೂನು ರೂಪಿಸಿದರು. ನೀವು ಕೂಡ ಇದೇ ರೀತಿಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಹೊಸ ನಾಯಕನ ಆಯ್ಕೆಗೆ ಸರಿಯಾದ ರೀತಿಯಲ್ಲಿ ಚುನಾವಣೆ ನಡೆಯುವಂತೆ ನೋಡಿಕೊಳ್ಳಲು ಸಾಧ್ಯವಿದೆ. ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವವನ್ನು ಹುಟ್ಟುಹಾಕಿದ ರಾಜಕೀಯ ಪಕ್ಷದಲ್ಲಿ  ನಿಜವಾಗಿಯೂ ಮುಕ್ತ ಹಾಗೂ ನ್ಯಾಯಸಮ್ಮತ ರೀತಿಯಲ್ಲಿ, ಪಾರದರ್ಶಕವಾಗಿ ಮತ್ತು ಸ್ಪರ್ಧಾತ್ಮಕವಾಗಿ ನಾಯಕನ ನೇಮಕವಾಗಬೇಕು.
ಅದಕ್ಕಾಗಿ ನಿಯಮಗಳನ್ನು ಬೇಕಾದರೆ ತಿದ್ದುಪಡಿ ಮಾಡಿ. ಪಕ್ಷದ ಯಾವೊಬ್ಬ ಸದಸ್ಯ ಬೇಕಾದರೂ ಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡಿ. ಪ್ರತಿಯೊಬ್ಬ ಸದಸ್ಯನಿಗೂ ಮತದಾನದ ಹಕ್ಕು ನೀಡಿ. ನಾಯಕತ್ವದ ಹುದ್ದೆಗೆ ಸ್ಪರ್ಧಿಸಲು ಯಾರು ಮುಂದೆ ಬಂದರೂ ಅವರಿಗೆ ಸಂಪನ್ಮೂಲ ಹಾಗೂ ಪ್ರಚಾರ ಮಾಡುವ ಸ್ವಾತಂತ್ರ್ಯವನ್ನು ನೀಡಿ. ಹೊಗಳುಭಟರನ್ನು ದೂರ ಸರಿಸಿ. ತೆರೆಮರೆಗೆ ಸರಿಯುವ ಭಯದಿಂದ ಎಲ್ಲ ಒಳ್ಳೆಯ ಕೆಲಸಕ್ಕೂ ಅಡ್ಡಗಾಲು ಹಾಕುವ ‘ಎಂಜಲು ನೆಕ್ಕುವವರನ್ನು’  ಕಡೆಗಣಿಸಿ ವ್ಯವಸ್ಥೆಯನ್ನು ಸರಿಪಡಿಸಿ.
ದೇಶದ ಪೂರ್ವಪಿತೃಗಳು ಕನಸು ಕಂಡ ರೀತಿಯಲ್ಲಿ ಈ  ಗಣರಾಜ್ಯ ಉಳಿಯುತ್ತದೆಯೇ ಅಥವಾ ನಾಶವಾಗುತ್ತದೆಯೇ ಎಂಬು ದನ್ನು ನಿರ್ಧರಿಸಲು ಇನ್ನು ಮೂರು ವರ್ಷ ಮಾತ್ರ ಉಳಿದಿದೆ. ಈ ಮೂರು ವರ್ಷಗಳಲ್ಲಿ ಒಂದು ಕಾಲದ ಅದ್ಭುತ ರಾಜಕೀಯ ಪಕ್ಷವು ದೇಶದ ಭವಿಷ್ಯಕ್ಕಾಗಿ ತನ್ನನ್ನು ಮತ್ತೊಮ್ಮೆ ಸುಧಾರಿಸಿಕೊಂಡು, ಕೈಗೆ ಹೊಸ ಆಯುಧಗಳನ್ನು ಎತ್ತಿಕೊಳ್ಳುವ ಅಗತ್ಯ ವಿದೆ. ಕಾಂಗ್ರೆಸ್ ಏನು ಮಾಡುತ್ತದೆ ಎಂಬುದರ ಮೇಲೆ ಭಾರತ ಯಾವ ದಾರಿಯಲ್ಲಿ ಹೋಗುತ್ತದೆ ಎಂಬುದು ನಿರ್ಧಾರ ವಾಗುತ್ತದೆ. ಮತ್ತು ಕಾಂಗ್ರೆಸ್ ಏನು ಮಾಡುತ್ತದೆ ಎಂಬುದು ನೀವು ಯಾವ ದಾರಿಯಲ್ಲಿ ಹೋಗುತ್ತೀರಿ ಎಂಬುದರ ಮೇಲೆ ನಿರ್ಧಾರವಾಗುತ್ತದೆ.
ನಿಮ್ಮನ್ನು ಭವಿಷ್ಯದ ಹಲವು ತಲೆಮಾರುಗಳ ಭಾರತೀಯರು ಯಾವ ರೀತಿಯಲ್ಲಿ ನೆನಪಿಸಿಕೊಳ್ಳಬೇಕು ಎಂಬುದನ್ನು ನೀವೇ ನಿರ್ಧರಿಸಬೇಕು. ಭಾರತದ ಅತ್ಯಂತ ಹಳೆಯ ರಾಜಕೀಯ ಪಕ್ಷವನ್ನು ಪ್ರಜಾಸತ್ತಾತ್ಮಕಗೊಳಿಸುವುದಕ್ಕಾಗಿ ಹಾಗೂ ಜೀರ್ಣೋ ದ್ಧಾರಗೊಳಿಸುವುದಕ್ಕಾಗಿ ತನಗೆ ವಂಶಪಾರಂಪರ್ಯವಾಗಿ ಬಂದ ಅಧಿಕಾರವನ್ನು ತ್ಯಜಿಸಿದ ದೇಶಭಕ್ತನೆಂದು ನೆನಪಿಸಿ ಕೊಳ್ಳಬೇಕೇ? ಅಥವಾ ದೇಶದ ಹಿತವನ್ನೇ ಬಲಿ ಕೊಟ್ಟು, ಭಾರತದಲ್ಲಿ ಪ್ರಜಾಪ್ರಭುತ್ವದ ಅವಸಾನಕ್ಕೆ ಅವಕಾಶ ಮಾಡಿಕೊಡುವ ಮೂಲಕ ವಶಂಪಾರಂಪರ್ಯ ಅಧಿಕಾರವನ್ನು ಉಳಿಸಿಕೊಂಡ ಸ್ವಾರ್ಥಿ ಎಂದು ನೆನಪಿಸಿಕೊಳ್ಳಬೇಕೇ?