ಅಭಂಗ ಭಕ್ತಿಸಾಗರದಿಂದೆತ್ತಿದ ಒಂದು ಬೊಗಸೆ ಅಮೃತ
ತಿಳಿರುತೋರಣ
ಶ್ರೀವತ್ಸ ಜೋಶಿ
ಅಮೃತದಷ್ಟೇ ಅಲ್ಲ, ಅದಕ್ಕಿಂತಲೂ ಹೆಚ್ಚು ಸಿಹಿಯಾಗಿರುವುದು ಭಗವಂತನ ನಾಮಸ್ಮರಣೆ ಎನ್ನುತ್ತದೆ ಒಂದು ಮರಾಠಿ ಅಭಂಗ. ‘ಅಮೃತಾಹುನೀ ಗೋಡ ನಾಮ ತುಝೇ ದೇವಾ…’ ಸಂತ ನಾಮದೇವರ ರಚನೆ, ಪ್ರಖ್ಯಾತ ಗಾಯಕಿ ಮಾಣಿಕ್ ವರ್ಮಾ ಅವರ ಕಂಠಸಿರಿಯಿಂದ ಪ್ರಸಿದ್ಧ.
ಸಂತ ತುಕಾರಾಮ್ ಮರಾಠಿ ಚಿತ್ರದಲ್ಲಿ ಈ ಅಭಂಗವನ್ನು ಅಳವಡಿಸಿಕೊಳ್ಳಲಾಗಿದೆ. ಆಮೇಲೆ ಅದೇ ಹೆಸರಿನಲ್ಲಿ ಬಂದಕನ್ನಡ ಚಿತ್ರದಲ್ಲೂ ‘ಅಮೃತಕ್ಕು ತಾ ರುಚಿ ನಾಮ ನಿನ್ನ ದೇವ…’ ಎಂದು ಅಭಂಗದ ಕನ್ನಡ ರೂಪಾಂತರವನ್ನು ಎಸ್.ಜಾನಕಿಹಾಡಿದ್ದಾರೆ. ಬಹುಶಃ ಸಿದ್ಧ ಟ್ಯೂನ್‌ಗೆ ಪದಗಳನ್ನು ಹೊಂದಿಸಿದ್ದರಿಂದ ಇರಬಹುದು ಕನ್ನಡ ಅನುವಾದ ಅಷ್ಟು ಚೆನ್ನಾಗಿ ಬಂದಿಲ್ಲ.
ಮೂಲ ಮರಾಠಿ ರೂಪವು ಸಂತ ನಾಮದೇವರ ಅಂತಃಕರಣದ ಶಬ್ದರೂಪವೇ ಆಗಿದೆ, ಹೀಗೆ: ‘ದೇವಾ, ನಿನ್ನ ನಾಮವು ಅಮೃತಕ್ಕಿಂತಲೂ ಹೆಚ್ಚು ಸಿಹಿಯಾದುದು. ಹಾಗಿದ್ದರೂ, ಓ ಕೇಶವಾ, ನನ್ನ ಮನಸ್ಸು ಏಕೆ ಅದನ್ನು ಅರಗಿಸಿಕೊಳ್ಳುತ್ತಿಲ್ಲ? ಹೇಳು ಪಂಢರೀನಾಥ, ನಾನೇನು ಮಾಡಬಹುದು ಇದನ್ನು ಸರಿಪಡಿಸಲು? ನಿನ್ನ ರೂಪವನ್ನು ಧ್ಯಾನಿಸುತ್ತ ಇರಲು ನನ್ನ ಮನಸ್ಸಿಗೇಕೆ ಸಾಧ್ಯವಾಗುತ್ತಿಲ್ಲ? ನಿನ್ನ ಗುಣಗಾನದ ಕೀರ್ತನೆಗಳನ್ನು ಆಲಿಸುತ್ತಾ ಕುಳಿತುಕೊಂಡೆನೋ, ಒಂದೋ ನನ್ನ ಏಕಾಗ್ರತೆಯನ್ನೆಲ್ಲ ನಿದ್ದೆಯೇ ಸೆಳೆಯುತ್ತದೆ, ಇಲ್ಲವೇ ನನ್ನ ಮನಸ್ಸು ವಿಷಯಸುಖಗಳ ವಿಚಾರವನ್ನೇ ಮೇಯತೊಡಗುತ್ತದೆ, ಅದರಲ್ಲೇ ಬೇಯತೊಡಗುತ್ತದೆ.
ಏಕೆ ಹೀಗೆ? ಹರಿದಾಸರೆಲ್ಲ ಹರಿನಾಮ ಕೀರ್ತನೆ ಹಾಡುತ್ತಿರುತ್ತಾರೆ, ನನ್ನ ಮನಸ್ಸಿನೊಳಗೆ ಅವು ಏಕೆ ಹೋಗುವುದಿಲ್ಲ?’ ಅಭಂಗ ಗಳೆಂದರೆ ಹಾಗೆಯೇ. ಮರಾಠಿ ಸಂತ ಕವಿಗಳು ಅವುಗಳನ್ನು ‘ಆಯ್ತು, ಈಗ ನಾನು ಒಂದು ಸುಂದರ ಕವಿತೆ ರಚಿಸುತ್ತೇನೆ’ ಎಂದು ಪಟ್ಟಾಗಿ ಯೋಚಿಸುತ್ತ ಕುಳಿತು ಶ್ರಮವಹಿಸಿ ಮಾಡಿದ್ದಲ್ಲ. ಒಂದು ರೀತಿಯಲ್ಲಿ ದೇವರೇ ಆ ಸಂತರಿಂದ ನುಡಿಸಿದ ಹಾಡುಗಳು ಅವು. ಭಕ್ತಿಯ ಪರಾಕಾಷ್ಠೆಯಲ್ಲಿ ಅಂತಃಕರಣವು ಶಬ್ದ ರೂಪವನ್ನು ಪಡೆದು ಅಭಿವ್ಯಕ್ತವಾದಾಗ ಮೈದಳೆದ ನುಡಿಸೃಷ್ಟಿ.
ಸಹಜಸಮಾಧಿಯ ಆವೇಶದಲ್ಲಿ ಮುಳುಗಿ ತನ್ಮಯರಾಗಿದ್ದಾಗ, ಅಪ್ರಯತ್ನವಾಗಿ ಹೊರಹೊಮ್ಮಿದ ಕಾವ್ಯಧಾರೆ. ಅಲ್ಲಿ ಛಂದಸ್ಸು, ಗುರು – ಲಘು ಮಾತ್ರೆ ಲೆಕ್ಕಗಳಿಗೆಲ್ಲ ಪ್ರಾಶಸ್ತ್ಯವಿಲ್ಲ, ಅಗತ್ಯವೂ ಇಲ್ಲ. ವಿಚಾರ – ಉಚ್ಚಾರ – ಆಚಾರ ಇವಿಷ್ಟೇ ಮುಖ್ಯ, ಮತ್ತು ಸರ್ವಸ್ವ. ‘ಬಲು ಕೌಶಲದಿಂದ ಶಬ್ದಗಳನ್ನು ಜೋಡಿಸಿ ಯಾರಾದರೂ ಕವಿತ್ವವನ್ನು ಮಾಡಿದರೆ ಅದಕ್ಕೆ ಯಾವ ಮನ್ನಣೆಯೂ ಸಿಗಲಾರದು. ಸತ್ಯದ ಅನುಭವವನ್ನು ಪಡೆದವನು ಸತ್ಯದಿಂದಲೇ ಇನ್ನೊಬ್ಬರ ಅಂತಃಕರಣವನ್ನು ತಟ್ಟುವನು. ಅವನ ಮಾತಿಗೆ ಅನುಭವದಿಂದಾಗಿಯೇ ಗುಣಗಳ ಸವಿ ಒದಗುವುದು. ಕೀಳು ಲೋಹದ ಒಡವೆಗೆ ಬಂಗಾರದ ಗಿಲೀಟು ಮಾಡಿಸಿ ಪ್ರಯೋಜನವೇನು? ಬೆಂಕಿಯೆದುರು ಅದರ ಆಟ ನಡೆಯದು.
ಅದನ್ನು ಒರೆಗೆ ಹಚ್ಚಿದರೆ ಒಳಗಿನ ಕೀಳು ಲೋಹವು ತೆರೆದುಕೊಳ್ಳುವುದು. ಆದ್ದರಿಂದ, ಸತ್ಯದ ಅನುಭವವನ್ನು ಪಡೆದವನು ಅದನ್ನು ಆಲಂಕಾರಿಕ ಶಬ್ದಗಳ ಮೂಲಕ ವಿವರಿಸಿ ಹೇಳಬೇಕಿಲ್ಲ. ಸರಳ ಶಬ್ದಗಳಲ್ಲಿ ಅದು ತನ್ನಿಂತಾನೇ ವ್ಯಕ್ತವಾಗುತ್ತದೆ.’- ಎಂಬ ಇಂಗಿತವನ್ನು ಸಂತ ತುಕಾರಾಮರು ಒಂದು ಅಭಂಗದಲ್ಲಿಯೇ ವ್ಯಕ್ತಪಡಿಸಿದ್ದಾರೆ! ಅಭಂಗ ಎಂದರೇನು? ಭಂಗವಿಲ್ಲದ್ದು. ಅದಕ್ಕೆ ತಡೆ ಇಲ್ಲ, ಕಡೆ ಇಲ್ಲ.
‘ತೈಲಧಾರೆಯಂತೆ ಮನಸು ಕೊಡೊ ಹರಿಯಲ್ಲಿ’ ಎಂಬ ದಾಸವಾಣಿ ಇದೆಯಲ್ಲ, ತೈಲಧಾರೆಗೆ ಹೇಗೆ ನಿರಂತರತೆ ಇರುತ್ತದೆಯೋ ಹಾಗೆಯೇ ಅಭಂಗಕ್ಕೂ. ಎಳ್ಳೆಣ್ಣೆಯನ್ನೋ ತೆಂಗಿನೆಣ್ಣೆಯನ್ನೋ ಒಂದು ಪಾತ್ರೆಯಿಂದ ಇನ್ನೊಂದು ಪಾತ್ರೆಗೆ ಸುರಿಯುವಾಗ ಧಾರೆ ಹೇಗಿರುತ್ತದೆ? ತಡೆಯಿಲ್ಲ, ತುಂಡರಿಸುವುದಿಲ್ಲ. ಅಂತೆಯೇ ಅಭಂಗವೂ. ಅದು ಹುಟ್ಟಿದ್ದಂತೂ ಮೇಲೆ ವಿವರಿಸಿದಂತೆ ಸಂತರ ಭಕ್ತಿಪರವಶತೆ ನಿರಂತರವಾಗಿದ್ದಾಗ ಹೊರಹೊಮ್ಮಿದ ಕಾವ್ಯಧಾರೆಯಾಗಿ; ಅದನ್ನು ಆಮೇಲೆ ವಿಟ್ಠಲನ ಭಕ್ತರೆಲ್ಲ ಹಾಡುವುದೂ ಒಂದು ರೀತಿಯ ಭಾವಾವೇಶದ ನಿರಂತರತೆಯಲ್ಲೇ. ಆ ದೃಷ್ಟಿಯಿಂದಲೂ ಅದು ಅಭಂಗವೇ.
ಜಪ, ಪ್ರಾರ್ಥನೆ, ಬಹುಮಟ್ಟಿಗೆ ಭಜನೆ ಕೂಡ ನಮ್ಮ ಅಂತರಂಗದ ಮನೋವ್ಯಾಪಾರ ಅಷ್ಟೇ. ಅದೊಂದು ರೀತಿಯ ಧ್ಯಾನ, ತಪಸ್ಸು. ಆದರೆ ಅಭಂಗ ಹಾಗಲ್ಲ. ಇದು ಬಹಿರಂಗದ್ದು. ಸಮುದಾಯಕೇಂದ್ರಿತವಾಗಿ, ಗುಂಪಿನಲ್ಲಿ ಉತ್ಸಾಹದ ಅಭಿವ್ಯಕ್ತಿ ಯಾಗಿ ಇದರ ಗಾಯನ. ವ್ಯಷ್ಟಿ ಅಲ್ಲ ಸಮಷ್ಟಿ ಪ್ರಜ್ಞೆ. ಇಡೀ ಸಮುದಾಯವನ್ನು ಭಕ್ತಿಯ ಉತ್ಕಟತೆಯಿಂದ ಹುಚ್ಚೆಬ್ಬಿಸುವ ತಾಕತ್ತು. ಸ್ವಾರಸ್ಯವೆಂದರೆ ಅಭಂಗವನ್ನು ರಚಿಸಿದ ಸಂತ ಕವಿ, ಹಾಡಿದ ಗಾಯಕ, ಮತ್ತು ಕೇಳುವ ಶ್ರೋತೃ ಈ ಎಲ್ಲರಿಗೂ ಇದು ತಾನು ದೇವರೊಡನೆ ನಡೆಸುತ್ತಿರುವ ಸಂವಾದ ಎಂದು ಒಂದೇ ಪ್ರಕಾರವಾಗಿ ಅನಿಸುತ್ತದೆ.
ಉದಾಹರಣೆಗೆ, ‘ಮಾಝೇ ಮಾಹೇರ ಪಂಢರಿ…’ ಈ ಜನಪ್ರಿಯ ಅಭಂಗವು ಮೂಡಿಸುವ ‘ನನ್ನ ತವರುಮನೆ ಪಂಢರಾಪುರ’ ಎಂಬ ಭಾವನೆ – ಅಭಂಗದ ಕವಿಗೆ (ಸಂತ ಏಕನಾಥರಿಗೆ), ಗಾಯಕನಿಗೆ (ಭೀಮಸೇನ ಜೋಶಿಯವರಿಗೆ), ಮತ್ತು ಕೇಳುಗನಿಗೆ(ನನಗೆ, ನಿಮಗೆ) ಎಲ್ಲ ಒಂದೇ ರೀತಿಯಲ್ಲಿ ಭಾಸವಾಗುತ್ತದೆ! ಕಾರಣ ಸ್ಪಷ್ಟ. ಅಭಂಗದ್ದು ಶಬ್ದಾಡಂಬರದ ಸಾಹಿತ್ಯ ಶ್ರೀಮಂತಿಕೆ ಅಲ್ಲ. ಇದರಲ್ಲಿ ‘ನೀನು ಹೀಗೆ ಮಾಡು, ಹಾಗೆ ಮಾಡಬೇಡ’ ಎಂದು ವ್ಯಕ್ತಿಯಿಂದ ವ್ಯಕ್ತಿಗೆ ಉಪದೇಶ ಬೋಧೆಯೆಲ್ಲ ಇಲ್ಲ. ಭಕ್ತ ಮತ್ತು ದೇವರ ನಡುವಿನ ವಿಚಾರ ವ್ಯವಹಾರ. ದೇವರ ನಮನ, ರೂಪ ವರ್ಣನೆ, ಕೊನೆಯಲ್ಲೊಂದು ಪಾರಮಾರ್ಥಿಕ ಅರ್ಥವಿಶೇಷ – ಇದು ಅಭಂಗದ ಹಂದರ.
ಕಾಲಘಟ್ಟದ ದೃಷ್ಟಿಯಿಂದ, ರಚನೆಯಾದಾಗಿನ ಸಾಮಾಜಿಕ ಸ್ಥಿತಿಗತಿಗಳ ದೃಷ್ಟಿಯಿಂದ ನಮ್ಮ ಕನ್ನಡದ ವಚನಸಾಹಿತ್ಯ,ದಾಸಸಾಹಿತ್ಯ, ಹಿಂದೀ ಸಂತರ ದೋಹಾಗಳು, ಭಜನ್‌ಗಳು… ಇವೆಲ್ಲದಕ್ಕೂ ಮತ್ತು ಅಭಂಗಗಳಿಗೂ ಏಕ್‌ದಂ ಹೋಲಿಕೆ ಇದೆ.ಕ್ರಿ.ಶ ಹನ್ನೆರಡನೆಯ ಶತಮಾನ ಮತ್ತು ಅನಂತರದ ಕಾಲದಲ್ಲಿ, ವೇದಾಂತ ಮತ್ತು ಅಧ್ಯಾತ್ಮದ ವಿಚಾರಗಳನ್ನು ಸಂಸ್ಕೃತಕಲಿತವರು ಮಾತ್ರ ಅರಿತುಕೊಳ್ಳಬಹುದು, ಬೇರೆಯವರಿಗೆ ಅದು ಸಲ್ಲದು ಎಂಬ ಕಟ್ಟುಪಾಡುಗಳನ್ನೆಲ್ಲ ಮುರಿದು,ಜನಸಾಮಾನ್ಯರು ಜಾತಿ – ಮತ ಕುಲಕಸುಬು ಸಾಮಾಜಿಕ ಸ್ತರಗಳ ಭೇದವಿಲ್ಲದೆ, ಲಿಂಗ ವಯಸ್ಸಿನ ನಿರ್ಬಂಧವಿಲ್ಲದೆತಿಳಿದು ಕೊಳ್ಳಬಹುದು ಮತ್ತು ತಿಳಿದುಕೊಳ್ಳಬೇಕು ಎಂದು ದೇಶದೆಲ್ಲೆಡೆ ವಿವಿಧ ಪ್ರಾಂತಗಳಲ್ಲಿ, ವಿವಿಧ ಸಂತರು ಆಯಾಪ್ರದೇಶಗಳ ಭಾಷೆಯಲ್ಲಿ ಸರಳವಾಗಿ ಬೋಧಿಸಿದರು.
ಅಭಂಗಗಳೂ ಆ ಉದ್ದೇಶದಿಂದಲೇ ರಚಿತವಾದುವು. ಹದಿನಾಲ್ಕನೆಯ ಶತಮಾನದಲ್ಲಿ ಮಹಾರಾಷ್ಟ್ರದಲ್ಲಿ ಸಂತಜ್ಞಾನೇಶ್ವರ ಮತ್ತು ಅವರ ಸಹೋದರ ಸಂತ ಸೋಪಾನ, ತಂಗಿ ಮುಕ್ತಾಬಾಯಿ – ಇವರೆಲ್ಲ ಜಾತಿಪದ್ಧತಿಯನ್ನು ಮೀರಿ, ಕೆಳಸ್ತರದಲ್ಲಿದ್ದವರಿಗೆ ಶಿಷ್ಯತ್ವ ಕೊಟ್ಟರು. ಜ್ಞಾನೇಶ್ವರರ ಸಮಕಾಲೀನ ರಾಗಿದ್ದ ನಾಮದೇವರಂತೂ ಹಲವರಿಗೆ ಪ್ರೇರಣೆಯಾಗಿದ್ದ ವರು. ಗೋರ ಕುಂಬಾರ, ನರಹರಿ ಎಂಬ ಅಕ್ಕಸಾಲಿಗ, ಛೋಖಾಮೇಳನೆಂಬ ಅಸ್ಪೃಶ್ಯ, ಸೇನನೆಂಬ ಕ್ಷೌರಿಕ, ಕನ್ಹೋಪಾತ್ರನೆಂಬ ನರ್ತಕ, ಸಿಂಪಿಗ ವೃತ್ತಿಯ ನಾಮದೇವರ ಮನೆಯಲ್ಲಿ ಕೆಲಸಕ್ಕಿದ್ದ ಜನಾಬಾಯಿ ಎಂಬ ಹೆಂಗಸು – ಇವರೆಲ್ಲ ಭಕ್ತಿಮಾರ್ಗದಲ್ಲಿನಡೆದು ವಿಟ್ಠಲನ ಭಕ್ತರಾಗಲಿಕ್ಕೆ, ಅಭಂಗಗಳ ರಚನಾಕಾರರಾಗಲಿಕ್ಕೆ ನಾಮದೇವರೇ ಕಾರಣ.
ಜ್ಞಾನೇಶ್ವರರ ಬಳಿಕ ಭಾನುದಾಸ, ಜನಾರ್ದನಸ್ವಾಮಿ, ಮತ್ತು ಅವರ ಶಿಷ್ಯ ಏಕನಾಥ (ಗುರುವಿನ ಹೆಸರನ್ನೇ ಅಂಕಿತವಾಗಿಸಿ ದವರು: ‘ಮಾಝೇ ಮಾಹೇರ ಪಂಢರಿ…’ ಕೊನೆಯ ಚರಣ ‘ಏಕಾ ಜನಾರ್ದನೀ ಶರಣ… ಕರಿ ಮಾಹೇರಚಿ ಆಠವಣ…’ ಗಮನಿಸಬಹುದು) ಇವರೆಲ್ಲ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದರೂ ಎಲ್ಲರನ್ನೂ ಸಮಾನವಾಗಿ ಕಂಡವರು. ಏಕನಾಥರು ಒಮ್ಮೆ ಶ್ರಾದ್ಧದೂಟಕ್ಕೆ ಮ್ಹಾರ ಜನಾಂಗದವನೊಬ್ಬನನ್ನು ಕರೆದದ್ದು, ಇನ್ನೊಮ್ಮೆ ಒಬ್ಬ ಕೆಳ ಜಾತಿಯ ಬಾಲಕನ ಮೇಲೆ ಪ್ರಾಣಿಯೊಂದು ಎರಗುವುದ ರಲ್ಲಿದ್ದಾಗ ರಕ್ಷಿಸಿ ಎತ್ತಿಕೊಂಡು ಆತನ ಅಮ್ಮನಿದ್ದಲ್ಲಿಗೆ ಒಯ್ದದ್ದು, ಮತ್ತೊಮ್ಮೆ ಒಬ್ಬ ಮ್ಹಾರ ಜಾತಿಯವನ ಮನೆಯಲ್ಲಿ ಊಟ ಮಾಡಿದ್ದು… ಈ ಎಲ್ಲ ಸಂದರ್ಭಗಳಲ್ಲಿ ವಿಪ್ರವರ್ಗವು ಹಾಕಿದ ಬಹಿಷ್ಕಾರವನ್ನು ಏಕನಾಥರು ಸಂತಸದಿಂದ ಸ್ವೀಕರಿಸಿದ್ದು ಎಂದು ಮುಂತಾಗಿ ಐತಿಹ್ಯಗಳಿವೆ.
ಜ್ಞಾನೇಶ್ವರ, ನಾಮದೇವ, ಏಕನಾಥ, ತುಕಾರಾಮ, ರಾಮದಾಸ ಈ ಐವರನ್ನು ಮಹಾರಾಷ್ಟ್ರದ ಸಾಧುಪಂಚಾಯತನ ಎಂದೇ ಗುರುತಿಸಿ ಗೌರವಿಸಲಾಗುತ್ತದೆ. ಇವರಂತೆಯೇ, ಅಭಂಗ ರಚನಕಾರರು ಇನ್ನೂ ಅನೇಕರಿದ್ದಾರೆ. ಆದರೆ ಅಭಂಗ ಎಂದೊಡನೆ ಥಟ್ಟನೆ ನೆನಪಾಗುವುದು ಇವೇ ಹೆಸರುಗಳು. ಸಂತ ನಾಮದೇವರು ಒಂದು ಕೋಟಿ ಅಭಂಗಗಳನ್ನು ರಚಿಸಬೇಕೆಂದುನಿಶ್ಚಯಿಸಿದ್ದರಂತೆ. ಈ ಮನೋರಥ ಪೂರ್ಣವಾಗದಿರಲು, ಮುಂದೆ ನಾಮದೇವನೇ ತುಕಾರಾಮನಾಗಿ ಜನ್ಮತಾಳಿದನೆಂದುಒಂದು ಪ್ರತೀತಿ. ಹಾಗಲ್ಲ, ತುಕಾರಾಮರ ಕನಸಿನಲ್ಲಿ ನಾಮದೇವ ಮತ್ತು ಸ್ವತಃ ವಿಟ್ಠಲನೇ ಬಂದು ಅಭಂಗ ರಚನೆಯ ಜವಾಬ್ದಾರಿ ವಹಿಸಿದರೆಂದು ಇನ್ನೊಂದು ಪ್ರತೀತಿ.
ಕೋಟಿಗಟ್ಟಲೆ ಇರಲಿಕ್ಕಿಲ್ಲವಾದರೂ ಅಭಂಗಗಳ ಒಟ್ಟು ಸಂಖ್ಯೆಯಲ್ಲಿ ತುಕಾರಾಮರ ರಚನೆಗಳ ಬಾಹುಳ್ಯ ಇರುವುದು ಖಂಡಿತ ಹೌದು. ಜನ್ಮತಃ ಬ್ರಾಹ್ಮಣನಲ್ಲ, ವ್ಯಾಪಾರಿ ವೃತ್ತಿಯಲ್ಲಿದ್ದ ತುಕಾರಾಮ ತನ್ನ ಹೆತ್ತವರಿಂದ ಆರಂಭಿಸಿ ಕುಟುಂಬದವರನ್ನು, ಮಡದಿಯನ್ನೂ ಕಳೆದುಕೊಂಡು ಪಡಬಾರದ ಕಷ್ಟಗಳನ್ನೆಲ್ಲ ಅನುಭವಿಸಿ ದೈವಭಕ್ತಿಯ ಸಾಧನೆಯ ಪಥದತ್ತ ಹೊರಳಿದ್ದು. ದೈನಂದಿನ ಬದುಕಿನಲ್ಲಿ ಕಂಡುಬರುವ ಸಣ್ಣಸಣ್ಣ ಸಂಗತಿಗಳನ್ನು, ಮಾನವೀಯ ಸಂಬಂಧಗಳನ್ನು ನಿದರ್ಶನವಾಗಿಸುವುದು ಅವರ ಅಭಂಗಗಳ ವೈಶಿಷ್ಟ್ಯ.
‘ಭೇಟಿ ಲಾಗಿ ಜೀವ ಲಾಗಲೀಸ ಆಸ’ ಅಭಂಗದಲ್ಲಿ, ವಿಟ್ಠಲನನ್ನು ನೋಡಬೇಕೆಂಬ ತನ್ನ ತುಡಿತವನ್ನು, ಮದುವೆಯಾದ ಹೆಣ್ಣು ತನ್ನ ತವರುಮನೆಯವರನ್ನು ನೋಡಲು ಹಾತೊರೆಯುವುದಕ್ಕೆ ಹೋಲಿಸುತ್ತಾರೆ. ಚರಾಚರ ವಸ್ತುಗಳಲ್ಲೆಲ್ಲ ವಿಟ್ಠಲನನ್ನೇ ಹುಡುಕುತ್ತಾರೆ. ‘ಜೇಥೇ ಜಾತೋ ತೇಥೆ ತು ಮಾಝಾ ಸಾಂಘಾತಿ’ (ಎಲ್ಲಿಗೆ ಹೋದರೂ ನಿನ್ನನ್ನೇ ಹಿಂಬಾಲಿಸುವೆ) ಎನ್ನುತ್ತಾರೆ. ‘ಸುಂದರ ತೇ ಧ್ಯಾನ ಉಭೇ ವಿಟೇವರಿ’ (ಇಟ್ಟಿಗೆಯ ಮೇಲೆ ನಿಂತಿರುವ ನಿನ್ನನ್ನು ಧ್ಯಾನಿಸುವುದೇ ಒಂದು ಸುಂದರ ಅನುಭವ) ಎಂದು ಕೊಂಡಾಡುತ್ತಾರೆ. ‘ವೃಕ್ಷವಲ್ಲಿ ಆಮ್ಹಾ ಸೋಯರೀ ವನಚರೇ…’ ಅಭಂಗದಲ್ಲಿ ಗಿಡಮರಬಳ್ಳಿ ಪ್ರಾಣಿಪಕ್ಷಿಗಳೊಂದಿಗೆ ಹರಟುತ್ತಾರೆ.
ಅವುಗಳ ಒಡನಾಟ ಮೋಕ್ಷಪ್ರಾಪ್ತಿಯದೇ ಆನಂದ ಕೊಡುತ್ತದೆ ಎನ್ನುತ್ತಾರೆ. ಪಂಢರಾಪುರಕ್ಕೆ ವರ್ಷಕ್ಕೆರಡು ಸಲ ಯಾತ್ರೆ ಹೋಗುವ ‘ವಾರಕರಿ’ ಗುಂಪುಗಳಲ್ಲಿ ತುಕಾರಾಮರು ತಮ್ಮದೇ ಅಭಂಗಗಳನ್ನು ಹಾಡಿಕೊಂಡು ಹೋಗುತ್ತಿದ್ದರಂತೆ. ವಾರಕರಿಯಾತ್ರಾರ್ಥಿಗಳಿಗೆ ವಿಟ್ಠಲನ ದರ್ಶನವೊಂದೇ ಗುರಿ. ಮೇಲು – ಕೀಳು ಭೇದಭಾವ ಇಲ್ಲ. ಎಲ್ಲರೂ ಒಂದೇ. ನಾಮಸ್ಮರಣೆಜಯಘೋಷ ಮುಗಿಲು ಮುಟ್ಟುತ್ತದೆ. ‘ಖೇಳ ಮಾಂಡಿಯೇಲಾವಾಳವಂಟಿ ಘಾಯಿ…’, ‘ಆನಂದಾಚೆ ಡೋಹಿ ಆನಂದತರಂಗ…’, ‘ಜೈಜೈ ರಾಮಕೃಷ್ಣ ಹರಿ…’, ‘ಹೇಚಿ ದಾನ ದೇಗಾ ದೇವಾ…’ ಮುಂತಾದ ಅಭಂಗಗಳಲ್ಲಿ ಅದೇ ಉತ್ಕಟತೆ.
ಒಂದು ಕಥೆಯ ಪ್ರಕಾರ, ತುಕಾರಾಮರು ಅದುವರೆಗೆ ರಚಿಸಿದ ನೂರಾರು ಅಭಂಗಗಳನ್ನು ಬರೆದಿಟ್ಟಿದ್ದ ತಾಳೆಗರಿಗಳನ್ನುಇಂದ್ರಾಯಣಿ ನದಿಯಲ್ಲಿ ಬಿಸಾಡಿಬಿಡಬೇಕಾಯ್ತು. ತುಕಾರಾಮರ ಜನಪ್ರಿಯತೆಯನ್ನು ಕಂಡು ಮತ್ಸರಿಸಿದ ಮೇಲ್ಜಾತಿಯ ಪಂಡಿತರು ಹೂಡಿದ ತಂತ್ರವದು. ಅದರಿಂದ ನೊಂದ ತುಕಾರಾಮರು ಹದಿಮೂರು ದಿನಗಳ ಕಾಲ ಅನ್ನ – ನೀರು ತೊರೆದು ಉಪವಾಸ ಮಾಡಿ ವಿಟ್ಠಲನನ್ನು ಧ್ಯಾನಿಸಿದರು. ಪವಾಡವೋ ಎಂಬಂತೆ ತಾಳೆಗರಿಗಳ ಕಟ್ಟು ಊರಿನ ಮಂದಿರದಲ್ಲಿದ್ದ ವಿಟ್ಠಲನ ಮೂರ್ತಿಯ ತಲೆಯ ಮೇಲೆ ಕಾಣಿಸಿಕೊಂಡಿತು!
ತುಕಾರಾಮರ ಅಭಂಗಗಳು ಒಂದಕ್ಕಿಂತ ಒಂದು ಆಕರ್ಷಕವೇ. ಅದರಲ್ಲೂ ಕೆಲವಂತೂ ಇನ್ನೂ ಹೆಚ್ಚು ಆಕರ್ಷಕ. ನನ್ನನ್ನು ತುಂಬ ಸೆಳೆದದ್ದು ಇದು: ‘ಕಮೋದಿನೀ ಕಾಯ ಜ಼ಾಣೇ ತೋ ಪರಿಮಳ…’ ಇದರ ಅರ್ಥ ಸರಳವಾಗಿಯೇ ಇದೆ, ಆದರೆಯೋಚಿಸಿದಂತೆಲ್ಲ ಗಹನವಾಗಿಯೂ ಗಂಭೀರವಾಗಿಯೂ ಇದೆ. ‘ಹೂವಿಗೇನು ಗೊತ್ತು ತನ್ನ ಪರಿಮಳದ ಆಕರ್ಷಣೆ? ಆದರೆದುಂಬಿ ಅದೆಲ್ಲವನ್ನೂ ಭೋಗಿಸುತ್ತಿದೆ. ಹಾಗೆಯೇ, ಭಗವಂತನಿಗೇನು ಗೊತ್ತು ಅವನ ನಾಮಮಹಿಮೆ? ಅದರ ವಿಶೇಷತೆ ಏನಿದ್ದರೂ ತಿಳಿದಿರೋದು ನಮಗೇನೇ. ಹಸು ಆಹಾರವೆಂದು ಹುಲ್ಲನ್ನಷ್ಟೇ ತಿನ್ನುತ್ತದೆ; ಆದರೆ ಅದರ ಹಾಲು, ಕರುವಿಗೆ ಅಮೃತಸಮಾನ. ಯಾವಾಗಲೂ ಹಾಗೆಯೇ; ಯಾರ ಬಳಿ ಇದೆಯೋ ಅವರಿಗೆ ಅದರ ಉಪಯೋಗ ಇರುವುದಿಲ್ಲ.
ತುಕಾರಾಮ ಹೇಳುತ್ತಾನೆ – ಚಿಪ್ಪಿನೊಳಗೆ ಮುತ್ತು ಇರುತ್ತದಷ್ಟೆ? ಆದರೆ ಆ ಚಿಪ್ಪಿಗೆ ಗೊತ್ತಿದೆಯೇ ಮುತ್ತಿನ ಶ್ರೇಷ್ಠತೆ? ಈಪ್ರಪಂಚವೇ ಹಾಗೆ. ಯಾರ ಬಳಿ ಇದೆಯೋ ಅವರಿಗೆ ಅದರ ಮಹತ್ವವೇ ಗೊತ್ತಿರುವುದಿಲ್ಲ!’ ಶ್ರೀನಿವಾಸ ಖಳೆ ಅವರ ಸಂಗೀತನಿರ್ದೇಶನದಲ್ಲಿ ಲತಾ ಮಂಗೇಶ್ಕರ್ ಹಾಡಿರುವ ಈ ಅಭಂಗವನ್ನು ನಾನು ಅದೆಷ್ಟು ಬಾರಿ ಕೇಳಿದ್ದೇನೋ! ಇನ್ನೊಂದಿದೆ ನನ್ನಫೇವರಿಟ್ ಅಭಂಗ ‘ವೃಂದಾವನಿ ವೇಣು ವಾಜೆ…’ ಇದು ತುಕಾರಾಮರ ರಚನೆಯಲ್ಲ, ಸಂತ ಭಾನುದಾಸರದು.
ಅಜಿತ್ ಕಡ್ಕಡೆ ಹಾಡಿದ್ದಾರೆ. ಅರುಣಾ ಸಾಯಿರಾಂ ಹಾಡಿದ ಆವೃತ್ತಿಯೂ ಇದೆ, ಎರಡೂ ತುಂಬ ಲವಲವಿಕೆಯಿಂದ ತುಂಬಿವೆ.ವೃಂದಾವನದಲ್ಲಿ ಸಂಜೆಯ ಹೊತ್ತು ಕೃಷ್ಣನು ಕೊಳಲೂದತೊಡಗಿದನೆಂದರೆ ದೃಶ್ಯ ಹೇಗಿರುತ್ತದೆಯೆಂಬ ಬಣ್ಣನೆ. ವೇಣು ವಾದನಕ್ಕೆ ಗೋವರ್ಧನ ಗಿರಿಯೂ ಹೂಂಗುಡುತ್ತ ತಲೆದೂಗುತ್ತದಂತೆ. ನವಿಲು ಗರಿಗೆದರಿ ನರ್ತಿಸುತ್ತದೆ. ಹಸು ಹುಲ್ಲು ಮೇಯುವುದನ್ನು ಮರೆತು ನಿಲ್ಲುತ್ತದೆ. ಅಷ್ಟೇ ಆದರೆ ದೊಡ್ಡ ವಿಷಯವಲ್ಲ, ಹುಲಿಯೂ ಆರಾಮಾಗಿ ಹಸುವಿನ ಪಕ್ಕದಲ್ಲೇ ಕುಳಿತುಕೊಂಡು ಕೃಷ್ಣನ ಕೊಳಲನ್ನಾಲಿಸುತ್ತದಂತೆ!
ಪಕ್ಷಿಗಳು ಸ್ತಬ್ಧವಾದವು, ಜೀವಿಗಳ ಸಹಜ ವೈರತ್ವವೆಲ್ಲ ಒಮ್ಮೆ ಕಣ್ಮರೆಯಾಯಿತು, ದೇವತೆಗಳು ವಿಮಾನದಲ್ಲಿ ಬಂದು ಸ್ತುತಿ ಗೈದರು. ಅಭಂಗಕಾರನ ಕಲ್ಪನೆಯನ್ನು ಗಾಯಕರೂ ಅಷ್ಟೇ ಗಾಢವಾಗಿ ಅನುಭವಿಸುವರು. ಮರಾಠಿ ಬಾರದ ಶ್ರೋತೃಗಳಿಗೂ ಅರ್ಥವಾಗುವಂತೆ ವಿವರಿಸಿಹೇಳಿ ಹಾಡಿದರೆ ಅವರೂ ಕುಳಿತಲ್ಲೇ ವೃಂದಾವನ ವಿಹಾರಕ್ಕೆ ತೊಡಗುವರು. ಸರಳ ಸಾಹಿತ್ಯದ ಅಭಂಗಕ್ಕಿರುವ ಅದ್ಭುತ ಶಕ್ತಿ ಅದು.
ಶಿವಾಜಿಯ ಗುರುಗಳಾದ ಸಮರ್ಥ ರಾಮದಾಸರು ಅಭಂಗಗಳನ್ನು ಮತ್ತು ನಾಮಸಂಕೀರ್ತನೆಯ ಈ ಸಂಪ್ರದಾಯವನ್ನು ತಂಜಾವೂರಿಗೆ ತೆಗೆದುಕೊಂಡು ಹೋಗುವಲ್ಲಿ ಮಹತ್ತದ ಪಾತ್ರವಹಿಸಿದ್ದರು. ಅಭಂಗಗಳು ಮಹಾರಾಷ್ಟ್ರದಿಂದ ಹೊರಗೂಪಸರಿಸಿ, ದಕ್ಷಿಣ ಭಾರತದಲ್ಲಿ ಶಾಸ್ತ್ರೀಯ ರೂಪದಲ್ಲಿ ಅವುಗಳನ್ನು ಹಾಡುವುದಕ್ಕೆ ಇದು ಕಾರಣವಾಯಿತು. ಅರುಣಾ ಸಾಯಿರಾಂ ಮಾತ್ರವಲ್ಲದೆ ರಂಜನಿ – ಗಾಯತ್ರಿ ಜೋಡಿಯೂ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿಗಳಲ್ಲಿ ಅಭಂಗಗಳನ್ನು ಹಾಡುತ್ತಾರೆ.
ನನ್ನ ನೆಚ್ಚಿನ ಸ್ಯಾಕ್ಸೊಫೋನ್ ಕಲಾವಿದ ಡಾ.ಕದ್ರಿ ಗೋಪಾಲನಾಥ್ ಪ್ರತಿ ಕಚೇರಿಯಲ್ಲೂ ದ್ವಿತೀಯಾರ್ಧದಲ್ಲಿಲಘುಶಾಸ್ತ್ರೀಯ ಕೃತಿಗಳನ್ನು ಪ್ರಸ್ತುತಪಡಿಸುವಾಗ ಒಂದಾದರೂ ಮರಾಠಿ ಅಭಂಗ ಸೇರಿಸಿಕೊಳ್ಳುತ್ತಿದ್ದರು. ಅವರ ಸ್ಯಾಕ್ಸೊಫೋನ್ ವಾದನ ಧ್ವನಿಮುದ್ರಿಕೆಗಳಲ್ಲಿ ಅಭಂಗಗಳದೇ ಒಂದು ಆಲ್ಬಂ ಇದ್ದು ನನ್ನ ಸಂಗ್ರಹದಲ್ಲಿ ಅವಶ್ಯವಾಗಿ ಇದೆ. ‘ಮಾಝೇ ಮಾಹೇರ ಪಂಢರೀ…’ ಮಾತ್ರವಲ್ಲದೆ ‘ತೀರ್ಥ ವಿಟ್ಠಲ ಕ್ಷೇತ್ರ ವಿಟ್ಠಲ…’, ‘ವೃಕ್ಷವಲ್ಲಿ ಆಮ್ಹಾ ಸೋಯರಿ…’ ಮುಂತಾದ ನನ್ನಿಷ್ಟದ ಟ್ರ್ಯಾಕ್ಸ್ ಇವೆ ಅದರಲ್ಲಿ. ಕೆಲವೊಮ್ಮೆ ನನಗನಿಸುವುದಿದೆ, ಆರೇಳು ಶತಮಾನಗಳ ಹಿಂದಿನ ಮರಾಠಿ ಸಂತರೇನೋ ಇಷ್ಟು ಒಳ್ಳೆಯ ಅಭಂಗಗಳನ್ನು ರಚಿಸಿದರು, ಆದರೆ ಈಗ೨೧ನೆಯ ಶತಮಾನದಲ್ಲಿ ಅವು ಮರಾಠಿಗರಷ್ಟೇ ಅಲ್ಲದೆ ಬೇರೆ ಭಾಷಿಗರ ಕಿವಿಗಳಿಗಾನಂದ ಕೊಡುತ್ತಿವೆಯಾದರೆ, ನಾಲಗೆಯಲ್ಲಿ ನಲಿಯುತ್ತಿವೆಯಾದರೆ ಅದರ ಹಿಂದೆ ಸಂಗೀತ ನಿರ್ದೇಶಕರಮತ್ತು ಗಾಯಕ / ಗಾಯಕಿಯರ ಕೊಡುಗೆ ಬಹು ದೊಡ್ಡದಿದೆ.
ಕಿಶೋರಿ ಅಮೋನ್ಕರ್, ಜಿತೇಂದ್ರ ಅಭಿಷೇಕಿ, ಶ್ರೀನಿವಾಸ ಖಳೆ, ಹೃದಯನಾಥ ಮಂಗೇಶ್ಕರ್, ರಾಮ ಫಾಟಕ್, ಸುಧೀರ್ ಫಡ್ಕೆ,ಅಜಿತ್ ಕಡ್ಕಡೆ, ಸುಮನ್ ಕಲ್ಯಾಣಪುರ್ ಇನ್ನೂ ಎಷ್ಟೋ ಕಲಾವಿದರು ಅಭಂಗಗಳನ್ನು ನಮಗೆ ಹತ್ತಿರವಾಗಿಸಿದರು. ಅವುಗಳ ಮತ್ತನ್ನು ತಲೆಗೆ ಹತ್ತಿಸಿದರು. ಪಂಡಿತ್ ಭೀಮಸೇನ ಜೋಶಿಯವರು ಹಾಡಿದ ‘ಮಾಝೇ ಮಾಹೇರ ಪಂಢರಿ…’ಯಂತೂ ಅಭಂಗ ಎಂಬ ಸಾಹಿತ್ಯ/ಸಂಗೀತ ಪ್ರಕಾರದ ವಿಶ್ವರಾಯಭಾರಿ ಎನ್ನಲಡ್ಡಿಯಿಲ್ಲ. ಐದಾರು ವರ್ಷಗಳ ಹಿಂದೆ ಇಲ್ಲಿ ವಾಷಿಂಗ್ಟನ್‌ನಲ್ಲಿ ಅಮೆರಿಕನ್ನಡಿತಿ ಹುಡುಗಿಯೊಬ್ಬಳ ಭರತನಾಟ್ಯ ರಂಗಪ್ರವೇಶ ಕಾರ್ಯಕ್ರಮ ವೀಕ್ಷಿಸಿದ್ದೆ.
ಪುಷ್ಪಾಂಜಲಿ, ಪದವರ್ಣ ಮುಂತಾದ ಗಂಭೀರ ಪ್ರಸ್ತುತಿಗಳ ಬಳಿಕ ‘ಮಾಝೇ ಮಾಹೇರ ಪಂಢರಿ…’ ಮೂಡಿಬಂದಾಗಆಡಿಟೋರಿಯಂನಲ್ಲೊಂದು ಅದ್ಭುತ ವಿದ್ಯುತ್‌ಸಂಚಾರ! ಆರಂಭೀವಂದೀನ ಅಯೋಧ್ಯೆಚಾ ರಾಜಾ…, ಧ್ಯಾನಿಯಾಂಚಾ ರಾಜ ಗುರುಮಹಾರಾಜ…, ಪಂಢರಿಚಾ ವಾಸ ಚಂದ್ರಭಾಗೇ ಸ್ನಾನ…, ಸಾಂವಳೆ ಸುಂದರ ರೂಪ ಮನೋಹರ…, ವಿಟ್ಠಲ ಗೀತಿ ಗಾವಾ ವಿಟ್ಠಲ ಚಿತ್ತಿ ಘ್ಯಾವಾ…, ಅಣುರಣಿಯಾ ಥೋಕಡಾ…, ರಾಜಸ ಸುಕುಮಾರ ಮದನಾಚಾ ಪುತಳ…, ಪಂಢರೀನಿವಾಸ ಸಖಾ ಪಾಂಡುರಂಗ…, ಮಾಝಾ ಭಾವ ತುಝೇ ಚರಣಿ… ಭೀಮಸೇನ ಜೋಶಿಯವರ ಕಂಚಿನ ಕಂಠದಲ್ಲಿ ಇವನ್ನೆಲ್ಲ ಕೇಳುತ್ತಿದ್ದರೆ ಉಂಟಾಗುವ ಭಾವಪರವಶತೆಯೂ ‘ಅಭಂಗ’ವೇ! ನನಗಂತೂ ಹೌದು.
ಮತ್ತೆ, ‘ಟೊಂಕದ ಮೇಲೆ ಕೈ ಇಟ್ಟಾನ| ಭಕ್ತೀ ಸುಂಕ ಬೇಡತಾನ| ಡೊಂಕ ಇಲ್ಲಾ, ಬಿಂಕ ಇಲ್ಲಾ| ಅಭಂಗ ಪದದವನ ಅಭಂಗ ಪದದವನ…’ ಎಂದು ಬೇಂದ್ರೆಯವರು ಅಭಂಗಗಳನ್ನು ಕೊಂಡಾಡುತ್ತಲೇ ವಿಟ್ಠಲನನ್ನು ಸ್ತುತಿಸಿದ್ದು ಸುಮ್ಮನೆ ಅಲ್ಲ