ಅನರ್ಘ್ಯ ವಿಜ್ಞಾನರತ್ನ ಸರ್‌.ಸಿ.ವಿ.ರಾಮನ್‌
ಸ್ಮರಣೆ
ಡಿ.ಕೋಮಲ
ಅದು 1921ರ ಬೇಸಿಗೆ. ಭೌತವಿಜ್ಞಾನದ ಧೀಶಕ್ತಿಯ ಸಾಗರಯಾನ. ಮೆಡಿಟರೇನಿಯನ್ ಸಮುದ್ರದಲ್ಲಿ ಪಯಣ. ಸೂರ್ಯನ ಬೆಳಕಿನಿಂದಾಗಿ ವಿಸ್ತಾರವಾದ ಸಮುದ್ರ ನೀಲವರ್ಣವಾಗಿ ಕಾಣುತ್ತಿತ್ತು. ಅದನ್ನು ಕಂಡೊಡನೆ ಸೃಷ್ಟಿಯ ಸತ್ಯವೊಂದು ಥಟ್ಟನೆ ಬಯಲಾಯಿತು.
ಸೂರ್ಯನ ಬೆಳಕನ್ನು ನೀರಿನ ಅಣುಗಳು ಚದುರಿಸುವುದರಿಂದ ಈ ವಿದ್ಯಮಾನ ತಲೆದೋರುವುದು ಎಂದು ನಿರ್ಧರಿಸಿದರು. ಅವರೇ ಬೆಳಕಿನ ಬಗ್ಗೆ ಬೆಳಕು ಚೆಲ್ಲಿ ವಿಶ್ವ ವಿಜ್ಞಾನವನ್ನು ಬೆಳಗಿಸಿದ ಸರ್ ಸಿ.ವಿ.ರಾಮನ್.ರಾಮನ್ ಅವರ ಪೂರ್ಣ ಹೆಸರು ವೆಂಕಟರಾಮನ್. ತಂದೆ ಚಂದ್ರಶೇಖರ ಅಯ್ಯರ್. ತಾಯಿ ಪಾರ್ವತಿ ಅಮ್ಮಾಳ್. ಅವರು ತಮಿಳುನಾಡಿನ ತಿರುಚಿನಾಪಳ್ಳಿಯಲ್ಲಿ ಮಧ್ಯಮ ವರ್ಗದ ಕುಟುಂಬವೊಂದರಲ್ಲಿ 1888ರ ನವೆಂಬರ್7ರಂದು ಜನಿಸಿದರು.
ತಂದೆ ಗಣಿತ ಮತ್ತು ಭೌತವಿಜ್ಞಾನದ ಅಧ್ಯಾಪಕರಾಗಿದ್ದರು. ಬಾಲ್ಯದಿಂದಲೇ ಕುಶಾಗ್ರಮತಿಯಾಗಿದ್ದ ರಾಮನ್ ಅವರು ಬರೆದ ಪರೀಕ್ಷೆಗಳಲ್ಲ ದಾಖಲೆಯನ್ನೇ ನಿರ್ಮಿಸಿದರು. ಕೇವಲ ಹತ್ತೊಂಬತ್ತನೆಯ ವಯಸ್ಸಿನಲ್ಲಿ ಇಂಡಿಯನ್ ಆಡಿಟ್ಸ್ ಅಂಡ್ ಅಕೌಂಟ್ಸ್ ಪರೀಕ್ಷೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಭಾರತ ಸರಕಾರದ ಅರ್ಥಶಾಖೆಯ ಉಚ್ಚ ಅಧಿಕಾರಿ ಅಸಿಸ್ಟೆಂಟ್ಅಕೌಂಟೆಂಟ್ ಜನರಲ್ ಆಗಿ ನೇಮಕಗೊಂಡರು. ಕೊಲ್ಕತಾ ಕಾರ್ಯಕ್ಷೇತ್ರವಾಗಿತ್ತು.
ಧರ್ಮಪತ್ನಿ ಲೋಕಸುಂದರಿಯೊಂದಿಗೆ ಕೋಲ್ಕತಾದಲ್ಲಿ ಜೀವನ ನಡೆಸತೊಡಗಿದರು. ಸದಾ ವೈಜ್ಞಾನಿಕ ಚಿಂತನೆಯಲ್ಲಿ ಮುಳುಗಿರುತ್ತಿದ್ದ ಇವರಿಗೆ ಒಂದು ಬಾರಿ ಕಚೇರಿಯಿಂದ ಮನೆಗೆ ತೆರಳುತ್ತಿದ್ದಾಗ ‘ದಿ ಇಂಡಿಯನ್ ಅಸೋಸಿಯೇಷನ್ -ರ್ ದಿ ಕಲ್ಟಿವೇಶನ್ ಆಫ್ ಸೈನ್ಸ್’ ಎಂಬ ನಾಮಫಲಕವು ಕಣ್ಣಿಗೆ ಬಿದ್ದಿತು. ಸಂತೋಷದಿಂದ ಒಳಹೊಕ್ಕರು. ಕಾರ್ಯಕ್ಷೇತ್ರವು ಬುದ್ಧಿ ಹೃದಯಗಳ ಸಂಗಮವಾಯಿತು. ನಿಸರ್ಗದಲ್ಲಿ ಕುತೂಹಲ ಮೂಡಿಸುವ ಧ್ವನಿ, ಬೆಳಕು ಮುಂತಾದ ಅಂಶಗಳು ಇವರನ್ನು ತುಂಬಾ ಆಕರ್ಷಿಸುತ್ತಿದ್ದವು. ಅವುಗಳಲ್ಲಿ ಅಡಗಿದ್ದ ವಿಜ್ಞಾನದ ತತ್ತ್ವಗಳನ್ನು ಅರ್ಥೈಸಿಕೊಂಡು, ವಿಶ್ಲೇಷಿಸಿ ಅವುಗಳಿಗೆ ಸಂಗತ ವಾದ ಫಲಿತಾಂಶಗಳನ್ನು ಸಿದ್ಧಪಡಿಸುತ್ತಿದ್ದರು.
ಎಲ್ಲರೂ ಕಂಡ ಸತ್ಯಗಳೇ ಆದರೂ ಇವರ ದೃಷ್ಟಿಕೋನ ಹೊಸ ಹೊಳಹುಗಳನ್ನು ದರ್ಶಿಸುತ್ತಿತ್ತು. ಸ್ನೇಹಿತರೊಂದಿಗೆ ಸೇರಿ ವಿಭಿನ್ನ ಸಂಗೀತವಾದ್ಯಗಳು ಅಂದರೆ ತಂತಿವಾದ್ಯ, ಚರ್ಮವಾದ್ಯ ಮುಂತಾದವುಗಳಿಂದ ಹೊಮ್ಮುವ ಧ್ವನಿಯಲ್ಲಿನ ವಿಭಿನ್ನತೆ ಗಳ ಕುರಿತು ಚರ್ಚಿಸಿ ಸ್ವತಃ ಹೊಸ ಹೊಸ ವಿಷಯಗಳನ್ನು ಕಂಡುಕೊಳ್ಳುತ್ತಿದ್ದರು. ಬ್ರಿಟಿಷ್ ಆಡಳಿತದ ಕಾಲವದು. ಯುರೋಪಿ ಯನ್ ವಿಜ್ಞಾನಿಗಳಿಗೆ ತಮ್ಮ ಸಂಶೋಧನೆಗಳನ್ನು ಕುರಿತು ಪತ್ರದ ಮೂಲಕ ತಿಳಿಸುತ್ತಿದ್ದರು.
ರಾಮನ್ ಅವರು ವಿದ್ಯಾರ್ಥಿದೆಸೆಯಲ್ಲಿ ಇರುವಾಗಲೇ ಅವರ ಪ್ರಥಮ ಸಂಶೋಧನಾ ಪತ್ರ ಲಂಡನ್ನಿನ ಫಿಲಾಸಫಿಕಲ್ಮ್ಯಾಗಝೀನ್‌ನಲ್ಲಿ ಪ್ರಕಟವಾಗಿತ್ತು. ಸಂಶೋಧನಾ ಕಾರ್ಯ ನಿರಂತರವಾಗಿ ನಡೆಯುತ್ತಲೇ ಇತ್ತು. ವೃತ್ತಿ ಹಾಗೂ ವಿಜ್ಞಾನಸಂಶೋಧನಾ ಕಾರ್ಯಗಳನ್ನು ಜತೆಜತೆಗೆ ಮುಂದುವರಿಸಿಕೊಂಡು ಹೋದರು. ಕೆಲಕಾಲ ನಂತರ ತಮ್ಮನ್ನು ತಾವುಸಂಪೂರ್ಣವಾಗಿ ವಿಜ್ಞಾನಕ್ಕಾಗಿಯೇ ಸಮರ್ಪಿಸಿಕೊಂಡರು. ಸಂಶೋಧನಾ ಪ್ರಬಂಧಗಳ ಮೂಲಕ ಅಂತಾರಾಷ್ಟ್ರೀಯಖ್ಯಾತಿಯನ್ನು ಪಡೆದ ರಾಮನ್ನರ ಐತಿಹಾಸಿಕ ವಿದೇಶ ಪ್ರಯಾಣ ಆರಂಭವಾಯಿತು.
ಸಾಗರದ ನೀಲವರ್ಣ ದ್ರವ್ಯಗಳಲ್ಲಿ ಬೆಳಕಿನ ವಿಕಿರಣ ಕುರಿತು ಅನ್ವೇಷಣೆ ಮಾಡಲು ಪ್ರೇರಣೆಯಾಯಿತು. ನಿರಂತರ ಅಧ್ಯಯನ, ಸಂಶೋಧನೆಗಳ ಫಲವಾಗಿ 28ನೇ ಫೆಬ್ರವರಿ 1928ರಂದು ನೂತನ ವಿಕಿರಣದ ರೇಖಾ ರೋಹಿತವನ್ನು ರಾಮನ್ ನೋಡಿದರು. ರಾಮನ್ ಪರಿಣಾಮವೆಂದೇ ಗುರುತಿಸಲಾದ ಈ ಆವಿಷ್ಕಾರ ನಡೆದ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವೆಂದು ಆಚರಿಸುತ್ತೇವೆ. ಇದು ಬೆಳಕಿನ ವಿಭಿನ್ನ ಸ್ವಭಾವಗಳ ಮೇಲೆ ಬೆಳಕು ಚೆಲ್ಲಲು ಕಾರಣವಾಯಿತು. ದ್ರವ್ಯಗಳ ಸ್ವಭಾವವನ್ನು ಅರಿಯಲು ಸಹಕಾರಿ ಯಾಯಿತು.
1930ರಲ್ಲಿ ವಿಶ್ವದ ಅತ್ಯುನ್ನತ ನೊಬೆಲ್ ಪಾರಿತೋಷಕವನ್ನು ದೊರಕಿಸಿಕೊಟ್ಟಿತು. ರಾಮನ್ ಪರಿಣಾಮವನ್ನು ಕಂಡಿದ್ದು ಕೋಲ್ಕತಾದಲ್ಲಿ ಆದರೂ ಅದನ್ನು ಜಗಜ್ಜಾಹೀರುಗೊಳಿಸಿದ್ದು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ನೀಡಿದ ಐತಿಹಾಸಿಕ ಭಾಷಣದಲ್ಲಿ. ಅವರೇ ಹೇಳುವಂತೆ ವಿಕಿರಣ ಹಾಗೂ ತರಂಗ ಸಿದ್ಧಾಂತ, ಎಕ್ಸ್ ಕಿರಣ ದೃಗ್ವಿಜ್ಞಾನ, ಅಣು ಹಾಗೂ ಪರಮಾಣು ರೋಹಿತಗಳು, ಪ್ರತಿದೀಪ್ತಿ ಹಾಗೂ ಚದರುವಿಕೆ ಇವುಗಳಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳ ಮೇಲೆ ಇದು ಬೆಳಕು ಚೆಲ್ಲುವುದು ಎಂಬ ನಿರೀಕ್ಷೆ ಇತ್ತು.
ಅವರ ವಿಚಾರಗಳು ಪ್ರಕಟವಾದ ಮೇಲೆ ಸಂಬಂಧಿಸಿದ ವಿಜ್ಞಾನಿಗಳಿಂದ ಸಮರ್ಥನೆಯು ಹರಿದು ಬಂತು. ಬ್ರಿಟಿಷ್ ಸರಕಾರದನೈಟ್ (ಸರ್) ಪದವಿ, ಲಂಡನ್ನಿನ ರಾಯಲ್ ಸೊಸೈಟಿಯ ಎಫ್ಆರ್‌ಎಸ್ ಪ್ರಶಸ್ತಿ, ಲೆನಿನ್ ಶಾಂತಿ ಪುರಸ್ಕಾರ ಸೇರಿದಂತೆಹಲವಾರು ಪ್ರಶಸ್ತಿಗಳನ್ನು ಹತ್ತಾರು ಡಾಕ್ಟರೇಟ್‌ಗಳನ್ನು ಪಡೆದ ರಾಮನ್ ಅವರಿಗೆ ಭಾರತ ಸರಕಾರವು ಅತ್ಯುನ್ನತ ಭಾರತರತ್ನಪ್ರಶಸ್ತಿ ನೀಡಿ ಗೌರವಿಸಿತು. ಜೀವನದ ಕೊನೆವರೆಗೂ ವಿಜ್ಞಾನ ಚಿಂತನೆ ಸತ್ಯದ ಅನ್ವೇಷಣೆಗಳನ್ನೇ ಉಸಿರಾಗಿಸಿ ಮೆರುಗುತ್ತಿದ್ದಅನರ್ಘ್ಯ ವಿಜ್ಞಾನರತ್ನ ಅನಂತದಲ್ಲಿ ಲೀನವಾಯಿತು.