ಸಾಮಾಜಿಕ ಮಾಧ್ಯಮ ನಿಯಂತ್ರಣದತ್ತ ಮೊದಲ ಹೆಜ್ಜೆ
ಅಭಿವ್ಯಕ್ತಿ
ಎ.ಸೂರ್ಯಪ್ರಕಾಶ್‌
ನಮ್ಮ ಸಾಂವಿಧಾನಿಕ ಮೌಲ್ಯಗಳು ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಕಾಪಾಡುವ ಅಗತ್ಯತೆಯೊಂದಿಗೆ ಹಿಂಸೆ ಮತ್ತು ಅಶ್ಲೀಲತೆಯನ್ನು ಉತ್ತೇಜಿಸುವ ಆಕ್ಷೇಪಣೀಯ ಆನ್‌ಲೈನ್ ವಿಷಯವನ್ನು ನಿಯಂತ್ರಿಸುವುದು ಹಾಗೂ ಹೊಸ ಮಾಧ್ಯಮಕ್ಕೆ ಸಂಬಂಧಿಸಿದ ಕಳವಳಗಳನ್ನು ಬಗೆಹರಿಸುವುದು ಕೇಂದ್ರ ಸರಕಾರ ರೂಪಿಸಿರುವ ಹೊಸ ನಿಯಮಗಳ ಕೇಂದ್ರಬಿಂದುವಾಗಿದೆ.
ಆನ್‌ಲೈನ್ ಸುದ್ದಿ ತಾಣಗಳು ಮತ್ತು ಮುದ್ರಣ ಮಾಧ್ಯಮಗಳು ಹಾಗೂ ಆನ್‌ಲೈನ್ ಮತ್ತು ಟೆಲಿವಿಷನ್ ಸುದ್ದಿ ಮಾಧ್ಯಮಗಳ ನಡುವೆ ಹೆಚ್ಚು ಅಗತ್ಯವಿರುವ ಸಮಾನ ಅವಕಾಶಗಳನ್ನು ಸೃಷ್ಟಿಸಲು ಮತ್ತು ಮುದ್ರಣ ಮಾಧ್ಯಮದಲ್ಲಿ ಪತ್ರಿಕೋದ್ಯಮನಡವಳಿಕೆಯ ಮಾನದಂಡಗಳನ್ನು ರೂಪಿಸಿರುವ ಪತ್ರಿಕಾ ಮಂಡಳಿ ಕಾಯಿದೆ, 1994ರ ಕೇಬಲ್ ಟೆಲಿವಿಷನ್ ನೆಟ್ವರ್ಕ್ಸ್ (ನಿಯಂತ್ರಣ) ನಿಯಮಗಳ ನೀತಿ ಸಂಹಿತೆಯ ವ್ಯಾಪ್ತಿಯಲ್ಲಿ ಆನ್‌ಲೈನ್ ಸುದ್ದಿ ಪೋರ್ಟಲ್‌ಗಳನ್ನು ತರಲು ಈ ನೀತಿಯುಪ್ರಯತ್ನಿಸಿದೆ.
ಇಂತಹ ಕೆಲವು ಪ್ಲ್ಯಾಟಾರ್ಮ್‌ಗಳ ನಿರ್ಲಕ್ಷ್ಯ ಮತ್ತು ಬೇಜವಾಬ್ದಾರಿಯಿಂದಾಗಿ ಇದು ತುಂಬಾ ಅಗತ್ಯವಾಗಿತ್ತು. ಹಾಗೆಯೇ, ಸಿನೆಮಾ ಉದ್ಯಮವು ಮೇಲ್ವಿಚಾರಣೆಗಾಗಿ ಚಲನಚಿತ್ರ ಪ್ರಮಾಣೀಕರಣ ಸಂಸ್ಥೆಯನ್ನು ಹೊಂದಿರುವಂತೆ, ಒಟಿಟಿ ಪ್ಲಾಟಾರ್ಮ್ ‌ಗಳಿಗೆ ಅಂತಹ ಯಾವುದೇ ಮೇಲ್ವಿಚಾರಣಾ ಸಂಸ್ಥೆ ಇಲ್ಲ. ಆದಾಗ್ಯೂ, ಕಲೆಯ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಚಿತಪಡಿಸಿ ಕೊಳ್ಳಲು, ಸರಕಾರವು ಸ್ವಯಂ ನಿಯಂತ್ರಣವನ್ನು ಪ್ರಸ್ತಾಪಿಸಿದೆ. ಒಟಿಟಿ ಘಟಕಗಳು ಒಂದಾಗಿ ಸಂಹಿತೆಯೊಂದನ್ನು ರೂಪಿಸ ಬೇಕು ಮತ್ತು ವಿಷಯಗಳ ವರ್ಗೀಕರಣವಾಗಬೇಕು ಎಂದು ಹೇಳಿದೆ.
ಇದರಿಂದಾಗಿ ಅಪ್ರಾಪ್ತರು ವಯಸ್ಕರಿಗೆ ಸಂಬಂಧಿಸಿದ ವಿಷಯವನ್ನು ನೋಡುವುದನ್ನು ತಡೆಯುವ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಬಹುದು. ಅದನ್ನು ಒಟಿಟಿಗಳು ಮಾಡಲೇ ಬೇಕಾಗಿದೆ. ದೂರು ಪರಿಹಾರ ಕಾರ್ಯವಿಧಾನವು ಮೂರು ಹಂತದ್ಧಾಗಿರುತ್ತದೆ, ಪ್ರಕಾಶಕರು ಮತ್ತು ಸ್ವಯಂ – ನಿಯಂತ್ರಣ ಸಂಸ್ಥೆಗಳು ಮೊದಲ ಎರಡು ಹಂತಗಳಾದರೆ, ಮೂರನೇ ಹಂತವು ಕೇಂದ್ರ ಸರಕಾರದ ಮೇಲ್ವಿಚಾರಣಾ ಸಮಿತಿಯಾಗಿರುತ್ತದೆ.
ಪ್ರಸ್ತಾಪಿತ ನೀತಿಗೆ ಪ್ರಕಾಶಕರು ದೂರು ಪರಿಹಾರ ಅಧಿಕಾರಿಗಳನ್ನು ನೇಮಿಸಬೇಕು ಮತ್ತು ನಿಗದಿತ ಸಮಯದಲ್ಲಿ ದೂರುಗಳ ಅಂಗೀಕಾರ ಮತ್ತು ವಿಲೇವಾರಿಯನ್ನು ಖಚಿತಪಡಿಸಿಕೊಳ್ಳಬೇಕು. ನಂತರ, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಸ್ವಯಂ – ನಿಯಂತ್ರಣ ಸಂಸ್ಥೆ ಇರಬಹುದು. ಆನ್‌ಲೈನ್ ಪ್ಲಾಟಾರ್ಮ್‌ಗಳು ತಮ್ಮ ಖಾತೆಗಳ ಪರಿಶೀಲನೆ, ಪ್ರವೇಶ, ನಿಯಂತ್ರಣ ಇತ್ಯಾದಿನಿಯಮಗಳ ಬಗ್ಗೆ ಜಾಗರೂಕವಾಗಿರುತ್ತವೆ. ಆದರೆ ಈ ಸಮಸ್ಯೆಗಳನ್ನು ಭಾರತದ ಕಾನೂನುಗಳ ಚೌಕಟ್ಟಿನೊಳಗೆ ಪರಿಹರಿಸಿ ಕೊಳ್ಳಬೇಕಾಗಿದೆ.
ಉದಾಹರಣೆಗೆ, ಹಿಂಸಾಚಾರಕ್ಕೆ ಉತ್ತೇಜನ, ಸಮುದಾಯಗಳ ನಡುವೆ ದ್ವೇಷ, ಮಾನಹಾನಿ ಇತ್ಯಾದಿಗಳ ಬಗ್ಗೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ನಿಬಂಧನೆಗಳ ಬಗ್ಗೆ ಮುಖ್ಯವಾಹಿನಿಯ ಮಾಧ್ಯಮಗಳು ಜಾಗೃತರಾಗಿದ್ದರೆ, ಆನ್‌ಲೈನ್ ಪ್ಲಾಟಾರ್ಮ್‌ಗಳು ಈ ಎಲ್ಲವನ್ನೂ ಸಂಪೂರ್ಣವಾಗಿ ಉಪೇಕ್ಷಿಸಿವೆ. ಮಾಧ್ಯಮ ಅಥವಾ ಇತರ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಮಹಿಳೆಯರ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಅಶ್ಲೀಲ ಸಂದೇಶಗಳು ಮತ್ತು ಅಂತಹ ನಡವಳಿಕೆಯನ್ನು ನಿಭಾಯಿಸಲು ಭಾರತವು  ಅಸಮರ್ಥವಾಗಿದ್ದು, ಸೈಬರ್ ವಿಷಯದಲ್ಲಿ ಐಪಿಸಿ ಅನ್ವಯವಾಗುವುದಿಲ್ಲವೇ ಎಂದು ಯಾರಿಗಾದರೂ ಆಶ್ಚರ್ಯ ವಾಗುತ್ತದೆ.
ಭಾರತದ ಡಿಜಿಟಲ್ ಮತ್ತು ಒಟಿಟಿ ವೇದಿಕೆಗಳು ಆಸ್ಟ್ರೇಲಿಯಾದ ಡಿಜಿಟಲ್ ಸಂಸ್ಥೆಗಳು ಕೈಗೊಂಡ ಏಕೀಕೃತ ಕ್ರಮದಿಂದ ಪಾಠ ಕಲಿಯಬಹುದು. ಅವುಗಳು ಸುಳ್ಳು ಸುದ್ದಿ ಮತ್ತು ತಪ್ಪು ಮಾಹಿತಿಗಳ ಸವಾಲುಗಳನ್ನು ಎದುರಿಸಲು ಒಂದು ಸಂಹಿತೆಯನ್ನುರಚಿಸಿವೆ. ಇದನ್ನು ಆಸ್ಟ್ರೇಲಿಯನ್ ಕೋಡ್ ಆಫ್ ಪ್ರಾಕ್ಟೀಸ್ ಆನ್ ಡಿಸ್ ಇನರ್ಮೇಶನ್ ಅಂಡ್ ಮಿಸ್ ಇನರ್ಮೇಶನ್ ಎಂದು ಕರೆಯಲಾಗುತ್ತದೆ ಮತ್ತು ಇದನ್ನು ಇತ್ತೀಚೆಗೆ ಡಿಜಿಟಲ್ ಉದ್ಯಮ ಗುಂಪು ಬಿಡುಗಡೆ ಮಾಡಿತು.
ಆಸ್ಟ್ರೇಲಿಯಾದ ಸಂವಹನ ಮತ್ತು ಮಾಧ್ಯಮ ಪ್ರಾಧಿಕಾರ (ಎಸಿಎಂಎ) ಈ ಕ್ರಮವನ್ನು ಸ್ವಾಗತಿಸಿದೆ. ಮೂರನೇ ಎರಡರಷ್ಟು ಆಸ್ಟ್ರೇಲಿಯನ್ನರು ಅಂತರ್ಜಾಲದಲ್ಲಿ ಯಾವುದು ನೈಜ ಅಥವಾ ನಕಲಿ ಎಂಬುದರ ಬಗ್ಗೆ ಕಾಳಜಿ ವಹಿಸುತ್ತಾರೆ ಎಂದು ಅದುಹೇಳಿದೆ. ಡಿಜಿಟಲ್ ಪ್ಲಾಟಾರ್ಮ್‌ಗಳು ನಕಲಿ ಮತ್ತು ತಪ್ಪು ಮಾಹಿತಿಯ ಪ್ರಸಾರದಿಂದ ಉಂಟಾಗುವ ಗಂಭೀರ ಹಾನಿಗಳ ವಿರುದ್ಧ ಸುರಕ್ಷತೆ ಒದಗಿಸಲು ಸ್ವಯಂ – ನಿಯಂತ್ರಣ ಸಂಹಿತೆಗೆ ಒಪ್ಪಿಕೊಂಡಿವೆ ಎಂದೂ ಎಸಿಎಂಎ ಹೇಳುತ್ತದೆ.
ಖಾತೆಗಳನ್ನು ನಿಷ್ಕ್ರಿಯಗೊಳಿಸುವುದು ಮತ್ತು ವಿಷಯವನ್ನು ತೆಗೆದುಹಾಕುವುದು ಸೇರಿದಂತೆ ಹಲವಾರು ಕ್ರಮಗಳ ಭರವಸೆ ಯನ್ನು ಡಿಜಿಟಲ್ ಪ್ಲಾಟಾರ್ಮ್‌ಗಳು ನೀಡಿವೆ. ಇಂಗ್ಲೆಂಡ್ ಸರಕಾರವು ಆನ್‌ಲೈನ್ ಕಂಪನಿಗಳನ್ನು ಅಪಾಯಕಾರಿ ವಿಷಯಗಳಿಗೆ ಜವಾಬ್ದಾರರನ್ನಾಗಿ ಮಾಡಲು ಮತ್ತು ಅಂತಹ ವಿಷಯಗಳನ್ನು ತೆಗೆದುಹಾಕಲು ವಿಫಲವಾದ ಕಂಪನಿಗಳಿಗೆ ಶಿಕ್ಷೆ ವಿಧಿಸಲು ಕಾನೂನನ್ನು ತರಲು ಸಜ್ಜಾಗಿದೆ.
ಅಂತರ್ಜಾಲ ಬಳಕೆದಾರರನ್ನು ರಕ್ಷಿಸುವುದು ಮತ್ತು ಹಿಂಸೆ, ಭಯೋತ್ಪಾದಕ ವಸ್ತುಗಳು, ಮಕ್ಕಳ ಮೇಲಿನ ದೌರ್ಜನ್ಯ, ಸೈಬರ್ ಬೆದರಿಕೆ ಇತ್ಯಾದಿಗಳನ್ನು ಉತ್ತೇಜಿಸುವ ವೇದಿಕೆಗಳ ಬಗ್ಗೆ ಕಠಿಣವಾಗಿ ವ್ಯವಹರಿಸುವುದು ಉದ್ದೇಶಿತ ಆನ್‌ಲೈನ್ ಸುರಕ್ಷತಾಮಸೂದೆಯ ಉದ್ದೇಶವಾಗಿದೆ. ಡಿಜಿಟಲ್ ಕಾರ್ಯದರ್ಶಿ ಆಲಿವರ್ ಡೌಡೆನ್ ಅವರು ನಾನು ನಿಸ್ಸಂದೇಹವಾಗಿ ತಂತ್ರಜ್ಞಾನದ ಪರ. ಆದರೆ ಇದರರ್ಥ ಎಲ್ಲರಿಗೂ ಉಚಿತ ತಂತ್ರಜ್ಞಾನ ಎಂದಲ್ಲ ಎಂದು ಹೇಳುತ್ತಾರೆ. ಇದು ಒಂದು ಅರ್ಥದಲ್ಲಿ ಈಸಮಸ್ಯೆಯ ಬಗ್ಗೆ ಪ್ರಜಾಪ್ರಭುತ್ವ ರಾಷ್ಟ್ರಗಳ ಪ್ರಸ್ತುತ ಸ್ಥಿತಿಯನ್ನು ಹೇಳುತ್ತದೆ.
ಇಂಗ್ಲೆಂಡ್‌ನಲ್ಲಿ ಸ್ವಯಂ ನಿಯಂತ್ರಣವು ಮುದ್ರಣ ಮಾಧ್ಯಮವನ್ನು ನಿಯಂತ್ರಿಸುತ್ತದೆ ಮತ್ತು ಖಾಸಗಿ ಟೆಲಿವಿಷನ್ ಮತ್ತು ರೇಡಿಯೋವನ್ನು ಸ್ವತಂತ್ರ ಟೆಲಿವಿಷನ್ ಆಯೋಗ ಮತ್ತು ರೇಡಿಯೋ ಪ್ರಾಧಿಕಾರಗಳು ನಿಯಂತ್ರಿಸುತ್ತವೆ. ಸಚಿವರಾದರವಿಶಂಕರ್ ಪ್ರಸಾದ್ ಮತ್ತು ಪ್ರಕಾಶ್ ಜಾವಡೇಕರ್ ಸರಕಾರದ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದಾರೆ. ಈ ಇಬ್ಬರೂ ನಾಯಕರು ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆಯಲಾಗುವ 1970ರ ದಶಕದ ಮಧ್ಯಭಾಗದಲ್ಲಿ ಪ್ರಧಾನಿ ಇಂದಿರಾಗಾಂಧಿಯವರುಹೇರಿದ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಡಿದವರು ಮತ್ತು ಸುಮಾರು ಒಂದೂವರೆ ವರ್ಷ ಜೈಲುವಾಸ ಅನುಭವಿಸಿದವರು ಎಂಬುದನ್ನು ಮರೆಯಬಾರದು. ಇದರಿಂದಾಗಿ ಜನರು ತಮ್ಮ ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಮರಳಿ ಪಡೆದರು.
ಇದರಿಂದಾಗಿ ನಿಸ್ಸಂದೇಹವಾಗಿ, ಪ್ರಜಾಪ್ರಭುತ್ವದ ಮೌಲ್ಯಗಳ ಬಗೆಗಿನ ಅವರ ಬದ್ಧತೆಯು ಮಾಧ್ಯಮ ನಿಯಂತ್ರಣಕ್ಕೆ ಸಂಬಂಽಸಿದಂತೆ ನೀತಿ ನಿರೂಪಣೆಯ ಮೇಲೆ ಪ್ರಭಾವ ಬೀರುತ್ತದೆ. ಅಂತಿಮವಾಗಿ, ಭಾರತದಲ್ಲಿ ಯಾವ ಸಂಸ್ಥೆಗಳು ಕಾರ್ಯನಿರ್ವಹಿಸಬೇಕು ಎಂಬ ಚೌಕಟ್ಟಿನ ಬಗ್ಗೆ ಒಂದು ಮಾತು. ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಹೇಳಿದಂತೆ ಸಂಸ್ಥೆಗಳು ಈ ನೆಲದ ಕಾನೂನುಗಳಡಿ ಕಾರ್ಯನಿರ್ವಹಿಸಬೇಕು.
ಇದರಲ್ಲಿ ಯಾವುದೇ ರಾಜಿ ಇಲ್ಲ. ಇತ್ತೀಚಿನ ದಿನಗಳಲ್ಲಿ, ಟ್ವಿಟರ್ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯಾಖ್ಯಾನಿಸಲು ಪ್ರಯತ್ನಿಸಿದೆಮತ್ತು ಭಾರತೀಯರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ರಕ್ಷಿಸಲು ತಾನು ಪ್ರಯತ್ನಿಸುತ್ತಿರುವುದಾಗಿ ಹೇಳಿಕೊಂಡಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ನಮ್ಮ ಸಂವಿಧಾನದ ಮೂಲಭೂತ ಹಕ್ಕುಗಳಲ್ಲಿಯೇ ಇದೆ ಮತ್ತು ಅದನ್ನು ಸಮಂಜಸವಾದ ನಿರ್ಬಂಧಗಳೊಂದಿಗೆ ಮಿತಗೊಳಿಸಲಾಗಿದೆ. ಭಾರತವು ಪ್ರಜಾಪ್ರಭುತ್ವ ಮತ್ತು ಅನೇಕ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸಂಕೀರ್ಣತೆಗಳನ್ನು ಹೊಂದಿರುವ ವಿಶ್ವದ ಅತ್ಯಂತ ವೈವಿಧ್ಯಮಯ ಸಮಾಜವಾಗಿರುವುದರಿಂದ ಇವುಗಳು ಜಾರಿಯಲ್ಲಿವೆ.
ಅದಕ್ಕಾಗಿಯೇ ಭಾರತದ ನಿರ್ಮಾತೃ ಗಳು ಅಂತಃಪ್ರಜ್ಞೆ ಮತ್ತು ದೂರದೃಷ್ಟಿಯಿಂದ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಎಚ್ಚರಿಕೆ ವಹಿಸಿದ್ದಾರೆ. ಇದರಿಂದಾಗಿ ಸಾಂವಿಧಾನಿಕ ಹಕ್ಕುಗಳು ಆಂತರಿಕ ಶಾಂತಿ ಮತ್ತು ಸಾಮರಸ್ಯವನ್ನು ಉತ್ತೇಜಿಸುತ್ತವೆ. ಈಸ್ವಾತಂತ್ರ್ಯ ಮತ್ತು ನಿರ್ಬಂಧಗಳು ಯಾವುವು ಎಂದು ನಮ್ಮ ಸುಪ್ರೀಂ ಕೋರ್ಟ್ ಅಸಂಖ್ಯಾತ ಪ್ರಕರಣಗಳಲ್ಲಿ ವ್ಯಾಖ್ಯಾನಿಸಿದೆ. ಭಾರತದ ಸರ್ವೋನ್ನತ ನ್ಯಾಯಾಲಯ ವಿಧಿಸಿರುವ ಕಾನೂನು ಈ ನೆಲದ ಕಾನೂನು. ಕೆಲವು ಅಂತಾರಾಷ್ಟ್ರೀಯ ಖಾಸಗಿಕಂಪನಿಗಳು ನ್ಯಾಯಾಲಯಗಳ ಪಾತ್ರವನ್ನು ವಹಿಸುವುದು ಮತ್ತು ನಮ್ಮ ಸಂವಿಧಾನದ ಮೇಲೆ ತಮ್ಮದೇ ವ್ಯಾಖ್ಯಾನ ನೀಡುವುದು ನಮಗೆ ಬೇಕಿಲ್ಲ.