’ಒಳ್ಳೆಯ ಗಂಡಂದಿರು’ ಎಂಬ ವಾಟ್ಸಾಪ್ ಗ್ರುಪ್‌ನ ಸದಸ್ಯರಾಗಬೇಕೇ ?!
ಇದೇ ಅಂತರಂಗ ಸುದ್ದಿ
ವಿಶ್ವೇಶ್ವರ ಭಟ್‌
ನಾವು 168 ಮಂದಿ ಸೇರಿ ಒಂದು ವಾಟ್ಸಪ್ ಗ್ರೂಪ್ ರಚಿಸಿಕೊಂಡಿದ್ದೇವೆ. ಅದರ ಹೆಸರು ‘ಒಳ್ಳೆಯ ಗಂಡಂದಿರು!’ ಇದನ್ನು ನಾನೇ ಹುಟ್ಟು ಹಾಕಿದ್ದು ಮತ್ತು ನಾನೇ ಅಡ್ಮಿನ್. ‘ಈ ಗ್ರೂಪ್‌ಗೆ ನನ್ನನ್ನೂ ಸೇರಿಸಿ, ನಾನೂ ಒಳ್ಳೆಯ ಗಂಡ’ ಎಂದು ಅನೇಕರು ಆಗಾಗ ನನ್ನನ್ನು ಒತ್ತಾಯಿಸುತ್ತಾರೆ.
ಆಗ ನಾನು ಅವರಿಗೆ ಹೇಳುತ್ತೇನೆ – ‘ನೀವು ಒಳ್ಳೆಯ ಗಂಡ ಇದ್ದಿರಬಹುದು. ಇಲ್ಲ ಎಂದು ಹೇಳುವುದಿಲ್ಲ. ಆದರೆ ಅದನ್ನುನಿಮ್ಮ ಹೆಂಡತಿ ಹೇಳಬೇಕು. ನಿಮ್ಮ ಹೆಂಡತಿಯಿಂದ ಶಿಫಾರಸು ಪತ್ರ ತಂದರೆ, ಆಗ ನಿಮ್ಮನ್ನು ಸೇರಿಸಿಕೊಳ್ಳುತ್ತೇನೆ.’ ಹಾಗೆ ಹೇಳುತ್ತಿದ್ದಂತೆ, ಬಹುತೇಕರು ಪೆಚ್ಚಾಗುತ್ತಾರೆ. ಆಗ ಅವರ ಮುಖ ನೋಡಲಾಗುವುದಿಲ್ಲ. ಅದು ಸಾಧ್ಯವಿಲ್ಲದ ಮಾತು ಎಂದುಅವರು ನಿರಾಸೆಯಿಂದ ಕೈಚೆಲ್ಲುತ್ತಾರೆ.
ಈ ಗ್ರೂಪ್‌ನಲ್ಲಿ ಬಹಳ ಸ್ವಾರಸ್ಯಕರ ಚರ್ಚೆಗಳು ನಡೆಯುತ್ತಿರುತ್ತವೆ. ಒಂದು ವೇಳೆ ಈ ಗ್ರೂಪ್‌ನಲ್ಲಿರುವ ಸದಸ್ಯರುಗಳ ಹೆಸರು ಗಳನ್ನು ನಾನು ಬಹಿರಂಗಪಡಿಸಿದ್ದೇ ಆದರೆ, ಅವರ ಹೆಂಡತಿಯರು ಅವರನ್ನು ಸುಮ್ಮನೆ ಬಿಡುವುದಿಲ್ಲ ಅಥವಾ ಈ ಗ್ರೂಪ್‌ನಲ್ಲಿ ನಡೆಯುವ ಚರ್ಚೆಗಳನ್ನು ತಮಗೂ ತೋರಿಸಿ ಎಂದು ಹೇಳದೇ ಹೋಗುವುದಿಲ್ಲ. ಆಗ ಗಂಡನ ಪರಿಸ್ಥಿತಿ ಏನಾಗಬಹುದು?ಸ್ವಲ್ಪ ಯೋಚಿಸಿ. ಹೀಗಾಗಿ ಈ ಗ್ರೂಪ್‌ನ ಸದಸ್ಯರ ಹೆಸರುಗಳನ್ನು ಗೌಪ್ಯವಾಗಿ ಇಡಲು ಪ್ರಯತ್ನಿಸಿದ್ದೇನೆ.
ಇದನ್ನು ಓದಿ, ನನ್ನನ್ನೂ ‘ಒಳ್ಳೆಯ ಗಂಡಂದಿರು!’ ಗ್ರೂಪ್‌ಗೆ ಸೇರಿಸಿಕೊಳ್ಳಿ ಎಂದು ಅನೇಕರು ಹೇಳಬಹುದು. ನಾನು ಅವರಿಗೂಹೇಳುವುದೇನೆಂದರೆ, ನಿಮ್ಮ ಹೆಂಡತಿಯಿಂದ ನೀವು ಒಳ್ಳೆಯ ಗಂಡ ಎಂಬ ಶಿಫಾರಸು ಪತ್ರವನ್ನು ತನ್ನಿ. ಇಲ್ಲಿ ಸದಸ್ಯತ್ವ ಪಡೆದರೆ, ಗಂಡನಾಗಿ ನಿಮ್ಮ ಸ್ಥಾನಮಾನ ಜಂಪ್ ಆಗುವುದರಲ್ಲಿ ಸಂದೇಹವೇ ಇಲ್ಲ.
ಇತ್ತೀಚೆಗೆ ಈ ಗ್ರೂಪ್‌ನಲ್ಲಿ ಫಾರ್ವರ್ಡ್ ಆದ ಒಂದು ಮೆಸೇಜನ್ನು ಇಲ್ಲಿ ಹಂಚಿಕೊಳ್ಳುತ್ತಿದ್ದೇನೆ. ಒಬ್ಬಾತ ‘ನನ್ನಂಥ ಉತ್ತಮಗಂಡ ಯಾರೂ ಇಲ್ಲ’ ಎಂದು ಹೇಳಿದನಂತೆ. ಸಾಮಾನ್ಯವಾಗಿ ಇಂಥ ಮಾತುಗಳನ್ನು ಹೇಳುವ ಆತ್ಮವಿಶ್ವಾಸ ಅಥವಾ ಧೈರ್ಯವಿರುವ ಗಂಡಸು ಬಹಳ ವಿರಳ. ಹಾಗಿರುವಾಗ ಈತ ಇಷ್ಟು ರಾಜಾರೋಷವಾಗಿ ಹೀಗೆ ಹೇಳುತ್ತಿದ್ದಾನಲ್ಲ ಎಂದು ಅವನ ಸ್ನೇಹಿತನಿಗೆ ಆಶ್ಚರ್ಯವಾಯಿತಂತೆ.
ಆಗ ಅವನ ಸ್ನೇಹಿತ, ‘ಸರಿ, ನೀನು ಉತ್ತಮ ಗಂಡ ಎಂದು ಹೇಗೆ ಹೇಳುತ್ತೀಯಾ? ಜಗತ್ತಿನಲ್ಲಿ ಸಾಕಷ್ಟು ಗಂಡಂದಿರಿದ್ದಾರೆ, ಆದರೆನನಗೆ ತಿಳಿದಿರುವಂತೆ, ಉತ್ತಮ ಗಂಡ ಎಂಬುವವ ಇಲ್ಲವೇ ಇಲ್ಲ’ ಎಂದು ಹೇಳಿದನಂತೆ. ‘ಉತ್ತಮ ಗಂಡ ಎಂದು ಕರೆಯಿಸಿ ಕೊಳ್ಳಲು ಇಪ್ಪತ್ತೊಂದು ಸೂತ್ರಗಳಿವೆ. ನಾನು ಚಾಚೂ ತಪ್ಪದೇ ಆ ಸೂತ್ರಗಳನ್ನು ಪಾಲಿಸುತ್ತಿದ್ದೇನೆ.’ ಎಂದನಂತೆ. ಅಂದ ಹಾಗೆ ಆ ‘ಉತ್ತಮ ಗಂಡ’ ಪಾಲಿಸುತ್ತಿರುವ ಇಪ್ಪತ್ತೊಂದು ಸೂತ್ರಗಳು.
೧.ಗ್ಯಾಸ್ ಮೇಲಿಟ್ಟ ಕುಕ್ಕರ್ ಮೂರು ಸಿಟಿ ಹೊಡೆದ ನಂತರ ಓಡಿ ಬಂದು ಗ್ಯಾಸ್ ಒಲೆ ಆರಿಸುವುದು.೨.ಕಾಯಿಸಲಿಟ್ಟ ಹಾಲು ಉಕ್ಕಿ ಬರುತ್ತಿರುವುದು ಕಂಡ ತಕ್ಷಣ ಓಡಿ ಹೋಗಿ ಒಲೆ ಆರಿಸುವುದು.೩.ಡೋರ್ ಬೆಲ್ ಅಟೆಂಡ್ ಮಾಡುವುದು.೪.ಅಟ್ಟದಲ್ಲಿರುವ ಸಾಮಾನುಗಳನ್ನು ಇಳಿಸಿ ಕೊಡುವುದು.೫.ಗಟ್ಟಿಯಾಗಿ ಮುಚ್ಚಿರುವ ದಿನಸಿ ಡಬ್ಬಿಗಳ ಮುಚ್ಚಳ ತೆಗೆದು ಕೆಡುವುದು.೬.ಸಾಸ್ ಮತ್ತು ಜಾಮ್ ಬಾಟ್ಲಿ ಮುಚ್ಚಳಗಳನ್ನು ತೆಗೆದು ಕೊಡುವುದು.೭.ಮನೆಯಲ್ಲಿನ ಹಲ್ಲಿ, ಜಿರಳೆ ಇತ್ಯಾದಿ ‘ಭಯಂಕರ’ ಪ್ರಾಣಿಗಳನ್ನು ಹೊಡೆದು ಹೊರಗೆ ಹಾಕುವುದು.೮.ಪ್ರತಿ ಬಾರಿ ಗ್ಯಾಸ್ ಸಿಲಿಂಡರ್ ಖಾಲಿಯಾದಾಗ, ಬದಲಾಯಿಸಿ ಕೊಡುವುದು.೯.ಹೇಳಿದಾಗ ಮಾತ್ರ ಮಕ್ಕಳ ಮೇಲೆ ಗದರುವುದು ಮತ್ತು ಅವರನ್ನು ಸಂಭಾಳಿಸುವುದು.೧೦.ಬಾಗಿಲಲ್ಲಿ ಬಿದ್ದಿರುವ ಪೇಪರ್ ತರುವುದು, ತಂದ ತಕ್ಷಣ ಓದುವುದು ಮತ್ತು ಪದಬಂಧ ಕಾಲಂ ಅನ್ನು ತುಂಬದೇ ಹಾಗೇಬಿಡುವುದು.೧೧.ಮನೆಯಿಂದ ಹೊರಗೆ ಬಿದ್ದರೆ ಮುಗಿತು ಖಬರೇ ಇರುವುದಿಲ್ಲ ಎಂಬ ಮಾತನ್ನು ದಿನ ನಿತ್ಯ ಕೇಳಿಸಿಕೊಳ್ಳುವುದು.೧೨.ಬಟ್ಟೆಗಳನ್ನು ಇಸ್ತ್ರಿ ಮಾಡುವುದು, ಇಸ್ತ್ರಿ ಮಾಡಿಸಿ ತಂದು ಕೊಡುವುದು.೧೩.ಬ್ಯಾಂಕ್ ವ್ಯವಹಾರ ಮತ್ತು ಇತರ ಬಿಲ್ ತುಂಬುವ ಕೆಲಸ ಮಾಡುವುದು.೧೪.ತಿಂಗಳ ಸಾಮಾನಿನ ಚೀಲ ಅಂಗಡಿಯಿಂದ ತಾವೇ ಹೊತ್ತು ತರುವುದು.೧೫.ಶಾಪಿಂಗ್ ಮಾಡುವಾಗ ಎಷ್ಟೇ ಹೊತ್ತಾದರೂ ಕಿರಿ ಕಿರಿ ಮಾಡದೇ, ಹೆಂಡತಿ ಹಿಂದೆ ಹಿಂದೆ ಬರುವುದು ಮತ್ತು ಖರೀದಿಮಾಡಿದಾಗ ಮರು ಮಾತನಾಡದೆ ಸುಮ್ಮನೆ ಹಣ ಪಾವತಿಸುವುದು.೧೬.ಅತ್ತೆ ಮನೆಯ ನೆಂಟರು ಬಂದಾಗ ಮನೆಯ ಹೆಚ್ಚಿನ ಕೆಲಸಗಳನ್ನು ನಿಭಾಯಿಸಿ, ‘ಗುಡ್ ಬಾಯ’ ಎಂದು ಎನಿಸಿಕೊಳ್ಳುವುದು.೧೭.ಮನೆಯ ಸಣ್ಣ ಪುಟ್ಟ ಎಲೆಕ್ಟ್ರಿಕಲ್ ಮತ್ತು ಪ್ಲಂಬಿಂಗ್ ಕೆಲಸ ಮಾಡುವುದು.೧೮.ನೆಲದ ಮೇಲಿಂದ ಅಥವಾ ಮಂಚದ ಮೇಲಿಂದ ಕೆಳಗೆ ಜಾರಿಬಿದ್ದು ಮೂರು ತುಂಡಾಗಿರುವ ರಿಮೋಟ್ ಅನ್ನು ರಿಪೇರಿಮಾಡಿ ಮೊದಲಿನಂತೆ ಇಡುವುದು.೧೯.ಮನೆಯಲ್ಲಿ ಕಾರು, ಸ್ಕೂಟರ್ ಇತ್ಯಾದಿ ಇದ್ದಲ್ಲಿ, ಡ್ರೈವಿಂಗ್ ಕಾರ್ಯ ನಿರ್ವಹಿಸುವುದು.೨೦.ಮನೆಯಲ್ಲಿ ವಾಹನ ಇಲ್ಲದಿದ್ರೆ, ತನ್ನ ಮೊಬೈಲ್ ನಿಂದ ಆನ್ ಲೈನ್ ಬುಕ್ ಮಾಡಿ ಕೊಡುವುದು.ಕೊನೆಯದಾಗಿ, ‘ಈ ಮನೆಯಲ್ಲಿ ದಿನವಿಡೀ ಎಲ್ಲಾ ಕೆಲಸಾನೂ ನಾನೊಬ್ಬಳೇ ಮಾಡಿ ಸಾಯಬೇಕು, ಒಬ್ಬರಾದರೂ ಸಹಾಯಕ್ಕೆಸಿಗೋದಿಲ್ಲ, ಯಾರೂ ನನಗೆ ಹೆಲ್ಪ್ ಮಾಡುವುದಿಲ್ಲ’ ಎನ್ನುವ ವಾಕ್ಯವನ್ನು ಎಷ್ಟು ಸಲವಾದರೂ ಶಾಂತ ರೀತಿಯಿಂದಕೇಳಿಸಿಕೊಳ್ಳುವುದು.
ಅವರವರೇ ತಮ್ಮ ಶ್ರದ್ಧಾಂಜಲಿ ಬರೆದುಕೊಂಡಾಗ..ಪತ್ರಿಕಾ ಕಚೇರಿಗಳಲ್ಲಿ  (ಅಬಿಚುವರಿ – ಶ್ರದ್ಧಾಂಜಲಿ ಲೇಖನ) ಬರಹವನ್ನು ಗಣ್ಯವ್ಯಕ್ತಿಗಳು ನಿಧನರಾಗುವುದಕ್ಕಿಂತ ಕೆಲವು ವರ್ಷಗಳ ಮೊದಲೇ ಬರೆದಿಡುವುದು ಸಂಪ್ರದಾಯ. ಇದು ಸುದ್ದಿಮನೆಯ ಒಂದು ಆಂತರಿಕ ವ್ಯವಸ್ಥೆ. ಗಣ್ಯರು ನಿಧನ ರಾದ ದಿನ ಅವರ ಬಗ್ಗೆ ಬರೆಯಿಸುವುದು ಕಷ್ಟ. ಅದರಲ್ಲೂ ರಾತ್ರಿ ವೇಳೆ ಯಾರಾದರೂ ನಿಧನರಾದರೆ, ಅವರ ಬಗ್ಗೆ ಮರುದಿನದ ಪತ್ರಿಕೆಯಲ್ಲಿ ಗಣ್ಯರಿಂದ ಬರೆಯಿಸುವುದಾದರೂ ಹೇಗೆ?ಈ ಕಾರಣದಿಂದ ಮೊದಲೇ ಶ್ರದ್ಧಾಂಜಲಿ ಲೇಖನವನ್ನು ಅವರಿಗೆ ಹತ್ತಿರದ, ಅವರನ್ನು ಬಲ್ಲವರಿಂದ ಸಿದ್ಧಪಡಿಸಿಟ್ಟುಕೊಳ್ಳುವುದು ಒಂದು ಸಂಪ್ರದಾಯದಂತೆ ನಡೆದುಕೊಂಡು ಬಂದಿದೆ.
ಯಾರ ಬಗ್ಗೆ ಇಂಥ ಶ್ರದ್ಧಾಂಜಲಿ ಲೇಖನ ಸಿದ್ಧಪಡಿಸಲಾಗುವುದೋ, ಅವರ ಆಯುಷ್ಯ ಮತ್ತಷ್ಟು ಹೆಚ್ಚುತ್ತದೆ ಎಂದು ಹೇಳುವುದು ಬೇರೆ ಮಾತು. ಕಳೆದ ತಿಂಗಳು ಪತ್ರಕರ್ತ, ಬ್ರಾಡ್ ಕಾಸ್ಟರ್ ಮತ್ತು ಇತಿಹಾಸಕಾರ ಗಾಡ್ ಫ್ರೆಯ್ ಹೋಡ್ಜ್ ಸನ್ ನಿಧನರಾದರು. ಇವರ ಬಗ್ಗೆ ಖ್ಯಾತ ಪತ್ರಕರ್ತ ಜಾನ್ ಶಿರ್ಲೆ ಬರೆದ ಶ್ರದ್ಧಾಂಜಲಿ ಲೇಖನವನ್ನು ಲಂಡನ್ನಿನ ‘ದಿ ಗಾರ್ಡಿಯನ್’ ಪತ್ರಿಕೆ ಪ್ರಕಟಿಸಿತು. ಆದರೆ ಅದನ್ನು ಬರೆದ ಜಾನ್ ಶಿರ್ಲೆ ಮೂರು ವರ್ಷಗಳ ಹಿಂದೆಯೇ (2018) ನಿಧನರಾಗಿದ್ದರು.
ತಮಾಷೆಯೆಂದರೆ, ಫಾಕ್ ಲ್ಯಾಂಡ್ ಯುದ್ಧದ ವರದಿಯಿಂದ ಪ್ರಸಿದ್ಧರಾದ ಜಾನ್ ಶಿರ್ಲೆ ನಿಧನರಾದಾಗ, ಅವರ ಬಗ್ಗೆ ಗಾಡ್ಫ್ರೆಯ್ ಹೋಡ್ಜ್ ಸನ್ ಶ್ರದ್ಧಾಂಜಲಿ ಲೇಖನ ಬರೆದಿದ್ದರು. ಅದನ್ನೂ ದಿ ಗಾರ್ಡಿಯನ್ ಪ್ರಕಟಿಸಿತ್ತು. ಗಾಡ್ ಫ್ರೆಯ್ ಹೋಡ್ಜ್ ಸನ್‌ಗೆ ಶಿರ್ಲೆ ಬಗ್ಗೆ ಬರೆಯುವಾಗ, ಶಿರ್ಲೆ ಸಹ ತನ್ನ ಬಗ್ಗೆ ಶ್ರದ್ಧಾಂಜಲಿ ಲೇಖನ ಬರೆದಿರಬಹುದು ಎಂಬುದು ಗೊತ್ತಿರಲಿಲ್ಲ. ಹಾಗೆಯೇ ಶಿರ್ಲೆಗೂ. ಆದರೆ ಇಬ್ಬರೂ ಪರಸ್ಪರರ ಬಗ್ಗೆ ಅಂಥ ಲೇಖನವನ್ನು ಒಂದೇ ಪತ್ರಿಕೆಗೆ ಸಾಕಷ್ಟು ಮೊದಲೇ ಬರೆದು ಕೊಟ್ಟಿದ್ದರು.
ನಾಯರ್ ಮತ್ತು ನೋಯರ್ಖ್ಯಾತ ಪತ್ರಕರ್ತ ಕುಲದೀಪ್ ನಾಯರ್ ಅವರು ತೀರಿಕೊಂಡ ನಂತರ, ಅವರು ಮೊದಲೇ ಬರೆದಿಟ್ಟಿದ್ದ ಪುಸ್ತಕದಲ್ಲಿ ಅನೇಕಆಸಕ್ತದಾಯಕ ವಿಷಯಗಳಿವೆ. ಅದರ ಹೆಸರು     :    . ಈ ಕೃತಿಯಲ್ಲಿ ಅವರು ಜಿನ್ನಾ ಅವರಿಂದ ಮೋದಿ ಅವರ ತನಕ ತಮ್ಮ ಒಡನಾಟ, ಸಂಬಂಧ ಮತ್ತು ಪ್ರಸಂಗಗಳನ್ನು ಬಿಚ್ಚಿಟ್ಟಿದ್ದಾರೆ.
ನಾಯರ್ ಅವರು ಡಾ.ಮನಮೋಹನ ಸಿಂಗ್ ಅವರನ್ನು ಮೊದಲ ಬಾರಿಗೆ ಭೇಟಿ ಆದಾಗ ಅವರು ಕೇಂದ್ರ ಸರಕಾರಕ್ಕೆ ಆರ್ಥಿಕಸಲಹೆಗಾರರಾಗಿದ್ದರಂತೆ. ಅದಕ್ಕೂ ಮೊದಲು ನಾಯರ್, ಡಾ.ಸಿಂಗ್ ಅವರನ್ನು ಇಂಡಿಯಾ ಇಂಟರ್‌ನ್ಯಾಷನಲ್ ಸೆಂಟರ್ ಮತ್ತು ಗೋಲೆ ಮಾರ್ಕೆಟ್ ಸನಿಹವಿರುವ ಭಾಯ್ ವೀರ್ ಸಿಂಗ್ ಸಾಹಿತ್ಯ ಸದನದಲ್ಲಿ ಆಗಾಗ ನೋಡುತ್ತಿದ್ದರಂತೆ. ಆದರೆ ಡಾ.ಸಿಂಗ್ ಜತೆ ಮಾತಾಡುವ ಅವಕಾಶ ಸಿಕ್ಕಿರಲಿಲ್ಲವಂತೆ.
ಮೊದಲ ಸಲ ಭೇಟಿ ಆದಾಗ, ಡಾ.ಸಿಂಗ್ ಹೇಳಿದರಂತೆ – ‘ಮಿಸ್ಟರ್ ನಾಯರ್, ನೀವು ಭಾರತ ರತ್ನ ಪ್ರಶಸ್ತಿಗೆ ಅರ್ಹರು’ ಅವುಹಿಂದೂ – ಸಿಖ್ ಧರ್ಮೀಯರ ನಡುವೆ ಕಂದಕ ಮೂಡಿದ ದಿನಗಳು. ನಾಯರ್ ಅವರು ಸರಕಾರದ ಪರವಾಗಿ ಮತ್ತು ಸಿಖ್ಸಮೂದಾಯದ ಪರವಾಗಿ ಸಂಧಾನಕಾರರಾಗಿ ಮಾತುಕತೆಗೆ ನೆರವಾಗುತ್ತಿದ್ದರು. ನಾಯ ಅವರು ಲಂಡನ್ನಿನಲ್ಲಿ ಭಾರತದ ಹೈಕಮಿಷನರ್ ಆದಾಗ ಎರಡೂ ಸಮೂದಾಯಗಳನ್ನು ಹತ್ತಿರ ತರಲು ಬಹಳ ಶ್ರಮಿಸಿದರು. ಆದರೆ ಅವರನ್ನು ಅಲ್ಲಿ ಮುಂದುವರಿ ಯಲು ಕೆಲವರು ಬಿಡಲಿಲ್ಲ.
ಆದರೆ ಡಾ.ಸಿಂಗ್ ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿ ಇದ್ದರೂ ಒಂದೇ ಒಂದು ಸಲ ನಾಯರ್ ಅವರನ್ನು ಕಾಫಿಗೂ ಆಹ್ವಾನಿಸಲಿಲ್ಲವಂತೆ. ತಮ್ಮನ್ನು ಚಹಾ ಅಥವಾ ಕಾಫಿಗೆ ಕರೆದರೆ ಸೋನಿಯಾ ಗಾಂಧಿ ಅವರಿಗೆ ಬೇಸರವಾಗಬಹುದೆಂದು ಅವರು ಹಾಗೆ ಮಾಡಿದ್ದಿರಬಹುದು ಎಂಬುದು ನಾಯರ್ ಇಂಗಿತ. ನಾಯರ್ ಅವರು ಇಂದಿರಾ ಗಾಂಧಿಯ ಟೀಕಾಕಾರರಾಗಿದ್ದರುಎಂಬುದು ಸೋನಿಯಾಗೆ ಗೊತ್ತಿತ್ತು. ನಾಯರ್ ಅವರನ್ನು ಕಾಫಿಗೆ ಕರೆದರೆ ಸೋನಿಯಾ ಮುನಿಸಿಕೊಳ್ಳಬಹುದೆಂದು ನಾಯರ್ ಹತ್ತಿರ ಸಹ ಡಾ.ಸಿಂಗ್ ಸುಳಿಯಲಿಲ್ಲ.
ಡಾ.ಸಿಂಗ್ ಪ್ರಧಾನಿ ಆಗಿದ್ದ ಅವಧಿಯಲ್ಲಿ ಸುಮಾರು ಎಂಬತ್ತು ದೇಶಗಳಿಗೆ ಹೋಗಿದ್ದರು. ಅವರು ವಿದೇಶಯಾತ್ರೆಯನ್ನು ಇಷ್ಟ ಪಡುತ್ತಿದ್ದರು. ಪ್ರತಿ ಸಲ ವಿದೇಶಗಳಿಗೆ ಹೋಗುವಾಗ ತಮ್ಮ ಪತ್ನಿಯನ್ನು ಕರೆದುಕೊಂಡು ಹೋಗುತ್ತಿದ್ದರು. ವಿದೇಶಗಳಿಗೆಹೋದರೆ ಪತ್ನಿ ಜತೆ ಹೆಚ್ಚು ಹೊತ್ತು ಕಳೆಯಬಹುದು ಎಂಬುದು ಅವರ ಇರಾದೆಯಾಗಿದ್ದಿರಬಹುದು. ಅಲ್ಲದೆ ಡಾ.ಸಿಂಗ್ವಿದೇಶಗಳಿಗೆ ಹೆಚ್ಚು ನಿರುಮ್ಮಳವಾಗಿ, ಹಾಯಾಗಿ ಇರುತ್ತಿದ್ದರು. ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಸೋನಿಯಾ ಗಾಂಧಿ ಜತೆಭಾಗವಹಿಸುವ ಸಂದರ್ಭ ಬಂದಾಗ ಡಾ.ಸಿಂಗ್ ಎಂದೂ ತಾವೇ ಮೊದಲು ಕುಳಿತುಕೊಳ್ಳುತ್ತಿರಲಿಲ್ಲವಂತೆ. ತಮ್ಮನ್ನು ಪ್ರಧಾನಿ ಮಾಡಿದ ಸೋನಿಯಾ ಆಸೀನರಾದ ಬಳಿಕವೇ ತಾವು ಕುಳಿತುಕೊಳ್ಳುತ್ತಿದ್ದರಂತೆ. ಹಾಗಂತ ನಾಯರ್ ಬರೆದಿದ್ದಾರೆ. ಇದು ಒಂದು ರೀತಿಯಲ್ಲಿ ನಾಯರ್, ನೋಯರ್ (ಡಾ.ಸಿಂಗ್) ಬಗ್ಗೆ ಬರೆದಂತಾಗಿದೆ.
ಓದುಗರು ಮತ್ತು ಅವರ ಪ್ರಶ್ನೆಗಳು!
ನಮ್ಮ ಪತ್ರಿಕೆಯ ‘ಭಟ್ಟರ್ ಸ್ಕಾಚ್’ ಅಂಕಣಕ್ಕೆ ಪ್ರತಿದಿನ ನೂರಾರು ಪ್ರಶ್ನೆಗಳು ಬರುತ್ತವೆ. ಎಲ್ಲಿಂದಲೋ ಓದುಗರು ಪ್ರಶ್ನೆಗಳನ್ನು ಕಳಿಸುತ್ತಾರೆ. ಕಳೆದ ವಾರ ಒಂದೇ ದಿನ ಬಂದ ಪತ್ರಗಳ ಪೈಕಿ ಸುಮಾರು ಎಪ್ಪತ್ತು ಪ್ರಶ್ನೆಗಳು ವೀರಪ್ಪ ಮೊಯಿಲಿ ಅವರಿಗೆಸಂಬಂಽಸಿದ್ದವು. ನಾನಾದರೂ ಎಷ್ಟೂ ಅಂತ ಅವರ ಬಗ್ಗೆ ಬರೆಯಲಿ? ಓದುಗರಿಗೆ ಅವರ ಬಗ್ಗೆ ಎಷ್ಟು ಆಸಕ್ತಿ(?) ಇರಬಹುದುಯೋಚಿಸಿ. ಕೆಲವರು ನಿತ್ಯವೂ ಪ್ರಶ್ನೆಗಳನ್ನು ಕಳಿಸುತ್ತಾರೆ. ಇನ್ನು ಕೆಲವರು ಪ್ರತಿ ದಿನ ಹತ್ತಕ್ಕೂ ಹೆಚ್ಚು ಪ್ರಶ್ನೆಗಳನ್ನು ಕಳಿಸು ತ್ತಾರೆ. ಕನಿಷ್ಠ ಒಂದಾದರೂ ಪ್ರಕಟವಾಗಲಿ ಎಂಬುದು ಅವರ ಆಶಯ ವಿರಬಹುದು.
ಪ್ರಶ್ನೆ ಕೇಳುವುದೂ ಒಂದು ಕಲೆ. ಎಲ್ಲಾ ಪ್ರಶ್ನೆಗಳಿಗೂ ಉತ್ತರಿಸಲಾಗುವುದಿಲ್ಲ. ಅಲ್ಲದೇ ಉತ್ತರಿಸಬೇಕು ಎಂದು ಅನಿಸುವುದೂ ಇಲ್ಲ. ‘ಭಟ್ರೇ, ನೀವು ಯಾಕೆ ಮೀಸೆ ಬಿಡುವುದಿಲ್ಲ?’ ಎಂದು ಕನಿಷ್ಠ ಒಬ್ಬರಾದರೂ ಪ್ರಶ್ನೆ ಕಳಿಸಿರುತ್ತಾರೆ. ಈ ಪ್ರಶ್ನೆಗೆ ಉತ್ತರಿಸಿ ಉತ್ತರಿಸಿ ಸಾಕಾಗಿ ಹೋಗಿದೆ. ತಮಾಷೆ ಅಂದ್ರೆ ಈ ಪ್ರಶ್ನೆಗಳನ್ನು ಕಳಿಸುವವರು ಹೆಂಗಸರೇ!
ಮೊನ್ನೆ ಒಬ್ಬಳು ಪ್ರಶ್ನೆ ಕೇಳಿದ್ದಳು – ‘ಭಟ್ರೇ, ನೀವು ಮೀಸೆ ಬಿಟ್ಟಾಗ ನನಗೆ ತಿಳಿಸುತ್ತೀರಿ ಆಲ್ವಾ?’ ಮೀಸೆ ಬಿಟ್ಟರೆ ಎಲ್ಲರಿಗೂ ಕಾಣಿಸುತ್ತದೆ. ಅದನ್ನು ಮುಚ್ಚಿಟ್ಟುಕೊಳ್ಳಲು ಆಗುತ್ತಾ? ಕೆಲವರಿಗೆ ಗೊತ್ತು, ಯಾವ ಪ್ರಶ್ನೆ ಕೇಳಿದರೆ ತಟ್ಟನೆ ಉತ್ತರ ಸಿಗುತ್ತದೆಂದು. ಅಂಥವರು ಜಾಣ ಪ್ರಶ್ನೆಗಳನ್ನು ಕೇಳುತ್ತಾರೆ. ಈ ಪ್ರಶ್ನೋತ್ತರ ಅಂಕಣ ಆ ಕ್ಷಣ ಓದಿ, ನಕ್ಕು ಹಗುರಾಗಿ ಮರೆತುಬಿಡಬಹುದಾದ ಅಂಕಣ. ನಾನು ಆಗಾಗ ಒಬ್ಬ ರಾಜಕಾರಣಿ ಬಗ್ಗೆ (ಮೊಯಿಲಿ ಅಲ್ಲ) ಈ ಅಂಕಣದಲ್ಲಿ ಪ್ರಸ್ತಾಪಿಸುತ್ತಿದ್ದೆ.
ಅದರಿಂದ ಮನನೊಂದ ಅವರು ನಮ್ಮ ಕಚೇರಿಗೆ ಬಂದು ತಮ್ಮ ಬೇಸರವನ್ನು ವ್ಯಕ್ತಪಡಿಸಿದ್ದರು. ಅವರನ್ನು ಸಮಾಧಾನ ಮಾಡುವ ಹೊತ್ತಿಗೆ ನಾನು ಸುಸ್ತು. ಎಷ್ಟೋ ಪ್ರಶ್ನೆಗಳಿಗೆ ಉತ್ತರಿಸಿದ್ದು ನೆನಪಿರುವುದಿಲ್ಲ. ಮೊನ್ನೆ ಓದುಗರೊಬ್ಬರು ನಮ್ಮ ಕಚೇರಿಗೆ ಬಂದಿದ್ದರು. ನಾನು ಕನ್ನಡ ಪ್ರಭ ದಲ್ಲಿzಗಲೂ ಇಂಥದೇ ಅಂಕಣ ಬರೆಯುತ್ತಿದ್ದೆ. ಅದಕ್ಕೆ ಕೇಳ್ರಪ್ಪೋ ಕೇಳಿ ಅಂತ ಹೆಸರಿತ್ತು. ಆ ಅಂಕಣದಲ್ಲಿ ಪ್ರಕಟವಾದ ಒಂದು ಪ್ರಶ್ನೆ ಮತ್ತು ಅದಕ್ಕೆ ನಾನು ನೀಡಿದ ಉತ್ತರವನ್ನು ಅವರು ನೆನಪಿಸಿದರು.
ಪ್ರಶ್ನೆ:‘ನನಗೆ ಈಗ ಐವತ್ತೊಂಬತ್ತು ವರ್ಷ. ಹೇಳಿಕೊಳ್ಳುವಂಥ ಯಾವ ಕೆಲಸವೂ ಇಲ್ಲ. ಅಡುಗೆ ಮಾಡಲು ಬರುವುದಿಲ್ಲ. ಮನೆಕೆಲಸ ಗೊತ್ತಿಲ್ಲ. ಹೇಳಿಕೊಳ್ಳುವಂಥ ಸೌಂದರ್ಯವೂ ಇಲ್ಲ. ಆದರೂ ನನ್ನನ್ನು ಯಾರಾದರೂ ಮದುವೆ ಆಗ್ತಾರಾ?’ ನನ್ನ ಉತ್ತರ: ಮದುವೆ ಆಗದಿರಲು ಇವ್ಯಾವವೂ ಕಾರಣಗಳಲ್ಲ. ನಿಮ್ಮನ್ನು ವರಿಸುವ ಮೂರ್ಖ ಈ ಜಗತ್ತಿನಲ್ಲಿ ಎಲ್ಲಾ ಇದ್ದಾನೆಎಂಬುದು ನಿಮಗೆ ಗೊತ್ತಿರಲಿ, ಆದರೆ ನೀವು ಮಾಯಾವತಿ ಆಗಿದ್ದರೆ ಡೌಟು !’
ಗಂಡಸರ ಬುದ್ಧಿಗಂಡಸರು ಗಂಡಸರೇ. ಅವರ ಬುದ್ಧಿಯೇ ಅಷ್ಟು. ಅವರು ಎಂದೂ ಬದಲಾಗುವುದಿಲ್ಲ. ಮೊನ್ನೆ ಸ್ನೇಹಿತರೊಬ್ಬರು ಕಳಿಸಿದ ಹಾಸ್ಯ ಪ್ರಸಂಗವಿದು. ಸ್ಕೂಟರ್‌ನಲ್ಲಿ ನಾನು ಹೋಗುತ್ತಿದ್ದೆ. ನಾಯಿಯೊಂದು ಅಡ್ಡಬಂತು. ಕಂಟ್ರೋಲ್ ಮಾಡಲು ಆಗದೇ ರಸ್ತೆಯ ಇನ್ನೊಂದು ಬದಿಯ ಚರಂಡಿಗೆ ಹೋಗಿ ಪಲ್ಟಿ ಹೊಡೆದೆ. ಕಷ್ಟಪಟ್ಟು ಹೇಗಾದರೂ ಮಾಡಿ ಚರಂಡಿಯಿಂದ ಮೇಲೆ ಬಂದೆ,ಅದೇ ಹೊತ್ತಿಗೆ ಸುಂದರವಾಗಿರುವ ಮಹಿಳೆಯೊಬ್ಬರು ತಮ್ಮ ಕಾರಿನಿಂದ ಇಳಿದರು, ‘ಏನೂ ಆಗಿಲ್ಲ ತಾನೆ?’ ಎಂದರುಮೃದುವಾಗಿ.
‘ಇಲ್ಲ…ಇಲ್ಲ’ ಎಂದು ನಾನು ಹೇಳಿದೆ. ಅವರು ಹೇಳಿದರು ‘ನನ್ನ ಮನೆ ಇಲ್ಲೇ ಹತ್ತಿರದಲ್ಲಿ ಇದೆ, ನಡೆಯಿರಿ, ಬಟ್ಟೆ ಬದಲಾಯಿ ಸಿಕೊಂಡು ಸ್ವಲ್ಪ ವಿಶ್ರಾಂತಿ ಪಡೆದು ಬರುವಿರಂತೆ ಹಾಗೆಯೇ ನಿಮಗೆ ಹೆಚ್ಚು ಪೆಟ್ಟು ತಾಗಿದೆಯೇ ಎಂದು ನಾನು ನೋಡಬೇಕು.’ ನಾನು ಉತ್ತರಿಸಿದೆ – ‘ನಿಮಗೆ ತುಂಬಾ ತುಂಬಾ ಧನ್ಯವಾದಗಳು, ಆದರೆ ನನ್ನ ಹೆಂಡತಿ ಬೇಸರ ಮಾಡಿ ಕೊಳ್ಳಬಹುದು’ ‘ನೀವು ಗಾಬರಿಯಾಗ ಬೇಡಿ, ನಾನು ಒಬ್ಬಳು ಡಾಕ್ಟರ್, ಮೊದಲು ನನ್ನೊಂದಿಗೆ ನಡೆಯಿರಿ’ ಎಂದು ಅವರು ಒತ್ತಾಯ ಮಾಡಿದರು.
‘ನಾನು ನೋಡಬೇಕು ನಿಮಗೆ ಪ್ರ್ಯಾಕ್ಚರ್ ಆಗಿದೆಯಾ ಎಂದು?’ ವಾಸ್ತವವಾಗಿ ‘ಅವರು ತುಂಬಾ ಸುಂದರ ಮತ್ತು ಒಳ್ಳೆಯ ಸ್ವಭಾವದವರಾಗಿದ್ದರು.’ ಬರುವುದಿಲ್ಲ ಎಂದು ಹೇಳಲು ನನ್ನಿಂದ ಆಗಲಿಲ್ಲ. ನಾನು ಹೇಳಿದೆ – ‘ಆಯಿತು ನಾನು ಬರುತ್ತೇನೆ. ಆದರೆ ನನಗೆ ಗೊತ್ತಿದೆ ನನ್ನ ಹೆಂಡತಿ ಬೇಸರ ಮಾಡಿ ಕೊಳ್ಳುವುದು ಮಾತ್ರ ಖಂಡಿತ.’ ನಾವು ಅವರ ಮನೆಗೆ ಬಂದೆವು ಮತ್ತು ನಾನು ನನ್ನ ಬಟ್ಟೆ, ಕೈ ಕಾಲು ಮುಖಗಳನ್ನು ತೊಳೆದುಕೊಂಡೆ. ಅವರು ನನ್ನನ್ನು ಪರೀಕ್ಷಿಸಿದರು.
ನನಗೆ ಹೇಳುವಂತಹ ದೊಡ್ಡ ಪೆಟ್ಟೇನೂ ಆಗಿರಲಿಲ್ಲ. ನಾನು ತಣ್ಣಗಿರುವ ಜ್ಯೂಸ್ ಕುಡಿದೆ, ನಂತರ ಅವರಲ್ಲಿ ಹೇಳಿದೆ, ‘ಈಗ ನಾನು ಮೊದಲಿಗಿಂತ ತುಂಬಾ ಆರಾಮಾಗಿದ್ದೇನೆ, ನನ್ನ ಹೆಂಡತಿ ಮಾತ್ರ ತುಂಬಾ ಸಿಟ್ಟು ಮಾಡಿ ಕೊಂಡಿರುತ್ತಾಳೆ… ನಾನೀಗ ಹೋಗಲೆ ಬೇಕು.’ ಅವರು ಮುಗಳು ನಗುತ್ತಾ ಹೇಳಿದರು – ‘ಸ್ವಲ್ಪ ನಿಂತುಕೊಳ್ಳಿ, ನಿಮ್ಮ ಹೆಂಡತಿಗೆ ಯಾವ ವಿಷಯವೂ ಗೊತ್ತಾಗುವುದಿಲ್ಲ, ಅವರು ಈಗ ಮನೆಯಲ್ಲಿ ಆರಾಮವಾಗಿ ಕುಳಿತು ಕೊಂಡಿರಬಹುದು ಅಲ್ಲವೇ?’ ಅದಕ್ಕೆ ನಾನು ಹೇಳಿದೆ – ‘ಇಲ್ಲ -ಇಲ್ಲ… ಬಹುಶಃ ಅವಳು ಈಗಲೂ ಚರಂಡಿಯ ಬಿದ್ದು ಕೊಂಡಿರಬಹುದು!’