ಮೂಸಲು + ಅತಿ = ಮೀಸಲಾತಿ !
ದಾಸ್ ಕ್ಯಾಪಿಟಲ್‌
ಟಿ.ದೇವಿದಾಸ್‌, ಬರಹಗಾರ, ಶಿಕ್ಷಕ
ತಮ್ಮ ಜಾತಿ ಸಮುದಾಯಗಳ ವೋಟ್ ಬ್ಯಾಂಕ್ ಮೂಲಕ ಜನಪ್ರತಿನಿಧಿಗಳನ್ನು ಆರಿಸಿ ಕಳಿಸಿ ಮಂತ್ರಿ ಪದವಿಗಾಗಿ ಬ್ಲ್ಯಾಕ್ ಮೇಲ್ ಮಾಡುವುದು, ಬಂಡಾಯ ಏಳುವುದು, ಸರಕಾರ ಉರುಳಿಸಲು ಪ್ರಯತ್ನಿಸುವುದು, ಸಮುದಾಯವನ್ನು ಪ್ರಚೋದನೆಗೊಳಿಸುವುದು – ಇವೆಲ್ಲವನ್ನೂ ಮಾಡುವವರು ರಾಜಕೀಯದವರು, ಜನಪ್ರತಿನಿಧಿಗಳು.
ಇವರಿಗೆ ಬೆಂಬಲವಾಗಿ ನಿಲ್ಲುವವರು ಆಯಾ ಸಮುದಾಯದ ಜನರು. ಇವರ ಜತೆಗೆ ಆಯಾ ಸಮುದಾಯದ ಮಠಾಧಿಪತಿಗಳು. ಪಕ್ಷ ರಾಜಕೀಯದ ದುಷ್ಟ ಮುಖವಿದು. ಅಧಿಕಾರದ ಹಪಹಪಿ ಮನುಷ್ಯನನ್ನು ಯಾವ ಹಂತಕ್ಕೂ ಇಳಿಸುತ್ತದೆಂಬುದಕ್ಕೆ ಕರ್ನಾಟಕದ ಇಂದಿನ ಸರಿಹೊತ್ತಿನ ರಾಜಕೀಯದ ದೊಂಬರಾಟದಲ್ಲಿ ನಡೆಯುತ್ತಿರುವ ಮೀಸಲಾತಿ ಹೋರಾಟದಲ್ಲಿ ಕಾಣಬಹುದು.
ಮೂಸಲು ಅತಿ = ಮೀಸಲಾತಿ ಎಂಬಂಥ ಸ್ಥಿತಿ ನಿರ್ಮಾಣವಾಗಿದೆ. ಕೆಲ ದಿನಗಳ ಹಿಂದೆ ನಡೆದ ಘಟನೆಯೊಂದನ್ನು ನೆನಪು ಮಾಡಿಕೊಳ್ಳಿ. ತಮ್ಮ ಸಮುದಾಯದ ಜನಪ್ರತಿನಿಧಿಗಳಿಗೆ ಮಂತ್ರಿಸ್ಥಾನ ಕೊಡದೇ ಹೋದರೆ ನೀವು ನಮ್ಮ ಸಮುದಾಯದ ನಿರ್ಲಕ್ಷ ಕ್ಕೆ ಒಳಗಾಗುತ್ತೀರಿ, ನಾವು ನಿಮ್ಮನ್ನು ಕೈಬಿಡಬೇಕಾಗುತ್ತದೆಂದು ಒಬ್ಬ ಸ್ವಾಮೀಜಿ (ಹಿಂದೊಮ್ಮೆ ಈ ಸ್ವಾಮೀಜಿ ಯೋಗ ದಿನಾಚರಣೆಯ ಸಂದರ್ಭದಲ್ಲಿ ಸಿದ್ದರಾಮಯ್ಯನವರನ್ನು ಹೊಗಳುವ ಭರದಲ್ಲಿ ಅವರನ್ನು ಯೋಗ ರಾಮಯ್ಯ ಎಂದೇ ಸಂಬೋಧಿಸಿದ್ದರು) ಹೇಳಿದಾಗ ವೇದಿಕೆಯಲ್ಲಿದ್ದ ಮುಖ್ಯಮಂತ್ರಿ ಯಡಿಯೂರಪ್ಪ ನವರು ಒಮ್ಮೆಲೇ ಗರಂ ಆಗಿ ನೀವು ಹೀಗೆಲ್ಲ ಮಾತಾಡಬಾರದು ಎಂದು ಹೇಳಿದ್ದನ್ನೂ, ಒಬ್ಬ ಸ್ವಾಮೀಜಿ ಮುಖ್ಯಮಂತ್ರಿಯೆದುರು ಹೇಗೆ ಮಾತಾಡಬಾರದು ಎಂಬುದನ್ನೂಕರ್ನಾಟಕದ ಜನತೆ ಅಂದು ನೋಡಿತ್ತು.
ರಾಜಪೀಠವೂ ಬಾಗುವುದು ಯತಿಪೀಠಕ್ಕೇ ಆದರೂ ಯತಿಪೀಠದ ಘನತೆಗೆ ನ್ಯೂನಬಾರದಂತೆ ಮಾತಾಡ ಬೇಕೆಂಬ ಎಚ್ಚರಯತಿಯಾದವರಿಗೆ ಇರಲೇಬೇಕಲ್ಲವೆ? ಅಷ್ಟಕ್ಕೂ ಲೌಕಿಕದ ಬಗ್ಗೆ ಮಾತಾಡುವುದು ಸ್ವಾಮೀಜಿಯಾದವರಿಗೆ ಶೋಭೆಯಾಗಿಕಾಣುವುದಿಲ್ಲ. ಅದರಲ್ಲೂ ಮಠಾಧಿಪತಿ ಯಾಗಿ ಕೇವಲ ತಮ್ಮ ಸಮುದಾಯದ ಪ್ರತಿನಿಧಿಯಾಗಿ ಮಾತಾಡುವುದು ಯಾರಿಗೂಹಿತವಲ್ಲ; ಆ ಸಮುದಾಯದ ಜನತೆಯನ್ನು ಹೊರತುಪಡಿಸಿ!
ಆದರೆ ಲೌಕಿಕ ಬಂಧನಗಳಿಂದ ಮುಕ್ತರಾಗಿ ಸನ್ಯಾಸ ಸ್ವೀಕರಿಸಿ, ಜಾತ್ಯತೀತರು ಎಂದೇ ಸಮಾಜದ ಕಣ್ಣಲ್ಲಿ ಕಂಡರಸಿದಸ್ವಾಮೀಜಿ ಗಳು ತಮ್ಮ ಜಾತಿ ಸಮುದಾಯವನ್ನು ಪ್ರತಿನಿಧಿಸುತ್ತ ಮೀಸಲಾತಿ ನೀಡಬೇಕೆಂದು ಆಗ್ರಹಿಸುವುದೇ ಒಂಥರಾ ವಿಚಿತ್ರವೆನಿಸುತ್ತದೆ. ಸೋಜಿಗವೆನಿಸುತ್ತದೆ. ಈ ಸಮಾಜ ಜಾತ್ಯತೀತವಾಗಬೇಕು ಎಂದೇ ಉಪದೇಶ ಮಾಡುವ ಸ್ಥಾನದಲ್ಲಿದ್ದೂ ಜಾತಿ ಮೋಹವನ್ನು ಬಿಡಲು ಸಾಧ್ಯವಾಗದ ಸ್ವಾಮೀಜಿಗಳಿಗೆ ಕೇಸರಿ ಧಾರಣೆಯ ನೈತಿಕತೆ ಬರುವುದಾದರೂ ಹೇಗೆ ಸಾಧ್ಯ? ಅವರು ಜಾತ್ಯತೀತರಾಗಲು ಹೇಗೆ ಸಾಧ್ಯ? ನಾನು ಹೀಗೆ ಮಾತನಾಡು ವುದು ಔದ್ಧಟ್ಯವೆನಿಸಬಹುದು. ಆದರೆ ಈಗ ನಡೆಯುತ್ತಿರುವ ಮೀಸಲಾತಿ ಹೋರಾಟ ಇದೆಯಲ್ಲ ಇದು ಸಮಾಜವನ್ನು ಜಾತಿಯಾಧಾರಿತವಾಗಿ ಒಡೆದು ನಮ್ಮೊಳಗಿನ ಬಾಂಧವ್ಯ ವನ್ನು ನಾಶ ಮಾಡುತ್ತದೆ. ಇದಕ್ಕೆ ಪರಿಹಾರ ಎರಡು ಮುಖಗಳಲ್ಲಿ ಸಾಧ್ಯವಿದೆ.
ಒಂದು:ನಾವೆಲ್ಲರೂ ಜಾತಿಯನ್ನು ಬಿಡಬೇಕು,ಎರಡು:ಸರಕಾರವೇ ಬ್ರಾಹ್ಮಣ ಸಹಿತ ಎಲ್ಲ ಜಾತಿಸಮುದಾಯಗಳನ್ನು ಒಬಿಸಿಗೆ ಸೇರಿಸಬೇಕು. ಯಾಕೆಂದರೆ, ಬ್ರಾಹ್ಮಣರನ್ನು ಜನರಲ್ ಮೆರಿಟ್ ಅಂತ ಮಾಡಿದ್ದರಿಂದ ಕಡು ಬ್ರಾಹ್ಮಣನೂ ಎಲ್ಲ ಬಗೆಯಮೀಸಲಾತಿಯಿಂದ ವಂಚಿತನಾಗುವುದು ಎಲ್ಲ ದೊಡ್ಡ ಸಣ್ಣ ಸಮುದಾಯಗಳಂತೆ ಆಗ ತಪ್ಪುತ್ತದೆ.
ಲೋಕಹಿತಕ್ಕೆ ಅಗತ್ಯವಾದ ಮೌಲ್ಯಗಳನ್ನು ವ್ರತಶೀಲನಾಗಿ ತಾನು ಒಳಗೊಂಡಿರುತ್ತೇನೆಂದೂ, ಆದ್ದರಿಂದ ತಾನು ಶ್ರೇಷ್ಠ ನೆಂದೂ, ಅನುಸರಣೀಯನೆಂದೂ, ಅನುಕರಣೀಯನೆಂದೂ ಎಂಬ ದೊಡ್ಡ ಭಾವದಲ್ಲಿ ತಮ್ಮ ಸಮುದಾಯದವರ ಮುಂದೆ ಮುಖ್ಯಮಂತ್ರಿಯನ್ನು ಒತ್ತಡಪೂರ್ವಕವಾಗಿ ಇಂಥ ವರಿಗೆ ಮಂತ್ರಿಗಿರಿ ಕೊಡಲೇಬೇಕೆಂಬ ದುರಾಗ್ರಹವನ್ನು ಅಭಿವ್ಯಕ್ತಿಸುವುದು ಯಾವ ಸ್ವಾಮೀಜಿಗಳಿಗೂ ಶೋಭೆಯಾಗಿ ಕಾಣುವುದಿಲ್ಲ.
ಇದು ಎಲ್ಲ ಜಾತಿಗಳೂ ಒಟ್ಟಾಗಿ ಬದುಕುತ್ತಿರುವ ಸಮಾಜದ ವಿಘಟನೆಗೆ ಪ್ರಚೋದನೆ ನೀಡಿದಂತಾಗುತ್ತದೆ. ಸರಕಾರಗಳು ಇರುವುದು ಎಲ್ಲ ಜಾತಿಯವರನ್ನು ಒಗ್ಗೂಡಿಸಲೇ ಹೊರತು ಒಡೆಯುವುದಕ್ಕಲ್ಲ. ಹಾಗಾದರೆ ಮೀಸಲಾತಿ ಬೇಡವೇ ಎಂದು ಕೇಳಿದರೆ ಬೇಕೇ ಬೇಕು. ಆದರೆ ಅದು ಟಾನಿಕ್ ರೂಪದಲ್ಲಿ ಇರಬೇಕೇ ವಿನಾ ಆಹಾರದ ರೂಪದಲ್ಲಿ ಇರಬಾರದು!
ಇನ್ನೊಂದು ವಿಚಾರ:ಮೀಸಲಾತಿಯನ್ನು ಒಂದು ಹಂತದ ವರೆಗೆ ಅನುಭವಿಸಿ ಇನ್ನು ಮೀಸಲಾತಿ ಬೇಡ ಎಂಬ ಭಾವನೆಬರುವಂತೆ ಸರಕಾರಗಳು ಮೀಸಲಾತಿ ಪಡೆದ ಸಮುದಾಯಗಳಿಗೆ ಭದ್ರತೆಯನ್ನು ಒದಗಿಸಬೇಕು. ಸಮಾಜವೂ ಅದಕ್ಕೆ ಬೆಂಬಲ ವಾಗಿ ನಿಲ್ಲಬೇಕು. ಮೀಸಲಾತಿಯ ಅನಿವಾರ್ಯತೆಯನ್ನು ಹೋಗಲಾಡಿಸುವ ನೈತಿಕ ಶಕ್ತಿ ಸರಕಾರಕ್ಕೂ ಇದೆ, ಸಮಾಜಕ್ಕೂ ಇದೆ. ಆದರೆ ಮೀಸಲಾತಿಯನ್ನು ಅನುಭವಿಸಿದ ಜಾತಿಗಳಿಗೂ ಮೀಸಲಾತಿಯನ್ನು ತೊರೆಯುವ ಈ ನೈತಿಕ ಶಕ್ತಿಯಿರಬೇಕು.
ಪ್ರತಿ ಜಾತಿಯೂ ರ್ಧೆಗೆ ಬಿದ್ದವರಂತೆ ನಾವು ಕೀಳು, ನಮ್ಮನ್ನು ಈ ಪಟ್ಟಿಗೆ, ಈ ವರ್ಗಕ್ಕೆ ಸೇರಿಸಿ ಎಂದು ಬೊಬ್ಬಿಡುವ ಅಗತ್ಯ ವಾಗಲೀ ಅನಿವಾರ್ಯತೆಯಾಗಲೀ ಇಲ್ಲವೇ ಇಲ್ಲ. ಹಾಗೆ ಇದ್ದುದರಿಂದ ಇಂದಿಗೂ ಬ್ರಾಹ್ಮಣರನ್ನು ಹೊರತುಪಡಿಸಿ ಉಳಿದವ ರೆಲ್ಲರಿಗೂ ಮೀಸಲಾತಿಯಿದೆ. ಬ್ರಾಹ್ಮಣರಲ್ಲೂ ಸ್ಥಾನಿಕ ಬ್ರಾಹ್ಮಣರಿಗೆ ಮೀಸಲಾತಿಯಿದೆ.
ಇತರ ಬ್ರಾಹ್ಮಣರು ಅಂದರೆ ಚಿತ್ಪಾವನರು, ತಾವು ಮೇಲು ಜಾತಿಗೆ ಸೇರಿದ ಕಡಿಮೆ ಅದಾಯವುಳ್ಳ ಕೀಳು ವ್ಯಕ್ತಿಯೆಂಬ ಸರ್ಟಿಫಿ ಕೇಟನ್ನು ತಹಸೀಲ್ದಾರರಿಂದ ಬರೆಸಿ ತಂದರೆ ಆದಾಯದ ಮೀಸಲಾತಿಯಿದೆ. ಅಷ್ಟಕ್ಕೂ ಈಗ ನಡೆಯುತ್ತಿರುವ ಮೀಸಲಾತಿ ಹೋರಾಟಕ್ಕೆ ಸ್ವಾಮೀಜಿಗಳು ಸಾರಥ್ಯವನ್ನು ವಹಿಸಿದ್ದಾರೆ. ಉಪವಾಸ ಅಂತ ಬೆದರಿಕೆ ನೀಡುವುದು, ಸಮುದಾಯವನ್ನು ತಂದು ಬೀದಿಗೆ ನಿಲ್ಲಿಸುವುದು ಇವೆಲ್ಲ ಇತರರೂ ತಾವು ಹೀಗೆಯೇ ಮೀಸಲಾತಿಗೆ ಆಗ್ರಹಿಸಿ ಹೋರಾಟವನ್ನು ಮಾಡುವುದಕ್ಕೆ ಕರೆ ಕೊಟ್ಟಂತೆ ಕಾಣುತ್ತದೆ.
ಸರಕಾರದ ಮುಂದೆ ಬೇಡಿಕೆಯಾಗಿ ಜನತೆಯೇ ಹೋರಾಟ ಮಾಡಿದರೆ ಅದಕ್ಕೊಂದು ಅರ್ಥವಾದರೂ ಇರುತ್ತದೆ. ಜನ ಸಾಮಾನ್ಯರ ನಿತ್ಯದ ಬದುಕಿಗೆ ತೊಂದರೆ ಯಾಗುವಂತೆ ನಡೆಯುವ ಯಾವ ಹೋರಾಟಗಳು ಆರಂಭದಲ್ಲಿ ಅಲ್ಲದಿದ್ದರೂ ಆಮೇಲೆ ಅದು ಅರ್ಥಹೀನವಾಗಿ ಹಾಸ್ಯಾಸ್ಪದವೂ ಆಗಿಬಿಡುತ್ತದೆ. ಕೊನೆಗೆ ಅದೊಂದು ಪಬ್ಲಿಕ್ ಜೋಕ್ ಆಗಿ ಬಿಡುತ್ತದೆ.
ಐತಿಹಾಸಿಕವಾಗಿ ಸಾರ್ವಜನಿಕವಾದ ಅವಕಾಶವನ್ನೇ ಕಳೆದುಕೊಂಡವರಿಗೆ ಅದು ಸುಲಭದಲ್ಲಿ ದಕ್ಕುವಂತಾಗಬೇಕೆಂಬುದೇ ಮೀಸಲಾತಿಯ ನಿಜವಾದ ಉದ್ದೇಶ. ಹಾಗೆ ನೋಡಿದರೆ ಈ ಅರ್ಹತೆಯನ್ನು ಹೊಂದಿದವರು ದಲಿತರು ಮತ್ತು ಮಹಿಳೆಯರು. ಇವರಂತೆ ಇತರರೂ ಇದ್ದರೆ ಅವರು ಅರ್ಹರೇ ಆಗುತ್ತಾರೆ. ಜಾತಿಯಾಧಾರಿತ ಮೀಸಲಾತಿ ಎಂಬ ಪರಿಕಲ್ಪನೆಯ ಮೋಸವಾಗ ಬಹುದಾದ ಸಾಧ್ಯತೆಯೂ ಇದೆ. ದಲಿತರು ಎಂಬ ಕಾರಣಕ್ಕೆ ಮೀಸಲಾತಿ ಸುಲಭದಲ್ಲಿ ಸಿಕ್ಕರೆ, ಬ್ರಾಹ್ಮಣರು ಎಂಬ ಕಾರಣಕ್ಕೆ ಕಡು ಬ್ರಾಹ್ಮಣನಿಗೂ ತನ್ನ ಜಾತಿಯ ಆಧಾರದ ಮೇಲೆ ಯಾವ ಮೀಸಲಾತಿಯೂ ಸಿಗಲಾರದು.
ಆದಾಯದ ಆಧಾರದ ಮೇಲೆ ನೀಡುವ ಮೀಸಲಾತಿಯಲ್ಲೂ ವಂಚನೆಯಿದೆ. ಮೀಸಲಾತಿ ಬೇಕಾಗುವಷ್ಟು ವಾರ್ಷಿಕ ಆದಾಯವನ್ನು ಹಣಕೊಟ್ಟು ಬರೆಸಿದರಾಯಿತು. ನಿಜವಾಗಿ ಮೀಸಲಾತಿ ದಕ್ಕಬೇಕಾದವರಿಗೆ ದಕ್ಕದೇ ಹೋದದ್ದರಿಂದ ಬಿಪಿಎಲ್ ಕಾರ್ಡು ಅನರ್ಹರಿಗೂ ಸಿಕ್ಕುವಂತಾಗಿದೆ. ಕ್ಷತ್ರಿಯರಿಗೆ ಮೀಸಲಾತಿಯಿದೆ. ದೇಶವನ್ನಾಳಿದ ಮುಸ್ಲಿಮರಿಗೆ ಮೀಸಲಾತಿಯಿದೆ. ಅಧುನಿಕ ಅಭಿವೃದ್ಧಿಯನ್ನು ಮಾಡಿದ ರೆನ್ನಲಾದ ಕ್ರಿಶ್ಚಿಯನ್ನರಿಗೂ ಮೀಸಲಾತಿಯಿದೆ.
ಸಾಮಾಜಿಕ ವೈವಿಧ್ಯದಲ್ಲಿ ತಾರತಮ್ಯವನ್ನು ಅನುಭವಿಸುತ್ತಿರುವ ಜನಾಂಗಗಳ ಹಕ್ಕು ರಕ್ಷಿಸುವುದು ಮೀಸಲಾತಿಯ ಪ್ರಧಾನಉದ್ದೇಶವಾಗಿದೆ ಎಂಬುದನ್ನು ಮರೆತು ವ್ಯವಹರಿಸಿದುದರ ಪರಿಣಾಮವಿದು. ದುರಂತವಿದು. ಬ್ರಾಹ್ಮಣರು ಮೇಲು ಜಾತಿ ಯೆಂದು ಪರಿಗಣಿಸಿದರೂ ಬ್ರಾಹ್ಮಣರ ಆದಾಯದಲ್ಲಿ ಶೂದ್ರರಾಗಿರು ವವರಿಗೆ ಮೀಸಲಾತಿಯಿಂದ ಕೊನೆವರೆಗೂ ಹೊರಗೇ ಇರುವಂಥ ಸ್ಥಿತಿ ನಿರ್ಮಾಣವಾಗಿದೆ. ಒಂದೇ, ಅವರು ಜಾತಿಯನ್ನು ಬಿಡಬೇಕು. ಇಲ್ಲ ಮೀಸಲಾತಿಗಾಗಿ ಮತಾಂತರ ಆಗಬೇಕು, ಅದೂ ಆಗದೆಂದರೆ ಎಲ್ಲವನ್ನೂ ಎದುರಿಸುತ್ತ ಬದುಕನ್ನು ಸಾಗಿಸಬೇಕು.
ಯಾಕೆಂದರೆ, ಪ್ರಬಲ ಸಮುದಾಯ ವಾಗಿರುವ ಒಕ್ಕಲಿಗರಿಗೂ, ಲಿಂಗಾಯಿತರಿಗೂ ಮೀಸಲಾತಿಯಿದೆ. ಜಾತಿಯಲ್ಲಿ ಅಲ್ಪ ಸಂಖ್ಯಾತರಾದ ಬ್ರಾಹ್ಮಣ ಸಹಿತ ಎಲ್ಲ ಸಣ್ಣ ಸಮುದಾಯಗಳಿಗೂ ಒಬಿಸಿ ಮೀಸಲಾತಿ ಯನ್ನು ಕೊಟ್ಟುಬಿಟ್ಟರೆ ಈಗ ಎದ್ದಿರುವ ಮೀಸಲಾತಿ ಹೋರಾಟಕ್ಕೆ ಮಂಗಳವನ್ನು ಹಾಡಬಹುದು.
ಇನ್ನೂ ಒಂದು ಪರಿಹಾರವಿದೆ:ಜಾತಿಯಾಧಾರಿತವಾಗಿ ಮೀಸಲಾತಿ ಕೊಡುವುದಾದರೆ ದೊಡ್ಡ ಸಮುದಾಯದ ಯಾರಿಗೂ ಮೀಸಲಾತಿ ಬೇಡ. ಸಣ್ಣ ಸಣ್ಣ ಸಮುದಾಯಗಳನ್ನು ಗುರುತಿಸಿ ಅವುಗಳನ್ನು ಮಾತ್ರ ಮೀಸಲಾತಿ ಪಟ್ಟಿಗೆ ಸೇರಿಸುವುದು ಉತ್ತಮ ವೆನಿಸುತ್ತದೆ. ದೊಡ್ಡ ಸಮುದಾಯದವರಿಗೆ ಆದಾಯದ ಮೇಲೆ ಮೀಸಲಾತಿ ಕೊಡಬಹುದು. ಇಲ್ಲಿಯೂ ದರಿದ್ರವಾದ ರೀತಿಯ ಮಾನದಂಡದಲ್ಲಿ ಮೀಸಲಾತಿ ಕೊಡುವಂತಾಗಬಾರದು.
ಇಲ್ಲೂ ಒಂದು ಸಂಗತಿಯನ್ನು ನೆನಪಿಡಬೇಕು:ಮೀಸಲಾತಿಗೆ ನಿಗದಿಯಾದ ಆದಾಯಕ್ಕಿಂತ ಕಡಿಮೆ ಆದಾಯದ ಸುಳ್ಳುಪ್ರಮಾಣಪತ್ರವನ್ನು ಪಡೆಯಲು ಅವಕಾಶವಿರದಂತೆ ವೈಜ್ಞಾನಿಕ ಅಧ್ಯಯನದ ಮೂಲಕ ಆದಾಯದ ಮಿತಿಯನ್ನು ನಿಗದಿಮಾಡಬೇಕು. ಆಗ ಅನರ್ಹರಿಗೆ ಆದಾಯದ ಮೀಸಲಾತಿ ಗಳಿಸುವುದು ತಪ್ಪುತ್ತದೆ. ಮೀಸಲಾತಿಗೆ ಅರ್ಹರೋ, ಅನರ್ಹರೋ ಎಂದು ಬ್ರಾಹ್ಮಣರನ್ನು ವಿಮರ್ಶೆ ಮಾಡಿದಂತೆಯೇ ಧನವಂತಿಕೆಯುಳ್ಳ ದಲಿತರೂ ವಿಮರ್ಶೆಗೆ ಒಳಪಡದೇ ಹೋದರೆ ಅವರ ಇರುವ ಬಡ ದಲಿತರು ಉದ್ಧಾರವಾಗಲಾರರು. ಅವರಿಂದಿಗೂ ಬಡವರಾಗೇ ಇರಲು ಇದೂ ಒಂದು ಕಾರಣವಾಗಿದೆ. ಅಷ್ಟೇ ಅಲ್ಲ, ಸಾಮಾಜಿಕ ವಾದ ಸ್ಥಾನಮಾನದಲ್ಲೂ ಅವರು ಅಸ್ಪೃಶ್ಯರಾಗೇ ಉಳಿದಿದ್ದಾರೆ.
ಉಳಿದು ಬಿಡುತ್ತಾರೆ. ಮೀಸಲಾತಿಯನ್ನು ಪಡೆಯುತ್ತಿರುವ ಇತರ ದೊಡ್ಡ ಸಮುದಾಯದವರೂ ಸಮಗ್ರವಾಗಿ ವಿಮರ್ಶೆಗೆಒಳಪಡದೆ ಹೋದರೆ ಒಟ್ಟೂ ಮೀಸಲಾತಿ ಪ್ರಕ್ರಿಯೆಯ ಭ್ರಷ್ಟತೆಯನ್ನು ತುಂಬಿಸಿ ದಂತಾಗುತ್ತದೆ. ಮತ್ತಷ್ಟೂ ಭ್ರಷ್ಟಾಚಾರಒಳಗೊಳ್ಳಿಸಿ ದಂತಾಗುತ್ತದೆ. ಆದ್ದರಿಂದ ಜಾತಿಯಾಧಾರಿತ ಮೀಸಲಾತಿಯ ಹೋರಾಟ ಅಸಂಖ್ಯ ಜಾತಿ – ಉಪಜಾತಿಗಳದೇಶವಾದ ಭಾರತದಲ್ಲಿ ಯಾವ ಕಾಲಕ್ಕೂ ಒಳ್ಳೆಯದಲ್ಲ. ಈಗಾಗಲೇ ಮೀಸಲಾತಿಯೆಂಬುದು ಮೂಸಲು ಅತಿಯಾಗಿ ಬಿಟ್ಟಿದೆ. ಅದರಿಂದಾಗಿ ಅದು ಮೌಲ್ಯವನ್ನು ಕಳೆದುಕೊಂಡು ಬಿಟ್ಟಿದೆ.
ಎಲ್ಲರೂ ಜಾತಿಯೋ ಇನ್ನಾವುದೋ ನಿಮಿತ್ತವಾಗಿ ಮೀಸಲಾತಿಗಾಗಿ ಬಂಡಾಯವನ್ನು ಹೂಡಿ ಬೀದಿಗಿಳಿದಿದ್ದಾರೆ. ಬೇಡಿಕೆ ಈಡೇರಿಕೆಗಾಗಿ ಉಪವಾಸ ಮಾಡಲು ಮುಂದಾಗಿದ್ದಾರೆ. ಇದು ಹೀಗೇ ಅತಿಯಾಗಿ ಎಲ್ಲ ಸಮುದಾಯಗಳೂ ಮೀಸಲಾತಿಗಾಗಿ ಮೂಸುವಂತಾಗಬಹುದು. ಹೀಗೆಯೇ ಮುಂದುವರಿದರೆ ಪ್ರತಿಯೊಬ್ಬರೂ ಮೀಸಲಾತಿಯನ್ನು ಕೇಳುವಂಥ ಕೆಟ್ಟ ಪರಿಸ್ಥಿತಿ ಉಂಟಾಗಬಹುದು. ಅದರಲ್ಲೂ ಸ್ವಾಮೀಜಿಗಳು, ಮಠಾಧಿಪತಿ ಗಳು ಸಮುದಾಯದ ಪರ ನಿಂತು ಪ್ರತಿಭಟನೆಗೆ, ಹೋರಾಟಕ್ಕೆಸಾರಥ್ಯ ವಹಿಸಿದರೆ ನಾಳೆ ದಿನ ಶಾಲಾ ಕಾಲೇಜುಗಳಲ್ಲಿ ಜಾತಿಯಾಧಾರಿತವಾಗಿ ಸೀಟಿಗಾಗಿ, ಮತ್ತು ಪಾಸು ಮಾಡುವುದಕ್ಕಾಗಿ ಮೀಸಲಾತಿ ಕೇಳಬಹುದು. ಬಸ್ಸು, ರೈಲು, ವಿಮಾನಗಳಲ್ಲಿ ಪ್ರತ್ಯೇಕ ಆಸನಕ್ಕಾಗಿ ಮೀಸಲಾತಿ ಕೇಳಬಹುದು.
ಎಲ್ಲದರಲ್ಲೂ ಮೀಸಲಾತಿ ಕೊಡಬೇಕಾದ ಪರಿಸ್ಥಿತಿ ನಿರ್ಮಾಣ ವಾಗಬಹುದು. ಇಂಥ ಅಧ್ವಾನಗಳನ್ನು ತಡೆಗಟ್ಟಲು ಸಂವಿಧಾನದ ಮೂಲಕವಾಗಿ ಪ್ರಯತ್ನ ನಡೆಯಬೇಕಿದೆ. ಜಾತ್ಯತೀತ ಮೌಲ್ಯವನ್ನು ಅಳವಡಿಸಿಕೊಂಡೇ ಜಾತಿಗಣನೆ ಮಾಡಲು ಈ ಹಿಂದೆಯೂ (ಈ ಜಾತಿಗಣತಿಯೆಂಬುದು ಸಮುದಾಯದ ಪ್ರಬಲ ಇಚ್ಛಾಶಕ್ತಿಯ ಅಗತ್ಯವಾಗಿಲ್ಲದಿದ್ದರೂ) ಪ್ರಯತ್ನಿಸಲಾಗಿತ್ತು. ಜಾತಿಗಳ ಸಂಖ್ಯೆ ಹಾಗೂ ಜಾತಿಯಾಧಾರಿತ ಜನಸಂಖ್ಯೆಯನ್ನು ಸರಕಾರ ಗಣಿಸುವುದರ ಮೂಲ ಉದ್ದೇಶ ಪ್ರಮುಖವಾಗಿ ಯೋಜನೆಗಳನ್ನು ಸಣ್ಣ ಸಮುದಾಯದ ಜನತೆಗೆ ತಲುಪಿಸಲು.
ಕಾರಣವೇನೆಂದರೆ, ಸಾಮಾಜಿಕವಾದ ಸ್ಥಾನಮಾನದಲ್ಲೂ ನಿರ್ಲಕ್ಷ್ಯಿಸಲ್ಪಟ್ಟ, ಆದಾಯದಲ್ಲೂ ಹಿಂದುಳಿದ ಸಣ್ಣ ಸಮುದಾಯ ಗಳ ಹಿತವನ್ನು ಕಾಯುವುದು ಸರಕಾರದ ಪ್ರಧಾನವಾದ ಆಶಯವಾಗಿರುತ್ತದೆ. ಮೀಸಲಾತಿಯ ನಿಜವಾದ ಆಶಯ ಸಂಪನ್ನ ಗೊಳ್ಳುವುದೇ ಈ ಬಗೆಯಲ್ಲಿ. ಆದರೆ ಅದು ರಾಜಕೀಯ ಪ್ರೇರಿತವಾಗಬಾರದು. ಯಾರೂ ತಾನು ಇಂಥ ಜಾತಿ ಮತ ಧರ್ಮ ಪಂಥದಲ್ಲಿ ಹುಟ್ಟಲಿ ಎಂದೇ ಬೇಡಿಕೊಂಡು ಹುಟ್ಟಲಾರರು. ಇವುಗಳನ್ನು ಹೊರತುಪಡಿಸಿ ನಾವೆಲ್ಲರೂ ಮೊದಲು ಮನುಷ್ಯ ಜಾತಿಗೆ ಸೇರಿದವರು. ದೇವರು ಜಾತಿ – ಧರ್ಮಗಳನ್ನು ಸೃಷ್ಟಿ ಮಾಡಲಿಲ್ಲ. ಮತ್ತೆ ಯಾಕೆ ಜಾತಿ ಮತ ಧರ್ಮಕ್ಕೆ ಅತಿಯಾಗಿ ಅಂಟಿಕೊಳ್ಳಬೇಕು. ಹಾಗಂತ ಜಾತಿ ಬಿಟ್ಟು ಬದುಕುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ!
ನಮ್ಮ ನಮ್ಮ ಜಾತಿಯ ಪ್ರಜ್ಞೆ ನಮ್ಮ ನಮ್ಮ ಸಮುದಾಯದೊಳಗೆ ಇದ್ದರೆ ಯಾವ ಸಮಸ್ಯೆಯೂ ಸಾರ್ವಜನಿಕವಾಗಿಹುಟ್ಟಲಾರದು. ಆಲೋಚಿಸಿ: ಸಾರ್ವಜನಿಕ ಸ್ಥಳಗಳಲ್ಲಿ ಯಾರಿಗೂ ಯಾವ ಸಂದರ್ಭದಲ್ಲೂ ಜಾತಿ ಮತ ಧರ್ಮಗಳ ಹಂಗಿರುವು ದಿಲ್ಲ. ಬಸ್ಸಿನಲ್ಲಿ, ಜಾತ್ರೆಯಲ್ಲಿ, ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ, ಪುಕ್ಕಟೆ ಕೊಡುವ ರೇಷನ್ ಅನ್ನು ತಗೊಳ್ಳುವಲ್ಲಿ, ಬ್ಯಾಂಕಿನಲ್ಲಿ ನಿಂತಾಗಲೂ ಜಾತಿಯ ಪ್ರಜ್ಞೆ ಬಾಧಿಸಲಾರದು.
ಜಾತಿ ಮತ ಧರ್ಮಗಳು ಆಫೀಮು ಆಗಬಾರದು ಎಂಬ ಅರಿವು ನಮ್ಮಲ್ಲಿ ಇದ್ದರೆ ಜಾತಿಯನ್ನು ನೆಚ್ಚಿಕೊಂಡು ಹುಟ್ಟಬಹುದಾದ ಸಮಸ್ಯೆ ಗಳು ಹುಟ್ಟಲಾರವು. ಪ್ರಜಾತಂತ್ರದ ಯಶಸ್ಸು ಇರುವುದು ಪ್ರಜೆಗಳು ವರ್ತಿಸುವ ನಡೆಯಲ್ಲಿ. ಅಂಥದ್ದರಲ್ಲಿ ಜಾತಿ ಮೋಹ ಎಂಬುದು ಅತಿಯಾಗದಂತೆ, ಅತಿಯಾಗಿ, ಸಮಾಜವನ್ನು ಒಡೆಯದಂತೆ ಕಾಪಾಡಿಕೊಳ್ಳುವ ಜವಾಬ್ದಾರಿ ಪ್ರತಿಯೊಬ್ಬ ರದ್ದೂ ಆಗಿದೆ. ಅದರಲ್ಲೂ ಜಾತಿ ಮೀಸಲಾತಿಗೆ ಆಗ್ರಹಿಸಿ ಈಗ ಎದ್ದಿರುವ ಹೋರಾಟಗಾರರದ್ದೂ ಇದೆ ಎಂಬುದುಅರಿವಾಗಬೇಕಿದೆ!
ಮೇಲೆ ಹೇಳಿದ ಘಟನೆಯನ್ನು ಮತ್ತೊಮ್ಮೆ ನೆನಪಿಸಿಕೊಳ್ಳಿ:ಆ ವೇದಿಕೆಯಲ್ಲಿ ಪಕ್ಕದ ಕೂತು ಪಕ್ಕಾ ರಾಜಕಾರಣಿಗಳಂತೆಮಾತಾಡುತ್ತಿದ್ದ ಸ್ವಾಮೀಜಿಯ ಮಾತುಗಳನ್ನು ಕೇಳಿಸಿಕೊಳ್ಳುತ್ತಲೇ ಇದ್ದ ಯಡಿಯೂರಪ್ಪನವರಿಗೆ ಒಮ್ಮೆಲೇ ಸಿಟ್ಟು ಬಂತು.ಸಭೆಯನ್ನು ಬಿಟ್ಟು ಹೋಗುವ ಮಾತಾಡಿದರೂ ಬಿಟ್ಟು ಹೋಗದೆ ಸ್ವಾಮೀಜಿಯ ಕಾಲು ಮುಟ್ಟಿ ನಮಸ್ಕರಿಸಿ ಅಲ್ಲೇ ಕುಳಿತರು. ಇದು ಯಡಿಯೂರಪ್ಪನವರಲ್ಲಿರುವ ಸೌಜನ್ಯ, ಸಾರ್ವಜನಿಕ ಸಭ್ಯತೆ. ಸ್ವಾಮೀಜಿಯ ಧೋರಣೆಗಳನ್ನು ತಿಳಿದೂ ಸಹ ಸರಕಾರಿ ಅಧಿಕಾರಿಗಳು ಸ್ವಾಮೀಜಿಗಳನ್ನು, ಮಠಾಧಿಪತಿ ಗಳನ್ನು ಎದುರು ಹಾಕಿಕೊಳ್ಳಲು ಭಯಪಟ್ಟು ಸುಮ್ಮನಾಗುತ್ತಾರೆ.
ಏಕೆಂದರೆ, ಈ ಸ್ವಾಮೀಜಿಗಳು ಜಾತಿ ರಾಜಕೀಯವನ್ನು ಸೃಷ್ಟಿಸಿ, ಜನರಿಗೆ ಇಂಥವನಿ/ರಿಗೆ ಮತ ನೀಡಬೇಡಿರೆಂದು ಕರೆ ಕೊಡು ತ್ತಾರೆ. ತಮಗೆ ಅನುಕೂಲ ವಾಗುವಂತೆ ಪ್ರೋತ್ಸಾಹಿಸು ವವನಿಗೆ ಮತ ಹಾಕಿರೆಂದು ಹೇಳಿದಾಗ ಆಯಾ ಸಮುದಾಯ ದವರು ವಿವೇಚನೆಯಿಲ್ಲದೆ ಮತ ಚಲಾಯಿಸುತ್ತಾರೆ. ಹೀಗೆ ಮತ ಸಂಪಾದನೆ ಮಾಡಬಹುದು ಎಂಬ ಏಕೈಕ ರಾಜಕೀಯ ಉದ್ದೇಶಸಮಾಜದಲ್ಲಿರುವ ಸಣ್ಣ ಸಮುದಾಯಗಳ ಬದುಕಿಗೆ ಯಾವ ಭದ್ರತೆಯನ್ನೂ ಉಳಿಸಲಾರದು.
ಆದ್ದರಿಂದ ಯಾವ ಸಮುದಾಯದ ಯಾವ ಮಠಾಧಿಪತಿಗಳೂ ರಾಜಕೀಯವಾಗಿ ಯಾವ ಪ್ರಭಾವವನ್ನೂ ಬೀರಬಾರದೆಂದರೆ ಬ್ರಾಹ್ಮಣ ಸಹಿತ ಎಲ್ಲ ಸಮುದಾಯಗಳನ್ನೂ ಒಬಿಸಿಗೆ ಸೇರಿಸುವುದು ಸದ್ಯೋಭವಿಷ್ಯತ್ತಿನ ದೃಷ್ಟಿಯಿಂದ ಹಿತವೆನಿಸುತ್ತದೆ. ಎಲ್ಲಜಾತಿಸಮುದಾಯಗಳೂ ಒಬಿಸಿ ಅಂತ ಪರಿಗಣಿತವಾದಾಗ ಯಾರಿಗೂ ಪ್ರತ್ಯೇಕ ಮೀಸಲಾತಿ ಕಲ್ಪಿಸುವ ಪ್ರಶ್ನೆಯೇ ಆಗ ಹುಟ್ಟುವು ದಿಲ್ಲ. ಒಂದಂತೂ ಸತ್ಯ: ಆವಾಗಲೂ ಆಯಾ ಜಾತಿ ಮೇಲಿನ ಗೌರವ ಸಮಾಜದಲ್ಲಿ ಇದ್ದೇ ಇರುತ್ತದೆ. ಸರಕಾರದ ಮಟ್ಟದಲ್ಲಿ ಮಾತ್ರ ಇರುವುದಿಲ್ಲ. ಇರಬಾರದು ಅಷ್ಟೇ.
ಕೊನೆಯ ಮಾತು:ಜಾತಿ, ಸಾಮಾಜಿಕ ಸ್ಥಾನಮಾನ ಮತ್ತು ಆದಾಯದ ಕಾರಣಕ್ಕಾಗಿ ಅರ್ಹತೆಯ ಮಾನದಂಡದೊಂದಿಗೆಅರ್ಹ ದಲಿತರಿಗೆ ಮೀಸಲಾತಿಯನ್ನು ನಿರ್ದಿಷ್ಟ ಅವಧಿಯವರೆಗೆ ಕೊಡಬಹುದು. ಲಿಂಗದ ಕಾರಣಕ್ಕಾಗಿ ಮಹಿಳೆಯರಿಗೆ ಮೀಸಲಾತಿ ಅಗತ್ಯವಿದೆ. ಇದು ಸಾಧ್ಯವಿಲ್ಲ ಎಂದಾದರೆ ಅವರನ್ನು ಮೀಸಲಾತಿಯಿಂದ ಹೊರಗಿಟ್ಟು ಮೀಸಲಾತಿ ವಿನ್ಯಾಸ ಹೊಸದಾಗಿ ರಚನೆಯಾಗಲಿ.
ಇದೂ ಅಸಾಧ್ಯ ಎಂದಾದರೆ ಒಂದು ದೇಶ, ಒಂದು ಕಾನೂನು ಜಾರಿಗಾಗಿ ದೇಶವ್ಯಾಪಿ ಎಲ್ಲ ಜಾತಿ ಸಮುದಾಯಗಳ ಮಠಾಧೀಶರೂ, ಜನಪ್ರತಿನಿಧಿಗಳೂ, ಬುದ್ಧಿಜೀವಿಗಳೂ, ಸೆಕ್ಯುಲರಿಸ್ಟರೂ, ಮತೀಯವಾದಿಗಳೂ, ವಿದ್ಯಾವಂತರೂ ಸೇರಿ ಎಲ್ಲರೂಕೇಂದ್ರವನ್ನು ಆಗ್ರಹಿಸುವುದೊಂದೇ ಕೊನೆಯ ಉತ್ತಮ ಪರಿಹಾರ.