ಸಕ್ಕರೆ ಸಚಿವರುಂಟು, ಅಕ್ಕರೆ, ಆಸರೆಗೆ ಏಕಿಲ್ಲ ?
ನಾಡಿಮಿಡಿತ
ವಸಂತ ನಾಡಿಗೇರ
ಇತ್ತೀಚೆಗೆ ಪ್ರಕಟವಾದ ಸುದ್ದಿಯೊಂದು ವಿಶೇಷವಾಗಿ ನನ್ನ ಗಮನವನ್ನು ಸೆಳೆಯಿತು. ಅದೇನೆಂದರೆ ಜಪಾನ್‌ನಲ್ಲಿ ‘ಒಂಟಿತನನಸಮಸ್ಯೆ’ ನಿಭಾಯಿಸಲು ಒಬ್ಬ ಸಚಿವರನ್ನು ನೇಮಿಸಲಾಗಿದೆ.
ತೆತ್ಸಿಷಿ ಸಕಮೋಟೊ ಎಂಬ 70 ವರ್ಷದ ಈ ಸಚಿವರು ಇದೀಗ ತಾನೆ ಈ ಹೊಸ ಖಾತೆಯನ್ನು ವಹಿಸಿಕೊಂಡಿದ್ದಾರೆ. ಕುಗ್ಗುತ್ತಿರುವ ಜನಸಂಖ್ಯೆ, ಪುನಶ್ಚೇತನ ಕುರಿತಾದ ಖಾತೆಯನ್ನು ನೋಡಿಕೊಳ್ಳುತ್ತಿದ್ದ ಅವರಿಗೆ ಇದನ್ನು ಹೆಚ್ಚುವರಿಯಾಗಿ ನೀಡಲಾಗಿದೆ. ಏಕಾಂಗಿತನ ಅಥವಾ ಒಂಟಿತನದ ಸಮಸ್ಯೆ ನಿವಾರಿಸಲೊಂದು ಪ್ರತ್ಯೇಕ ಖಾತೆಯೇ? ಎಂದು ಹುಬ್ಬೇರಿಸದಿರಿ. ಏಕೆಂದರೆ ಇದು ಆ ದೇಶದಲ್ಲೀಗ ಬಹುದೊಡ್ಡ ಸಮಸ್ಯೆ. ಜಪಾನ್ ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು ಅಧಿಕ.
ಈಗ ಕರೋನಾ ಸಾಂಕ್ರಾಮಿಕದಿಂದಾಗಿ ಆ ಸಮಸ್ಯೆ ಮತ್ತಷ್ಟು ಬಿಗಡಾಯಿಸಿದೆಯಂತೆ. ಜಪಾನಿನ ಅತಿ ಎತ್ತರದ ಪರ್ವತವಾದ ಮೌಂಟ್ ಫ್ಯುಜಿ ಭಾಗದಲ್ಲಿರುವ ಆವೋಕಿಘರ ಎಂಬ ಪ್ರದೇಶವು ‘ಆತ್ಮಹತ್ಯಾ ಅರಣ್ಯ’ ಎಂದೇ ಕುಖ್ಯಾತಿ ಪಡೆದಿದೆ.ಕಾಡಿನಂಥ ಈ ಪ್ರದೇಶದಲ್ಲಿ ಜನರು ನಿಗೂಢವಾಗಿ ಕಣ್ಮರೆಯಾಗುತ್ತಾರೆ. ಅವರು ಏನಾಗುತ್ತಾರೆ ಎಂಬುದು ಯರಿಗೂ ಸರಿಯಾಗಿ ಗೊತ್ತಾಗುವು ದಿಲ್ಲ. ತಿಂಗಳಿಗೊಮ್ಮೆ ಇಲ್ಲಿ ಪೊಲೀಸ್ ಮತ್ತಿತರ ಇಲಾಖೆಯವರು ತಲಾಶ್ ಮಾಡಿದಾಗ ಒಂದಷ್ಟು ಶವಗಳು, ಅಸ್ಥಿಪಂಜರಗಳುಸಿಗುತ್ತವೆ. ಈ ಸಾವು ನಿಗೂಢವಾಗಿದೆಯಾದರೂ ಇವೆಲ್ಲ ಬಹುತೇಕ ಆತ್ಮಹತ್ಯಾ ಪ್ರಕರಣಗಳು ಎಂದೇ ನಂಬಲಾಗಿದೆ.
ಇದರ ಜತೆಗೆ ತಕಹಿರಿ ಶಿರೈಷಿ ಎಂಬ ವಿಚಿತ್ರ ಮನುಷ್ಯನೊಬ್ಬನಿದ್ದಾನೆ. ಒಬ್ಬ ಅತ್ಯಾಚಾರಿ ಮತ್ತು ಸೀರಿಯಲ್ ಕಿಲ್ಲರ್ ಆದ ಆತ ಆತ್ಮಹತ್ಯೆಯ ಪ್ರವೃತ್ತಿ ಹೊಂದಿರುವ ಮಹಿಳೆಯರನ್ನು ಟ್ವಿಟರ್ ಮೂಲಕ ಸಂಪರ್ಕಿಸಿ ತನ್ನ ಮನೆಗೆ ಬರುವಂತೆ ಪುಸಲಾಯಿಸು ತ್ತಿದ್ದ. ಅಲ್ಲಿ ಅವರ ಮೇಲೆ ಅತ್ಯಾಚಾರ ಎಸಗಿ ಅನಂತರ ಕೊಲ್ಲುತ್ತಿದ್ದ. ಜಪಾನ್‌ನಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚು ಎಂಬುದಕ್ಕೆಇವು ಎರಡು ಉದಾಹರಣೆಗಳಷ್ಟೇ. ದಶಕಗಳಿಂದಲೂ ಜಪಾನ್ ದೇಶವು ಆತ್ಮಹತ್ಯಾ ಪ್ರಕರಣಗಳ ಸಮಸ್ಯೆಯನ್ನು ಎದುರಿಸು ತ್ತಲೇ ಬಂದಿದೆ. ಕಳೆದೊಂದು ದಶಕದ ಅಂಕಿ ಅಂಶಗಳನ್ನು ಗಮನಿಸಿದರೆ, ಸಾವಿನ ಟಾಪ್ ಹತ್ತು ಕಾರಣಗಳಲ್ಲಿ ಆತ್ಮಹತ್ಯೆ ಸದಾ ಮೂಂಚೂಣಿಯಲ್ಲಿದೆ ಎಂಬುದು ಗೊತ್ತಾಗುತ್ತದೆ.
ಸರಕಾರದ ನಾನಾ ಪ್ರಯತ್ನಗಳಿಂದಾಗ ಕಳೆದೊಂದು ದಶಕದಲ್ಲಿ ಅಲ್ಲಿ ಆತ್ಮಹತ್ಯೆ ಪ್ರಕರಣಗಳು ಇಳಿಕೆಯಾಗುತ್ತಿದ್ದವು. ಆದರೆ2020ರಲ್ಲಿ ಇದರಲ್ಲಿ ಏಕ್‌ದಂ ಶೇ.3.7ರಷ್ಟು ಏರಿಕೆ ಕಂಡುಬಂದಿತು. ಅಂದರೆ ಆತ್ಮಹತ್ಯೆ ಮಾಡಿಕೊಂಡವರ ಸಂಖ್ಯೆ 21000ಕ್ಕೆ ಜಿಗಿಯಿತು.2003ರಲ್ಲಿ34000ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದೇ ಅತ್ಯಧಿಕ ಎನಿಸಿತ್ತು. ಅದಾದ ಮೇಲೆ ಈ ಪ್ರವೃತ್ತಿ ಯಲ್ಲಿ ಇಳಿಕೆ ಕಂಡುಬರತೊಡಗಿತ್ತು. ಆದರೆ ಕಳೆದ ವರ್ಷ ಸಡನ್ನಾಗಿ ಏರಿಕೆ ಕಂಡುಬಂದಿದ್ದಕ್ಕೆ ಕಾರಣ – ಕರೋನಾ ಸಾಂಕ್ರಾಮಿಕ.
ಕರೋನಾದಿಂದಾಗಿ ಅಲ್ಲಿ ನಿರುದ್ಯೋಗ ಸಮಸ್ಯೆ ಬಾಧಿಸತೊಡಗಿಸಿದ್ದರಿಂದ ಜನರಲ್ಲಿ ಆತ್ಮಹತ್ಯಾ ಪೃವೃತ್ತಿ ಹೆಚ್ಚಾಗಿದೆಯಂತೆ. ಹಾಗೆಂದು ಇದು ಇಂಥವರಲ್ಲೇ ಹೆಚ್ಚಾಗಿ ಕಂಡುಬರುತ್ತದೆ ಎಂದೇನೂ ಇಲ್ಲ. ಏಕೆಂದರೆ ಎಲ್ಲ ವಯಸ್ಸಿನ, ಎಲ್ಲ ವರ್ಗದ, ಗಂಡುಹೆಣ್ಣೆಂಬ ಭೇದ ಭಾವವಿಲ್ಲದೆ ಎಲ್ಲರಲ್ಲೂ ಮಾನಸಿಕ ಒತ್ತಡ ಹೆಚ್ಚಾಗಿದೆ. ನಿರುದ್ಯೋಗದಿಂದಾಗಿ ಅಲ್ಲಿನ ಜನರಲ್ಲಿ ಒಂಟಿತನ ತುಂಬ ಕಾಡತೊಡಗಿದೆಯಂತೆ. ಅದರಲ್ಲೂ ಮಹಿಳೆಯರಲ್ಲಿ ಈ ಸಮಸ್ಯೆ ಹೆಚ್ಚು.
ಏಕೆಂದರೆ ಮಹಿಳೆಯರು ಅರೆಕಾಲಿಕ ಕೆಲಸ ಮಾಡುವುದು ಜಾಸ್ತಿ. ಇದೀಗ ಕರೋನಾ ಸಮಸ್ಯೆ ಯಿಂದಾಗಿ ಕೆಲಸ ಕಳೆದುಕೊಳ್ಳು ವವವರಲ್ಲಿ ಮಹಿಳೆಯರೇ ಹೆಚ್ಚು. ಹೀಗಾಗಿ ಅವರಲ್ಲಿ ಆತ್ಮಹತ್ಯೆ ಪ್ರಮಾಣ ಹೆಚ್ಚಾಗಿ ಕಂಡುಬಂದಿದೆ. ಇದರ ಜತೆಗೆ ಸಿನಿಮಾ ತಾರೆಯರು, ಟಿವಿ ನಟಿಯರು ಮೊದಲಾದ ಸೆಲೆಬ್ರಿಟಿಗಳೂ ಆತ್ಮಹತ್ಯೆಯ ದಾರಿ ಕಂಡುಕೊಳ್ಳುತ್ತಿರುವುದು ಅಲ್ಲಿನ ಸರಕಾರವನ್ನು ಆತಂಕಕ್ಕೆ ದೂಡಿದೆ.
ಈ ಕಾರಣಕ್ಕಾಗಿ ಜಪಾನಿನಲ್ಲೂ ಏಕಾಂಗಿತನಕ್ಕಾಗಿ ಅಂದರೆ ಆ ರೀತಿಯ ಸಮಸ್ಯೆಯನ್ನು ನಿಭಾಯಿಸಲು ಪ್ರಧಾನಿ ಯೊಶಿಹಿದೆ ಸುಗಾ ಅವರು ಪ್ರತ್ಯೇಕ ಖಾತೆಯನ್ನು ಸೃಷ್ಟಿಸಿದ್ದಾರೆ. ಇಂಥದೊಂದು ಖಾತೆ ಬ್ರಿಟನ್‌ನಲ್ಲಿ 2018ರಿಂದಲೇ ಇದೆ. ಅದೇ ಮಾದರಿ ಯಲ್ಲಿ ಜಪಾನಿನಲ್ಲೂ ಈಗ ಏಕಾಂಗಿತನವನ್ನು ದೂರಮಾಡಲು, ಮಾನಸಿಕ ಸಮಸ್ಯೆ ಯನ್ನು ನಿಭಾಯಿಸಲು ಖಾತೆಯನ್ನು ರಚಿಸಲಾಗಿದೆ.
ವ್ಯತ್ಯಾಸವಿಷ್ಟೆ. ಬ್ರಿಟನ್‌ನಲ್ಲಿ ಹಿರಿಯ ನಾಗರಿಕರಲ್ಲಿ ಆತ್ಮಹತ್ಯಾ ಪ್ರವೃತ್ತಿ ಹೆಚ್ಚಾಗಿ ಕಂಡುಬರುತ್ತಿದೆ. ಆದರೆ ಜಪಾನ್‌ನಲ್ಲಿ ಕರೋನಾ ಕಾರಣದಿಂದ ಇದರ ಪ್ರಮಾಣ ಹೆಚ್ಚಾಗಿದೆ. ಇದು ಬ್ರಿಟನ್ ಮತ್ತು ಜಪಾನ್ ದೇಶಗಳ ಕತೆಯಾಯಿತು. ಇನ್ನೂ ಕೆಲವು ದೇಶಗಳಲ್ಲಿ ಕೆಲವು ವಿಚಿತ್ರ ಮತ್ತು ವಿಶೇಷವಾದ ಖಾತೆಗಳಿವೆ. ಜಪಾನ್‌ನಲ್ಲೇ ಮತ್ತೊಂದು ವಿಶೇಷವಾದ ಖಾತೆಯನ್ನು ಹೊಂದಿರುವ ಸಚಿವರಿದ್ದಾರೆ.
ಅಲ್ಲಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆಯಾದ ಹಾರುಕೊ ಅರಿಮುರಾ ಎಂಬುವವರಿಗೆ ಶೌಚಾಲಯ ಖಾತೆ ಯನ್ನು ಹೆಚ್ಚುವರಿಯಾಗಿ ವಹಿಸಿಕೊಡಲಾಯಿತಂತೆ. ಇದು 2014 ರ ಮಾತು. ಹಾಗೆ ನೋಡಿದರೆ ಜಪಾನ್‌ನಲ್ಲಿ ಅತ್ಯುತ್ತಮ ಶೌಚಾಲಯ ವ್ಯವಸ್ಥೆ ಇದೆ. ಆದರೂ ಅದನ್ನು ಸುಧಾರಿಸಲು ಒಂದು ಪ್ರತ್ಯೇಕ ಕಾತೆಯನ್ನೆ ಸೃಜಿಸಲಾಯಿತು. ನಮ್ಮ ರಾಜ್ಯ ದಲ್ಲೂ , ಮನೆ ಮನೆಯಲ್ಲೂ ಶೌಚಾಲಯ ನಿರ್ಮಾಣದ ಉದ್ದೇಶ ಹೊಂದಲಾಗಿದೆ. ಶೌಚಾಲಯ ಇಲ್ಲದಿರುವವರಿಗೆಚುನಾವಣೆಗೆ ಸ್ಪರ್ಧಿಸಲು ಅವಕಾಶ ನೀಡದಿರುವ ಬಗ್ಗೆ ಆಗಾಗ ಚರ್ಚೆಗಳಾಗುವುದುಂಟು.
’ಆದರೆ ಅದು ಇದುವರೆಗೂ ಜಾರಿಗೆ ಬಂದಿಲ್ಲ. ಹಿಂದೊಮ್ಮೆ ಗ್ರಾಮೀಣಾಭಿವೃದ್ಧಿ ಸಚಿವರಾಗಿದ್ದ ಎಂ ಪಿ ಪ್ರಕಾಶ್ ಅವರು ಇಂಥದೊಂದು ಪ್ರಸ್ತಾಪ ಮುಂದಿಟ್ಟಾಗ, ಅವರನ್ನು ‘ಟಾಯ್ಲೆಟ್ ಸಚಿವ’ ಎಂದು ತಮಾಷೆ ಮಾಡಲಾಯಿತು. ಈ ಹಿಂದೆಯೇ ಒಮ್ಮೆ ಪ್ರಸ್ತಾಪಿಸಿರುವಂತೆ, ಭೂತಾನ್ ನಲ್ಲಿ ಜಿಡಿಪಿಯಂತೆ’ ಗ್ರಾಸ್ ಹ್ಯಾಪಿನೆಸ್ ಇಂಡೆಕ್ಸ್’ ಜಾರಿಯಲ್ಲಿದೆ. ಅಂದರೆ ಜನರು ಸಂತಸದಿಂದ ಇರುವುದಕ್ಕೆ ಅಲ್ಲಿ ಒತ್ತು ನೀಡಲಾಗಿದೆ.  ಲ್ಲೂ ಇದಕ್ಕಾಗಿ ಸಚಿವರಿದ್ದಾರೆ.
ಹೀಗಾಗಿ ವಿಶ್ವದ ಅತಿ ಸಂತೋಷಕರ ದೇಶಗಳಲ್ಲಿ ಅದೂ ಒಂದಾಗಿದೆ. ಮಧ್ಯಪ್ರದೇಶದಲ್ಲೂ 2016 ರಲ್ಲಿ ಸಂತಸ ಖಾತೆಯನ್ನು ರಚಿಸಲಾಯಿತು. ಇದು ಭೂತಾನ್ ಮಾದರಿಯಲ್ಲೆ ಇದ್ದು ಆತ್ಮಹತ್ಯೆಯಿಂದ ಕಂಗೆಟ್ಟಿರುವ ರೈತರ ಜೀವನ ಸುಧಾರಿಸಲು ಏನು ಕ್ರಮ ಕೈಗೊಳ್ಳಬೇಕು ಎಂಬುದರ ಕುರಿತು ಆಲೋಚಿಸುವುದು ಮತ್ತು ಕಾರ್ಯ ಪೃವೃತ್ತವಾಗುವುವುದು ಇದರ ಕೆಲಸ. ಅದೇ ರೀತಿ ಯುನೈಟೆಡ್ ಅರಬ್ ಎಮಿರೇಟ್ಸ್, ಅಂದರೆ ಅರಬ್ ಸಂಯುಕ್ತ ಸಂಸ್ಥಾನದಲ್ಲೂ ಸಂತಸ ಖಾತೆಯನ್ನು ಹೊಂದಿರುವ ಒಬ್ಬ ಸಚಿವೆ ಇದ್ದಾರೆ.
2016ರಲ್ಲೇ ಇರುವ ಈ ಮಹಿಳೆಯ ಹೆಸರು ಊಹೂದ್ ಅಲ್ ರೌನಿ ಅಂತ. ದೇಶದ ಜನರಲ್ಲಿ ಸಂತಸ ಹೆಚ್ಚಿಸಲು ಕೈಗೊಳ್ಳ ಬೇಕಾದ ಕ್ರಮಗಳ ಬಗ್ಗೆ ಯೋಚಿಸಿ, ಯೋಜಿಸುವುದೇ ಈ ಖಾತೆಯ ಕೆಲಸ. ಹೀಗೆ ಪ್ರಪಂಚದಾದ್ಯಂತ ಕೆಲವು ದೇಶಗಳ ಸರಕಾರದಲ್ಲಿ ಅವುಗಳ ಆದ್ಯತೆ ಬೇರೆ ಬೇರೆ ತೆರನಾಗಿರುತ್ತದೆ. ಅವುಗಳ ಅಜೆಂಡಾ ಕೂಡ ಬೇರೆ ಬೇರೆ ಆಗಿರುತ್ತವೆ. ಇವೆಲ್ಲವು ಗಳನ್ನು ಗಮನಿಸಿದರೆ ಈ ಖಾತೆಗಳು ಜನರ ಜೀವನ, ಸುಖ ದುಃಖ, ದೂರು ದುಮ್ಮಾನಗಳಿಗೆ ಸಂಬಂಧಿಸಿದವಾಗಿವೆ. ಬಹುತೇಕ ಕಡೆ ಸಾಮಾನ್ಯವಾಗಿ ಅದೇ ವಿತ್ತ ಖಾತೆ, ರಕ್ಷಣೆ, ವಿದೇಶಾಂಗ ಇತ್ಯಾದಿ ಖಾತೆಗಳ ಸಚಿವರಿರುತ್ತಾರೆ.
ಅದು ಬಿಟ್ಟರೆ ಆರೋಗ್ಯ, ಸಮಾಜ ಕಲ್ಯಾಣ, ಕಾರ್ಮಿಕ ಇತ್ಯಾದಿಗಳಿರುತ್ತವೆ. ಆದರೆ, ಮೇಲೆ ಪ್ರಸ್ತಾಪಿಸಿದ ಕೆಲವು ಉದಾಹರಣೆ ಗಳನ್ನು ನೋಡಿದರೆ ನಿಜಕ್ಕೂ ಸಂತಸವಾಗುತ್ತದೆ. ಅಲ್ಲಿನ ಸರಕಾರ ಜನರಿಗೆ ಹತ್ತಿರವಾಗಿದೆ. ಜನರ ಬೇಕು ಬೇಡಗಳಿಗೆ ಸ್ಪಂದಿಸು ತ್ತದೆ ಎಂಬುದು ವೇದ್ಯ. ಇಲ್ಲದಿದ್ದರೆ  ಟಾಯ್ಲೆಟ್‌ಗೆ ಎಂದೇ ಪ್ರತ್ಯೇಕ ಸಚಿವಾಲಯವನ್ನು ಮಾಡಿ ಅದಕ್ಕೊಬ್ಬ ಸಚಿವರನ್ನು ನೇಮಿಸುವ  ರಕತ್ತು ಏನಿತ್ತು? ಅದೂ ಅತ್ಯಂತ ಸ್ವಚ್ಛ ಎನಿಸಿರುವ, ಅದ್ಭುತ ಶೌಚಾಲಯ ಸೌಲಭ್ಯ ಇರುವಂಥ ದೇಶದಲ್ಲಿ ? ನಿಜವಾಗಿ ಅಂಥದೊಂದು ಖಾತೆಯ ಅಗತ್ಯ ಇರುವುದು ನಮ್ಮಲ್ಲಿ ಅಲ್ಲವೇ ? ಏಕೆಂದರೆ ಸ್ವಾತಂತ್ರ್ಯ ಬಂದು 73ವರ್ಷಗಳಾದರೂ ನಮ್ಮಲ್ಲಿ ಇನ್ನೂ ಬಯಲು ಶೌಚದ ಸಮಸ್ಯೆ ದೂರವಾಗಿಲ್ಲ.
ಇನ್ನೂ ಕೂಡ ಸ್ವಚ್ಛ ಭಾರತ್ ಅಭಿಯಾನವನ್ನು ಕೈಗೊಳ್ಳುತ್ತಿದ್ದೇವೆ. ಸ್ವಚ್ಛತೆಯ ಕಡೆ ಒಂದು ಹೆಜ್ಜೆ’ ಎಂಬ ಘೋಷಣೆ ಮೊಳಗಿಸುತ್ತಿದ್ದೇವೆ. ನಮ್ಮಲ್ಲಿ ತಾನೆ ಜಪಾನ್ ರೀತಿಯಲ್ಲಿ ‘ಟಾಯ್ಲೆಟ್ ಸಚಿವರ’ ಅಗತ್ಯ ಇರೋದು ? ಆದರೆ ಹಾಗೊಮ್ಮೆ ಇಂಥಖಾತೆಯನ್ನೇದಾರು ಸೃಷ್ಟಿಸಿದರೆ ಅದನ್ನು ಒಪ್ಪಿಕೊಳ್ಳಲು ಬಹುಶಃ ಯಾರೂ ಮುಂದೆ ಬರಲಿಕ್ಕಿಲ್ಲ. ಒಪ್ಪಿಕೊಂಡರೆಪ್ರಕಾಶ್ ಅವರಂತೆ ಗೇಲಿಗೊಳಗಾಗುವುದು ಗ್ಯಾರಂಟಿ. ಮೊದಲೆಲ್ಲ ಸಚಿವರ ಸಂಖ್ಯೆಯ ಮೆಲೆ ಯಾವುದೇ ಇತಿಮಿತಿ ಇರಲಿಲ್ಲ. ಅತೃಪ್ತರನ್ನು ತೃಪ್ತಿ ಪಡಿಸಲು ಬೇಕು ಬೇಕಾದವರಿಗೆಲ್ಲ ಮಂತ್ರಿ ಸ್ಥಾನವನ್ನು ಕೊಡಲಾಗುತ್ತಿತ್ತು.
ಆಗೆಲ್ಲ ಜಂಬೋ ಕ್ಯಾಬಿನೆಟ್ ಎಂದೆಲ್ಲ ಟೀಕೆ ಮಾಡಿ ವರದಿಗಳನ್ನು ಪ್ರಕಟಿಸಲಾಗುತ್ತಿತ್ತು. ಅದೂ ಅಲ್ಲದೆ ಅಷ್ಟು ಜನರು ಮಂತ್ರಿಗಳಾದರೆ ಅವರಿಗೆ ಹಂಚಲು ಖಾತೆಗಳೇ ಇರುತ್ತಿರಲಿಲ್ಲ. ಕಳ್ಳೆಪುರಿಯಂತೆ ಮಂತ್ರಿಸ್ಥಾನ ವನ್ನು ಹಂಚಿದ ಮೇಲೆ ಖಾತೆ ಗಳನ್ನು ಕೊಡುವುದು ಒಂದು ಸವಾಲಿನ ಕೆಲಸವೇ. ಹೀಗಾಗಿ ಅಗೆಲ್ಲ ‘ಸಕ್ಕರೆ ಸಚಿವ’ ಎಂದೆಲ್ಲ ಖಾತೆಗಳನ್ನು ಸೃಷ್ಟಿಸುತ್ತಿದ್ದರು.
ನೀರಾವರಿಯನ್ನು ವಿಭಜಿಸಿ, ಸಣ್ಣ ನೀರಾವರಿ, ಬೃಹತ್ ನೀರಾವರಿ ಎಂದು ಹರಿದು ಹಂಚಿ ವರಿ ಕಡಿಮೆ ಮಾಡಿಕೊಳ್ಳುತ್ತಿದ್ದರು. ಹಾಗೆಯೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಬೇರೆ, ಉನ್ನತ ಶಿಕ್ಷಣ ಬೇರೆ . ಇದರ ಜತೆಗೆ ವೈದ್ಯಕೀಯ ಶಿಕ್ಷಣ ಮತ್ತೊಂದು ಖಾತೆ. ಅದೇ ರೀತಿ ಆರೋಗ್ಯ ಸಚಿವರು ಬೇರೆ, ವೈದ್ಯ ಶಿಕ್ಷಣ ಸಚಿವರು ಬೇರೆ; ಸಣ್ಣಉದ್ಯಮ ಬೇರೆ, ಬೃಹತ್ ಉದ್ಯಮಕ್ಕೆ ಬೇರೆಯೇ ಆದ ಸಚಿವರು. ಕೃಷಿ ಬೇರೆ, ತೋಟಗಾರಿಕೆ ಬೇರೆ, ಪಶುಸಂಗೋಪನೆ ಬೇರೆ.
ಇನ್ನು ಯಾವ ಖಾತೆ ಯಾರಿಗೆ ಎಂಬುದನ್ನು ನೋಡಿದರೆ ಮತ್ತೂ ದಿಗಿಲಾಗುತ್ತದೆ. ಯಾರ‍್ಯಾರಿಗೋ ಯಾವ ಯಾವುದೋ ಖಾತೆ. ಕ್ಯಾತೆಗೆ ತಕ್ಕಂತೆ ಖಾತೆ ಅಷ್ಟೆ. ಹೆಬ್ಬೆಟ್ಟು ಒತ್ತುವವರು ಶಿಕ್ಷಣ ಸಚಿವ ರಾಗ  ಬಹುದು. ಒಂದು ಕೋಟಿಗೆ ಎಷ್ಟು ಸೊನ್ನೆ ಎಂಬುದುಕೂಡ ಗೊತ್ತಿಲ್ಲದವರು ವಿತ್ತ ಸಚಿವರಾಗಬಹದು.
ಹೊಲವನ್ನೇ ನೋಡದವರು ಕೃಷಿ ಮಂತ್ರಿ ಆಗಲೂ ಬಹುದು. ಇತ್ತೀಚೆಗೆ ನಮ್ಮ ರಾಜ್ಯದಲ್ಲಿ ಮಂತ್ರಿಮಂಡಲ ವಿಸ್ತರಣೆ ಆಯಿತು. ಆದರೆ ಮೂರ‍್ನಾಲ್ಕು ದಿನ ಖಾತೆಗಳ ಹಂಚಿಕೆಯೇ ಆಗಲಿಲ್ಲ. ಏಕೆಂದರೆ ತಮಗೆ ಇಂಥ ಖಾತೆಯೇ ಬೆಕೆಂಬ ಪಟ್ಟು. ಕೊನೆಗೆ ಹಂಚಿದರೂ ಅದು ಬೇಡ ಎಂಬ ರಚ್ಚೆ. ಹೀಗಾಗಿ ಮೂರ‍್ನಾಲ್ಕು ಬಾರಿ ಖಾತೆಗಳು ಬದಲಾದವು. ಇದು ನಮ್ಮ ಪರಿಸ್ಥಿತಿ.ಇಂತಿರು ವಾಗ ಶೌಚಾಲಯ ಖಾತೆ, ಸಂತಸ ಖಾತೆಗಳನ್ನು ಕೊಟ್ಟರೆ ಹೇಗೆ ? ಸ್ವತಃ ಸಚಿವರಿಗೇ ಸಂತಸ ಎಂಬುದು ಇಲ್ಲದಿರುವಾಗ ರಾಜ್ಯವನ್ನು, ದೇಶವನ್ನೇನು ಸಂತಸದಲ್ಲಿ ಇಡುತ್ತಾರೆ ಹೇಳಿ.
ನಮ್ಮ ರಾಜ್ಯವೇ ಅಂತಲ್ಲ. ಇಂಥ ಅಪಸವ್ಯಗಳು ಎಲ್ಲ ಕಡೆ ಹಾಸುಹೊಕ್ಕಾಗಿವೆ. ಏಕೆಂದರೆ ಎಲ್ಲವೂ ಜಾತಿ, ಪ್ರದೇಶ, ಮತ್ತೊಂದು ಮಗದೊಂದು ಆಧಾರದ ಮೇಲೆಯೇ ನಿರ್ಧಾರವಾಗುವಂಥದ್ದು. ಆದದ್ದಾಯಿತು. ಈಗಲಾದರೂ ನಾವ್ಯಾಕೆ ಈ ನಿಟ್ಟಿನಲ್ಲಿ ಹೊಸ ಹೆಜ್ಜೆ ಇಡಬಾರದು ? ನಮ್ಮಲ್ಲೂ ರೈತರ ಆತ್ಮಹತ್ಯೆ ಸಮಸ್ಯೆ ಗಂಭೀರವಾಗಿಯೇ ಇದೆ. ಇದನ್ನು ಸೂಕ್ತವಾಗಿನಿಭಾಯಿಸಲು ಇದುವರೆಗೂ ನಮಗೆ ಸಾಧ್ಯವಾಗಿಲ್ಲ.
ಅಸಲಿಗೆ, ಯಾಕೆ ಹೀಗೆ ಆಗುತ್ತದೆ ಎಂಬುದರ ಬಗ್ಗೆ ಸ್ಪಷ್ಟ ಅಧ್ಯಯನ ನಡೆಸಿಲ್ಲ. ಒಮ್ಮೆ ಅಧ್ಯಯನಕ್ಕೆ ಸಮಿತಿಯೊಂದನ್ನು ರಚಿಸಲಾಗಿತ್ತು. ಆದರೆ ಅದು ಕೊಟ್ಟ ವರದಿ ದೊಡ್ಡ ಕೋಲಾಹಲವನ್ನೇ ಸೃಷ್ಟಿಸಿತು. ಏಕೆಂದರೆ ಆತ್ಮಹತ್ಯೆ ಮಾಡಿಕೊಳ್ಳುವ ರೈತರಿಗೆ ಪರಿಹಾರ ನೀಡಬೇಕಾದ ಅಗತ್ಯವಿಲ್ಲ ಎಂಬ ಧ್ವನಿ ಇರುವಂಥ ವರದಿ ಅದಾಗಿತ್ತು. ಆತ್ಮಹತ್ಯೆ ಮಾಡಿಕೊಳ್ಳುವ ರೈತರುಹೇಡಿಗಳು ಎಂದು ಸಚಿವರು ಹೇಳಿದರು ಎಂಬ ವಿಷಯವೂ ದೊಡ್ಡ ರಾದ್ಧಾಂತಕ್ಕೆ ಕಾರಣವಾಯಿತು.
ರೈತರ ಆತ್ಮಹತ್ಯೆಗೆ ಸಂಬಂಧಿಸಿದ ಪೂರ್ಣ ಪ್ರಮಾಣದ ಒಂದು ಖಾತೆಯನ್ನೇ ಏಕೆ ರಚಿಸಬಾರದು? ರಚಿಸಬಾರದು ಎಂದೇನೂ ಇಲ್ಲ. ಆದರೆ ನಮಗೆ ಮನಸ್ಸಿಲ್ಲ, ಆ ನಿಟ್ಟಿನಲ್ಲಿ ಯೋಚಿಸುವುದಿಲ್ಲ. ಮೊದಲೇ ಹೇಳಿದಂತೆ ಇಂಥ ವಿಲಕ್ಷಣ ಖಾತೆಯನ್ನು ಯಾರೂ ಒಪ್ಪಿಕೊಳ್ಳುವುದೇ ಸಂಶಯ. ಏಕೆಂದರೆ ಬಹುತೇಕರಿಗೆ ಬೇಕಿರುವುದು ಮೇಯಲು ಪ್ರಶಸ್ತವಾಗಿರುವ ಹುಲ್ಲುಗಾವಲು. ಇಲ್ಲವೆ ಪ್ರತಿಷ್ಠೆ ಹೆಚ್ಚಿಸುವ ಪೋರ್ಟ್ ಪೋಲಿಯೋಗಳು. ಅಂಥದ್ದರಲ್ಲಿ ಸಂತಸ ಖಾತೆ, ಟಾಯ್ಲೆಟ್ ಖಾತೆ, ಆತ್ಮಹತ್ಯೆ ಖಾತೆ ಎಂದೆಲ್ಲ ಮಾಡಿ ಈ ಮಂತ್ರಿ ನೀನಾಗು ಎಂದರೆ, ಅವರು ನಾನಾ? ಎಂದು ಉದ್ಗರಿಸಬಹುದು.
ಇದಕ್ಕಿಂತ ನಾನು ಮಂತ್ರಿ ಆಗದಿರುವುದೇ ಒಳ್ಳೆಯದು ಎನ್ನಬಹುದು. ಆದರೆ ಈ ಖಾತೆಗಳ ಪ್ರತಿಷ್ಠಗೆ ಕಡಿವಾಣ ಬೀಳಬೇಕು. ನಮ್ಮ ಸರಕಾರಗಳು ಜನರಿಗೆ ಅಗತ್ಯವಾದ ಖಾತೆಗಳ ರಚನೆಗೆ ಹೆಚ್ಚು ಒತ್ತು ಕೊಡಬೇಕು. ಅದೂ ಅಲ್ಲದೆ ನಾವು ಇಂಥ ಪ್ರಯೋಗ ಆರಂಭಿಸದೇ ಹೋದರೆ ಅದು ಜಾರಿಗೆ ಬರುವುದೇ ಇಲ್ಲ. ಮನಸ್ಸಿದ್ದರೆ ಮಾರ್ಗ.
ನಾಡಿಶಾಸ್ತ್ರಖಾತೆಗಾಗಿ ಇನ್ನಿಲ್ಲದ ಕ್ಯಾತೆಎಲ್ಲರದೂ ಪ್ರತಿಷ್ಠೆಯ ಕತೆಕೆಲಸ ಮಾಡುವವನಿಗೆ ಬೇಕೆಬೇಕು ಬೇಡಗಳ ಕನವರಿಕೆ